Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಸಮತೋಲನ ಕಾರ್ಯತಂತ್ರ

Thursday, 14.09.2017, 3:00 AM       No Comments

ಕೇಂದ್ರ ಗೃಹ ಮಂತ್ರಿ ರಾಜನಾಥ ಸಿಂಗ್ ಅವರು ಈಚಿನ ನಾಲ್ಕು ದಿನಗಳ ಕಾಶ್ಮೀರ ಭೇಟಿ ಸಂದರ್ಭದಲ್ಲಿ ಆ ಕಣಿವೆ ರಾಜ್ಯಕ್ಕೆ ಕೇಂದ್ರದಿಂದ ಹಲವು ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ಭಯೋತ್ಪಾದನೆ ಹಾವಳಿಯಿಂದ ಪೀಡಿತವಾಗಿರುವ ಆ ರಾಜ್ಯಕ್ಕೆ ಇದು ಸ್ವಲ್ಪ ನೆಮ್ಮದಿ ತರುವ ಸಂಗತಿ. ಜತೆಗೆ, ಸರ್ಕಾರ ಕಾಶ್ಮೀರ ವಿಷಯದಲ್ಲಿ ಸಮತೋಲನ ನೀತಿ ಅಳವಡಿಸಿಕೊಂಡಿರುವುದು ಈ ಮೂಲಕ ವೇದ್ಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆಯೇ ಘೋಷಿಸಿದ 80 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಈಗ ಒಂದು ಲಕ್ಷ ಕೋಟಿಗೆ ಏರಿದೆ. ಇದರ ಜತೆಗೆ, ಕಾಶ್ಮೀರ ಕಣಿವೆಯಿಂದ ವಲಸೆ ಬಂದಿರುವವರಿಗೆ 3000 ಉದ್ಯೋಗ ಕಲ್ಪಿಸುವ ಸಲುವಾಗಿ ಕೇಂದ್ರ 1080 ಕೋಟಿ ರೂ. ಬಿಡುಗಡೆ ಮಾಡಿದೆ. ಇದಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಬರುವ ವಲಸಿಗರಿಗಾಗಿ ಪುನರ್ವಸತಿ ಸಲುವಾಗಿ 2 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಸಹ ಘೋಷಣೆಯಾಗಿದೆ. ಇದೆಲ್ಲದರ ಜತೆಗೆ, ಗಡಿ ಜನರ ಸಮಸ್ಯೆಗಳನ್ನು ಅರಿಯಲು ತಜ್ಞರ ಸಮಿತಿ ನೇಮಿಸುವ ಭರವಸೆಯೂ ಸಚಿವ ರಾಜನಾಥರಿಂದ ಹೊಮ್ಮಿದೆ. ಇಷ್ಟೇ ಅಲ್ಲ, ಆ ರಾಜ್ಯದಲ್ಲಿ ಕುಸಿದಿರುವ ಪ್ರವಾಸೋದ್ಯಮ ಕ್ಷೇತ್ರವನ್ನು ಮೇಲೆತ್ತಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿಯೂ ಸಚಿವರು ಹೇಳಿದ್ದಾರೆ. ಈ ಎಲ್ಲ ಕ್ರಮಗಳು ಕಣಿವೆ ಜನರ ಮನಗೆಲ್ಲಲು ಹಾಗೂ ಅವರ ವಿಶ್ವಾಸ ಗಳಿಸಲು ಸಹಾಯಕವಾಗುವಂಥವೆಂಬುದರಲ್ಲಿ ಎರಡು ಮಾತಿಲ್ಲ.

