Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಸಕಾರಾತ್ಮಕ ಬೆಳವಣಿಗೆ

Saturday, 16.12.2017, 3:02 AM       No Comments

ಮುಸ್ಲಿಂ ಸಮುದಾಯದಲ್ಲಿ ಆಚರಣೆಯಲ್ಲಿರುವ ‘ತ್ರಿವಳಿ ತಲಾಕ್’ ಪದ್ಧತಿಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಮುಸ್ಲಿಂ ಮಹಿಳಾ (ವೈವಾಹಿಕ ಹಕ್ಕುಗಳ ರಕ್ಷಣೆ) ಕರಡು ಮಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಈ ಬಾರಿಯ ಅಧಿವೇಶನದಲ್ಲಿ ಅದು ಮಂಡನೆಯಾಗಲಿದೆ. ಮೌಖಿಕ, ಲಿಖಿತ ಮತ್ತು ಯಾವುದೇ ಇಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ನೀಡುವ ತಲಾಕ್ ಅಸಾಂವಿಧಾನಿಕ ಹಾಗೂ ತಲಾಕ್ ನೀಡಿದ ಪತಿಯನ್ನು ಅಪರಾಧಿ ಎಂದು ಪರಿಗಣಿಸುವಿಕೆ, ಆತನ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ, ಅಪರಾಧ ಸಾಬೀತಾದರೆ ಆತನಿಗೆ ಮೂರು ವರ್ಷ ಜೈಲುಶಿಕ್ಷೆ ಇವೇ ಮೊದಲಾದ ಮಹತ್ವದ ಅಂಶಗಳು ಸದರಿ ಕರಡು ಮಸೂದೆಯಲ್ಲಿ ಅಂತರ್ಗತವಾಗಿವೆ. ಎನ್​ಡಿಎ ಒಕ್ಕೂಟಕ್ಕೆ ಲೋಕಸಭೆಯಲ್ಲಿ ಸಾಕಷ್ಟು ಬಲವಿರುವುದರಿಂದ ಇದು ಅನುಮೋದನೆಗೊಳ್ಳುವುದರಲ್ಲಿ ಸಂದೇಹವೇನೂ ಇಲ್ಲ. ಆದರೆ ರಾಜ್ಯಸಭೆಯಲ್ಲಿ ಇದಕ್ಕೆ ದಕ್ಕುವ ಪ್ರತಿಕ್ರಿಯೆ ಎಂಥದ್ದು ಎಂಬುದು ಸದ್ಯಕ್ಕೆ ಕುತೂಹಲ ಹುಟ್ಟಿಸಿರುವ ಸಂಗತಿ.

ತಮ್ಮ ಪಾಲಿಗೆ ಬೇಗುದಿಯಾಗಿ ಪರಿಣಮಿಸಿರುವ ತ್ರಿವಳಿ ತಲಾಕ್ ಪದ್ಧತಿ ರದ್ದಾಗಬೇಕು ಎಂಬುದು ದಶಕಗಳಿಂದಲೂ ಮುಸ್ಲಿಂ ಸಮುದಾಯದ ಮಹಿಳೆಯರ ಆಶಯವಾಗಿತ್ತು ಎನ್ನಬೇಕು. ಆದರೆ, ಈ ಆಶಯದ ಮಂಡನೆಗೆ ಸಮರ್ಥ ವೇದಿಕೆ ಮತ್ತು ಸಂದರ್ಭ ದಕ್ಕದೆ ಅದು ಕ್ಷೀಣದನಿಯೇ ಆಗಿ ಉಳಿದುಬಿಟ್ಟಿತ್ತು. ಆದರೆ ತ್ರಿವಳಿ ತಲಾಕ್ ಸಂವಿಧಾನಬಾಹಿರ ಹಾಗೂ ಕ್ರೌರ್ಯದ ನಡೆ ಎಂದು ಅಭಿಪ್ರಾಯಪಟ್ಟ ಅಲಹಾಬಾದ್ ಹೈಕೋರ್ಟ್, ಮುಸ್ಲಿಂ ಮಹಿಳೆಯರ ಸಂಕಟ-ಸಂಕಷ್ಟ ತಪ್ಪಿಸುವ ನಿಟ್ಟಿನಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿಗೆ ತಿದ್ದುಪಡಿ ಮಾಡಬಹುದೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಕಳೆದ ಡಿಸೆಂಬರ್​ನಲ್ಲಿ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದಾಗ, ತ್ರಿವಳಿ ತಲಾಕ್ ಪದ್ಧತಿ ರದ್ದಾಗಬೇಕು ಎಂಬ ಮುಸ್ಲಿಂ ಮಹಿಳಾ ಸಂಘಟನೆಗಳ ಬೇಡಿಕೆಗೆ ಒಂದಷ್ಟು ಬಲ ದಕ್ಕಿದಂತಾಯಿತು ಎನ್ನಬೇಕು. ಜತೆಗೆ, ಕಳೆದ ಆಗಸ್ಟ್​ನಲ್ಲಿ ತೀರ್ಪು ಪ್ರಕಟಿಸಿದ್ದ ಸವೋಚ್ಚ ನ್ಯಾಯಾಲಯದ ಪಂಚಸದಸ್ಯ ಪೀಠ, ಮುಸ್ಲಿಂ ಪುರುಷರು ತತ್​ಕ್ಷಣ ಮೂರುಬಾರಿ ತಲಾಕ್ ಎಂದು ಹೇಳಿ ನೀಡುವ ವಿಚ್ಛೇದನ ಅಸಾಂವಿಧಾನಿಕ ಎಂದು ಹೇಳಿದ್ದರ ಜತೆಗೆ, ಆರು ತಿಂಗಳೊಳಗಾಗಿ ತ್ರಿವಳಿ ತಲಾಕ್ ನಿಷೇಧದ ಕಾಯ್ದೆ ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು ಎಂಬುದಿಲ್ಲಿ ಸ್ಮರಣಾರ್ಹ.

