Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಸಂಯಮ, ವಿವೇಕವೇ ಮದ್ದು

Thursday, 05.10.2017, 3:00 AM       No Comments

ಲ್ಲಕ್ಕಿಂತ ಅಮೂಲ್ಯವಾದದ್ದು ಪ್ರಾಣ ಎಂಬುದು ಗೊತ್ತಿರುವ ಸಂಗತಿಯೇ. ರೋಗಿಯೊಬ್ಬನ ಸ್ಥಿತಿ ಎಷ್ಟೇ ಗಂಭೀರವಾಗಿದ್ದರೂ ವೈದ್ಯರು ಆತನನ್ನು ಉಳಿಸಲು ಕೊನೇ ಕ್ಷಣದವರೆಗೆ ಯತ್ನಿಸುತ್ತಾರೆ. ಕಾರಣ, ಹೋದ ಜೀವ ಮತ್ತೆ ಬರುವುದಿಲ್ಲ. ಮರಣದ ಆಘಾತ ಹತ್ತಿರದವರಿಗೆ ತರುವ ಸಂಕಟ ಎದೆಹಿಂಡುತ್ತದೆ. ಆದರೆ, ಮೋಜು, ಮಸ್ತಿಗೆ ಹೋಗಿ ಸೆಲ್ಪೀಯ ಗೀಳಿಗೆ ಪ್ರಾಣ ಕಳೆದುಕೊಳ್ಳುವುದು ಎಂಥ ಹುಚ್ಚತನ? ಯಾವುದೇ ತಾಣಕ್ಕೆ ಭೇಟಿ ನೀಡಿದಾಗ ಅಲ್ಲಿನ ನಿಸರ್ಗಸೌಂದರ್ಯ, ನಿರಾಳತೆ ಇದೆಲ್ಲವನ್ನೂ ಅನುಭವಿಸುವ ಬದಲು ಸೆಲ್ಪೀಗೆ ಮುಖ ಮಾಡುವ ಪ್ರವೃತ್ತಿ ಹೆಚ್ಚುತ್ತಲೇ ಇದೆ. ದೈನಂದಿನ ಜಂಜಾಟ, ಒತ್ತಡದ ಬದುಕಿನಿಂದ ಆಚೆ ಬರಲು ಒಂದಿಷ್ಟು ಸುತ್ತಾಟ, ಪ್ರವಾಸಗಳು ಬೇಕು ಎಂಬುದೇನೋ ಸರಿಯೇ. ಆದರೆ, ಅವು ಕೊಡುವ ಸಂತೋಷ, ನಲಿವುಗಳು ಉತ್ಸಾಹ ಹೆಚ್ಚಿಸಬೇಕೆ ಹೊರತು ಸೆಲ್ಪೀ ಸಾವಿನಲ್ಲಿ ಕೊನೆಗೊಳ್ಳಬಾರದು.

ಇತ್ತೀಚಿನ ದಿನಗಳಲ್ಲಿ ಸೆಲ್ಪೀ ಸಂಬಂಧಿತ ದುರಂತಗಳು ಮತ್ತು ಸಾವುಗಳು ಹೆಚ್ಚುತ್ತಲೇ ಇರುವುದು ತೀವ್ರ ಕಳವಳದ ವಿಚಾರ. ಬೆಂಗಳೂರು ಹೊರವಲಯದಲ್ಲಿ ಮಂಗಳವಾರ ಬೆಳಗ್ಗೆ ರೈಲು ಹಳಿಯ ಮೇಲೆ ನಿಂತು ಚಲಿಸುವ ರೈಲಿನ ಜತೆ ಸೆಲ್ಪೀ ತೆಗೆದುಕೊಳ್ಳುವ ಯತ್ನದಲ್ಲಿ 18-20 ವರ್ಷದ ಮೂವರು ಯುವಕರು ದುರ್ಮರಣಕ್ಕೆ ತುತ್ತಾಗಿರುವ ಘಟನೆ ಸಂಭವಿಸಿದೆ. ಕೆಲ ದಿನಗಳ ಹಿಂದಷ್ಟೇ ಕನಕಪುರದ ರಾವುಗೊಂಡ್ಲು ಕಲ್ಯಾಣಿಯಲ್ಲಿ ಕೆಲ ಪಿಯು ವಿದ್ಯಾರ್ಥಿಗಳು ಸೆಲ್ಪೀ ತೆಗೆದುಕೊಳ್ಳುವ ಗುಂಗಿನಲ್ಲಿ ಯಾವ ಪರಿ ಮುಳುಗಿದ್ದರು ಎಂದರೆ ಅವರ ಸ್ನೇಹಿತನೊಬ್ಬ ನೀರಿನಲ್ಲಿ ಮುಳುಗುತ್ತಿರುವುದೂ ಅವರ ಗಮನಕ್ಕೆ ಬರಲಿಲ್ಲ. ಪರಿಣಾಮ, ವಿಶ್ವಾಸ್ ಎಂಬ ಯುವಕ ಪ್ರಾಣವನ್ನೇ ಕಳೆದುಕೊಳ್ಳುವಂತಾಯಿತು. ಜಲಪಾತಗಳ ಪ್ರಪಾತದಲ್ಲಿ, ಆನೆಗಳ ಜತೆ ಅಥವಾ ಇನ್ನಿತರ ವನ್ಯಜೀವಿಗಳ ಜತೆ ಸೆಲ್ಪೀ ಕ್ಲಿಕ್ಕಿಸಿಕೊಳ್ಳಲು ಹೋಗಿ ಎಷ್ಟೋ ಅವಘಢಗಳು ಸಂಭವಿಸಿದ್ದಿದೆ. ಇಂಥ ಘಟನೆಗಳು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಸೆಲ್ಪೀ ದುರಂತಗಳಲ್ಲಿ ಸಂಭವಿಸುತ್ತಿರುವ ಸಾವುಗಳ ಪೈಕಿ ಭಾರತದಲ್ಲೇ ಹೆಚ್ಚು ಎಂದು ಅಮೆರಿಕದ ಕೇಮ್ಜಿ ಮಿಲ್ಲಾನ್ ವಿಶ್ವವಿದ್ಯಾಲಯ ಮತ್ತು ದೆಹಲಿ ಇಂದ್ರಪ್ರಸ್ಥ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಯನ ವರದಿ ತಿಳಿಸಿದೆ.

