Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಸತ್ತ ನಂತರವೂ ಮನುಷ್ಯ ಬದುಕಬಹುದು….

Thursday, 05.01.2017, 3:38 AM       No Comments

ತ್ತೀಚೆಗೆ, ಪ್ರಭಾವಿ ಮಹಿಳೆಯೊಬ್ಬರು ಮರಳಿಬಾರದ ಲೋಕಕ್ಕೆ ತೆರಳಿದರು, ಮನೆಯಂಗಳದಲ್ಲಿ ನೆಟ್ಟ ದುಡ್ಡಿನ ಗಿಡವನ್ನು ಹಾಗೆಯೇ ಬಿಟ್ಟು…! ಆಕೆಯ ಶರೀರ ಪೆಟ್ಟಿಗೆಯೊಳಗೆ ಬಂದಿಯಾಗಿ ಭೂಮಿಯೊಳಕ್ಕಿಳಿಯುವುದನ್ನು ಕೋಟ್ಯಂತರ ಜನರು ನೋಡಿದರು. ಸಾವು ಅಂತಿಮ ಸತ್ಯ. ಕೂಡಿಟ್ಟ ಕೋಟ್ಯಂತರ ನಿಧಿ ಸಾವನ್ನು ಗೆಲ್ಲದು ಎಂದು ತಿಳಿದಿದ್ದರೂ ಹಣದ ಹಾಸಿಗೆಯ ಮೇಲೆ ಪವಡಿಸುತ್ತಾರೆಯೇ ವಿನಾ, ಬಡವರ ಪ್ರಯೋಜನಕ್ಕೆ ನೀಡರು. ಇಂಥ ಒಬ್ಬೊಬ್ಬರೂ ಕೂಡಿಟ್ಟ ಹಣವನ್ನು ರಾಜ್ಯದ ಬಡವರಿಗೆ ಹಂಚಿದರೆ ಅದು ಅತಿಹೆಚ್ಚು ಶ್ರೀಮಂತರಿರುವ ರಾಜ್ಯವಾಗಿ ಬದಲಾದೀತು. ಆದರೆ ಹಾಗಾಗುವುದಿಲ್ಲ. ಸತ್ತ ನಂತರ ಹೂತ ಹೆಣ ನಿಧಾನಕ್ಕೆ ಕೊಳೆತುಹೋಗುತ್ತಿರುವಾಗಲೇ ಬಚ್ಚಿಟ್ಟ ರಹಸ್ಯಗಳ ಒಂದೊಂದೇ ಪೆಠಾರಿಗಳು ತೆರೆದುಕೊಂಡು ದುರ್ನಾತ ಬೀರತೊಡಗುತ್ತವೆ. ಅಲ್ಲಿಯವರೆಗೆ ಹಾಡಿ-ಹೊಗಳಿದ್ದವರೂ ದೋಷಾರೋಪಣೆಗೆ ಮುಂದಾಗುತ್ತಾರೆ.

