Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಸತಿ ಸುಲೋಚನಗೆ 85ರ ಹರೆಯ

Friday, 27.04.2018, 3:02 AM       No Comments

| ಗಣೇಶ್​ ಕಾಸರಗೋಡು

ನಿಮಗೆ ಗೊತ್ತೇ? 85 ವರ್ಷಗಳ ಹಿಂದೆ ತಯಾರಾದ ಕನ್ನಡದ ಮೊಟ್ಟಮೊದಲ ವಾಕ್ಚಿತ್ರ ‘ಸತಿ ಸುಲೋಚನ’ಕ್ಕೆ ಖರ್ಚಾದ ಒಟ್ಟು ಮೊತ್ತದ 40 ಸಾವಿರ ರೂ.ಗಳು! ಆ ಮೊತ್ತ ಈಗಿನ ಮೌಲ್ಯ 4 ಕೋಟಿಯೋ, 40 ಕೋಟಿಯೋ ಊಹೆ ನಿಮಗೆ ಬಿಟ್ಟದ್ದು. ಇನ್ನು ಕೇವಲ 15 ವರ್ಷಗಳು ಕಳೆದರೆ ಭರ್ತಿ 100 ವರ್ಷಗಳಾಗಲಿರುವ ಕನ್ನಡ ಚಿತ್ರರಂಗದ ಈ ಹೆಮ್ಮೆಯ ಕೊಡುಗೆಯ ಹಿಂದಿನ ಕಥೆಯನ್ನು ಕೆದಕುತ್ತ ಹೋದರೆ ಹತ್ತಾರು ನಂಬಲಸಾಧ್ಯವಾದ ಘಟನೆಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡದಿದ್ದರೆ ಕೇಳಿ…? ಏನೇನೂ ಸೌಲಭ್ಯಗಳಿಲ್ಲದ ಆ ಕಾಲದಲ್ಲಿ ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದ ಸಾಹಸಿಗಳ ಕೆಚ್ಚೆದೆಗೆ ಒಂದು ಶಹಬ್ಬಾಸ್​ಗಿರಿ ಹೇಳಲೇ ಬೇಕು!

