Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ಸಕಾಲಿಕ ಎಚ್ಚರಿಕೆಯಿಂದ ತಪ್ಪಿದ ದೊಡ್ಡ ಪ್ರಮಾದ

Sunday, 22.10.2017, 3:03 AM       No Comments

|ಎಂ. ಕೆ. ಭಾಸ್ಕರ್​ ರಾವ್​

ಕರ್ನಾಟಕ ವಿಧಾನಮಂಡಲ ಎಷ್ಟೆಲ್ಲ ಹೆಸರು ಖ್ಯಾತಿಯನ್ನು ಪಡೆದಿತ್ತೋ ಅದೆಲ್ಲವೂ ಹೊಳೆಯಲ್ಲಿ ಹುಣಿಸೆ ಹಣ್ಣನ್ನು ತೊಳೆದಂತಾಗುವ ಹಂತಕ್ಕೆ ಬಂದು ನಿಂತಿದ್ದು ವಿಪರ್ಯಾಸ. ವಿಧಾನಸೌಧಕ್ಕೆ ಅರವತ್ತು ವರ್ಷವಾಗಿದೆಯೆಂದು 26.87 ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸುವ ಸುದ್ದಿ ಜನಮನವನ್ನು ಕಲಕಿದ್ದು, ಜನಾಕ್ರೋಶಕ್ಕೆ ಕನ್ನಡಿ ಹಿಡಿದ ಮಾಧ್ಯಮ ಸರ್ಕಾರವನ್ನು ಸಕಾಲದಲ್ಲಿ ಎಚ್ಚರಿಸಿ ಇನ್ನೂ ದೊಡ್ಡ ತಪ್ಪು ಘಟಿಸದಂತೆ ತಡೆದಿದ್ದು ಸಣ್ಣ ಸಾಧನೆಯೂ ಅಲ್ಲ, ಸಾಮಾನ್ಯ ಸಂಗತಿಯೂ ಅಲ್ಲ. ಹನ್ನೆರಡನೇ ಶತಮಾನದಷ್ಟು ಹಿಂದೆಯೇ ಶರಣರು ಸ್ಥಾವರಕೆ ಅಳಿವುಂಟು ಜಂಗಮಕಿಲ್ಲ ಎಂದರು. ನಂತರದ ಒಂಭತ್ತು ಶತಮಾನದ ಅವಧಿಯಲ್ಲಿ ಪೀಳಿಗೆಯಿಂದ ಪೀಳಿಗೆ ಈ ಮಾತನ್ನು ಅನುಭವ ದೀವಿಗೆಯಾಗಿ ನೋಡಿತು. ಆದರೆ ವಿಧಾನಸೌಧಕ್ಕೆ 60 ತುಂಬಿದ್ದನ್ನೇ ದೊಡ್ಡ ಸಾಧನೆ ಎನ್ನುವಂತೆ ಅಪಾರ ವೆಚ್ಚದಲ್ಲಿ ಕಾರ್ಯಕ್ರಮ ನಡೆಸಲು ಮುಂದಾಗಿದ್ದ ವಿಧಾನಮಂಡಲ ಸಚಿವಾಲಯದ ನಡೆ, ಯಾವ ದೃಷ್ಟಿಯಿಂದಲೂ ಮೆಚ್ಚುವಂಥದಲ್ಲ.

