Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ಶ್ರೇಷ್ಠವಿದ್ವಾಂಸ ಡಾ. ನಡಹಳ್ಳಿ ರಂಗನಾಥ ಶರ್ಮಾ

Monday, 19.06.2017, 3:04 AM       No Comments

ಸಾಹಿತಿ, ವಾಗ್ಮಿ, ಘನಪಂಡಿತರಾಗಿದ್ದ ‘ಮಹಾಮಹೋಪಾಧ್ಯಾಯ’ ವಿದ್ವಾನ್ ಡಾ. ಎನ್. ರಂಗನಾಥ ಶರ್ಮಾ ಹಲವಾರು ವಿದ್ವತ್ಪೂರ್ಣ ಗ್ರಂಥಗಳನ್ನು ರಚಿಸಿದ್ದಾರೆ, ಸಂಸ್ಕೃತದಿಂದ ಕನ್ನಡಕ್ಕೆ ಕೃತಿಗಳನ್ನು ಅನುವಾದಿಸಿದ್ದಾರೆ. ವ್ಯಾಕರಣ, ಅಲಂಕಾರ, ವೇದಾಂತ ಶಾಸ್ತ್ರಗಳಲ್ಲಿ ಅವರಿಗಿದ್ದ ಪಾಂಡಿತ್ಯ ಅಸಾಮಾನ್ಯವಾದುದು.

 

 

ಕಾವ್ಯಶಾಸ್ತ್ರ ವಿನೋದೇನ ಕಾಲೋ ಗಚ್ಛತಿ ಧೀಮತಾಂ|

ವ್ಯಸನೇಷು ಚ ಮೂರ್ಖಾಣಾಂ ನಿದ್ರಯಾ ಕಲಹೇನ ವಾ||

-ಪಂಡಿತರು, ಸೃಜನಶೀಲರು ವ್ಯರ್ಥ ಕಾಲಹರಣ ಮಾಡುವುದಿಲ್ಲ; ಕಾವ್ಯರಚನೆ, ಶಾಸ್ತ್ರಾಭ್ಯಾಸ, ಸರಸ ಮಾತು, ಸುಖ ವಿಚಾರ ಗೋಷ್ಠಿಗಳಲ್ಲಿ ಕಾಲವನ್ನು ಕಳೆಯುತ್ತಾರೆ. ಆದರೆ ಮೂರ್ಖರು, ಜೂಜಾಟ, ದುಷ್ಟ ವ್ಯವಹಾರ, ದುಷ್ಟಸಂಘ, ಬರೀ ನಿದ್ದೆ, ಏನೂ ಇರದಿದ್ದರೆ ಕಾಲುಕೆರೆದು ಜಗಳವಾಡಿ ಕಾಲಹರಣ ಮಾಡುತ್ತಾರೆ ಎಂಬುದು ಇದರರ್ಥ.

