Monday, 11th December 2017  

Vijayavani

1. ಮತ್ತಷ್ಟು ಹದಗೆಟ್ಟ ರವಿ ಬೆಳಗೆರೆ ಆರೋಗ್ಯ – ಕಾಲು ನೋವು, ನಿಶ್ಯಕ್ತಿಯಿಂದ ಪತ್ರಕರ್ತನ ನರಳಾಟ – ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ 2. ಮಧ್ಯಾಹ್ನ 12ಕ್ಕೆ ಕೋರ್ಟ್​ಗೆ ಹಾಜರ್ – ರವಿ ಬೆಳಗೆರೆ ವಿರುದ್ಧ ಮತ್ತೊಂದು ಕೇಸ್‌ – ಪತ್ರಕರ್ತನಿಗೆ ಜೈಲಾ..? ಬೇಲಾ..? 3. ಬಳ್ಳಾರಿಯಲ್ಲಿ ಗಣಿಗಾರಿಕೆ ವಿರುದ್ಧ ಕೂಗು – ಕುಮಾರಸ್ವಾಮಿ ಬೆಟ್ಟ ಉಳಿವಿಗೆ ಸಂಡೂರು ಬಂದ್ – ಅಂಗಡಿ, ಮುಂಗಟ್ಟುಗಳಿಗೆ ಬೀಗ, ಶಾಲಾ-ಕಾಲೇಜಿಗೆ ರಜೆ 4. ರಾಜ್ಯ ಸರ್ಕಾರದಿಂದ ಬಿಜೆಪಿ ಹತ್ತಿಕ್ಕುವ ಕೆಲಸ – ರ‍್ಯಾಲಿಯಲ್ಲಿ ಭಾಗಿಯಾದವ್ರ ವಿರುದ್ಧ ಟ್ರಾಫಿಕ್‌ ಪೊಲೀಸ್‌ ಕೇಸ್ – ಕಲಬುರಗಿಯಲ್ಲಿ ಖಾಕಿ, ಕೇಸರಿ ಕದನ 5. ಪ್ರಧಾನಿ ಮೋದಿ ರ‍್ಯಾಲಿಗೆ ಅವಕಾಶವಿಲ್ಲ – ಮೆಗಾ ರೋಡ್​ ಶೋಗೆ ಅನುಮತಿ ನಿರಾಕರಣೆ – ರಾಹುಲ್ ಸಮಾವೇಶಕ್ಕೂ ಗುಜರಾತ್ ಪೊಲೀಸರ ತಡೆ
Breaking News :

ಸಂಸ್ಕಾರ ತಂದ ಸೆನ್ಸಾರ್ ಪೇಚು

Friday, 13.10.2017, 3:04 AM       No Comments

| ಗಣೇಶ್ ಕಾಸರಗೋಡು

ಬೆಂಗಳೂರಿನ ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಬಗ್ಗೆ ನಮ್ಮ ನಿರ್ವಪಕರು ಕೆಂಡ ಕಾರುತ್ತ ಒಂದರ ಹಿಂದೊಂದರಂತೆ ನೀಡುತ್ತಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ 47 ವರ್ಷಗಳ ಹಿಂದೆ ನಡೆದ ಸೆನ್ಸಾರ್ ಮಂಡಳಿ ಬಗೆಗಿನ ವಾದ- ವಿವಾದಗಳ ವಿಷಯಕ್ಕೆ ಬರುವುದಿದ್ದರೆ..

ಆ ಚಿತ್ರದ ಹೆಸರು; ‘ಸಂಸ್ಕಾರ‘. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅವರು ಬರೆದ ಕಾದಂಬರಿ ಆಧಾರಿತವಾಗಿ ತಯಾರಾದ ಅದೇ ಹೆಸರಿನ ಕನ್ನಡ ಚಿತ್ರ. ಈ ಚಿತ್ರಕ್ಕೆ ಮತ್ತೊಬ್ಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದರು. ಪಟ್ಟಾಭಿರಾಮ ರೆಡ್ಡಿ ನಿರ್ವಿುಸಿ, ನಿರ್ದೇಶಿಸಿದ ಈ ಚಿತ್ರಕ್ಕೆ ಸಂಗೀತ ನೀಡಿರುವವರು ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್. ನೆನಪಿಡಿ; ಸಹ ನಿರ್ದೇಶನ ಮಾಡಿದವರು ಸಿಂಗೀತಂ ಶ್ರೀನಿವಾಸ್ ರಾವ್. ಗಿರೀಶ್ ಕಾರ್ನಾಡ್, ಪಿ. ಲಂಕೇಶ್, ಸಿ.ಆರ್. ಸಿಂಹ, ಸ್ನೇಹಲತಾ ರೆಡ್ಡಿ, ದಾಶರಥಿ ದೀಕ್ಷಿತ್ ಮೊದಲಾದ ಅತಿರಥ, ಮಹಾರಥರ ತಾರಾಗಣವಿರುವ ಈ ಚಿತ್ರಕ್ಕೆ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿಯೂ ಸಲ್ಲಿಕೆಯಾಗಿದೆ. ಇದಲ್ಲದೆ, ಇತರ 15 ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ‘ಸಂಸ್ಕಾರ’ ಚಿತ್ರ ಸೆನ್ಸಾರ್ ಹಂತದಲ್ಲಿ ಪಟ್ಟ ಪಾಡು ಈ ಅಂಕಣದ ವಸ್ತು.

