Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಷರತ್ತುಬದ್ಧ ಮೂಲ ಚಿಂತನಾ ಕ್ರಮದ ಹಂಗೇಕೆ…

Saturday, 11.02.2017, 5:00 AM       No Comments

ಈಗ್ಗೆ 45-50 ವರ್ಷಗಳ ಹಿಂದೆ ಬೆಂಗಳೂರಿನ ರಾಜಾಜಿನಗರವೆನ್ನುವ ಬಡಾವಣೆ ಆಗತಾನೇ ಕಣ್ಣುಬಿಡುತ್ತಿತ್ತು. ಮುಖ್ಯರಸ್ತೆಗಳು ವಿಶಾಲವಾಗಿದ್ದವು. ಅಡ್ಡರಸ್ತೆಗಳು ಇನ್ನೂ ರೂಪುಗೊಂಡಿರಲೇ ಇಲ್ಲ. ಬರೀ ಕಾಲುದಾರಿಗಳು. ಅದರಲ್ಲಿ ಅಲ್ಲೊಂದು ಇಲ್ಲೊಂದು ಮನೆಗಳು. ಅಂಥದೇ ಒಂದು ಕಾಲುದಾರಿಯಲ್ಲಿ ನಮ್ಮದೊಂದು ಮತ್ತು ನಮ್ಮ ದೂರದ ಬಳಗದವರದೊಂದು ಎರಡೇ ಮನೆಗಳು. 3040 ಸೈಟಿನಲ್ಲಿ ಸುತ್ತಾ ಜಾಗಬಿಟ್ಟು ಕಟ್ಟಿದ ಪುಟ್ಟಮನೆಗಳು. ಒಮ್ಮೆ ಅವರ ಮನೆಗೆ ಹಳ್ಳಿಯಿಂದ ಕ್ರಿಸ್​ವುಸ್ ರಜೆಗೆ ಹದಿನೈದು ಮಕ್ಕಳು ಬಂದಿಳಿದರು. ಆ ಮನೆಯಲ್ಲಿ ಈಗಾಗಲೇ ಹಳ್ಳಿಯಿಂದ ಬಂದ ಮೂರು ಮಕ್ಕಳು ತಮ್ಮ ಕಾಲೇಜು ಶಿಕ್ಷಣಕ್ಕಾಗಿ ಇವರಲ್ಲೇ ತಂಗಿದ್ದರು. ಆ ದಂಪತಿಗೂ ಮೂರು ಮಕ್ಕಳಿದ್ದರು. ಹಿಂದಿನ ದಿನ ಆ ಮನೆಯ ಯಜಮಾನಿ ನನ್ನ ಹತ್ತಿರ ಮಾತಾಡುತ್ತಾ ‘ನಾಳೆ ನಮ್ಮ ಭಾವನವರ ಮತ್ತು ಮೈದುನನ ಮಕ್ಕಳು ರಜೆಗೆ ಬರಲಿದ್ದಾರೆ’ ಎಂದು ಹೇಳಿದರು. ನಾನು ‘ನಿಮ್ಮ ಮನೆಯಲ್ಲಿ ಜಾಗ ಸಾಕಾಗಲಿಲ್ಲವೆಂದರೆ ಮಲಗಲು ಒಂದಿಷ್ಟು ಜನರನ್ನು ನಮ್ಮ ಮನೆಗೂ ಕಳಿಸಿ’ ಎಂದೆ. ‘ಅಯ್ಯೋ ನಮ್ಮ ಮನೆಯಲ್ಲೇ ಸರಿಹೊಂದಿಸಿಕೊಳ್ಳುತ್ತಾರೆ ಬಿಡಿ’ ಎಂದರು