ಹಾಗೆ ನೋಡಿದರೆ ಕನ್ನಡದಲ್ಲಿ ಚಿತ್ರೀಕರಣ ಆರಂಭಿಸಿದ ಮೊಟ್ಟಮೊದಲ ವಾಕ್ಚಿತ್ರ; ‘ಭಕ್ತ ಧ್ರುವ’. ಆದರೆ, ತೆರೆಕಂಡದ್ದು ‘ಸತಿ ಸುಲೋಚನ’. ಹೀಗಾಗಿ ಕನ್ನಡದ ಮೊಟ್ಟ ಮೊದಲ ವಾಕ್ಚಿತ್ರದ ಕ್ರೆಡಿಟ್ ‘ಸತಿ ಸುಲೋಚನ’ ಪಾಲಾಯಿತು! 1934ರಲ್ಲಿ ತೆರೆಕಂಡು ದಾಖಲೆ ನಿರ್ವಿುಸಿದ ‘ಸತಿ ಸುಲೋಚನ’ ಚಿತ್ರತಂಡ ಚಿತ್ರೀಕರಣಕ್ಕಾಗಿ ಮೀರಜ್ ಮೂಲಕ ಕೊಲ್ಲಾಪುರಕ್ಕೆ ಪ್ರಯಾಣ ಬೆಳೆಸಿದ್ದು 1933ನೇ ಡಿಸೆಂಬರ್ ತಿಂಗಳಲ್ಲಿ. ಕೊಲ್ಲಾಪುರದ ‘ಛತ್ರಪತಿ ಸಿನಿಟೋನ್’ನಲ್ಲಿ ಚಿತ್ರೀಕರಣದ ವ್ಯವಸ್ಥೆಯಾಗಿತ್ತು. ಈ ತಂಡದ ನೇತೃತ್ವ ವಹಿಸಿಕೊಂಡವರು, ರಾವಣನ ಪಾತ್ರಧಾರಿ ಆರ್. ನಾಗೇಂದ್ರರಾಯರು ಮತ್ತು ನಿರ್ದೇಶಕ ವೈ.ವಿ.ರಾವ್. ಇವರು ಬೇರೆ ಯಾರೂ ಅಲ್ಲ, ‘ಜೂಲಿ’ ಲಕ್ಷ್ಮಿಯವರ ತಂದೆ! ಕನ್ನಡದ ಮೊಟ್ಟ ಮೊದಲ ವಾಕ್ಚಿತ್ರವನ್ನು ನಿರ್ದೇಶಿಸಿದ ಖ್ಯಾತಿ ಇವರದ್ದು. ಯರ್ರಾಗುಡಿಪಾಟಿ ವರದರಾವ್ (ವೈ.ವಿ. ರಾವ್) ಆಂಧ್ರದ ನೆಲ್ಲೂರಿನವರು. ಅಂದಹಾಗೆ, ಇವರು ಮತ್ತು ಇವರ ಧರ್ಮಪತ್ನಿ ರುಕ್ಮಿಣಿ ಕೂಡ ‘ಸತಿ ಸುಲೋಚನ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಖರ್ಚಾದ ಮೊತ್ತ 40 ಸಾವಿರ ರೂ. ಇದರಲ್ಲಿ 25 ಸಾವಿರ ರೂ. ಚಮನ್ ಲಾಲ್ ಡುಂಗಾಜಿ ಎಂಬ ಹೆಸರಿನ ರಾಜಸ್ಥಾನ ಮೂಲದ ಪಾತ್ರೆ ವ್ಯಾಪಾರಿಗಳದ್ದು! ಉಳಿದ 15 ಸಾವಿರ ರೂ. ಆರ್. ನಾಗೇಂದ್ರರಾಯರದ್ದು. ಆದರೆ ಈ ಇಬ್ಬರೂ ಸೇರಿ ನಿರ್ವಿುಸಲು ಹೊರಟ ಬೇರೊಂದು ಸಬ್ಜೆಕ್ಟ್​ನ ಚಿತ್ರದ ಬಜೆಟ್ ಲಕ್ಷ ದಾಟುವ ಅಪಾಯವಿದ್ದುದರಿಂದ ನಾಗೇಂದ್ರರಾಯರು, ಚಾಣಾಕ್ಷ ಬುದ್ಧಿ ಉಪಯೋಗಿಸಿ ರಂಗಭೂಮಿಯಲ್ಲಿ ತಾವು ಅಭಿನಯಿಸುತ್ತಿದ್ದ ‘ಸತಿ ಸುಲೋಚನ’ ಕಥೆಯನ್ನೇ ಆಯ್ಕೆ ಮಾಡಿಕೊಂಡರು. ಇದಕ್ಕೂ ಮೊದಲು ಪರಭಾಷಾ ಚಿತ್ರಗಳದ್ದೇ ಕಾರುಬಾರು. ಆ ಹೊತ್ತಿನಲ್ಲಿ ಸಮಾನ ಮನಸ್ಕರಾದ ಆರ್. ನಾಗೇಂದ್ರರಾಯರು, ಚಮನ್ ಲಾಲ್ ಡುಂಗಾಜಿ ಮತ್ತು ವೈ.ವಿ. ರಾವ್ ಎಂಬ ತ್ರಿಮೂರ್ತಿಗಳು ಜತೆ ಸೇರಿದರು. ಹೀಗೆ ಸೇರಿದ್ದೇ ಒಂದು ಪವಾಡ ಸದೃಶ ಕೆಲಸಕ್ಕೆ ನಾಂದಿಯಾಯಿತು. ‘ಸತಿ ಸುಲೋಚನ’ ಚಿತ್ರದ ಪಾತ್ರಧಾರಿಗಳ ಆಯ್ಕೆ ಸುಲಭದ್ದಾಗಿತ್ತು. ರಾವಣನಾಗಿ ನಾಗೇಂದ್ರರಾಯರು, ಇಂದ್ರಜಿತುವಾಗಿ ಎಂ.ವಿ. ಸುಬ್ಬಯ್ಯನಾಯ್ಡು ಮತ್ತು ಮಂಡೋದರಿಯಾಗಿ ಆ ಕಾಲದ ಸ್ಟಾರ್ ನಟಿ ಲಕ್ಷ್ಮೀ ಬಾಯಿ ಆಯ್ಕೆಯಾದರು. ಸುಲೋಚನಾ ಪಾತ್ರಕ್ಕೆ ಗುಬ್ಬಿ ಕಂಪನಿಯ ತ್ರಿಪುರಾಂಭರನ್ನು ಅಯ್ಕೆ ಮಾಡಿಕೊಳ್ಳಲಾಯಿತು. ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳಿಗಾಗಿ ಬೆಳ್ಳಾವೆ ನರಹರಿ ಶಾಸ್ತ್ರಿಗಳನ್ನು ಕೇಳಿಕೊಳ್ಳಲಾಯಿತು. ಶಾಸ್ತ್ರಿಗಳಿಗೆ ಈ ಕೆಲಸ ಕಷ್ಟಕರದ್ದಾಗಿರಲಿಲ್ಲ. ಸಾಹಿತ್ಯ ರಚನೆಯಲ್ಲಿ ಪಳಗಿದ ಇವರು ವಾಸ್ತವವಾಗಿ ಕನ್ನಡ ಚಿತ್ರರಂಗದ ಪ್ರಥಮ ಚಿತ್ರ ಸಾಹಿತಿ ಎಂದೆನಿಸಿಕೊಂಡರು! ಕನ್ನಡ ಚಿತ್ರ ಸಾಹಿತ್ಯದ ಕುಲಪುರೋಹಿತರೆಂದೂ ಆ ನಂತರದ ದಿನಗಳಲ್ಲಿ ಇವರನ್ನು ಕರೆದರು. ಈ ಚಿತ್ರದ ಸಂಗೀತ ನಿರ್ದೇಶನವನ್ನು ಆರ್. ನಾಗೇಂದ್ರರಾಯರೇ ವಹಿಸಿಕೊಂಡಿದ್ದರು.

