Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಸಂಘಟನೆಯಲ್ಲಿ ಹಿಂದೆಬಿದ್ದ ಕಾಂಗ್ರೆಸ್

Friday, 08.12.2017, 3:00 AM       No Comments

ಚುನಾವಣೆಯಲ್ಲಿ ವರ್ಚಸ್ವಿ ನಾಯಕತ್ವ ಮತ್ತು ಸಂಘಟನಾತ್ಮಕ ಶಕ್ತಿ ಫಲಿತಾಂಶ ರೂಪಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಸಂಘಟನೆ ವಿಚಾರದಲ್ಲಿ ಕಾಂಗ್ರೆಸ್​ಗಿಂತ ಬಿಜೆಪಿ ಎಷ್ಟೋ ಹೆಜ್ಜೆ ಮುಂದಿದೆ ಎಂಬುದಕ್ಕೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶವೇ ತಾಜಾ ಉದಾಹರಣೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಬಿಜೆಪಿ ಕಾರ್ಯಕರ್ತರ ಮನೆ-ಮನಗಳನ್ನು ತಲುಪುವ ಕಾರ್ಯತಂತ್ರದಲ್ಲೂ ಕಾಂಗ್ರೆಸ್ ಹಿಂದೆನ್ನುವುದು ಗುಜರಾತ್ ಚುನಾವಣೆಯಲ್ಲೂ ಕಂಡುಬರುತ್ತಿದೆ.

ಗುಜರಾತ್​ನ ವಿವಿಧ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ‘ಸಂಘಟನಾತ್ಮಕವಾಗಿ ನಾವು ದುರ್ಬಲರಿದ್ದೇವೆ’ ಎಂಬುದನ್ನು ಕಾಂಗ್ರೆಸ್​ನ ಕಾರ್ಯಕರ್ತರು, ಮುಖಂಡರು ಅನೌಪಚಾರಿಕವಾಗಿ ಒಪ್ಪಿಕೊಳ್ಳುತ್ತಾರೆ. ‘ಬಿಜೆಪಿ ಕಾರ್ಯಕರ್ತರು ಒಬ್ಬ ವ್ಯಕ್ತಿ ಅಥವಾ ಸಮುದಾಯವನ್ನು 10 ಭಾರಿ ಭೇಟಿ ಮಾಡಿದರೆ, ಕಾಂಗ್ರೆಸ್ಸಿಗರು 3-4 ಬಾರಿಯಷ್ಟೇ ಭೇಟಿ ಮಾಡುತ್ತಾರೆ. ಬಿಜೆಪಿಯವರು ಮತದಾನದ ದಿನದವರೆಗೂ ಸಂಪರ್ಕದಲ್ಲಿದ್ದು, ಬಿಜೆಪಿಗೆ ಮತಹಾಕುವಂತೆ ಪ್ರೇರೇಪಿಸುತ್ತಾರೆ. ಕಾಂಗ್ರೆಸಿಗರ ಈ ಸೋಮಾರಿತನವೇ ದೊಡ್ಡ ಸಮಸ್ಯೆ’ ಎಂಬುದು ಗಿರ್ ಸೋಮನಾಥ್ ಜಿಲ್ಲೆಯ ಸಾಸಂಗೀರ್​ನಲ್ಲಿ ಸಿಕ್ಕ ಕಾಂಗ್ರೆಸ್ ಕಾರ್ಯಕರ್ತ ದೀಪಕ್ ಪಟೇಲ್ ಅಭಿಪ್ರಾಯ.

