Monday, 23rd October 2017  

Vijayavani

1. ಲಿಂಗಾಯತರು ಹಿಂದೂಗಳಲ್ಲ ಹೇಳಿಕೆ – ಜಾಮದಾರ್​ಗೆ ಕನೇರಿ ಮಠದ ಶ್ರೀ ತಿರುಗೇಟು – ಬಹಿರಂಗ ಚರ್ಚೆಗೆ ಕಾಡಸಿದ್ದೇಶ್ವರ ಸ್ವಾಮಿಗಳ ಆಹ್ವಾನ 2. ರಾಜ್ಯ ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ – ಸಿದ್ದು, ಪರಂ, ಡಿಕೆಶಿ ದೂರ ದೂರ – ಹೈಕಮಾಂಡ್​ ಸಾಮೂಹಿಕ ಜಪ, ನಾಯಕರು ಸಪರೇಟ್​ ರೂಪ 3. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಜನರ ತೆರಿಗೆ ದುಡ್ಡಲ್ಲಿ ಕಾಂಗ್ರೆಸ್‌ ಪಕ್ಷಕ್ಕೂ ಪ್ರಚಾರ – ಬೆನ್ನುತಟ್ಟಿಕೊಳ್ಳೋ ಸಮಾವೇಶಕ್ಕೆ ಪಿಡಿಓಗಳೂ ದುರ್ಬಳಕೆ 4. ನಟ ವಿಜಯ್ ಬೆಂಬಲಕ್ಕೆ ನಿಂತ ತಲೈವಾ – ಮೆರ್ಸಲ್‌ ಸಿನಿಮಾದ ಬಗ್ಗೆ ಮೆಚ್ಚುಗೆಯ ಟ್ವೀಟ್ – ವಿವಾದಾತ್ಮಕ ವಿಷಯಗಳಿಗೂ ರಜನಿಕಾಂತ್ ಪರೋಕ್ಷ ಶ್ಲಾಘನೆ 5. ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಬಿಗ್​ ಶಾಕ್​ – ಬಿಜೆಪಿಗೆ ಸೇರಲು 1 ಕೋಟಿ ರೂ ಆಮೀಷ – ಹಾರ್ದಿಕ್​ ಪಟೇಲ್​ ಸಂಗಡಿಗನ ಗಂಭೀರ ಆರೋಪ
Breaking News :

ಶ್ರಾವಣದ ಲಕ್ಷ್ಮೀಗೆ ಅಲಂಕಾರದ ಒನಪು

Wednesday, 02.08.2017, 3:00 AM       No Comments

ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬವೆಂಬುದು ಹೆಂಗಳೆಯರಿಗೆ ವಿಶೇಷ ದಿನ. ಶ್ರಾವಣ ಮಾಸದಲ್ಲಿ ಆಚರಿಸುವ ಹಿಂದುಗಳ ಪ್ರಸಿದ್ಧ ಹಬ್ಬಗಳಲ್ಲಿ ಇದೂ ಒಂದು. ಶ್ರಾವಣಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀಯನ್ನು ಕಲಶದಲ್ಲಿಟ್ಟು ಮನೆಯಲ್ಲಿ ಪ್ರತಿಷ್ಠಾಪಿಸಿದರೆ ಸಂಪತ್ತು, ಧಾನ್ಯ, ಸುಖ, ಸಂತೋಷ, ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ಇರುವುದರಿಂದ ಅನಾದಿ ಕಾಲದಿಂದಲೂ ಈ ಹಬ್ಬವನ್ನು ಆಚರಿಸಲಾಗುತ್ತಿದೆ.

ವ್ರತ ಮಾಡುವುದು ಹೇಗೆ?

