Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಶ್ರೇಷ್ಠ ವಿಜ್ಞಾನಿಯೊಡನೆ ಒಂದು ಕಿರುಪಯಣ

Sunday, 23.07.2017, 3:02 AM       No Comments

| ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ

ಅವರೊಬ್ಬ ಶ್ರೇಷ್ಠ ವಿಜ್ಞಾನಿ. ಹೊರರಾಷ್ಟ್ರಗಳಲ್ಲಿ ಕೆಲಸಮಾಡಲು ಹೇರಳ ಅವಕಾಶ-ಆಹ್ವಾನಗಳಿದ್ದರೂ ಅವರು ತಮ್ಮ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡದ್ದು ಭಾರತವನ್ನು. ಬೌದ್ಧಿಕ ಜಗತ್ತಿನ ಜತೆಗೆ ನಮಗೆ ಭಾವಜಗತ್ತೂ ಇರುತ್ತದೆ; ನಮ್ಮ ಪರಿಸರ, ದೇಶ, ಭಾಷೆ, ಸಂಬಂಧಗಳು ಇವೆಲ್ಲ ಬದುಕಿಗೆ ಚೆಲುವು ನೀಡುತ್ತವೆ. ಸರಳತೆ ಹಾಗೂ ಶ್ರದ್ಧೆ ಇಲ್ಲದಿದ್ದರೆ ಮಹತ್ವದ್ದನ್ನು ಸಾಧಿಸುವುದು ಕಷ್ಟ ಎಂಬುದು ಅವರ ನಿಲುವು.

 

ವಿಮಾನ ಪ್ರಯಾಣ ಉಲ್ಲಾಸದಾಯಕವೇನಲ್ಲ. ಹೊಸದರಲ್ಲಿ ಒಂದು ರೀತಿಯ ಬೆರಗು ಇರುತ್ತದೆ ನಿಜ. ನೆಲ ಬಿಟ್ಟು ನಭದಲ್ಲಿ ಹಾರಾಡುವುದು ಒಂದು ವಿಚಿತ್ರ ಅನುಭವವೇ! ಆದರೆ ಕ್ರಮೇಣ ಆ ಬೆರಗು ಮಾಯವಾಗಿ ಏಕತಾನತೆಯ ಅನುಭವ ಮನಸ್ಸಿಗೆ ಬೇಸರ ಮೂಡಿಸುತ್ತದೆ. ಹಾಗೆ ನೋಡಿದರೆ ವಿಮಾನ ನಿಲ್ದಾಣಕ್ಕೆ ಹೋಗುವುದರಿಂದ ನಮ್ಮ ಸಮಸ್ಯೆ ಆರಂಭವಾಗುತ್ತದೆ. ಕೆಲವು ಸಲ ವಿಮಾನದಲ್ಲಿ ಪ್ರಯಾಣ ಮಾಡುವುದಕ್ಕಿಂತ ಹೆಚ್ಚು ಸಮಯ ವಿಮಾನ ನಿಲ್ದಾಣಕ್ಕೆ ಹೋಗಿ ಬರುವುದಕ್ಕೆ ಬೇಕಾಗುತ್ತದೆ. ಜತೆಗೆ ಒಂದೆರಡು ಗಂಟೆ ಮುಂಚೆ ಅಲ್ಲಿರಬೇಕು. ಚೆಕ್​ಇನ್, ಸೆಕ್ಯುರಿಟಿ ಮೊದಲಾದ ರಿಚ್ಯುಯಲ್​ಗಳನ್ನು ಮುಗಿಸಿ ಒಳಹೊಕ್ಕು ಅಲ್ಲಿ ಕಾಯುತ್ತಾ ಕುಳಿತಿರಬೇಕು. ವಿಮಾನ ಪ್ರಯಾಣದ ಯಾವ ಹಂತದಲ್ಲೂ ನಿಮಗೆ ಸ್ವಾತಂತ್ರ್ಯವಿರುವುದಿಲ್ಲ. ಕಣ್ಗಾವಲಿನ ನಡುವೆಯೇ ಪಯಣ. ಇದೆಲ್ಲ ಡೊಮೆಸ್ಟಿಕ್ ವಿವರಗಳು. ಅಂತಾರಾಷ್ಟ್ರೀಯ ಯಾನದ್ದು ಮತ್ತೊಂದು ಕತೆ.

