Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಶ್ರೀರಾಮನ ಶಾಲೆಯಲ್ಲಿ ಅನ್ನಕ್ಕೂ ತತ್ವಾರ

Saturday, 09.09.2017, 3:02 AM       No Comments

| ಕೋಟ ಶ್ರೀನಿವಾಸಪೂಜಾರಿ

ಬಂಟ್ವಾಳ ತಾಲೂಕಿನ, ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರ ಶಾಲೆಯ ಮುಖ್ಯಸ್ಥ ಪ್ರಭಾಕರ ಭಟ್ಟರ ವಿಚಾರಗಳನ್ನು ಒಪ್ಪುವವರು, ಒಪ್ಪದಿರುವವರು ಇರಬಹುದು. ಆದರೆ ಶಾಲೆಯ ಶಿಸ್ತು, ಶುಚಿತ್ವ, ಶಿಕ್ಷಣ ಪದ್ಧತಿ, ಶಿಕ್ಷಣದ ಜತೆಯಲ್ಲಿ ಗ್ರಾಮಾಭಿವೃದ್ಧಿಯ ಕಲಿಕೆ, ಮಕ್ಕಳೇ ಬೆಳೆಸುವ ಕೈತೋಟ, ಕೃಷಿ ಗದ್ದೆಗಳ ನಾಟಿಯ ಪ್ರಾತ್ಯಕ್ಷಿಕೆ ಇವನ್ನೆಲ್ಲ ಗಮನಿಸಿದರೆ ಭಟ್ಟರ ಶ್ರಮವನ್ನು ವಿರೋಧಿಗಳೂ ಅಲ್ಲಗಳೆಯುವಂತಿಲ್ಲ. ರಾಜ್ಯದ ಸರ್ಕಾರಿ ಶಾಲೆಗಳನ್ನೊಮ್ಮೆ ಗಮನಿಸಿದರೆ, ಉಚಿತ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಆರೋಗ್ಯ ತಪಾಸಣೆ, ಬೈಸಿಕಲ್ ಇವೆಲ್ಲ ಕೊಟ್ಟೂ, ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿವೆ. ಮಂಗಳೂರು ಜಿಲ್ಲೆಯಲ್ಲಿ 18ಕ್ಕೂ ಮಿಕ್ಕಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 10ಕ್ಕೂ ಕಡಿಮೆಯಿದ್ದು, ಯಾವುದೇ ಕ್ಷಣದಲ್ಲಿ ಅವು ಮುಚ್ಚುವ ಸಂಭವವಿದೆ. ಅಂದರೆ ಮುಖ್ಯಮಂತ್ರಿಗಳು ಕಳೆದ ವರ್ಷ ಮಂಡಿಸಿದ ಬಜೆಟ್​ನಲ್ಲಿ 18,266 ಕೋಟಿ ರೂ.ಗಳನ್ನು ಶಿಕ್ಷಣಕೋಸ್ಕರ ಮೀಸಲಿಟ್ಟಿದ್ದರೂ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುವ ಬದಲು ಸಿರಿವಂತರ ಮಕ್ಕಳಿರಲಿ, ಬಡವರ ಮಕ್ಕಳೂ ಶಾಲೆಯತ್ತ ಸುಳಿಯದಂಥ ಸ್ಥಿತಿ ನಿರ್ವಣವಾಗುತ್ತಿರುವಾಗ, ಶ್ರೀರಾಮ ಶಾಲೆಯಲ್ಲಿ 2500ಕ್ಕೂ ಮಿಕ್ಕಿ ಮಕ್ಕಳು ಸಂತಸದಿಂದ ಕಲಿಯುತ್ತಾರೆಂದರೆ ಆಳುಗರು ಇದಕ್ಕೆ ಸವಾಲೊಡ್ಡುವಂಥ ಶಾಲೆ ನಿರ್ವಿುಸಿ ತೋರಿಸಬೇಕಲ್ಲದೆ, ಬಡವರ ಮಕ್ಕಳು ಕಲಿಯುವ ಶಾಲೆಗಳ ಗೇಟುಮುಚ್ಚುವ ಕೆಲಸ ಮಾಡುವುದೆಷ್ಟು ಸರಿ..?

