Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಸದಾಶಯ ಸಾಕಾರಗೊಳ್ಳಲಿ

Monday, 06.11.2017, 3:02 AM       No Comments

ಬಡತನ, ಭ್ರಷ್ಟಾಚಾರ, ಕೋಮುವಾದ, ಜಾತೀಯತೆ, ಕೊಳಚೆ, ಅಪೌಷ್ಟಿಕತೆಗಳಿಂದ ಮುಕ್ತವಾದ ಭಾರತವನ್ನು ನಿರ್ವಿುಸುವ ಕನಸು 2022ರ ವೇಳೆಗೆ ಸಾಕಾರಗೊಳ್ಳಲಿದೆ ಎಂದಿದೆ ಸರ್ಕಾರದ ಉನ್ನತ ನೀತಿ ನಿರೂಪಣಾ ಸಂಸ್ಥೆ ನೀತಿ ಆಯೋಗ. ‘ನವಭಾರತ’ ಎಂಬ ಪರಿಕಲ್ಪನಾ ದಾಖಲೆಯಲ್ಲಿ ಈ ಸಾಧನೆಯ ಸಾಕಾರದ ಕನಸೂ ಸೇರಿದಂತೆ, ವಿಶ್ವದ ಮೂರು ಅತಿದೊಡ್ಡ ಆರ್ಥಿಕತೆಗಳಲ್ಲಿ ಭಾರತವೂ ಸೇರ್ಪಡೆಯಾಗಲಿದೆ ಎಂಬ ಆಶಯವೂ ವ್ಯಕ್ತವಾಗಿದೆ. 500ಕ್ಕಿಂತ ಹೆಚ್ಚು ಜನರು ವಾಸವಿರುವ ಎಲ್ಲ ಗ್ರಾಮಗಳಿಗೆ ಸರ್ವಋತು ರಸ್ತೆ ಸಂಪರ್ಕ, ದೇಶಾದ್ಯಂತ ವಿಶ್ವದರ್ಜೆಯ 20 ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ವಣ, ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯ ಗ್ರಾಮಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಮಾದರಿಯಾಗಿ ಪರಿವರ್ತಿಸುವಿಕೆ ಹೀಗೆ ಸದರಿ ದಾಖಲೆಯಲ್ಲಿ ಅಡಕಗೊಂಡಿರುವ ಆಶಯಗಳು ನೋಡಲು-ಕೇಳಲು ಚೆನ್ನಾಗಿಯೇ ಇವೆ; ಆದರೆ ಇವು ಎಷ್ಟರಮಟ್ಟಿಗೆ ಅನುಷ್ಠಾನಗೊಳ್ಳುತ್ತವೆ ಎಂಬ ಸಂದೇಹವೂ ಇಲ್ಲಿ ವ್ಯಕ್ತವಾದರೆ ಅದು ಸಿನಿಕತನವಲ್ಲ ಅಥವಾ ಸದಾಶಯದಲ್ಲೂ ಹುಳುಕು ಹುಡುಕುವ ಚಿತ್ತಸ್ಥಿತಿಯಲ್ಲ. ನಮ್ಮ ಆಳುಗ ವ್ಯವಸ್ಥೆಯಲ್ಲಿ ಮತ್ತು ರಾಜಕೀಯ ವಲಯದವರ ನಡವಳಿಕೆಗಳಲ್ಲಿ ಆಳವಾಗಿ ಬೇರುಬಿಟ್ಟಿರುವ ವಿಳಂಬ ಧೋರಣೆಯನ್ನು, ಬದ್ಧತೆ-ಸಹಕಾರ-ಇಚ್ಛಾಶಕ್ತಿಗಳ ಕೊರತೆಯಂಥ ನ್ಯೂನತೆಗಳ ಹಿನ್ನೆಲೆಯಲ್ಲಿ ಯಾರಿಂದಲೇ ಆದರೂ ಹೊಮ್ಮುವ ಕಟುವಾಸ್ತವದ ಅಭಿಪ್ರಾಯವಿದು.

