Tuesday, 16th January 2018  

Vijayavani

ಮತ್ತೊಂದು ಟ್ವೀಟ್‌ ಮಾಡಿ ಕೆಣಕಿದ ಪಾಲ್ಯೇಕರ್ - ಕಣಕುಂಬಿ ಕಾಮಗಾರಿ ಪರಿಶೀಲನೆಗೆ ನಾಲ್ವರ ತಂಡ ರಚನೆ - ಗೋವಾ ಸಚಿವನ ವಿರುದ್ಧ ಸಿಎಂ ಆಕ್ರೋಶ        ಪರಮೇಶ್ವರ್‌ಗೂ ಕಂಟಕವಾಯ್ತು ಸದಾಶಿವ ಆಯೋಗ - ವರದಿ ವಿರೋಧಿಸಿದ್ದಕ್ಕೆ ಸ್ವಕ್ಷೇತ್ರದಲ್ಲೇ ಆಕ್ರೋಶ - ಮತ ಹಾಕದಿರಲು ಮಾದಿಗ ಮುಖಂಡರ ನಿರ್ಧಾರ        ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಮತ್ತೆ ಕೀಚಕ ಕೃತ್ಯ - ಇಂದಿರಾನಗರ ಪೊಲೀಸರಿಂದ ಇಬ್ಬರು ಆರೋಪಿಗಳ ಸೆರೆ - ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಗೆ ಆಕ್ರೋಶ        ಕೊನೆಗೂ ಮೌನ ಮುರಿದ ಸುಪ್ರೀಂಕೋರ್ಟ್‌ ಸಿಜೆ - ಬಂಡಾಯ ನ್ಯಾಯಮೂರ್ತಿಗಳ ಜತೆ ದೀಪಕ್‌ ಮಿಶ್ರ ಚರ್ಚೆ - 15 ನಿಮಿಷಗಳ ಕಾಲ ಸಂಧಾನ ಮಾತುಕತೆ        ಚೆಂಡು ನೆಲಕ್ಕೆ ಎಸೆದ ವಿರಾಟ್‌ಗೆ ಐಸಿಸಿ ತರಾಟೆ - ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಿಟ್ಟಾದ ಕೊಹ್ಲಿಗೆ ದಂಡ - ಪಂದ್ಯದ 25 ಪರ್ಸೆಂಟ್‌ ಸಂಭಾವನೆ ಕಡಿತ       
Breaking News :

ಸಚಿವ ಹೆಗಡೆಗೆ ಸಂವಿಧಾನ ಗೊತ್ತಿಲ್ಲ: ನಟ ಪ್ರಕಾಶ ರೈ ವಾಗ್ದಾಳಿ

Sunday, 14.01.2018, 4:00 AM       No Comments

ಶಿರಸಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಸಂವಿಧಾನ ಎಂದರೇನು ಎಂಬುದೇ ಗೊತ್ತಿಲ್ಲ ಎಂದು ನಟ ಪ್ರಕಾಶ ರೈ ಹೇಳಿದರು.

ಎಡಪಂಥೀಯ ವಿಚಾರವಾದಿಗಳು ಶನಿವಾರ ಹಮ್ಮಿಕೊಂಡಿದ್ದ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು. ಅವರು ಕ್ರಿಕೆಟ್ ಆಡಲು ಹೋಗಿ ಫುಟ್ ಬಾಲ್ ಆಡುತ್ತಾರೆ. ಕ್ರಿಕೆಟ್ ಬಾಲ್​ನಲ್ಲಿ ಫುಟ್​ಬಾಲ್ ಆಡಿದರೆ ಮುಖಮೂತಿಗೆ ಏಟಾಗುತ್ತದೆ ಎಚ್ಚರ ಎಂದು ರೈ ಹೇಳಿದರು. ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ ಎನ್ನುತ್ತಲೇ ನಾವು ಅಧಿಕಾರ ಕೈಗೆ ತೆಗೆದುಕೊಳ್ಳಬೇಕು. ನಾನು ಹಿಂದು ವಿರೋಧಿ, ಕಾಂಗ್ರೆಸ್ ಏಜೆಂಟ್, ಎಡಪಂಥೀಯ ಎಂದೆಲ್ಲ ಬಿಂಬಿಸಲಾಗುತ್ತಿದೆ. ಆದರೆ, ನಾನು ಯಾವ ಪಕ್ಷಕ್ಕೆ ಸೇರಿದವನಲ್ಲ ಎಂದು ಹೇಳಿಕೊಂಡರು.