ವಿಧಾನಪರಿಷತ್ತು ಮತ್ತು ವಿಧಾನಸಭಾ ಕಲಾಪ ನಡೆಯುವ ಉಭಯ ಸದನಗಳ ವಿನ್ಯಾಸ, ಎರಡೂ ಸದನಗಳನ್ನು ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡು ತನ್ನ ವಿಶಿಷ್ಟ ವಾಸ್ತು ಸೌಂದರ್ಯದಿಂದಾಗಿ ಸೆಳೆಯುವ ವಿಧಾನಸೌಧ ಭಾರತ ನೋಡುತ್ತಿರುವ ವಿಸ್ಮಯಗಳಲ್ಲಿ ನಿಸ್ಸಂಶಯವಾಗಿ ಮುಂಚೂಣಿಯಲ್ಲಿರುವ ಭವ್ಯವೂ ದಿವ್ಯವೂ ಆದ ಸೌಧ. ಆರು ದಶಕದ ರೋಚಕ ಇತಿಹಾಸ ಅದಕ್ಕಿದೆ. ಮೊದಲು ವಿಧಾನಸಭೆ ಕಲಾಪ ಅಠಾರಾ ಕಚೇರಿಯಲ್ಲಿ ನಡೆಯುತ್ತಿತ್ತು. ವಿಧಾನಸೌಧ ಕಾರ್ಯಾರಂಭಿಸಿದ ನಂತರದಲ್ಲಿ ಅಠಾರಾ ಕಚೇರಿ ಹೈಕೋರ್ಟ್ ಆಯಿತು. ಐವತ್ತರ ದಶಕದಲ್ಲಿ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರ ಕಲ್ಪನೆಯ ಕೂಸು ವಿಧಾನಸೌಧ.

1951ರಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ ಶಂಕುಸ್ಥಾಪನೆ ನೆರವೇರಿಸಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ತೋರುಗಂಬದ ರೀತಿಯಲ್ಲಿ ಈ ಸೌಧ ಕಾರ್ಯ ನಿರ್ವಹಿಸಲಿ ಎಂದು ಹಾರೈಸಿದ್ದರು. ಮೊದಲ ಪ್ರಧಾನಿಯ ಆಶಯ, ಅಪೇಕ್ಷೆ, ಹಾರೈಕೆಯನ್ನು ರಾಜ್ಯದ ಆಡಳಿತ ಸೂತ್ರ ಹಿಡಿದ ಪಕ್ಷಗಳು, ನಾಯಕತ್ವಗಳು ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ತಂದಿವೆ ಎನ್ನುವುದು ನಮಗೆಲ್ಲರಿಗೂ ವೇದ್ಯವಾಗಿರುವ ವಿದ್ಯಮಾನ. ಕೆಂಗಲ್​ರು ವಿಧಾನಸೌಧದಲ್ಲಿ ಮುಖ್ಯಮಂತ್ರಿಯಾಗಿ ಒಂದು ದಿವಸವೂ ಕೂರಲಿಲ್ಲ. ಆದರೆ ಕಟ್ಟಡ ನಿರ್ವಣದಲ್ಲಿ ಭ್ರಷ್ಟಾಚಾರವಾಗಿದೆ ಎಂಬ ಆರೋಪ ಎದುರಿಸಿ ತನಿಖಾ ಸಮಿತಿ ಮುಂದೆ ಹಾಜರಾಗಿ ತಾವು ತಪ್ಪೆಸಗಿಲ್ಲ ಎಂದು ಹೇಳಬೇಕಾಯಿತು. ಸೆಂಟ್ರಲ್ ಜೈಲಿನಲ್ಲಿ ಕೈದಿಗಳಾಗಿದ್ದವರಲ್ಲಿ ಕಲ್ಲು ಕಾಂಕ್ರೀಟ್ ಕೆಲಸ ಬಲ್ಲ ನೂರು ಜನರನ್ನು ಆಯ್ದು ಕರೆತಂದು ಪೊಲೀಸ್ ಬೆಂಗಾವಲಿನಲ್ಲಿ ಕೆಲಸ ಮಾಡಿಸಿದವರು ಕೆಂಗಲ್. ಖರ್ಚು ಉಳಿಸುವುದೇ ಅವರ ಈ ನಿರ್ಧಾರಕ್ಕೆ ಕಾರಣವಾಗಿತ್ತು. ಸಂಜೆ ಹೊತ್ತು ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಕಲ್ಲ ಬಂಡೆಯ ಮೇಲೆ ಕುಳಿತು ಕಾಮಗಾರಿಯನ್ನು ಖುದ್ದು ಸೂಪರ್​ವೈಸ್ ಮಾಡುತ್ತಿದ್ದವರು ಕೆಂಗಲ್.