ಇಲ್ಲೊಂದು ಫಜೀತಿ ಎದುರಾಯಿತು. ‘ಸತಿ ಸುಲೋಚನ’ ಚಿತ್ರದಲ್ಲಿ ಒಟ್ಟು 16 ಹಾಡುಗಳಿದ್ದವು. ಈ ಹಾಡುಗಳನ್ನು ಚಿತ್ರೀಕರಣದ ಸಂದರ್ಭದಲ್ಲಿ ಕಲಾವಿದರೇ ಲೈವ್ ಆಗಿ ಹಾಡಬೇಕಾಗಿತ್ತು. ಆ ಕಾಲದಲ್ಲಿ ರೆಕಾರ್ಡ್ ಮಾಡಿದ ಹಾಡುಗಳಿಗೆ ತಕ್ಕಂತೆ ತುಟಿ ಚಾಲನೆ ಮಾಡುವ ತಂತ್ರಜ್ಞಾನ ಗೊತ್ತಿರಲಿಲ್ಲ. ಹೀಗಾಗಿ ಗಾಯಕರಾದ ಕಲಾವಿದರನ್ನೇ ಪಾತ್ರಗಳಿಗೆ ಸೂಕ್ತವೆನ್ನಿಸುವ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು.

ಮತ್ತೊಂದು ವಿಚಾರ: ಆ ದಿನಗಳಲ್ಲಿ ಚಿತ್ರೀಕರಣದಲ್ಲಿ ವಿದ್ಯುತ್ ಬಳಕೆ ಶುರುವಾಗಿರಲಿಲ್ಲ. ಆದ್ದರಿಂದ ಸೂರ್ಯನಿಗೆದುರಾಗಿ ಕನ್ನಡಿ ಹಿಡಿದು ಆ ಬೆಳಕಿನಲ್ಲಿ ಚಿತ್ರೀಕರಿಸಬೇಕಾಗಿತ್ತು. ಸುಮಾರು 2 ತಿಂಗಳ ಕಾಲದ ಚಿತ್ರೀಕರಣ ನಡೆಯಿತು. ಚಿತ್ರದಲ್ಲಿನ ಯುದ್ಧದ ದೃಶ್ಯಗಳಿಗಾಗಿ ನೂರಾರು ಮಂದಿ ಕಲಾವಿದರ ಅಭಿನಯವನ್ನು 3 ಕ್ಯಾಮರಾಗಳಲ್ಲಿ ಸೆರೆ ಹಿಡಿಯಲಾಯಿತು. ಹಾಡುಗಳ ವಿಚಾರಕ್ಕೆ ಬಂದರೆ, ಚಿತ್ರದ ಟೈಟಲ್ ಕಾರ್ಡ್ ಜತೆ ಬಂದ ‘ದೇವ ಗುರುಗಳೆಮಗೆ…’ ಹಾಡು ಕನ್ನಡದ ಮೊಟ್ಟ ಮೊದಲ ಚಿತ್ರಗೀತೆ ಎಂಬ ಖ್ಯಾತಿ ಪಡೆಯಿತು!

