Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ಸಮತೆಯೋ? ಸ್ವಶ್ರೇಷ್ಠತೆಯೋ?

Tuesday, 10.10.2017, 3:03 AM       No Comments

ಇಂದಿನ ಕೆಲವು ರಾಜಕಾರಣಿಗಳಿಗೆ ಬುದ್ಧಿಯೋ, ಸ್ವಬುದ್ಧಿಯೋ, ಸ್ವತಂತ್ರ ಬುದ್ಧಿಯೋ ಇರಬೇಕೆಂಬ ನಿಯಮವನ್ನು ಯಾವ ಶಾಸ್ತ್ರಕಾರರೂ, ಅರ್ಥಶಾಸ್ತ್ರವಿದರೂ, ನ್ಯಾಯಕೋವಿದರೂ, ಮುತ್ಸದ್ದಿಗಳೂ ಒಪ್ಪಲಾರರು. ವಾಸ್ತವ ಸ್ಥಿತಿ ಹಾಗಿದೆ. ಮಾತು ಖಾರವಾದರೂ ಜೀರ್ಣಿಸಿಕೊಳ್ಳಬೇಕಾದ ಅವಶ್ಯಕತೆ ಇರುವುದರಿಂದ ನೇರವಾಗಿ ಹೇಳಬೇಕಾಗುತ್ತದೆ. ಉದಾಹರಣೆ ನೋಡಿ. ಒಬ್ಬ ಬಾಲಿಶ, ಅಮೆರಿಕೆಯಲ್ಲಿ ಹೇಳುತ್ತಾ ಸಮರ್ಥಿಸುತ್ತಾನೆ- ನಮ್ಮದು ’’Dynastic Democracy’’ ಅಂತ! ‘ಪಾರಂಪರ್ಯ, ವಂಶಾಡಳಿತದ ಪ್ರಜಾಪ್ರಭುತ್ವ’ ಅಂತ. ಹಾಗೆಂದರೇನಯ್ಯ? ವಂಶಾಡಳಿತವೂ ಪ್ರಜಾಪ್ರಭುತ್ವವೂ ಪರಸ್ಪರ ವಿರೋಧಿ ಕಲ್ಪನೆಗಳಲ್ಲವೇ? ಅವನ ಮುತ್ತಾತ Democratic Socialism ಎಂಬ ಇಂಥದೇ ಅಪದ್ಧ ಕಲ್ಪನೆಯನ್ನು ಹುಟ್ಟುಹಾಕಿದ್ದರು. ಈ ವಿರೋಧಾಭಾಸ ಕಲ್ಪನೆಯ ಮೂಲಪುರುಷರೆಂಬ ಅಪಕೀರ್ತಿಯೂ ಅವರದಲ್ಲ. ಅದು ಬರ್ಟ್ರಂಡ್‌ ರಸೆಲ್ಲನು ಹುಟ್ಟುಹಾಕಿದ್ದು.