ಕಾಲ ಯಾರಿಗೂ ಕಾಯದು. ಕಾಲದ ಸದುಪಯೋಗ ಆಗಬೇಕು ಎಂಬುದಕ್ಕೆ ನಾಡಿನ ಹಿರಿಯ ಪ್ರಾಜ್ಞರು, ಸಾಹಿತಿ, ವಾಗ್ಮಿ, ಘನಪಂಡಿತರಾಗಿದ್ದ ‘ಮಹಾಮಹೋಪಾಧ್ಯಾಯ’ ವಿದ್ವಾನ್ ಡಾ. ಎನ್. ರಂಗನಾಥ ಶರ್ಮಾ ಅವರೇ ಸಾಕ್ಷಿ. ಈ ಧೀಮಂತರು ಕಾಲಹರಣ ಮಾಡದೆ ಇಳಿಪ್ರಾಯದಲ್ಲಿಯೂ ಚೈತನ್ಯದ ಚಿಲುಮೆಯಾಗಿ ನಾಡಿನ ಕಣ್ಮಣಿಗಳಾಗಿದ್ದರು ಎಂಬುದು ಹೆಮ್ಮೆಯ ಸಂಗತಿ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ನಡಹಳ್ಳಿಯಲ್ಲಿ ತಿಮ್ಮಪ್ಪ ಮತ್ತು ಜಾನಕಮ್ಮನವರ ಮಗನಾಗಿ 1916ರ ಜನವರಿ 7ರಂದು ಜನಿಸಿದ ರಂಗನಾಥ ಶರ್ಮಾ ಅವರ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳು ಕ್ರಮವಾಗಿ ನಡಹಳ್ಳಿ ಮತ್ತು ಸೊರಬದಲ್ಲಿ ನಡೆದವು. ತಂದೆ ಮತ್ತು ಚಿಕ್ಕಪ್ಪ ಸಂಸ್ಕೃತದಲ್ಲಿ ಮಹಾನ್ ಪಂಡಿತರೆನಿಸಿದ್ದು ಶರ್ವರನ್ನು ಪ್ರಭಾವಿಸಿತ್ತು. ಕಿತ್ತು ತಿನ್ನುವ ಬಡತನದ ಮಧ್ಯೆಯೂ ಅವರಲ್ಲಿ ಓದಿನ ಹಂಬಲ ಮನೆಮಾಡಿತ್ತು. ಇಂಗ್ಲಿಷ್ ಕಲಿಕೆಗೆ ಆಸೆಯೇನೊ ಇತ್ತಾದರೂ, ಹೈಸ್ಕೂಲು ಸೇರಲು ಅವಕಾಶ ಇದ್ದುದು ಸಮೀಪದ ಶಿವಮೊಗ್ಗದಲ್ಲಿ ಮಾತ್ರ. ಜತೆಗೆ ಊಟ-ವಸತಿಯ ಯೋಚನೆಯೂ ದೊಡ್ಡದಾಗಿತ್ತು. ಹೀಗಾಗಿ, ಕನ್ನಡ-ಸಂಸ್ಕೃತ ಅಧ್ಯಯನ ಮಾಡಿದರೆ ಉಪಾಧ್ಯಾಯ ವೃತ್ತಿಯಾದರೂ ದೊರೆತು ಹೊಟ್ಟೆ ಹೊರೆದೀತೆಂಬ ಯೋಚನೆಯಲ್ಲಿ ಶರ್ಮಾ ಅಗಡಿಯ ಆನಂದವನ ಆಶ್ರಮ ಸೇರಿದರು. ಸಂಸ್ಕೃತ ಕಲಿಯುವವರಿಗೆ ಅಲ್ಲಿ ಉಚಿತ ಊಟ-ವಸತಿ ಇದ್ದದ್ದು ಅವರಿಗೆ ಆಕರ್ಷಕ ಆಹ್ವಾನವಾಗಿತ್ತಾದರೂ, ಮಲೆನಾಡ ಹುಡುಗನಿಗೆ ಬಯಲುಸೀಮೆಯ ವಾತಾವರಣ ಒಗ್ಗದಂತಾಯಿತು. ಹೀಗಾಗಿ, ಊರಿಗೆ ಮರಳಿ ಕೆಳದಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ಅಲ್ಲಿ ಕಾವ್ಯಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂದಿನ ದಾರಿ ಹಿಡಿದದ್ದು ಬೆಂಗಳೂರಿನ ಜಯಚಾಮರಾಜೇಂದ್ರ ಕಾಲೇಜಿನತ್ತ. ಅಲ್ಲಿ 11 ವರ್ಷ ಸತತ ಸಂಸ್ಕೃತಾಧ್ಯಯನ ಮಾಡಿ ವ್ಯಾಕರಣ, ಅಲಂಕಾರ ಶಾಸ್ತ್ರಗಳಲ್ಲಿ ಪಾಂಡಿತ್ಯ ಗಳಿಸಿ ಪದವಿ ಪಡೆದರು. ಜತೆಗೆ ಖಾಸಗಿಯಾಗಿ ಮದರಾಸ್ ವಿಶ್ವವಿದ್ಯಾಲಯದ ‘ಕನ್ನಡ ವಿದ್ವಾನ್’ ಮತ್ತು ಮೈಸೂರಿನ ‘ಕನ್ನಡ ಪಂಡಿತ್’ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ವಾರಾನ್ನ, ಭಿಕ್ಷಾನ್ನ, ಸ್ವಯಂಪಾಕಗಳ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಅವರು ಓದಿನಲ್ಲಿ ಮಾತ್ರ ಸದಾ ಮುಂದಿದ್ದರು. ಊಟಕ್ಕೆ ತಟ್ಟೆ ಇಲ್ಲದೆ, ಎಲೆಗೆ ಕಾಸಿಲ್ಲದೆ, ನೆಲದ ಮೇಲೆ ಊಟ ಮಾಡಿದ ಕಠಿಣ ದಿನಗಳೂ ಇದ್ದವು. 1941ರಲ್ಲಿ ಸಾಗರ ತಾಲೂಕು ಮಂಚಾಲೆಯ ಕಮಲಾಕ್ಷಮ್ಮನವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು. ಕಮಲಾಕ್ಷಮ್ಮನವರು 1973ರಲ್ಲಿ ಅನಾರೋಗ್ಯದಿಂದ ತೀರಿಕೊಂಡರು.

