Wednesday, 17th January 2018  

Vijayavani

ಸೈಟ್‌ಗಾಗಿ ಸಾಹಿತ್ಯ ಬರೀತಾರೆ - ತಲೆಬುಡ ಇಲ್ಲದ ಸಂದೇಶಗಳನ್ನ ಕೊಡ್ತಾರೆ - ಬುದ್ಧಿಜೀವಿಗಳ ಮೇಲೆ ಮುಗಿಬಿದ್ದ ಕಾಂಟ್ರವರ್ಸಿ ಸಚಿವ        ಪೂಜೆ ಮಾಡಲು ಬಂದವನು ಮಗಳನ್ನೇ ಕೇಳ್ದ - ಜನರ ಕೈಗೆ ಸಿಕ್ಕಿ ಹಣ್ಣುಗಾಯಾದ ಪಿಳ್ಳಂಗೋವಿ ಬಾಬಾ - ಚಿತ್ರದುರ್ಗದ ಕಂಚಿಪುರ ಗ್ರಾಮದಲ್ಲಿ ಡೋಂಗಿಗೆ ಥಳಿತ        14 ತಿಂಗಳಿಂದ ಸಂಬಳ ನೀಡದ ಸಕ್ಕರೆ ಕಾರ್ಖಾನೆ - ಚಿಕಿತ್ಸೆಗೆ ಹಣವಿಲ್ಲದೇ ಮಗು ಕಳೆದುಕೊಂಡ ಕಾರ್ಮಿಕ - ರಾಜಕಾರಣಿಗಳ ಕಿತ್ತಾಟಕ್ಕೆ ಹಸುಗೂಸು ಬಲಿ        ಐಪಿಎಸ್‌ ಅಧಿಕಾರಿಗಳಿಗೆ ಸಿಎಂ, ಗೃಹ ಸಚಿವರ ತರಾಟೆ - ಮತೀಯವಾದಿಗಳ ಮೇಲೆ ಕ್ರಮಕ್ಕೆ ಸೂಚನೆ - ವಾರ್ಷಿಕ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕ್ಲಾಸ್        ಗುಜರಾತ್​​​​​ನಲ್ಲಿ ಇಸ್ರೇಲ್​ ಪ್ರಧಾನಿ - ಮೋದಿ ಜತೆಗೆ ಕಾರ್‌ನಲ್ಲಿ ಜಂಟಿ ರೋಡ್‌ ಶೋ - ಸಾಬರಮತಿ ಆಶ್ರಮದಲ್ಲಿ ಚರಕ ಸುತ್ತಿದ ನೆತನ್ಯಾಹು       
Breaking News :

ಸಕಾರಾತ್ಮಕ ಬೆಳವಣಿಗೆ

Wednesday, 03.01.2018, 3:02 AM       No Comments

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮುಖವಾಡ ಮತ್ತೊಮ್ಮೆ ಕಳಚಿ ಬಿದ್ದಿದೆ. ತಾನು ನೀಡುತ್ತಿದ್ದ ಭಾರಿ ಪ್ರಮಾಣದ ಆರ್ಥಿಕ ನೆರವನ್ನು ಭಯೋತ್ಪಾದನೆ ಹರಡಲು ಬಳಸುವ ಪಾಕ್​ನ ಕುಟಿಲ ಬುದ್ಧಿಯನ್ನು ತಡವಾಗಿಯಾದರೂ ಅರ್ಥಮಾಡಿಕೊಂಡಿರುವ ಅಮೆರಿಕ 1,628 ಕೋಟಿ ರೂಪಾಯಿ ಸೇನಾನೆರವನ್ನು ಸ್ಥಗಿತಗೊಳಿಸಿದೆ. ‘ಪಾಕ್ ಅಮೆರಿಕದಿಂದ ಕಳೆದ 15 ವರ್ಷಗಳಲ್ಲಿ 2 ಲಕ್ಷ ಕೋಟಿ ರೂ.ಗಳಷ್ಟು ನೆರವು ಪಡೆದುಕೊಂಡಿದ್ದು, ಭಯೋತ್ಪಾದನೆ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಆ ದೇಶ ಅಮೆರಿಕ ನಾಯಕರನ್ನು ಮೂರ್ಖರನ್ನಾಗಿ ಭಾವಿಸಿದಂತಿದೆ. ಇದನ್ನೆಲ್ಲ ಇನ್ಮುಂದೆ ಸಹಿಸಲಾಗುವುದಿಲ್ಲ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ಅಧಿಕಾರಕ್ಕೆ ಬಂದ ಆರಂಭದಲ್ಲೇ ಟ್ರಂಪ್ ಪಾಕ್ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮಾತನ್ನಾಡಿದ್ದರು. ಅವರು ಅಧಿಕಾರಕ್ಕೆ ಬಂದು 1 ವರ್ಷದ ಬಳಿಕ ಈ ನಿಟ್ಟಿನಲ್ಲಿ ಮುಂದಾಗಿರುವುದು ಸಕಾರಾತ್ಮಕ ಬೆಳವಣಿಗೆ. ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಕೂಡ ಪಾಕ್​ಗೆ ಎಚ್ಚರಿಕೆ ನೀಡಿದ್ದರಾದರೂ ಅದು ವಾಸ್ತವ ಕ್ರಮದ ರೂಪದಲ್ಲಿ ಬದಲಾಗಲೇ ಇಲ್ಲ.