ಆಗ ಪ್ರಾದೇಶಿಕ ಸೆನ್ಸಾರ್ ಮಂಡಳಿ ಮದ್ರಾಸ್​ನಲ್ಲಿತ್ತು. ಭಾಷೆ ಬಾರದ ಅಧಿಕಾರಿಗಳ ಆಟಾಟೋಪದ ಕಾಲವದು. ಇಂಥ ಸಮಯದಲ್ಲಿ ‘ಸಂಸ್ಕಾರ’ ಚಿತ್ರ ಸಿದ್ಧಗೊಂಡು ಸೆನ್ಸಾರ್​ಗಾಗಿ ಮದ್ರಾಸ್ ಕಚೇರಿ ಸೇರಿತು. ತಿಂಗಳುಗಳೇ ಕಳೆದರೂ ಅಲ್ಲಿಂದ ಯಾವುದೇ ಮಾಹಿತಿ ಇಲ್ಲ. ದಿಕ್ಕೆಟ್ಟ ಪಟ್ಟಾಭಿರಾಮ ರೆಡ್ಡಿಯವರು ವಿಚಾರಿಸಲು ಮದ್ರಾಸ್​ಗೆ ಹೋದರು. ಆಗ ಅವರಿಗೆ ಸಿಕ್ಕ ಮಾಹಿತಿ ಅಂದರೆ; ನಿಮ್ಮ ಚಿತ್ರಕ್ಕೆ ನಮ್ಮ ಸೆನ್ಸಾರ್ ಮಂಡಳಿ ಅನುಮತಿಯನ್ನು ನಿರಾಕರಿಸಿದೆ ಮತ್ತು ನಿಷೇಧವನ್ನು ಹೇರಿದೆ… – ವಿವಾದಾಸ್ಪದ ಕಥೆಯನ್ನು ಹೊಂದಿದೆ ಎನ್ನುವ ಕಾರಣಕ್ಕೆ ಚಿತ್ರವನ್ನು ನಿಷೇಧಿಸಿದ್ದರೂ, ಇದೇ ಕಾರಣವನ್ನು ಸ್ಪಷ್ಟವಾದ ವಿವರಣೆಯೊಂದಿಗೆ ಸೆನ್ಸಾರ್ ಮಂಡಳಿ ನೀಡಲಿಲ್ಲ. ತಲೆ ಬಿಸಿ ಮಾಡಿಕೊಂಡ ಪಟ್ಟಾಭಿರಾಮ ರೆಡ್ಡಿಯವರು ಸೆನ್ಸಾರ್ ಮಂಡಳಿ ವಿರುದ್ಧ ಒಂದು ಆಂದೋಲನವನ್ನೇ ರೂಪಿಸಿದರು! ಈ ಆಂದೋಲನ ಜನರಿಂದಲೇ ಶುರುವಾಗುವಂತೆ ನೋಡಿಕೊಂಡರು. ಜನತೆ ಕೂಡ ಇದು ತಮ್ಮದೇ ಸಮಸ್ಯೆ ಎನ್ನುವಂತೆ ಸ್ಪಂದಿಸಿದರು. ಆ ಕಾಲದಲ್ಲಿ ಇದೊಂದು ದೊಡ್ಡ ಆಂದೋಲನವಾಗಿ ರೂಪುಗೊಳ್ಳಲು ಕಾರಣವಾದದ್ದೇ ಸಾರ್ವಜನಿಕರ ಬೆಂಬಲ.

ನೊಂದು ಬೆಂದ ನಿರ್ವಪಕರೂ ಆಗಿರುವ ನಿರ್ದೇಶಕ ಪಟ್ಟಾಭಿರಾಮ ರೆಡ್ಡಿಯವರು ಅನಿವಾರ್ಯವಾಗಿ ಕೇಂದ್ರ ವಾರ್ತಾ ಸಚಿವಾಲಯಕ್ಕೆ ಮನವಿ ಸಲ್ಲಿಸಿ ತಿಂಗಳಾನುಗಟ್ಟಲೆ ಕಾದರು. ಹೃದಯವಿಲ್ಲದ ಅಧಿಕಾರಿಗಳಿಂದಾಗಿ ಈ ಮನವಿ ಧೂಳು ತಿನ್ನುತ್ತ ಕಪಾಟು ಸೇರಿಕೊಂಡಿತು!