ಈ ಸಲ ನಾನು ಗುವಾಹಾಟಿಯಿಂದ ಬೆಂಗಳೂರಿಗೆ ಬಂದ ವಿಮಾನ ಪ್ರಯಾಣ ಬೇಸರವೆನ್ನಿಸಲಿಲ್ಲ, ವಿಶಿಷ್ಟವಾಗಿತ್ತು. ಗುವಾಹಾಟಿ ಹಿಂದೆ ಪ್ರಾಗ್​ಜ್ಯೋತಿಷಪುರವೆಂದು ಹೆಸರಾಗಿದ್ದ ಪುರಾಣಪ್ರಸಿದ್ಧ ಊರು. ಬ್ರಹ್ಮಪುತ್ರ ನದಿಯ ದಂಡೆಯ ಮೇಲಿರುವ ಗುವಾಹಾಟಿ ಕಾಮಾಕ್ಯ ಶಕ್ತಿದೇವತೆಯ ನೆಲೆವೀಡು. ನೀಲಾಚಲ ಬೆಟ್ಟದ ಮೇಲಿನ ಕಾಮಾಕ್ಯ ದೇವಾಲಯ ಈ ಸಲ ‘ಅಂಬುಬಾಸಿ‘ ಉತ್ಸವಕ್ಕಾಗಿ ಮುಚ್ಚಿತ್ತು. ಈ ಉತ್ಸವದ ವೇಳೆ ಮೂರು ದಿವಸ ದೇವತೆ ಮಲಿನಗೊಂಡಿರುತ್ತಾಳೆಂದು ದರ್ಶನಕ್ಕೆ ಅವಕಾಶವಿರುವುದಿಲ್ಲ. ಮೊದಲೊಮ್ಮೆ ಬಂದಿದ್ದಾಗ ದೇವಿಯ ದರ್ಶನವಾಗಿತ್ತಾದ್ದರಿಂದ ಬೇಸರವಾಗಲಿಲ್ಲ. ಇಡೀ ಊರು ಹಬ್ಬದ ಸಡಗರದಲ್ಲಿತ್ತು. ಅಲ್ಲಲ್ಲಿ ತಾಂತ್ರಿಕರು ಕಾಣಿಸುತ್ತಿದ್ದರು. ನಾನಿದ್ದ ಹೋಟೆಲ್ ಬ್ರಹ್ಮಪುತ್ರ ದಂಡೆಯ ಮೇಲೆಯೇ ಇದ್ದು ಕಿಟಕಿಯಾಚೆಗೆ ತುಂಬಿ ಹರಿಯುತ್ತಿದ್ದ ನದಿಯ ನೋಟ ಪ್ರಕೃತಿ ಲೀಲೆಯ ವಿವಿಧ ವಿನ್ಯಾಸಗಳ ಅನೇಕ ದೃಶ್ಯಗಳನ್ನು ಅಲ್ಲಿ ಅನಾವರಣಗೊಳಿಸುತ್ತಿತ್ತು.

ವಿಮಾನ ಪ್ರಯಾಣ ವಿಶಿಷ್ಟವಾಗಿತ್ತು ಎಂದೆ. ವಿಮಾನದಲ್ಲಿ ನನ್ನ ಒಂದು ಬದಿ ನನ್ನ ವಿದ್ಯಾಗುರುಗಳಾದ ಚಂದ್ರಶೇಖರ ಕಂಬಾರರು ಕುಳಿತಿದ್ದರು. ಅದು ಕಿಟಕಿ ಬದಿಯ ಸೀಟು. ಅವರ ಪಕ್ಕ ನಾನು. ವಿಮಾನ ಹೊರಡುವ ಕೆಲಕ್ಷಣ ಮುಂಚೆ ಇನ್ನೊಂದು ಬದಿಯ ಸೀಟಿನಲ್ಲಿ ‘ಭಾರತರತ್ನ‘ ಸಿ.ಎನ್.ಆರ್. ರಾವ್ ಬಂದು ಕುಳಿತರು. ಅವರ ಆಚೆ ಬದಿಯ ಸಾಲಿನ ಸೀಟಿನಲ್ಲಿ ಅವರ ಪತ್ನಿ ಇಂದುಮತಿರಾವ್.

ಕಂಬಾರರಿಗೆ ರಾವ್ ಪರಿಚಯವಿದ್ದುದರಿಂದ ಸೌಜನ್ಯದ ಕುಶಲ ಸಂಭಾಷಣೆ ನಡೆಯಿತು. ನಾನೂ ಅವರಿಗೆ ನಮಸ್ಕರಿಸಿ ಅವರಿಬ್ಬರ ಮಾತುಕತೆಗೆ ಅನುಕೂಲವಾಗಲೆಂದು ಕಂಬಾರರಿಗೆ ನನ್ನ ಜಾಗ ಬಿಟ್ಟುಕೊಡುವ ಉದ್ದೇಶದಿಂದ ಮೇಲೆದ್ದೆ. ಅದನ್ನರಿತ ಸಿ.ಎನ್.ಆರ್. ರಾವ್ ನನ್ನ ಕೈ ಹಿಡಿದು ‘ಪರವಾಗಿಲ್ಲ ಕುಳಿತುಕೊಳ್ಳಿ‘ ಎಂದು ನನ್ನನ್ನು ಕುಳ್ಳಿರಿಸಿದರು. ಅವರಿಬ್ಬರ ನಡುವೆ ಕಿವಿ ತೆರೆದು ಕುಳಿತೆ. ಕೆಲ ನಿಮಿಷ ಅವರಿಬ್ಬರೂ ಲೋಕಾಭಿರಾಮವಾಗಿ ಮಾತನಾಡಿದರು. ನಂತರ ರಾವ್ ನನ್ನ ಬಗ್ಗೆ ವಿಚಾರಿಸತೊಡಗಿದರು. ನನಗೀಗ ತುಸು ಆರಾಮವೆನ್ನಿಸಿತು. ಅವರೊಡನೆ ಮಾತನಾಡತೊಡಗಿದೆ. ಬೆಂಗಳೂರು ತಲುಪುವವರೆಗೂ ಕೆಲ ಸಮಯ ಬಿಟ್ಟರೆ ನಿರಂತರ ಮಾತನಾಡಿದೆವು. ಮಧ್ಯೆ ಕಂಬಾರರೂ ಜತೆಗೂಡುತ್ತಿದ್ದರು. ಜಗತ್ ಪ್ರಸಿದ್ಧ ವಿಜ್ಞಾನಿಯೊಬ್ಬರು ಹೀಗೆ ಹರಟೆ ಧಾಟಿಯ ಸಹಜ ಲಯದಲ್ಲಿ ಮಾತನಾಡಿದ್ದು ನನಗೆ ಸೋಜಿಗವೆನ್ನಿಸಿತು. ಅದನ್ನೇ ಕೇಳಿದೆ- ‘ಈ ಸರಳತೆ ನಿಮಗೆ ಹೇಗೆ ಸಾಧ್ಯವಾಯಿತು?‘.