ಸ್ವಲ್ಪಕಾಲ ಪ್ರೌಢಶಾಲಾ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿ, ಬೇಲೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಾಪಕರಾಗಿ ಉದ್ಯೋಗ ಕೈಗೊಂಡ ರಂಗನಾಥ ಶರ್ವ, ನಂತರ ತಾವು ಕಲಿತ ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಸಂಸ್ಕೃತ ಮಹಾವಿದ್ಯಾಲಯದಲ್ಲಿ 1948ರಲ್ಲಿ ವ್ಯಾಕರಣ ಅಧ್ಯಾಪಕರಾಗಿ ನೇಮಕಗೊಂಡು, ಸುದೀರ್ಘ ಸೇವೆಸಲ್ಲಿಸಿ 1976ರಲ್ಲಿ ಪ್ರಾಧ್ಯಾಪಕ ಸ್ಥಾನದಿಂದ ನಿವೃತ್ತರಾದರು. 98ನೆಯ ವಯಸ್ಸಿನಲ್ಲಿ (25-1-2014) ಮೈಸೂರಿನಲ್ಲಿ ನಿಧನ ಹೊಂದಿದರು.

ಸಾಹಿತ್ಯ ಕೃಷಿಕ: ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪ್ರಕಾಂಡ ಪಂಡಿತರಾಗಿದ್ದ ಶರ್ವ, ಹಲವಾರು ವಿದ್ವತ್ಪೂರ್ಣ ಗ್ರಂಥಗಳನ್ನು ರಚಿಸಿದ್ದಾರೆ, ಸಂಸ್ಕೃತದಿಂದ ಕನ್ನಡಕ್ಕೆ ಕೃತಿಗಳನ್ನು ಅನುವಾದಿಸಿದ್ದಾರೆ. ಇವರು ಕನ್ನಡದಲ್ಲಿ 25, ಸಂಸ್ಕೃತದಲ್ಲಿ 14 ಕೃತಿಗಳನ್ನು ರಚಿಸಿದ್ದಾರೆ. 23ಕ್ಕೂ ಹೆಚ್ಚು ಕೃತಿಗಳನ್ನು ಅನುವಾದಿಸಿದ್ದಾರೆ. ಶ್ರೀಮದ್ ವಾಲ್ಮೀಕಿ ರಾಮಾಯಣ, ವಿಷ್ಣುಪುರಾಣ, ಭಾಗವತಗಳನ್ನು ಆಧುನಿಕ ಕನ್ನಡದಲ್ಲಿ ಅನುವಾದಿಸಿದ್ದಾರೆ. ಅನೇಕ ಹಳಗನ್ನಡ ಕಾವ್ಯಗಳನ್ನು ಹೊಸಗನ್ನಡದಲ್ಲಿ ನೀಡಿದ ಹೆಮ್ಮೆ ಇವರದು. ಸಂದರ್ಭಸೂಕ್ತಿ, ಸೂಕ್ತಿ-ವ್ಯಾಪ್ತಿ, ಅಮರಕೋಶ, ಭಗವದ್ಗೀತೆ, ವ್ಯಾಸತಾತ್ಪರ್ಯನಿರ್ಣಯ ಇವುಗಳ ಮೂಲ ಅನುವಾದಗಳು, ಸಂಸ್ಕೃತಂ ನಾಮ ದೈವೀವಾಕ್ ಇತ್ಯಾದಿಗಳು ಇವರ ಸಂಸ್ಕೃತ ಕೃತಿಗಳಲ್ಲಿ ಪ್ರಸಿದ್ಧವಾದುವು. ಶ್ರೀಮದ್ ಮಾಧವೀಯ ಶಂಕರವಿಜಯವನ್ನು ಸಂಗ್ರಹಿಸಿ, ಶ್ರೀ ಶಂಕರಚರಿತಾಮೃತಮ್ ಎಂಬ ಶಂಕರರ ಜೀವನಚರಿತ್ರೆಯನ್ನು ಸಂಸ್ಕೃತದ ಅನುಷ್ಟುಪ್ ಛಂದಸ್ಸಿನಲ್ಲಿ ರಚಿಸಿ, ಇದರ ಜತೆಗೆ ಕನ್ನಡ ಅನುವಾದವನ್ನೂ ನೀಡಿದ್ದಾರೆ. ಡಿವಿಜಿಯವರ ಮುನ್ನುಡಿಯೊಂದಿಗೆ ಪ್ರಕಟಗೊಂಡ ರಂಗನಾಥ ಶರ್ಮಾ ಅವರ ಶ್ರೀಮದ್ ವಾಲ್ಮೀಕಿ ರಾಮಾಯಣದ 7 ಸಂಪುಟಗಳ ಅನುವಾದಿತ ಕೃತಿ ಅತ್ಯಂತ ಪ್ರಸಿದ್ಧವಾದುದು. ಅವರು ವಿಷ್ಣುಪುರಾಣ, ಶ್ರೀಮದ್ಭಾಗವತ, ಅಮರಕೋಶ ಮುಂತಾದುವುಗಳನ್ನು ಸಂಪಾದಿಸಿ, ಅನುವಾದಿಸಿದ್ದಾರೆ. ಶ್ರೀಶಂಕರ ಸೂಕ್ತಿಮುಕ್ತಾವಳಿ ಪ್ರಸಿದ್ಧವಾಗಿದೆ. ಲೌಕಿಕನ್ಯಾಯಗಳು ಎಂಬ ಕನ್ನಡ ಕೃತಿಯಲ್ಲಿ 219 ನೀತಿಸೂತ್ರಗಳನ್ನು ವಿವರಿಸಿರುವ ಅವರು ಡಿವಿಜಿಯವರ ಮರಣಾನಂತರ ‘ಮಂಕುತಿಮ್ಮನ ಕಗ್ಗ’ದ ಮುಂದುವರಿದ ಭಾಗವಾದ ‘ಮರುಳ ಮುನಿಯನ ಕಗ್ಗ’ವನ್ನು ಸಂಪಾದಿಸಿ ಪ್ರಕಟಿಸಿದರು. ಸಂಸ್ಕೃತ ಕೃತಿಗಳಲ್ಲಿ ಪ್ರಮುಖವಾದುವು ‘ಬಾಹುಬಲಿ ವಿಜಯಂ’ ಎಂಬ ಐತಿಹಾಸಿಕ ನಾಟಕ (1980) ಮತ್ತು ಮಹಾಭಾರತದ ಆದಿಪರ್ವವನ್ನು ಆಧರಿಸಿದ ‘ಏಕಚಕ್ರಂ’ ಎಂಬ ಪೌರಾಣಿಕ ನಾಟಕ (1990). ಇವರ ‘ಹೊಸಗನ್ನಡ ವ್ಯಾಕರಣ’ ಕೃತಿ 2010ರಲ್ಲಿ ಪ್ರಕಟಗೊಂಡು ಪ್ರಸಿದ್ಧಿ ಪಡೆದಿದೆ.