ಮುಂದಿನ ಚುನಾವಣೆಯಲ್ಲಿ ದೊಡ್ಡರೋಗವನ್ನು ಹೋಗಲಾಡಿಸಿಕೊಳ್ಳಬೇಕು. ನಂತರ ಕೆಮ್ಮು, ನೆಗಡಿಯನ್ನು ಆಮೇಲೆ ನೋಡೋಣ. ಜಿಲ್ಲೆಯಲ್ಲಿ ಒಂದು ಕೊಲೆ ಆಗುತ್ತೆ, ಅದಕ್ಕೆ ಪ್ರತಿಯಾಗಿ ಇನ್ನೊಂದು ಕೊಲೆ. ಇದು ಕೇವಲ ಚುನಾವಣೆ ಮುಗಿಯುವವರೆಗೆ ಮಾತ್ರ ಎಂದು ಹೇಳಿದರು. ಆದರೆ, ದೊಡ್ಡ ರೋಗ ಯಾವುದೆಂದು ಸ್ಪಷ್ಟ ಪಡಿಸಲಿಲ್ಲ.

ದೇಶ ಪೂರ್ಣ ಕೇಸರಿ ಬಣ್ಣವಾದರೆ ಏನು ಚಂದ: ಭೂಮಿಯ ಮೇಲೆ ಒಂದು ಸಮುದಾಯ ಬದುಕುಳಿಯಲೇ ಬಾರದು ಎನ್ನುವವರೊಬ್ಬರ ಬಣ್ಣ ಬಯಲಾಗುತ್ತಿದೆ. ಇಲ್ಲಿನ ಸಂಸದರು ದೇಶವನ್ನು ಸಂಪೂರ್ಣ ಕೇಸರಿ ಬಣ್ಣ ಮಾಡಲು ಹೊರಟರೆ ಏನು ಚಂದ? ಅಷ್ಟಕ್ಕೂ ಇವರು ಸಾಧಿಸುವುದಾರೂ ಏನು? ಇವರದ್ದೇ ನೀತಿಯನ್ನು ಹೊರ ದೇಶಗಳೂ ಅನುಸರಿಸಿದರೆ. ಎಲ್ಲಿ ಉಳಿಯುತ್ತಾರೆ ಎಂದು ಪ್ರಶ್ನಿಸಿದರು.