ವಿಧಾನಸೌಧ ನಿರ್ವಣದ ವೆಚ್ಚ ಹೆಚ್ಚಾಗಬಾರದೆಂದೇ ಮಾರ್ಬಲ್ ಬಳಸುವ ಸಲಹೆಯನ್ನು ಕೆಂಗಲ್ಲರು ತಳ್ಳಿಹಾಕಿದ್ದರು. ದೇವನಹಳ್ಳಿ ಸಮೀಪದಿಂದ ಗಟ್ಟಿ ಕಲ್ಲುಗಳನ್ನು ತರಿಸಿ ವಾರೆವ್ಹಾ ಎನ್ನುವಂತೆ ಸೌಧವನ್ನು ಮುಂದಿಟ್ಟರು. ಮುಖ್ಯಮಂತ್ರಿಯ ಕಚೇರಿಗೂ ತುಟ್ಟಿ ಬೆಲೆಯ ಹಾಸುಗಲ್ಲುಗಳನ್ನು ಹಾಕಿಸಲು ಅವರು ಒಪ್ಪಲಿಲ್ಲ. ಆದಾಗ್ಯೂ ಆರೋಪ ಅವರನ್ನು ಸುತ್ತಿಕೊಂಡಿತು.

ಯಾರದೋ ದುಡ್ಡು…: ಇಷ್ಟಕ್ಕೂ 60 ಎಕರೆ ಪ್ರದೇಶದಲ್ಲಿರುವ ವಿಧಾನಸೌಧ ನಿರ್ವಣಕ್ಕೆ ತಗುಲಿದ ವೆಚ್ಚವಾದರೂ ಎಷ್ಟು…? 1.84 ಕೋಟಿ ರೂಪಾಯಿ! ಈಗ ಅದೇ ಕಟ್ಟಡದ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ವಿಧಾನಮಂಡಲ ಸಚಿವಾಲಯ ಪಟ್ಟಿ ಮಾಡಿದ ಕಾರ್ಯಕ್ರಮದ ವೆಚ್ಚ 26 ಕೋಟಿ 87 ಲಕ್ಷ ರೂಪಾಯಿ! ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ.

ಆರು ವರ್ಷದ ಸತತ ಬರಗಾಲದ ಬಳಿಕ ಇದೀಗ ರಾಜ್ಯ ನೀರಿನ ಮುಖವನ್ನು ನೋಡುತ್ತಿದೆ. ಕಳೆದು ಹೋದ ಆರೂ ವರ್ಷ, ನೀರಿಲ್ಲದೆ ಬೆಳೆ ಇಲ್ಲದೆ ಜನ, ಜಾನುವಾರು ಮುಖ್ಯವಾಗಿ ರೈತರು ಸಂಕಷ್ಟಕ್ಕೆ ಒಳಗಾದರು. ಈಗ ಯದ್ವಾತದ್ವಾ ಮಳೆ ಸುರಿದು ರೈತರು ಕಡುಕಷ್ಟ ಅನುಭವಿಸುತ್ತಿದ್ದಾರೆ. ಅಂತೂ ಇಂತೂ ಕುಂತಿ ಮಕ್ಕಳಿಗೆ ಸುಖವಿಲ್ಲ ಎನ್ನುತ್ತಾರಲ್ಲ ಹಾಗಾಗಿದೆ ರೈತರ ಪಾಡು. ಇದೆಲ್ಲ ನಮ್ಮ ರಾಜಕಾರಣವನ್ನು ಸತತ ಕಾಡಬೇಕು. ಆದರೆ ರಾಜಕಾರಣ ಸಂವೇದನಾಶೀಲ ಗುಣ ಕಳೆದುಕೊಂಡಿದೆ. ರೈತರ ಸಾಲವನ್ನು ಸಣ್ಣ ಪ್ರಮಾಣದಲ್ಲೇ ಆದರೂ ಮನ್ನಾ ಮಾಡಿರುವ ಸಿದ್ದರಾಮಯ್ಯ ಸರ್ಕಾರ ಮಳೆ ಅನಾಹುತದಿಂದ ಆಗಿರುವ ಹಾನಿ ಎಷ್ಟೆನ್ನುವುದನ್ನು ಇನ್ನಷ್ಟೇ ನಿಖರವಾಗಿ ಅಂದಾಜು ಮಾಡಬೇಕಿದೆ. ಒಣ ಬರ, ಹಸಿ ಬರದಿಂದ ಸಹಸ್ರ ಸಹಸ್ರ ಕೋಟಿ ನಷ್ಟವಾಗಿರುವ ರಾಜ್ಯದಲ್ಲಿ ಒಂದು ಕಟ್ಟಡ 60 ವರ್ಷ ಕಂಡಿದೆ ಎನ್ನುವುದೇ ಭಾರೀ ಸಂಭ್ರಮಕ್ಕೆ ಕಾರಣವಾಗುವುದು ಪರಿಸ್ಥಿತಿಯ ವ್ಯಂಗ್ಯವಲ್ಲವಾದರೆ ಇನ್ನೇನು…?

