Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಶುಮಾಕರ್ ದುರಂತ ಕಲಿಸಿದ ಜೀವನಪಾಠ

Wednesday, 06.09.2017, 3:02 AM       No Comments

| ರಾಘವೇಂದ್ರ ಗಣಪತಿ

ಜರ್ಮನಿಯ ಮೈಕೆಲ್ ಶುಮಾಕರ್ ಜಗತ್ತಿನ ಸರ್ವಶ್ರೇಷ್ಠ ರೇಸಿಂಗ್ ಪಟು. ಶ್ರೀಮಂತಿಕೆಯಲ್ಲೂ 2005ರಲ್ಲೇ ಫೋರ್ಬ್ಸ್ ಇವರನ್ನು ಜಗತ್ತಿನ ಪ್ರಪ್ರಥಮ ಕೋಟ್ಯಧಿಪತಿ ಕ್ರೀಡಾಪಟು ಎಂದು ಬಣ್ಣಿಸಿತ್ತು. ಆದರೆ, ಒಂದೇ ಒಂದು ಅಪಘಾತ ಶುಮಾಕರ್ ಬದುಕಿನ ದಿಕ್ಕನ್ನೇ ಬದಲಾಯಿಸಿತು.

 

ನಾನು ಬೇರೆ, ಜಗತ್ತು ಬೇರೆ… ನಮ್ಮ ಹೆಚ್ಚಿನ ಸಮಸ್ಯೆಗಳಿಗೆ ಇಂಥ ಭ್ರಮೆಯೇ ಕಾರಣ.

ಎಲ್ಲಾ ಪ್ರಾಪಂಚಿಕ ಸಂಗತಿಗಳು, ಲೋಕ ವ್ಯವಹಾರಗಳು, ಕಣ್ಣಿಗೆ ಕಾಣುವ ಸತ್ಯಗಳನ್ನೂ ನಾವು ನಮ್ಮನ್ನು ಹೊರತುಪಡಿಸಿಕೊಂಡು ಅರ್ಥೈಸುತ್ತೇವೆ, ವಿಶ್ಲೇಷಿಸುತ್ತೇವೆ.

ಹಣ, ಅಧಿಕಾರ, ಅಂತಸ್ತು ಯಾವುದೂ ಶಾಶ್ವತವಲ್ಲ ಎಂಬ ವಾಸ್ತವ ಕಣ್ಣೆದುರೇ ಇದ್ದರೂ, ನಾವೊಬ್ಬರು ಮಾತ್ರ ಶಾಶ್ವತ ಎಂಬ ಭ್ರಮೆಯಲ್ಲಿ ಹೋರಾಡುತ್ತಿರುತ್ತೇವೆ…

ಸಾವಿರಾರು ಕೋಟಿ ರೂ. ಹಣವಿದ್ದರೆ ಸಾವನ್ನು ಗೆಲ್ಲಲು ಸಾಧ್ಯವೇ? ವಿಧಿಲಿಖಿತವನ್ನು ನಮಗೆ ಅನುಕೂಲಕರವಾಗಿರುವಂತೆ ಖರೀದಿಸಲು ಸಾಧ್ಯವೇ? ಎಷ್ಟು ಸಿರಿವಂತರಾದರೇನು ಒಂದು ಅಪಘಾತ ಬದುಕಿನ ಬುಡ ಅಲುಗಾಡಿಸಲು ಸಾಕು. ಅಷ್ಟಕ್ಕೂ ಜೀವನದಲ್ಲಿ, ‘ಇನ್ಯಾವ ಚಿಂತೆಯಿಲ್ಲ, ನೆಲೆಗೊಂಡಾಯಿತು (ಸೆಟ್ಲ್)’ ಎಂಬ ಘಟ್ಟವೊಂದಿದೆಯೇ? ಮದುವೆಯಾದರೆ, ಸ್ವಂತ ಮನೆ ಕಟ್ಟಿದರೆ, ಆಸ್ತಿ ಮಾಡಿದರೆ ಸೆಟ್ಲ್ ಆದಂತೆಯೇ? ನಮ್ಮ ಆಯಸ್ಸು, ನಮ್ಮ ಸಾಧನೆಯ ಶ್ರೇಯಸ್ಸು, ಆಸ್ತಿ-ಪಾಸ್ತಿಗಳ ನಸೀಬು ಎಷ್ಟು ದಿನ ಎಂಬ ಬಗ್ಗೆ ಯಾರಿಗಾದರೂ ಖಾತ್ರಿ ಇದೆಯೇ? ದಿನಕ್ಕೆ 16 ಲಕ್ಷ ರೂ. ಸಂಪಾದನೆ ಹೊಂದಿದ್ದ, ಎಲ್ಲ ರಾಜಕೀಯ ಪಕ್ಷಗಳು, ಮುಖಂಡರು ತನ್ನ ಅಡಿಯಾಳುಗಳೆಂದು ಬೀಗುತ್ತಿದ್ದ ಗುರ್​ವಿುೕತ್ ರಾಮರಹೀಮ್ ಸಿಂಗ್ ಅರಮನೆಯಿಂದ ಸೆರೆಮನೆಗೆ ಹೋಗಲಿಲ್ಲವೇ? ಹಾಗಾದರೆ, ಶೂನ್ಯದಿಂದ ಶೂನ್ಯದ ಕಡೆಗಿನ ಈ ಪಯಣದಲ್ಲಿ ಮಾರ್ಗ ಮಧ್ಯದ ವೈಭವಗಳಿಗೆ ಅರ್ಥವೇನು?