ಹಸಿವುಮುಕ್ತ ರಾಜ್ಯ ಸೃಷ್ಟಿಸುವ ಗುರಿಯಿರುವ ಈ ಸರ್ಕಾರ, ಅದೇಕೆ ಧ್ವನಿಯಿಲ್ಲದ ಮಕ್ಕಳ ಅನ್ನ ಕಸಿಯುವ ಇಂಥ ಸಮಸ್ಯೆಗಳನ್ನು ಮೈಮೇಲೆಳೆದುಕೊಳ್ಳುತ್ತಿದೆ? ಈ ಶಾಲೆಯಲ್ಲಿ ಶೋಷಿತ ಸಮಾಜದ ಹಸುಳೆಗಳು, ಬಾಯಿತುಂಬ ಉಣ್ಣುತ್ತಿದ್ದುದನ್ನು ಕಂಡರೆ ‘ಅನ್ನ ಕೊಡಬೇಡಿ’ ಎಂದು ಆದೇಶಿಸುವವರ ಕಣ್ಣುಗಳೂ ತುಂಬಿಬರಬೇಕು ಎನ್ನುವಂತಿದೆ. ಕರಾವಳಿ ಜಿಲ್ಲೆಯಲ್ಲಿ ಜಾತಿ-ಧರ್ಮದ ಹೆಸರಲ್ಲಿ ನಡೆದ ಕತ್ತಿಕಾಳಗಕ್ಕೆ ಮುಕ್ತಿ ಸಿಗುವ ಮೊದಲೇ, ‘ಅಹಿಂದ’ ಮಕ್ಕಳು ಅನ್ನದ ಹೆಸರಲ್ಲಿ ಖಾಲಿಬಟ್ಟಲು ಬಡಿಯುತ್ತ ಬೀದಿಗಿಳಿದಿವೆ. ಮಕ್ಕಳಷ್ಟೇ ಬೀದಿಗೆ ಬಂದರೆ? ಅವರ ಹಿಂದೆ ಬೇರಾವ ಶಕ್ತಿಗಳು ಇರಲಿಲ್ಲವೇ? ಎಂದು ಕೇಳುವವರಿದ್ದಾರೆ, ಇರಬಹುದು. ಹಾಗಿದ್ದರೆೆ ಮಕ್ಕಳಿಗೆ ಅನ್ನ ಕೊಡುವ ಕೊಲ್ಲೂರು ದೇವಳದ ಕೈ ತಡೆದಿದ್ದೇಕೆ? ಧಾರ್ವಿುಕದತ್ತಿ ಇಲಾಖೆ ಕಾನೂನು ಪ್ರಕಾರವೇ ನಡೆದುಕೊಂಡಿದೆ. ದೇವಸ್ಥಾನಗಳ ಹಣ ಸಾರ್ವಜನಿಕರದ್ದು, ಇಲಾಖೆಯ ಕಾನೂನಿನಲ್ಲಿ ಖಾಸಗಿ ಶಾಲೆಗಳಿಗೆ ಊಟ ಕೊಡಬೇಕೆಂಬ ನಿಯಮವಿಲ್ಲ ಎನ್ನುವವರು ಇತರ ಶಾಲೆಗಳಿಗೆ ಊಟ ಕೊಡುತ್ತಾರಲ್ಲ? ಯಾವ ಧಾರ್ವಿುಕದತ್ತಿ ಕಾಯಿದೆಯಡಿ ಬೇರೆ ಶಾಲೆಗಳಿಗೆ ಊಟ ಕೊಡುತ್ತೀರಿ? ನಮ್ಮ ಮಕ್ಕಳಿಗೇಕೆ ಕೊಡುವುದಿಲ್ಲ? ಎಂದು ಹೆತ್ತವರು ಕೇಳಿದರೆ ಸರ್ಕಾರಕ್ಕೂ ಉತ್ತರ ಕೊಡಲಾಗದು.