ಅವರು ನಸುನಕ್ಕು ಹೇಳಿದರು- ‘ಸರಳತೆ ಹಾಗೂ ಶ್ರದ್ಧೆ ಇಲ್ಲದಿದ್ದರೆ ಮಹತ್ವದ್ದನ್ನು ಸಾಧಿಸುವುದು ಕಷ್ಟ. ಈ ವಿಚಾರದಲ್ಲಿ ತಾಯಿಯ ಪ್ರಭಾವ ನನ್ನ ಮೇಲೆ ಗಾಢವಾಗಿದೆ. ಅನುಕೂಲವಿದ್ದರೂ ಅವರು ಸರಳ ಜೀವನವನ್ನು ಬದುಕಿದರು. ತನಗೆ ಉಡಲು ಎರಡು ಸೀರೆಗಳು ಸಾಕೆಂಬುದು ಅವರ ನಿಲುವಾಗಿತ್ತು. ನನಗೆ ಸಿಕ್ಕ ಗುರುಗಳೂ ಹಾಗೇ ಇದ್ದರು. ಪ್ರಸಿದ್ಧ ಪ್ರಾಧ್ಯಾಪಕರಾದರೂ ಕೊಂಚವೂ ಹಮ್ಮಿರುತ್ತಿರಲಿಲ್ಲ. ನಮ್ಮ ಜತೆ ಕ್ಯೂನಲ್ಲಿ ನಿಂತು ತಮ್ಮ ಸರದಿಗಾಗಿ ಕಾಯುತ್ತಿದ್ದರು. ನಮ್ಮನ್ನು ಗೆಳೆಯರಂತೆ ಕಾಣುತ್ತಿದ್ದರು. ಸರಳತೆ ಸಹಜವೇನಲ್ಲ. ನಾವು ರೂಢಿಸಿಕೊಳ್ಳಬೇಕು. ಸರಳತೆ ಸಾಧ್ಯವಾದರೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂಬುದು ನನ್ನ ಖಚಿತ ನಂಬಿಕೆ‘.

ಪ್ರಶ್ನೋತ್ತರದ ರೂಪದಲ್ಲಿ ಆರಂಭವಾದ ನಮ್ಮ ಮಾತುಕತೆ ಸಂವಾದವಾಗಿ ಮುಂದುವರಿಯಿತು. ಹಿರಿಯರಾದ ರಾವ್ ನನ್ನ ಸಂಕೋಚವನ್ನು ದೂರಮಾಡಿ ನಮ್ಮ ಸಂವಾದಕ್ಕೆ ಆಪ್ತತೆಯ ಸ್ಪರ್ಶ ನೀಡಿದ್ದರು. ಇಂದುಮತಿಯವರನ್ನೂ ಪರಿಚಯಿಸಿ ಅವರ ಬಗ್ಗೆ, ಅವರ ಕುಟುಂಬದ ಸಾಹಿತ್ಯಾಸಕ್ತಿಯ ಬಗ್ಗೆ ಹೇಳಿದರು.

