Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಸಜ್ಜನರ ಸಂಗವೇ ಲೇಸು…

Wednesday, 17.01.2018, 3:04 AM       No Comments

| ಸವಿತಾ ಹುನ್ನೂರ

 ಕಾದ ಕಾವಲಿಯ ಮೇಲೆ ಬಿದ್ದ ನೀರಹನಿಯೊಂದು ಆವಿಯಾಗಿ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ. ಕಮಲದೆಲೆಯ ಮೇಲೆ ಬಿದ್ದ ಅದೇ ನೀರ ಹನಿಯು ಸೂರ್ಯನ ಬೆಳಕಿನಲ್ಲಿ ಮುತ್ತಿನಂತೆ ಕಂಗೊಳಿಸುತ್ತದೆ. ಕಪ್ಪೆಚಿಪ್ಪನ್ನು ಪ್ರವೇಶಿದ ಅದೇ ನೀರಹನಿಯು ಅರ್ನ್ಯಘವಾದ ಮುತ್ತೇ ಆಗುತ್ತದೆ. ಹೀಗೆ ಉತ್ತಮ, ಮಧ್ಯಮ ಮತ್ತು ಅಧಮವೆಂಬ ಮೂರು ಗುಣಗಳೂ ಸಹವಾಸದಿಂದ ಉಂಟಾಗುತ್ತವೆ. ಅದಕ್ಕೆ ಬಸವಣ್ಣ ಹೇಳಿರೋದು-‘ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ’. ಅದು ನಮಗೆ ಒಳ್ಳೆಯ ನಡೆ ನುಡಿ ಹೆಸರನ್ನು ತಂದುಕೊಟ್ಟರೆ ‘ದುರ್ಜನರ ಸಂಗವದು ಹೆಜ್ಜೇನು ಕಡಿದಂತೆ’- ಕೆಟ್ಟವರ ಸಹವಾಸವೆಂಬುದು ಬಚ್ಚಲಿನ ಕೊಚ್ಚೆಯಲಿ ಮಿಂದೆದ್ದು ಬಂದಂತೆಯೇ ಸರಿ. ಜೀವನದಲ್ಲಿ ಸಾಕ್ಷಾತ್ಕಾರ ಪಡೆಯಬೇಕಾದರೆ ಉತ್ತಮವಾದ ಶಿಕ್ಷಣ, ಶಿಕ್ಷಣದ ಜತೆಗೆ ಜ್ಞಾನ ಬೇಕು. ಈ ಜ್ಞಾನವನ್ನು ನಾವು ಕೇವಲ ಶಾಲೆಯಲ್ಲಿ ಪಡೆಯಲು ಸಾಧ್ಯವಿಲ್ಲ. ನಮ್ಮಲ್ಲಿ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕು. ಒಳ್ಳೆಯ ಕೃತಿ, ಜೀವನಚರಿತ್ರೆಗಳಂಥ ಗ್ರಂಥಗಳಿಂದ ಜ್ಞಾನಾರ್ಜನೆ ಮಾಡಿಕೊಳ್ಳಬೇಕು. ಜೀವನದಲ್ಲಿ ಕೇವಲ ಜ್ಞಾನಾರ್ಜನೆ ಮಾಡಿಕೊಂಡರಷ್ಟೇ ಸಾಲದು. ನಾವು ಪಡೆದುಕೊಂಡ ಜ್ಞಾನ ಸದುಪಯೋಗವಾಗಬೇಕೆಂದರೆ ನಮ್ಮ ಜೊತೆಗಾರರು, ಮಿತ್ರರು ಒಳ್ಳೆಯವರಾಗಿದ್ದರೆ ಮಾತ್ರ ಜೀವನದಲ್ಲಿ ಸಫಲತೆ ಸಾಧಿಸಲು ಸಾಧ್ಯ.