ರಾಜ್ಯ ಸರ್ಕಾರವಿಂದು 48,000ಕ್ಕೂ ಮಿಕ್ಕಿ ಶಾಲೆಗಳಿಗೆ ಬಿಸಿಯೂಟ ಒದಗಿಸುತ್ತಿದ್ದು, ಸುಮಾರು 1 ಕೋಟಿ ಮಕ್ಕಳು ಇದನ್ನು ಉಣ್ಣುತ್ತಿದ್ದಾರೆ. ಯಾವ ಪಕ್ಷದ್ದೇ ಸರ್ಕಾರವಿರಲಿ ಇದೇ ಕೊಲ್ಲೂರು ದೇವಸ್ಥಾನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಊಟ ಮಾಡುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯಾಪ್ತಿಯಲ್ಲಿ ಪ್ರಥಮದರ್ಜೆ ಕಾಲೇಜೂ ಸೇರಿದಂತೆ 3 ಖಾಸಗಿ ಶಾಲೆಗಳಿವೆ. ಮಾತ್ರವಲ್ಲ, ಒಂದು ಸರ್ಕಾರಿ ಪ್ರಾಥಮಿಕ ಶಾಲೆಗೂ ಪ್ರಸಾದ ರೂಪದಲ್ಲಿ ಮಕ್ಕಳಿಗೆ ಈಗಲೂ ಊಟ ಬಡಿಸಲಾಗುತ್ತಿದೆ. ಹಾಗಿದ್ದರೆ ಕಾನೂನು ಶ್ರೀರಾಮ ಶಾಲೆಗೆ ಮಾತ್ರ ಅನ್ವಯಿಸುತ್ತದೆಯೇ?.

‘ಮಕ್ಕಳಿಗೆ ಊಟ ಕೊಡುವುದು ಬಿಡುವುದು ನಮ್ಮಿಷ್ಟ’ ಎಂದು ಸರ್ಕಾರ ಸವಾಲು ಹಾಕಬಹುದಾದರೂ, 2500ಕ್ಕೂ ಮಿಕ್ಕಿ ಬಡಮಕ್ಕಳು ದೇವರನ್ನು ನೆನೆದು ಉಣ್ಣುವ ಅನ್ನವನ್ನು ಕಸಿದ ಕಾರಣಕ್ಕೆ ಸರ್ಕಾರಕ್ಕೆ ವಿಶೇಷ ಶಕ್ತಿ ಬರುವುದಾದರೆ, ಬೇಗನೆ ಆ ಪುಣ್ಯ ಕಟ್ಟಿಕೊಳ್ಳಿ. ಮುಜರಾಯಿ ಇಲಾಖೆಯಡಿ ಬರುವ ಇತರ ದೇವಾಲಯಗಳು ಖಾಸಗಿ ಶಾಲೆಗಳಿಗೆ ಪ್ರಸಾದ ರೂಪದಲ್ಲಿ ಮಕ್ಕಳಿಗೆ ಊಟ ನೀಡುತ್ತಿವೆ. ಅದ್ಯಾವುದಕ್ಕೂ ಅಡ್ಡಬರದ ಕಾನೂನು ಶ್ರೀರಾಮ ಶಾಲಾಮಕ್ಕಳ ಊಟಕ್ಕೆ ಮಾತ್ರ ಅಡ್ಡ ಬರುವುದಾದರೆ ರಾಜ್ಯದಲ್ಲಿ ಒಂದೇ ಇಲಾಖೆಯಲ್ಲಿ ಎರಡು ಕಾನೂನುಗಳಿರಲು ಹೇಗೆ ಸಾಧ್ಯ?