ನಿಜ, ಇಂಥ ಸಂಭ್ರಮ ಸಡಗರ ಬೇಡವೇ ಬೇಡ ಎಂದಲ್ಲ. ದಸರಾ ನಾಡಹಬ್ಬ. ಕಳೆದ ಎರಡು ಮೂರು ವರ್ಷ ಅದರ ಅದ್ದೂರಿಗೆ ಕಡಿವಾಣ ಹಾಕಿದ್ದು ಬರಗಾಲ. ಸರ್ಕಾರದ ಎಷ್ಟೋ ಜನಕಲ್ಯಾಣ ಯೋಜನೆಗಳು ಆರ್ಥಿಕ ಮುಗ್ಗಟ್ಟಿನಿಂದ ಮುಗ್ಗರಿಸುವಂತಾಗಿದ್ದಕ್ಕೆ ಕಾರಣವೂ ಬರಗಾಲವೇ. ಕರ್ನಾಟಕದ ಪ್ರತಿ ಪ್ರಜೆಯ ತಲೆ ಮೇಲೂ ಲಕ್ಷಾಂತರ ಸಾಲವಿದೆ. ಅಭಿವೃದ್ಧಿಗೆಂದು ಸರ್ಕಾರ ಮಾಡಿರುವ ಸಾಲವಿದು. ಇತ್ತೀಚಿನ ದಶಕಗಳಲ್ಲಿ ಸರ್ಕಾರಗಳು ಜನರ ಮೇಲಿರುವ ಸಾಲದ ಹೊರೆಯನ್ನು ಪೈಪೋಟಿಯಲ್ಲಿ ಹೆಚ್ಚಿಸುತ್ತ ಹೋಗಿವೆ. ಆರ್ಥಿಕವಾಗಿ ದಯನೀಯ ಸ್ಥಿತಿಯಲ್ಲಿರುವಾಗ ವಜ್ರಮಹೋತ್ಸವ, ಸುವರ್ಣ ಮಹೋತ್ಸವಗಳು ಬೇಕೇ ಎಂಬ ಪ್ರಶ್ನೆ ನಮ್ಮಲ್ಲಿ ನಾಚಿಕೆಯನ್ನು ಹೆಚ್ಚಿಸಬೇಕು.