ಸಂಗದೋಷ ಜೀವಕ್ಕೆ ಸಂಚಕಾರ ತರುವ ಸಾಧ್ಯತೆಗಳೂ ಇರುತ್ತವೆ. ‘ದುರ್ಜನರ ಸಂಗ ಬಿಡು, ಸಜ್ಜನರ ಸಹವಾಸ ಮಾಡು’ ಹೀಗೊಂದು ಹಿತೋಕ್ತಿಯಿದೆ. ಕೆಲವೊಮ್ಮೆ ತಿಳಿದೋ ತಿಳಿಯದೆಯೋ ದುರ್ಜನರ ಸಹವಾಸ ಮಾಡಿರುತ್ತೇವೆ. ಅವರೊಂದಿಗೆ ಸೇರಿ ದುಶ್ಚಟಗಳನ್ನೆಲ್ಲ ಮೈಮೇಲೆ ಎಳೆದುಕೊಂಡು ರೋಗಗ್ರಸ್ತರಾಗಿ ನಾವೂ ಹಾಳಾಗಿದ್ದಲ್ಲದೆ, ನಮ್ಮದೇ ಕುಟುಂಬದ ಆರೋಗ್ಯವನ್ನೂ ಹಾಳು ಮಾಡಿಬಿಡುತ್ತೇವೆ. ಕುಟುಂಬ ವ್ಯವಸ್ಥೆಯಲ್ಲಿ ಮನುಷ್ಯ ಬದುಕುತ್ತಿರುವುದರಿಂದ ಕುಟುಂಬದ ಒಬ್ಬ ಸದಸ್ಯನಿಗೆ ಕಾಯಿಲೆ ಬಂದರೂ ಅದರ ಪರಿಣಾಮ ಇತರರ ಮೇಲೆಯೂ ಆಗುತ್ತದೆ. ಕುಟುಂಬದಲ್ಲಿ ಆರೋಗ್ಯಕರ ವಾತಾವರಣ ನಿರ್ವಣವಾಗಬೇಕಾದರೆ ದುಶ್ಚಟಗಳನ್ನು ತೊರೆಯುವುದು ಮಾತ್ರವಲ್ಲದೆ, ದುಷ್ಟರ ಸಂಗ ತೊರೆಯುವುದು ಕೂಡ ಅಷ್ಟೇ ಅಗತ್ಯ. ಕೆಟ್ಟವರ ಸಹವಾಸದಲ್ಲಿದ್ದವರು ಪರಿಶುದ್ಧರಾಗಿರಲು ಸಾಧ್ಯವಿಲ್ಲ. ದಾನಶೂರ ಕರ್ಣನೇ ದುರ್ಜನರ ಸಹವಾಸದಿಂದ ಹಾಳಾದನು. ದುಷ್ಟರ ಸಹವಾಸದಿಂದ ಸಜ್ಜನರು ಹೇಗೆ ಹಾಳಾಗುತ್ತಾರೆ ಎಂಬುದಕ್ಕೆ ಕರ್ಣ ಒಳ್ಳೆಯ ಉದಾಹರಣೆ.

ದುಶ್ಚಟ, ದುಷ್ಟರ ಸಹವಾಸ ತ್ಯಜಿಸಿ ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳುವುದರ ಮೂಲಕ ಬದುಕನ್ನು ಕಂಡುಕೊಳ್ಳಬೇಕು. ಇದರಿಂದ ನಮ್ಮ ಆರೋಗ್ಯ ಮಾತ್ರವಲ್ಲದೆ ಸಮಾಜದ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ನಾವೆಲ್ಲ ಒಳ್ಳೆಯವರ ಸಹವಾಸವನ್ನೇ ಮಾಡೋಣ, ಒಳ್ಳೆಯದನ್ನೇ ಆಲೋಚಿಸೋಣ, ಸದಾ ಒಳಿತನ್ನೇ ಮಾತನಾಡೋಣ, ನಮ್ಮ ಸುತ್ತಮುತ್ತಲೂ ಒಳ್ಳೆಯ ತೇಜಸ್ಸಿನ ಪ್ರಭೆಯನ್ನು ಪಸರಿಸೋಣ.

(ಲೇಖಕಿ ಹವ್ಯಾಸಿ ಬರಹಗಾರ್ತಿ)

Leave a Reply

Your email address will not be published. Required fields are marked *

Back To Top