ಸೌರಾಷ್ಟ್ರದಲ್ಲಿ ಬಿಜೆಪಿಗೆ ಕಠಿಣ ಸವಾಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸೌರಾಷ್ಟ್ರ ವ್ಯಾಪ್ತಿಯ ರಾಜ್​ಕೋಟ್​ನಲ್ಲಿ ಕಳೆದೆರಡು ತಿಂಗಳಿಂದ ಸುಮಾರು 400 ಆರ್​ಎಸ್​ಎಸ್ ಕಾರ್ಯಕರ್ತರು ಮತದಾರರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರಂತೆ. ಸೌರಾಷ್ಟ್ರ ಮತ್ತು ಕಛ್​ನಲ್ಲಿ 54 ವಿಧಾನಸಭಾ ಕ್ಷೇತ್ರಗಳಿದ್ದು, ಕಳೆದ ಚುನಾವಣೆಯಲ್ಲಿ ಬಿಜೆಪಿ 42 ಕ್ಷೇತ್ರಗಳನ್ನು ತೆಕ್ಕೆಗೆ ಹಾಕಿಕೊಂಡಿತ್ತು. ಆದರೆ ಪಾಟಿದಾರರ ಆಂದೋಲನದ ಹಿನ್ನೆಲೆಯಲ್ಲಿ ಕೆಲ ಮತಗಳು ಕಾಂಗ್ರೆಸ್ ಕಡೆ ವಾಲುವ ಆತಂಕವಿರುವ ಹಿನ್ನೆಲೆಯಲ್ಲಿ ಸಂಘ ಮತ್ತು ಬಿಜೆಪಿ ಕಾರ್ಯಕರ್ತರು ಅಹರ್ನಿಶಿಯಾಗಿ ಕೆಲಸ ಮಾಡಿದ್ದಾರೆ. ಇದೇ ರೀತಿ ರಾಜ್ಯದ ಬೇರೆಡೆಯೂ ಸಂಘದವರು ಮನೆ-ಮನೆಗಳನ್ನು ತಲುಪುತ್ತಿದ್ದಾರೆ. ಆದರೂ, ಪಾಟಿದಾರರ ಅಸಮಾಧಾನ ಮತ್ತು ಹಿಂದುಳಿದವರನ್ನು ಸೆಳೆಯುವ ಕೈ ತಂತ್ರಗಳು ಬಿಜೆಪಿ ವಿರೋಧದ ದನಿಗಳಿಗೆ ಹುರಿದುಂಬಿಸಿರುವುದು ನಿಜ.

ಸೌರಾಷ್ಟ್ರದ ಸುಮಾರು 20-25 ಕ್ಷೇತ್ರಗಳಲ್ಲಿ ಬಿಜೆಪಿ ಪರ ಮತ ಹಂಚಿಕೆ ಪ್ರಮಾಣ ಕಡಿಮೆಯಾದರೂ ಅಚ್ಚರಿ ಇಲ್ಲ ಎಂಬ ವಿಶ್ಲೇಷಣೆಗಳಿವೆ. ಆದರೆ ಇದಕ್ಕೆ ‘ಕಾಂಗ್ರೆಸ್ ಗ್ರೌಂಡ್​ವರ್ಕ್’ ಮುಖ್ಯ ಕಾರಣವೇನಲ್ಲ. ಹಾರ್ದಿಕ್ ಪಟೇಲ್ ಮತ್ತವರ ಬೆಂಬಲಿಗರು ಮೀಸಲಾತಿ ಬೇಡಿಕೆ ಮುಂದಿಟ್ಟು ಗ್ರಾಮೀಣ ಭಾಗದ ಯುವಕರನ್ನು ಸೆಳೆಯುತ್ತಿರುವುದೇ ಈ ಬದಲಾವಣೆಗೆ ಕಾರಣ ಎಂಬುದನ್ನು ಕಾಂಗ್ರೆಸ್ ನಾಯಕರೊಬ್ಬರು ಒಪ್ಪಿಕೊಂಡು, ‘ಬಿಜೆಪಿ ಮಾದರಿ ಕೇಡರ್ ನಮ್ಮಲ್ಲಿಲ್ಲ. ರಾಜಕೀಯ ಗಂಭೀರತೆ-ಶಿಸ್ತು-ಬದ್ಧತೆಯ ಕೊರತೆ ಕಾಂಗ್ರೆಸ್​ನ್ನು ಕಾಡುತ್ತಿದೆ. ದಿಲ್ಲಿಯಲ್ಲಿ ಕೂತವರು ಕೂಡ ಹಾಗೇ ಇದ್ದಾರೆ’ ಎಂದರು.