ಆಕೆ. ಒಂದೆರಡು ದಿನಗಳ ನಂತರ ಬೆಳಿಗ್ಗೆಯೇ ಏನೋ ಕಾರಣಕ್ಕೆ ಅವರ ಮನೆಗೆ ಹೋದೆ. ಮನೆಯ ಯಜಮಾನ ಬಾಗಿಲು ತೆರೆದು ‘ಬನ್ನಿ ಬನ್ನಿ’ ಎಂದರು. ನೋಡುತ್ತೇನೆ ವರಾಂಡಾದಲ್ಲಿ ಎಡಕ್ಕೆ ಒಂದು ಬೆಂಚಿನ ಮೇಲೆ ಅಕ್ಕಿಮೂಟೆಗಳನ್ನು ಪೇರಿಸಿಟ್ಟಿದ್ದಾರೆ. ಅದರ ಮೇಲೆ ಇಬ್ಬರು ಮಕ್ಕಳು ಹಾಯಾಗಿ ಮಲಗಿದ್ದಾರೆ, ಬೆಂಚಿನ ಕೆಳಗೆ ಎರಡು ಮಕ್ಕಳು ಮಲಗಿವೆ. ಹಾಲಿನಲ್ಲಿ ಸಾಲಾಗಿ ವಿಳೇದೆಲೆ ಕವಳಿಗೆ ಜೋಡಿಸಿದಂತೆ ಒಬ್ಬರನ್ನೊಬ್ಬರು ಒತ್ತಿಕೊಂಡು ಒಂದಷ್ಟು ಮಕ್ಕಳು ಮಲಗಿವೆ. ರೂಮುಗಳಲ್ಲಿಯೂ ಇದೇ ದೃಶ್ಯವೇ!! ಸುತ್ತಮುತ್ತ ಮನೆಗಳೇ ಇಲ್ಲದೇ ಗಿಡಮರಗಳು, ಕುರುಚಲು ಪೊದೆಗಳು ಹೆಚ್ಚಾಗಿದ್ದ ಕಾರಣ ಡಿಸೆಂಬರ್ ಚಳಿ ಸಾಕಷ್ಟು ನಡುಗಿಸುತ್ತಿತ್ತು. ಈ ಮಕ್ಕಳ ಮೈಮೇಲೆ ಇದ್ದ ಹೊದಿಕೆಗಳೋ ಗಂಡು ಮಕ್ಕಳ ಮೇಲೆ ಮನೆಯಜಮಾನನ ಹಳೆಯ ಪಂಚೆಗಳು, ಹುಡುಗಿಯರಿಗೆ ಮನೆಯೊಡತಿಯ ಹಳೆಯ ಸೀರೆಗಳು. ಎಲ್ಲರೂ ಸುಖವಾದ ನಿದ್ರಾಲೋಕದಲ್ಲಿ ಮುಳುಗಿ ಹೋಗಿದ್ದರು! ಮನೆಯಲ್ಲಿದ್ದದ್ದು ಒಂದೇ ಬಚ್ಚಲುಮನೆ ಮತ್ತು ಒಂದೇ ಶೌಚಗೃಹ. ಇದೇ ಸೌಲಭ್ಯದಲ್ಲೇ ಒಂದಿಷ್ಟೂ ಗೊಣಗದೇ, ಮುಜುಗರ, ಬೇಸರ ಪಡದೇ ನಗುನಗುತ್ತಾ ಇದ್ದು, ಲಾಲ್​ಬಾಗ್, ಕಬ್ಬನ್ ಪಾರ್ಕ್, ವಿಧಾನಸೌಧ ಮುಂತಾದವನ್ನು ನೋಡಿ ಜನ್ಮ ಪುನೀತವಾಯಿತೆಂದು ಭಾವಿಸುತ್ತಾ ಹತ್ತುದಿನ ಇಡೀ ರಸ್ತೆಗೆ ಕಲರವವನ್ನು ಹಬ್ಬಿ, ರಜೆಕಳೆದು ತಮ್ಮೂರಿಗೆ ಹೊರಟೇಬಿಟ್ಟರು.