ಜರ್ಮನಿಯ ಮೈಕೆಲ್ ಶುಮಾಕರ್ ಜಗತ್ತಿನ ಸರ್ವಶ್ರೇಷ್ಠ ರೇಸಿಂಗ್ ಪಟು. ಫಾಮುಲಾ 1ನಲ್ಲಿ ಇವರಷ್ಟು ಎತ್ತರದ ಸಾಧನೆ ಮಾಡಿದ ಮತ್ತೋರ್ವ ರೇಸರ್ ಇಲ್ಲ. ಮೋಟರ್​ಸ್ಪೋರ್ಟ್ ಇತಿಹಾಸದಲ್ಲಿ ಅತೀ ಹೆಚ್ಚು 7 ವಿಶ್ವ ಚಾಂಪಿಯನ್​ಷಿಪ್ ಗೆದ್ದ ಸಾಧನೆ, ಗರಿಷ್ಠ 91 ಗ್ರ್ಯಾನ್ ಪ್ರಿ ಗೆದ್ದ ಹಿರಿಮೆ, ಅತ್ಯಧಿಕ ವೇಗದ ಚರಣಗಳ (77) ಸಾಧನೆ, ಒಂದೇ ಋತುವಿನಲ್ಲಿ ಅತೀ ಹೆಚ್ಚು 13 ರೇಸ್ ಗೆದ್ದ ಹೆಗ್ಗಳಿಕೆ ಎಲ್ಲವೂ ಇರುವುದು ಶುಮಾಕರ್ ಹೆಸರಲ್ಲಿ. ಫೆರಾರಿ ಕಾರಿನ ಚಾಲಕರಾಗಿ ದಶಕಗಳ ಕಾಲ ಶುಮಾಕರ್ ಏಕಮೇವಾದ್ವಿತೀಯ ಸಾಧನೆ ಮೆರೆದವರು. ಶ್ರೀಮಂತಿಕೆಯಲ್ಲೂ 2005ರಲ್ಲೇ ಫೋರ್ಬ್ಸ್ ಇವರನ್ನು ಜಗತ್ತಿನ ಪ್ರಪ್ರಥಮ ಕೋಟ್ಯಧಿಪತಿ ಕ್ರೀಡಾಪಟು ಎಂದು ಬಣ್ಣಿಸಿತ್ತು. ಕ್ರೀಡಾಪಟುವಾಗಿ ಫೆರಾರಿ, ಮರ್ಸಿಡೀಸ್ ತಂಡಗಳಿಂದ ಪ್ರತೀ ವರ್ಷ ಕೋಟ್ಯಾನುಕೋಟಿ ಸಂಭಾವನೆ ಪಡೆಯುತ್ತಿದ್ದ ಅವರು, ಜಾಹೀರಾತುಗಳಿಂದಲೂ ದುಪ್ಪಟ್ಟು ಹಣ ಸಂಪಾದಿಸಿ ಜರ್ಮನಿ, ಸ್ವಿಟ್ಜರ್ಲೆಂಡ್, ಫ್ರಾನ್ಸ್ ಸಹಿತ ವಿಶ್ವದ ವಿವಿಧೆಡೆ ಆಸ್ತಿ-ಪಾಸ್ತಿ, ವ್ಯವಹಾರಗಳ ಸಾಮ್ರಾಜ್ಯವನ್ನೇ ಕಟ್ಟಿದ್ದರು. ಆದರೆ, ಮೂರು ವರ್ಷ ಕೆಳಗೆ ಒಂದು ಅಪಘಾತ ಶುಮಾಕರ್ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಫ್ರಾನ್ಸ್​ನ ಫ್ರೆಂಚ್ ಆಲ್ಪ್ ್ಸ ಪರ್ವತ ಪ್ರದೇಶದಲ್ಲಿ ಸ್ಕೀಯಿಂಗ್ (ಹಿಮ ಕ್ರೀಡೆ) ವೇಳೆ ಸಂಭವಿಸಿದ ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದು ಕೋಮಾವಸ್ಥೆಗೆ ಜಾರಿದರು. ಆರು ತಿಂಗಳು ಕೋಮಾದಲ್ಲಿದ್ದ ಅವರು ನಂತರ ಪ್ರಜ್ಞೆಗೆ ಮರಳಿದರೂ, ದೇಹ ಚಲನೆಯಿಲ್ಲದೆ ಶಾಶ್ವತವಾಗಿ ಹಾಸಿಗೆ ಹಿಡಿದಿದ್ದಾರೆ. ವೈದ್ಯಕೀಯವಾಗಿ ಅವರು ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ವಿಶ್ವದ ಖ್ಯಾತನಾಮ ವೈದ್ಯರೆಲ್ಲ ಕೈಚೆಲ್ಲಿಯಾಗಿದೆ. ಇನ್ನೂ 48 ವರ್ಷದ, ಒಂದು ಕಾಲದ ಜಗದೇಕವೀರ ಶುಮಾಕರ್, ಸದ್ಯ ಮಾತಿಲ್ಲ, ಕತೆಯಿಲ್ಲ, ದೇಹದಲ್ಲಿ ಚಲನೆಯಿಲ್ಲದೆ, ಮೆದುಳು ನಿಷ್ಕ್ರಿಯವಾಗಿ ಜೀವಚ್ಛವದಂತೆ ಮಲಗಿಬಿಟ್ಟಿದ್ದಾರೆ.

