Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಸಕಾರಾತ್ಮಕ ಚಿಂತನೆಯಿಂದ ವ್ಯಕ್ತಿತ್ವಕ್ಕೆ ಮೆರುಗು

Saturday, 28.01.2017, 2:16 AM       No Comments

ನೆಕಟ್ಟಲು ತಳಪಾಯ ಗಟ್ಟಿಯಿರಬೇಕು. ಹಾಗೆಯೇ, ನಮ್ಮ ಚಿಂತನೆಯ ಕ್ರಮಕ್ಕೂ ಒಂದು ತಳಹದಿ ಇರುತ್ತದೆ. ಕಟ್ಟಡದ ಅಡಿಪಾಯವನ್ನು ಒಮ್ಮೆ ಸದೃಢವಾಗಿ ನಿರ್ವಿುಸಿದರೆ ಮುಗಿಯಿತು. ಆದರೆ ಮಿದುಳಿನ ಚಿಂತನೆಯ ಅಡಿಪಾಯ ಕಾಲಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಅದನ್ನು ಸುವ್ಯವಸ್ಥೆಯಲ್ಲಿಟ್ಟುಕೊಳ್ಳುವುದು ನಮ್ಮದೇ ಜವಾಬ್ದಾರಿ.

‘ಕಾಗ್ನಿಟಿವ್ ಥಾಟ್ ಪ್ರೋಸೆಸಿಂಗ್ ಲೆವೆಲ್’- ಇದನ್ನು ಶುದ್ಧಾಂಗವಾಗಿ ಕನ್ನಡದಲ್ಲೇ ಹೇಳಬೇಕೆಂದರೆ ‘ಸಂಸ್ಕರಣಕ್ಕೆ ಒಳಗಾಗುವ ಮೂಲಚಿಂತನೆಯ ಮಟ್ಟ’ ಎನ್ನಬೇಕು. ಈ ಎರಡು ಶೀರ್ಷಿಕೆಗಳೂ ಗೊಂದಲವನ್ನು ಹುಟ್ಟಿಸುವಂಥವೇ! ಶೀರ್ಷಿಕೆಯ ವಿಷಯವನ್ನು ಬಿಡೋಣ. ಇದು ನಮ್ಮ ಮಿದುಳಿನಲ್ಲಿ ಹೇಗಾಗುತ್ತದೆ ಎನ್ನುವುದನ್ನು ಯೋಚಿಸೋಣ. ಮನೆಕಟ್ಟಲು ತಳಪಾಯ ಗಟ್ಟಿಯಿರಬೇಕೆನ್ನುವುದು ಎಲ್ಲರಿಗೂ ತಿಳಿದ ವಿಷಯವೇ! ಹಾಗೇ, ನಮ್ಮ ಚಿಂತನೆಯ ಕ್ರಮಕ್ಕೂ ಒಂದು ತಳಹದಿ ಇರುತ್ತದೆ. ಈ ತಳಹದಿ ಹೇಗೆ ನಿರ್ವಣವಾಗುತ್ತದೆ? ಬಾಲ್ಯದಿಂದ ನಮ್ಮ ಪರಿಸರ, ಹೆತ್ತವರು, ಶಾಲೆ, ಸ್ನೇಹಿತರು ಮತ್ತು ನಾವೇ ಪಡೆದುಕೊಳ್ಳುವ ಅನುಭವಗಳು ಇವೆಲ್ಲದರಿಂದ ಸಿಕ್ಕುವ ಸಂದೇಶಗಳಿಂದ ಈ ಅಡಿಪಾಯ ಸಿದ್ಧಗೊಳ್ಳುತ್ತದೆ. ಆದರೆ ಇವೆಲ್ಲವೂ ಚಿಂತನೆಯ ಮೂಲದ್ರವ್ಯಗಳು ಅಷ್ಟೇ. ಅನಂತರ ಅಲ್ಲೊಂದು ‘ಥಾಟ್ ಪ್ರೋಸೆಸಿಂಗ್’ ಅನ್ನುವುದೂ ಇದೆ. ಉದಾಹರಣೆಗೆ ಬೇಳೆ, ಉಪ್ಪು-ಹುಳಿ-ಖಾರ ಎಲ್ಲವೂ ಇದ್ದರೆ ‘ಸಾರು’ ಎನ್ನುವುದು ಆಗುವುದಿಲ್ಲವಲ್ಲ. ಅದನ್ನೊಂದು ಹದದಲ್ಲಿ ಬೇಯಿಸಿ ಕುದಿಸಿ ಮಾಡಬೇಕಷ್ಟೆ? ಹತ್ತು ಜನರಿಗೆ ಇದೇ ವಸ್ತುಗಳನ್ನು ಕೊಟ್ಟು, ಅಳತೆಯನ್ನೂ ಹೇಳಿ, ಸಮಯವನ್ನೂ ನಿಗದಿಪಡಿಸಿದರೂ ಹತ್ತೂ ಜನ ಮಾಡಿದ ‘ಸಾರು’ ಖಂಡಿತಾ ಒಂದೇ ರುಚಿಯಲ್ಲಿರುವುದಿಲ್ಲ. ಯಾಕೆ ಹೀಗಾಗುತ್ತದೆಯೆಂದರೆ ಪ್ರತಿಯೊಬ್ಬರೂ ಅವರವರ ಕ್ರಮದಲ್ಲಿ ಮಾಡಿರುತ್ತಾರೆ. ಇದನ್ನೇ ಸಂಸ್ಕರಿಸುವ ‘ಹದ’ವೆನ್ನುತ್ತಾರೆ.