ಈ ಪ್ರಸಂಗಕ್ಕೂ ನಾನು ಮೇಲೆ ಕೊಟ್ಟಿರುವ ಶೀರ್ಷಿಕೆಗೂ ಏನು ಸಂಬಂಧ ಎನ್ನುವುದು ನಿಮಗೆ ಈಗಾಗಲೇ ಗೊತ್ತಾಗಿದೆಯೆಂದು ಭಾವಿಸುತ್ತೇನೆ. ಈ ಮೇಲಿನ ಪ್ರಸಂಗ ಯಾವ ಷರತ್ತೂ ಇಲ್ಲದ, ಏನು ಸಿಕ್ಕಿದರೆ ಅದರಲ್ಲೇ ಸುಖವಾಗಿ ಬದುಕುವ ಮೂಲ ಚಿಂತನ ಕ್ರಮ. ಅನೇಕರು ಇಂದಿಗೂ ಹಾಗೆಯೇ ಬದುಕುತ್ತಿದ್ದಾರೆ. ಹಳ್ಳಿಯ ಕೃಷಿಕ ವರ್ಗದವರು, ಕಟ್ಟಡ ಕಟ್ಟುವ ಕೂಲಿಕಾರ್ವಿುಕರು, ಲಾರಿ ಬಸ್​ಗಳ ಡ್ರೖೆವರ್, ಕ್ಲೀನರ್ ಮುಂತಾದ ದುಡಿಮೆಯೇ ಸಕಲವೂ ಆಗಿರುವ ಶ್ರಮಿಕ ವರ್ಗ ಈಗಲೂ ಹಾಗೆಯೇ ‘ಇದ್ದುದರಲ್ಲಿ’ ಬದುಕುವ ಪರಿಪಾಠವನ್ನಿಟ್ಟುಕೊಂಡಿದ್ದಾರೆ. ಆದರೆ ಅಧ್ಯಯನವೊಂದು ಅಘಾತಕಾರಿ ಸುದ್ದಿಯನ್ನು ಕೊಟ್ಟಿದೆ. ಈಗ ಜನಜನಿತವಾಗಿರುವ ‘ಎಲೆಕ್ಟ್ರಾನಿಕ್’ ಉಪಕರಣಗಳು (ಮೊಬೈಲ್ ಫೋನ್, ಟಿ.ವಿ.) ಈ ಶ್ರಮಜೀವಿಗಳನ್ನೂ ‘ಕಂಡೀಷನ್ಡ್’ ಆಗಿ ಮಾಡುತ್ತಿವೆಯಂತೆ!ಇಲ್ಲಿ ‘ಕಂಡೀಷನ್ಡ್’ ಅಂದರೆ ನಾವು ಯಾವುದೋ ಒಂದರ ‘ದಾಸ’ರಾಗಿಬಿಡುವುದು. ಅದಿಲ್ಲದೇ ನಮ್ಮ ಬದುಕೇ ಇಲ್ಲ ಎಂದು ಭಾವಿಸುವುದು. ಉದಾಹರಣೆಗೆ ನೂರುದಿನಗಳು ಟಿ.ವಿ.ಯಿಲ್ಲದೇ, ಸೆಲ್​ಫೋನ್ ಇಲ್ಲದೇ ಬದುಕುವುದನ್ನೇ ಮಹಾಸಾಧನೆಯನ್ನಾಗಿ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ತೋರಿಸುತ್ತಾರಲ್ಲವೇ ಅದು!! ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ನಾವು ಯಾವುದ್ಯಾವುದು ಇಲ್ಲದಿದ್ದರೆ ವಿಚಲಿತರಾಗುತ್ತೇವೆ ಒಮ್ಮೆ ಯೋಚಿಸಿ. ಎದ್ದಕೂಡಲೇ ನಮ್ಮದೇ ಬ್ರಾಂಡಿನ ಟೂತ್​ಪೇಸ್ಟ್, ಸೋಪು, ಕಾಫಿ, ಸ್ನಾನಕ್ಕೆ ತಕ್ಕನಾದ ಬಚ್ಚಲು, ಇತ್ಯಾದಿ ಇತ್ಯಾದಿಗಳೊಂದಿಗೆ ಪ್ರಾರಂಭವಾಗಿ, ರಾತ್ರಿ ಮಲಗುವ ಹಾಸಿಗೆ ದಿಂಬುಗಳ ವರೆಗೆ ನಾವು ‘ಕಂಡೀಷನ್ಡ್’ ಆಗಿದ್ದೇವೆ. ಇವುಗಳಲ್ಲಿ ಯಾವೊಂದು ಬದಲಾದರೂ ನಮ್ಮ ಬದುಕು ಅಲ್ಲೋಲ ಕಲ್ಲೋಲ! ಇದೀಗ ‘ಸಂಡೇ ಸಿಂಡ್ರೋಮ್ ಎನ್ನುವ ಹೊಸ ಕಾಯಿಲೆಯೊಂದನ್ನು ಮನೋವೈದ್ಯರು ತಮಾಷೆಯಾಗಿ ಹೇಳುತ್ತಿರುತ್ತಾರೆ. ಹೀಗೆಂದರೆ ಏನು ಗೊತ್ತೇ? ಪ್ರತಿನಿತ್ಯ ಟಿ.ವಿ.ಯಲ್ಲಿ ಬರುವ ಧಾರಾವಾಹಿಗಳಿಗೆ ದಾಸರಾದ ಜನ ಭಾನುವಾರ ಆ ಧಾರಾವಾಹಿ ಬರುವುದಿಲ್ಲವಾದ ಕಾರಣ ಆ ದಿನ ಅವರು ಏನೋ ಕಳೆದುಕೊಂಡಂತೆ ಚಡಪಡಿಸುತ್ತಾರಂತೆ. ಆ ದಿನ ಅವರಿಗೆ ಬೆನ್ನುನೋವು, ತಲೆನೋವು, ಸುಸ್ತು ಇತ್ಯಾದಿಗಳು ಕಾಣಿಸಿಕೊಳ್ಳುವುದಂತೆ ಇದನ್ನು ‘ಸಂಡೇ ಸಿಂಡ್ರೋಮ್ ಎನ್ನುತ್ತಾರೆ. ಸೋಮವಾರ ಯಾವ ಔಷಧಗಳ ಸಹಾಯವೂ ಇಲ್ಲದೇ ಅವರ ಕಾಯಿಲೆಗಳು ತನ್ನಷ್ಟಕ್ಕೆ ತಾನೇ ಸರಿಹೋಗುವುದಂತೆ! ನಮ್ಮ ಇಡೀ ಬದುಕು ‘ಇಂತಹುದರಿಂದಲೇ’ ಸುಗಮವಾಗಿರುತ್ತದೆ ಎಂದು ಭಾವಿಸುವುದಿದೆಯಲ್ಲ? ಇದನ್ನೇ ‘ಕಂಡೀಷನ್ಡ್ ಕಾಗ್ನೆಟೀವ್ ಥಾಟ್ ಪ್ರೋಸೆಸ್’ ಎನ್ನುವುದು. ನೀವೊಮ್ಮೆ ಯೋಚಿಸಿ. ಯಾವುದಿಲ್ಲದಿದ್ದರೂ ನೀವು ಸುಖವಾಗಿ ಒಂದು ವರ್ಷಗಳ ಕಾಲ ಬದುಕಬಲ್ಲಿರಿ ಎಂದು ಒಂದು ಪಟ್ಟಿ ಮಾಡಿ. ಆ ಪಟ್ಟಿ ಹೆಚ್ಚು ಉದ್ದವಾದಷ್ಟೂ ನೀವು ‘ಅನ್​ಕಂಡೀಷನ್ಡ್’ ಆಗಿದ್ದೀರಿ, ಮತ್ತು ನಿಮ್ಮ ಜೀವನ ಸರಳವಾಗಿದೆ ಎಂದರ್ಥ.