ವಿಜ್ಞಾನ ಶಿಕ್ಷಣದ ಕಡೆ ನಮ್ಮ ಮಾತು ಹೊರಳಿತು. ಬೇಸಿಕ್ ಸೈನ್ಸ್ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದರ ಕುರಿತು ಅವರು ಪ್ರಸ್ತಾಪಿಸುತ್ತ, ನಮ್ಮ ಮನೋಭಾವ ಕುರಿತು ಹೇಳಿದರು. ‘ನಿಜ ಹೇಳಿದರೆ ಬೇಸರವಾಗುತ್ತದೆ. ನಾವು ಭಾರತೀಯರು ಶುದ್ಧ ಸೋಮಾರಿಗಳು. ಶ್ರಮಪಟ್ಟು ದುಡಿಯಲು ಸಿದ್ಧರಿಲ್ಲ. ಜತೆಗೆ ಅಲ್ಪತೃಪ್ತರು. ವಿಜ್ಞಾನದ ವಿದ್ಯಾರ್ಥಿಗಳು ಪ್ರಯೋಗಶಾಲೆಯಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡಬೇಕಾಗುತ್ತದೆ. ಬದುಕಿನ ಅನೇಕ ಸುಖಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಸಂಶೋಧನೆ ಎಂಬುದು ಒಂದು ರೀತಿ ತಪಸ್ಸು ಇದ್ದ ಹಾಗೆ. ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಈ ಬಗೆಯ ಧ್ಯಾನಶೀಲ ಮನಸ್ಸು ಕಾಣೆಯಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ‘ ಎಂದರು. ‘ಜತೆಗೆ ಹಣದ ಮೋಹ ಹೆಚ್ಚಾಗಿದೆ. ಓದು ಹಣ ಸಂಪಾದನೆಯ ಮಾರ್ಗವಾಗಿದೆ. ಎಲ್ಲಿ ಹಣ ಬರುತ್ತದೆಯೋ ಅದನ್ನು ವಿದ್ಯಾರ್ಥಿಗಳು ಆರಿಸಿಕೊಳ್ಳುತ್ತಿದ್ದಾರೆ. ತಮ್ಮ ಆಸಕ್ತಿಯ ಕ್ಷೇತ್ರದ ಬಗ್ಗೆ ಅವರು ಚಿಂತಿಸುತ್ತಿಲ್ಲ. ಆಸಕ್ತಿಯಿರುವವರನ್ನೂ ಹಣದ ಆಕರ್ಷಣೆ ಬಲವಾಗಿ ಸೆಳೆಯುತ್ತಿದೆ. ಮನಸ್ಸು ತನ್ನ ಸೃಜನಶೀಲತೆಯನ್ನು ಕಳೆದುಕೊಂಡು ಹಣಕ್ಕೆ ಅಧೀನವಾಗಿದೆ ಅನ್ನಿಸುತ್ತಿದೆ‘ ಎಂದು ಒಂದು ಕ್ಷಣ ಮೌನವಾದರು.

ಹಾಗೆ ಹೇಳುತ್ತಾ ‘ದೇಹ ಹಾಗೂ ಮನಸ್ಸು ಇವೆರಡರ ಆರೋಗ್ಯ ಕಾಪಾಡಲು ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಗಳು ಬಹಳ ಮುಖ್ಯ. ನಮ್ಮ ದೇಶದ ದುರಂತವೆಂದರೆ ಇವೆರಡೂ ಕ್ಷೇತ್ರಗಳು ಕಡೆಗಣಿಸಲ್ಪಟ್ಟಿವೆ ಅಥವಾ ಕೊಡಬೇಕಾದಷ್ಟು ಗಮನ ಕೊಡುತ್ತಿಲ್ಲ. ಇವೆರಡೂ ಉದ್ಯಮದ ರೂಪ ತಾಳಿವೆ‘ ಎಂದು ಆತಂಕ ವ್ಯಕ್ತಪಡಿಸಿದರು. ‘ಇಲ್ಲಿಯೂ ಹಣವೇ ಪ್ರಧಾನಪಾತ್ರ ವಹಿಸುತ್ತಿದೆ. ವ್ಯಾವಹಾರಿಕ ಜ್ಞಾನವೇ ಪ್ರಧಾನವಾಗಿ ಸೃಜನಶೀಲತೆ ಕಣ್ಮರೆಯಾಗುತ್ತಿದೆ. ವಿಜ್ಞಾನ ಮಾತ್ರವಲ್ಲ, ಮಾನವಿಕ ಅಧ್ಯಯನವೂ ಇದೇ ಹಾದಿ ಹಿಡಿದಿದೆ ಅಲ್ಲವೇ?‘ ಎಂದು ನನ್ನನ್ನೇ ಕೇಳಿದರು.

ಅವರು ಪ್ರಸ್ತಾಪಿಸಿದ ಒಂದು ಸಂಗತಿ ನನಗೆ ಮುಖ್ಯವೆನ್ನಿಸಿತು. ನಮ್ಮ ದೇಶದಲ್ಲಿ ವೈಯಕ್ತಿಕ ನೆಲೆಯಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ನಮ್ಮಲ್ಲಿ ಅತ್ಯುತ್ತಮ ಸಂಸ್ಥೆಗಳ ಅಭಾವವಿದೆ. ಪ್ರತಿಭೆಯನ್ನು ಪೋಷಿಸುವ ವಾತಾವರಣವಿದ್ದಂತೆ ಅನ್ನಿಸುತ್ತಿಲ್ಲ. ಸರ್ಕಾರಿ ಸಂಸ್ಥೆಗಳು ಭ್ರಷ್ಟವಾಗಿವೆ ಎನ್ನುವುದು ಕಠಿಣ ಮಾತಾಗಬಹುದು, ಆದರೆ ಸಾಕಷ್ಟು ಕ್ರಿಯಾಶೀಲವಾಗಿಲ್ಲ ಎನ್ನುವುದಂತೂ ನಿಜ. ಖಾಸಗಿ ಸಂಸ್ಥೆಗಳು ಉದ್ಯಮವಾಗಿ ರೂಪಾಂತರಗೊಂಡು ಲಾಭ ಗಳಿಸುವುದೇ ಅವುಗಳ ಪರಮೋದ್ದೇಶವಾಗಿದೆ. ಹೀಗಾಗಿ ಸೃಜನಶೀಲ ವಾತಾವರಣವೊಂದನ್ನು ನಾವು ನಿರ್ಮಿಸಲಾಗಿಲ್ಲ. ಪ್ರತಿಭಾ ಪಲಾಯನಕ್ಕೆ ಇದೂ ಒಂದು ಕಾರಣ. ಎಷ್ಟೇ ಪ್ರತಿಭಾವಂತನಾದರೂ ಆತನ ಬೆಳವಣಿಗೆಗೆ ಒಂದು ಸಂಸ್ಥೆಯ ಆಶ್ರಯ ಬೇಕಾಗುತ್ತದೆ. ನಮ್ಮ ದೇಶದಲ್ಲಿ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಎಷ್ಟು ಸಂಸ್ಥೆಗಳಿವೆ?

