Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :

ಸಕಾರಾತ್ಮಕ ಬೆಳವಣಿಗೆ

Wednesday, 22.11.2017, 3:02 AM       No Comments

ಜಾಗತಿಕ ಮೌಲ್ಯಮಾಪನಾ ಸಂಸ್ಥೆ ‘ಮೂಡಿಸ್’ ಭಾರತದ ಹಣಕಾಸು ಸ್ಥಿತಿಗತಿಯ ರೇಟಿಂಗನ್ನು ಮೇಲ್ದರ್ಜೆಗೇರಿಸಿರುವುದು ವ್ಯಾಪಾರೋದ್ಯಮ ವಲಯದಲ್ಲಿ ಸಂಭ್ರಮ ಮೂಡಿಸಿದ್ದರೆ, ಹೂಡಿಕಾ ವಲಯದಲ್ಲಿ ಭರವಸೆಯ ಆಶಾಕಿರಣವನ್ನು ಚೆಲ್ಲಿದೆ. ರಾಷ್ಟ್ರದ ಆರ್ಥಿಕತೆ ಮತ್ತು ಅದರ ಪೂರಕ ಅಂಶಗಳು ಚೇತರಿಕೆಯ ಹಳಿಯೇರಿರುವುದರ ದ್ಯೋತಕವಿದು. ಇದಕ್ಕೂ ಮುನ್ನ, ವಿಶ್ವಬ್ಯಾಂಕ್​ನ ಉದ್ಯಮಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಬಡ್ತಿ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತ ಪ್ರತಿಷ್ಠೆ ಹೆಚ್ಚಿತ್ತು. ಪ್ರಸ್ತುತ ಮೂಡಿಸ್ ನೀಡಿರುವ ಮೇಲ್ದರ್ಜೆಯು ಮತ್ತೊಂದು ಗರಿಯೇ ಸರಿ. ಜಿಡಿಪಿ ಬೆಳವಣಿಗೆ ಕಂಡಿರುವುದರ ಜತೆಗೆ, ಕೇಂದ್ರ ಸರ್ಕಾರ ಕೈಗೊಂಡ ಅಧಿಕ ಮುಖಬೆಲೆಯ ಹಳೆಯ ನೋಟುಗಳ ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿಯಂಥ ಕ್ರಾಂತಿಕಾರಕ ಉಪಕ್ರಮಗಳು ಈ ಸಾಧನೆಯ ನೇಪಥ್ಯದಲ್ಲಿವೆ ಎಂಬುದನ್ನು ತಳ್ಳಿಹಾಕಲಾಗದು.