ಪಾಕ್​ಗೆ ಅಮೆರಿಕ ನೆರವು ಸ್ಥಗಿತಗೊಂಡಿರುವುದು ಭಾರತದ ಮಟ್ಟಿಗೆ ಸ್ವಲ್ಪ ಆಶಾದಾಯಕ ಸಂಗತಿ. ಪಾಕ್ ಬೆಂಬಲಿತ ಭಯೋತ್ಪಾದನೆಯ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಭಾರತ ದಶಕಗಳಿಂದಲೂ ಯತ್ನಿಸುತ್ತಿದೆ. ಮೊದಲು ಕಾಶ್ಮೀರ ಕಣಿವೆಗೆ ಸೀಮಿತವಾಗಿದ್ದ ಭಯೋತ್ಪಾದನೆ ದೇಶದ ಇತರೆ ಭಾಗಗಳಿಗೂ ಹಬ್ಬಿದೆ. ಮುಂಬೈ ದಾಳಿ, ಸಂಸತ್ತಿನ ಮೇಲೆ ನಡೆದ ದಾಳಿ, ಪಠಾಣ್​ಕೋಟ್ ವಾಯುನೆಲೆ ಮೇಲೆ ನಡೆದ ದಾಳಿ ಹೀಗೆ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ಪಾಕಿಸ್ತಾನದ ಸ್ಪಷ್ಟ ಕೈವಾಡವಿರುವುದನ್ನು ಭಾರತ ಸಾಕ್ಷ್ಯಗಳ ಸಮೇತ ಸ್ಪಷ್ಟಪಡಿಸಿದೆ. ಈ ಕುರಿತಂತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ದನಿ ಎತ್ತಿದೆ ಎಂಬುದು ಗಮನಾರ್ಹ. ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆ ಅಮೆರಿಕದೊಂದಿಗಿನ ಸ್ನೇಹವನ್ನು ಮತ್ತಷ್ಟು ಸದೃಢವಾಗಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ದ್ವಂದ್ವ ನಿಲುವು ಮತ್ತು ಅದರ ಕರಾಳ ಮುಖಗಳ ಕುರಿತು ಮನದಟ್ಟು ಮಾಡಿಕೊಡುತ್ತಲೇ ಬಂದಿದ್ದಾರೆ. ಪಾಕ್ ಮೇಲೆ ಕ್ರಮ ಕೈಗೊಳ್ಳುವಂತೆ ರಾಜತಾಂತ್ರಿಕ ಒತ್ತಡವನ್ನು ಸೃಷ್ಟಿಸಿದ್ದಾರೆ. ಈ ಪ್ರಯತ್ನಗಳು ಒಂದಿಷ್ಟು ಪರಿಣಾಮಕಾರಿಯಾಗಿ ಫಲ ನೀಡಿವೆ ಎಂಬುದು ಸಮಾಧಾನದ ಸಂಗತಿ. ಭಾರತದಲ್ಲಿ ಭಯೋತ್ಪಾದನೆಯ ಅಟ್ಟಹಾಸ ಕಡಿಮೆಯಾದರೆ ಶಾಂತಿ ನೆಲೆಸುವುದರೊಂದಿಗೆ ಉಗ್ರನಿಗ್ರಹಕ್ಕಾಗಿ ಬಳಸುತ್ತಿರುವ ಅಪಾರ ಪ್ರಮಾಣದ ಆರ್ಥಿಕ ಸಂಪನ್ಮೂಲವನ್ನು ಅಭಿವೃದ್ಧಿ ನಿಟ್ಟಿನಲ್ಲಿ ವಿನಿಯೋಗಿಸಬಹುದಾಗಿದೆ.

ಪಾಕಿಸ್ತಾನಕ್ಕೆ ಅಮೆರಿಕದ ಸೇನಾ ನೆರವು ನಿಂತ ಮಾತ್ರಕ್ಕೆ ಅದನ್ನು ಮಹತ್ವದ ಗೆಲುವು ಎಂದು ತೀರ್ವನಿಸಲು ಸಾಧ್ಯವಿಲ್ಲ. ಏಕೆಂದರೆ, ಅಮೆರಿಕ ಹಿಂದೆ ಸರಿಯುತ್ತಿದ್ದಂತೆ ಚೀನಾ ಪಾಕ್​ನ ನೆರವಿಗೆ ಮುಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಚೀನಾ ಪಾಕಿಸ್ತಾನದೊಂದಿಗೆ ಘನಿಷ್ಟ ಸಂಬಂಧವನ್ನು ಬೆಳೆಸಿಕೊಂಡಿದೆ. ಚೀನಾ ಕೂಡ ಭಾರತವನ್ನು ಎಲ್ಲ ರಂಗಗಳಲ್ಲಿ ತಡೆಯಲು ಹವಣಿಸುತ್ತಿದ್ದು, ಈ ನಿಟ್ಟಿನಲ್ಲಿ ಪಾಕ್​ನ ನೆರವು ಪಡೆದುಕೊಳ್ಳುತ್ತಿದೆ. ಮುಖ್ಯವಾಗಿ, ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಭಯೋತ್ಪಾದಕರು ಪಾಕ್​ನಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದಾರೆ. ಹೀಗಾಗಿ, ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸಲು ಇನ್ನಷ್ಟು ಪ್ರಯತ್ನಗಳು ನಡೆಯಬೇಕಿದೆ. ಅಮೆರಿಕ ಕೂಡ ಇನ್ನಷ್ಟು ಕಠಿಣ ನಿಲುವುಗಳನ್ನು ತಳೆಯಬೇಕಿದ್ದು, ಉಗ್ರ ಸಂಘಟನೆ ಮತ್ತು ಶಿಬಿರಗಳನ್ನು ನಿಮೂಲನಗೊಳಿಸಲು ಪಾಕ್ ಮೇಲೆ ಒತ್ತಡ ತರಬೇಕಿದೆ.

Leave a Reply

Your email address will not be published. Required fields are marked *

Back To Top