ಶಿಷ್ಟಾಚಾರಕ್ಕೂ ಕೊಕ್: ವಜ್ರಮಹೋತ್ಸವದ ಈಪಾಟಿ ವೆಚ್ಚಕ್ಕೆ ಹಣಕಾಸು ಇಲಾಖೆ ಅಸಮ್ಮತಿ ಸೂಚಿಸಿದ್ದು; ಉಭಯ ಸದನಗಳ ಮುಖ್ಯಸ್ಥರು ಖರ್ಚುವೆಚ್ಚದ ವಿವರವನ್ನು ನೀಡಲು ಶಿಷ್ಟಾಚಾರವನ್ನು ಬದಿಗೊತ್ತಿ ಮುಖ್ಯಮಂತ್ರಿಯನ್ನು ಖುದ್ದು ಭೇಟಿ ಮಾಡಿದ್ದು; ಖರ್ಚಿನ ಮೊತ್ತವನ್ನು ಹತ್ತು ಕೋಟಿಗೆ ಇಳಿಸಲು ಮುಖ್ಯಮಂತ್ರಿ ಸೂಚಿಸಿದ್ದು; ಆ ಮೂಲಕ ಸರ್ಕಾರದ ಬೊಕ್ಕಸಕ್ಕೆ 16.87 ಕೋಟಿ ರೂಪಾಯಿ ಉಳಿದಿದ್ದು… ಇವೆಲ್ಲ ನಂತರದಲ್ಲಿ ನಡೆದ ವಿದ್ಯಮಾನಗಳು. ವಿಧಾನಸಭೆಯಲ್ಲಿ 225 ಹಾಗೂ ವಿಧಾನಪರಿಷತ್​ನಲ್ಲಿ 75 ಸದಸ್ಯರು. ಒಟ್ಟು ಮುನ್ನೂರು ಜನ. ಈ ಎಲ್ಲರಿಗೆ ಬೆಲೆ ಬಾಳುವ ಉಡುಗೊರೆ ಕೊಡಲೆಂದೇ ಮೂರು ಕೋಟಿ ರೂಪಾಯಿ ಪ್ರಸ್ತಾವವನ್ನು ಮಾಡಲಾಗಿತ್ತು. ಎಲ್ಲ ಶಾಸಕರಿಗೂ ಚಿನ್ನದ ಬಿಸ್ಕತ್ತು, ಸಚಿವಾಲಯದ ಸಿಬ್ಬಂದಿಗೆ ಬೆಳ್ಳಿ ತಟ್ಟೆ ನೀಡುವ ಉದ್ದೇಶವಿತ್ತು. ಅಂಥ ಯಾವ ಪ್ರಸ್ತಾಪವೂ ಇರಲಿಲ್ಲವೆಂದೂ ವಿಧಾನಸಭೆ ಅಧ್ಯಕ್ಷ ಕೆ.ಬಿ. ಕೋಳಿವಾಡ ಮತ್ತು ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮತ್ತು ಮುಖ್ಯಮಂತ್ರಿ ಕೂಡಾ ಹೇಳಿದ್ದಾರೆ. ಆದರೆ ಬೆಂಕಿ ಇಲ್ಲದೆ ಹೊಗೆ ಹೇಗೆ ಹಬ್ಬುತ್ತದೆ…? ಪಂಚತಾರಾ ಹೋಟೆಲಿನ ಊಟ, ಕಾಫಿ ತಿಂಡಿ; ವಾಸ್ತವ್ಯ ವೆಚ್ಚ; ಹಾರ ತುರಾಯಿ ಅಲಂಕಾರ ಹೀಗೆ 27 ಕೋಟಿ ಖರ್ಚಿಗೆ ಏನೆಲ್ಲ ಬೇಕೊ ಅದೆಲ್ಲವನ್ನೂ ಪ್ರಸ್ತಾವ ಒಳಗೊಂಡಿತ್ತು. ಇಷ್ಟಕ್ಕೂ ಚಿನ್ನದ ಬಿಸ್ಕತ್ತು, ಬೆಳ್ಳೆ ತಟ್ಟೆ ಅಲ್ಲವಾದರೆ ಶಾಸಕರು, ಸಚಿವಾಲಯ ಸಿಬ್ಬಂದಿಗೆ ಕೊಡಲು ಉದ್ದೇಶಿಸಿದ್ದ ಅಷ್ಟೆಲ್ಲ ಬೆಲೆ ಬಾಳುವ ಉಡುಗೊರೆಯಾದರೂ ಏನಾಗಿದ್ದಿರಬಹುದು…? ಜನ ಕೇಳುವುದಕ್ಕೆ ಎಲ್ಲಿದೆ ಉತ್ತರ? ಇದೇ 25ರ ಬುಧವಾರ ವಿಜೃಂಭಣೆಯ ವಜ್ರಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಅದಕ್ಕೆಂದೇ ವಿಧಾನಮಂಡಲದ ವಿಶೇಷ ಜಂಟಿ ಅಧಿವೇಶನವನ್ನು ಕರೆಯಲಾಗಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ ವಜ್ರಮಹೋತ್ಸವ ಉದ್ಘಾಟಿಸಲಿದ್ದಾರೆ.