ಮತ್ತೊಂದು ಸಂಗತಿ- ನಮ್ಮಲ್ಲಿ ಅನೇಕ ರೀತಿಯ ಶಕ್ತಿಗಳು ಪ್ರತಿಭೆಯನ್ನು ನಿಯಂತ್ರಿಸುತ್ತವೆ. ಸ್ವತಂತ್ರ ಮನೋಭಾವ ಸೃಜನಶೀಲತೆಗೆ ಅತ್ಯಗತ್ಯ. ಅಧೀನ ಮನೋಭಾವವಿದ್ದಾಗ ಸೃಜನಶೀಲತೆ ಕುಂಠಿತವಾಗುತ್ತದೆ. ಎಳೆಯ ಮನಸ್ಸಿನ ಪ್ರತಿಭೆಗಳನ್ನು ಗುರ್ತಿಸಿ ಅವರಿಗೆ ಸಂಶೋಧನೆಗೆ ಅಗತ್ಯವಾದ ಮುಕ್ತ ವಾತಾವರಣ ನಿರ್ಮಿಸಿಕೊಟ್ಟರೆ ಸಹಜವಾಗಿಯೇ ಮಹತ್ವದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ. ನಮ್ಮ ಕಾಲದಲ್ಲಿದ್ದ ಸೃಜನಶೀಲ ವಾತಾವರಣವೂ ಈಗಿದೆ ಅನ್ನಿಸುತ್ತಿಲ್ಲ. ಇದು ವಯಸ್ಸಾದವನ ಹಳಹಳಿಕೆಯಲ್ಲ, ಚಿಂತಿಸಬೇಕಾದ ಸಂಗತಿ ಎಂದು ರಾವ್ ಗಂಭೀರರಾದರು.

ಅಷ್ಟರಲ್ಲಿ ಕಿಶೋರ ವಯಸ್ಸಿನ ಗಗನಸಖಿಯರು ತಿನಿಸುಗಳ ಟ್ರಾಲಿಯೊಡನೆ ಬಂದರು. ರಾವ್ ಅವರು ಹೆಂಡತಿಯೊಡನೆ ಸಮಾಲೋಚಿಸಿ ಏನೂ ಬೇಡವೆಂದರು. ನನಗೆ ಉಪಮಾ ತೆಗೆದುಕೊಳ್ಳಲು ಸೂಚಿಸಿದರು. ಅವರ ಸಲಹೆಯನ್ನು ಪಾಲಿಸಿದೆ. ರೆಡಿ ಮಿಕ್ಸ್​ಗೆ ಬಿಸಿನೀರು ಬೆರೆಸಿಕೊಟ್ಟು ಕೆಲ ನಿಮಿಷದ ನಂತರ ತಿನ್ನಲು ಸೂಚಿಸಿದಳು. ಹಾಗೇ ಮಾಡಿದೆ. ಆದರೆ ಉಪಮಾ ಚೆನ್ನಾಗಿದೆ ಅನ್ನಿಸಲಿಲ್ಲ. ಅದಕೆ್ಕೆ ಆ ಉಪಮಾ ಮಾತ್ರ ಕಾರಣವಲ್ಲ, ಮನೆಯಲ್ಲಿ ರಜನಿಯವರು ಮಾಡುವ ಉಪ್ಪಿಟ್ಟು ನೆನಪಾದದ್ದು ಕೂಡ. ಆಕೆ ಮತ್ತೆ ಬಂದು ರಾವ್​ರನ್ನು, ‘ಮತ್ತೇನಾದರೂ ಬೇಕೆ?‘ ಎಂದು ಗೌರವದಿಂದ ಕೇಳಿದಳು. ‘ಲೆಮನ್ ಟೀ ಸಿಗಬಹುದೇ?‘ ಎಂದು ಕೇಳಿದರು. ಇರಲಿಲ್ಲ. ಇಂದುಮತಿಯವರು ತಮ್ಮ ಬ್ಯಾಗಿನಿಂದ ಹೆಚ್ಚಿದ ಸೇಬಿನ ಚೂರುಗಳನ್ನು ಕೊಟ್ಟರು. ರಾವ್ ನಮ್ಮೊಡನೆ ಅದನ್ನು ಹಂಚಿ ತಿಂದರು.