ಕೆಲವರಿಗೆ ಹೊರಲಾರದಷ್ಟು ಹಣಮಾಡಲು ಗೊತ್ತೇ ವಿನಾ, ಸತ್ತ ನಂತರ ಅದನ್ನು ಸರಿಯಾಗಿ ವಿನಿಯೋಗಿಸುವುದು ಹೇಗೆಂಬುದು ತಿಳಿದಿರುವುದಿಲ್ಲ. ಪ್ರತಿಯೊಂದಕ್ಕೂ ವಕೀಲರ ಸಲಹೆ ಕೇಳಿಯೇ ಬದುಕುವ ಇಂಥವರಿಗೆ ಸತ್ತ ನಂತರವೂ ಬದುಕುವುದು ಹೇಗೆಂಬ ಬಗ್ಗೆ ಯಾಕೆ ಯಾರೂ ಸಲಹೆ ಕೊಡುವುದಿಲ್ಲವೋ?! ಹಣದ ವಿಷಯ ಬದಿಗಿರಲಿ, ಹುಟ್ಟಿನಿಂದಲೇ ನಮ್ಮದು ಎಂದುಕೊಂಡ, ಅದನ್ನು ಪೋಷಿಸುವುದಕ್ಕಾಗಿ, ಚೆಂದವಾಗಿಸುವುದಕ್ಕಾಗಿ ಹೆಣಗಾಡಿದ ದೇಹ ಎಂಬುದೊಂದಿದೆಯಲ್ಲಾ ಅದು ಕೂಡಾ ಮಣ್ಣಲ್ಲಿ ಮಣ್ಣಾಗಿ ಹೋಗುವ ಕಾಲ ಬಂದೇ ಬರುತ್ತದೆ. ಆದರೆ ಎಲ್ಲವೂ ಮಣ್ಣುಪಾಲಾಗಬೇಕೆಂದೇನೂ ಇಲ್ಲ. ನಾವು ಸತ್ತ ನಂತರವೂ ನಮ್ಮ ಅಂಗಗಳು ಬದುಕುಳಿಯುತ್ತವೆ ಎಂದಾದರೆ ಅಮರತ್ವದ ಕೀಲಿಕೈ ನಮಗೆ ಸಿಕ್ಕಿದಂತೆ ಅಲ್ಲವೇ? ಇದು ಸಾಧ್ಯವಾಗುವುದು ಅಂಗಾಂಗಗಳ ದಾನದಿಂದ.

ದುರಂತಗಳು ಹೇಳಿಕೇಳಿ ಬರುವುದಿಲ್ಲ. ಮನೆ-ಮಂದಿಯ ಅಗಲುವಿಕೆ ಯಂಥ ದುಃಖವನ್ನು ಭರಿಸಲು ಎಷ್ಟು ಗುಂಡಿಗೆ ಇದ್ದರೂ ಸಾಲದು. ಅಂಥ ದುಃಖದ ಸಮಯದಲ್ಲೂ ಕೆಲವರು ತಮ್ಮ ಉದಾತ್ತ ಕರ್ತವ್ಯ ನೆರವೇರಿಸುವ ಮೂಲಕ, ಸತ್ತಿರುವವರನ್ನು ಮತ್ತೆ ಜೀವಂತವಾಗಿಸುತ್ತಾರೆ. ಬೆಂಗಳೂರಿನ ಲಾಲ್​ಬಾಗ್​ನಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ವಿಕ್ರಮ್ ಎಂಬ ಬಾಲಕ ಕ್ಷಣಾರ್ಧದಲ್ಲಿ ದುರಂತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡ. ಆ ಮನೆಯವರು ದುಃಖದಲ್ಲಿ ಮುಳುಗಿದ್ದರೂ ಮಗುವಿನ ಅಂಗಾಂಗಗಳನ್ನು ದಾನಮಾಡಿ ಮಗುವನ್ನು ಇನ್ನೆಲ್ಲೋ ಬದುಕಿಸಿದರು. ಇತ್ತೀಚೆಗೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ನಮ್ಮ ಸಣ್ಣಮಾವ ಕೊನೆಗೆ ತಮ್ಮ ಮಡದಿ-ಮಕ್ಕಳನ್ನು ಅನಾಥರನ್ನಾಗಿಸಿ ನಿರ್ಗಮಿಸಿದರು. ಸುಮ್ಮನೆ ಸುಟ್ಟು ಹಿಡಿಬೂದಿಯಾಗಿಸ ಬಹುದಿತ್ತು ಅವರ ಶರೀರವನ್ನು. ಆದರೆ ಅದನ್ನು ಹಾಗೆ ಮರೆಯಾಗಿಸಲಿಲ್ಲ ಮಡದಿ-ಮಕ್ಕಳು; ದಿಟ್ಟನಿರ್ಧಾರ ಕೈಗೊಂಡು ಮೃತದೇಹವನ್ನು ಮೈಸೂರಿನ ಮೆಡಿಕಲ್ ಕಾಲೇಜೊಂದಕ್ಕೆ ದಾನಮಾಡಿದರು. ಮಾವನೀಗ ಇಲ್ಲವಾದರೂ ಹಲವು ವಿದ್ಯಾರ್ಥಿಗಳ ವೃತ್ತಿ ರೂಪಿಸುವ ಮಾಧ್ಯಮವಾಗಿ ಉಳಿದಿರಬಹುದು.