ಹಿರಿಮೆ-ಗರಿಮೆ: ರಂಗನಾಥ ಶರ್ಮಾ ಅವರು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಘನಾಂತ ಪಂಡಿತರು. ವ್ಯಾಕರಣ, ಅಲಂಕಾರ, ವೇದಾಂತ ಶಾಸ್ತ್ರಗಳಲ್ಲಿ ಅವರಿಗಿದ್ದ ಪಾಂಡಿತ್ಯ ಅಸಾಮಾನ್ಯವಾದುದು. ಕನ್ನಡ ಸಾಹಿತ್ಯ ಪರಿಷತ್ತಿನ ಹಳಗನ್ನಡ ಗ್ರಂಥ ಸಂಪಾದನಾ ಸಮಿತಿಗೆ ಅಧ್ಯಕ್ಷರಾಗಿ ಅನೇಕ ಗ್ರಂಥಗಳ ಪ್ರಕಟಣೆಗೆ ಅವರು ಕಾರಣಕರ್ತರಾದವರು. ಐದನೆಯ ಅಖಿಲ ಕರ್ನಾಟಕ ಸಂಸ್ಕೃತ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದುದಲ್ಲದೆ, ಅನೇಕ ಮಠ-ಮಂದಿರ, ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ಸಂಸ್ಕೃತ ಅಧ್ಯಾಪನಕ್ಕಾಗಿ ರಾಷ್ಟ್ರಪ್ರಶಸ್ತಿ ಮತ್ತು ಸಾಹಿತ್ಯಸೇವೆಗಾಗಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ಸಂದಿವೆ. ಡಿವಿಜಿ ಬಳಗ ಕೊಡಮಾಡುವ ಡಿವಿಜಿ ಪ್ರಶಸ್ತಿಯ ಮೊದಲ ಗೌರವ ಪಡೆದ ಹಿರಿಮೆ ಇವರದು. ಸಂಸ್ಕೃತ ಭಾಷಾ ವೈವಿಧ್ಯಕ್ಕಾಗಿ ತಿರುಪತಿಯ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ‘ಮಹಾಮಹೋಪಾಧ್ಯಾಯ’ ಎಂಬ ರಾಷ್ಟ್ರೀಯ ಪ್ರಶಸ್ತಿ, ಸಂಸ್ಕೃತ ಸೇವೆಗಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ 2010ರಲ್ಲಿ ಗೌರವ ಡಾಕ್ಟರೇಟ್ (ಡಿ.ಲಿಟ್) ಪದವಿ, ಆದಿಚುಂಚನಗಿರಿ ಮಹಾಸಂಸ್ಥಾನ ಕೊಡಮಾಡುವ ‘ಚುಂಚಶ್ರೀ’ ಪ್ರಶಸ್ತಿ, ರಾಷ್ಟ್ರಪತಿ ಪುರಸ್ಕಾರ, ‘ವಿದ್ಯಾವಾರಿಧಿ’ ಬಿರುದು, ಹೊಸನಗರ ಶ್ರೀರಾಮಚಂದ್ರಾಪುರ ಮಠದಿಂದ ಕೊಡುವ ‘ಶಂಕರಕಿಂಕರ’ ಪ್ರಶಸ್ತಿಗಳನ್ನು ಶರ್ಮಾ ಅವರು ಪಡೆದು ಆ ಪ್ರಶಸ್ತಿಗಳ ಗೌರವವನ್ನು ಹೆಚ್ಚಿಸಿದ್ದಾರೆ.

