Monday, 15th October 2018  

Vijayavani

‘ಉಪ' ಕದನಕ್ಕೆ ಇಂದು ಉಮೇದುವಾರಿಕೆ-ಶಿವಮೊಗ್ಗದಲ್ಲಿ ಮಾಜಿ ಸಿಎಂ ಪುತ್ರ ನಾಮಪತ್ರ- ಇತ್ತ ರಾಮನಗರದಿಂದ ಸಿಎಂ ಪತ್ನಿ        ಕುತೂಹಲ ಕೆರಳಿಸಿದ ಬೆಳಗಾವಿ ಎಪಿಎಂಸಿ ಎಲೆಕ್ಷನ್-ಲಕ್ಷ್ಮೀ ವಿರುದ್ಧ ಸೋಲು ತೀರಿಸಿಕೊಳ್ಳಲು ಜಾರಕಿಹೊಳಿ ಬಣ ಸಿದ್ಧತೆ        ಸ್ಯಾಂಡಲ್​ವುಡ್​ನಲ್ಲೂ ‘ಮೀ ಟೂ’ ಸದ್ದು-ನಟಿ ಸಂಗೀತಾ ಭಟ್ ದಯವಿಟ್ಟು ಗಮನಿಸಿ ಅಂತ ಫೇಸ್​ಬುಕ್​ನಲ್ಲಿ ನೋವು        ಮೀ ಟೂ ಆರೋಪಕ್ಕೆ ಖುಷ್ಬು ತಿರುಗೇಟು-ಕೇಜ್ರಿಸ್ಟಾರ್ ಮೇಲೆ ಬೊಟ್ಟು ಮಾಡಿದವರಿಗೆ ಎದುರೇಟು        MEE TOOಗೆ ಬಿತ್ತು ಮೊದಲ ವಿಕೆಟ್-ಕೇಂದ್ರ ಸಚಿವ ಸ್ಥಾನಕ್ಕೆ ಎಂ.ಜೆ.ಅಕ್ಬರ್ ರಿಸೈನ್​        ಪೆಟ್ರೋಲ್ ಬ್ಯಾರಲ್ ಸ್ಫೋಟಕ್ಕೆ ಕೊಪ್ಪಳದ ಅಧಿಕಾರಿ ಸಾವು -ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನಲ್ಲಿ ಕೊನೆಯುಸಿರು       
Breaking News

ಸರ್ಕಾರ ಮತದಾನದ ಹಕ್ಕನ್ನು ಕಸಿಯದಿರಲಿ…

Tuesday, 14.11.2017, 3:06 AM       No Comments

ಮತದಾನದಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಚಿಂತೆಯ ನಡುವೆಯೇ ಮತದಾರರನ್ನು ಮತದಾನದಿಂದ ವಂಚಿತರನ್ನಾಗಿಸುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಅನುಮಾನಗಳೂ ಮೂಡುತ್ತಿವೆ. ಹಿಂದಿನ ಚುನಾವಣೆಗಳಲ್ಲಿ ಮತಚಲಾಯಿಸಿದವರ ಹೆಸರುಗಳು ಈಚಿನ ಪಟ್ಟಿಯಲ್ಲಿ ಮಾಯವಾಗಿರುವುದು ಇದಕ್ಕೆ ಇಂಬುಕೊಡುತ್ತದೆ.

ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಮೊದಲು ರಾಷ್ಟ್ರಗೀತೆ ಕಡ್ಡಾಯ ಎಂಬ ಆದೇಶವನ್ನು ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ್ದು ನಿಮಗೂ ನೆನಪಿರಬಹುದು. ಒಂದು ದಿನ ನಾನು ಮೈಸೂರಿನ ಚಿತ್ರಮಂದಿರ ಒಂದಕ್ಕೆ ಕುಟುಂಬದವರೊಡನೆ ಹೋಗಿದ್ದಾಗ ಚಿತ್ರ ಪ್ರದರ್ಶನಕ್ಕೆ ಮೊದಲು ರಾಷ್ಟ್ರಗೀತೆ ಹಾಕಿದಾಗ ನಮ್ಮೊಡನೆ ಅಲ್ಲಿದ್ದ ಎಲ್ಲ ಜನರೂ ನಿಂತು ರಾಷ್ಟ್ರಗೀತೆ ಹಾಡಿದರು. ಎಲ್ಲರಿಗೂ ಅದೊಂದು ರೋಮಾಂಚಕ, ಆನಂದದ ಅನುಭವವೇ ಆಗಿತ್ತು.