ಕಳೆದ ಫೆಬ್ರವರಿಯಲ್ಲಿ ರಸ್ತೆ ಅಪಘಾತಕ್ಕೀಡಾದ ಹರೀಶ್ ನಂಜಪ್ಪ ಸಾಯುವ ಕ್ಷಣಗಳಲ್ಲೂ ನೇತ್ರದಾನ ಮಾಡುವ ಇಚ್ಛೆ ವ್ಯಕ್ತಪಡಿಸಿ ಅಜರಾಮರರಾದರು. ಪ್ರತಿಫಲಾಪೇಕ್ಷೆ ಇಲ್ಲದ ಈ ದಾನ ಬಹುಶಃ ಇನ್ಯಾರದೋ ಬದುಕಿನಲ್ಲಿ ಬೆಳಕು ಮೂಡಿಸಿರಬಹುದು ಮತ್ತು ಆ ನಿರ್ಧಾರ ಇನ್ನೆಷ್ಟೋ ಜನರಲ್ಲಿ ಆ ಬಗ್ಗೆ ಚಿಂತಿಸುವ ಯೋಚನೆಯನ್ನೂ ಮೂಡಿಸಿರಬಹುದು.

ಕೆಲ ದಿನಗಳ ಹಿಂದೆ ಮಂಗಳೂರಿನ ಹರೆಯದ ಹುಡುಗನೊಬ್ಬನ ಮಿದುಳು ನಿಷ್ಕ್ರಿಯಗೊಂಡು ಸಾವು ನಿಶ್ಚಿತ ಎಂಬಂಥ ಸಮಯದಲ್ಲಿ ಮನೆ-ಮಂದಿ ಮಗನನ್ನು ಬದುಕಿಸಿದ್ದು ತಮ್ಮ ಲೋಕೋಪಕಾರದ ಚಿಂತನೆಗಳಿಂದ. ಇನ್ನೂ ಮಿಡಿಯುತ್ತಿದ್ದ ಅವನ ಹೃದಯ ಇನ್ನೆಲ್ಲೋ ಬಡಿದುಕೊಳ್ಳಲಾರದೇ ನರಳುತ್ತಿದ್ದ ವ್ಯಕ್ತಿಯ ದೇಹಕ್ಕೆ ಸೇರಿ ಮರುಜೀವ ಪಡೆದಿತ್ತು.

ಉದಾಹರಣೆಗಳು ಇನ್ನೂ ಇವೆ. ಎಲ್ಲಿಯ ಮಾರಿಯೋ ಹುವಾಂಗ್, ಎಲ್ಲಿಯ ಗಂಗಾಧರ್? ಮಹಡಿಯಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡು ಮಿದುಳು ನಿಷ್ಕ್ರಿಯ ಸ್ಥಿತಿಯಲ್ಲಿದ್ದ ಮಾರಿಯೋ ಹುವಾಂಗ್​ರ ಹೃದಯ ಅವರ ದೇಹದಿಂದ ಮಿಡಿಯುತ್ತಲೇ ಹೊರಬಂದು ಗಂಗಾಧರ್​ರ ದೇಹದೊಳಗೆ ಸೇರಿ ಅವರದಾಗಿಬಿಡುವುದು ಅಚ್ಚರಿದಾಯಕ. ಇದು ಸಾಧ್ಯವಾಗುವುದು ದುಃಖದ ಜತೆಗೆ ಪ್ರಜ್ಞಾವಂತಿಕೆಯಿಂದ ಯೋಚಿಸುವ ಮನಸ್ಸುಗಳಿಂದ.