ಸಲ್ಲಕ್ಷಣದ ನಡಾವಳಿಯಲ್ಲ: ವಿಧಾನಸೌಧ, ಶಾಸಕರ ಭವನ ವಿಧಾನಮಂಡಲದ ಸಚಿವಾಲಯದ ವ್ಯಾಪ್ತಿಗೆ ಬರುತ್ತವೆ. ಆದರೆ ಅದರ ಎಲ್ಲ ಖರ್ಚುವೆಚ್ಚಕ್ಕೆ ಅದು ಸರ್ಕಾರವನ್ನೇ ಅವಲಂಬಿಸಬೇಕು. ಈ ಕಾರ್ಯಕ್ರಮದ ರೂಪುರೇಷೆ ನಿರ್ಧರಿಸುವ ಸಮಯದಲ್ಲಿ ಸರ್ಕಾರವನ್ನು ದೂರವೇ ಇಡಲಾಯಿತು. ರಾಷ್ಟ್ರಪತಿಯವರನ್ನು ಆಹ್ವಾನಿಸಲು ದೆಹಲಿಗೆ ಹೋಗುವಾಗ ಮುಖ್ಯಮಂತ್ರಿಯವರನ್ನು, ಅವರು ಬಾರದ ಪಕ್ಷದಲ್ಲಿ ಸಂಸದೀಯ ವ್ಯವಹಾರಗಳ ಸಚಿವರನ್ನು ವಿಧಾನಮಂಡಲದ ಮುಖ್ಯಸ್ಥರ ನಿಯೋಗ ಒಳಗೊಳ್ಳಬೇಕಿತ್ತು. ಹಣ ಬೇಕಾದಾಗ ಮಾತ್ರವೇ ಸರ್ಕಾರ, ಮುಖ್ಯಮಂತ್ರಿ ನೆನಪಾಗುವುದು ಸಲ್ಲಕ್ಷಣವಲ್ಲ.

ವಿಧಾನಮಂಡಲ ಅಧಿವೇಶನ ನಡೆಯುವ ಸಮಯದಲ್ಲಿ ಕೆಲವು ಶಾಸಕರ ವರ್ತನೆ ಮುಜುಗರ ಉಂಟುಮಾಡಿರುವ ಹಲವಾರು ಘಟನೆಗಳು ಘಟಿಸಿವೆ. ದಶಕಗಳ ಹಿಂದಿನ ಮಾತು. ವಿಧಾನ ಸಭೆಯಲ್ಲಿ ತರುಣ ಶಾಸಕರೊಬ್ಬರು ತಮಗೆ ಮಾತಾಡಲು ಸ್ಪೀಕರ್ ಅವಕಾಶ ಕೊಡುತ್ತಿಲ್ಲವೆಂದು ಪ್ರತಿಭಟಿಸಿ ಕುರ್ಚಿಯ ಮೇಲೇರಿ ನಿಂತಿದ್ದರು. ಇನ್ನೊಬ್ಬ ಶಾಸಕರು, ತಮ್ಮನ್ನು ಉದ್ದೇಶಪೂರ್ವಕವಾಗೇ ಸ್ಪೀಕರ್ ಕಡೆಗಣಿಸುತ್ತಿದ್ದಾರೆಂದು ಭಾವಿಸಿ ನಾವೇನು ಇಲ್ಲಿಗೆ ಇದು ಮಾಡಲೆಂದು ಬಂದಿದ್ದೇವಾ ಎಂದು ಆಂಗಿಕ ಚರ್ಯು ಮೂಲಕ ಸಿಟ್ಟನ್ನು ಹೊರಹಾಕಿದ್ದರು. ಶಾಸಕರೊಬ್ಬರು ಸ್ವಯಂರಕ್ಷಣೆಗೆಂದು ಸದನದೊಳಗೆ ತರುವುದಕ್ಕೆ ನಿಷಿದ್ಧವಾದ ಪಿಸ್ತೂಲನ್ನು ತಂದಿದ್ದರು. ಮತ್ತೊಬ್ಬ ಶಾಸಕರು ಅನ್ಯಾಯಕ್ಕೆ ಒಳಗಾದ ಹೆಣ್ಣು ಮಗಳ ಗೋಳಿನತ್ತ ಸರ್ಕಾರದ ಗಮನ ಸೆಳೆಯಲು ಸಿಬ್ಬಂದಿಗೆ ಧಮಕಿ ಹಾಕಿ ಆಕೆಯನ್ನೇ ಸದನದ ಒಳಕ್ಕೆ ಕರೆತಂದಿದ್ದರು. ಶಾಸಕರೊಬ್ಬರು ತಾವು ತೊಟ್ಟಿದ್ದ ಅಂಗಿಯನ್ನು ಕಳಚಿ, ಬನಿಯನ್ನನ್ನು ಹರಿದುಕೊಂಡು ಗದ್ದಲವೆಬ್ಬಿಸಿದ್ದರು. ಮತ್ತೊಬ್ಬ ಶಾಸಕರು ಬೇರೆ ಪಕ್ಷದ ಶಾಸಕರಿಗೆ ಪೈಲ್ವಾನರಂತೆ ತೋಳು ತೊಡೆ ತಟ್ಟಿ ಪಂಥಾಹ್ವಾನ ನೀಡಿದ್ದರು. ಅದಕ್ಕೆ ಆ ಶಾಸಕರು ‘ನಮ್ಮೂರಿಗೆ ಬನ್ನಿ ನೋಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದ್ದರು.