2004ರಿಂದ 2016ರವರೆಗೆ ಜಗತ್ತಿನಲ್ಲಿ ದಾಖಲಾದ 127 ಸೆಲ್ಪೀ ಸಾವುಗಳ ಪೈಕಿ ಭಾರತದಲ್ಲೇ 76 ಮಂದಿ ಬಲಿಯಾಗಿದ್ದಾರೆ. ಪಾಕಿಸ್ತಾನದಲ್ಲಿ 9, ಅಮೆರಿಕದಲ್ಲಿ 8 ಜನರು ಸಾವನ್ನಪ್ಪಿದ್ದರೆ ರಷ್ಯಾದಲ್ಲಿ ಆರು ಜನರು ಬಲಿಯಾಗಿದ್ದಾರೆ. ಹಾಗಾಗಿ, ಈ ಗೀಳು ಪಿಡುಗಿನ ರೂಪ ಪಡೆದುಕೊಳ್ಳುತ್ತಿದ್ದು, ಹೊಸ ಸಮಸ್ಯೆಯಾಗಿ ತಲೆದೋರಿದೆ.

ಪ್ರವಾಸಿ ತಾಣಗಳು ಸೇರಿದಂತೆ ಎಷ್ಟೋ ಜಾಗಗಳಲ್ಲಿ ಸೆಲ್ಪೀ ನಿಷೇಧಿಸಲಾಗಿದೆ ಎಂಬ ಫಲಕ ಅಳವಡಿಸಲಾಗಿದ್ದರೂ ಅಪಾಯಕ್ಕೆ ಆಹ್ವಾನ ನೀಡಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಚಾಳಿ ಹೆಚ್ಚುತ್ತಿದೆ. ಸ್ಮಾರ್ಟ್​ಫೋನ್​ಗಳು ಸಕಾರಾತ್ಮಕ ಬಳಕೆಗಿಂತ ಇಂಥ ಮೋಜು, ಮಸ್ತಿಗೆ ಹೆಚ್ಚು ಬಳಕೆಯಾಗುತ್ತಿರುವುದು ದುರದೃಷ್ಟಕರವೇ ಸರಿ. ಈ ಸಂಬಂಧಿ ದುರಂತಗಳಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದು, ಅವರ ತಂದೆ-ತಾಯಿಯ ಗೋಳು ಕೇಳುವವರಾರು? ಮಕ್ಕಳ ಹಠಕ್ಕೆ ಜೋತುಬಿದ್ದು ಅಗತ್ಯ ಇಲ್ಲದಿದ್ದರೂ ದುಬಾರಿ ಬೆಲೆಯ ಸ್ಮಾರ್ಟ್​ಫೋನ್​ಗಳನ್ನು ಕೊಡಿಸುವ ತಂದೆ-ತಾಯಿಗಳು ಕೂಡ ಇಂಥ ನಿರ್ಧಾರಕ್ಕೆ ಬರುವ ಮುನ್ನ ಹತ್ತು ಬಾರಿ ಯೋಚನೆ ಮಾಡಬೇಕು. ಪ್ರವಾಸಿತಾಣಗಳಲ್ಲಿ ಸಂಯಮ, ವಿವೇಕ ಪ್ರದರ್ಶಿಸಿದರೆ ಇಂಥ ಅಪಾಯಗಳಿಂದ ದೂರವಿರಬಹುದು. ಈ ನಿಟ್ಟಿನಲ್ಲಿ ಸರ್ಕಾರ ಅರಿವು ಮೂಡಿಸುವ ಕೆಲಸ ಮಾಡುತ್ತಿದೆಯಾದರೂ ಜನರು ಎಚ್ಚೆತ್ತುಕೊಳ್ಳುವವರೆಗೆ ಹೆಚ್ಚೇನು ಪ್ರಯೋಜನವಾಗದು. ಸೆಲ್ಪೀಗಾಗಿ ಅಪಾಯಗಳಿಗೆ ಆಹ್ವಾನ ನೀಡುವ ಮುನ್ನ ಜೀವನ ಎಷ್ಟು ಅಮೂಲ್ಯವಾದದ್ದು ಎಂದು ಒಂದು ಕ್ಷಣ ಆಲೋಚಿಸಿಕೊಂಡರೆ ಸೂಕ್ತ.

Leave a Reply

Your email address will not be published. Required fields are marked *

Back To Top