ಆದರೆ, ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯದ ಪರ-ವಿರೋಧಿ ಚರ್ಚೆಗಳು ಸುದ್ದಿವಾಹಿನಿಗಳಲ್ಲಾಗಲೇ ಆರಂಭವಾಗಿದ್ದವು! ಮನರಂಜನೆಗಾಗಿ ಸಿನಿಮಾ ಮಂದಿರಕ್ಕೆ ತೆರಳಿದರೂ ಅಲ್ಲೂ ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕೇ? ರಾಷ್ಟ್ರಭಕ್ತಿಯ ಹೆಸರಿನಲ್ಲಿ ಏನೇನೆಲ್ಲ ಹೇರುತ್ತೀರಿ? ಎಂಬ ರೀತಿಯಲ್ಲಿ ಚರ್ಚೆಗಳಾಗುತ್ತಿದ್ದವು. ಸುಪ್ರೀಂಕೋರ್ಟ್ ಆದೇಶದಂತೆ ರಾಷ್ಟ್ರಗೀತೆ ಕಡ್ಡಾಯವಾಗಿದ್ದರೂ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವತಃ ಆದೇಶ ನೀಡಿದ್ದಾರೇನೋ ಎಂಬಂತೆ ಪ್ರಧಾನಿಯ ಮೇಲೆ ಆರೋಪಗಳಾಗುತ್ತಿದ್ದವು. ಇವರ ‘ಮೋದಿ-ವಿರೋಧ’ದ ಬಲೆಯಲ್ಲಿ ರಾಷ್ಟ್ರಗೀತೆಯನ್ನೂ ಎಳೆದುತಂದಿದ್ದರು!

ಮಾತನಾಡುವಾಗಲೆಲ್ಲಾ ಸಂವಿಧಾನದ ಉಲ್ಲೇಖ ನೀಡುವ ಜನರಿಗೆ, ಸಂವಿಧಾನವು ಹಕ್ಕುಗಳೊಡನೆ ಕರ್ತವ್ಯಗಳನ್ನೂ ಹೇಳಿದೆ ಎಂಬುದರ ಕುರಿತು ಜಾಣಮರೆವು. ಮೊನ್ನೆ ಟಿವಿಯ ಚರ್ಚೆಯೊಂದರಲ್ಲಿ ರಾಷ್ಟ್ರಗೀತೆಗೆ ಗೌರವ ನೀಡಲು ಎದ್ದು ನಿಲ್ಲಲೇಬೇಕೆ? ದೇಶದ ಬಗ್ಗೆ ಗೌರವವನ್ನು ಆ ಮೂಲಕವೇ ಸಲ್ಲಿಸಬೇಕೆ? ಎಂಬಂತಹ ಆಘಾತಕಾರಿ ಮಾತುಗಳೂ ಕೇಳಿಬಂದವು. ‘ಜನಗಣಮನ’ ಎಂಬ ಸಾಲುಗಳು ಕೇಳಿದಾಗಲೂ ನಿಲ್ಲುವ ಮನಸ್ಸಾಗದವರು ದೇಶಕ್ಕೆ ಅದೆಂತಹ ಗೌರವ ಸಲ್ಲಿಸಿಯಾರು?