ಡಿವಿಜಿಯವರ ಒಡನಾಡಿ: ರಂಗನಾಥ ಶರ್ಮಾ ಡಿವಿಜಿಯವರ ಒಡನಾಡಿ ಆಗಿದ್ದರು. ಈ ಒಡನಾಟದ ಉತ್ತುಂಗವನ್ನು ‘ಮರುಳ ಮುನಿಯನ ಕಗ್ಗ’ ಕೃತಿಯಲ್ಲಿ ಕಾಣಬಹುದು. ಡಿವಿಜಿ ಅವರು ಕಾಲಾನುಕಾಲಕ್ಕೆ ಬರೆದಿದ್ದ ಕವಿತೆಗಳನ್ನು ಸಂಗ್ರಹಿಸಿ ಇದರಲ್ಲಿ ಒಟ್ಟುಗೂಡಿಸಲಾಗಿದೆ. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯೊಂದಿಗೆ ಡಿವಿಜಿಯವರಿಗೆ ಸುದೀರ್ಘ ಒಡನಾಟವಿದ್ದುದರಿಂದ ಅವರ ಸೊಸೆ ವಸಂತಮ್ಮ (ಬಿಜಿಎಲ್ ಸ್ವಾಮಿಯವರ ಪತ್ನಿ) ಡಿವಿಜಿ ಕವಿತೆಗಳ ಪ್ರಕಟಣೆಯ ಹಕ್ಕನ್ನು ಸಂಸ್ಥೆಗೆ ಬಿಟ್ಟುಕೊಟ್ಟರು. ಸಂಸ್ಥೆ ಇದಕ್ಕಾಗಿ ಸಮಿತಿಯೊಂದನ್ನು ರಚಿಸಿ ನಿಟ್ಟೂರು ಶ್ರೀನಿವಾಸರಾಯರನ್ನು ಅಧ್ಯಕ್ಷರನ್ನಾಗಿ ನೇಮಿಸಿತು. ಡಿವಿಜಿಯವರ ಸಮಾನಮನಸ್ಕರೂ ಆಪ್ತರೂ ಆಗಿದ್ದ ರಂಗನಾಥ ಶರ್ವರಿಗೆ ಕವಿತೆಗಳ ಕರಡು ತಿದ್ದಲು ಆ ಸಮಿತಿ ಅನುವು ಮಾಡಿಕೊಟ್ಟಿತು. ಕರಡಿನಲ್ಲಿ ಕೆಲವೆಡೆ ಅಕ್ಷರಗಳು ಸ್ಪಷ್ಟವಿರಲಿಲ್ಲ, ಇನ್ನು ಕೆಲವೆಡೆ ಪದಗಳು ಬಿಟ್ಟುಹೋಗಿದ್ದುವು. ಛಂದಸ್ಸಿಗೂ ಅರ್ಥಕ್ಕೂ ಚ್ಯುತಿಯಾಗದಂತೆ ಈ ಎಲ್ಲ ಲೋಪಗಳನ್ನು ನಿವಾರಿಸಿ ಕರಡಚ್ಚು ತಿದ್ದುವ ಕಾರ್ಯವನ್ನು ಶರ್ಮಾ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಜತೆಗೆ ತಾವು ಸೇರಿಸಿದ ಪದಗಳನ್ನೂ ಸಾಲುಗಳನ್ನೂ ಒಳಗೊಂಡ ಕವಿತೆಗಳನ್ನು ಅನುಬಂಧವಾಗಿ ಸೇರಿಸಿದ್ದಾರೆ. ಈ ವಿವರಗಳನ್ನು ಮರುಳ ಮುನಿಯನ ಕಗ್ಗದ ಮುನ್ನುಡಿಯಲ್ಲಿ ಕಾಣಬಹುದು. ‘ಒಳ್ಳೆಯ ಕನ್ನಡ ಏನೆಂಬುದನ್ನು ಶರ್ಮರ ಕನ್ನಡ ತೋರಿಸುತ್ತದೆ’ ಎಂಬ ಅಭಿಪ್ರಾಯ ನೀಡಿದ ಡಿ.ವಿ.ಜಿ. ಮತ್ತು ಹಲವು ವಿದ್ವಾಂಸರ ಮಾತುಗಳು ಶರ್ಮಾ ಅವರ ಭಾಷಾಪ್ರಾಜ್ಞತೆಗೆ ಸಾಕ್ಷಿ.

