Friday, 19th January 2018  

Vijayavani

ರಾಜ್ಯದಲ್ಲಿ ಶುರುವಾಗಿದೆ ಪಕ್ಷಾಂತರ ಪರ್ವ - ಮೂರು ಪಕ್ಷದೊಳಗೆ ಆಪರೇಶನ್​​ ಪಾಲಿಟಿಕ್ಸ್​​ - ಗೆಲುವಿಗಾಗಿ ಹೊಂದಾಣಿಕೆಗೂ ಸೈ ಎಂದ ನಾಯಕರು        ಮತ್ತೆ ಅನಂತಕುಮಾರ್​ ಹೆಗಡೆ ಉದ್ಧಟತನ - ಮಹಾಭಾರತದ ಜತೆ ವಿರೋಧಿಗಳ ಹೋಲಿಕೆ - ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹ        ಪ್ಲಾಸ್ಟಿಕ್​​ ಕವರ್​​ನಲ್ಲಿ ರಾಶಿ ರಾಶಿ ತಲೆ ಬುರುಡೆ - ಮೈಸೂರಿನ ರಸ್ತೆ ಬದಿ ತಲೆಬುರುಡೆಗಳು ಪತ್ತೆ - ಬುರುಡೆಗಳ ರಾಶಿ ಕಂಡು ಜನರಲ್ಲಿ ಆತಂಕ        ಗಡಿಯಲ್ಲಿ ಪಾಕ್​​ ಮತ್ತೆ ಪುಂಡಾಟ - ಅಪ್ರಚೋದಿತ ದಾಳಿಗೆ ಇಬ್ಬರು ಸಾವು - ಭಾರತದ ಯೋಧರಿಂದಲೂ ಪ್ರತಿ ದಾಳಿ         ಪದ್ಮಾವತ್​ ಚಿತ್ರಕ್ಕೆ ತಪ್ಪದ ಸಂಕಷ್ಟ - ಒವೈಸಿಯಿಂದಲೂ ಚಿತ್ರ ಬಿಡುಗಡೆಗೆ ವಿರೋಧ - ಚಿತ್ರತಂಡದ ಅರ್ಜಿ ತಳ್ಳಿ ಹಾಕಿದ ಸುಪ್ರೀಂಕೋರ್ಟ್​​​​       
Breaking News :