ಪ್ರಾಥಮಿಕ ಶಾಲಾ ದಿನಗಳಲ್ಲೇ ನಮ್ಮ ಶಿಕ್ಷಕರು, ಸಾಂವಿಧಾನಿಕ ಹಕ್ಕುಗಳ ಜತೆಜತೆಗೇ ಕರ್ತವ್ಯಗಳ ಕುರಿತೂ ಸದಾ ಮಾತನಾಡುತ್ತಿದ್ದರು. ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದು ಪ್ರತಿಯೊಬ್ಬ ಪ್ರಜೆಯ ಆದ್ಯಕರ್ತವ್ಯ ಎಂಬ ಪಾಠ ನಮಗಾಗುತ್ತಿತ್ತು. ರಸ್ತೆಯಲ್ಲಿ ಹೋಗುವಾಗ, ಯಾವುದೋ ಕೆಲಸದಲ್ಲಿದ್ದಾಗ ರಾಷ್ಟ್ರಗೀತೆ, ನಾಡಗೀತೆ ಕಿವಿಗೆ ಬಿದ್ದರೆ ರೋಮಾಂಚನವಾಗುತ್ತಿತ್ತು ಹಾಗೂ ಅಲ್ಲೇ ನಿಂತು ಗೌರವ ಸೂಚಿಸುತ್ತಿದ್ದೆವು, ಹಾಗೂ ಇಂದಿಗೂ ಅದೇ ಪರಿಪಾಠ ಮುಂದುವರಿದಿದೆ.

ಕೆಲವು ವಾರಗಳ ಹಿಂದೆ ಈ ಅಂಕಣದಲ್ಲಿ ಯುವಜನತೆ ಮತದಾನಕ್ಕೆ ಹಿಂದೇಟು ಹಾಕುತ್ತಿರುವುದರ ಕುರಿತು ರ್ಚಚಿಸಿದ್ದೆ. ಮತದಾನದ ಅನಿವಾರ್ಯತೆಯನ್ನು ಜನತೆ ಅರ್ಥೈಸಿಕೊಳ್ಳಬೇಕು ಎಂಬುದು ನನ್ನ ಆಶಯವಾಗಿತ್ತು. ಇದಾದ ಕೆಲವು ದಿನಗಳ ಬಳಿಕ, ಮತದಾರರ ಪಟ್ಟಿಯಲ್ಲಾಗಿದ್ದ ಭಾರಿ ಅವ್ಯವಹಾರಗಳು ಪತ್ರಿಕೆಗಳಲ್ಲಿ ವರದಿಯಾಗಿದ್ದವು. ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಚಿಂತೆಯ ನಡುವೆಯೇ ವ್ಯವಸ್ಥಿತವಾಗಿ ಮತದಾರರನ್ನು ಮತದಾನದಿಂದ ವಂಚಿತರನ್ನಾಗಿಸುವ ಪ್ರಯತ್ನಗಳು ನಡೆಯುತ್ತಿವೆಯೇನೋ ಅನ್ನುವಂತಹ ಅನುಮಾನಗಳನ್ನು ಈ ವರದಿಗಳು ಮೂಡಿಸಿದವು. ಕಳೆದ ಹಲವಾರು ಚುನಾವಣೆಗಳಲ್ಲಿ ಮತಚಲಾಯಿಸಿದ ಮತದಾರರ ಹೆಸರುಗಳು ಇದೀಗ ಬಿಡುಗಡೆಯಾದ ಪಟ್ಟಿಯಲ್ಲಿ ಇಲ್ಲವೇ ಇಲ್ಲ. ಅವರುಗಳ ವಾಸ್ತವ್ಯದ ವಿಳಾಸಗಳಲ್ಲಿ ಆ ಹೆಸರಿನ ವ್ಯಕ್ತಿಗಳೇ ಇಲ್ಲ ಎನ್ನುವಂತಹ ಕಾರಣಗಳನ್ನು ಕೊಟ್ಟು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆಯಲಾಗಿದೆ. ವಿಪರ್ಯಾಸ ನೋಡಿ. ಕುಟುಂಬವೊಂದರ ಸದಸ್ಯರನ್ನು ಜೀವಂತವಾಗಿದ್ದಾಗಲೇ ಮೃತಪಟ್ಟಿದ್ದಾರೆ ಎಂದು ಹೇಳಿ ಮತದಾರರ ಪಟ್ಟಿಯಿಂದ ಅವರ ಹೆಸರುಗಳನ್ನು ಕಿತ್ತು ಹಾಕಲಾಗಿದೆ!