ಬದುಕೂ ಹಾಗೆಯೇ, ನಮ್ಮ ನಮ್ಮ ಹದದಲ್ಲೇ ನಡೆಯುತ್ತಿರುತ್ತದೆ. ಈ ‘ಹದ’ವನ್ನು ನಾವು ನಮಗೆ ಬೇಕಾದಂತೆ ಮಿದುಳಿನೊಳಗೆ ಕೈ ಹಾಕಿ ನಿರ್ವಿುಸಿಕೊಳ್ಳಲಾಗುವುದಿಲ್ಲ. ಮಿದುಳೇ ನಾವು ಕೊಡುವ ಮೂಲದ್ರವ್ಯಗಳಿಂದ ತನ್ನ ‘ಹದ’ವನ್ನು ನಿರ್ವಿುಸಿಕೊಳ್ಳುತ್ತದೆ. ಮೂಲದ್ರವ್ಯ ‘ಪಾಸಿಟಿವ್’ ಆಗಿದ್ದರೆ ‘ಹದ’ ವ್ಯಕ್ತಿತ್ವಕ್ಕೆ ಒಳ್ಳೆಯ ಮೆರುಗನ್ನು ತರುತ್ತದೆ. ಮೂಲದ್ರವ್ಯದಲ್ಲೇ ‘ನೆಗೆಟಿವ್’ ಸಂದೇಶಗಳಿದ್ದರೆ ಈ ‘ಹದ’ವೂ ವಕ್ರದಾರಿಯನ್ನು ಹಿಡಿಯುತ್ತದೆ. ಉದಾಹರಣೆಗೆ ನಾವು ಅಲ್ಲಲ್ಲಿ ಗಮನಿಸುವ ಘಟನೆಗಳನ್ನೇ ತೆಗೆದುಕೊಳ್ಳೋಣ. ಒಬ್ಬ ತಾಯಿ ಮರಣಿಸಿದ್ದಾಳೆ. ಅವಳ ಸುತ್ತ ಅವಳ ನಾಲ್ಕು ಜನ ಬೆಳೆದ ಮಕ್ಕಳು ಕುಳಿತಿದ್ದಾರೆ. ಎಲ್ಲರೂ ಅಳುತ್ತಿದ್ದಾರೆ. ದುಃಖವೆನ್ನುವುದು ಎಲ್ಲರಿಗೂ ಒಂದೇ. ಆದರೆ ಆ ನಾಲ್ಕೂ ಜನರ ದುಃಖದ ‘ಹದ’ಗಳು ಬೇರೆಬೇರೆಯಾಗಿರುತ್ತವೆ ಎನ್ನುತ್ತದೆ ಮನಶ್ಶಾಸ್ತ್ರ. ಇನ್ನು ‘ಲೆವೆಲ್’ ಎನ್ನುವ ವಿಚಾರಕ್ಕೆ ಬಂದರೆ, ಈ ‘ಥಾಟ್ ಪ್ರೋಸೆಸಿಂಗ್’ ಎನ್ನುವುದು ಒಬ್ಬೊಬ್ಬರಲ್ಲೂ ಬೇರೆಬೇರೆ ಮಟ್ಟದಲ್ಲಿರುತ್ತದೆ. ಇಲ್ಲಿ ವಿದ್ಯಾವಂತ-ಅವಿದ್ಯಾವಂತ, ಹಣವಂತ-ಬಡವ, ಸ್ಪುರದ್ರೂಪಿ-ಕುರೂಪಿ, ಬಲವಂತ-ಶಕ್ತಿಹೀನ ಹೀಗೆ ವಿಭಾಗವಾಗುವುದಿಲ್ಲ. ಪ್ರತಿಯೊಬ್ಬರಿಗೂ ಬೇರೆಬೇರೆಯದೇ ಆದ ‘ಕಾಗ್ನಿಟಿವ್ ಥಾಟ್ ಪ್ರೋಸೆಸಿಂಗ್ ಲೆವೆಲ್’ ಇರುತ್ತದೆ.

ನಾನು ಬಾಲ್ಯದಲ್ಲಿ ಕಂಡ ಒಂದು ಕೌತುಕವಿದು. ನಮ್ಮ ಮನೆಗೆ ಹಾಲಮ್ಮ ಎನ್ನುವ ಕೆಲಸದವಳು ಬರುತ್ತಿದ್ದಳು. ಅವಳು ಎಮ್ಮೆಯನ್ನೂ ಸಾಕುತ್ತಾ ನಮ್ಮ ಮನೆಗೆ ಹಾಲನ್ನೂ ಕೊಡುತ್ತಿದ್ದುದರಿಂದ ನಮಗೆ ಅವಳು ‘ಹಾಲಮ್ಮ’. ಅವಳ ಗಂಡನದೊಂದು ಮಹಾದರ್ಬಾರು! ಇವಳಿಗೊಂದು ಗುಡಿಸಲು ಕಟ್ಟಿಕೊಟ್ಟು, ಎಮ್ಮೆಯನ್ನು ತೆಗೆದುಕೊಟ್ಟು, ಎರಡು ಮಕ್ಕಳಾದ ಮೇಲೆ ಅವನು ಊರಿನಿಂದ ಪರಾರಿಯಾದ. ಸ್ವಲ್ಪಕಾಲದ ನಂತರ ಮತ್ತೊಬ್ಬ ಹೆಂಡತಿಯನ್ನು ಕಟ್ಟಿಕೊಂಡು ಬಂದ! ಅವಳು ಗರ್ಭಿಣಿಯಾಗಿದ್ದಳು. ಹಾಲಮ್ಮ ಗಂಡನ ಜತೆ ಜಗಳವಾಡಿದರೂ ಅವನ ಹೊಸ ಹೆಂಡತಿಯನ್ನು ಸತ್ಕರಿಸಿ ಬಾಣಂತನ ಮಾಡಿದಳು. ಆ ಹೆಣ್ಣು ಹುಟ್ಟಿದ ಕೂಸನ್ನು ಇವಳಿಗೇ ಬಿಟ್ಟು ಹೇಳದೇ ಕೇಳದೇ ಪರಾರಿಯಾಯಿತು! ಅವಳ ಗಂಡನ ಹತ್ತಿರ ಅವನ ಹಿರಿಯರು ಮಾಡಿಟ್ಟ ಒಂದಷ್ಟು ಆಸ್ತಿಯಿತ್ತು. ಅಲ್ಲದೇ ಹಣಕಾಸಿನ ಬಡ್ಡಿವ್ಯವಹಾರ ಮಾಡುತ್ತಿದ್ದ. ಈ ಕಾರಣಕ್ಕೇ ಊರೂರು ತಿರುಗುತ್ತಿದ್ದ. ಯಾವುದಾದರೂ ಊರಿನಲ್ಲಿ ಬಡ ಹೆಣ್ಣಿದ್ದು ಅವಳ ಹೆತ್ತವರು ಮದುವೆ ಮಾಡಲಾಗದೇ ಪರದಾಡುತ್ತಿದ್ದರೆ, ಈ ಪುರುಷೋತ್ತಮ ದಿಢೀರ್ ‘ವರಮಹಾಶಯ’ನಾಗಿಬಿಡುತ್ತಿದ್ದ. ಹೀಗೇ ಅವನು ಮದುವೆಯಾಗುವುದು, ಹುಡುಗಿ ಬಸುರಿಯಾಗುವುದು, ಹಾಲಮ್ಮನ ಉಡಿಗೆ ಬಾಣಂತನಕ್ಕೆ ಬಂದುಬೀಳುವುದು! ಹಾಲಮ್ಮನ ಗಂಡನ ಉಪಟಳ ತಡೆಯಲಾರದೇ ಹುಟ್ಟಿದ ಮಗುವನ್ನು ಬಿಟ್ಟೋ ಕಟ್ಟಿಕೊಂಡೋ ಓಡಿಹೋಗುವುದು. ಹೀಗಾಗಿ ಹಾಲಮ್ಮನ ಮಕ್ಕಳ ಸಂಖ್ಯೆ ಆರಾಗಿಹೋಯಿತು! ತನ್ನೆಲ್ಲ ಸವತಿಯರಿಗೂ ತಾಯಿಯಂತೆ ಬಾಣಂತನ ಮಾಡುವುದು, ಅವರು ಬಿಟ್ಟುಹೋದ ಮಗುವನ್ನು ತನ್ನದೇ ಕರುಳಕುಡಿಯೆಂಬಂತೆ ಸಾಕುವುದು ಹಾಲಮ್ಮನ ಬದುಕಿನ ಭಾಗವಾಗಿಬಿಟ್ಟಿತು!

