Friday, 23rd March 2018  

Vijayavani

ರಾಜ್ಯಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ- ಎಚ್​ಡಿಕೆ ಆರೋಪದಲ್ಲಿ ಹುರುಳಿಲ್ಲ- ಜೆಡಿಎಸ್‌ ನಡೆ ಬಗ್ಗೆ ಸಿಎಂ ಆಕ್ರೋಶ        ಕಾಗೋಡು, ಚಿಂಚನಸೂರು ಅಡ್ಡಾದಿಡ್ಡಿ ಮತದಾನ- ಜೆಡಿಎಸ್​ ರೆಬೆಲ್ಸ್​ನಿಂದ ಮತ್ತೇ ಅಡ್ಡ ಮತದಾನ- ಮತಗಟ್ಟೆಯಲ್ಲಿ ಹಲವು ಹೈಡ್ರಾಮಾ        ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ವಿಚಾರ- ವೀರಶೈವ ಮಹಾಸಭಾದಿಂದ ಮಹತ್ವದ ಸಭೆ- ಶಾಮನೂರು ನೇತೃತ್ವದಲ್ಲಿ ಮೀಟಿಂಗ್‌        ತೋಟದಲ್ಲಿ ಲೀಕಾಯ್ತು SSLC ಪೇಪರ್- ಪ್ರಶ್ನೆಪತ್ರಿಕೆ ವಾಹನದಲ್ಲಿ ವಿದ್ಯಾರ್ಥಿ ಕರೆತಂದಿದ್ದ ಶಿಕ್ಷಕ ಡಿಬಾರ್- ಮೊದಲ ದಿನವೇ ಎಕ್ಸಾಂ ಅವಾಂತರ        ರಾಜಧಾನಿ ಅನತಿ ದೂರದಲ್ಲೇ ಕಳ್ಳಬಟ್ಟಿ ದಂಧೆ- ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ- ಆಪರೇಷನ್ ಸೇಂದಿ​ಗೆ ದಿಗ್ವಿಜಯ ನ್ಯೂಸ್ ಸಾಥ್​       
Breaking News

ಸರ್ಕಾರಿ ಕಟ್ಟಡಗಳಲ್ಲೇ ಮಳೆನೀರು ಕೊಯ್ಲಿಲ್ಲ!

Thursday, 14.09.2017, 3:04 AM       No Comments

| ಅಭಯ್ ಮನಗೂಳಿ

ಬೆಂಗಳೂರು: ಮಳೆ ನೀರು ಕೊಯ್ಲು ಅಳವಡಿಕೆಯನ್ನು ಕಡ್ಡಾಯಗೊಳಿಸಿ, ಸಾರ್ವಜನಿಕರಿಗೆ ದಂಡವನ್ನೂ ವಿಧಿಸುತ್ತಿರುವ ರಾಜ್ಯ ಸರ್ಕಾರ ತನ್ನದೇ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುವುದನ್ನು ಮರೆತುಬಿಟ್ಟಿದೆ. ನಗರದ 2,528 ಸರ್ಕಾರಿ ಕಟ್ಟಡಗಳ ಪೈಕಿ 2,318 ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಆಗಿಲ್ಲ.

ನಗರದಲ್ಲಿ ಮಳೆ ಮೂಲಕವಾಗಿಯೇ ಕನಿಷ್ಠ 15 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಬಹುದಾಗಿದ್ದು, ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುವುದರ ಮೂಲಕ ರಾಜಧಾನಿಯ ಬಹುಪಾಲು ನೀರಿನ ಬೇಡಿಕೆಯನ್ನು ಈಡೇರಿ ಸಬಹುದಾಗಿದೆ. ಇದನ್ನು ಅರಿತೂ ಸರ್ಕಾರಿ ಕಟ್ಟಡಗಳಲ್ಲಿಯೇ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

15 ಟಿಎಂಸಿ ಉಳಿತಾಯ: ರಾಜಧಾನಿಯ ಪ್ರಸ್ತುತ ಚಿತ್ರಣವನ್ನು ನೋಡಿದರೆ ನಗರದಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಅನಿವಾರ್ಯವಾಗಿದೆ. ಈ ಮೂಲಕ ಕಟ್ಟುನಿಟ್ಟಾಗಿ ನೀರು ಸಂಗ್ರಹಕ್ಕೆ ಆಸಕ್ತಿ ಮೂಡಿದಲ್ಲಿ ನೀರಿನ ವಿಚಾರದಲ್ಲಿ ರಾಜಧಾನಿ ಸ್ವಾವಲಂಬಿಯಾಗಬಹುದಾಗಿದೆ.