ಸಕಾರಾತ್ಮಕ ಬೆಳವಣಿಗೆ

Tuesday, 14.11.2017, 3:00 AM       No Comments

ಕಲ್ಲು ತೂರಾಟದ ಘಟನೆಗಳಿಂದ ಜಮ್ಮು ಮತ್ತು ಕಾಶ್ಮೀರ ಸುದ್ದಿಯ ನೆಲೆಯಾಗಿದ್ದುದು ಗೊತ್ತಿರುವಂಥದ್ದೇ. ಆದರೆ ಕಳೆದ ವರ್ಷಕ್ಕೆ ಹೋಲಿಸಿದಾಗ, ಪ್ರಸಕ್ತ ವರ್ಷದಲ್ಲಿ ಕಲ್ಲುತೂರಾಟದ ಘಟನೆಗಳಲ್ಲಿ ಶೇ. 90ರಷ್ಟು ಕುಸಿತವಾಗಿದೆ ಎಂದು ಅಲ್ಲಿನ ಪೊಲೀಸ್ ಮಹಾನಿರ್ದೇಶಕರು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಜಮ್ಮು-ಕಾಶ್ಮೀರವೀಗ ಯಥಾಸ್ಥಿತಿಗೆ ಮರಳಿದಂತಾಗಿದೆ. ಇದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆಯೇ ಸರಿ. ಜಮ್ಮು-ಕಾಶ್ಮೀರದ ಸ್ಥಿತಿಗತಿಯಲ್ಲಿ ಇಂಥದೊಂದು ಆಹ್ಲಾದಕರ ಬದಲಾವಣೆಯಾಗಿರುವುದಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ನಡೆಸಿದ ದಾಳಿಗಳಷ್ಟೇ ಕಾರಣವಲ್ಲ. ಅಧಿಕ ಮುಖಬೆಲೆಯ ಹಳೆಯ ನೋಟುಗಳ ಅಮಾನ್ಯೀಕರಣ ಮತ್ತು ಉಗ್ರವಾದಿ ಸಂಘಟನೆಗಳ ಅಗ್ರಗಣ್ಯ ನಾಯಕರ ವಿರುದ್ಧ ಕೈಗೊಳ್ಳಲಾದ ಕಟ್ಟುನಿಟ್ಟಿನ ಕ್ರಮಗಳೂ ಸೇರಿದಂತೆ ಹತ್ತು ಹಲವು ಅಂಶಗಳ ಕೊಡುಗೆ ಇದರ ನೇಪಥ್ಯದಲ್ಲಿವೆ ಎಂಬುದನ್ನು ಅಲ್ಲಗಳೆಯಲಾಗದು. ಗಡಿಗೆ ತಾಕಿಕೊಂಡಂತಿರುವ ಕಣಿವೆರಾಜ್ಯದ ಭೌಗೋಳಿಕತೆ, ಅಲ್ಲಿ ಸಾಮಾನ್ಯವಾಗಿ ತಾಂಡವವಾಡುವ ಉದ್ವಿಗ್ನ ಸ್ಥಿತಿ, ಕೋಮುಸೂಕ್ಷ್ಮತೆ ಇವೇ ಮೊದಲಾದ ಅಂಶಗಳ ದುರ್ಬಳಕೆ ಮಾಡಿಕೊಂಡ ವಿಚ್ಛಿದ್ರಕಾರಕ ಶಕ್ತಿಗಳು ಮತ್ತು ‘ಗಡಿಯಾಚೆಗಿನ’ ಕುತಂತ್ರಗಾರರು, ರಾಜ್ಯದ ಯುವಪೀಳಿಗೆಯ ಮನಸ್ಸನ್ನು ಕೆಡಿಸಿ ಇಲ್ಲವೇ ಮನಸ್ಸಿನಲ್ಲಿ ‘ಧರ್ಮಕಾರಣ’ವನ್ನು ತುಂಬಿ, ಪ್ರಭುತ್ವದ ಮತ್ತು ಅದು ಕೈಗೊಳ್ಳುವ ವಿಭಿನ್ನ ಕಾರ್ಯಚಟುವಟಿಕೆಗಳ ವಿರುದ್ಧ ಕಲ್ಲುತೂರಾಟ ನಡೆಸಿ ಕ್ಷೋಭೆ ಹುಟ್ಟುಹಾಕಿದ್ದು ಗೊತ್ತಿರುವಂಥದ್ದೇ. ಆದರೀಗ, ಹಲವು ಕ್ರಮಗಳಿಂದಾಗಿ ಇಂಥ ವಿಚ್ಛಿದ್ರಕಾರಕ ಶಕ್ತಿಗಳ ಕೈಕಟ್ಟಿಹಾಕಿದಂತಾಗಿದೆ ಮತ್ತು ಕಲ್ಲುತೂರಲು ಸಿದ್ಧವಿದ್ದ ಯುವಸಮೂಹಕ್ಕೆ ಯಾವ ರೀತಿಯಲ್ಲೂ ಉತ್ತೇಜಿಸಲಾಗದಂಥ ಇಕ್ಕಟ್ಟು-ಬಿಕ್ಕಟ್ಟನ್ನು ಅವು ಎದುರಿಸುವಂತಾಗಿದೆ. ಇದರಿಂದಾಗಿ ಅಲ್ಲಿ ಶಾಂತಿಯ ಅಲೆ ಪಸರಿಸುವಂತಾಗಿರುವುದು ಸಮಾಧಾನದ ಸಂಗತಿಯೇ.