ಇವೆಲ್ಲವೂ ಸಾವು ಸನ್ನಿಹಿತವಾಗಿರುವ ಸಂದರ್ಭದ ಉದಾಹರಣೆಗಳಾದರೆ, ಆರೋಗ್ಯವಂತರಾಗಿ ಬದುಕಿರುವಾಗಲೇ ಶರೀರದ ಭಾಗವನ್ನು ಶಿಬಿ ಚಕ್ರವರ್ತಿಯಂತೆ ದಾನಮಾಡಿ ಹಿರಿಮೆ ಮೆರೆದವರೂ ಇದ್ದಾರೆ. ಆರೋಗ್ಯದಿಂದಿರುವ ಒಂದು ಕಿಡ್ನಿ ಮನುಷ್ಯನ ಶರೀರದ ಅವಶ್ಯಕತೆಯನ್ನು ಪೂರೈಸಬಲ್ಲದು. ಹಾಗಾಗಿಯೇ ಕೆಲವರು ಜೀವಿತಾವಧಿಯಲ್ಲಿಯೇ ತಮ್ಮ ಒಂದು ಕಿಡ್ನಿಯನ್ನು ದಾನಮಾಡಿ ಜೀವವೊಂದರ ಉಳಿವಿಗೆ ಕಾರಣರಾಗುತ್ತಾರೆ.

ಜೀವಂತ ಹೃದಯವೊಂದನ್ನು ಚೆನ್ನೈಗೆ ಕೊಂಡೊಯ್ಯುವ ಪ್ರಕ್ರಿಯೆಯನ್ನು ಡವಗುಟ್ಟುತ್ತಿರುವ ಎದೆಯನ್ನು ಹಿಡಿದುಕೊಂಡೇ ಟಿ.ವಿ.ಯಲ್ಲಿ ನೋಡಿ ವಾರಗಟ್ಟಲೆ ಅದನ್ನೇ ಮಾತನಾಡಿದ್ದೆವಲ್ಲ, ಇಷ್ಟೊಂದು ಕೌತುಕವನ್ನು ಹುಟ್ಟಿಸಿದ್ದು ವೈದ್ಯಕೀಯ ವಿಜ್ಞಾನ. ಆದರೆ ಅದು ಕೂಡಾ ಸದ್ಯದ ಪರಿಸ್ಥಿತಿಯಲ್ಲಿ ಎಷ್ಟೇ ಮುಂದುವರಿದರೂ ಪ್ರಕೃತಿ ನಿರ್ವಿುಸುವಂತೆ ಹೊಸ ಸೃಷ್ಟಿಯನ್ನು ಮಾಡಲಾರದು. ಹಾಗಾಗಿಯೇ ಮನುಜನ ದೇಹಕ್ಕೆ ‘ಸ್ಪೇರ್ ಪಾರ್ಟ್ಸ್’ ಕೊರತೆ ಇದ್ದಿದ್ದೇ. ಅದರಿಂದಾಗಿಯೇ ಹಲವು ಜೀವಗಳು ಅಕಾಲದಲ್ಲಿಯೇ ಇಲ್ಲವಾಗು ವುದು. ಈ ಕೊರತೆಯ ನಿವಾರಣೆ ಹೇಗೆ? ಬದುಕಿರುವಾಗ ಯಾವುದಕ್ಕೋ ಅಧೀನವಾಗಿ, ಕೆಲವೊಮ್ಮೆ ಉಪಕಾರದ ಮನಸ್ಸಿದ್ದರೂ ಸಂಪನ್ಮೂಲಗಳ ಕೊರತೆಯಿಂದಾಗಿ ಅಸಹಾಯಕರಾಗಿರುತ್ತೇವೆ. ಮತ್ತೊಂದು ತಲೆಮಾರು ಕೂಡಾ ನಮ್ಮನ್ನು ನೆನಪಿಡತಕ್ಕಂತಹ ಕೆಲಸವನ್ನು ನಾವು ಮಾಡಬಹುದು, ಅದೂ ಹಣಬಲವಿಲ್ಲದೆಯೇ ಎಂದಾದರೆ ಏಕೆ ಹಿಂಜರಿಯಬೇಕು? ಪ್ರಕೃತಿ ಯಲ್ಲಿ ನಾಶವಾಗುವುದು ಯಾವುದು ಎಂದು ಪ್ರಕೃತಿಯೇ ನಿರ್ಧರಿಸುತ್ತದೆ. ಇನ್ನೊಂದು ಜೀವ ಹಸಿರಾಗುವಂತೆ ಮಾಡುತ್ತದೆ ಎಂದಾದಲ್ಲಿ ಬಾಡಿದ ಎಲೆಯೂ ಯಾಕೆ ಗೊಬ್ಬರವಾಗಬಾರದು- ಹಸಿರಾಗಿ ನಳನಳಿಸುವ ಆಸೆಹೊತ್ತ ಗಿಡಕ್ಕೆ?!