ನಾನಿ ಪಾಲ್ಖಿವಾಲಾ ಎಂಬ ಮಹಾನ್ ಚಿಂತಕ, ನ್ಯಾಯವಾದಿ ಒಮ್ಮೆ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಬಂದಿದ್ದಾಗ ಈ ಶಬ್ದಗಳ ವ್ಯಭಿಚಾರವನ್ನು ಕುರಿತು, ಜಾಳಜಾಳ ಹರಿದು, ಅಪದ್ಧತೆಯನ್ನು ತೋರಿಸಿದರು. ‘ಪ್ರಜಾಪ್ರಭುತ್ವ ಎಂದರೆ ವ್ಯಕ್ತಿ- Individual- ಸ್ವಾತಂತ್ರ್ಯದ, ಆಧಾರದ ಆಯ್ಕೆಯ ಮೇಲೆ ನಿರ್ಣೀತವಾಗುವ ಸರ್ಕಾರ. ಇಲ್ಲಿ ಸಮಾಜಕ್ಕಿಂತ ವ್ಯಕ್ತಿಯೇ ಮುಖ್ಯ, ಮೂಲಘಟಕ- Primary Unit. ಹಾಗಲ್ಲದೆ ಸೋಷಲಿಸಂ ಎಂದರೆ, ಇಲ್ಲಿ ವ್ಯಕ್ತಿ ಗೌಣ, ನಗಣ್ಯ; ಸಮಾಜವೇ ಎಲ್ಲ. ಅದೇ ಸಾರ್ವಭೌಮ. ಆ ಕಲ್ಪನೆಯಲ್ಲಿ ಸಮಾಜದ ಚುಕ್ಕಾಣಿ ಹಿಡಿದವನು, ಸರ್ವಾಧಿಕಾರಿ. ಸ್ಟಾಲಿನ್, ಲೆನಿನ್, ಬುಲ್ಗ್ಯಾನಿನ್, ಬ್ರೆಜ್ನೇವ್, ಕ್ರುಶ್ಛೆವ್, ಮಾವೋ ಮುಂತಾದವರು ಜನತೆ, ಸಮಾಜ ಎಂಬ ಸಮಷ್ಟಿಯ ಹೆಸರಲ್ಲಿ, ದಬ್ಬಾಳಿಕೆ ನಡೆಸುವ ಅವ್ಯವಸ್ಥೆ. ‘ಸಮಾಜದ’ ಸಮಾನತೆಯ, ಸಮತೆಯ ಹೆಸರಲ್ಲಿ ಯಾರನ್ನೂ ‘ಇಲ್ಲ’ ಮಾಡಬಹುದು, Liquidate ಮಾಡಬಹುದು. ಅದು ಸಮರ್ಥಿತ. State Terrorism& ಸರ್ಕಾರವೇ ನಡೆಸುವ ಹಿಂಸಾಚಾರ, ‘ಜನರ ಒಳಿತಿಗೆ’. ಆ ‘ಜನರು’ ಕಣ್ಣಿಗೆ ಕಾಣದವರು, Abstract. ಹಾಗಾಗಿ ವ್ಯಕ್ತಿ- ಕಣ್ಣಿಗೆ ಕಾಣುವ ಘಟಕಕ್ಕೂ, ಕಾಣದ- ಸಮಾಜಕ್ಕೂ ತಳುಕುಹಾಕಿ ನಿರ್ವಿುತವಾದ ಈ ಡೆಮಾಕ್ರಟಿಕ್ ಸೋಷಲಿಸಂ ಎಂಬುದು ಮಹಾಮೋಸ, ಮೋಹಕ, ಅನರ್ಥಕರ ಅಂತ ನಿರೂಪಿಸಿದರು. ಅದು ನಿಜಲಿಂಗಪ್ಪನವರು ಮುಖ್ಯಮಂತ್ರಿಯಾದ ಕಾಲ. ಬೇಂದ್ರೆಯವರಿಗೆ ತಡವಾಗಿ ಡಾಕ್ಟರೇಟ್ ಪದವಿ ಇತ್ತ ಕಾಲ. ಬೇಂದ್ರೆಯವರು ಖಲೀಲ್ ಗಿಬ್ರಾನನ ಒಂದು ಕವನ, ಡಾ. ವಿ.