ಕರ್ನಾಟಕ ರಾಜ್ಯ ಮಾತ್ರವಲ್ಲ ಭಾರತದ ಇತರ ರಾಜ್ಯಗಳಲ್ಲೂ ಆಂದೋಲನದ ಕಿಡಿ ಹೊತ್ತಿಕೊಂಡಿತು. ದೆಹಲಿಯ ಹತ್ತಾರು ಮಂದಿ ಬುದ್ಧಿಜೀವಿಗಳ ಜತೆ ಸೇರಿ ನಿಷೇಧದ ವಿರುದ್ಧ ಹೋರಾಟ ಆರಂಭಿಸಿದರು. ಈ ನಡುವೆ ಮದ್ರಾಸ್​ನ ಪ್ರಾದೇಶಿಕ ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ಕೇಂದ್ರ ಸೆನ್ಸಾರ್ ಮಂಡಳಿಯೂ ಎತ್ತಿ ಹಿಡಿಯಿತು. ಬೆಂಕಿಗೆ ತುಪ್ಪ ಸುರಿದಂತಾಗಿ, ಈ ವಿಚಾರ ಸಂಸತ್ತಿನಲ್ಲೂ ಪ್ರಸ್ತಾಪವಾಗುವಂತಾಯಿತು. ಕೊನೆಗೆ ಅಂತಿಮ ತೀರ್ಪು ಕೊಡಬೇಕಾಗಿರುವುದು ಕೇಂದ್ರ ಸರ್ಕಾರ ಎನ್ನುವ ಹಂತಕ್ಕೆ ಬಂದು ನಿಂತಾಗ ಆಗಿನ ಕೇಂದ್ರ ವಾರ್ತಾ ಮಂತ್ರಿಯಾಗಿದ್ದ ಐ.ಕೆ. ಗುಜ್ರಾಲ್ ಸಾಹೇಬರ ಪ್ರವೇಶ ಅನಿವಾರ್ಯವಾಯಿತು. ಅನಂತಮೂರ್ತಿಯವರು ಬರೆದ ‘ಸಂಸ್ಕಾರ’ ಕಾದಂಬರಿಯನ್ನು ಲಕ್ಷಾಂತರ ಮಂದಿ ಓದಿ ಮೆಚ್ಚಿಕೊಂಡಿದ್ದರು. ಆಗ ಯಾರೂ ತಕರಾರು ಮಾಡಿರಲಿಲ್ಲ. ಈಗ ಇದು ಸೆಲ್ಯೂಲಾಯ್್ಡೆ ಬಂದಾಗ ಸೆನ್ಸಾರ್ ಮಂದಿ ಏಕೆ ತಕರಾರು ಮಾಡುತ್ತಾರೋ ಗೊತ್ತಿಲ್ಲ – ಎಂದು ಆಗಿನ ಮೈಸೂರು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ವಿ.ಜಿ. ಚೌಟ ಆಶ್ಚರ್ಯ ವ್ಯಕ್ತಪಡಿಸಿದರು ಮತ್ತು ಪಟ್ಟಾಭಿ ಅವರ ಸಹಾಯಕ್ಕೆ ನಿಂತರು. ‘ನಿಷೇಧಕ್ಕೆ ಕಾರಣ ನೀಡದೆ ಸೆನ್ಸಾರ್ ಮಂಡಳಿ ವಿರೋಧಾಭಾಸದ ನಡೆ ಅನುಸರಿಸುತ್ತಿದೆ’ ಎಂದು ಕಟುವಾಗಿ ಟೀಕಿಸಿದರು ಚೌಟ. ವಿಶೇಷವೆಂದರೆ, ಒಂದು ಪ್ರಾದೇಶಿಕ ಭಾಷಾ ಚಿತ್ರದ ವಿಚಾರಕ್ಕಾಗಿ ಕೇಂದ್ರ ಸರ್ಕಾರದೊಂದಿಗೆ ವಾಣಿಜ್ಯ ಮಂಡಳಿ ವ್ಯವಹರಿಸಿದ್ದು ಇದೇ ಮೊದಲು. ಹಗ್ಗಜಗ್ಗಾಟದ ನಂತರ ‘ಸಂಸ್ಕಾರ’ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ನೀಡಲಾಯಿತು. ಸರ್ಟಿಫಿಕೇಟ್ ನೀಡುವ ಮೊದಲು ವಾರ್ತಾ ಸಚಿವ ಐ.ಕೆ. ಗುಜ್ರಾಲ್ ಮಾಧ್ವ ಯುವಕ ಸಂಘವನ್ನು ತರಾಟೆಗೆ ತೆಗೆದುಕೊಂಡರು. ಈ ಸಂಘದ ಅಹವಾಲಿನಿಂದಾಗಿಯೇ ಸೆನ್ಸಾರ್ ಮಂಡಳಿ ನಿಷೇಧದಂಥ ಗಂಭೀರ ಚಿಂತನೆಗೆ ಕಾರಣವಾದದ್ದೆಂದು ಹೇಳಿಕೆಯಿತ್ತರು. ಈ ಹೇಳಿಕೆಯ ಜತೆಜತೆಗೇ ಆ ಸರ್ಟಿಫಿಕೇಟ್ ಘೊಷಣೆ ಯಾಗುತ್ತಿರುವಂತೆಯೇ ಮತ್ತೆ ಮಾಧ್ವ ಸಂಘ ಪ್ರತಿಭಟನೆಗಿಳಿದದ್ದು ಇತಿಹಾಸದಲ್ಲಿ ದಾಖಲಾಗಿದೆ.

