Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಸಕಾಲಿಕ ಸೂಚನೆ

Wednesday, 09.08.2017, 3:00 AM       No Comments

ವಿದ್ಯುಚ್ಛಕ್ತಿಯ ಪ್ರಸರಣ ಮತ್ತು ವಿತರಣೆಯಲ್ಲಾಗುತ್ತಿರುವ ನಷ್ಟವನ್ನು ಒಂದು ವರ್ಷದೊಳಗಾಗಿ ಶೇ. 10ಕ್ಕಿಂತಲೂ ಕೆಳಗೆ ತರುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚಿಸಿದೆ. ವಿದ್ಯುತ್ ನಷ್ಟ ತಡೆಗಟ್ಟುವ ಉಪಕ್ರಮದ ಮೊದಲ ಹಂತವಾಗಿ ವಿವಿಧ ಕ್ರಮಗಳನ್ನು ಅನುಷ್ಠಾನಗೊಳಿಸಲೆಂದು ದೇಶಾದ್ಯಂತದ 4,041 ಪಟ್ಟಣಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸುಧಾರಿತ ಬಿಲ್ ಸಂಗ್ರಹಣೆ, ವಿದ್ಯುತ್ ಕಳ್ಳತನಕ್ಕೆ ಅಂಕುಶ ಹಾಕುವುದು, ವಿದ್ಯುತ್ ಪ್ರಸರಣ ಮತ್ತು ವಿತರಣಾ ವ್ಯವಸ್ಥೆಯ ಉನ್ನತೀಕರಣ ಈ ಕ್ರಮಗಳಲ್ಲಿ ಸೇರಿವೆ. ವಿದೇಶಿ ಬಂಡವಾಳ ಹೂಡಿಕೆ, ಉತ್ಪಾದನಾ ವಲಯಕ್ಕೆ ಉತ್ತೇಜನ, ಅಭಿವೃದ್ಧಿ, ಭರಪೂರ ಉದ್ಯೋಗಾವಕಾಶಗಳ ಸೃಷ್ಟಿ- ಹೀಗೆ ವೈವಿಧ್ಯಮಯ ಭರವಸೆಗಳು ಆಳುಗರಿಂದ ಕಾಲಾನುಕಾಲಕ್ಕೆ ಹೊಮ್ಮುವುದುಂಟು. ಆದರೆ, ರಸ್ತೆ, ನೀರು, ವಿದ್ಯುಚ್ಛಕ್ತಿಯಂಥ ಮೂಲಸೌಲಭ್ಯಗಳೇ ಇಲ್ಲದಿದ್ದರೆ ಇವು ನೆರವೇರುವುದು ದುಸ್ತರವೇ ಸರಿ. ಈ ಕಹಿವಾಸ್ತವವನ್ನು ಮನಗಂಡಂತಿರುವ ಕೇಂದ್ರ ಸರ್ಕಾರ ಇಂಥದೊಂದು ಹೆಜ್ಜೆಯಿಟ್ಟಿರುವುದು ಸಮಯೋಚಿತವಾಗೇ ಇದೆ.