ಕೆ. ಗೋಕಾಕ್ ಭಾಷಾಂತರಿಸಿದ್ದು- ‘ದೇವರೇ ಗತಿ’ ಎಂಬುದನ್ನು ಓದಿ, ಎಲ್ಲರನ್ನೂ ಮುಗ್ಧ ಮಾಡಿದ ಸಭೆ. ಕಾಂಗ್ರೆಸ್ಸಿನ ನಾಯಕರಿಗೆ ಈ ಆಭಾಸಗಳು ತಿಳಿಯುವುದಿಲ್ಲ. ಅವರೊಡನೆಯೇ ಇದೂ ಅಳಿದ ಹೊರತು ವಿವೇಕೋದಯ ಕಾಲ ಬರುವ ಸೂಚನೆಯಿಲ್ಲ. ಇಂದು ನೆನಪಾದುದೇಕೆಂದರೆ ಕಾವಿ ತೊಟ್ಟ ಅನೇಕ ಮಠಾಧೀಶರಲ್ಲೂ ಈ ಬಗೆಯ ಭ್ರಮೆಗಳು ತಾಂಡವವಾಡುತ್ತಾ ನಾವು ಕಾಂಗ್ರೆಸ್ ಸ್ವಾಮಿಗಳನ್ನೂ, ಕಮ್ಯೂನಿಸ್ಟ್ ಸ್ವಾಮಿಗಳನ್ನೂ, ನಕ್ಸಲ್ ಸ್ವಾಮಿಗಳನ್ನೂ, ಮಾವೋ ಸ್ವಾಮಿಗಳನ್ನೂ ಕಾಣುತ್ತೇವೆ! ನೀವು ಬ್ರಾಹ್ಮಣರೋ, ವೀರಶೈವರೋ, ಲಿಂಗಾಯಿತರೋ, ಒಕ್ಕಲಿಗರೋ, ಜಾತ್ಯತೀತರೆಂದು ಬಿಂಬಿಸಿಕೊಂಡು ಬೀಗಿ ಮೆರೆಯುವ ಜಾತೀವಾದಿಗಳೋ ಎಂಬುದು, ಮುಖವಾಡ ಕಳಚಲೇಬೇಕಾಗಿದೆ. ಇಲ್ಲವಾದರೆ ಭಾರತ, ಕರ್ನಾಟಕ ಉಳಿಯುವುದಿಲ್ಲ. ಸ್ವಾಮಿ ಅಗ್ನಿವೇಶರಿಂದ ಹಿಡಿದು ಹಲವು ಸಿಡಿಮಿಡಿಗಳವರೆಗೆ, ಮಾತಿನ ಮಲ್ಲರಿಗೆ, ಮಾತೇ ಮೃತ್ಯುವಾದ ದುರ್ದೈವಿಗಳಿಗೆ ಈ ಜಾಲ ಹರಡಿದೆ. ‘ಎನಗಿಂತ ಕಿರಿಯರಿಲ್ಲ, ಶಿವಶರಣರಿಗಿಂತ ಹಿರಿಯರಿಲ್ಲ’ ಎಂದೊಬ್ಬರು ನುಡಿದರು. ಈ ಮಾತು ಬಂದಕೂಡಲೇ ಅವರು ಕಿರಿಯರಾಗಿಹೋದರೆ? ಹಾಗೆಂದು ಹಿರಿತನವೋ? ಸಿರಿತನವೋ? ಸಿನಿಕತನವೋ? ವಾಸ್ತವ -realityಯೋ? ಅನುಸಂಧಾನ ಸೂತ್ರದ ವಿನಮ್ರತೆಯೋ, ವಿನಯವೋ?