ನನಗೆ ನನ್ನಕ್ಕನಿಗೆ ಇದೊಂದು ಚೋದ್ಯದ ವಿಷಯ, ಅವಳನ್ನು ತಮಾಷೆ ಮಾಡುವುದಕ್ಕೆ ಒದಗುತ್ತಿದ್ದ ವಸ್ತು. ‘ಏನ್ ಪೆದ್ದಿ ಹಾಲಮ್ಮ ನೀನು. ನಿನ್ನ ಗಂಡ ಹೊಸಾ ಹೆಂಡತೀನ ಕರ್ಕೆಂಡ್ ಬಂದ್ರೆ ಮನೆಗ್ಯಾಕೆ ಸೇರಿಸ್ತೀ? ಬಾಣಂತನ ಯಾಕೆ ಮಾಡ್ತೀ? ಆಗಲ್ಲ ಅಂತ ಆಚೆ ಅಟ್ಟಬಾರ್ದ?’. ಅದಕ್ಕೆ ಅವಳ ಉತ್ತರ ಸರಾಗ- ‘ಔದ್ರಮ್ಮ ನನ್ನ್ ಗಂಡ ಕೆಟ್ಟವನೇ. ಅವನ್ಜೊತೀಗೆ ಜಗಳ ಕಾಯ್ತೀನಿ. ಆದ್ರೆ ಅವನ್ನ ನಂಬುಕೊಂಡ್ ಬಂದಿರ್ತಾವಲ್ಲ ಆ ಎಣ್ಣುಗಳದೇನು ತಪ್ಪು ಏಳ್ರಿ? ಪಾಪ ಬಿಮ್ಮನ್ಸೇರು ನಾನು ಆಚೆ ಅಟ್ಟಿದ್ರೆ ಅವೆಲ್ಲಿಗೋದಾವು? ಮನ್​ಸತ್ವ ಅನ್ನೋದು ಬ್ಯಾಡವ್ರಾ?’. ನಮ್ಮಂಥಾ ಈ ಕಾಲದ ಮಹಿಳೆಯರ ಕಣ್ಣಲ್ಲಿ ಹಾಲಮ್ಮನ ಮೇಲಾಗುತ್ತಿರುವುದು ಮಹಾಶೋಷಣೆ. ಆದರೆ ಹಾಲಮ್ಮ ಯೋಚಿಸುವುದು ಕೇವಲ ‘ಮನುಷ್ಯತ್ವ’ದ ಬಗ್ಗೆ ಮಾತ್ರ! ಈಗ ಗೊತ್ತಾಯಿತಲ್ಲ? ಹಳ್ಳಿಯಲ್ಲಿದ್ದ ಅನಕ್ಷರಸ್ಥೆ ಹಾಲಮ್ಮನ ‘ಕಾಗ್ನಿಟಿವ್ ಥಾಟ್ ಪ್ರೋಸೆಸಿಂಗ್ ಲೆವೆಲ್’ ಯಾವ ರೀತಿಯದು ಎಂದು?