2007-08ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ, ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿದ್ದಾಗ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮುಜರಾಯಿ ಕಮಿಷನರ್​ರವರ ಪ್ರಸ್ತಾವನೆಗೆ ಸೂಕ್ತ ಆದೇಶ ನೀಡಿ ಕೊಲ್ಲೂರು ದೇವಳದಿಂದ ಶ್ರೀರಾಮ ಶಾಲೆಯ ಮಕ್ಕಳಿಗೆ ಭೋಜನ ನೀಡಲು ಆದೇಶಿಸುತ್ತಾರೆ. ಆಗ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಒಟ್ಟು ವಾರ್ಷಿಕ ಆದಾಯ ಸುಮಾರು 9 ಕೋಟಿ ರೂ.ಗಳು. ಮಕ್ಕಳಿಗೆ ಊಟ ಕೊಟ್ಟಿದ್ದರಿಂದ ದೇವಸ್ಥಾನಕ್ಕಾಗಲಿ, ಇಲಾಖೆಗಾಗಲಿ, ಸರ್ಕಾರಕ್ಕಾಗಲಿ ಆರ್ಥಿಕ ನಷ್ಠವಾಗುತ್ತಿದೆಯೆಂದು ಸರ್ಕಾರ ವಾದಿಸುತ್ತಿದ್ದರೆ, ಅಂದಿದ್ದ 9 ಕೋಟಿ ರೂ. ವಾರ್ಷಿಕ ಆದಾಯ ಇಂದು 33 ಕೋಟಿ ರೂ.ಗೆ ತಲುಪಿದೆ. ಭಕ್ತರ ಹಣವನ್ನು ಬಡಮಕ್ಕಳ ಅನ್ನಕ್ಕೂ ಕೊಡುವುದಿಲ್ಲ ಎನ್ನುವುದು ಸರ್ಕಾರಕ್ಕೆ ಶೋಭೆ ತರುವುದೇ? ಬಂಟ್ವಾಳ ಕ್ಷೇತ್ರದ ರಾಜಕಾರಣದ ಚರ್ಚೆಗಳು ಪರಾಕಾಷ್ಠೆಗೆ ತಲುಪಿದಾಗ ಶಾಲಾ ಮಕ್ಕಳ ಊಟವು ಕಾನೂನುಬಾಹಿರವೆಂದು ಸರ್ಕಾರಕ್ಕೆ ನೆನಪಾಯಿತಾ? ಯಾವ ಸರ್ಕಾರದ ಅವಧಿಯಲ್ಲಿ ಬಡಮಕ್ಕಳಿಗೆ ಊಟ ಕೊಡಲಾಯಿತು ಎಂಬುದಕ್ಕಿಂತ ಯೋಜನೆಯ ಉದ್ದೇಶವೇನಿತ್ತು ಎಂಬುವುದನ್ನು ಅರ್ಥಮಾಡಿಕೊಳ್ಳಬೇಕು.