ಉದಾತ್ತ ಚಿಂತನೆಗಳು, ಇಂತಹ ಚಿಂತನೆಗಳನ್ನು ಪ್ರೇರೇಪಿಸುವ ಮನಸ್ಸುಗಳು ಇದನ್ನು ಸಾಧ್ಯವಾಗಿಸಬಹುದು. ಇದರ ಬಗೆಗಿನ ಪ್ರಚಾರ ಕಡಿಮೆ. ಜನಸಾಮಾನ್ಯರೂ ಇದನ್ನರಿತು ಅಳವಡಿಸಿಕೊಳ್ಳಬೇಕಾದರೆ, ನಾವು ಆದರ್ಶವ್ಯಕ್ತಿ ಎಂದುಕೊಂಡವರು ಈ ಮೇಲ್ಪಂಕ್ತಿಯನ್ನು ಅನುಸರಿಸಿ ತೋರಿಸಬೇಕು. ಅದು ಸಾವಿನ ಸುದ್ದಿಗಿಂತ ಹೆಚ್ಚಾಗಿ ಪಸರಿಸಬೇಕು. ಅವರ ಹೆಸರು, ಸಾಯುವಾಗ ಮಾಡಿದ ಒಂದೊಳ್ಳೆ ಕೆಲಸದ ನೆನಪಾಗಿ ಶಾಶ್ವತವಾಗಬೇಕು. ಆಗ ನಾವೂ ಆ ನಿಟ್ಟಿನಲ್ಲಿ ಯೋಚಿಸತೊಡಗುತ್ತೇವೆ.

ಸಿನಿಮಾನಟ ಲೋಕೇಶ್ ಇಲ್ಲವಾದಾಗ ಅವರ ದೇಹದಾನ ಮಾಡುವಂತಹ ಬಹುದೊಡ್ಡ ನಿರ್ಣಯವನ್ನು ಅವರ ಮನೆಯವರು ಕೈಗೊಂಡು ಅವರ ನೆನಪನ್ನು ಹಸಿರಾಗಿಸಿ ಉಳಿಸಿದ್ದಾರೆ. ನಮ್ಮ ನಡುವೆ ಇದ್ದು ವೈಜ್ಞಾನಿಕ ಲೇಖನಗಳ ಮೂಲಕ ಜನಸಾಮಾನ್ಯರಿಗೂ ವಿಜ್ಞಾನದ ಮಹತ್ವವನ್ನು ಸರಳವಾಗಿ ತಿಳಿಸಿದ ಸಾಹಿತಿ ಜಿ.ಟಿ. ನಾರಾಯಣ ರಾವ್ ಇನ್ನಿಲ್ಲವಾದಾಗ ಅವರಿಚ್ಛೆಯಂತೆಯೇ ಅವರ ದೇಹ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿತ್ತು. ಎಲ್ಲರ ಪ್ರೀತಿಯ ‘ಅಣ್ಣಾವ್ರು’ ಡಾ. ರಾಜ್​ಕುಮಾರ್ ನೇತ್ರದಾನದ ಬಗ್ಗೆ ಸಿನಿಮಾಗಳಲ್ಲಿ ಸಂದೇಶಗಳನ್ನು ನೀಡಿದ್ದು ಮಾತ್ರವಲ್ಲ ಮರಣಾನಂತರ ಕಣ್ಣುಗಳನ್ನು ದಾನಮಾಡಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು.

