Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಶ್ರೀ ವಿಜ್ಞಾನನಿಧಿತೀರ್ಥರು ಅನನ್ಯ ಚೈತನ್ಯದ ಸರಳ ಸಂನ್ಯಾಸಿ

Thursday, 14.09.2017, 3:01 AM       No Comments

ನಾತನಧರ್ಮದ ಜ್ಞಾನಪರಂಪರೆಯನ್ನು ಆಧುನಿಕ ಮನಸ್ಸುಗಳಿಗೆ ತಲುಪಿಸುವ ದೃಷ್ಟಿಯಿಂದ ರಾಷ್ಟ್ರೀಯ ವೇದವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಿದವರು ಶ್ರೀ ವಿಜ್ಞಾನನಿಧಿತೀರ್ಥ ಶ್ರೀಪಾದಂಗಳವರು. ದೇಶದ ವಿವಿಧೆಡೆ ಪ್ರತಿ ವರ್ಷ ರಾಷ್ಟ್ರೀಯ ವೇದವಿಜ್ಞಾನ ಸಮ್ಮೇಳನಗಳನ್ನು ನಡೆಸಿ; ಭಾರತೀಯ ವೇದವಿಜ್ಞಾನಗಳತ್ತ ಯುವಜನತೆ ಆಸಕ್ತಿ ತೋರುವಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ರೂಪಿಸಿದವರು ಅವರು. ಹರಿದಾಸಸಾಹಿತ್ಯ ಪ್ರಚಾರಕ್ಕೆಂದೇ ರಂಗವಿಠಲ ಮಾಸಪತ್ರಿಕೆ ಸ್ಥಾಪಿಸಿದ ಶ್ರೀಪಾದರ ಆರಾಧನೆಯ ನಿಮಿತ್ತ ಈ ಲೇಖನ.

| ಎಚ್.ಎಸ್. ಶ್ಯಾಮಾಚಾರ್

ಎಲ್ಲವೂ ಲೌಕಿಕಮಯವಾದ ಈ ಕಾಲದಲ್ಲಿ ವಿದ್ವತ್ತು, ಸದಾಚಾರ, ಅನುಷ್ಠಾನ, ವೇದವಿಜ್ಞಾನದ ಪ್ರಸರಣ, ಜನಪರ ಭಾವನೆ, ಸಾಮಾಜಿಕ ಸ್ಪಂದನವಿರಿಸಿಕೊಂಡ ಸರಳ ಶ್ರೇಷ್ಠರಾಗಿ ಅನೇಕ ಯತಿಗಳ ಗೌರವಾದರಗಳಿಗೆ ಭಾಜನರಾದವರು ಶ್ರೀ ವಿಜ್ಞಾನನಿಧಿ ತೀರ್ಥರು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಹೆಬ್ಬಣಿಗ್ರಾಮದ ಕೃಷ್ಣಮೂರ್ತಿ ಆಚಾರ್ಯ ಮತ್ತು ಲಕ್ಷ್ಮಮ್ಮನವರ ಮಗನಾಗಿ ಜನಿಸಿದ ಭೀಮಸೇನಾಚಾರ್ಯರು ವಿದ್ಯಾಭ್ಯಾಸದ ನಂತರ ಶ್ರೀಮಠದ ಪ್ರತಿನಿಧಿಯಾಗಿ, ಸಮಾಜಸೇವಕರಾಗಿ, ರಾಜಕೀಯ ಧುರೀಣರಾಗಿ, ಶ್ರೀಮಠದ ಕೋರ್ಟು ಕಚೇರಿಗಳ ಕೆಲಸಗಳನ್ನು ನಿಭಾಯಿಸುತ್ತಿದ್ದರು.

ಭೀಮಸೇನಾಚಾರ್ಯರ ಅಚಾರ-ವಿಚಾರ, ಧರ್ಮಶ್ರದ್ಧೆ ಹಾಗೂ ನ್ಯಾಯಯುತ ಕಾರ್ಯವೈಖರಿಗಳನ್ನು ಗಮನಿಸಿದ ಶ್ರೀ ವಿಜಯನಿಧಿತೀರ್ಥ ಶ್ರೀಪಾದಂಗಳವರು ಫಾಲ್ಗುಣ ಬಹುಳ ದ್ವಿತೀಯ ಅಂದರೆ 1987ರ ಮಾರ್ಚ್ 17ರಂದು ಸನ್ಯಾಸಾಶ್ರಮವನ್ನು ಕೊಟ್ಟು ಶ್ರೀ ವಿಜ್ಞಾನನಿಧಿತೀರ್ಥರೆಂದು ನಾಮಕರಣ ಮಾಡಿ ಜಗದ್ಗುರು ಶ್ರೀಮಧ್ವಾಚಾರ್ಯರ ಮೂಲಮಹಾಸಂಸ್ಥಾನ ಶ್ರೀಪದ್ಮನಾಭತೀರ್ಥರ ನೇರ ಪರಂಪರೆಯಾದ ಶ್ರೀ ಶ್ರೀಪಾದರಾಜರ ವೇದಾಂತಸಿಂಹಾಸನದ ಆಧಿಪತ್ಯ ವಹಿಸಿದರು.