ಕೆಲವು ಮತದಾರರಾದರೆ ಸರಿ. ಅಧಿಕಾರಿಗಳೂ ಮನುಷ್ಯರೇ. ಕಣ್ತಪ್ಪಿನಿಂದ ಇಂತಹ ತಪ್ಪುಗಳು ಘಟಿಸುತ್ತವೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ಚಾಮುಂಡೇಶ್ವರಿ ಕ್ಷೇತ್ರ ಒಂದರಲ್ಲೇ ಹನ್ನೊಂದು ಸಾವಿರಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸ್ವತಃ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಗೆಲುವನ್ನು ಸಾಧ್ಯವಾಗಿಸುವ ಉದ್ದೇಶದಿಂದ ಮತದಾರರ ಪಟ್ಟಿಯಲ್ಲಿ ಗೋಲ್​ವಾಲ್ ಆಗಿರುವ ಸಾಧ್ಯತೆಗಳು ಇವೆ ಎಂಬುದಾಗಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಕುರಿತಾಗಿ ಈಗಾಗಲೇ ಪೊಲೀಸ್ ಠಾಣೆಗಳಲ್ಲಿ ದೂರನ್ನು ದಾಖಲಿಸಲಾಗಿದೆ.

ಹಿಂದಿನ ಚುನಾವಣೆಯಲ್ಲಿ ಮತದಾನ ಮಾಡಿದ್ದೇನೆಂದುಕೊಂಡು ಈ ಬಾರಿ ಮತ ಹಾಕಲು ಮತಗಟ್ಟೆಗೆ ತೆರಳಿದರೆ ಅಲ್ಲಿ ನಿಮ್ಮ ಹೆಸರಿಲ್ಲ ಎಂದೋ, ನಿಮ್ಮ ವಿಳಾಸ ಬದಲಾಗಿದೆ ಎಂದೋ ಹೆಸರನ್ನು ಮತಪಟ್ಟಿಯಿಂದ ತೆಗೆದುಹಾಕಿರುವ ಸಂಗತಿ ಗೊತ್ತಾದರೆ ಏನು ಮಾಡುವುದು? ನಮ್ಮಲ್ಲಿ ಮತದಾನದ ಕುರಿತ ಜವಾಬ್ದಾರಿ ಜನರಲ್ಲಿ ಹೆಚ್ಚಾಗಬೇಕಾದ ಅನಿವಾರ್ಯತೆ ಇದೆ. ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಶೇ. 74 ಮತ ಚಲಾವಣೆಯಾಗಿದೆ. ಬಹುಶಃ ಜನತೆಯಲ್ಲಿ ಮತದಾನದ ಕುರಿತು ಒಂದಿಷ್ಟು ಕಾಳಜಿ ಮೂಡತೊಡಗಿರಬೇಕು. ಇದನ್ನು ರಾಷ್ಟ್ರ ಜಾಗೃತಿಯೆಡೆಗಿನ ಹೆಜ್ಜೆ ಎನ್ನಬಹುದೇ?