ಮಾತನಾಡುತ್ತಾ ಅವರ ಬದುಕಿನ ಬಗ್ಗೆ ತಿಳಿದದ್ದು- ರಾವ್ ಹೈಸ್ಕೂಲಿನವರೆಗೆ ಓದಿದ್ದು ಕನ್ನಡ ಮಾಧ್ಯಮದಲ್ಲಿ. ಅವರ ತಂದೆಗೆ ಮಗ ಮಾತೃಭಾಷೆಯಲ್ಲಿಯೇ ಓದಬೇಕೆಂಬ ಅಪೇಕ್ಷೆಯಿತ್ತಂತೆ. ಆದರೆ ಇಂಗ್ಲಿಷ್ ಭಾಷೆಯನ್ನು ಮಾತನಾಡಲು ಕಲಿಸುತ್ತಿದ್ದರು. ಇದು ಮಾಧ್ಯಮದ ಬಗ್ಗೆ ಈಗ ನಾವು ಎದುರಿಸುತ್ತಿರುವ ಗೊಂದಲಕ್ಕೆ ಉತ್ತರ ಹೇಳುವಂತಿದೆ. ಕನ್ನಡ ಮಾಧ್ಯಮದಲ್ಲಿ ಓದಿಯೂ ವಿಜ್ಞಾನ ವಿಷಯದಲ್ಲಿ ಪರಿಣತಿ ಪಡೆಯಬಹುದು ಮಾತ್ರವಲ್ಲ ಅಂತಾರಾಷ್ಟ್ರೀಯ ಖ್ಯಾತಿ ಪಡೆಯಬಹುದು. ಅವರು ಓದಿದ್ದೂ ಎಲ್ಲರಂತೆ ಸಾಮಾನ್ಯ ಶಾಲೆಯಲ್ಲಿಯೇ. ಈಗ ಬಹಳಷ್ಟು ಮಂದಿ ತಮ್ಮ ಮಕ್ಕಳನ್ನು ಕಳಿಸಲು ಅಪೇಕ್ಷೆಪಡುವುದು ‘ಇಂಟರ್ ನ್ಯಾಷನಲ್‘ ಹೆಸರಿನ ಶಾಲೆಗಳಿಗೆ. ದುಬಾರಿ ಶುಲ್ಕವಿದ್ದಷ್ಟೂ ಶಾಲೆ ಚಂದವೆಂಬ ಅಭಿಪ್ರಾಯ ಹೇಗೋ ಎಲ್ಲರ ಮನಸ್ಸಿನಲ್ಲೂ ಮನೆಮಾಡಿಬಿಟ್ಟಿದೆ.