ಈ ವ್ರತ ಮಾಡುವವರು ಕಲಶ ಸ್ಥಾಪಿಸಿ ಸಂಜೆಯವರೆಗೂ ಉಪವಾಸವಿದ್ದು, ವ್ರತ ಮಾಡಬೇಕು. ಪೂಜೆ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆ, ಮಾವಿನ ಎಲೆಗಳಿಂದ ಸಿಂಗರಿಸಿ. ನಂತರ ರಂಗೋಲಿ ಹಾಕಬೇಕು. ಒಂದು ಕಳಶದಲ್ಲಿ ನೀರು, ಅಕ್ಕಿ, ಅರಿಶಿಣದ ತುಂಡು, ಅಡಕೆ, ಬೆಳ್ಳಿ ನಾಣ್ಯ, ಖರ್ಜೂರ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ ಮತ್ತು ಕೆಲವು ಹಣ್ಣುಗಳನ್ನು ಹಾಕಬೇಕು. ಈ ಕಳಸಕ್ಕೆ ಲಕ್ಷ್ಮೀ ಕಳಸ ಎನ್ನುತ್ತಾರೆ. ಅದರ ಮೇಲೆ ಅರಿಶಿಣ ಕುಂಕುಮ ಹಚ್ಚಿದ ತೆಂಗಿನಕಾಯಿ ಇಟ್ಟು, ಇದರ ಮೇಲೆ ಮುಖದ ಆಕಾರದ ಚಿತ್ರ ಬರೆಯಬಹುದು ಅಥವಾ ಲಕ್ಷ್ಮೀದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಬಹುದು. ಕಲಶದ ಮೇಲ್ಭಾಗದಲ್ಲಿ ವೀಳ್ಯದ ಎಲೆ, ಮಾವಿನ ಎಲೆಗಳನ್ನು ಇಡಬೇಕು. ಈ ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಕಳಶಕ್ಕೆ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ, ಆಭರಣಗಳಿಂದ ಅಲಂಕಾರ ಮಾಡಿ ಪೂಜೆ ಮಾಡಬೇಕು. ಈ ಪೂಜೆಯಲ್ಲಿ ಕೆಲ ವಿಶೇಷವಾದ ದಾರಗಳನ್ನು ಬಳಸುವ ಪದ್ಧತಿಯೂ ಹಲವು ಕಡೆ ಚಾಲ್ತಿಯಲ್ಲಿದೆ. ಹೊಸದಾದ 12 ದಾರಗಳಿಗೆ 12 ಗಂಟುಗಳನ್ನು ಹಾಕಿ, ಅದನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರಿಶಿಣ ಹಚ್ಚಿ ದೇವಿಯ ಪಕ್ಕದಲ್ಲಿರಿಸಿ ಪೂಜಿಸುತ್ತಾರೆ. ದೇವಿಯ ಮೂರ್ತಿಗೆ ಅರಿಶಿನ, ಕುಂಕುಮ, ಹೂವು, ಪತ್ರೆ ಮತ್ತು ಅಕ್ಷತೆಯಿಂದ ಪೂಜೆಯನ್ನು ಸಲ್ಲಿಸಿದ ಬಳಿಕ, ಪೂಜಿಸಿದ ಹೆಣ್ಣುಮಕ್ಕಳು ಆ ದಾರಗಳಿಗೆ ಹೂವನ್ನು ಕಟ್ಟಿ, ಹಿರಿಯರಿಂದ ಕಂಕಣದಂತೆ ಬಲಗೈಗೆ ಕಟ್ಟಿಸಿಕೊಳ್ಳುವರು.

ದೇವಿಯನ್ನು ಅಲಂಕರಿಸುವುದು ಹೇಗೆ?

ಹೆಂಗಳೆಯರು ಲಕ್ಷ್ಮೀ ದೇವಿಯನ್ನು ಪೂಜೆ ಮಾಡಿದರೆ ಮನೆಗೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. ದೇವಿಯನ್ನು ಯಾವ ರೀತಿ ಅಲಂಕರಿಸಬೇಕು, ಅದಕ್ಕೆ ಏನೆಲ್ಲ ತಯಾರಿ ಮಾಡಿಕೊಳ್ಳಬೇಕು ಎಂಬ ಕುರಿತು ಕೆಲ ಮಾಹಿತಿ ಇಲ್ಲಿದೆ.