ಅವರದು ಬಲು ಸರಳ ವ್ಯಕ್ತಿತ್ವ. ಮೇಲ್ನೋಟಕ್ಕೆ ಏನೂ ಅರಿಯದವರಂತಿದ್ದರೂ ಶಾಸ್ತ್ರವಿಷಯಕವಾದ ಪ್ರಮೇಯಗಳಲ್ಲಿ ಕೆಣಕಿದರೆ, ಚಾಣಕ್ಯತನದ ಪ್ರಶ್ನೆಗಳ ಸುರಿಮಳೆಯೇ ಆಗುತ್ತದೆ. ಯಾವುದೇ ವಾದವಿದ್ದಲ್ಲಿ ಅವುಗಳಿಗೆ ವೈಜ್ಞಾನಿಕ ವಿಶ್ಲೇಷಣೆ ಮತ್ತು ಸಂಖ್ಯಾಶಾಸ್ತ್ರದ ನಿರೂಪಣೆ ನೀಡುವರು. 21ನೇ ಶತಮಾನಕ್ಕೆ ತಕ್ಕ ವ್ಯಕ್ತಿತ್ವವನ್ನು ಹೊಂದಿದ್ದ ಅವರು ಪ್ರಾಚೀನ ಮತ್ತು ನವೀನ ಯುಗಗಳ ಸಮನ್ವಯ ಮಾಡುವುದರಲ್ಲಿ ಅತ್ಯಂತ ನಿಪುಣರಾಗಿದ್ದರು. ದೇಶದ ಸುಭಿಕ್ಷೆಗಾಗಿ 1998ರಲ್ಲಿ ಶ್ರೀ ಶ್ರೀಪಾದರಾಜರಿಗೆ ಲಕ್ಷಪುಷ್ಪಾರ್ಚನೆ ಹಮ್ಮಿಕೊಂಡಿದ್ದರು. 1999ರಲ್ಲಿ ಹೊಸಶತಮಾನ ಪ್ರಾರಂಭದ ಸಮಯ ದೇಶದ ಜನತೆ ಅನುಭವಿಸುವ ಪೀಡಾಪರಿಹಾರ್ಥವಾಗಿ ಬೆಂಗಳೂರಿನ ಶ್ರೀಮಠದಲ್ಲಿ ಕೋಟಿ ಪುಷ್ಪಾರ್ಚನೆ ಕಾರ್ಯಕ್ರಮ ನಡೆಸಿದ್ದರು.

ಶ್ರೀ ವಿಜ್ಞಾನನಿಧಿಗಳು ತೊಟ್ಟ ಕಾವಿವಸ್ತ್ರ ಅವರ ನಿಜವಾದ ತ್ಯಾಗದ ಸಂಕೇತ. ಜನಮನದ ಮಲಿನತೆ ತೊಡೆಯುವುದು ಅವರ ಅಭಿಲಾಷೆ. ಭಕ್ತರ ಸಂಕಷ್ಟಗಳ ಪರಿಹಾರ ಅವರ ಸಂಕಲ್ಪ. ಅದಕ್ಕಾಗಿ ವಿದ್ಯಾಮಂದಿರಗಳನ್ನು, ದೇವಸ್ಥಾನಗಳನ್ನು ನಿರ್ವಿುಸಿ, ನರಸಿಂಹತೀರ್ಥದ ಜೀಣೋದ್ಧಾರ ಮಾಡಿದರು.

ಶ್ರೀವಿಜ್ಞಾನನಿಧಿತೀರ್ಥರು ಪೂರ್ವಾಶ್ರಮದಲ್ಲಿ ಸಕ್ರಿಯ ರಾಜಕಾರಣಿಗಳಾಗಿದ್ದರಷ್ಟೆ. ಒಂದು ಬಾರಿ ಕೋಲಾರದ ಮುಳಬಾಗಿಲಿಗೆ ಇಂದಿರಾಗಾಂಧಿಯವರು ಬಂದಾಗ ನರಸಿಂಹತೀರ್ಥದಿಂದ ತಂದ ದೇವರ ನೈವೇದ್ಯ ಅಂದಿನ ಊಟವಾಗಿತ್ತು. ಇದು ಇಂದಿರಾಜಿಯವರಿಗೆ ಸಾಮಾನ್ಯ ಊಟವಾಗಿ ಕಂಡಿರಲಿಲ್ಲ. ಕೇಳಿ ಕೇಳಿ ರುಚಿಯಾದ ಅಡುಗೆಯನ್ನು ಹಾಕಿಸಿಕೊಂಡು ಊಟ ಮಾಡಿದ್ದರು. ದೆಹಲಿ ತಲುಪಿದ ಮೇಲೆ ವೈಯಕ್ತಿಕ ಪತ್ರದ ಮೂಲಕ ತಾವು ಉಂಡ ಊಟದ ಮಹಿಮೆಯನ್ನು ಉಲ್ಲೇಖಿಸಿ ಅಭಿಮಾನ ವ್ಯಕ್ತಪಡಿಸಿದ್ದರು.

ನಾನಾ ಭಾಗಗಳಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನದ ಪ್ರತಿಷ್ಠೆ ಮಾಡಿದರು. ಶ್ರೀ ಶ್ರೀಪಾದರಾಜರಿಂದ ಪ್ರವರ್ತಿತವಾದ ದಾಸಸಾಹಿತ್ಯದ ಘನವಿಚಾರ ಲಹರಿಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸಲು 2004ರಲ್ಲಿ ‘ರಂಗವಿಠಲ’ ಎನ್ನುವ ದಾಸಸಾಹಿತ್ಯ ಪತ್ರಿಕೆಯ ಮೂಲಕ ಹಾಗೂ ಪ್ರತಿವರ್ಷವೂ ಒಂದು ತಿಂಗಳ ದಿವಸ ಹರಿದಾಸ ಚೈತ್ರಯಾತ್ರೆ ಕೈಗೊಂಡು ಹಳ್ಳಿ, ನಗರ ಪಟ್ಟಣಗಳಲ್ಲಿ ಹಗಲಿರುಳೆನ್ನದೆ ದಾಸಸಾಹಿತ್ಯದ ಡಿಂಡಿಮ ಮೊಳಗಿಸಿದರು.

‘ಭಾರತೀಯ ಸಂಸ್ಕೃತಿ ನಿರಂತರವಾಗಿ ಆಧ್ಯಾತ್ಮಿಕ ಪ್ರವೃತ್ತಿಯ ಬೇರಿನಿಂದ ಬೆಳೆಯುತ್ತಿದೆ. ಹೀಗಾಗಿ ಮಠಗಳು ಸಮಾಜದ ನಡುವೆ ಮುಖ್ಯ ಧರ್ಮಸಂಸ್ಥೆಗಳಾಗಿ ಸಮಾಜಕ್ಕೆ ಸ್ಪಂದಿಸಬೇಕಾದ ಅಗತ್ಯವಿದೆ. ನವಯುಗದ ಆಶಯಗಳಿಗೆ, ಅಗತ್ಯಗಳಿಗೆ, ಸವಾಲುಗಳಿಗೆ ಕಣ್ಣು ಕಿವಿ ಮನಸ್ಸುಗಳನ್ನು ಮುಕ್ತವಾಗಿ ತೆರೆಯದೆ – ಮಠಗಳೇ ಆಗಲಿ, ವ್ಯಕ್ತಿಗಳೇ ಆಗಲಿ, ಯಾರೂ ಉಳಿಯುವುದು ಸಾಧ್ಯವಿಲ್ಲ’ ಎಂದು ಪದೇ ಪದೇ ಹೇಳುತ್ತಿದ್ದ ವಿಜ್ಞಾನನಿಧಿತೀರ್ಥರು ಈ ನಿಟ್ಟಿನಲ್ಲಿ ಯುವಜನಾಂಗವನ್ನು ಸ್ಪಂದಿಸುವಂತಹ, ಭಾರತೀಯ ಸನಾತನ ಧರ್ಮದ ಮಾಹಿತಿಗಳನ್ನು ಪರಿಣಾಮಕಾರಿಯಾಗಿ ಸಾರುವಂತಹ ‘ಭಾರತೀಯ ವೇದವಿಜ್ಞಾನ ಸಂಸ್ಥೆ’ಯನ್ನು ಪ್ರಾರಂಭಿಸಿದರು. ಆ ಮೂಲಕ ಅತ್ಯಂತ ಮಹತ್ತರ ಪ್ರಕಟನೆಗಳನ್ನು ಕೈಗೊಂಡರು. ಭಾರತೀಯ ಚಿಂತನೆ- ಸಾಧನೆಗಳನ್ನು ಮಕ್ಕಳ ಮುಂದೆ ಯುವ ಜನಾಂಗದ ಮುಂದೆ ಈ ಸಂಸ್ಥೆಯ ಮೂಲಕ ಬಿಚ್ಚಿಟ್ಟರು. ಸರ್ವಧರ್ಮಗಳೊಡನೆ ಎಲ್ಲರನ್ನೂ ಗೌರವಿಸುತ್ತ ಸಹಜೀವನ, ಸಂಘಜೀವನದ ಕಲೆಯನ್ನು ಅರಗಿಸಿಕೊಂಡು ವಿಶ್ವಕುಟುಂಬದ ಅದ್ಭುತ ಕಲ್ಪನೆಯನ್ನು ಸಾಕಾರಗೊಳಿಸಿದ್ದರು.