ಮರಣಾನಂತರದ ದೇಹದಾನ, ನೇತ್ರದಾನ ಇವುಗಳು ದಾನಿಗಳ ಇಚ್ಛೆ ಮಾತ್ರ ಆದರೆ ಸಾಲದು; ಈ ಕೊನೆಯಾಸೆಯನ್ನು ಪೂರೈಸಬೇಕಾದರೆ ಅವರ ಮನೆ-ಮಂದಿಯ ಸಹಕಾರವೂ ಅವಶ್ಯವಾಗಿರುತ್ತದೆ. ನೇತ್ರದಾನವಾದರೆ ವ್ಯಕ್ತಿಯೊಬ್ಬ ಮರಣಿಸಿದ ಆರು ಗಂಟೆಗಳೊಳಗಾಗಿ ಕಣ್ಣುಗಳನ್ನು ನೀಡುವಂಥ ವ್ಯವಸ್ಥೆಯನ್ನು ಮನೆಯವರು ಮಾಡಬೇಕಾಗುತ್ತದೆ. ಒಬ್ಬ ವ್ಯಕ್ತಿಯ ನೇತ್ರದಾನದಿಂದ ಇಬ್ಬರು ನೇತ್ರಹೀನರ ಬಾಳಿನಲ್ಲಿ ಬೆಳಕು ಮೂಡುವುದು ನಿಸ್ಸಂಶಯ. ಮರಣಿಸಿದ ಬಳಿಕವೂ ವಿಶ್ವವನ್ನು ನಮ್ಮ ಕಣ್ಣುಗಳಿಂದ ಮತ್ತೊಮ್ಮೆ ನೋಡುವ ಭಾಗ್ಯ ಸಿಗುತ್ತದೆ ಎಂದಾದಲ್ಲಿ ಬೇಡ ಅನ್ನುವುದುಂಟೇ?.

ವಿಜ್ಞಾನ ಎಷ್ಟು ಮುಂದುವರಿದರೂ ಅಮರತ್ವದ ರಹಸ್ಯ ಇನ್ನೂ ನಮ್ಮ ಕೈ ಸೇರಿಲ್ಲ. ಆದರೆ ನಾವು ಇಲ್ಲವಾದ ಬಳಿಕವೂ ಇನ್ನೆಲ್ಲೋ ಮಿಡಿವ ನಮ್ಮ ಹೃದಯ, ಇನ್ನೆಲ್ಲೋ ಹೊಳೆಯುವ ನಮ್ಮ ಕಣ್ಣು, ಇನ್ನಾರದೋ ಬದುಕನ್ನು ಉಳಿಸುವ ನಮ್ಮ ಕಿಡ್ನಿ ಅಮರವಾಗಿಯೇ ಉಳಿಯುವುದಾದರೆ ಯಾಕೆ ನಿರಾಕರಿಸಬೇಕು? ಮನುಷ್ಯನಿಗಿರುವ ನೂರು ವರ್ಷ ಆಯಸ್ಸನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಅತಿಯಾಸೆಯನ್ನು ಯಾಕೆ ಬಿಡಬೇಕು?

ಯೋಚಿಸಬೇಕಾದ್ದೇ ಇದು, ನೀವು ಮತ್ತು ನಾನೂ.. ನಮ್ಮ ದಿಟ್ಟಹೆಜ್ಜೆ ಇನ್ಯಾರದೋ ಸಫಲ ಪಯಣವಾಗುವೆಡೆಗೆ.. ಮತ್ತು ನಾವಿಲ್ಲದಿದ್ದರೂ ಆ ಪಯಣದ ಭಾಗವಾಗುವುದರ ಬಗೆಗೆ…

ಯಾಕೆಂದರೆ ಸತ್ತ ನಂತರವೂ ಮನುಷ್ಯ ಬದುಕಬಹುದು. ಮಣ್ಣಲ್ಲಿ ಮಣ್ಣಾಗಿಯೋ, ಗಾಳಿ ಬಂದೊಡನೇ ಹಾರುವ ಹಿಡಿ ಬೂದಿಯಾಗಿಯೋ ಮಾರ್ಪಡುವ ಮೊದಲು ಒಂದಿಷ್ಟು ಯೋಚಿಸಿದ್ದರೆ..

(ಲೇಖಕರು ಸಾಹಿತಿ)

 

Leave a Reply

Your email address will not be published. Required fields are marked *

Back To Top