‘ಯದಿ ವೇದ ಸುವೇದೇತಿ….’ ಎಂಬ ಕೇನೋಪನಿಷತ್ತಿನ ಸೂಕ್ತಿ ಹೇಳುತ್ತದೆ- ‘ನನಗೆಲ್ಲ ಗೊತ್ತು ಎಂದು ತಿಳಿದರೆ, ನಿನಗೇನೂ ಗೊತ್ತಿಲ್ಲ! ನನಗೇನೂ ಗೊತ್ತಿಲ್ಲ ಎಂದರೆ ಎಲ್ಲ ತಿಳಿದಂತೆ’. ಆದುದರಿಂದ ‘ಅವಿಜ್ಞಾತಂ ವಿಜಾನತಾಂ, ವಿಜ್ಞಾತಂ ಅವಜಾನತಾಂ’, ‘ತಿಳಿಯದುದನ್ನು ತಿಳಿಯುವ ಯತ್ನ ಮಾಡು, ತಿಳಿದಾಯಿತು ಎಂಬ ಜಂಭ, ಅಹಂಕಾರ, ಅಜ್ಞಾನವನ್ನು ಬಿಡು’ ಅಂತ. ಇದೆಲ್ಲ ‘ಪುರೋಹಿತಶಾಹಿ’ ಎಂಬುವವ ಈಗ ಅಪ್ಪಟ ತಿಳಿಗೇಡಿ ಅಲ್ಲವೇ? ಯೋಚಿಸಿ. ವಿವೇಕಕ್ಕೆ ಜಾತಿ ಇದೆಯೇ? ಏನಿರಯ್ಯ? ರಾವಣ ಸಭೆಯಲ್ಲಿ ಆಂಜನೇಯ ಹೇಳಿದ ‘ಮತ್ತಃ ಪ್ರತ್ಯವರಃ ಕಶ್ಚಿತ್ ನಾಸ್ತಿ ಸುಗ್ರೀವಸಂನ್ನಿಧೌ’, ‘ನನಗಿಂತ ಕಡಿಮೆ ಪರಾಕ್ರಮದ ಕಪಿಯು ಸುಗ್ರೀವಸೈನ್ಯದಲ್ಲಿ ಬೇರಾರೂ ಇಲ್ಲ’ ಅಂತ. ಇದು ವಿನಯೋಕ್ತಿಯೋ? ಭಾವಾನುಭೂತಿಯ ಪರಾಕಾಷ್ಠೆಯೋ? ವಸ್ತುಸ್ಥಿತಿಯೋ? ಜಂಭವೋ? ‘ನನ್ನಂಥ ಕಪಿಯೇ ಸಮುದ್ರ ಹಾರಿಬಂದು, ಲಂಕೆಯನ್ನು ಸುಟ್ಟು, ನಿನ್ನ ಮಕ್ಕಳನ್ನೂ ಸೇನೆಯನ್ನೂ ಕೊಂದು, ನಿನ್ನನ್ನು ಧಿಕ್ಕರಿಸಿ ಕುಳಿತು ದಿಟ್ಟವಾಗಿ ಹೀಗೆ ಆಡುತ್ತೇವೆಂದರೆ, ಹೆಚ್ಚಿನ ಪರಾಕ್ರಮದ ಉಳಿದವರೂ ಇಲ್ಲಿ ಬಂದರೆ ನಿನ್ನ ಗತಿಯೇನು?’ ಎಂಬ ಬರೀ ಪರೋಕ್ಷದ ಎಚ್ಚರಿಕೆಯೇ? ಹನುಮಂತನನ್ನು ಪೂಜಿಸುವವರಿಗೆ ಇಂದು ಈ ವಿನಯಾತಿಶಯ ಇದೆಯೇ? ಯೋಚಿಸಿ.