ಇಸ್ರೇಲ್ ಒಂದು ಪುಟ್ಟದೇಶ. ನೆರೆಯಲ್ಲಿ ಪಾಕಿಸ್ತಾನ, ಚೀನಾಗಳೆಂಬ ಎರಡೇ ದೇಶಗಳಿಂದ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತಹ ಸ್ಥಿತಿ ನಮ್ಮದಾಗಿದೆ. ಹೀಗಿರುವಾಗ ಸುತ್ತಮುತ್ತಲೆಲ್ಲಾ ಪಾಕಿಸ್ತಾನದ ಅಪರಾವತಾರಗಳಂತಹ ದೇಶಗಳನ್ನು ಕಟ್ಟಿಕೊಂಡು ಇಸ್ರೇಲ್ ಇಂದಿಗೂ ಹೇಗೆ ಉಳಿದುಕೊಳ್ಳಲು ಸಾಧ್ಯವಾಯಿತು? ಅದಕ್ಕುತ್ತರ ಇಸ್ರೇಲಿಗರ ಅದಮ್ಯ ದೇಶಪ್ರೇಮ. 18 ವರ್ಷ ತುಂಬಿದ ಪ್ರತಿಯೊಬ್ಬ ಇಸ್ರೇಲಿಯೂ 2 ವರ್ಷಗಳ ಕಾಲ ಕಡ್ಡಾಯವಾಗಿ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಾನೆ. ಅದೇನು ದೇಶಪ್ರೇಮದ ಹೇರಿಕೆಯಲ್ಲ, ದೇಶ ಉಳಿದರಷ್ಟೇ ತಾವು ಉಳಿಯಬಲ್ಲೆವು ಎಂಬ ಸಾಮಾನ್ಯ ತಿಳಿವಳಿಕೆ! ಶ್ರೇಷ್ಠ ಸ್ವಾತಂತ್ರ್ಯಕ್ಕಾಗಿ ಇಸ್ರೇಲಿಗರು ಇಷ್ಟಪಟ್ಟು ನಡೆಸುವ ಕರ್ತವ್ಯ ಅದು. ನಮ್ಮಲ್ಲೇನು ಸೈನ್ಯದ ಸೇವೆ ಕಡ್ಡಾಯ ಮಾಡುವ ಅಗತ್ಯವಿಲ್ಲ. ಆದರೆ, ಸಾಂವಿಧಾನಿಕ ಕರ್ತವ್ಯಗಳನ್ನು ಪೂರೈಸುವ ಅನಿವಾರ್ಯತೆ ಇದ್ದೇ ಇದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಹಾಗೂ ಮತದಾನ ಮಹತ್ವದ್ದು. ಆದರೆ ಸ್ವಾತಂತ್ರ್ಯಕ್ಕೆ ಮೇರೆಯೇ ಇಲ್ಲವೇನೋ ಎಂಬಂತೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರುವ ಸ್ವಾತಂತ್ರ್ಯವನ್ನೂ ಜನತೆ ಅನುಭವಿಸುತ್ತಿದ್ದಾರೆ. ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳು ನಮ್ಮಂತಿಲ್ಲ. ಮತದಾನವನ್ನು ಕಡ್ಡಾಯಗೊಳಿಸಿದ ರಾಷ್ಟ್ರಗಳೂ ಪ್ರಪಂಚದಲ್ಲಿವೆ. ಮತದಾನವನ್ನು ಕಡ್ಡಾಯಗೊಳಿಸಿದ ಪ್ರಪಂಚದ ಮೊಟ್ಟಮೊದಲ ಪ್ರಜಾಪ್ರಭುತ್ವ ರಾಷ್ಟ್ರ ಬೆಲ್ಜಿಯಂ. 1892ರಲ್ಲಿ ಗಂಡಸರಿಗೆ ಹಾಗೂ 1949ರಲ್ಲಿ ಹೆಣ್ಣು ಮಕ್ಕಳಿಗೆ ಮತದಾನವನ್ನು ಬೆಲ್ಜಿಯಂ ಕಡ್ಡಾಯಗೊಳಿಸಿತು. ಇದು ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ ಪ್ರಜೆಗಳನ್ನು ತಮ್ಮ ಕರ್ತವ್ಯದಲ್ಲಿ ನಿರತರಾಗುವಂತೆ ಮಾಡಲು ರೂಪಿಸಿದ ಯಶಸ್ವಿ ಕಾಯ್ದೆ ಎನ್ನಬಹುದು. ಮತದಾನ ಮಾಡದಿದ್ದರೆ ಬೆಲ್ಜಿಯಂನಲ್ಲಿ ನಾಗರಿಕರಿಗೆ ದಂಡ ವಿಧಿಸಲಾಗುತ್ತದೆ. ಸತತವಾಗಿ ನಾಲ್ಕು ಚುನಾವಣೆಗಳಲ್ಲಿ ಮತದಾನ ಮಾಡದ ಪ್ರಜೆಗಳ ಮತದಾನದ ಹಕ್ಕನ್ನು ಹತ್ತು ವರ್ಷಗಳ ಕಾಲ ತಡೆಹಿಡಿಯಲಾಗುತ್ತದೆ. ಇದೇ ಕಡ್ಡಾಯ ಮತದಾನವನ್ನು ಬಳಿಕ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಮತ್ತಿತರ ರಾಜ್ಯಗಳೂ ಅಳವಡಿಸಿಕೊಂಡವು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಮತದಾನವನ್ನು ಅವರ ವಿವೇಚನೆಗೆ ಬಿಡಬೇಕು, ಹೇರಿಕೆ ಸಲ್ಲ ಎಂಬ ವಾದಗಳೂ ಕೇಳಿಬರುತ್ತವೆ. ಹಾಗೆಂದ ಮಾತ್ರಕ್ಕೆ ಸ್ವಾತಂತ್ರ್ಯ ನಮಗೆ ಕೊಟ್ಟ ಜವಾಬ್ದಾರಿಯನ್ನು ಮರೆಯಬಾರದಲ್ಲ? ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಕುರಿತು ಕೇಂದ್ರ ಸರ್ಕಾರ ಈಗಾಗಲೇ ಯೋಚಿಸಿದೆ. ಖರ್ಚು ವೆಚ್ಚ ಹಾಗೂ ಮತದಾರರ ಸೌಕರ್ಯದ ಮಟ್ಟಿಗೆ ಇದು ಒಳ್ಳೆಯ ನಿರ್ಧಾರವೇ. ಆದರೆ ಮತದಾನದಲ್ಲಿ ಎಷ್ಟು ಜನ ಭಾಗವಹಿಸಿದರು ಎಂಬುದೂ ಅಷ್ಟೇ ಮುಖ್ಯವಾಗುತ್ತದೆ. ಕರ್ತವ್ಯ ನಿಭಾಯಿಸಲು ಜನತೆ ಮುಂದಾಗದಿದ್ದರೆ ಸರ್ಕಾರ ಅವರು ಆ ಕೆಲಸ ಮಾಡುವಂತೆ ಮಾಡಲೇಬೇಕಾಗುತ್ತದೆ.

