Monday, 11th December 2017  

Vijayavani

1. ಜಮ್ಮುವಿನಲ್ಲಿ ಗುಂಡಿನ ಚಕಮಕಿ- ಯೋಧರ ಗುಂಡೇಟಿಗೆ ಮೂವರು ಉಗ್ರರು ಮಟಾಶ್​​​- ಒಬ್ಬ ಜೀವಂತವಾಗಿ ಸೆರೆ, ವಿಚಾರಣೆ 2. ರವಿ ಬೆಳಗೆರೆ ಕಸ್ಟಡಿ ಅವಧಿ ಇಂದಿಗೆ ಅಂತ್ಯ- ಮಧ್ಯಾಹ್ನ ನ್ಯಾಯಾಲಯಕ್ಕೆ ಪತ್ರಕರ್ತ ಹಾಜರು- ಜಾಮೀನು ಕೊಡ್ತಾರಾ ನ್ಯಾಯಾಧೀಶರು..? 3. ಮಕ್ಕಳ ಮೊಟ್ಟೆ ಗುತ್ತಿಗೆದಾರರ ಹೊಟ್ಟೆಗೆ- ಕೊಪ್ಪಳದಲ್ಲಿ ನಡೆದಿದೆ ಮೊಟ್ಟೆ ಗೋಲ್​​ಮಾಲ್​- ಡಿಸಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತಕ್ಕೆ ದೂರು 4. ಸರ್ಕಾರಿ ಜಾಗದ ಮೇಲೆ ಬಿಲ್ಡರ್​ ಕಣ್ಣು- ರಾತ್ರೋರಾತ್ರೊ ಮನೆ ಖಾಲಿಗೆ ಆವಾಜ್​​- ಹುಬ್ಬಳ್ಳಿಯಲ್ಲಿ ದಯಾಮರಣಕ್ಕೆ 12 ಕುಟುಂಬದಿಂದ ಅರ್ಜಿ 5. ಗುತ್ತಿಗೆದಾರರ ಬಳಿ ಸರ್ಕಾರಿ ಫೈಲ್​​​​​ ಪ್ರಕರಣ- ಸ್ಪಷ್ಟನೆ ಕೋರಿ ಎಇಇಗೆ ನೋಟಿಸ್​​​- ಇದು ದಿಗ್ವಿಜಯ ನ್ಯೂಸ್​​ ಬಿಗ್​​ ಇಂಪ್ಯಾಕ್ಟ್​​​​
Breaking News :

ಸದ್ಯಕ್ಕೆ ರೈತರು ಹೊಸ ಸಾಲ ಕೇಳ್​ಬ್ಯಾಡ್ರಿ!

Wednesday, 23.08.2017, 3:00 AM       No Comments

| ವೆಂಕಟೇಶ್ ಹೂಗಾರ್

ರಾಯಚೂರು: ಸಹಕಾರಿ ಬ್ಯಾಂಕ್​ಗಳಲ್ಲಿನ 50 ಸಾವಿರ ರೂ.ವರೆಗಿನ ಸಾಲಮನ್ನಾದ ಲಾಭವನ್ನೂ ಪಡೆಯದ ಸಾವಿರಾರು ರೈತರು ಹೊಸ ಸಾಲವೂ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೌದು, ಸಹಕಾರಿ ಸಂಘಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದ ಸರ್ಕಾರ, ನಂತರ ಹೊಸ ಸಾಲ ಕೊಡುವುದನ್ನು ಮರೆತಿದೆ. ಇದರಿಂದ ಸಹಕಾರಿ ಬ್ಯಾಂಕ್​ನಲ್ಲಿ ಸಾಲ ಪಡೆಯಬೇಕೆನ್ನುವ ರೈತರ ಆಸೆ ಕಮರಿದೆ. ಇದು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ.

ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ (ಮೇ ನಿಂದ ಜುಲೈ) ಹಾಗೂ ಹಿಂಗಾರು ಹಂಗಾಮಿನಲ್ಲಿ (ಸೆಪ್ಟೆಂಬರ್​ನಿಂದ) ರೈತರಿಗೆ ಸಾಲ ದೊರೆಯುತ್ತಿತ್ತು. ಈಗ ಬಿತ್ತನೆ ಮಾಡಿದ ಬೆಳೆ ಉಳಿಸಿಕೊಳ್ಳಲು ಹಾಗೂ ಬಿತ್ತನೆ ಬೀಜ, ಗೊಬ್ಬರ ಖರೀದಿಗೆ ಆರ್ಥಿಕ ತೊಂದರೆಯಾಗಿದೆ. ಹೀಗಾಗಿ ಖಾಸಗಿಯಾಗಿ ಹೆಚ್ಚಿನ ಬಡ್ಡಿಗೆ ಸಾಲ ಪಡೆಯುವಂತಾಗಿದೆ. ಹೊಸ ಸಾಲ ಕೇಳಲು ಹೋದಲ್ಲಿ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ ಎನ್ನುತ್ತಾರೆ ಸಹಕಾರಿ ಬ್ಯಾಂಕ್​ನ ಮುಖ್ಯ ಅಧಿಕಾರಿಗಳು.