ನಗರದಲ್ಲಿ ವಾರ್ಷಿಕ 800 ಮಿ.ಮೀ. ಮಳೆ ಬೀಳಲಿದ್ದು, ಅದರ ಪ್ರಮಾಣ 15 ಟಿಎಂಸಿ ಆಗಲಿದೆ. ನಗರದ ಎಲ್ಲ ಕೆರೆಗಳನ್ನು ಅಚ್ಟುಕಟ್ಟಾಗಿ ಇರಿಸಿದ್ದಲ್ಲಿ 35 ಟಿಎಂಸಿ ನೀರು ಸಂಗ್ರಹಿಸಬಹುದಾಗಿದೆ. ಆದರೆ ಒತ್ತುವರಿ ಕಾರಣದಿಂದಾಗಿ ನಗರದ ಕೆರೆಗಳ ಸಾಮರ್ಥ್ಯ 35 ಟಿಎಂಸಿಯಿಂದ ಕುಸಿತಗೊಂಡು ಇದೀಗ ಕೇವಲ 2 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಐಐಎಸ್ಸಿ ವಿಜ್ಞಾನಿ ಟಿ.ವಿ. ರಾಮಚಂದ್ರ ನೇತೃತ್ವದಲ್ಲಿ ಅಧ್ಯಯನ ನಡೆಸಿರುವ ತಂಡ ವರದಿಯಲ್ಲಿ ಹೇಳಿದೆ.

ಆಗಸ್ಟ್ ತಿಂಗಳೊಂದರಲ್ಲಿಯೇ ನಗರದಲ್ಲಿ 35 ಸೆಂಟಿ ಮೀಟರ್ ಮಳೆಯಾಗಿದೆ. ಇದರಲ್ಲಿ ಅರ್ಧದಷ್ಟು ನೀರನ್ನಾದರೂ ಸಂಗ್ರಹಿಸಿದ್ದರೆ ಮುಂದಿನ ಮೂರರಿಂದ ನಾಲ್ಕು ತಿಂಗಳಿಗೆ ಅಗತ್ಯವಾಗುವಷ್ಟು ನೀರನ್ನು ಸಂಗ್ರಹಿಸಬಹುದಾಗಿತ್ತು ಎಂದು ತಜ್ಞರು ವಿವರಿಸಿದ್ದಾರೆೆ.

ಯಾರಿಗೆ ಕಡ್ಡಾಯ…?

2009ರ ನಂತರ 1,200 ಚ.ಅಡಿಯಲ್ಲಿ ನಿರ್ವಣಗೊಳ್ಳುವ ಎಲ್ಲ ಕಟ್ಟಡಗಳಿಗೂ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಕಟ್ಟಡಗಳ ಸಮೀಕ್ಷೆಗೆ ಮುಂದಾಗಿದ್ದ ಮಂಡಳಿಗೆ 1.08 ಲಕ್ಷ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆಯಾಗದಿರುವುದು ಪತ್ತೆಯಾಗಿತ್ತು.

ಒಂದು ವರ್ಷದಿಂದ ಜಲಮಂಡಳಿ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದ ಕಟ್ಟಡಗಳಿಗೆ ದಂಡ ವಿಧಿಸುತ್ತಿದೆಯಾದರೂ ಮಳೆ ನೀರು ಕೊಯ್ಲು ಅಳವಡಿಕೆಗೆ ಆಸಕ್ತಿ ಕಂಡುಬಂದಿಲ್ಲ. ನಂತರ ದಂಡ ವಿಧಿಸುವ ಪ್ರಕ್ರಿಯೆ ಆರಂಭವಾದಂತೆ 70,622 ಕಟ್ಟಡಗಳು ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡಿವೆ. ಉಳಿದ ಕಟ್ಟಡಗಳಿಗೆ ಕಳೆದ ಅಕ್ಟೋಬರ್​ನಿಂದಲೇ ದಂಡ ಹಾಕಲಾಗುತ್ತಿದೆ. ಇದುವರೆಗೆ 11,465 ಕಟ್ಟಡಗಳಿಂದ 1 ಕೋಟಿ ರೂ.ಗಳಿಗೂ ಅಧಿಕ ದಂಡವನ್ನು ಸಂಗ್ರಹಿಸಲಾಗಿದೆ.