ಇಂಥ ಯಾವುದೇ ಸಾಧನೆಗಳು ಮತ್ತು ಅವಕ್ಕೆ ಸಂದ ಇಂಥ ಮೆಚ್ಚುಗೆಗಳು ಸಂಭ್ರಮ-ಸಮಾಧಾನದ ಅನುಭೂತಿಯನ್ನು ಸಂಬಂಧಪಟ್ಟವರಲ್ಲಿ ಹುಟ್ಟುಹಾಕುವುದು ನಿಜವಾದರೂ, ಅದೇ ಕನವರಿಕೆಯಲ್ಲಿ ಮುಂದಿರುವ ಮತ್ತಷ್ಟು ಸವಾಲುಗಳನ್ನು ಮರೆಯುವಂತಾಗಬಾರದು ಎಂಬುದು ಬಲ್ಲವರ ಹಿತೋಕ್ತಿ. ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ಈ ಸಾಧನೆಗಳನ್ನು ಅದರ ರಾಜಕೀಯ ಎದುರಾಳಿಗಳು ‘ವಾಡಿಕೆಯಂತೆ’ ಅಲ್ಲಗಳೆದು ಅಪಸ್ವರ ಎತ್ತಿದ್ದಾರಾದರೂ, ಆ ನಿರಾಕರಣೆಯಲ್ಲಿ ಧ್ವನಿತವಾಗಿರುವ ಒಂದಷ್ಟು ತರ್ಕಬದ್ಧ ಅಂಶಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಆಘಾತಕ್ಕೊಳಗಾಗಿದ್ದ ಆರ್ಥಿಕತೆಯಲ್ಲಿ ಚೇತರಿಕೆಯಾಗಿರುವಂತೆ ಕಂಡುಬಂದಿದೆಯಾದರೂ, ನೋಟು ಅಮಾನ್ಯೀಕರಣದ ಒಟ್ಟಾರೆ ಪರಿಣಾಮವನ್ನು ಇನ್ನೂ ಕೂಲಂಕಷವಾಗಿ ವಿಶ್ಲೇಷಿಸಬೇಕಿದೆ ಮತ್ತು ಜಿಎಸ್​ಟಿ ಅನುಷ್ಠಾನದಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯ ಪರಿಗಣನೆಯಾದ ನಂತರದ ಒಂದಷ್ಟು ಆರ್ಥಿಕ ಅಂಕಿ-ಅಂಶಗಳಿನ್ನೂ ಹೊರಬೀಳಬೇಕಿದೆ; ಹೀಗಾಗಿ ಆರ್ಥಿಕತೆ ಏರುಗತಿಯಲ್ಲಿದೆ ಎಂದು ಈಗಿಂದೀಗಲೇ ಪರಿಗಣಿಸಲಾಗದು ಎಂಬುದು ಎದುರಾಳಿಗಳ ವಾದ. ಎರಡನೆಯದಾಗಿ, ಸೌದಿ ಅರೇಬಿಯಾದಲ್ಲಿನ ಇತ್ತೀಚಿನ ವಿದ್ಯಮಾನಗಳಿಂದಾಗಿ ಕಚ್ಚಾತೈಲದ ಬೆಲೆಯಲ್ಲಿ ಹಠಾತ್ ಏರಿಕೆಯಾಗಿದೆ ಮತ್ತು ಇಂಥದೇ ಮತ್ತಷ್ಟು ಜಾಗತಿಕ ಸಮಸ್ಯೆಗಳು ಭಾರತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲವು ಎಂಬುದು ಮತ್ತೊಂದು ವಾದ. ಇವು ಒಂದೆರಡು ಪ್ರಾಸಂಗಿಕ ಉಲ್ಲೇಖಗಳಷ್ಟೇ. ಇದನ್ನು ಹೊರತುಪಡಿಸಿ, ಶ್ರೀಸಾಮಾನ್ಯರ ಗ್ರಹಿಕೆಗೆ ದಕ್ಕದ ಮತ್ತು ರಾಜತಾಂತ್ರಿಕ ಮಟ್ಟದಲ್ಲಷ್ಟೇ ಅನುಭವಕ್ಕೆ ಬರುವ ಹತ್ತು ಹಲವು ಸಮಸ್ಯೆ-ಸವಾಲುಗಳು ಭಾರತದೆದುರು ಇವೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂಥ ಎಲ್ಲ ಸವಾಲುಗಳನ್ನು ಜಯಿಸಿದಾಗ ಮಾತ್ರವಷ್ಟೇ ಅದು ನಿಜಸಾಧನೆಯಾದೀತು.

ಇಲ್ಲಿ ಮತ್ತೊಂದು ಅಂಶವನ್ನೂ ಪರಿಗಣಿಸಬೇಕು. ಜಾಗತಿಕ ಮಟ್ಟದ ಯಾವುದೋ ಸಂಸ್ಥೆ/ಏಜೆನ್ಸಿಗಳು ಭಾರತದ ಬೆನ್ನುತಟ್ಟಿವೆ ಎಂದಮಾತ್ರಕ್ಕೆ ಭಾರತದ ಮತದಾರರು ಅದಕ್ಕೆ ಅಂಗೀಕಾರದ ಮುದ್ರೆಯೊತ್ತಿಬಿಡುತ್ತಾರೆ ಎಂದೇನಲ್ಲ. ಆರ್ಥಿಕ ಚೇತರಿಕೆಯಂಥ ಕಣ್ಣಿಗೆ ಗೋಚರವಾಗದ ಸಂಗತಿಗಳಿಗಿಂತ ಹೆಚ್ಚಾಗಿ, ನಿರುದ್ಯೋಗ ಸಮಸ್ಯೆ, ಆರ್ಥಿಕ ಅಸಮಾನತೆ, ಏರಿಕೆಯಾಗದ ವೇತನಮಟ್ಟ, ಕೃಷಿವಲಯದ ಆತಂಕ ಇವೇ ಮೊದಲಾದ ದೃಗ್ಗೋಚರ ಸಮಸ್ಯೆಗಳು ಭಾರತೀಯರನ್ನು ಕಾಡುತ್ತಿರುವುದು ಸತ್ಯ. ಇವುಗಳ ನಿವಾರಣೆಗೆ ಕಟಿಬದ್ಧ ಯತ್ನಗಳಾದಲ್ಲಿ ಮತ್ತು ಅದು ಫಲ ನೀಡುವಂತಾದಲ್ಲಿ, ಆಳುಗರ ಮೇಲಿನ ಮತದಾರ ಬಂಧುಗಳ ವಿಶ್ವಾಸ ಮತ್ತಷ್ಟು ಹೆಚ್ಚುವುದಕ್ಕೆ ಅನುವಾದೀತು.

Leave a Reply

Your email address will not be published. Required fields are marked *

Back To Top