ರಾಯಚೂರು-ಕೊಪ್ಪಳ ವ್ಯಾಪ್ತಿ ಆರ್​ಡಿಸಿಸಿಯಿಂದ ಕಳೆದ ವರ್ಷ ಪಡೆದ ಸಾಲ, ರೈತರ ವಿವರ ಹಾಗೂ 50 ಸಾವಿರ ರೂ.ವರೆಗೆ ಮನ್ನಾ ಮಾಡಿದ ಕುರಿತು ಸಮಗ್ರ ವರದಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಹೊಸ ಸಾಲ ವಿತರಣೆಗೆ ಸ್ವಲ್ಪ ತೊಂದರೆ ಆಗಿರುವ ಕುರಿತು ಗಮನಕ್ಕಿದೆ. ಸರ್ಕಾರ ಹಣ ಬಿಡುಗಡೆ ಮಾಡಿದ ಕ್ಷಣವೇ ರೈತರಿಗೆ ಸಾಲ ವಿತರಿಸಲಾಗುವುದು.

| ಪಂಪನಗೌಡ ಬಾರ್ದಲಿ ಆರ್​ಡಿಸಿಸಿ ಬ್ಯಾಂಕ್ ಅಧ್ಯಕ್ಷ

ಹಲವಾರು ಅಡೆತಡೆಗಳು

ಸಹಕಾರಿ ಬ್ಯಾಂಕ್​ಗಳ ಮೂಲಕ ರೈತರಿಗೆ ಸಾಲ ನೀಡದಿರುವಲ್ಲಿ ಹಲವಾರು ಅಡೆತಡೆಗಳು ಎದುರಾಗಿವೆ. ಪ್ರಮುಖವಾಗಿ ಸಹಕಾರಿ ಬ್ಯಾಂಕ್​ಗಳಲ್ಲಿ ಹೊಸ ರೈತರಿಗೆ ಸಾಲ ನೀಡುವಷ್ಟು ಹಣವಿಲ್ಲ. ನಬಾರ್ಡ್ ಮ್ಯಾಚಿಂಗ್ ಗ್ರಾಂಟ್ 60:40ಕ್ಕೆ ಇಳಿದಿರುವುದು ಹಾಗೂ ಮನ್ನಾ ಮೊತ್ತವನ್ನು ಸರ್ಕಾರ ಭರಿಸದಿರುವುದು ಸಮಸ್ಯೆಗೆ ಕಾರಣ. ಆರ್ಥಿಕವಾಗಿ ಸಶಕ್ತವಾಗಿರುವ ಮಂಗಳೂರು, ತುಮಕೂರು, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಈ ಸಮಸ್ಯೆ ಎದುರಾಗಿಲ್ಲ. ಉಳಿದ ಜಿಲ್ಲೆಗಳಲ್ಲಿ ರೈತರಿಗೆ ಹೊಸ ಸಾಲ ದೊರೆಯುತ್ತಿಲ್ಲವೆಂದು ಸಹಕಾರಿ ಇಲಾಖೆ ಮೂಲಗಳು ತಿಳಿಸಿವೆ.

ಇಷ್ಟಾಗಿದೆ ಸಾಲಮನ್ನಾ

ರಾಯಚೂರು-ಕೊಪ್ಪಳ ಜಿಲ್ಲೆಯ ಒಂಭತ್ತು ತಾಲೂಕು ವ್ಯಾಪ್ತಿಯಲ್ಲಿ 21 ಶಾಖೆಗಳೊಂದಿಗೆ 185 ಕೃಷಿ ಪತ್ತಿನ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. 385 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಸಿಎಂ ಘೊಷಣೆ ಮಾಡಿದ್ದ 50 ಸಾವಿರ ರೂ.ವರೆಗಿನ ಸಾಲ ಮನ್ನಾದಿಂದ ಆರ್​ಡಿಸಿಸಿ ಬ್ಯಾಂಕ್ ವ್ಯಾಪ್ತಿ ರಾಯಚೂರು ಜಿಲ್ಲೆಯ 63,474 ರೈತರ 140.85 ಕೋಟಿ ರೂ. ಮತ್ತು ಕೊಪ್ಪಳ ಜಿಲ್ಲೆಯ 25,749 ರೈತರ 61.86 ಕೋಟಿ ರೂ. ಸಾಲಮನ್ನಾ ಆಗಿದೆ.

ಸಾಲಮನ್ನಾ ಮಾಡಿದ ಮಾತ್ರಕ್ಕೆ ಹೊಸ ಸಾಲ ವಿತರಿಸಬಾರದೆ ?

ಕಳೆದ 3-4 ವರ್ಷದಿಂದ ಬರ ಆವರಿಸಿದ್ದರಿಂದ ಜಿಲ್ಲೆಯ ರೈತರ ಸಾಲದ ಹೊರೆ ಹೆಚ್ಚಿದೆ. ಈಗ ಸಾಲ ವಿತರಿಸದೆ ಇರುವುದರಿಂದ 3-4 ರೂ. ಬಡ್ಡಿ ಜತೆಗೆ ಕಮಿಷನ್ ನೀಡಿ ದಲ್ಲಾಳಿಗಳಲ್ಲಿ ಸಾಲ ತರುವಂತಾಗಿದೆ. ಪ್ರತಿ ವರ್ಷದಂತೆ ಈ ಸಲವೂ ಸಾಲ ವಿತರಣೆಗೆ ಸರ್ಕಾರ ಮುಂದಾಗಬೇಕು.

| ಲಕ್ಷ್ಮಣಗೌಡ ಕಡಗಂದೊಡ್ಡಿ

ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ

 

Leave a Reply

Your email address will not be published. Required fields are marked *

Back To Top