ಇತ್ತೀಚೆಗೆ ಕಾವಿಧಾರಿಗಳು ರಾಜಕೀಯಕ್ಕೆ ಬರುತ್ತೇವೆ ಎಂದು ಹೆದರಿಸುತ್ತಿದ್ದಾರೆ. ಧರ್ಮದ ಉಳಿವಿಗೆ ಇವರು ಬೇಕಂತೆ. ರಾಮನನ್ನು ವಿಮಾನದಲ್ಲಿ ತಂದು ಪೂಜಿಸೋ ಜನ ಇವರು. ಇದೇ ಪುಷ್ಪಕ ವಿಮಾನದ ಕಥೆ ಇಟ್ಟುಕೊಂಡು ನಾವು ವಿಮಾನ ಕಂಡು ಹಿಡಿದವರೆಂದು ಮಾತನಾಡುವ ಇವರನ್ನು ನೋಡಿ ನಗೋಣ ಎನ್ನಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಪತ್ರಕರ್ತ ಶಶಿಧರ್ ಭಟ್ ಮಾತನಾಡಿ, ಇಲ್ಲಿನ ಸಂಸದರು ಅಪಾಯಕಾರಿ ಮನುಷ್ಯ; ಇದನ್ನು ನಾನು ಹೇಳುತ್ತಿಲ್ಲ. ನಾನು ಇಲ್ಲಿಗೆ ಬಂದ ಕೂಡಲೇ ಸ್ಥಳೀಯರೇ ಎಚ್ಚರಿಸಿದ್ದಾರೆ. ಕೈ, ಕಾಲು ಮುರಿಯುವ ಜನರಿದ್ದಾರೆ ಎಚ್ಚರಿಕೆಯಿಂದ ಮಾತನಾಡಿ ಎಂದು ಮೊದಲೇ ಸೂಚಿಸಿದ್ದಾರೆ. ಈ ಅರಿವಿನಲ್ಲೇ ಮಾತನಾಡುತ್ತಿದ್ದೇನೆ ಎಂದು ಟೀಕಿಸಿದರು.

ಇಂದು ಮಾಧ್ಯಮ ಕ್ಷೇತ್ರ ದೇಶದ ಶ್ರೀಮಂತ ಬಂಡವಾಳಶಾಹಿಯೊಬ್ಬರ ಕೈಗೆ ಸಿಕ್ಕಿದೆ. ಆರ್​ಎಸ್​ಎಸ್ ಅನ್ನು ವಿರೋಧಿಸುವ ಮಾಧ್ಯಮಕ್ಕೆ ಉಳಿಗಾಲ ಇಲ್ಲ ಎನ್ನುವ ಕಾಲ ಬಂದಿದೆ ಎಂದರು.

ಹೈದರಾಬಾದ್​ನ ಮಾನವಹಕ್ಕು ಹೋರಾಟಗಾರ ಮಾರ್ಟಿನ್ ಮಾಕ್ವೆಲ್ ಮಾತನಾಡಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ನ್ಯಾಯಾಧೀಶರೇ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಾರೆ ಎಂದರೆ ನಮ್ಮ ಲೋಕತಂತ್ರ ವ್ಯವಸ್ಥೆಗೆ ಆತಂಕ ಬಂದಿದೆ ಎಂದೇ ಅರ್ಥ. ಇದು ಸಣ್ಣ ಸಂಗತಿ ಅಲ್ಲ ಎಂದು ಹೇಳಿದರು.

ಜನವಾದಿ ಮಹಿಳಾ ಸಂಘಟನೆ ಮುಖ್ಯಸ್ಥೆ ಕೆ.ಎಸ್. ವಿಮಲಾ ಮಾತನಾಡಿ, ಇತ್ತೀಚೆಗೆ ಶಿರಸಿಯಲ್ಲಿ ಅಶಾಂತಿಯ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಸೌಹಾರ್ದ ನಡಿಗೆ ಮತ್ತು ನಮ್ಮ ಸಂವಿಧಾನ ನಮ್ಮ ಹೆಮ್ಮೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಸಮಾರಂಭದಲ್ಲಿ ಸಾಹಿತಿಗಳಾದ ರಹಮತ್ ತರಿಕೆರೆ, ರಂಜಾನ್ ದರ್ಗಾ, ರಾಜೇಂದ್ರ ಚೆನ್ನಿ, ವಿಚಾರವಾದಿಗಳಾದ ಪ್ರಜ್ಞಾ ಪವಾರ್, ಕೆ.ಷರೀಪಾ, ಡಾ. ಕೇಶವ ಶರ್ಮ, ಸಾಹಿತಿ ವಿನಯಾ ವಕ್ಕುಂದ ಇತರರು ಇದ್ದರು.

Leave a Reply

Your email address will not be published. Required fields are marked *

Back To Top