ಹಾಗೆನೋಡಿದರೆ ಮೋದಿ ಸರ್ಕಾರ ಕಾಶ್ಮೀರ ವಿಷಯದಲ್ಲಿ ಬಿಗಿ ನಿಲುವನ್ನೇ ಅನುಸರಿಸುತ್ತ ಬಂದಿದೆ. ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಕಳೆದ ಏಳು ತಿಂಗಳಲ್ಲಿ 150ಕ್ಕೂ ಅಧಿಕ ಉಗ್ರರ ಹತ್ಯೆಯಾಗಿರುವುದು ಇದಕ್ಕೆ ನಿದರ್ಶನ. ಇನ್ನೊಂದೆಡೆ, ರಾಜತಾಂತ್ರಿಕವಾಗಿಯೂ ಸರ್ಕಾರ ಪಾಕಿಸ್ತಾನದ ನಡೆಗೆ ತಕ್ಕ ಹಾಗೆ ತಾನೂ ಕಾರ್ಯತಂತ್ರ ಅನುಸರಿಸುತ್ತಿದೆ. ಈ ಮೂಲಕ ಆ ದೇಶಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ. ಈ ಹಿಂದೆ ತನ್ನ ಎಚ್ಚರಿಕೆ ಹೊರತಾಗಿಯೂ ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ನವದೆಹಲಿಯಲ್ಲಿ ಭೋಜನಕೂಟಕ್ಕೆ ಆಹ್ವಾನಿಸಿದ ಭಾರತದಲ್ಲಿನ ಪಾಕ್ ರಾಯಭಾರಿ ಅಬ್ದುಲ್ ಬಸಿತ್ ಕ್ರಮದಿಂದ ಅಸಮಾಧಾನಗೊಂಡ ಭಾರತ, ವಿದೇಶಾಂಗ ಸಚಿವರ ಮಟ್ಟದ ಮಾತುಕತೆಯನ್ನೇ ರದ್ದುಪಡಿಸುವ ಮೂಲಕ ಪಾಕ್​ಗೆ ಬಿಸಿ ಮುಟ್ಟಿಸಿತ್ತು. ಮತ್ತೊಂದೆಡೆ, ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡುಮಾಡುವ, ಒಬ್ಬಂಟಿಯಾಗಿಸುವ ಯಾವ ಅವಕಾಶವನ್ನೂ ಪ್ರಧಾನಿ ಮೋದಿಯವರು ಬಿಟ್ಟುಕೊಡುತ್ತಿಲ್ಲ. ಈ ತಂತ್ರದಿಂದಾಗಿ ಪಾಕಿಸ್ತಾನ ಈಗಾಗಲೇ ಸಾಕಷ್ಟು ಮುಖಭಂಗ ಎದುರಿಸಬೇಕಾಗಿ ಬಂದಿದೆ. ಭಯೋತ್ಪಾದನೆ ನಿಗ್ರಹದಲ್ಲಿ ಹಾಗೂ ರಾಜತಾಂತ್ರಿಕವಾಗಿ ಬಿಗಿ ನೀತಿ, ಇತ್ತ, ಕಾಶ್ಮೀರಿಗರ ಮನಗೆಲ್ಲುವ ನಿಟ್ಟಿನಲ್ಲಿ ಕ್ರಮಗಳ ಘೋಷಣೆ ಹೀಗೆ ಬಹುವಿಧ ತಂತ್ರಗಾರಿಕೆಯನ್ನು ಸರ್ಕಾರ ಅನುಸರಿಸುತ್ತಿದ್ದು, ಇದೆಲ್ಲದರ ಪರಿಣಾಮವಾಗಿ ಅಲ್ಲಿ ಶಾಂತಿ ಮರುಸ್ಥಾಪನೆಯಾದರೆ ಅದರಿಂದ ಆ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೂ ಲಾಭವಿದೆ. ಏಕೆಂದರೆ, ಕಾಶ್ಮೀರದಲ್ಲಿನ ಹಿಂಸಾಚಾರ, ಪಾಕ್ ಪ್ರಚೋದನೆ ಇವೆಲ್ಲ ದಶಕಗಳಿಂದಲೂ ಭಾರತಕ್ಕೆ ತಲೆನೋವಾಗಿ ಪರಿಣಮಿಸಿವೆ. ಅಲ್ಲಿನ ಸಮಸ್ಯೆ ಬಗೆಹರಿದರೆ ಅಲ್ಲಿ ಹಾಕುವ ಶ್ರಮವನ್ನು ಬೇರೆ ಅಭಿವೃದ್ಧಿ ಕಾರ್ಯಗಳತ್ತ ತಿರುಗಿಸಬಹುದು.

Leave a Reply

Your email address will not be published. Required fields are marked *

Back To Top