ನಮ್ಮಲ್ಲಿ ಸರ್ಕಾರಿ ಪ್ರಣೀತ ಯೋಜನೆಗಳಾಗಲೀ, ಜನಕಲ್ಯಾಣ ಕಾರ್ಯಕ್ರಮಗಳಾಗಲೀ ರೂಪುರೇಷೆಯ ಹಂತದಲ್ಲಿ ವರ್ಣರಂಜಿತವಾಗಿಯೇ ಇದ್ದು ಸ್ವರ್ಗವೇ ಧರೆಗಿಳಿಯುವುದೇನೋ ಎಂಬಂಥ ಕಲ್ಪನೆಯನ್ನು ಹುಟ್ಟುಹಾಕುತ್ತವೆ; ಆದರೆ ಸರ್ಕಾರದ ತುದಿಯಿಂದ ಶುರುವಾದ ಪ್ರಯೋಜನದ ವರ್ಗಾವಣೆಯು ‘ಸಾಗಾಟದಲ್ಲಿನ ಸೋರಿಕೆ’ಯ ಕಾರಣದಿಂದಾಗಿ ನೈಜ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪದೆ, ಸದಾಶಯವು ನೀರಿನ ಗುಳ್ಳೆಯಾಗಿ ಪರಿಣಮಿಸಿ ಒಡೆದು ಆಶಾಭಂಗವಾಗುವುದು ಜನರಿಗೆ ಅನುಭವವೇದ್ಯ. ಆಳುಗರಲ್ಲಿ ರಾಜಕೀಯ ಇಚ್ಛಾಶಕ್ತಿ, ಉತ್ತರದಾಯಿತ್ವ ಇಲ್ಲದಿರುವುದು ಇದಕ್ಕೊಂದು ಕಾರಣವಾದರೆ, ಬೇರೊಂದು ಪಕ್ಷದವರು ಪ್ರಸ್ತಾವಿಸಿದ ಯೋಜನೆಗೆ ನಾವೇಕೆ ಸ್ಪಂದಿಸಬೇಕು, ಉತ್ತೇಜಿಸಬೇಕು ಎಂಬ ಎದುರಾಳಿಗಳ ಹುಸಿಪ್ರತಿಷ್ಠೆ ಮತ್ತೊಂದು ಕಾರಣ. ಅಭಿವೃದ್ಧಿ ಹೊಂದಿದ ಉಳಿದ ದೇಶಗಳ ಸಾಲಿನಲ್ಲಿ ಭಾರತವೂ ರಾರಾಜಿಸಬೇಕೆಂದರೆ, ಇಂಥ ಎಲ್ಲ ರಾಜಕೀಯ ಕಾಲೆಳೆದಾಟ, ಅಭಿಪ್ರಾಯಭೇದಗಳನ್ನು ಪಕ್ಕಕ್ಕಿಟ್ಟು ದೇಶದ ಅಭಿವೃದ್ಧಿಗೆ ಕಟಿಬದ್ಧರಾಗಬೇಕು. ಎರಡನೇ ಮಹಾಯುದ್ಧದ ವೇಳೆ ಹಿರೋಶಿಮಾ-ನಾಗಾಸಾಕಿಗಳ ಮೇಲಾದ ಬಾಂಬ್ ದಾಳಿಯ ತೀವ್ರತೆಯನ್ನು ಕಂಡವರು, ಧರಾಶಾಯಿ ಜಪಾನ್ ಇನ್ನೆಂದೂ ಮೇಲೇಳಲಾರದು ಎಂದೇ ಲೆಕ್ಕಿಸಿದ್ದರು. ಆದರೆ ಜಗತ್ತೇ ನಿಬ್ಬೆರಗಾಗುವಂತೆ ಮೈಕೊಡವಿಕೊಂಡು ಮೇಲೆದ್ದ ಜಪಾನ್ ಇಂದು ವಿಜ್ಞಾನ-ತಂತ್ರಜ್ಞಾನ, ಆರ್ಥಿಕತೆ, ಮೂಲಸೌಕರ್ಯ, ಕೃಷಿ ಸೇರಿದಂತೆ ಹಲವು ವಲಯಗಳಲ್ಲಿ ಅನುಪಮ ಸಾಧನೆ ಮಾಡಿದೆ. ಇದಕ್ಕೆಲ್ಲ ಕಾರಣ, ಅಲ್ಲಿನವರ ಇಚ್ಛಾಶಕ್ತಿ ಮತ್ತು ಕಾರ್ಯಬದ್ಧತೆ. ಕೇವಲ ಹನ್ನೆರಡೂಮುಕ್ಕಾಲು ಕೋಟಿ ಜನಸಂಖ್ಯೆಯುಳ್ಳ ದೇಶವೊಂದು ‘ಈ ಪರಿಯ ಸೊಬಗು’ ದಾಖಲಿಸಲು ಸಾಧ್ಯವಾಗುವುದಾದರೆ,

ಅದರ ಹತ್ತುಪಟ್ಟಿಗೂ ಹೆಚ್ಚು ‘ಜನಸಂಖ್ಯಾ ಸಂಪನ್ಮೂಲ’ ಹೊಂದಿರುವ ಭಾರತದಲ್ಲೇಕೆ ಇದು ಸಾಧ್ಯವಾಗುತ್ತಿಲ್ಲ ಎಂಬುದು ಯಕ್ಷಪ್ರಶ್ನೆ. ಹಾಗಂತ ಇದು ಅಧಿಕಾರಿಶಾಹಿ ಮತ್ತು ರಾಜಕಾರಣಿಗಳು ಮಾತ್ರವಷ್ಟೇ ಉತ್ತರಿಸಬೇಕಾದ ಪ್ರಶ್ನೆಯಲ್ಲ; ಪ್ರಜ್ಞಾವಂತ ಪ್ರಜೆಗಳಾಗಿ ದೇಶದ ಪ್ರಗತಿಗೆ ನಮ್ಮ ಕೊಡುಗೆ ಎಷ್ಟರಮಟ್ಟಿಗಿದೆ ಎಂದು ಪ್ರತಿಯೊಬ್ಬ ನಾಗರಿಕರೂ ಮಾಡಿಕೊಳ್ಳಬೇಕಾದ ಆತ್ಮಾವಲೋಕನ.

Leave a Reply

Your email address will not be published. Required fields are marked *

Back To Top