ಇವತ್ತಿನ ಯುವಪೀಳಿಗೆಗೆ ಮತ್ತು ಮಧ್ಯವಯಸ್ಕರಿಗೂ ಸಿನಿಮಾ ಮತ್ತು ಟಿ.ವಿ. ಮಾಧ್ಯಮಗಳು ಕೊಡುತ್ತಿರುವ ಸಂದೇಶಗಳಿಂದ ಅನೇಕರ ‘ಥಾಟ್ ಪ್ರೋಸೆಸಿಂಗ್ ಲೆವೆಲ್’ ಕುಸಿಯುತ್ತಿದೆ ಎಂದು ಮನೋವಿಜ್ಞಾನ ಅಧ್ಯಯನವೊಂದು ತಿಳಿಸುತ್ತದೆ. ನನ್ನ ಪರಿಚಿತರು ಹೇಳಿದ ಸುದ್ದಿಯಿದು. ಅವರ ಮನೆಯಲ್ಲಿ ಬಹಳ ವರ್ಷಗಳಿಂದ ಒಬ್ಬ ತರುಣಿ ಮನೆಗೆಲಸ ಮಾಡುತ್ತಿದ್ದಳಂತೆ. ಮಕ್ಕಳೆಲ್ಲಾ ಉದರನಿಮಿತ್ತಕ್ಕಾಗಿ ಪರದೇಶ ಸೇರಿದ ಮೇಲೆ, ದಂಪತಿಗಳಿಬ್ಬರೇ ಇದ್ದ ಈ ಮನೆಗೆ ಈ ಕೆಲಸದವಳು ಮನೆಯ ಮಗಳಾಗಿದ್ದಳು. ಚೆನ್ನಾಗಿಯೇ ಕೆಲಸ ಮಾಡುತ್ತಿದ್ದ ಇವಳಿಗಿದ್ದ ಒಂದು ಕೆಟ್ಟ ಚಟವೆಂದರೆ ತಿಂಗಳಿಗೆ ಹತ್ತು ದಿನವಾದರೂ ಚಕ್ಕರ್ ಹಾಕುವುದು. ಒಮ್ಮೆ ‘ಉಸಾರಿಲ್ಲ’ ಎನ್ನುವ ನೆವ ಹೇಳಿ 18 ದಿನ ಚಕ್ಕರ್ ಹಾಕಿ ನಂತರ ಬಂದಳು. ಆದರೂ ಮನೆಯೊಡತಿ ತಿಂಗಳ ಸಂಬಳವನ್ನು ಪೂರ್ತಾ ಅವಳ ಕೈಲಿಟ್ಟು ‘ನಾಳೆ ನಮ್ಮ ಮನೆಗೆ ನೆಂಟರು ಬರುತ್ತಿದ್ದಾರೆ, ಸ್ವಲ್ಪ ಬೇಗ ಬಾ’ ಎಂದು ವಿನಂತಿಸಿದರು. ಹಿಂದೆ ಅನೇಕ ಬಾರಿ ಹೀಗೆ ನೆಂಟರು ಬರುತ್ತಾರೆಂದರೆ ತನ್ನದೇ ಮನೆಯೇನೋ ಎನ್ನುವಷ್ಟು ಮುತುವರ್ಜಿಯಿಂದ ಶುಚಿಗೊಳಿಸುತ್ತಿದ್ದಳು. ಆದರೆ ಈ ಬಾರಿ ಮಾರನೇ ದಿನ ಮತ್ತೆ ಕೆಲಸಕ್ಕೆ ಚಕ್ಕರ್ ಹಾಕಿದಳು. ಈಗೆಲ್ಲಾ ಕೆಲಸದವರ ಹತ್ತಿರ ಮೊಬೈಲ್ ಫೋನ್ ಇರುತ್ತದಲ್ಲ? ಅದೂ ಒಂದು ಅನುಕೂಲವೇ ತಾನೆ? ಈಕೆ ಫೋನ್ ಮಾಡಿ ‘ಏನಮ್ಮ ನಿನ್ನ ಕಥೆ? ನಿನ್ನೆ ತಾನೇ ಪೂರ್ತಾ ಸಂಬಳ ಕೊಟ್ಟು ಹೇಳಿದ್ದೆ ಅಲ್ಲವಾ? ಯಾಕೆ ಇವತ್ತು ಚಕ್ಕರ್?’ ಎಂದು ಕೇಳಿದರು. ‘ನಮ್ಮ ಮನೆಗೇ ನೆಂಟರು ಬಂದಿದ್ದಾರೆ, ನಾನೇ ಎಲ್ಲಿಗೋ ಹೋಗಿದ್ದೆ’- ಹೀಗೆ ಅಸಂಬದ್ಧ ಉತ್ತರ ಕೊಟ್ಟಳು. ಇವರಿಗೆ ನಖಶಿಖಾಂತ ಕೋಪ ಬಂದಿದೆ. ‘ಏನು ಹೀಗೆಲ್ಲಾ ಬೇಕಾಬಿಟ್ಟಿ ಮಾತಾಡುತ್ತೀ? ಹೋಗಲಿಬಿಡು ನಮ್ಮ ಮನೆಗೆ ನೀನು ಬರಲೇಬೇಡ’ ಎಂದು ಫೋನ್ ಇಟ್ಟಿದ್ದಾರೆ. ಅದು ಅವಳಿಗೆ ತುಂಬಾ ‘ಹರ್ಟ್’ ಮಾಡಿತಂತೆ! ನಾಲ್ಕು ದಿನವಾದರೂ ಅವಳ ಪತ್ತೆಯೇ ಇಲ್ಲ. ಹಲವಾರು ಬಾರಿ ಫೋನ್ ಮಾಡಿದರೂ ಉತ್ತರವೇ ಇಲ್ಲ. ಕಡೆಗೊಮ್ಮೆ ಯಾರ ಹತ್ತಿರವೋ ಹೇಳಿಕಳಿಸಿದಾಗ ಅವಳು ಕೊಟ್ಟ ಉತ್ತರವೇನು ಗೊತ್ತೇ?- ‘ನನ್ನನ್ನು ಬರಬೇಡ ಎಂದರಲ್ಲ? ನನಗೆಷ್ಟು ಹರ್ಟ್ ಆಯಿತು ಗೊತ್ತಾ? ತಪ್ಪು ಮಾಡಿದ್ದಾರೆ, ಅದಕ್ಕೇ ಬೇಡಿಕೊಳ್ಳುತ್ತಿದ್ದಾರೆ. ಅನುಭವಿಸಲಿ ಇನ್ನೂ ಸ್ವಲ್ಪ ದಿನ!’.