ನಗರ ಮಧ್ಯಭಾಗದಲ್ಲೇ ಅಳವಡಿಕೆಯಾಗಿಲ್ಲ!

ಗಾಂಧಿನಗರ, ಚಿಕ್ಕಪೇಟೆ, ಶಿವಾಜಿನಗರ, ಸರ್ವಜ್ಞನಗರ, ಪುಲಕೇಶಿನಗರ ಮತ್ತು ಸಿ.ವಿ. ರಾಮನ್​ನಗರ ವಿಧಾನಸಭಾ ಕ್ಷೇತ್ರಗಳು ಜಲಮಂಡಳಿಯ ಕೇಂದ್ರ ವಿಭಾಗಕ್ಕೆ ಒಳಪಡುತ್ತವೆ. ಈ ಪ್ರದೇಶದಲ್ಲಿರುವ 763 ಸರ್ಕಾರಿ ಕಟ್ಟಡಗಳ ಪೈಕಿ 723 ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲಿಗೆ ವ್ಯವಸ್ಥೆಯನ್ನೇ ಕಲ್ಪಿಸಿಲ್ಲ. ಊರಿಗೆ ಬುದ್ಧಿ ಹೇಳುತ್ತಿರುವ ಸರ್ಕಾರ, ಜಲಮಂಡಳಿಗಳು ತನ್ನದೇ ಕಟ್ಟಡದಲ್ಲಿ ಮಳೆ ನೀರು ಕೊಯ್ಲು ಅಳವಡಿಸದಿರುವುದು ಕಂಡುಬಂದಿದೆ. ಜಲಮಂಡಳಿಯ ನೈಋತ್ಯ ವಿಭಾಗಕ್ಕೆ ಒಳಪಡುವ ಬಸವನಗುಡಿ, ಚಾಮರಾಜಪೇಟೆ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ 604 ಸರ್ಕಾರಿ ಕಟ್ಟಡಗಳ ಪೈಕಿ 543 ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲಿನ ವ್ಯವಸ್ಥೆ ಇಲ್ಲ ಎಂಬುದನ್ನು ಜಲಮಂಡಳಿಯ ಅಂಕಿ-ಅಂಶಗಳು ತಿಳಿಸಿವೆ.

ಸರ್ಕಾರಿ ಕಟ್ಟಡಗಳಿಗೂ ಜಲಮಂಡಳಿ ದಂಡವನ್ನು ವಿಧಿಸುತ್ತಿದೆ. ಇಷ್ಟಾಗಿಯೂ ಸರ್ಕಾರಿ ಕಟ್ಟಡಗಳಲ್ಲಿ ಅಳವಡಿಕೆಗೆ ಆಸಕ್ತಿ ಕಂಡುಬಂದಿಲ್ಲ. ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದ ಸರ್ಕಾರಿ ಕ್ವಾರ್ಟರ್ಸ್​ಗಳು ಸೇರಿ ಇತರ ಕಟ್ಟಡಗಳಿಗೆ ದಂಡ ವಿಧಿಸಲಾಗುತ್ತಿದೆ. ಮೊದಲು ನೋಟಿಸ್ ನೀಡಿ ನಂತರ ದಂಡ ವಿಧಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಅನೇಕ ಇಲಾಖೆಗಳು ಮಳೆ ನೀರು ಕೊಯ್ಲಿಗೆ ಆಸಕ್ತಿ ತೋರಿವೆ. ಸಾರ್ವಜನಿಕರು ಇಂತಹ ವಿಚಾರಗಳಲ್ಲಿ ಸ್ವಯಂಪ್ರೇರಣೆಯಿಂದ ಕೈ ಜೋಡಿಸಬೇಕು.

| ಎಚ್.ಎಂ. ರವೀಂದ್ರ ಜಲಮಂಡಳಿ ನಿರ್ವಹಣಾ ವಿಭಾಗದ ಮುಖ್ಯ ಇಂಜಿನಿಯರ್

Leave a Reply

Your email address will not be published. Required fields are marked *

Back To Top