ಇವೆಲ್ಲವೂ ಹೊರ ಷರತ್ತುಗಳಾಯಿತು. ಇನ್ನು ನಮ್ಮ ಭಾವನೆಗಳ ಮೂಲರೂಪದಲ್ಲೂ ಎಷ್ಟೊಂದು ಷರತ್ತುಗಳಿವೆ ಗೊತ್ತೇ? ನಮ್ಮ ಪರಿಚಿತರಾದ ವೃದ್ಧರೊಬ್ಬರಿದ್ದರು. ಅವರು ಮತ್ತು ಅವರ ಹೆಂಡತಿ ಕುಟುಂಬದ ಹಿರಿಯರಾಗಿದ್ದರು. ಆತನ ತಮ್ಮ ತಂಗಿಯರೂ ಬಂಧುಬಳಗದವರೂ ಹಬ್ಬ ಹುಣ್ಣಿಮೆಗಳಲ್ಲಿ ಮದುವೆ ಸಮಾರಂಭಗಳಲ್ಲಿ ಇವರಿಗೆ ಅಗ್ರಪೂಜೆಯರೀತಿ ಸತ್ಕರಿಸುತ್ತಿದ್ದರು. ಹೀಗಾಗಿ ಅವರಿಬ್ಬರೂ ತಮ್ಮನ್ನು ತಾವು ‘ಶ್ರೇಷ್ಠ’ರೆಂದು ಭಾವಿಸುತ್ತಿದ್ದರು. ಕಾಲ ಮುಂದೆ ಸರಿಯಿತು. ಅವರ ತಮ್ಮ ತಂಗಿಯರ ಮಕ್ಕಳು ದೊಡ್ಡವರಾದರು. ಅವರಿಗೂ ಮದುವೆ ಮಕ್ಕಳು ಎಲ್ಲ ಆಗಿ ಕುಟುಂಬ ಬೆಳೆಯಿತು. ಆ ಮುಂದಿನ ಜನಾಂಗಕ್ಕೆ ತಮ್ಮತಮ್ಮ ತಂದೆತಾಯಿಯರೇ ಶ್ರೇಷ್ಠರೆನಿಸಿದರೇ ವಿನಾ ಈ ವೃದ್ಧದಂಪತಿಯಲ್ಲ. ಹಿಂದೆಲ್ಲ ಇವರ ಹೆಸರಿನಲ್ಲೇ ಅಚ್ಚಾಗುತ್ತಿದ್ದ ಲಗ್ನಪತ್ರಿಕೆಗಳು, ಅವರವರ ತಂದೆತಾಯಿಯರ ಹೆಸರಿನಲ್ಲಿ ಅಚ್ಚಾಗತೊಡಗಿದವು. ಇದು ಸಹಜವೂ ಆಗಿತ್ತು. ಎಲ್ಲ ಮದುವೆಮನೆಯ ಹಸೆಮಣೆಗಳಲ್ಲಿ ಹಿರಿಯರೆಂದು ಇವರೇ ಪ್ರತಿಷ್ಠಾಪಿತರಾಗುತ್ತಿದ್ದರಲ್ಲ, ಆ ಜಾಗದಲ್ಲೀಗ ಇವರ ತಮ್ಮ ತಂಗಿಯರು ಕುಳಿತರು. ಇವರಿಗೆ ಕಸಿವಿಸಿ ಶುರುವಾಯಿತು. ಎಲ್ಲ ಮದುವೆಮನೆಗಳಿಗೂ ಹೋಗುವುದು, ಏನೋ ತಪ್ಪು ಹುಡುಕಿ ಕೂಗಾಡುವುದು, ಅಲ್ಲೊಂದು ‘ಸೀನ್ ಕ್ರಿಯೇಟ್’ ಮಾಡುವುದು, ಶುಭಸಮಾರಂಭದಲ್ಲಿದ್ದ ಸಂತೋಷವನ್ನು ಹಾಳು ಮಾಡುವುದು. ಹಾಗಾಗಿ ಮುಂದಿನ ಪೀಳಿಗೆಯ ಜನ ಇವರಿಗೆ ಆಹ್ವಾನ ಪತ್ರಿಕೆಯನ್ನು ಕೊಟ್ಟು ಆಮಂತ್ರಿಸುವುದನ್ನೇ ನಿಲ್ಲಿಸಿದರು! ಇವತ್ತು ಅನೇಕ ಮನೆಗಳಲ್ಲಿ ಅತ್ತೆ ಮಾವ ಮತ್ತು ಸೊಸೆಯರಿಗೆ ಭಿನ್ನಾಭಿಪ್ರಾಯ ಬರುವುದು ಇಂಥ ‘ಕಂಡೀಷನ್ಡ್ ಕಾಗ್ನೆಟೀವ್ ಥಾಟ್ ಪ್ರೋಸೆಸ್’ನಿಂದಾಗಿಯೇ. ಸೊಸೆಯಾದವಳು