ಈಗ ಶೀರ್ಷಿಕೆಯ ವಿಷಯಾಂತರಾಳಕ್ಕೆ ಬನ್ನಿ. ‘ಸಮತೆ’ ಎಂಬುದು ಪ್ರಕೃತಿವಿರುದ್ಧ ಕಲ್ಪನೆ. ‘ಸಮಾನತೆ’ ಎಂಬುದು ಆರ್ಥಿಕ, ಸಾಮಾಜಿಕ, ರಾಜಕೀಯ ಸಮರಸತೆಗೆ ದಾರಿಯಾದ, ಅಲ್ಪಾರ್ಥದ ಒಂದು ಸೂತ್ರ. ಅದು ಸಮಗ್ರ ತತ್ತ್ವವೂ ಅಲ್ಲ, ಸ್ವಯಂಪೂರ್ಣವೂ ಅಲ್ಲ. ಕನ್​ಫ್ಯೂಷಿಯಸ್​ನ Central Harmony ತತ್ತ್ವದ ಸಮೀಪದ್ದು ಇದು. ಉದಾಹರಣೆಗೆ, ಒಂದು ವಾದ್ಯವೃಂದ. ಅಲ್ಲಿ ಪಿಟೀಲು, ವೀಣೆ, ಸಿತಾರ್, ಗೋಟುವಾದ್ಯ, ತಬಲ, ಮೃದಂಗ, ಢೋಲಕ್, ಕಂಚಿನ ತಾಳಗಳು, ತಂಬೂರಿ, ನಾದಸ್ವರ, ಕೊಳಲು ಮುಂತಾದ ನೂರಾರು ವಾದ್ಯಗಳು- ನಮ್ಮ ಶ್ರೀ ರವಿಶಂಕರ ಗುರೂಜಿಯವರು ಹಲವಾರು ಸಲ ಏರ್ಪಡಿಸಿದಂತೆ- ಇರುವುದಾದರೂ ಭಿನ್ನತೆ ಇದೆ. ಹೇಳಬೇಕೆ? ಕೊಳಲು ವೀಣೆಯಲ್ಲ, ಪಿಟೀಲು ಸಾರಂಗಿಯಲ್ಲ. ಸಿತಾರ್ ತಬಲಾ ಅಲ್ಲ. ನಾದರೀತಿಗಳೇ ಬೇರೆ. ‘ಸರೋದ್’ ಎಂಬ ‘ಸ್ವರೋದಯ‘- ಮೂಲದ ರಾವಣನ ವಾದ್ಯ ಇತ್ಯಾದಿಗಳನ್ನು ನುಡಿಸುವ ರೀತಿಯೂ, ಧ್ವನಿಮಾಧುರ್ಯವೂ ಬೇರೆಬೇರೆ. ಆದರೆ ರಾಗ ಒಂದೇ ಆಗಿ, ತಾಳ ಒಂದೇ ಆಗಿ, ನುಡಿಸುವ ಶೈಲಿ, ದಿಗ್ದರ್ಶನ ನೇತೃತ್ವದಲ್ಲಿ ಕಾಲಾರಂಭ, ಮುಕ್ತಾಯಗಳೂ, ವಿರಾಮಗಳೂ, ಲಯವೂ ಒಂದೇ ಆದಾಗ ಬರುವುದು ಏಕಾನುಭವ- Unity- ಹೊರತು Uniformity ಅಲ್ಲ. ಕಮ್ಯೂನಿಸ್ಟರು ತಪ್ಪಿದ್ದು ಇಲ್ಲೇ. ಏಕತೆ ಬೇರೆ, ಏಕರೂಪತೆ ಬೇರೆ. ‘ಮಯಿಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾನಿವಾ’ ಎಂದಿತ್ತು ಗೀತೆ. ಒಂದು ಮಣಿಹಾರದಲ್ಲಿ ಕೆಂಪು, ನೀಲಿ, ಪಚ್ಚೆ, ಹಳದಿ, ಕಪು್ಪ, ಬಿಳಿ ಮಣಿಗಳಿದ್ದರೂ ದಾರ ಒಂದೇ ಆದಾಗ, ಹಾರ ಒಂದೇ ಆಗುತ್ತದೆ ಎಂಬುದು. ಇದನ್ನು ಕವಿ ಬೇಂದ್ರೆ ‘ಹಾರಮಣಿಯನ್ನೇ’= ‘Harmony’ ಎಂದು ಬರೆದರು. ನೀವು ಓದುವುದಿಲ್ಲ. ಬೈಯುತ್ತೀರಿ! ಏಕೆ? ನಿಮಗೆ ತಿಳಿಯುವುದಿಲ್ಲ ಅಂತಲೂ ತಿಳಿಯುತ್ತಿಲ್ಲ. ಅದು ಬುದ್ಧಿಜೀವಿಗಳ ಅಧೋಗತಿ.