ಆದರೆ ರಾಜ್ಯದ ಮಟ್ಟಿಗೆ ಅಂತಹ ಸುಂದರ ಚಿತ್ರಣಗಳೇನೂ ಕಂಡುಬರುತ್ತಿಲ್ಲ. ಸರ್ಕಾರವು ಜನತೆಯಲ್ಲಿ ಕರ್ತವ್ಯಪ್ರಜ್ಞೆ ಮೂಡಿಸಬೇಕೇ ಹೊರತು ಅವರು ಕರ್ತವ್ಯ ವಿಮುಖರಾಗುವಂತೆ ಮಾಡಬಾರದು. ಪ್ರಜೆಗಳಿಗೆ ಮತದಾನದ ಮಹತ್ವ ಸಾರಬೇಕಾದ ಸರ್ಕಾರ ಹಾಗೂ ಸರ್ಕಾರದ ಅಂಗಗಳಾದ ಶಾಸಕರು ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿ, ಮನಸೋ ಇಚ್ಛೆ ಪರಿವರ್ತಿಸಿದರೆ ಪ್ರಜಾಪ್ರಭುತ್ವದ ಪರಿಕಲ್ಪನೆ ಎಲ್ಲಿ ಸಾಕಾರವಾದೀತು? ಬರಿಯ ಒಂದು ಕ್ಷೇತ್ರದಲ್ಲಿ 11,000 ಮತದಾರರ ಹೆಸರು ಪಟ್ಟಿಯಿಂದ ಕಿತ್ತುಹಾಕಲ್ಪಟ್ಟಿದ್ದರೆ ರಾಜ್ಯಾದ್ಯಂತ ಪರಿಸ್ಥಿತಿ ಹೇಗಿರಬಹುದು? ರಾಜ್ಯ ಇನ್ನಾರು ತಿಂಗಳಲ್ಲಿ ಚುನಾವಣೆ ನೋಡಲಿದೆ. ಆದರೆ ಯೋಗ್ಯ ಅಭ್ಯರ್ಥಿಗಳನ್ನು ಆರಿಸಬೇಕಾದ ಪ್ರಜೆಗಳೇ ಮತದಾನದ ಹಕ್ಕಿನಿಂದ, ಕರ್ತವ್ಯದಿಂದ ವಂಚಿತರಾದರೆ ಅದು ದುರಂತವೇ ಸರಿ.