ಆದರಿಲ್ಲಿ, ಈ ಬೆಳವಣಿಗೆಯ ಮತ್ತೊಂದು ಮಗ್ಗುಲನ್ನೂ ಅವಲೋಕಿಸಬೇಕಾಗುತ್ತದೆ. ‘ಕದಡಿದ ನೀರು’ ಸದ್ಯಕ್ಕೇನೋ ತಿಳಿಯಾಗಿದೆ; ಹಾಗಂತ ಇದು ಸಾರ್ವಕಾಲಿಕ ಸ್ಥಿತಿ ಎನ್ನಲಾಗದು. ಕಾಲ ಸರಿದಂತೆ ಪ್ರತ್ಯೇಕತಾವಾದಿಗಳು ಮತ್ತು ವಿಧ್ವಂಸಕ ಶಕ್ತಿಗಳು ತಮ್ಮ ಕಾರ್ಯಸಾಧನೆಗೆ ಯುವಶಕ್ತಿಗಳನ್ನು ಮತ್ತೊಮ್ಮೆ ಬಳಸಿಕೊಳ್ಳುವಂತಾಗಬಾರದೆಂದರೆ, ಯುವಸಮೂಹದಲ್ಲಿ ಯುಕ್ತಾಯುಕ್ತ ವಿಷಯಗಳ ಕುರಿತು ಅರಿವು ಮೂಡಿಸಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಯತ್ನಿಸಬೇಕಿದೆ. ಅವರು ಹಣದ ಪ್ರಲೋಭನೆಗೆ ಸಿಲುಕಿ ವಾಮಮಾರ್ಗ ಹಿಡಿಯುವಂತಾಗುವುದಕ್ಕೆ ನಿರುದ್ಯೋಗದ ಸಮಸ್ಯೆಯ ತೀವ್ರತೆಯೇ ಕಾರಣ ಎಂದಾದಲ್ಲಿ, ಅದರ ತಹಬಂದಿಗಿರುವ ಮಾಗೋಪಾಯಗಳ ಕುರಿತು ಪಕ್ಷಾತೀತವಾಗಿ ಚಿಂತನ-ಮಂಥನ ನಡೆಸಬೇಕಿದೆ. ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಗಲಭೆಕೋರರ, ಶಾಂತಿ ಕದಡುವವರ ಬಂಧನಕ್ಕೆ ಮುಂದಾಗಿದ್ದುದರ ಜತೆಗೆ, ಜಮ್ಮು-ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆಗಳೂ ನಿಧಾನಕ್ಕೆ ಗರಿಗೆದರುತ್ತಿರುವುದು ಅಲ್ಲಿ ಕಂಡುಬಂದಿರುವ ಮಹತ್ತರ ಬದಲಾವಣೆಗೆ ಕೊಡುಗೆ ನೀಡಿವೆ ಎಂಬ ಅಭಿಪ್ರಾಯವೂ ಇದೆ. ಜತೆಗೆ, ಹೀಗೆ ಕಲ್ಲುತೂರಾಟದಲ್ಲಿ ತೊಡಗುವ, ಪೊಲೀಸರನ್ನು ಘಾಸಿಗೊಳಿಸುವ ಮತ್ತು ತಮ್ಮದೇ ಆಸ್ತಿಪಾಸ್ತಿಗಳಿಗೆ ಹಾನಿಯುಂಟುಮಾಡಿಕೊಳ್ಳುವ ಹೆಜ್ಜೆ ನಿರರ್ಥಕ ಎಂಬುದು ಅಲ್ಲಿನ ಜನರಿಗೂ ಅರ್ಥವಾಗಿದೆ ಎಂಬುದು ಪೊಲೀಸ್ ವರಿಷ್ಠರ ಅಭಿಮತ. ಇಂಥದೊಂದು ಅರಿವು ಮತ್ತು ಶಾಂತಸ್ಥಿತಿ ನಿರಂತರವಾದರೆ ಅದು ಜಮ್ಮು-ಕಾಶ್ಮೀರದ ಪಾಲಿಗಷ್ಟೇ ಅಲ್ಲ, ಒಂದಿಡೀ ದೇಶದ ಸುರಕ್ಷತೆ-ಸುಭದ್ರತೆಯ ಪಾಲಿನ ಶುಭಸುದ್ದಿ ಎಂಬುದು ದಿಟ.

Leave a Reply

Your email address will not be published. Required fields are marked *

Back To Top