ಇಂಥ ಅಪಸವ್ಯಗಳ ನಡುವೆಯೂ ವಿಧಾನಮಂಡಲ ಅನೇಕಾನೇಕ ಜನಪರ ಮಸೂದೆಗಳನ್ನು ಒಪ್ಪಿ ಶಾಸನವನ್ನಾಗಿಸಿದ, ಇತರ ರಾಜ್ಯಗಳಿಗೆ ಮಾದರಿಯಾದ ಇತಿಹಾಸ ಹೊಂದಿದೆ. ಕೆಂಗಲ್ಲರು ವಿಧಾನಸೌಧ ಕಟ್ಟಿ ಮುಗಿಸಿದ ಸಂದರ್ಭದಲ್ಲಿ ಹೈಕೋರ್ಟ್​ಗೆ ಮುಖಾಮುಖಿ ಆಗಿರುವ ಮುಖ್ಯದ್ವಾರದ ಮೇಲೆ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಕಲ್ಲಿನಲ್ಲೇ ಕೆತ್ತಿಸಿದ್ದರು. ದೇವರಿಗಾಗಿ ಮಾಡುವ ಕೆಲಸದಲ್ಲಿ ತಟವಟ, ವಂಚನೆ ಇರುವುದಿಲ್ಲ ಎನ್ನುವುದು ಅವರ ಭಾವನೆಯಾಗಿತ್ತು. ಈಗ ಹಾಗಿದೆಯೇ?

ಈ ಹೊತ್ತು ಬೊಕ್ಕಸಕ್ಕೆ 16.87 ಕೋಟಿ ರೂಪಾಯಿ ಉಳಿತಾಯವಾಗಿದ್ದರೆ ಅದರ ಶ್ರೇಯಸ್ಸಿನಲ್ಲಿ ಸಿಂಹಪಾಲು ಮಾಧ್ಯಮಕ್ಕೆ ಸಲ್ಲಬೇಕು. ಸಣ್ಣದಾಗಿದ್ದ ಹೊಗೆಯ ಜಾಡನ್ನೇ ಹಿಡಿದು ಅಂಧಾದುಂಧಿ ವೆಚ್ಚದ ಸುದ್ದಿಯನ್ನು ಸಾರ್ವಜನಿಕಗೊಳಿಸಿದ ಮಾಧ್ಯಮದ್ದು ಯಾವಾಗಲೂ ಥ್ಯಾಂಕ್ ಲೆಸ್ ಜಾಬ್ ಎನ್ನುವುದು ಬೇರೆ ಮಾತು. ‘ಕಾರ್ಯಕ್ರಮದ ಖರ್ಚುವೆಚ್ಚದ ವಿವರವನ್ನು ಮಾಧ್ಯಮದವರಿಗೇಕೆ ಕೊಡಬೇಕು?’ ಎಂದು ವಿಧಾನಸಭಾಧ್ಯಕ್ಷ ಕೋಳಿವಾಡರು ಕೇಳಿದ ಪ್ರಶ್ನೆಯಲ್ಲಿಯೇ ಎಲ್ಲ ಅರ್ಥವೂ ಅಡಗಿದೆ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top