ಪೂಜೆಗೂ ಮೊದಲು ದೇವಿಯನ್ನು ಸಿಂಗಾರ ಮಾಡಬೇಕು. ಅದಕ್ಕಾಗಿ ಹೊಸ ಸೀರೆ ತಂದು, ಕಳಶದಲ್ಲಿರುವ ದೇವಿಯ ವಿಗ್ರಹಕ್ಕೆ ಉಡಿಸಿ, ದೇವಿಯ ಮುಖಕ್ಕೆ ಹೊಂದುವಂತೆ ಕಿವಿಯೋಲೆ, ಮೂಗುತಿ, ದೊಡ್ಡದಾದ ಬೊಟ್ಟನ್ನು ಇಟ್ಟು, ಗಾಜಿನ ಬಳೆಗಳನ್ನಿಟ್ಟು ಅಲಂಕರಿಸಿದರೆ ದೈವೀಕಳೆ ಇನ್ನಷ್ಟು ಹೆಚ್ಚುತ್ತದೆ.

ದೇವರ ಕೋಣೆಯನ್ನು ಸುಂದರವಾಗಿ ಅಲಂಕರಿಸಿ ದೇವಿಯನ್ನು ಬರಮಾಡಿಕೊಂಡರೆ ದೇವಿ ಸಂಪ್ರೀತಳಾಗುತ್ತಾಳೆ. ಹೀಗಾಗಿ ಸಂಪತ್ತಿನ ದೇವಿಯಾಗಿರುವ ಲಕ್ಷ್ಮೀಯನ್ನು ಬರಮಾಡಿಕೊಳ್ಳಲು ನಾಣ್ಯಗಳಿಂದ ರಂಗೋಲಿ ಚಿತ್ತಾರ ಮೂಡಿಸಬಹುದು.

ಸಂಪತ್ತಿನ ದೇವಿಯನ್ನು ಹಣದಿಂದಲೇ ಅಲಂಕರಿಸಿದರೆ ಇನ್ನಷ್ಟು ಚೆನ್ನಾಗಿರುತ್ತದೆ. ನಾಣ್ಯದ ಜತೆಗೆ 10, 20, 50, 100 ರೂ.ಗಳ ನೋಟನ್ನು ಪೂಜಾ ಕೋಣೆಯಲ್ಲಿ ಒಂದು ದೊಡ್ಡದಾದ ತಟ್ಟೆಯಲ್ಲಿ ವೃತ್ತಾಕಾರವಾಗಿ ಜೋಡಿಸಬಹುದು. ಲಕ್ಷ್ಮಿಯ ಕಳಶವಿರುವ ತಟ್ಟೆಯ ಸುತ್ತಲೂ ತೋರಣದ ರೀತಿ ಈ ನೋಟುಗಳನ್ನು ಜೋಡಿಸಿದರೂ ಚೆನ್ನಾಗಿ ಕಾಣುತ್ತದೆ. ಆದರೆ, ಪೂಜೆ ಮಾಡುವಾಗ ನೋಟಿಗೆ ಬೆಂಕಿ ಕಿಡಿ ತಾಗದಂತೆ ಎಚ್ಚರವಿರಲಿ.

ಕಮಲದ ಹೂಗಳೆಂದರೆ ಲಕ್ಷ್ಮೀದೇವಿಗೆ ಬಹಳ ಪ್ರಿಯವೆಂಬ ಮಾತಿದೆ. ಹಾಗಾಗಿ, ಕಲಶದ ಅಕ್ಕಪಕ್ಕದಲ್ಲಿ ಹೂಕುಂಡಗಳನ್ನು ಇಟ್ಟು ಅದರಲ್ಲಿ ಕಮಲದ ಹೂವನ್ನು ಇಟ್ಟರೆ ಆಕರ್ಷಕವಾಗಿ ಕಾಣುತ್ತದೆ. ದೇವರ ಕೋಣೆಯಲ್ಲಿ ಕಮಲದ ಹೂಗಳನ್ನಿಟ್ಟು ಅಲಂಕಾರ ಮಾಡಬಹುದು.

