Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಸತ್ಯದ ತಲೆಯ ಮೇಲೆ ಹೊಡೆಯಬೇಡಿ

Tuesday, 26.09.2017, 3:00 AM       No Comments

| ಜಯಂತ ಕೆ.ಎಸ್

ತ್ತೀಚೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು ‘ವಿಶ್ವವಿದ್ಯಾಲಯದ ಕೆಲಸಗಳಾಗಬೇಕಾದರೆ ವಿಧಾನಸೌಧಕ್ಕೆ ಸೂಟ್​ಕೇಸ್ ಒಯ್ಯಬೇಕು‘ ಎಂದು ನೀಡಿದ ಹೇಳಿಕೆ ಬಿರುಗಾಳಿ ಎಬ್ಬಿಸಿದೆ. ಅವರು ಹೇಳಿರುವುದು ಸತ್ಯವಾಗಿದ್ದರೂ, ರಾಜಕೀಯ ಒತ್ತಡದ ಕಾರಣಕ್ಕಾಗಿ ‘ನನ್ನ ಹೇಳಿಕೆಗಳನ್ನು ತಿರುಚಲಾಗಿದೆ, ನಾನು ಹಾಗೆ ಹೇಳಿಲ್ಲ‘ ಎಂಬ ಸಮಜಾಯಿಷಿ ನೀಡಿದ್ದಾರೆ. ಅವರು ಹಾಗೆ ಹೇಳಿರಲಿ, ಬಿಡಲಿ ಅವರ ಅನುಭವದ ಅಭಿಪ್ರಾಯ ವ್ಯಕ್ತವಾಗಿರುವುದಂತೂ ಸತ್ಯ. ಕುಲಪತಿಗಳು ಈ ರೀತಿ ಹೇಳಿಕೆ ಕೊಟ್ಟರೆ, ಅದಕ್ಕೆ ಸಾಕ್ಷಿ ಪುರಾವೆಗಳನ್ನು ಒದಗಿಸಬೇಕೆಂದು ವಿಧಾನಸೌಧದ ಗದ್ದುಗೆದಾರರು ಅಬ್ಬರಿಸಿದ್ದಾರೆ. 6-7 ತಿಂಗಳ ಹಿಂದೆ ಸಂಪುಟ ಸೇರಿದ ಬಸವರಾಜ ರಾಯರಡ್ಡಿ ಉನ್ನತ ಶಿಕ್ಷಣ ಖಾತೆಯನ್ನು ವಹಿಸಿಕೊಂಡ ಕೂಡಲೆ ಹೇಳಿದ್ದೇನು? ರಾಜ್ಯದ ಬಹುತೇಕ ವಿಶ್ವವಿದ್ಯಾಲಯದ ಕುಲಪತಿಗಳು ದರೋಡೆಕೋರರಿಗೆ ಕಡಿಮೆ ಇಲ್ಲ, ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು. ಕುಲಪತಿಯೊಬ್ಬರು ವಿಧಾನಸೌಧದ ಬಗ್ಗೆ ಆರೋಪ ಮಾಡಿದಾಗ ಪುರಾವೆ ಕೇಳುವವರು ಅವರು ಮಾಡಿದ ಆರೋಪಗಳಿಗೂ ಪುರಾವೆ ಒದಗಿಸಲೇಬೇಕಲ್ಲ. ಸರ್ಕಾರದ ಭಾಗವಾಗಿರುವ ಉನ್ನತ ಶಿಕ್ಷಣ ಸಚಿವರಿಗೆ ಅಂತಹ ಕುಲಪತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರ ಕೂಡ ಇದೆ. ಅವರು ಮಾಡಿದ್ದೇನು? ಮಾಧ್ಯಮಗಳ ಮೂಲಕ ಬೆದರಿಸುವ ಪ್ರಯತ್ನ ಪ್ರಚಾರಕ್ಕಾಗಿ ಮಾಡಿದ್ದೆ ಹೊರತು ಅದು ಮತ್ಯಾವ ಪರಿಣಾಮಗಳನ್ನೂ ಬೀರಿಲ್ಲ.

