Friday, 23rd March 2018  

Vijayavani

ರಾಜ್ಯಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ- ಎಚ್​ಡಿಕೆ ಆರೋಪದಲ್ಲಿ ಹುರುಳಿಲ್ಲ- ಜೆಡಿಎಸ್‌ ನಡೆ ಬಗ್ಗೆ ಸಿಎಂ ಆಕ್ರೋಶ        ಕಾಗೋಡು, ಚಿಂಚನಸೂರು ಅಡ್ಡಾದಿಡ್ಡಿ ಮತದಾನ- ಜೆಡಿಎಸ್​ ರೆಬೆಲ್ಸ್​ನಿಂದ ಮತ್ತೇ ಅಡ್ಡ ಮತದಾನ- ಮತಗಟ್ಟೆಯಲ್ಲಿ ಹಲವು ಹೈಡ್ರಾಮಾ        ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ವಿಚಾರ- ವೀರಶೈವ ಮಹಾಸಭಾದಿಂದ ಮಹತ್ವದ ಸಭೆ- ಶಾಮನೂರು ನೇತೃತ್ವದಲ್ಲಿ ಮೀಟಿಂಗ್‌        ತೋಟದಲ್ಲಿ ಲೀಕಾಯ್ತು SSLC ಪೇಪರ್- ಪ್ರಶ್ನೆಪತ್ರಿಕೆ ವಾಹನದಲ್ಲಿ ವಿದ್ಯಾರ್ಥಿ ಕರೆತಂದಿದ್ದ ಶಿಕ್ಷಕ ಡಿಬಾರ್- ಮೊದಲ ದಿನವೇ ಎಕ್ಸಾಂ ಅವಾಂತರ        ರಾಜಧಾನಿ ಅನತಿ ದೂರದಲ್ಲೇ ಕಳ್ಳಬಟ್ಟಿ ದಂಧೆ- ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ- ಆಪರೇಷನ್ ಸೇಂದಿ​ಗೆ ದಿಗ್ವಿಜಯ ನ್ಯೂಸ್ ಸಾಥ್​       
Breaking News

ಸಮಸ್ಯೆ ಬಿಗಡಾಯಿಸದಿರಲಿ

Monday, 13.11.2017, 3:00 AM       No Comments

ಬೇಸಿಗೆ ಬಂದಾಗ ವಿದ್ಯುಚ್ಛಕ್ತಿ ಉತ್ಪಾದನೆ ಕುಸಿಯುವುದು, ತತ್ಪರಿಣಾಮವಾಗಿ ಲೋಡ್​ಶೆಡ್ಡಿಂಗ್ ಪರಿಪಾಠಕ್ಕೆ ಮೊರೆಹೋಗುವಂಥ ಅನಿವಾರ್ಯತೆ ಸೃಷ್ಟಿಯಾಗುವುದು ರಾಜ್ಯದಲ್ಲಿ ಪ್ರತಿವರ್ಷ ಸರ್ವೆಸಾಮಾನ್ಯವಾಗಿ ಕಾಣಬರುವ ಚಿತ್ರಣ. ಆದರೆ ಚಳಿಗಾಲದಲ್ಲೇ ಇಂಥದೊಂದು ಮುನ್ಸೂಚನೆ ತಲೆದೋರಿರುವುದು ಆತಂಕಕಾರಿ ಬೆಳವಣಿಗೆಯೇ ಸರಿ. ಸದ್ಯಕ್ಕೆ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆಯಾಗುತ್ತಿದ್ದರೂ, ಉತ್ಪಾದನೆಗೆ ಅಗತ್ಯವಿರುವ ಸಂಪನ್ಮೂಲದ ಕೊರತೆ ತಲೆದೋರಿರುವುದು ತಳ್ಳಿಹಾಕುವಂಥ ಸಮಸ್ಯೆಯಲ್ಲ.