2004-05ನೇ ವರ್ಷದಲ್ಲಿ ವಿವಿಧ ಜನಪ್ರತಿನಿಧಿಗಳ ಕೋರಿಕೆಯ ಮೇರೆಗೆ ಹೊಳೆನರಸೀಪುರ, ಕನಕಪುರ, ಹೂವಿನಡಗಲಿ, ಜೇವರ್ಗಿ ಶಾಲೆಗಳಿಗೆ ಅನ್ನಪ್ರಸಾದ ನೀಡಲು ಇದೇ ಕೊಲ್ಲೂರು ದೇವಸ್ಥಾನಕ್ಕೆ ಸರ್ಕಾರದ ಆದೇಶವಾಗಿತ್ತು. ಅಂದು ಯಾವ ಸರ್ಕಾರವಿತ್ತು? ಅಂದಿಲ್ಲದ ಕಾನೂನು ಇಂದು ಶ್ರೀರಾಮ ಶಾಲೆಯ ಬಡಮಕ್ಕಳಿಗೆ ಮಾತ್ರ ಊಟ ಕೊಡಬಾರದೆಂದು ತಿದ್ದುಪಡಿಯಾಯಿತೇ? ರಾಜ್ಯಕ್ಕೊಂದೇ ಇರುವ ಕಾನೂನು ಜಿಲ್ಲೆಗೊಂದು, ತಾಲೂಕಿಗೊಂದು, ಪ್ರತಿ ದೇವಸ್ಥಾನಕ್ಕೊಂದು ಇರಲು ಸಾಧ್ಯವೇ? ಹಾಗಿಲ್ಲವಾದರೆ ಇದೇ ಕಟೀಲು ದುರ್ಗಾಪರಮೇಶ್ವರಿ ದೇವಳದಿಂದ ಮಂಗಳೂರು ತಾಲೂಕಿನ ಸೇಂಟ್ ಆಗ್ನೇಸ್ ವಿಶೇಷ ಶಾಲೆಗೆ ಪ್ರತಿವರ್ಷ 55,000 ರೂ.ಗಳನ್ನು, ಕೊಲ್ಲೂರಿನಿಂದ ಕಲ್ಲಡ್ಕದ ಶಾಲೆಗೆ ಕೊಟ್ಟಂತೆ ಭೋಜನ ವೆಚ್ಚವಾಗಿ ನೀಡಲಾಗುತ್ತಿದೆ. ಅದೇ ತಾಲೂಕಿನ ಸಾನಿಧ್ಯ ವಿಶೇಷ ವಸತಿ ಶಾಲೆಗೆ 47,000 ರೂ. ವೆಚ್ಚ ಕಟೀಲು ದೇವಳದಿಂದ ನೀಡುತ್ತಿದ್ದು, ಲಯನ್ಸ್ ವಿಶೇಷ ಶಾಲೆ, ಕಿನ್ನಿಗೋಳಿಯ ಸೇಂಟ್ ಮೇರಿಸ್ ಶಾಲೆ, ಬೆಳ್ತಂಗಡಿ ತಾಲೂಕಿನ ಕ್ರಿಸ್ತ ರಾಜ್ ನವಚೇತನ ಶಾಲೆ, ಸುಳ್ಯದ ಸಾಂದೀಪ ವಿಶೇಷ ಶಾಲೆ, ಮಂಗಳೂರು ಜಿಲ್ಲೆಯ ಪಾಪ್ಯುಲರ್ ಆಂಗ್ಲ ಮಾಧ್ಯಮ ಶಾಲೆಗಳಿಗೆ, ಕಟೀಲು ದುರ್ಗಾಪರಮೇಶ್ವರಿ ದೇವಳವು ಊಟ ಕೊಡುತ್ತಿದ್ದು, ಇದೇ ಸರ್ಕಾರ ಕೊಲ್ಲೂರು ದೇವಳದಿಂದ ಕೊಡುವ ಊಟದ ವ್ಯವಸ್ಥೆ ರದ್ದುಗೊಳಿಸಿರುವುದು ಕಾನೂನು ಪ್ರಕಾರ ಎಂಬ ಹೇಳಿಕೆಯನ್ನು ಬಡಮಕ್ಕಳ ಹೆತ್ತವರು ನಂಬಬೇಕೇ? ಕಟೀಲು ದುರ್ಗಾಪರಮೇಶ್ವರಿಯ ಅನ್ನಪ್ರಸಾದ ಕಾಯ್ದೆ ಪ್ರಕಾರ, ಕೊಲ್ಲೂರು ಮೂಕಾಂಬಿಕೆಯ ಪ್ರಸಾದ ಕಾನೂನಿಗೆ ವಿರುದ್ಧವೆಂದರೆ ಶ್ರೀರಾಮ ಶಾಲೆಯ ಮಕ್ಕಳು ಮಾಡಿದ ಪಾಪವಾದರೂ ಏನು? ಅಷ್ಟಲ್ಲದೆ, ಜಿಲ್ಲೆಯಲ್ಲಿ ನಡೆಯುವ ಬಹುತೇಕ ಯುವಜನೋತ್ಸವಕ್ಕೆ, ಹಲವು ಶಾಲೆಗಳ ಪ್ರತಿಭಾ ಕಾರಂಜಿ, ಶಾಲಾಹಬ್ಬಗಳಿಗೆ, ಸಾಹಿತ್ಯ ಸಮ್ಮೇಳನಕ್ಕೆ ಕಟೀಲು ದೇವಾಲಯದಿಂದಲೇ ಭೋಜನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದಮೇಲೆ ಆಳುಗರು ಹೇಳಿದ ಕಾನೂನು ಬಡಮಕ್ಕಳ ಪಾಲಿಗೆ ಕತ್ತೆಯಾಗಿ, ಅಧಿಕಾರಸ್ಥರ ಪಾಲಿಗೆ ಸವಾರಿಯ ಕುದುರೆಯಾಗಿರುವುದು ಸುಳ್ಳೆ?