ಈ ಎರಡೂ ಹೇಳಿಕೆಗಳು ರಾಜ್ಯದ ವಿಶ್ವವಿದ್ಯಾಲಯಗಳ ಮಟ್ಟಿಗೆ ನೂರಕ್ಕೆ ನೂರು ಸತ್ಯ. ನಾನು ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯಮಾಡುತ್ತಿದ್ದು, ವಿಶ್ವವಿದ್ಯಾಲಯವೊಂದರ ಸಿಂಡಿಕೇಟ್ ಸದಸ್ಯನಾಗಿ ವಿಶ್ವವಿದ್ಯಾಲಯಗಳ ಕುಲಪತಿಗಳ ಕಾರ್ಯವೈಖರಿಯನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ, ಮತ್ತು ಅವರ ಭ್ರಷ್ಟ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಿದ್ದೇನೆ. ವಿವಿ ವ್ಯವಸ್ಥೆಯಲ್ಲೆ ಆಮೂಲಾಗ್ರ ಬದಲಾವಣೆ ತರುವ ಅವಶ್ಯಕತೆ ಇದೆ. ಶಿಕ್ಷಣ ಅರ್ಹತೆ, ಆಡಳಿತಾತ್ಮಕ ಅನುಭವ, ಸಂಶೋಧನೆ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಕೇವಲ ಜಾತಿ, ಹಣದ ಆಧಾರದಲ್ಲಿ ಆಯ್ಕೆಯಾಗುವ ಕುಲಪತಿಗಳಿಂದ ಯಾವ ಬದಲಾವಣೆ ನಿರೀಕ್ಷಿಸಲು ಸಾಧ್ಯ? ಇಂತಹ ಕುಲಪತಿಗಳ ಆಯ್ಕೆಯಲ್ಲಿ ಸರಕಾರ ಹಾಗೂ ರಾಜಭವನದ ಪಾತ್ರವಿರುವುದೂ ದುರ್ದೈವದ ಸಂಗತಿ. ನಾಲ್ಕು ವರ್ಷಗಳ ಹಿಂದೆ ಕರ್ನಾಟಕ ವಿವಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ಆರಂಭವಾದ ಪ್ರತಿರೋಧ ರಾಜ್ಯದ ಹಲವು ವಿಶ್ವವಿದ್ಯಾಲಯಗಳಿಗೂ ವ್ಯಾಪಿಸಿತು. ಹಲವು ಕುಲಪತಿಗಳ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಿ ಭ್ರಷ್ಟಾಚಾರ ನಡೆದಿರುವುದು ದೃಢಪಟ್ಟಿದೆ. ದುರದೃಷ್ಟವಶಾತ್ ನಮ್ಮ ಕಾಯ್ದೆಯಲ್ಲಿನ ದೌರ್ಬಲ್ಯದಿಂದಾಗಿ ಯಾರಿಗೂ ಶಿಕ್ಷೆಯಾಗಿಲ್ಲ.