ಕ್ರಿಯಾಶೀಲತೆ: ಸರಳ, ಸಜ್ಜನ, ಸದಾಚಾರಿ ಶರ್ಮರು ಸಾಹಿತ್ಯ ಕೃಷಿಯೊಂದಿಗೆ ಯಕ್ಷಗಾನ ಪ್ರಿಯರೂ, ಹಾಸ್ಯ ಮನೋಭಾವದವರೂ ಆಗಿದ್ದರು. ಸ್ವಗ್ರಾಮಕ್ಕೆ ಬಂದಾಗ ವೆಂಕಪ್ಪ ಅವರ ಮನೆಯಲ್ಲಿ ವಿದ್ವತ್ಪೂರ್ಣ ಚರ್ಚೆಗಳನ್ನು ನಡೆಸುತ್ತಿದ್ದರು. ಯಕ್ಷಗಾನ ತಾಳಮದ್ದಳೆಯನ್ನು ವೀಕ್ಷಿಸುತ್ತ, ಭಾಗವಹಿಸುತ್ತ, ಯಕ್ಷ ಕಲಾವಿದರಾಗಿಯೂ ಭಾಗಿಯಾಗುತ್ತಿದ್ದರು. ಕೊನೆಯ ದಿನಗಳವರೆಗೂ ಚುರುಕುತನವನ್ನು ಉಳಿಸಿಕೊಂಡಿದ್ದರು. 2013ರ ಮಾರ್ಚ್ 24ರಂದು ಮೈಸೂರಿನಲ್ಲಿ ನಡೆದ ಡಿ.ವಿ.ಜಿ.ಯವರ 125ನೇ ಜನ್ಮದಿನದ ನೆನಪಿನ ಸಮಾರಂಭದಲ್ಲಿ ಶರ್ವರಿಗೆ ‘ಡಿ.ವಿ.ಜಿ. ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರು ನೀಡಿದ ವಿದ್ವತ್ಪೂರ್ಣವೂ ಉಲ್ಲಾಸಪೂರ್ಣವೂ ಆದ ಸುದೀರ್ಘ ಉಪನ್ಯಾಸ ಅವರ ಚೈತನ್ಯಪೂರ್ಣ ವ್ಯಕ್ತಿತ್ವಕ್ಕೆ ಮೆರುಗಿಟ್ಟಂತಿತ್ತು.

ಇಂತಹ ಪ್ರಾಜ್ಞರು, ಶ್ರೇಷ್ಠರ ಬಗ್ಗೆ ಇಲ್ಲಿ ಪರಿಚಯಿಸಿರುವುದು ಕೇವಲ ಬಿಂದುವಿನ ಅಂಶದಷ್ಟು ಮಾತ್ರ. ಇವರ ಬಗ್ಗೆ, ಇವರ ಕೃತಿಗಳ ಬಗ್ಗೆ ಅಧ್ಯಯನಿಸಿದ ನಾಡಿನ ಅನೇಕ ವಿದ್ವಾಂಸರ ಮೂಲಕ ಶರ್ಮಾ ಅವರ ಅಗಾಧಜ್ಞಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ. ಇಂಥವರು ಸದಾ ಸ್ಮರಣಾರ್ಹರಾಗಿರಬೇಕೆಂಬುದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶಯವೂ ಹೌದು.

 

ಜನ್ಮಶತಾಬ್ಧಿ ಆಚರಣೆಗೆ ಇಂದು ಚಾಲನೆ

‘ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಕರ್ನಾಟಕ’

ಇದರ ಸೊರಬ ತಾಲೂಕು ಘಟಕ ಮತ್ತು ‘ವಿದ್ವಾನ್ ನಡಹಳ್ಳಿ ರಂಗನಾಥ ಶರ್ಮಾ ಶತಾಬ್ಧಿ ಆಚರಣಾ ಸಮಿತಿ, ನಡಹಳ್ಳಿ’ ಇವುಗಳ ಸಂಯುಕ್ತಾಶ್ರಯದಲ್ಲಿ, ವಿದ್ವಾನ್ ರಂಗನಾಥ ಶರ್ಮಾ ಅವರ ಜನ್ಮಶತಾಬ್ಧಿ ಆಚರಣೆಯ ಉದ್ಘಾಟನಾ ಸಮಾರಂಭವು ನಡಹಳ್ಳಿಯ ಶ್ರೀ ಮಾರಿಕಾಂಬಾ ದೇಗುಲದಲ್ಲಿ ಇಂದು (ಜೂ. 19) ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದ್ದು ನಾಡಿನ ಶ್ರೇಷ್ಠ ವಿದ್ವಾಂಸರು ಚಿಂತನ-ಮಂಥನದಲ್ಲಿ ಪಾಲ್ಗೊಳ್ಳಲಿದ್ದಾರೆ. ಜನ್ಮಶತಾಬ್ಧಿ ಆಚರಣೆ ಕಾರ್ಯಕ್ರಮಗಳು ಒಂದು ವರ್ಷಕಾಲ ನಡೆಯಲಿವೆ.

 

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *

Back To Top