ರಾವ್ ಅವರಿಗೆ ಹೊರರಾಷ್ಟ್ರಗಳಲ್ಲಿ ಕೆಲಸಮಾಡಲು ಹೇರಳ ಅವಕಾಶ, ಆಹ್ವಾನಗಳಿದ್ದವು. ಆದರೆ ಅವರು ತಮ್ಮ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡದ್ದು ಭಾರತವನ್ನು. ಬೌದ್ಧಿಕ ಜಗತ್ತಿನ ಜತೆಗೆ ನಮಗೆ ಭಾವಜಗತ್ತೂ ಇರುತ್ತದೆ ಎಂಬುದನ್ನು ಅವರು ಈ ಸಂದರ್ಭದಲ್ಲಿ ಹೇಳಿದರು. ನಮ್ಮ ಪರಿಸರ, ದೇಶ, ಭಾಷೆ, ಸಂಬಂಧಗಳು ಇವೆಲ್ಲ ಬದುಕಿಗೆ ಚೆಲುವು ನೀಡುತ್ತವೆ ಎಂಬುದು ಅವರ ನಿಲುವಾಗಿತ್ತು. ರಾವ್ ಅಪ್ಪಟ ವಿಜ್ಞಾನಿ. ದಿನದ ಬಹುಪಾಲು ಆ ಬಗ್ಗೆಯೇ ಚಿಂತಿಸುತ್ತಿರುತ್ತಾರೆ. ಆದರೆ ಬದುಕಿನ ಚೆಲುವನ್ನು ಯಾವ ನೆಲೆಯಲ್ಲೂ ನಿರಾಕರಿಸಿದವರಲ್ಲವೆಂಬುದು ಅವರ ಮಾತು-ಕತೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಬಿಡುವಿನ ಸಮಯದಲ್ಲಿ ಹೇಗೆ ಕಾಲ ಕಳೆಯುತ್ತೀರಿ ಎಂಬ ನನ್ನ ಮಾತಿಗೆ ‘ಬಿಡುವು?‘ ಎಂದು ಪ್ರಶ್ನೆಯ ರೂಪದಲ್ಲಿ ಪುನರುಚ್ಚರಿಸಿದರು. ಸೋಮಾರಿತನದ ಬಗ್ಗೆ ಅವರು ಆರಂಭದಲ್ಲಿ ಪ್ರಸ್ತಾಪಿಸಿದ್ದು ನೆನಪಾಯಿತು. ನನ್ನೊಡನೆ ಮಾತನಾಡುತ್ತಿರುವಾಗಲೇ ಮಧ್ಯೆಮಧ್ಯೆ ಜೇಬಿನಿಂದ ಚೀಟಿಯೊಂದನ್ನು ತೆಗೆದು ಯಾವುದೋ ಫಾಮುಲಾವನ್ನು ತಿದ್ದುತ್ತಿದ್ದುದನ್ನು ಗಮನಿಸಿದ್ದೆ. ‘ಸಂಗೀತ ಕೇಳುತ್ತೇನೆ‘ ಎಂದರು. ಕಂಬಾರರಲ್ಲೂ ನಾನಿದನ್ನು ಕಂಡಿದ್ದೇನೆ. ಬಿಡುವಿಲ್ಲದ ಕೆಲಸಗಳ ನಡುವೆಯೂ ನಾವು ಕೆಲವೊಮ್ಮೆ ದೆಹಲಿಯಲ್ಲಿ ಬೆಳಗಿನ ವಾಕಿಂಗ್ ಹೋಗುವಾಗ ಸಾಹಿತ್ಯದ ಬಗ್ಗೆ ಗಂಭೀರವಾಗಿ ರ್ಚಚಿಸುತ್ತಿದ್ದರು. ತಾವು ಬರೆಯಬೇಕೆಂದಿರುವ ಹೊಸಕೃತಿಯ ಬಗ್ಗೆ ಹೊಳಹು ನೀಡುತ್ತಿದ್ದರು. ಹೊರಜಗತ್ತಿನ ಜಂಜಾಟಗಳ ನಡುವೆಯೂ ಅಂತರಂಗದಲ್ಲಿ ಅವರ ಮನಸ್ಸು ಸೃಜನಶೀಲ ಧ್ಯಾನದಲ್ಲಿ ತೊಡಗಿರುವುದನ್ನು ಹತ್ತಿರದಿಂದ ಗಮನಿಸಿದ್ದೆ. ಎಂಭತ್ತರ ವಯಸ್ಸಿನಲ್ಲಿಯೂ ಕಂಬಾರರು ಹೊಸದಕ್ಕೆ ತುಡಿಯುವ ಬಗೆ ಕಿರಿಯರಿಗೆ ಮಾದರಿ. ಎಂಭತ್ನಾಲ್ಕರ ರಾವ್ ಅವರಲ್ಲೂ ನನಗೆ ಈ ತುಡಿತ ಕಂಡಿತು. ಕಂಬಾರರು ರಾವ್ ಅವರ ವೈಜ್ಞಾನಿಕ ಬರಹಗಳು ಕನ್ನಡಕ್ಕೆ ಬರಬೇಕೆಂಬುದರ ಬಗ್ಗೆ ಪ್ರಸ್ತಾಪಿಸಿದರು. ವಿಜ್ಞಾನ ಸಾಹಿತ್ಯ ಕನ್ನಡದಲ್ಲಿ ಸಿಗಬೇಕೆಂಬುದರ ಕುರಿತು ನಮ್ಮ ಚರ್ಚೆ ಮುಂದುವರಿಯಿತು. ವಿಜ್ಞಾನಿಗಳು ಹಾಗೂ ಕನ್ನಡ ಲೇಖಕರು ಒಟ್ಟಾಗಿ ಸೇರಿ ಕೆಲಸ ಮಾಡುವುದು ಇಂದಿನ ಅಗತ್ಯವೆಂಬುದನ್ನು ನಾವು ಮತ್ತೆ ಮನಗಂಡೆವು.

ಈಗಲೂ ರಾವ್ ವಿಜ್ಞಾನ ವಿಷಯ ಕುರಿತಂತೆ ಎಳೆಯರಿಗೆ ಪಾಠಮಾಡುತ್ತಾರೆ. ಕಲಿಸುವುದೆಂದರೆ ಕಲಿಯುವುದೂ ಹೌದು ಎಂದು ಅವರು ಹೇಳಿದ್ದು ಮುಖ್ಯಮಾತು. ನಮ್ಮ ಅನೇಕ ಅಧ್ಯಾಪಕರು ಕಲಿಸುವುದೂ ಇಲ್ಲ, ಕಲಿಯುವುದೂ ಇಲ್ಲ. ಜಡವಾಗಿಬಿಟ್ಟರೆ ಹೊಸಚಿಂತನೆ ಮನಸ್ಸಿನಲ್ಲಿ ಸುಳಿಯುವುದಾದರೂ ಹೇಗೆ? ನಮ್ಮ ವಿಶ್ವವಿದ್ಯಾಲಯಗಳ ಪಾಡು ಇದು.