ಕೊನೆಗೂ ಬಹು ವಿವಾದಿತ ‘ಸಂಸ್ಕಾರ’ ಚಿತ್ರ 1970ರ ಜುಲೈ 3ರಂದು ರಾಜಧಾನಿ ಬೆಂಗಳೂರಿನಲ್ಲಿ ತೆರೆ ಕಂಡಿತು. ಸೆನ್ಸಾರ್ ವಿಚಾರದಲ್ಲಿ ಹೆಚ್ಚಿನ ಪ್ರಚಾರಕ್ಕೆ ಕಾರಣವಾದ ಈ ಚಿತ್ರವನ್ನು ಜನ ಮುಗಿಬಿದ್ದು ನೋಡಿದರು. ವಿಶೇಷವೆಂದರೆ, ಈ ಚಿತ್ರದ ಬಿಡುಗಡೆ ಸಮಾರಂಭಕ್ಕೆ ಸಾಕ್ಷಾತ್ ವಾರ್ತಾ ಸಚಿವರಾದ ಐ.ಕೆ. ಗುಜ್ರಾಲ್ ಅವರೇ ಬೆಂಗಳೂರಿಗೆ ಬಂದಿದ್ದರು!! ಎಲ್ಲವೂ ಸರಿ ಹೋಯಿತೆಂದು ಪಟ್ಟಾಭಿರಾಮ ರೆಡ್ಡಿಯವರು ನಿಟ್ಟುಸಿರು ಬಿಡುತ್ತಿರುವಂತೆಯೇ ಮತ್ತೊಂದು ವಿವಾದ ತಲೆಯೆತ್ತಿತು! ಅದು ಚಿತ್ರದ ಟೈಟಲ್

ಕಾರ್ಡ್​ನಲ್ಲಿ ಸೇರಿಸಿಕೊಂಡಿದ್ದ ಶೃಂಗೇರಿ ಜಗದ್ಗುರುಗಳ ಆಶೀರ್ವಾದದ ವಿಚಾರ. ಬೆಂಗಳೂರಿನ ಶಂಕರ ಮಠದ ಆಗಿನ ಮುಖ್ಯಾಧಿಕಾರಿಯಾಗಿದ್ದ ಭಾಸ್ಕರ ರಾವ್ ಅನ್ನುವವರು ಈ ವಿಚಾರಕ್ಕಾಗಿ ತಮ್ಮ ತೀವ್ರ ವಿರೋಧವನ್ನು ವ್ಯಕ್ತಪಡಿಸಿ ಪ್ರಕಟಣೆ ಕೊಟ್ಟರು. ಆದರೆ ಪಟ್ಟಾಭಿಯವರು ಮುಂಜಾಗ್ರತೆ ವಹಿಸಿ ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಪತ್ರವನ್ನು ಕೈಲಿಟ್ಟುಕೊಂಡಿದ್ದರಿಂದ ಈ ವಿವಾದದಿಂದ ಪಾರಾದರು! ಇಷ್ಟೆಲ್ಲ ಗೊಂದಲಕ್ಕೆ ಕಾರಣವಾದ ‘ಸಂಸ್ಕಾರ’ ಚಿತ್ರ ರಾಷ್ಟ್ರಪತಿಗಳ ಸ್ವರ್ಣ ಕಮಲ ಪ್ರಶಸ್ತಿ ಪಡೆದುಕೊಂಡದ್ದಲ್ಲದೇ, ದೇಶ-ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಂಡು ದಾಖಲೆ ಸ್ಥಾಪಿಸಿತು.

(ಲೇಖಕರು ಹಿರಿಯ ಸಿನಿಮಾ ಪತ್ರಕರ್ತರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top