ನಿಜ, ಮನೆಗೆಲಸ ಮಾಡುವ ಹೆಣ್ಣುಮಕ್ಕಳಿಗೂ ಆತ್ಮಾಭಿಮಾನವಿರುತ್ತದೆ. ಅದನ್ನು ಕೆಲಸ ಮಾಡಿಸಿಕೊಳ್ಳುವವರು ಗೌರವಿಸಬೇಕು. ಆದರೆ ಮನೆಯ ಮಗಳಂತೆ ನೋಡಿಕೊಳ್ಳುತ್ತಿದ್ದವರನ್ನೂ ಅರ್ಥಮಾಡಿಕೊಳ್ಳಲಿಲ್ಲವೆಂದರೆ ಹೇಗೆ? ಅವಳ ಹತ್ತಿರ ಇದ್ದ ಫೋನು, ಅವಳು ಹಾಕುತ್ತಿದ್ದ ಬಟ್ಟೆಗಳು, ಅವಳ ಮನೆಗೊಂದು ಟಿ.ವಿ., ಜತೆಗೆ ಪರದೇಶದಿಂದ ಮಕ್ಕಳು ಬರುವಾಗ ಅವಳಿಗೂ ಉಡುಗೊರೆಗಳು! ಈ ಮಮತೆಯನ್ನೇ ಅರ್ಥಮಾಡಿಕೊಳ್ಳಲಾಗದಷ್ಟು ಸ್ವಾರ್ಥಚಿಂತನೆಯನ್ನು ಬೆಳೆಸಿಕೊಂಡರೆ ಹೇಗೆ? ಟಿ.ವಿ. ಧಾರಾವಾಹಿಗಳಲ್ಲಿನ ಖಳನಾಯಕಿಯರು ಕೊಡುತ್ತಿರುವ ಸಂದೇಶ ಇದೇ. ‘ನನ್ನ ಎರಡು ಕಣ್ಣುಗಳು ಹೋದರೂ ಪರವಾಗಿಲ್ಲ, ನನಗೆ ಇಷ್ಟವಿಲ್ಲದವರ ಒಂದು ಕಣ್ಣನ್ನಾದರೂ ಚುಚ್ಚಬೇಕು’

ಕಟ್ಟಡದ ಅಡಿಪಾಯ ಒಮ್ಮೆ ಹಾಕಿದರೆ ಮುಗಿಯಿತು. ಆದರೆ ಮಿದುಳಿನ ಚಿಂತನೆಯ ಅಡಿಪಾಯ ಕಾಲಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಅದನ್ನು ಸುವ್ಯವಸ್ಥೆಯಲ್ಲಿಟ್ಟುಕೊಳ್ಳುವುದು ನಮ್ಮದೇ ಜವಾಬ್ದಾರಿ.

(ಲೇಖಕರು ಆಪ್ತಸಲಹೆಗಾರರು, ಬರಹಗಾರರು)

 

Leave a Reply

Your email address will not be published. Required fields are marked *

Back To Top