ಜನೋಪಕಾರ ಕಾರ್ಯಗಳು

ಶ್ರೀ ವಿಜ್ಞಾನನಿಧಿತೀರ್ಥ ಶ್ರೀಪಾದಂಗಳವರು ಪೂರ್ವಾಶ್ರಮದಲ್ಲಿ ಸಕ್ರಿಯ ರಾಜಕಾರಣಿಗಳೂ ಆಗಿದ್ದರು. ಮುಳಬಾಗಿಲಿನ ಸಾಮಾಜಿಕ ಸಂಘಸಂಸ್ಥೆಗಳಲ್ಲಿ ಕೆಲಸಮಾಡುತ್ತ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಭೀಮಾಚಾರ್ಯರ ಕರ್ತೃತ್ವ ಶಕ್ತಿಯನ್ನು ಕಂಡ ಮುಳಬಾಗಿಲಿನ ಜನ ಅವರನ್ನು ಪುರಸಭಾ ಸದಸ್ಯರನಾಗಿ ಆಯ್ಕೆ ಮಾಡಿದರು. ಬಡಮಕ್ಕಳು, ದೀನದಲಿತರ ಮಕ್ಕಳು, ಶಿಕ್ಷಣದ ಅವಕಾಶದಿಂದ ವಂಚಿತರಾದವರಿಗೆ ವಿದ್ಯಾಭ್ಯಾಸ ದೊರಕಿಸಿಕೊಡಬೇಕೆಂಬುದು ಅವರ ಧ್ಯೇಯವಾಗಿತ್ತು. ಬಡಮಕ್ಕಳನ್ನು ಕಂಡರೆ ಅವರ ವಿದ್ಯಾಭ್ಯಾಸ ಹಾಗೂ ಮನೆಯ ಬಗ್ಗೆ ತಿಳಿದುಕೊಂಡು ಸಹಾಯ ಮಾಡುತ್ತಿದ್ದರು. ಇಂದು ಅವರಿಂದ ಸಹಾಯ ಪಡೆದವರು ರಾಜ್ಯ, ಹೊರರಾಜ್ಯ ಹಾಗೂ ಪರದೇಶದಲ್ಲೂ ನೆಲೆಸಿದ್ದಾರೆ.

1990ರಲ್ಲಿ ಶ್ರೀಪಾದಂಗಳವರ ಬಹುಕಾಲದ ಅಪೇಕ್ಷೆಯಾದ ನರಸಿಂಹತೀರ್ಥ ಕಟ್ಟಡದ ಜೀಣೋದ್ಧಾರ ಕೆಲಸವಾಯಿತು. ಶ್ರೀಮಠದ ಮೂಲಪುರುಷರಾದ ಶ್ರೀಪದ್ಮನಾಭತೀರ್ಥರ ಬೃಂದಾವನವು ಆನೆಗೊಂದಿಯಲ್ಲಿದ್ದರೂ ಆ ಬೃಂದಾವನದ ತದ್ರೂಪವನ್ನು ಶ್ರೀ ಶ್ರೀಪಾದರಾಜರ ಎದುರಿಗೆ ಪ್ರತಿಷ್ಠಿಸಿರುವುದು ಅರ್ಥಪೂರ್ಣ. ನರಸಿಂಹತೀರ್ಥದ ಶ್ರೀಮಠದಲ್ಲಿ ನಾಲ್ಕೂ ಸಭಾಮಂಟಪಗಳು, ಪೂಜಾಮಂದಿರಗಳು ಮುಂತಾದವನ್ನು ನಿರ್ವಿುಸಿದ್ದಾರೆ. ಬಡಜನರಿಗೆ ಅನುಕೂಲವಾಗಲು ಸಭಾಂಗಣ ನಿರ್ವಿುಸಲಾಗಿದೆ. ಮುಳಬಾಗಿಲಿನ ಶ್ರೀಕ್ಷೇತ್ರ ನರಸಿಂಹತೀರ್ಥದಲ್ಲಿ ಇದೇ 17, 18 ಮತ್ತು 19ರಂದು ಶ್ರೀಪಾದಂಗಳವರ ಎಂಟನೇ ವರ್ಷದ ಜರುಗಲಿದೆ.

 

Leave a Reply

Your email address will not be published. Required fields are marked *

Back To Top