ಚುನಾವಣೆ ಇರುವ ರಾಜ್ಯಗಳಲ್ಲಿ ಚುನಾವಣೆಗೆ ಆರು ತಿಂಗಳು ಮೊದಲೇ ಮತದಾರರ ಪಟ್ಟಿಯ ನೋಂದಣಿ ಆರಂಭವಾಗಬೇಕು. ಕರ್ನಾಟಕದಲ್ಲಿ ಚುನಾವಣಾ ಆಯೋಗವು ಈ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಿದೆ. ರಾಜ್ಯದ ಮತದಾರರು ನವೆಂಬರ್ 29ರ ತನಕ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಈಗ ಮೊದಲಿನಂತೆ ಪಾಲಿಕೆ ಕಚೇರಿಗೆ ಭೇಟಿ ನೀಡಿ, ಸಾಲಿನಲ್ಲಿ ನಿಂತು ಹೆಸರು ನೋಂದಾಯಿಸಿಕೊಳ್ಳುವ ಅನಿವಾರ್ಯತೆ ಇಲ್ಲ. ತಾವು ಮತ ನೀಡುವ ಬೂತ್ ಗೆ ಭೇಟಿ ನೀಡಿ ಅಲ್ಲೇ ಸುಲಭವಾಗಿ, ಸರಳವಾಗಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಜನವರಿಯ ನಂತರ ಮರಳಿ ರಾಜ್ಯ ಸರ್ಕಾರ ನೋಂದಣಿಗೆ ಅವಕಾಶ ನೀಡಬೇಕಾದರೂ, ತನ್ನ ಲಾಭವನ್ನು ಯೋಚಿಸುವ ಸರ್ಕಾರದ ಮನಸ್ಥಿತಿ ಹೇಗಿರುತ್ತದೆ ಎಂದು ಹೇಳಲಾಗದು. ಈಗಿರುವ ಅವಕಾಶವನ್ನು ಬಳಸಿಕೊಂಡು ಪ್ರಜೆಗಳು ಮತ ಚಲಾಯಿಸುವ ಹಕ್ಕನ್ನು ಹೊಂದಬೇಕು. ಆಳುವ ಸರ್ಕಾರವು ತಮ್ಮ ಹಕ್ಕನ್ನು ಕಿತ್ತುಕೊಳ್ಳುವುದಕ್ಕೆ ಪ್ರಜೆಗಳು ಅವಕಾಶ ನೀಡಬಾರದು. ಜನರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂದು ಪರಿಶೀಲಿಸಿ, ಇಲ್ಲವಾದಲ್ಲಿ ನೋಂದಣಿ ಮಾಡಿಕೊಳ್ಳಬೇಕು.

(ಲೇಖಕರು ಸಾಮಾಜಿಕ ಕಾರ್ಯಕರ್ತರು, ತಜ್ಞವೈದ್ಯರು)

Leave a Reply

Your email address will not be published. Required fields are marked *

Back To Top