ಹೀಗೇ ಇರಬೇಕು, ಗಂಡನಾದವನು ಹೀಗೇ ಇರಬೇಕು, ಮಕ್ಕಳು ನಮ್ಮ ಆಜ್ಞೆಯಂತೆಯೇ ನಡೆಯಬೇಕು, ವೃದ್ಧರಾದ ಹಿರಿಯರೂ ಮಕ್ಕಳು ಹೇಳಿದಂತೆ ಕೇಳಬೇಕು, ಹೆಣ್ಣಾದವಳು ಹೀಗಿರಲೇ ಬೇಕು, ಮನೆಗೆಲಸ, ಕೂಲಿಕೆಲಸ ಮಾಡುವವರು ಹೀಗೆಯೇ ಇರಬೇಕು, ಏನೆಲ್ಲ ಚೌಕಟ್ಟುಗಳನ್ನು ನಿರ್ವಿುಸಿದ್ದೇವೆ ಊಹಿಸಿಕೊಳ್ಳಿ! ಇವರಲ್ಲಿ ಯಾರೊಬ್ಬರಾದರೂ ಚೌಕಟ್ಟಿನಿಂದ ಆಚೆ ಬಂದರೆ ಉಳಿದವರು ವಿಚಲಿತರಾಗುತ್ತಾರೆ. ನಾನು ಪೇರೆಂಟಿಂಗ್ ವರ್ಕ್​ಶಾಪ್ ಮಾಡುವಾಗ ಅನೇಕ ತಂದೆತಾಯಿಯರು ಈ ‘ಕಂಡೀಷನ್ಡ್ ಮತ್ತು ಅಡಿಕ್ಷನ್’ ಎರಡು ಒಂದೇನಾ? ಎಂದು ಕೇಳುತ್ತಾರೆ. ಎರಡೂ ಒಂದೇ ಅಲ್ಲ. ಅಡಿಕ್ಷನ್ ಎಂದರೆ ಮತ್ತೆಮತ್ತೆ ಬೇಕೆನಿಸುವುದು. ಕಂಡೀಷನ್ಡ್ ಅಂದರೆ ‘ನಮ್ಮನ್ನು ನಾವು ಹಲವು ಭಾವಗಳಿಗೆ ಮತ್ತು ಸೌಕರ್ಯಗಳಿಗೆ’ ಬಂಧಿಸಿಕೊಳ್ಳುವುದು, ಮತ್ತು ಅದೇ ಸರಿಯೆಂದು ಭಾವಿಸುವುದು. ಹಾಗಾದರೆ ನಿಯಮಗಳೇ ಇರಬಾರದೇ? ಎನ್ನುವ ಪ್ರಶ್ನೆ ಏಳಬಹುದಲ್ಲವೇ? ಬೇಕು. ಬದುಕಿಗೆ ಕೆಲವು ನಿಯಮಗಳು ಮತ್ತು ಕೆಲವು ನಂಬಿಕೆಗಳೂ ಬೇಕು. ಆದರೆ ಅವು ಕಾಲದಿಂದ ಕಾಲಕ್ಕೆ ಮಾನವೀಯ ನೆಲೆಯಲ್ಲಿ ಯಾರಿಗೂ ನೋವಾಗದ ಹಾಗೆ ಬದಲಾಗುತ್ತಲಿರಬೇಕು. ನಮ್ಮ ದಿನನಿತ್ಯದ ನಡವಳಿಕೆಯಲ್ಲಿ, ಚಿಂತನಕ್ರಮದಲ್ಲಿ, ಭಾವನೆಗಳ ಪ್ರಕಟಣೆಯಲ್ಲಿ ಅನೇಕಾನೇಕ ಬದಲಾವಣೆಗಳಾಗಿವೆ. ಅವುಗಳನ್ನು ಒಪ್ಪಿಕೊಂಡು, ಸಕಾರಾತ್ಮಕವಾಗಿ ಬದಲಾಗುತ್ತಲೇ ಬದುಕುವುದು ‘ಅನ್ ಕಂಡೀಷನ್ಡ್ ಕಾಗ್ನೆಟೀವ್ ಥಾಟ್ ಪ್ರೋಸೆಸ್’ ಎನಿಸಿಕೊಳ್ಳುತ್ತದೆ.

(ಲೇಖಕರು ಆಪ್ತಸಲಹೆಗಾರರು, ಬರಹಗಾರರು)

Leave a Reply

Your email address will not be published. Required fields are marked *

Back To Top