ರಾವ್ ಗುವಾಹಾಟಿಗೆ ಬಂದಿದ್ದದ್ದು ಅಲ್ಲಿಯ ಐ.ಐ.ಟಿ.ಯಲ್ಲಿ ಘಟಿಕೋತ್ಸವ ಭಾಷಣ ಮಾಡಲು, ಜತೆಗೆ ಆ ಸಂಸ್ಥೆ ಅವರಿಗೆ ನೀಡಿದ ಗೌರವ ಡಾಕ್ಟರೇಟ್ ಸ್ವೀಕರಿಸಲು. ಇದು ಅವರಿಗೆ ಸಲ್ಲುತ್ತಿರುವ 77ನೇ ಗೌರವ ಡಾಕ್ಟರೇಟ್ ಎಂಬುದನ್ನು ಕೇಳಿ ಬೆರಗಾದೆ. ‘ಇನ್ನು ಏಳು ಡಾಕ್ಟರೇಟ್ ಬಂದರೆ ನಿಮ್ಮ ಎಂಭತ್ನಾಲ್ಕರ ವಯಸ್ಸಿಗೆ ಸರಿಹೋಗುತ್ತದೆ‘ ಎಂದು ತಮಾಷೆ ಧಾಟಿಯಲ್ಲಿ ಹೇಳಿದೆ. ‘ಕೆಲವನ್ನು ನಿರಾಕರಿಸಿದ್ದೇನೆ, ಎಲ್ಲವನ್ನೂ ಒಪ್ಪಿಕೊಂಡಿದ್ದರೆ ನೂರರ ಗಡಿ ದಾಟುತ್ತಿತ್ತು‘ ಎಂದರು. ನೊಬೆಲ್ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ರಾವ್ ಹೆಸರು ಅನೇಕ ಸಲ ಪ್ರಸ್ತಾಪವಾಗಿದೆ. ಬೇಗ ಬರಲಿ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.

ನಾವು ಬೆಂಗಳೂರಿನಲ್ಲಿ ಇಳಿದಾಗ ಅವರನ್ನು ಕರೆದುಕೊಂಡು ಹೋಗಲು ಸಿಬ್ಬಂದಿ ಕಾಯುತ್ತಿರುತ್ತಾರೆಂದು ಭಾವಿಸಿದ್ದೆ. ‘ಭಾರತರತ್ನ‘ ಪ್ರಶಸ್ತಿಯ ಪ್ರೋಟೊಕಾಲ್ ಅದು. ಅವರ ಪ್ರಯಾಣದ ಬಗೆಗಿನ ಮಾಹಿತಿ ತಿಳಿಸಿದರೆ ಸರ್ಕಾರ ಆ ವ್ಯವಸ್ಥೆ ಮಾಡಬೇಕು. ಗುವಾಹಾಟಿಯಲ್ಲಿ ನಾನದನ್ನು ಗಮನಿಸಿದ್ದೆ. ಆದರೆ ಇಲ್ಲಿ ಆ ವೃದ್ಧದಂಪತಿ ತಮ್ಮ ಲಗ್ಗೇಜುಗಳನ್ನು ತಾವೇ ಹಿಡಿದು ಹೊರಟರು. ನಾನು ಆ ಬಗ್ಗೆ ಕೇಳಿದೆ. ‘ನಮಗಿನ್ನೂ ಶಕ್ತಿಯಿದೆ, ಹೀಗಾಗಿ ನಾನು ಯಾರಿಗೂ ಸದ್ಯ ಮಾಹಿತಿ ನೀಡುತ್ತಿಲ್ಲ‘ ಎಂದರು. ಹೋಗುವ ಮುನ್ನ ವಿಸಿಟಿಂಗ್ ಕಾರ್ಡ್ ಕೊಟ್ಟು ‘ದಯವಿಟ್ಟು ಬನ್ನಿ ಮತ್ತೆ ಭೇಟಿಯಾಗೋಣ‘ ಎಂದು ಆಪ್ತವಾಗಿ ಹೇಳಿದರು. ಅದರಲ್ಲಿ ಮೊಬೈಲ್ ನಂಬರ್ ಇರಲಿಲ್ಲ. ಕೇಳಿದೆ. ‘ನಾನು ಮೊಬೈಲ್ ಬಳಸುವುದಿಲ್ಲ‘ ಎಂದರು. ಕೌಟುಂಬಿಕ ಸಂಬಂಧದಲ್ಲಿ ಮಾತ್ರ ಮೊಬೈಲ್ ಬಳಸುತ್ತಾರೆಂದು ನಂತರ ತಿಳಿಯಿತು. ‘ಮೊಬೈಲ್ ನಮ್ಮ ಸೃಜನಶೀಲತೆ ಹಾಗೂ ಕ್ರಿಯಾಶೀಲತೆಗೆ ಅಡ್ಡಿ‘ ಎಂದು ಅವರು ಹೇಳಿದರು. ನಮ್ಮ ಹೊಸ ತಲೆಮಾರು ಇದನ್ನು ಗಮನಿಸಬೇಕು. ವಿಮಾನ ನಿಲ್ದಾಣದಲ್ಲಿ ಟ್ರಾಲಿ ತಳ್ಳುತ್ತಾ ರಾವ್ ದಂಪತಿ ತಮ್ಮ ಪಾಡಿಗೆ ತಾವು ಹೋಗುತ್ತಿದ್ದ ದೃಶ್ಯ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಮೂಡಿದೆ. ಶ್ರೇಷ್ಠ ವಿಜ್ಞಾನಿಯೊಬ್ಬರನ್ನು ಮಾತ್ರವಲ್ಲ ಶ್ರೇಷ್ಠ ಮನುಷ್ಯರೊಬ್ಬರನ್ನು ಭೇಟಿಯಾದ ಭಾವದಲ್ಲಿ ನಾನು ಮನೆಗೆ ಮರಳಿದೆ.

Leave a Reply

Your email address will not be published. Required fields are marked *

Back To Top