22 ವರ್ಷ ವಿಪಕ್ಷ ಸ್ಥಾನದಲ್ಲಿ ಕೂತರೂ ರಾಜ್ಯ ಕಾಂಗ್ರೆಸ್​ನಲ್ಲಿ ಪ್ರಬಲ, ವಿಶ್ವಾಸಾರ್ಹ ನಾಯಕತ್ವವಿಲ್ಲ. ಹಾರ್ದಿಕ್ ಪಟೇಲ್, ಜಿಗ್ನೇಶ್ ಮೆವಾನಿ ಮತ್ತು ಅಲ್ಪೇಶ್ ಠಾಕೂರ್ ಕಾರಣದಿಂದಾಗಿ ಕಾಂಗ್ರೆಸ್ ಈ ಬಾರಿ ಸದ್ದು ಮಾಡುತ್ತಿದೆ. ಆದರೆ ಈ ಮೂವರು ತಮ್ಮ ಜಾತಿ ಸಮುದಾಯಗಳಿಗೆ ಸೀಮಿತ. ಗುಜರಾತಿ ಪ್ರಧಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೂಡ ಗುಜರಾತಿಗನಾಗಿರುವುದು ಕೇಸರಿಪಡೆಗೆ ಬಹುದೊಡ್ಡ ಪ್ಲಸ್ ಪಾಯಿಂಟ್. ಹೀಗಿರುವಾಗ ಕಾಂಗ್ರೆಸ್ ತ್ರಿಮೂರ್ತಿಗಳ ಹೆಸರಲ್ಲಿ ವೋಟು ಕೀಳುವ ತಂತ್ರ ಪ್ರಯೋಗಿಸಿತು. ಇದು ಪಕ್ಷಕ್ಕೆ ಭವಿಷ್ಯದಲ್ಲಿ ತಿರುಗುಬಾಣವಾದರೂ ಅಚ್ಚರಿಯಿಲ್ಲ. ಏಕೆಂದರೆ ಅಲ್ಪೇಶ್, ಹಾರ್ದಿಕ್, ಜಿಗ್ನೇಶ್ ತಮ್ಮದೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮತ್ತು ಬಿಜೆಪಿ ಸೋಲಿಸಬೇಕೆಂಬ ಏಕಮೇವ ಗುರಿ ಇಟ್ಟುಕೊಂಡು ಕಾಂಗ್ರೆಸ್ ದೋಣಿಗೆ ಕಾಲಿಟ್ಟವರು. ಒಂದುವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಈ ಮೂವರನ್ನು ಸಂಭಾಳಿಸುವುದೇ ಸವಾಲಾಗಬಹುದು. ಅದಲ್ಲದೆ, ಈ ಚುನಾವಣೆಯಲ್ಲಿ ಅಲ್ಪೇಶ್ ಮತ್ತು ಜಿಗ್ನೇಶ್ ಪ್ರತಿನಿಧಿಸುತ್ತಿರುವ ಸಮುದಾಯಗಳು ಸಾಂಪ್ರದಾಯಿಕವಾಗಿ ಕಾಂಗ್ರೆಸ್​ಗೇ ಮತಹಾಕುತ್ತಿದ್ದವು. ‘ಒಂದುವೇಳೆ ಇವರಿಬ್ಬರು ಕಾಂಗ್ರೆಸ್​ಗೆ ಕೈ ಕೊಟ್ಟರೆ ಈ ಮತಗಳು ಮತ್ತೆ ಕಾಂಗ್ರೆಸ್ ಕಡೆ ಬರಬಹುದೇ ಎಂಬ ಅನುಮಾನವಿದೆ. ಪಟೇಲ್ ಮೀಸಲಾತಿ ಸಾಧ್ಯವಿಲ್ಲವೆಂಬ ವಾತಾವರಣ ಸೃಷ್ಟಿಯಾದರೆ ಹಾರ್ದಿಕ್ ನಮ್ಮ ವಿರುದ್ಧ ತಿರುಗಿಬಿದ್ದಾನು. ಒಟ್ಟಿನಲ್ಲಿ, ಈ ತ್ರಿಮೂರ್ತಿಗಳನ್ನು ನಂಬಿಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದೆಯೇನೋ ಎಂಬುದು ನನ್ನ ಆತಂಕ’ ಎಂದರು ಜುನಾಗಢದಲ್ಲಿ ಸಿಕ್ಕ ಕಾಂಗ್ರೆಸ್ ಕಾರ್ಯಕರ್ತ ಸಂದೇಶ್ ಪರ್ವರ್.