ಹಾಗೆ, ‘ಸಮತೆ’ ಬರೀ ಕಲ್ಪನೆ. ಒಂದಷ್ಟು ಪರಿಮಿತಾರ್ಥದಲ್ಲಿ ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಆದರೆ ಕರ್ಮ ಬೇರೆ, ಕುಶಲತೆ ಬೇರೆ, ಜನನ-ಮರಣ, ದಾರಿದ್ರ್ಯ, ಸುಖ-ದುಃಖಾನುಭವಗಳು ಬೇರೆಬೇರೆಯೇ? ಅಯ್ಯಪ್ಪಗಳಿರಾ? ಕಣ್ಣು ಕಾಣಿಸಲಾರದೆ? Bulldoze ಮಾಡಿದ ‘ನೆಲಸಮತಾವಾದ’ ಸರಿಯೇ? ನಿಮ್ಮ ಢೋಂಗಿತನ ಈಗ ಬಯಲಾಗಲಿ, ಸ್ವಾಮಿ, ನೀವು ಮಠಪತಿಯೋ, ಮುಖಂಡರೋ, ಶರಣರೋ, ಹರಿದಾಸರೋ ಏನೆಂದಾದರೂ ಕರೆದುಕೊಳ್ಳಿ. ಮೆಣಸಿನಪುಡಿ ಡಬ್ಬಿಗೆ ‘ಸಕ್ಕರೆ’ ಅಂತ ಅಂಟುಚೀಟಿ ಹಚ್ಚಿದರೂ ಇರುವೆಯೂ ಮೋಸಹೋಗುವುದಿಲ್ಲ. ನಮ್ಮ ಕನ್ನಡ ಜನತೆಗೆ ಇರುವೆಯಷ್ಟೂ ಬುದ್ಧಿಯಿಲ್ಲವೇ? ‘ವೀರಶೈವ, ಲಿಂಗಾಯಿತ’ ಎರಡೂ ಗ್ರಹಿಕೆಗಳೂ ಒಂದೇ, ಪ್ರಾದೇಶಿಕ ಭಿನ್ನತೆಯಲ್ಲಿ ರೂಢಿಯಲ್ಲಿ ಶಬ್ದಗಳು ಬೇರೆ ಅಂತ ಶತಾಯುಷಿ ಸ್ವಾಮಿಗಳೊಬ್ಬರು ವಿವೇಕಪೂರ್ಣವಾಗಿ ಮೊನ್ನೆಮೊನ್ನೆ ಅಪ್ಪಣೆ ಕೊಟ್ಟರಲ್ಲ? ಅದು ಕೆಲವರಿಗೆ ಬೇಕಿಲ್ಲ. ಏಕಿಲ್ಲ? ‘ನಾನು ಶ್ರೇಷ್ಠ, ನನ್ನದು ಶ್ರೇಷ್ಠ, ನನ್ನ ಪಂಗಡವೇ ಶ್ರೇಷ್ಠ’ ಎಂಬ ಅಹಮಿಕೆಯಲ್ಲಿ, ಸ್ವಶ್ರೇಷ್ಠತೆಯಲ್ಲಿ, ‘ಇತರರಿಗಿಂತ ನಾನು ಹೆಚ್ಚು’ ಎಂಬ ಅಹಂಭಾವದಲ್ಲಿ ನೀವು ಸಮತೆಯನ್ನು ಎಲ್ಲಿ ಕಾಣುತ್ತೀರಿ? ಶ್ಮಶಾನದಲ್ಲಿ ನೀವು ನಡೆಸುವ ವಿವಾಹಗಳಲ್ಲೆ? ಎಡೆಸ್ನಾನ ವಿರೋಧದಲ್ಲೇ? ಮೂಢನಂಬಿಕೆಯ ನಿಮೂಲ ಕಾಯ್ದೆಯ ಜಾರಿಯ ತರಾತುರಿಯ ಅಸಾಧ್ಯ ಅಬ್ಬರಾರ್ಭಟದ ಅಧಿಕಾರ ಚಲಾವಣೆಯಲ್ಲೇ? ಮುಂಬರುವ ಚುನಾವಣೆಯಲ್ಲೇ? ಚಿತಾವಣೆಯಲ್ಲೇ? ಎಲ್ಲಿಯಯ್ಯ?