ಮೊದಲಿಗೆ ಕುಲಪತಿಗಳ ಆಯ್ಕೆಯಿಂದ ಆರಂಭವಾಗುವ ಭ್ರಷ್ಟವ್ಯವಸ್ಥೆ ವಿಶ್ವವಿದ್ಯಾಲಯಗಳ ಬೋಧಕ ಸಿಬ್ಬಂದಿ ನೇಮಕ, ಕಟ್ಟಡ ಕಾಮಗಾರಿ, ಖರೀದಿ ಮುಂತಾದ ವಿಭಾಗದಲ್ಲಿ ಕೂಡ ವ್ಯಾಪಿಸುತ್ತದೆ. ಇಂದು ರಾಜ್ಯದ ಬಹುತೇಕ ವಿವಿಗಳಲ್ಲಿ ಭ್ರಷ್ಟಾಚಾರ ಹೊಗೆಯಾಡುತ್ತಿರುವುದು ಈ ವಿಭಾಗಗಳಲ್ಲೆ. ಇಂದು ವಿಶ್ವವಿದ್ಯಾಲಯಗಳಲ್ಲಿ ನೇಮಕಗೊಳ್ಳುವ ಬೋಧಕ ಹುದ್ದೆಗಳನ್ನು ಹರಾಜಿಗಿಟ್ಟಿರುವುದು ತೆರೆದ ಸತ್ಯವಾಗಿದೆ. ಇತ್ತೀಚೆಗೆ ವಿವಿಯೊಂದರಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಹಾಕಿದ ಅಭ್ಯರ್ಥಿಯೊಬ್ಬರು ಭೇಟಿ ಆಗಿದ್ದರು. ಆ ಹುದ್ದೆಗೆ ಬೇಕಾದ ಎಲ್ಲಾ ಅರ್ಹತೆ ಹೊಂದಿರುವ ಅವರು ಆ ವಿವಿ ಕುಲಪತಿಗಳ ನಿಕಟವರ್ತಿಯೊಬ್ಬರ ಮುಖಾಂತರ ಸಂರ್ಪಸಿದಾಗ ಕುಲಪತಿಗಳು ಕೇಳಿದ್ದು ಕೇವಲ 30 ಲಕ್ಷ ರೂ.! ಅದೂ ಅಲ್ಲದೆ ಕಂಡೀಷನ್ ಬೇರೆ, ‘ಅಷ್ಟು ಹಣ ಕೊಟ್ಟರೆ ಅವರನ್ನು ನೇಮಕ ಮಾಡುತ್ತೇನೆ, ನಂತರ ಉನ್ನತ ಶಿಕ್ಷಣ ಇಲಾಖೆ ಅಥವಾ ರಾಜ್ಯಪಾಲರು ನೇಮಕದ ಕುರಿತು ತಕರಾರು ತೆಗೆದರೆ ಹಣ ಮರಳಿ ಕೊಡುವುದಿಲ್ಲ‘.

ಈ ವ್ಯವಸ್ಥೆ ಸರಿಪಡಿಸುವ ಮಾರ್ಗವಾಗಿ ಹೊಸ ವಿಧೇಯಕವೊಂದನ್ನು ಜಾರಿಗೆ ತರುವ ಪ್ರಯತ್ನವನ್ನು ಉನ್ನತ ಶಿಕ್ಷಣ ಸಚಿವರು ಮಾಡುತ್ತಿದ್ದು, ಅದನ್ನು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿದ್ದಾರೆ ಕೂಡ. ಶಿಕ್ಷಣ ತಜ್ಞರು, ಶಿಕ್ಷಣ ಕ್ಷೇತ್ರದ ಹಿರಿಯರು ಅಥವಾ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದ ಯಾವ ಪ್ರತಿನಿಧಿಗಳೊಂದಿಗೂ ರ್ಚಚಿಸದೆ ತರಾತುರಿಯಲ್ಲಿ ಮಂಡಿಸಿದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕದ ಉದ್ದೇಶವೇ ಪ್ರಶ್ನಾರ್ಥಕವಾಗಿದೆ.

ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೇ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತರುವ ಅವಶ್ಯಕತೆ ಇದೆ ಎಂಬ ಅಂಶವನ್ನು ಬಸವರಾಜ ರಾಯರೆಡ್ಡಿ ಪದೇ ಪದೆ ಹೇಳಿದ್ದಾರೆ. ಅವರ ಹೇಳಿಕೆಗಳು ಪ್ರಾಮಾಣಿಕವಾಗಿದ್ದರೂ ಪ್ರಸ್ತುತ ಮಂಡಿಸಿರುವ ವಿಧೇಯಕದಲ್ಲಿ ವಿವಿ ಕುಲಪತಿಗಳು ಭ್ರಷ್ಟಾಚಾರ ಎಸಗಿದರೆ ಅವರ ಮೇಲೆ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಯಾವ ಹೊಸ ಅಂಶವೂ ಅಡಕವಾಗಿಲ್ಲ. ಭ್ರಷ್ಟತೆಯ ನೆಪದಲ್ಲಿ ಕುಲಪತಿಗಳ ಅಧಿಕಾರವನ್ನು ಮೊಟಕುಗೊಳಿಸಿ ವಿವಿಗಳಲ್ಲಿ ಸರ್ಕಾರದ ಹಿಡಿತವನ್ನು ಬಿಗಿಗೊಳಿಸುವ ಹಾಗೂ ಕುಲಪತಿಗಳ ನೇಮಕವನ್ನು ಸಂಪೂರ್ಣವಾಗಿ ಸರ್ಕಾರ ತನ್ನ ಸುಪರ್ದಿಗೆ ಪಡೆಯುವ ಹುನ್ನಾರವನ್ನು ಈ ವಿಧೇಯಕ ಹೊಂದಿದೆ ಎಂಬುದು ಬಹುತೇಕ ಶಿಕ್ಷಣ ತಜ್ಞರ ಅಭಿಪ್ರಾಯ. ಈ ವಿಧೇಯಕ ಅನುಮೋದನೆಗೊಂಡರೆ ವಿಶ್ವವಿದ್ಯಾಲಯಗಳು ಇನ್ನೊಂದು ರೀತಿಯ ಸಂಕಷ್ಟಕ್ಕೆ ಸಿಕ್ಕಿಕೊಳ್ಳುವುದು ನಿಶ್ಚಿತ.