ಜಿಎಸ್ಟಿ ತೆರಿಗೆ ಕಾನೂನು ದೇಶದ ಜವಳಿ ಮತ್ತು ವಜ್ರೋದ್ಯಮದ ಕೇಂದ್ರ ಸೂರತ್ ಸೇರಿದಂತೆ ರಾಜ್ಯದ ವಿವಿಧ ನಗರಗಳ ‘ಬಿಸ್​ನೆಸ್ ಹೌಸ್’ಗಳಿಗೆ ಸಾವಿರಾರು ಕೋಟಿ ರೂ. ನಷ್ಟವುಂಟಾದ ಬೆನ್ನಲ್ಲೇ ರಾಹುಲ್ ಗಾಂಧಿ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ರಾಜ್ಯದ ವಿವಿಧ ಉದ್ಯಮಿಗಳನ್ನು ಭೇಟಿ ಮಾಡಿ, ‘ನಾವು ಅಧಿಕಾರಕ್ಕೆ ಬಂದರೆ ಉದ್ಯಮಸ್ನೇಹಿ ತೆರಿಗೆ ವಾತಾವರಣ ತರುತ್ತೇವೆ’ ಎಂದು ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ, ಜಿಎಸ್ಟಿ ದರ ಕಡಿತಗೊಳಿಸುವ ಕೇಂದ್ರದ ಕ್ರಮದ ಮುಂದೆ ಕಾಂಗ್ರೆಸ್​ನ ಈ ನಡೆಗಳು ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ಸೂರತ್ ಟೆಕ್ಸ್​ಟೈಲ್ ಮಾರ್ಕೆಟ್​ನ ಆಶಿಷ್ ಫ್ಯಾಬ್ರಿಕ್​ನ ಮಾಲೀಕರು ‘ಜಿಎಸ್ಟಿ ಒಂದಲ್ಲಾ ಒಂದು ದಿನ ಬರಲೇಬೇಕಿತ್ತು. ಯುಪಿಎಗೆ ಈ ಕಾನೂನು ತರಲು ಸಾಧ್ಯವಾಗಲಿಲ್ಲ. ರಾಜಕೀಯವಾಗಿ ತನ್ನನ್ನು ಸಂಕಟಕ್ಕೀಡು ಮಾಡಬಹುದೆಂದು ಗೊತ್ತಿದ್ದರೂ ಮೋದಿ ಆ ಧೈರ್ಯ ಮಾಡಿದರು. ತರಾತುರಿಯಲ್ಲಿ ಜಾರಿಗೆ ತಂದರೂ ಈಗ ಸರಿಹಾದಿಗೆ ಬರುತ್ತಿದೆ’ ಎಂದು ಸಮರ್ಥಿಸಿಕೊಂಡರು. ಇದೇ ಅಭಿಪ್ರಾಯ ಎಲ್ಲಾ ಉದ್ಯಮಿಗಳದ್ದು ಎಂದೇನಲ್ಲ. ಆದರೆ ಉದ್ಯಮಿಗಳ ಅಸಮಾಧಾನ ಕಾಂಗ್ರೆಸ್ ಮತಗಳಾಗಿ ಪರಿವರ್ತನೆಯಾಗುವ ಕುರಿತು ಅನುಮಾನಗಳಿವೆ.

ಏತನ್ಮಧ್ಯೆ, ರಾಹುಲ್ ಗಾಂಧಿ ಹಿಂದು ದೇವಾಲಯಗಳಿಗೆ ಭೇಟಿ ನೀಡುವ ‘ಹಿಂದುತ್ವ ರಾಜಕಾರಣ’ದ ತಂತ್ರ ಮತ ಹೆಚ್ಚಿಸುವ ಲಕ್ಷಣಗಳನ್ನೇನೂ ತೋರಿಸುತ್ತಿಲ್ಲ. ಗುಜರಾತ್​ನಲ್ಲಿ ‘ಹಿಂದುಗಳ ಪಕ್ಷ ಬಿಜೆಪಿ, ಮುಸ್ಲಿಮರ ಪಕ್ಷ ಕಾಂಗ್ರೆಸ್’ ಎಂಬ ಭಾವನೆ ಬೇರೂರಿದ್ದು, ಇದನ್ನು ಬದಲಾಯಿಸುವ ರಾಹುಲ್ ಯತ್ನಕ್ಕೆ ಫಲ ಸಿಗುವುದೇ ಎಂಬ ಪ್ರಶ್ನೆಗಳಿವೆ.

ತ್ರಿಮೂರ್ತಿಗಳು ಬಂದು ಗುಜರಾತ್​ನಲ್ಲಿ ಕಾಂಗ್ರೆಸ್ ಪರ ವಾತಾವರಣ ರೂಪಿಸುವ ಪ್ರಯತ್ನಗಳನ್ನು ಮಾಡಿದರೂ, ಬಿಜೆಪಿ ಮೇಲಿನ ಮತದಾರನ ಮುನಿಸನ್ನು ಮತಗಳನ್ನಾಗಿ ಪರಿವರ್ತಿಸುವ ನಾಯಕನಾಗಲೀ, ಸಂಘಟನಾತ್ಮಕ ಶಕ್ತಿಯಾಗಲಿ ಕಾಂಗ್ರೆಸ್​ನಲ್ಲಿ ಇಲ್ಲದಿರುವುದೇ ಬಿಜೆಪಿಗೆ ವರದಾನವಾಗಿದೆ.

Leave a Reply

Your email address will not be published. Required fields are marked *

Back To Top