ಯುದ್ಧದ ದೃಶ್ಯದ ಚಿತ್ರೀಕರಣದ ವೇಳೆಯೂ ಒಂದು ಸ್ವಾರಸ್ಯಕರ ಘಟನೆ ನಡೆದಿತ್ತು. ನೂರಾರು ಮಂದಿ ಸೈನಿಕರು ಬೇಕಾಗಿದ್ದರಲ್ಲ? ಹತ್ತೂರ ಹಳ್ಳಿಯಲ್ಲಿ ತುತ್ತೂರಿ ಊದಲಾಯಿತು. ಅಷ್ಟೇ, ಮೈದಾನ ತುಂಬ ಜನವೋ ಜನ! ಅಷ್ಟೊಂದು ಮಂದಿಗೆ ಸೈನಿಕರ ಯೂನಿಫಾಮ್ರ್ ಬೇಕಲ್ಲ? ಗೋಣಿ ಚೀಲದಿಂದ ಕಾಸ್ಟೂ್ಯಮ್ ಹೊಲಿಸಲಾಯಿತು! ಸಿನಿಮಾ ಕಪ್ಪು ಬಿಳುಪಿನದ್ದಾದರೂ ಸೈನಿಕರ ಬಳಗದ ಗೊಂದಲವನ್ನು ತಪ್ಪಿಸಲೆಂದೇ ಗೋಣಿ ಕಾಸ್ಟೂ್ಯಮ್ೆ ಬಣ್ಣ ಬಳಿಯಲಾಯಿತು! ಯುದ್ಧದ ಸನ್ನಿವೇಶದ ಚಿತ್ರೀಕರಣವಂತೂ ಹಾಸ್ಯ ಧಾರಾವಾಹಿಯಂತಾಗಿತ್ತು! ಕಪಿ ಸೈನ್ಯ ಮತ್ತು ರಾವಣ ಸೈನ್ಯದ ನಡುವಿನ ಯುದ್ಧದಲ್ಲಿ ಕುದುರೆಗಳು ಹಿಡಿತಕ್ಕೆ ಸಿಗದೆ ಅದರ ಪಾಡಿಗವು ಓಡಿ ಹೋದದ್ದರ ಫಲವಾಗಿ ಹತ್ತಾರು ಸೈನಿಕ ಪಾತ್ರಧಾರಿಗಳು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆಯೂ ನಡೆಯಿತು!

ಕೊನೆಗೂ 16 ಸಾವಿರ ಅಡಿ ಉದ್ದದ ‘ಸತಿ ಸುಲೋಚನ’ ಚಿತ್ರದ ಚಿತ್ರೀಕರಣ ಪೂರೈಸಿ ಬಿಡುಗಡೆಗೆ ಸಿದ್ಧವಾಯಿತು. ಕಲಾಸಿಪಾಳ್ಯದ ಆ ಕಾಲದ ಚಿತ್ರಮಂದಿರ ‘ಪ್ಯಾರಾಮೌಂಟ್’ನಲ್ಲಿ ಈ ಚಿತ್ರ 1934ರ ಮಾರ್ಚ್ 3ರಂದು ತೆರೆಕಂಡಿತು. 6 ವಾರ ಕಾಲ ಸತತ ಹೌಸ್​ಫುಲ್ ಶೋ ಕಂಡ ಈ ಚಿತ್ರದ ಪ್ರೇಕ್ಷಕರು ರಾತ್ರಿ ವೇಳೆ ಅದೇ ಚಿತ್ರಮಂದಿರದಲ್ಲೇ ಮಲಗಿ ಬೆಳಿಗ್ಗೆ ಎದ್ದು ಹೋಗುತ್ತಿದ್ದರಂತೆ! ‘ಸತಿ ಸುಲೋಚನ’ ಚಿತ್ರದೊಂದಿಗೆ ಕನ್ನಡ ಚಿತ್ರರಂಗದ ಅವಿಸ್ಮರಣೀಯ ಯಾತ್ರೆ ಆರಂಭವಾದದ್ದು ಹೀಗೆ.

Leave a Reply

Your email address will not be published. Required fields are marked *

Back To Top