ಪ್ರಸ್ತುತ ಇರುವ 8,600 ಮೆಗಾವಾಟ್​ನಷ್ಟು ವಿದ್ಯುತ್ ಬೇಡಿಕೆಯ ಪೈಕಿ, ಲಭ್ಯ ಮೂಲಗಳಿಂದ 6,600 ಮೆಗಾವಾಟ್​ನಷ್ಟು ವಿದ್ಯುತ್ ಬಳಕೆಗೆ ಲಭ್ಯವಾಗುತ್ತಿದ್ದು ಕೊರತೆ ಬಿದ್ದಿರುವ 2 ಸಾವಿರ ಮೆಗಾವಾಟ್ ಉತ್ಪಾದನೆಗೆ ಉಷ್ಣ ವಿದ್ಯುತ್ ಸ್ಥಾವರಗಳ ಮೊರೆಹೋಗಬೇಕಾಗಿದೆ. ಆದರೆ ಸಮರ್ಪಕ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾಗದ ಕಾರಣ ಸದರಿ ಶಾಖೋತ್ಪನ್ನ ವಿದ್ಯುತ್ ಘಟಕಗಳೂ ಸೊರಗುವಂತಾಗಿದ್ದು, ಅದೇ ಈಗ ಆತಂಕದ ಪರಿಸ್ಥಿತಿಯನ್ನು ಹುಟ್ಟುಹಾಕಿದೆ. ಚಳಿಗಾಲದಲ್ಲೇ ಇಂಥದೊಂದು ಸನ್ನಿವೇಶ ಎದುರಾದಲ್ಲಿ್ಲ ಬಿರುಬೇಸಿಗೆಯ ಹೊತ್ತಿಗೆ ಅದೆಷ್ಟು ತೀವ್ರವಾಗಬಹುದು ಎಂಬುದು ಇಲ್ಲಿ ಸಹಜವಾಗೇ ಉದ್ಭವಿಸುವ ಪ್ರಶ್ನೆ. ಅಸಮರ್ಪಕ ಕಲ್ಲಿದ್ದಲು ಪೂರೈಕೆಯಿಂದಾಗಿ ಈ ಪರಿಸ್ಥಿತಿ ನಿರ್ವಣವಾಗಿರುವುದಂತೂ ಹೌದು. ರಾಜ್ಯದ ಶಾಖೋತ್ಪನ್ನ ವಿದ್ಯುತ್ ಘಟಕಗಳಿಗೆ ಅಗತ್ಯವಿರುವ ಕಲ್ಲಿದ್ದಲು ಸಂಗ್ರಹದ ಪೈಕಿ ಶೇ. 60ರಷ್ಟು ಭಾಗ ಹಡಗಿನ ಮೂಲಕ, ಮಿಕ್ಕ ಶೇ. 40ರಷ್ಟು ಭಾಗ ರೈಲುರೇಕುಗಳ ಮೂಲಕ ಸರಬರಾಜಾಗುತ್ತದೆ. ಆದರೆ, ಸಮುದ್ರಮಾರ್ಗದಿಂದ ತರುವುದರಿಂದ ರಾಜ್ಯದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯಾಗುವುದರಿಂದಾಗಿ, ರೈಲುಮಾರ್ಗದಲ್ಲಿ ತರಲಾಗುವ ಕಲ್ಲಿದ್ದಲು ಸಂಗ್ರಹವನ್ನು ವರ್ಧಿಸುವ ನಿಟ್ಟಿನಲ್ಲಿ ರೈಲು ರೇಕುಗಳ ಸಂಖ್ಯೆ ಹೆಚ್ಚಿಸುವಂತೆ ರಾಜ್ಯವು ಕೇಂದ್ರವನ್ನು ನಿರಂತರ ಒತ್ತಾಯಿಸುತ್ತಿದ್ದರೂ ಅದು ಸ್ಪಂದಿಸುತ್ತಿಲ್ಲ. ಚುನಾವಣಾ ಅವಧಿ ಸನ್ನಿಹಿತವಾಗಿರುವುದರಿಂದಾಗಿ ಈ ಸನ್ನಿವೇಶ ರಾಜಕೀಯ ಮೇಲಾಟಕ್ಕೆ ಬಳಕೆಯಾಗುತ್ತಿದೆ. ಹೀಗಾಗಿ ಕಲ್ಲಿದ್ದಲು ಸಮಸ್ಯೆಗೆ ರಾಜಕೀಯ ಸಂಘರ್ಷ ಕಾರಣವೇ ಹೊರತು ಉತ್ಪಾದನೆಯಲ್ಲಿನ ಕೊರತೆಯಲ್ಲ ಎಂಬ ಅಭಿಪ್ರಾಯಗಳು ಈಗಾಗಲೇ ಅಲ್ಲಲ್ಲಿ ಕೇಳಿಬರುತ್ತಿವೆ. ಒಂದೊಮ್ಮೆ ಇದೇ ವಸ್ತುಸ್ಥಿತಿಯಾಗಿದ್ದಲ್ಲಿ ಅದು ವಿಷಾದನೀಯ ಬೆಳವಣಿಗೆ ಎನ್ನಲಡ್ಡಿಯಿಲ್ಲ. ಕಾರಣ ಜನಹಿತದ ವಿಷಯ ಬಂದಾಗ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಜನಹಿತಕ್ಕೆ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸಬೇಕೇ ಹೊರತು ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಅದನ್ನು ಬಳಸಿಕೊಳ್ಳಬಾರದು. ಜತೆಗೆ ಇಂಥ ಹಗ್ಗಜಗ್ಗಾಟಗಳಿಂದಾಗಿ ಲೋಡ್​ಶೆಡ್ಡಿಂಗ್ ಅನಿವಾರ್ಯವೆನಿಸಿದಾಗ ಶ್ರೀಸಾಮಾನ್ಯರು, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿ ಸಮುದಾಯ ತೊಂದರೆ ಅನುಭವಿಸುವುದು ಒಂದೆಡೆಯಾದರೆ, ವಿವಿಧ ತೆರನಾದ ಉದ್ಯಮಗಳು ಮತ್ತು ಸೇವಾಕ್ಷೇತ್ರಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿ ಉತ್ಪಾದಕತೆ ಕುಸಿಯುವುದಲ್ಲದೆ ದೇಶದ ಆರ್ಥಿಕತೆಯ ಮೇಲೂ ಅದು ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆದ್ದರಿಂದ, ಕಲ್ಲಿದ್ದಲು ಪೂರೈಕೆಗೆ ಒದಗಿರುವ ತಡೆಗೋಡೆಯನ್ನು ನಿವಾರಿಸುವುದರ ಜತೆಜತೆಗೆ, ಪವನ ವಿದ್ಯುತ್, ಸೌರವಿದ್ಯುತ್​ನಂಥ ಬದಲಿ ಮಾಗೋಪಾಯಗಳ ಕುರಿತೂ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ. ‘ತಡೆಗಟ್ಟುವಿಕೆಯು ಚಿಕಿತ್ಸೆಗಿಂತ ಉತ್ತಮ’ ಎಂಬುದೊಂದು ಮಾತಿದೆ. ಸಂಪನ್ಮೂಲ ಕೊರತೆಯ ನಿವಾರಣೆಗೆ ಮತ್ತು ಸಮಸ್ಯೆಯನ್ನು ತಡೆಗಟ್ಟುವುದಕ್ಕೆ ಈಗಿಂದಲೇ ಬದ್ಧ ಯತ್ನಗಳಾಗದಿದ್ದಲ್ಲಿ ಮುಂಬರುವ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುವುದಂತೂ ದಿಟ, ಅದರಿಂದಾಗಿ ಶ್ರೀಸಾಮಾನ್ಯರು ಹೈರಾಣಾಗುವುದಂತೂ ಖರೆ. ಅಂಥ ದಿನಗಳು ಬಾರದಿರಲಿ.

 

Leave a Reply

Your email address will not be published. Required fields are marked *

Back To Top