ಒಟ್ಟಿನಲ್ಲಿ ಈ ಪದ್ಧತಿಯ ರದ್ದತಿಗೆ ಅಗತ್ಯವಾದ ಪೂರ್ವಭಾವಿ ಭೂಮಿಕೆಯೇನೋ ಸಿದ್ಧವಾಗಿದೆ. ಇಲ್ಲಿ ಮತ್ತೊಂದು ಸೂಕ್ಷ್ಮವನ್ನೂ ಗಮನಿಸಬೇಕು. ನ್ಯಾಯಾಲಯದ ಸ್ಪಷ್ಟ ನಿರ್ದೇಶನವಿಲ್ಲದೆ ಈ ವಿಷಯವನ್ನು ಸರ್ಕಾರ ಕೈಗೆತ್ತಿಕೊಂಡಿದ್ದಿದ್ದರೆ ಅದಕ್ಕೆ ರಾಜಕೀಯ ಲೇಪ ದಕ್ಕಿಬಿಡುತ್ತಿತ್ತು ಮತ್ತು ರಾಜಕೀಯ ಹಿತಾಸಕ್ತಿಗಳ ಕಾರಣದಿಂದಾಗಿ ಕಾಯ್ದೆ-ಕಾನೂನಿನ ರೂಪಣೆ ಹಾಗೂ ಅನುಷ್ಠಾನದ ಹಾದಿ ಅಂದುಕೊಂಡಷ್ಟು ಸುಲಭವಾಗುತ್ತಿರಲಿಲ್ಲ. ಆದರೆ, ನ್ಯಾಯಾಲಯದ ಅಂಗಳದಿಂದಲೇ ಸ್ಪಷ್ಟ ನಿರ್ದೇಶನ ಬಂದಿರುವುದರಿಂದ ಸದರಿ ಕರಡು ಮಸೂದೆಗೆ ಹಸಿರು ನಿಶಾನೆ ದಕ್ಕುವುದು ನಿಶ್ಚಿತ ಎಂಬುದು ರಾಜಕೀಯ ತಜ್ಞರ ಅಭಿಮತ.

ಆದರೆ, ಈ ಕರಡು ಮಸೂದೆ ವಿರುದ್ಧ ಕೆಲ ಮುಸ್ಲಿಂ ಸಂಘಟನೆಗಳು ಕಿಡಿಕಾರಿರುವುದು ಮತ್ತು ಇದು ಸಮುದಾಯದ ಹಕ್ಕುಗಳನ್ನು ಕಸಿಯುವ ಯತ್ನ ಎಂದು ಅಭಿಪ್ರಾಯಪಟ್ಟಿರುವುದು ಸರ್ವಥಾ ಸಮರ್ಥನೀಯವಲ್ಲ. ಇದು ಆ ಸಮುದಾಯದ ಮಹಿಳೆಯರಿಗಾಗುತ್ತಿರುವ ಅನ್ಯಾಯವನ್ನು ತಡೆಗಟ್ಟುವ, ತನ್ಮೂಲಕ ಆರೋಗ್ಯಕರ ಮತ್ತು ಸಮಾನಹಕ್ಕುಗಳ ಸಮಾಜವೊಂದನ್ನು ಕಟ್ಟುವ ಯತ್ನವೇ ಹೊರತು, ಇದು ಏಕಪಕ್ಷೀಯವೂ ಅಲ್ಲ ಅಥವಾ ಸಮುದಾಯವೊಂದನ್ನು ದಮನಿಸಲು ರೂಪಿಸಿರುವ ಕುತಂತ್ರವೂ ಅಲ್ಲ ಎಂಬುದನ್ನು ಇಂಥವರು ಅರಿಯಬೇಕು.

 

Leave a Reply

Your email address will not be published. Required fields are marked *

Back To Top