Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಸದಾಶಯಕ್ಕೆ ಧಕ್ಕೆ

Saturday, 11.11.2017, 3:02 AM       No Comments

ಕ್ತಹೀನತೆ, ಕಡಿಮೆ ತೂಕದ ಶಿಶುಜನನದಂಥ ಗಂಭೀರ ಸ್ವರೂಪದ ಸಮಸ್ಯೆ ಎದುರಿಸುವ ಬಸುರಿ-ಬಾಣಂತಿಯರಿಗೆ ಪೌಷ್ಟಿಕ ಆಹಾರ ಒದಗಿಸುವ ಸದಾಶಯದೊಂದಿಗೆ ಜಾರಿಯಾಗಿದ್ದ ಮಾತೃಪೂರ್ಣ ಯೋಜನೆ ಒಂದೇ ತಿಂಗಳಲ್ಲಿ ವೈಫಲ್ಯದ ಹಾದಿ ಹಿಡಿದಿರುವುದು ವಿಷಾದನೀಯ. ಸದರಿ ಪೌಷ್ಟಿಕ ಆಹಾರ ಸಿದ್ಧವಾಗುವ ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಮೂಲಸೌಕರ್ಯ ಮತ್ತು ಶುಚಿತ್ವದ ಕೊರತೆಯಿರುವುದು, ಫಲಾನುಭವಿಗಳಿಗೆ ದೂರದಿಂದ ನಡೆದು ಬರಲಾಗದಿರುವುದು, ಈ ಅಡುಗೆ ತಯಾರಾಗುವುದು ಹಿಂದುಳಿದ ವರ್ಗದ ನೌಕರರಿಂದ ಎಂಬ ‘ಜಾತಿನೆಪ’, ಕೆಲ ಕುಟುಂಬಗಳು ಗರ್ಭಿಣಿಯರನ್ನು ಮನೆಯಿಂದ ಹೊರಗೆ ಕಳಿಸಲು ಒಪ್ಪದಿರುವುದು ಮುಂತಾದವು ಯೋಜನೆ ಎಡವಿರುವುದಕ್ಕೆ ಒಂದಷ್ಟು ಕಾರಣಗಳಾದರೆ, ತಲರ್ಸ³ ಅಧ್ಯಯನ ನಡೆಸದೆ ಪ್ರಾಯೋಗಿಕ ಹಂತದ ಜಿಲ್ಲೆಗಳ ಯೋಜನಾ ಅನುಷ್ಠಾನಾಧಿಕಾರಿಗಳು ಒದಗಿಸಿದ ಮಾಹಿತಿಯನ್ನು ನಂಬಿ ಯೋಜನೆಯನ್ನು ತರಾತುರಿಯಲ್ಲಿ ಆರಂಭಿಸಿದ್ದು ಮತ್ತೊಂದು ಕಾರಣ ಎನ್ನಲಾಗುತ್ತಿದೆ.

ಯಾವುದೇ ಜನಕಲ್ಯಾಣ ಯೋಜನೆಯಿರಲಿ ಅಥವಾ ಕಾರ್ಯಕ್ರಮವೇ ಇರಲಿ, ನಿಜಾರ್ಥದ ಪ್ರಯೋಜನದ ಗುರಿಯಿಟ್ಟುಕೊಳ್ಳದೆ ಜನಪ್ರಿಯತೆಯ ಹುಕಿಗೆ ಬಿದ್ದೋ, ಇಲ್ಲವೇ ಮತಗಳಿಕೆಯ ಕಾರ್ಯತಂತ್ರದ ಒಂದು ಭಾಗವಾಗಿಯೋ ಅನುಷ್ಠಾನಕ್ಕೆ ದುಡುಕಿ ದೌಡಾಯಿಸಿದರೆ ಒದಗುವ ಪರಿಣಾಮ ಎಂಥದ್ದು ಎಂಬುದಕ್ಕೆ ಮಾತೃಪೂರ್ಣ ಯೋಜನೆ ಜ್ವಲಂತ ಸಾಕ್ಷಿ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆಯ ಘೋಷಣೆ/ಅನುಷ್ಠಾನದ ಸಂದರ್ಭದಲ್ಲೂ ಇಂಥದೇ ಸಾಕಷ್ಟು ಕಹಿ ಅನುಭವಗಳಾಗಿದ್ದವು ಎಂಬುದಿಲ್ಲಿ ಉಲ್ಲೇಖನೀಯ. ಆದರೆ ಅದನ್ನೊಂದು ಪಾಠವಾಗಿ ಪರಿಗಣಿಸದೆ ನಿರ್ಲಕ್ಷಿಸಿ, ಪೌಷ್ಟಿಕ ಆಹಾರ ಒದಗಿಸುವಿಕೆಗೆ ಮುಂದಾಗಿದ್ದು ಮಾರ್ಗಮಧ್ಯದಲ್ಲಿಯೇ ಎಡವಿ ಬೀಳುವುದಕ್ಕೆ ಕಾರಣವಾಗಿದೆ ಎನ್ನಲಡ್ಡಿಯಿಲ್ಲ. ಹೀಗಾಗಿ, ಯೋಜನೆಯೊಂದರ ನೇಪಥ್ಯದಲ್ಲಿ ಜನಕಲ್ಯಾಣದ ಸದಾಶಯ ಇದ್ದರೂ, ಅನುಷ್ಠಾನದಲ್ಲಿ ತೋರುವ ದಿವ್ಯನಿರ್ಲಕ್ಷ್ಯ ದುಬಾರಿಯಾಗೇ ಪರಿಣಮಿಸುತ್ತದೆ ಎಂಬ ಕಹಿವಾಸ್ತವದ ಪಟ್ಟಿಗೆ ಮತ್ತೊಂದರ ಸೇರ್ಪಡೆಯಾದಂತಾಗಿದೆ.

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದೆನಿಸಿದ್ದ ‘ಅನ್ನಭಾಗ್ಯ’ದ ಅಡಿಯಲ್ಲಿ ಪಡಿತರದಾರರಿಗೆ ವಿತರಣೆಯಾಗಬೇಕಿದ್ದ ಗೋಧಿ, ಗೋದಾಮುಗಳಲ್ಲೇ ಕೊಳೆತು ಹುಳುಹಿಡಿಸಿಕೊಂಡಿದ್ದ ಮತ್ತು ಮನುಷ್ಯರು ತಿನ್ನುವುದಿರಲಿ ಪ್ರಾಣಿ-ಪಕ್ಷಿಗಳಿಗೂ ನೀಡಲಾಗದಷ್ಟರ ಮಟ್ಟಿಗೆ ಅದು ಹಾಳಾಗಿತ್ತೆಂಬ ಮಾಹಿತಿ ಜನಮಾನಸದಿಂದ ಇನ್ನೂ ಮಾಸಿಲ್ಲ. ಯೋಜನೆಯ ಸಮರ್ಪಕ ಅನುಷ್ಠಾನದ ವಿಷಯದಲ್ಲಿ ಆಳುಗರಲ್ಲಿ ತಾಂಡವವಾಡುತ್ತಿರುವ ಅನಾದರ, ದೂರದೃಷ್ಟಿಯ ಕೊರತೆಯ ಕುರಿತು ಹೀಗೆ ಹೇಳುತ್ತ ಹೋದರೆ ಸಾಕಷ್ಟು ಸಿಕ್ಕಾವು. ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಕಸರತ್ತಿನ ಕಾರಣದಿಂದಾಗಿಯೋ ಅಥವಾ ವ್ಯವಸ್ಥೆಯಲ್ಲಿನ ಲೋಪವನ್ನು ಸರಿಪಡಿಸಲಾಗದ ಅದಕ್ಷತೆಯಿಂದಾಗಿಯೋ ಸದಾಶಯದ ಯೋಜನೆಯೊಂದು ಹಳ್ಳಹಿಡಿಯಬಾರದಲ್ಲವೇ? ಯೋಜನೆಯ ಅನುಷ್ಠಾನದಲ್ಲಿ ಲೋಪವಾಗಿದೆ, ನಿಜ. ಹಾಗಂತ ಎಲ್ಲ ತಪು್ಪಗಳಿಗೂ ವ್ಯವಸ್ಥೆಯೇ ಹೊಣೆಗಾರನಲ್ಲ; ಯೋಜನೆಯ ಪರಿಪೂರ್ಣ ಪ್ರಯೋಜನ ದಕ್ಕಿಸಿಕೊಳ್ಳಬೇಕಾದ ಶ್ರೀಸಾಮಾನ್ಯರೇ ಕೆಲಸಕ್ಕೆ ಬಾರದ ಒಣಪ್ರತಿಷ್ಠೆಯನ್ನು ಮುಂದುಮಾಡಿ ಅಸಹಕಾರ ತೋರುವುದರಿಂದಲೂ ಜನಕಲ್ಯಾಣದ ಕಾರ್ಯಕ್ರಮಕ್ಕೆ ಧಕ್ಕೆಯಾಗುತ್ತದೆ ಎಂಬುದನ್ನು ಅಲ್ಲಗಳೆಯಲಾಗದು.

ಪೌಷ್ಟಿಕ ಆಹಾರವನ್ನು ಮನೆಗೇ ತಂದುಕೊಡಿ ಎಂದೋ ಅಥವಾ ಪದಾರ್ಥ ಕೊಟ್ಟರೆ ನಾವೇ ಮನೆಯಲ್ಲಿ ಸಿದ್ಧಪಡಿಸಿಕೊಳ್ಳುತ್ತೇವೆ ಎಂದೋ ಇಂಥವರು ಷರತ್ತು ಹಾಕುವುದು, ಇಲ್ಲವೇ ಊಟಕ್ಕೆ ಬರುವುದಾಗಿ ಖಾತ್ರಿಪಡಿಸಿ ತರುವಾಯದಲ್ಲಿ ತಪ್ಪಿಸಿಕೊಳ್ಳುವುದು ಸರ್ವಥಾ ಸ್ವೀಕಾರಾರ್ಹ ನಡೆಯಲ್ಲ. ಕೆಲವರ ಇಂಥ ಅನಪೇಕ್ಷಿತ ವರ್ತನೆಗಳಿಂದಾಗಿ, ಸಿದ್ಧಾಹಾರವು ಪೋಲಾಗುವುದು ಮಾತ್ರವಲ್ಲದೆ ಮುಂದೆ ಇಂಥ ಇನ್ನೂ ಅನೇಕ ಜನೋಪಯೋಗಿ ಯೋಜನೆಗಳ ಘೋಷಣೆ-ಕಾರ್ಯಾಚರಣೆಗೂ ಸಂಚಕಾರ ಒದಗುತ್ತದೆ ಎಂಬುದು ದಿಟ. ಯೋಜನೆಯ ಎರಡೂ ತುದಿಗಳಲ್ಲಿರುವವರು ಯೋಚಿಸಬೇಕಾದ ಗಂಭೀರ ಸಂಗತಿಯಿದು.

Leave a Reply

Your email address will not be published. Required fields are marked *

Back To Top