ಸರ್ಕಾರ ಬದಲಾದಾಗ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತಂದು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ರಾಜಕೀಯ ಕ್ರಮದಿಂದ ಸುಧಾರಣೆ ಖಂಡಿತ ಸಾಧ್ಯವಿಲ್ಲ. ರಾಜಕೀಯದಿಂದ ಹೊರಬಂದು ನಿಜವಾದ ಶಿಕ್ಷಣ ತಜ್ಞರ ಸಮ್ಮುಖದಲ್ಲಿ ಚರ್ಚೆಯಾಗಿ, ಸಾರ್ವಜನಿಕ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಕಾಯ್ದೆ ನಿರೂಪಿಸಿದಲ್ಲಿ ಮಾತ್ರ ಸುಧಾರಣೆ ಸಾಧ್ಯ. ಇಂತಹ ವ್ಯವಸ್ಥೆ ಬದಲಿಸಲು ಬದ್ಧತೆ ಬೇಕು. ಸಮಾಜ ಕೂಡ ಈ ಭ್ರಷ್ಟ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಬೇಕು. ಸಜ್ಜನರ ಮೌನವೇ ಇಂತಹ ಅಸುರರ ಬೆಳವಣಿಗೆಗೆ ಕಾರಣವಾಗುತ್ತದೆ. ಇಲ್ಲಿ ಒಂದು ಘಟನೆ ಹೇಳಲೇಬೇಕು. ನಾನು ವಿವಿ ಸಿಂಡಿಕೇಟ್ ಸದಸ್ಯನಾಗಿದ್ದ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ನೀಡುವ ಗಣ್ಯರ ಆಯ್ಕೆಯ ವಿಷಯದಲ್ಲಿ ಸಿಂಡಿಕೇಟ್ ಸಭೆಯಲ್ಲಿ ಜಟಾಪಟಿ ನಡೆಯಿತು. ಅನರ್ಹರಿಗೆ, ಕ್ರಿಮಿನಲ್ ಮೊಕದ್ದಮೆ ಹೊಂದಿದವರಿಗೆ ಗೌರವ ಡಾಕ್ಟರೇಟ್ ನೀಡುವುದರಿಂದ ನಮ್ಮ ವಿಶ್ವವಿದ್ಯಾಲಯದ ಘನತೆಗೆ ಕುಂದಾಗುತ್ತದೆ ಎಂಬುದು ನಮ್ಮ ಕಳಕಳಿಯಾಗಿತ್ತು. ಕುಲಪತಿಗಳು ನಮ್ಮ ಈ ಯಾವ ಸಲಹೆಗಳನ್ನು ಪರಿಗಣಿಸದೆ ಅವರು ನಿರ್ಧರಿಸಿದ ಅನರ್ಹರಿಗೆ ಗೌರವ ಡಾಕ್ಟರೇಟ್ ನೀಡುವ ನಿರ್ಧಾರ ಕೈಗೊಂಡರು. ಕುಲಪತಿಗಳ ನಿರ್ಧಾರದ ವಿರುದ್ಧ, ಸಾಕ್ಷ್ಯಾಧಾರಗಳ ಸಮೇತ ದೂರು ನೀಡಿದ ಪರಿಣಾಮವಾಗಿ ರಾಜ್ಯಪಾಲರು ಆ ಪಟ್ಟಿಯನ್ನು ರದ್ದುಪಡಿಸಿದರು. ಮುಂದೆ ಘಟಿಕೋತ್ಸವದ ದಿನ ನನ್ನನ್ನು ಭೇಟಿಯಾದ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರೊಬ್ಬರು ನನ್ನ ಕಿವಿಯಲ್ಲಿ ಗುಟ್ಟಾಗಿ ಹೇಳಿದರು, ‘ಸರ್ ನೀವು ರಾಜ್ಯಪಾಲರಿಗೆ ದೂರು ನೀಡಿ ಒಳ್ಳೆಯ ಕೆಲಸ ಮಾಡಿದಿರಿ, ಇಲ್ಲಾ ಅಂದರೆ ನಮ್ಮ ವಿಶ್ವವಿದ್ಯಾಲಯದ ಮರ್ಯಾದೆ ಹರಾಜಾಗುತ್ತಿತ್ತು‘. ನ್ಯಾಯಯುತ ಕೆಲಸ ಮಾಡಿದಾಗಲೂ ಅದನ್ನು ಪ್ರಶಂಸಿಸಲು ಭಯಪಡುವ ಸಜ್ಜನರ ಮನಸ್ಥಿತಿಯೂ ವಿಶ್ವವಿದ್ಯಾಲಯಗಳ ಇಂದಿನ ಸ್ಥಿತಿಗೆ ಕಾರಣವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸೂಟ್​ಕೇಸ್ ಸಂಸ್ಕೃತಿ ಇದೆ ಎನ್ನುವವರ ಬಾಯಿ ಕಟ್ಟುವ ಬದಲು ಉನ್ನತ ಶಿಕ್ಷಣ ಕ್ಷೇತ್ರದ ನೈತಿಕ ಅಧಃಪತನವನ್ನು ಒಪ್ಪಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯುವ ಪೀಳಿಗೆಯನ್ನು ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸುವ, ಜಾಗತಿಕ ಸವಾಲುಗಳಿಗೆ ಸಜ್ಜುಗೊಳಿಸಿ ಮಹತ್ವದ ಹೊಣೆಗಾರಿಕೆಯನ್ನು ತೋರುವ ವಿಶ್ವವಿದ್ಯಾಲಯಗಳನ್ನು ಕಟ್ಟುವ ಕೆಲಸಕ್ಕೆ ಮುಂದಡಿ ಇಡಬೇಕು.

(ಲೇಖಕರು ಸಾಮಾಜಿಕ ಕಾರ್ಯಕರ್ತರು)

Leave a Reply

Your email address will not be published. Required fields are marked *

Back To Top