ಭಾರತದ ವಿವಿಧ ರಾಜ್ಯಗಳು ಬಹಳ ಕಾಲದಿಂದಲೂ ಜಲವಿದ್ಯುತ್ತನ್ನೇ ನೆಚ್ಚಿರುವುದು ಗೊತ್ತಿರುವ ಸಂಗತಿಯೇ. ಆದರೆ ಸಕಾಲದಲ್ಲಿ ಮತ್ತು ಸಮರ್ಪಕವಾಗಿ ಮಳೆಯಾಗದ ಕಾರಣ ಬಹುತೇಕ ಜಲವಿದ್ಯುತ್ ಯೋಜನೆಗಳು ಸೊರಗುತ್ತಿವೆ. ಇನ್ನು ಅಣುವಿದ್ಯುತ್ ಯೋಜನೆಗಳು, ಅವುಗಳ ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ಅಡಗಿರಬಹುದಾದ ಸವಾಲು-ಸಮಸ್ಯೆಗಳ ಕಾರಣದಿಂದಾಗಿ ಕಾರ್ಯಸಾಧ್ಯವಾಗುತ್ತಿಲ್ಲ. ಸೌರವಿದ್ಯುತ್ ಪರಿಕಲ್ಪನೆಯ ಸಾಕಾರಕ್ಕೆ ಭಾರತದಂಥ ದೇಶದಲ್ಲಿ ವಿಪುಲ ಅವಕಾಶಗಳಿವೆಯಾದರೂ, ಸಮರ್ಪಕ ಮೇಲ್ವಿಚಾರಣೆ ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಅದು ನನಸಾಗುತ್ತಿಲ್ಲ. ಹೀಗಾಗಿ ಲಭ್ಯವಿರುವ ವಿದ್ಯುತ್ತಿನ ದುರ್ವ್ಯಯವಾಗದಂತೆ ಬಳಸುವುದು ಅನಿವಾರ್ಯವಾಗಿದೆ. ವಿದ್ಯುತ್ ಪ್ರಸರಣ ಮತ್ತು ವಿತರಣೆಯಲ್ಲಾಗುವ ನಷ್ಟ ಅಥವಾ ಕಳ್ಳತನಕ್ಕೆ ಲಗಾಮು ಹಾಕುವುದು ಈ ನಿಟ್ಟಿನಲ್ಲೊಂದು ಪೂರಕ ಕ್ರಮವಾಗಬಲ್ಲದು. ಕರ್ನಾಟಕದ ಸ್ಥಿತಿಗತಿಯನ್ನೇ ನಿರ್ದಿಷ್ಟವಾಗಿ ಹೇಳುವುದಾದರೆ, ಕೇಂದ್ರ ವಿದ್ಯುತ್ ಖಾತೆಯೇ ಒದಗಿಸಿರುವ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ತಾಂತ್ರಿಕವಾಗಿ ಮತ್ತು ವಾಣಿಜ್ಯಿಕವಾಗಿ ಕಾಣಬರುತ್ತಿರುವ ಒಟ್ಟು ವಿದ್ಯುತ್ ನಷ್ಟದ ಪ್ರಮಾಣದ ಶೇ. 15.29ರಷ್ಟು. ಮಿಕ್ಕ ಬಹುತೇಕ ರಾಜ್ಯಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನಿಲ್ಲ. ಆದ್ದರಿಂದ, ಪ್ರಸರಣ ಮತ್ತು ವಿತರಣಾ ವ್ಯವಸ್ಥೆಯಲ್ಲಿನ ತಂತ್ರಜ್ಞಾನದ ಉನ್ನತೀಕರಣಕ್ಕೆ ಮುಂದಾಗಿ, ದೇಶದೆಲ್ಲೆಡೆ ವಿನೂತನ ಟ್ರಾನ್ಸ್​ಫಾರ್ಮರ್​ಗಳು ಮತ್ತು ಫೀಡರ್​ಗಳನ್ನು ಅಳವಡಿಸಲು ಯೋಜಿಸಿರುವ ಕೇಂದ್ರ ಸರ್ಕಾರ, ಇಂಟಿಗ್ರೇಟೆಡ್ ಪವರ್ ಡೆವಲಪ್​ವೆುಂಟ್ ಸ್ಕೀಮ್ ದೀನದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನಾದಂಥ ವಿಭಿನ್ನ ಕಾರ್ಯಕ್ರಮಗಳಡಿಯಲ್ಲಿ ರಾಜ್ಯಗಳಿಗೆ ನೆರವಾಗಲು ಮುಂದಾಗಿದೆ. ಪಕ್ಷ ರಾಜಕಾರಣ ತಂದೊಡ್ಡುವ ಜಿಗುಟುತನ ಅಥವಾ ಇನ್ನಾವುದೇ ತೆರನಾದ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಪರಸ್ಪರ ಕೈಜೋಡಿಸುವಂತಾದರೆ, ದೇಶದ ಅಭಿವೃದ್ಧಿ ಪರ್ವಕ್ಕೆ ಅದು ನಿಜಕ್ಕೂ ಸಮರ್ಥ ಮುನ್ನುಡಿಯಾಗಬಹುದು. ಏಕೆಂದರೆ, ಉತ್ಪಾದನಾ ಕ್ಷೇತ್ರವಿರಲಿ, ಸೇವಾವಲಯವಿರಲಿ ಅಥವಾ ಮಾರುಕಟ್ಟೆ ಹಂಚಿಕೆ ವ್ಯವಸ್ಥೆಯೇ ಇರಲಿ, ವಿದ್ಯುತ್ ಸೌಕರ್ಯದ ಒತ್ತಾಸೆ ಇಲ್ಲದೆ ಹೋದರೆ ಬಳಲುವುದು ನಿಶ್ಚಿತ. ಅಭಿವೃದ್ಧಿಪಥದತ್ತ ದಾಪುಗಾಲು ಹಾಕುತ್ತಿರುವ ಭಾರತದಂಥ ದೇಶ ನೀರು, ವಿದ್ಯುಚ್ಛಕ್ತಿಯಂಥ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಪ್ರಬಲ ರಾಷ್ಟ್ರಗಳೆದುರಿನ ಪೈಪೋಟಿಯಿಂದ ಹಿಂದೆಗೆಯಬಾರದು ಎಂದಾದರೆ ಇಂಥ ಹಲವು ಕಟ್ಟುನಿಟ್ಟಿನ ಕ್ರಮಗಳ ಜಾರಿ ಅಗತ್ಯವಾಗಿದೆ ಎನ್ನಲಡ್ಡಿಯಿಲ್ಲ.

Leave a Reply

Your email address will not be published. Required fields are marked *

Back To Top