ಕೆಂಪು ಬಣ್ಣ ನೋಡಲು ಸುಂದರವಷ್ಟೆ ಅಲ್ಲ; ಆ ಬಣ್ಣ ಲಕ್ಷ್ಮಿಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ. ಪೂಜಾ ಕೋಣೆಯಲ್ಲಿ ಕೆಂಪು ಬಣ್ಣದ ಲೈಟ್, ಕೆಂಪು ಹೂಗಳು, ಕೆಂಪು ಬಣ್ಣದ ರಂಗೋಲಿ, ದೇವಿಗೆ ಕೆಂಪು ಸೀರೆ ಉಡಿಸಿ, ಕೆಂಪು ಹರಳಿನ ಆಭರಣ, ಕೆಂಪು ಗಾಜಿನ ಬಳೆ ಹಾಕಿದರೆ ಚೆನ್ನಾಗಿ ಕಾಣುತ್ತದೆ.

ದೇವರ ಕೋಣೆಯ ಹೊರಭಾಗದಲ್ಲಿ ಪೇಪರ್ ಲ್ಯಾಂಪ್ ಅಥವಾ ಡೆಕೊರೇಟಿವ್ ಹ್ಯಾಂಗಿಂಗ್​ಗಳನ್ನು ಹಾಕಬಹುದು. ಹೂವಿನ ಮಾಲೆಗಳಿಂದ ದೇವರನ್ನು ಹಾಗೂ ಕೋಣೆಯನ್ನು ಅಲಂಕರಿಸಿದರೆ ಟ್ರೆಡಿಷನಲ್ ಆಗಿರುತ್ತದೆ.

ಕಾಸಿನ ಸರ, ಅವಲಕ್ಕಿ ಸರ ಮುಂತಾದ ಪಾರಂಪರಿಕ ಆಭರಣಗಳನ್ನು ದೇವಿಗೆ ಹಾಕಿ ಆ ಸಂಪತ್ತು ದುಪ್ಪಟ್ಟಾಗಲೆಂದು ಬೇಡಿಕೊಳ್ಳುವ ಪದ್ಧತಿಯಿದೆ.

ಅಲಂಕಾರವೂ ಮುಖ್ಯ

ವರಮಹಾಲಕ್ಷ್ಮೀ ಹಬ್ಬದಲ್ಲಿ ಧಾರ್ವಿುಕ ವಿಧಿ-ವಿಧಾನಗಳು ಎಷ್ಟು ಮುಖ್ಯವೋ ಅಲಂಕಾರ ಪ್ರಿಯಳಾದ ದೇವಿಯನ್ನು ಅಲಂಕರಿಸುವುದು ಕೂಡ ಅಷ್ಟೇ ಮುಖ್ಯ. ಇತ್ತೀಚೆಗೆ ಅದು ಪ್ರತಿಷ್ಠೆ ಸಂಕೇತವೂ ಆಗಿರುವುದರಿಂದ ಹೆಂಗಳೆಯರು ಬಂಗಾರ, ಬೆಳ್ಳಿ, ರೇಷ್ಮೆವಸ್ತ್ರ, ವಿಧ-ವಿಧವಾದ ಹೂಗಳಿಂದ ದೇವಿಯನ್ನು ಅಲಂಕರಿಸುವ ಮೂಲಕ ದೇವಿಯನ್ನು ಸಂತುಷ್ಟಗೊಳಿಸಲು ಪ್ರಯತ್ನಿಸುತ್ತಾರೆ. ಹೂವು ಹಾಗೂ ಒಡವೆಗಳ ಮಧ್ಯೆ ರಾರಾಜಿಸುವ ಸಂಪತ್ತಿನ ದೇವತೆ ಲಕ್ಷ್ಮೀಗೆ ವಿವಿಧ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಈ ದಿನ ಮನೆಯಲ್ಲಿ ಸಿಹಿ ತಿಂಡಿ, ಹಬ್ಬದೂಟ ಮಾಡಲಾಗುತ್ತದೆ. ಅಲ್ಲದೆ, ಯಾರ ಮನೆಯಲ್ಲಿ ಯಾವ ರೀತಿ ದೇವಿಯನ್ನು ಅಲಂಕರಿಸಿದ್ದಾರೆ ಎಂದು ನೋಡುವ ಸಲುವಾಗಿಯೇ ಮಹಿಳೆಯರು ಎಲ್ಲರ ಮನೆಗಳಿಗೂ ಭೇಟಿ ನೀಡುತ್ತಾರೆ.

Leave a Reply

Your email address will not be published. Required fields are marked *

Back To Top