‘ಶ್ರೇಷ್ಠತೆ’, ‘ಸಮಾನತೆ’ಗಳು ಪರಸ್ಪರ ವಿರೋಧಿ ಕಲ್ಪನೆಗಳು. ಅಯ್ಯೋ! ಎರಡೂ ಸಂಸ್ಕೃತ ಶಬ್ದಗಳು, ಅಪ್ಪಾ! ಒಂದೇ ಎಂಬುದು Hypocricy& ಅಜ್ಞಾನ ವಿಜೃಂಭಣೆ. ‘ಒಳಗೊಂದು, ಹೊರಗೊಂದು’ ಎಂಬ ವಂಚನೆ. ಒಂದು ಕತೆ ಹೇಳುತ್ತೇನೆ. ಒಂದು ಕೋತಿ, ಯಾರದೋ ಭಯಕ್ಕೆ, ಹೊಲದಿಂದ ಹಾರಿ ಬೇಲಿ ಹಾಯುವಾಗ, ಆ ಮುಳ್ಳುತಂತಿಯ ಬೇಲಿಯಲ್ಲಿ ಅದರ ಬಾಲ ಕಿತ್ತು ಬಿದ್ದುಹೋಯಿತು! ಆಗ ಅದು ಬಾಲವಿಲ್ಲದ ಕೋತಿಯಾಯ್ತು! ಅದಕ್ಕೆ ಇತರ ಕೋತಿಗಳೊಡನೆ ಸಮಾನತೆ ಹೇಗೆ ಸಾಧ್ಯ? ಅವು ತನ್ನನ್ನು ಹರಿದು ತಿನ್ನುತ್ತವೆ ಎಂಬ ಭಯದಿಂದ, ಈ ಕೋತಿ, ಕೋತಿಗಳ ಸಮಾವೇಶ ಕರೆದು ‘ಈಗ ಇದೇ Latest Fashion. ಈ ಬಾಲ ಎಂಬುದು ಪುರೋಹಿತಶಾಹಿಗಳು ನಮಗೆ ಅಂಟಿಸಿದ, ನಮಗೆ ಬೇಡದ ಅನುಬಂಧ. ಬನ್ನಿ, ಎಲ್ಲರೂ ಇದನ್ನು ಕಿತ್ತು ಎಸೆಯೋಣ’ ಎಂದು ಭಾಷಣ ಮಾಡಲಾರಂಭಿಸಿತು. ಉಳಿದವು ಇದರ ಮರ್ಮ, ಸಂಚು ಅರಿತು ಅದನ್ನು ಅಲ್ಲಿಂದ ಓಡಿಸಿದವು!- ಇದು ಸಾಂಕೇತಿಕ ಕತೆ. ಭಾರತೀಯರು ಇರುವಲ್ಲೆಲ್ಲ ಇಂದು ದುರ್ಗಾಷ್ಟಮಿ, ದುರ್ಗಾಪೂಜೆ ಮಾಡುವಾಗ, ಮಹಿಷಾಸುರ ಸಂಹಾರ ಶುರುವಾಗಿರುವಾಗ, ಒಬ್ಬರು ದುರ್ಗೆಯನ್ನು ಪುರೋಹಿತಸೃಷ್ಟಿ ಎಂಬುದೂ, ಮಹಿಷಾಸುರ ಕರ್ನಾಟಕಕ್ಕೆ ಬಂದ ಅಶೋಕಶಿಷ್ಯ, ಮಹಾದೇವ ಎಂಬುದೂ ಯಾವ ನ್ಯಾಯದಲ್ಲಿ ಸೇರುತ್ತದೆ, ಯೋಚಿಸಿ. ಅದಕ್ಕೇ ಹೇಳಿದ್ದು, ಬುದ್ಧಿ, ಸ್ವಬುದ್ಧಿ ಬೇಕೆಂದು. ಕಮ್ಯೂನಿಸಂನ ಅವಸಾನ ಕಾಲದಲ್ಲಿ ಅಂದಿನ ರಷ್ಯಾ ನಾಯಕರೊಬ್ಬರು ಅಮೆರಿಕೆಗೆ ಹೋಗಿ ‘ನಮ್ಮದೇ ನಿಜ ಪ್ರಜಾಪ್ರಭುತ್ವ’ ಎಂದಾಗ, ಆ ಗೊರ್ಬಚೇವ್ ಮಹಾಶಯನನ್ನು ಅಮೆರಿಕನ್ನರು Heckle ಮಾಡಿ, ಹಿಗ್ಗಾಮುಗ್ಗ ಪ್ರಶ್ನಿಸಿ ಬಾಯಿಮುಚ್ಚಿಸಿದರು. ಪ್ರಶ್ನೆಗಳೇ ಏಳದಂತೆ, ಎದ್ದರೆ ಸಾಯಿಸುವ ಅಂದಿನ ರಷ್ಯಾ ನಾಯಕನ ಸ್ಥಿತಿ ಏನಾಯ್ತು? ನೋಡಿದ್ದೀರಿ! ಅಲ್ಲಿ ಕಮ್ಯೂನಿಸಂ ಸತ್ತಿತ್ತು! ಆಗ ಬಂತು Glasnost-Perestroika ತತ್ತ್ವಗಳು. ಹೇ ಭಗವಾನ್! ಇಲ್ಲಿಯೋ? ಅಸಂಬದ್ಧವಾಗಿ ಮಾತಾಡುವವರನ್ನು ಬಯಲಿಗೆಳೆಯಲು ಒಂದು ಲೇಖನ ಸಾಲದು. ಚಿಂತನಶೀಲರಾದ ಎಲ್ಲರೂ- ಯುವಕ ಯುವತಿಯರು ಈ ಬಯಲಾಟದ ಸ್ವಾಮಿ, ಶರಣ, ಭಕ್ತ, ಮಠಪತಿ, ಧುರೀಣ, ಸ್ವಾರ್ಥಿಗಳ ನಿಜಸ್ವರೂಪವನ್ನು ಎಳೆದು ಲೋಕಕ್ಕೆ ಉಪಕರಿಸಬೇಕು. ಈ ಸಂಕುಚಿತಗಳ ಆಚೆಗೆ ಸೌಖ್ಯ, ಸಮಾನತೆ, ಸಮರಸತೆ ಎಂಬುದು ತಿಳಿಯಬೇಕು. ‘ರಸವೇ ಜೀವನ, ವಿರಸ ಮರಣ, ಸಮರಸವೇ ಜೀವನ’ ಎಂದರು ಬೇಂದ್ರೆ. ಅವರು ಬ್ರಾಹ್ಮಣರೆಂಬುದು ದ್ವೇಷಕಾರಣವಾಗಬಾರದು. ಬಸವಣ್ಣ, ಅಲ್ಲಮ, ಪುರಂದರ, ಕನಕ, ಋಷಿಮುನಿಗಳು, ವಿವೇಕಾನಂದ, ಅರವಿಂದರು ಹೇಳಿದ್ದೂ ಇದೇ. ಅದೇ ‘ಹಿಂದೂ’ ಎಂಬ, ‘ಒಂದು’ ಎಂಬ ಸಮರಸ ಕಲ್ಪನೆ, ಗುರಿ.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top