ರಾಜ್ಯದ ಧಾರ್ವಿುಕದತ್ತಿ ಇಲಾಖೆಯಡಿಯ 34,000ಕ್ಕೂ ಹೆಚ್ಚಿನ ದೇವಾಲಯಗಳಿಗೆ ಒಂದೇ ಕಾಯ್ದೆ ಎಂದಾದರೆ, ಆಳುಗರು ಕಾನೂನಿನ ಹೆಸರಲ್ಲಿ ಎಲ್ಲರೂ ಸಮಾನರೆಂಬ ಬದಲು ರಾಜಕೀಯ ಅಭಿಪ್ರಾಯಭೇದಗಳಿಗಾಗಿ ಕಲ್ಲಡ್ಕ ಶಾಲೆಯ ಮಕ್ಕಳ ಅನ್ನವನ್ನು ಕಸಿಯುವುದೆಷ್ಟು ಸರಿ?. ಸಾಮಾಜಿಕ ನ್ಯಾಯಕ್ಕೆ ಒತ್ತುಕೊಡುವವರು ಹಸುಳೆಗಳಲ್ಲೂ ತಾರತಮ್ಯ ಮಾಡಿದರೆ, ರಾಗ-ದ್ವೇಷಗಳಿಲ್ಲದೆ ಅಧಿಕಾರ ನಡೆಸುತ್ತೇವೆಂದು ಸ್ವೀಕರಿಸಿದ ಪ್ರಮಾಣ ವಚನಕ್ಕೇನರ್ಥ? ರಾಜಕಾರಣದಲ್ಲಿ, ಕುಡಿಯುವ ನೀರು, ಅನ್ನದ ವಿಷಯ ಬಂದಾಗ ವಿಭೀಷಣಮಾರ್ಗದಂತೆ ಸಮತೋಲನ ಇರಬೇಕು, ದಶಕಂಠನಂಥ ಏಕಪಕ್ಷೀಯ ಸರ್ವಾಧಿಕಾರಿ ನಡವಳಿಕೆಯಲ್ಲ. ಒಟ್ಟಾರೆ ಅನ್ನದ ಬಟ್ಟಲು ಬಡಿತದ ಕ್ರೀಡೆಯಲ್ಲಿ ಮಕ್ಕಳು ಗೆದ್ದರೆ ಶಿಕ್ಷಣ ಗೆದ್ದಂತೆ, ಸರ್ಕಾರ ಗೆದ್ದರೆ ಫಲಿತಾಂಶಕ್ಕೂ ಮೊದಲು ಪೆವಿಲಿಯನ್​ಗೆ ಮರಳಿದಂತೆ. ನಡೆದು ಹೋಗಲಿ ಧರ್ಮಯುದ್ಧ. ಶಾಸಕನಾದ ನಾನಂತೂ ಮಕ್ಕಳ ಪರ.

(ಲೇಖಕರು ವಿಧಾನ ಪರಿಷತ್ ಸದಸ್ಯರು)

Leave a Reply

Your email address will not be published. Required fields are marked *

Back To Top