ಶುಮಾಕರ್ ಕ್ರೀಡಾಪಟುವಾಗಿ ಸಂಪಾದಿಸಿದ್ದ ಸುಮಾರು 500 ದಶಲಕ್ಷ ಯುರೋಗಳ ಸಂಪತ್ತು ಅವರ ಚಿಕಿತ್ಸೆ ಸಲುವಾಗಿ ಕರಗುತ್ತಿದೆ. ಈಗಾಗಲೇ ಅವರ ರಜಾಕಾಲದ ಅರಮನೆ, ಖಾಸಗಿ ಜೆಟ್ ವಿಮಾನಗಳನ್ನು ಹೆಂಡತಿ ಕೊರಿನ್ನಾ ಮಾರಿದ್ದಾರೆ. ಹಣದ ಅನಿವಾರ್ಯತೆ ಹಾಗೂ ನಿರುಪಯುಕ್ತವೆಂಬ ಕಾರಣಗಳಿಗಾಗಿ ಇನ್ನಷ್ಟು ಆಸ್ತಿಗಳನ್ನು ಅವರು ಮಾರಿ ಶುಮಾಕರ್ ನಿರಂತರ ಚಿಕಿತ್ಸೆಗೆ ಹಣ ಹೊಂದಿಸುತ್ತಿದ್ದಾರೆ. ದಶಕ ಕೆಳಗೆ ಏಷ್ಯಾ ಸುನಾಮಿಯಿಂದ ತತ್ತರಿಸಿದ ಸಂದರ್ಭದಲ್ಲಿ ಶುಮಾಕರ್ 10 ದಶಲಕ್ಷ ಡಾಲರ್​ಗಳನ್ನು ದೇಣಿಗೆಯಾಗಿ ನೀಡಿದ್ದರು. ಆದರೆ, ಜೀವನ್ಮರಣ ಹೋರಾಟದ ಸಂದರ್ಭದಲ್ಲಿ ಶುಮಾಕರ್ ಸಲುವಾಗಿ ಅವರ ಕುಟುಂಬ ಯಾರಿಂದಲೂ ಸಹಾಯ ಯಾಚಿಸುತ್ತಿಲ್ಲ. ಯಾವುದೇ ಸರ್ಕಾರಗಳು, ಉದ್ಯಮಿಗಳು, ಅಭಿಮಾನಿಗಳ ಎದುರು ಕುಟುಂಬ ಕೈಯೊಡ್ಡಿಲ್ಲ. ಶುಮಾಕರ್ ಆರೋಗ್ಯ ನಮ್ಮ ಖಾಸಗಿ ಸಂಗತಿ, ಅದನ್ನು ನಾವೇ ನಿಭಾಯಿಸುತ್ತೇವೆ ಎಂದು ಅವರ ಕುಟುಂಬದವರು ಹೇಳುತ್ತಿದ್ದಾರೆ.

ಒಟ್ಟಾರೆ ಹೇಗಿದ್ದ ಶುಮಾಕರ್ ಹೇಗಾಗಿದ್ದಾರೆ ಎಂಬ ಜೀವನಪಾಠವೊಂದೇ ಸಾಕು. ಸಣ್ಣಪುಟ್ಟ ಯಶಸ್ಸುಗಳಿಗೂ ಜಗತ್ತನ್ನೇ ಗೆದ್ದೆವೆಂದು ಬೀಗುವ, ತಮಗಿನ್ಯಾರು ಸಾಟಿ ಎಂಬ ಅಹಂಕಾರದಿಂದ ಮೆರೆಯುವ, ಇತರರನ್ನು ತುಚ್ಛವಾಗಿ ಕಾಣುವ, ತಾವು ಗೆದ್ದಿದ್ದು, ಗಳಿಸಿದ್ದು ಶಾಶ್ವತ ಎಂದು ಮೆರೆಯುವ ಜನರೆಲ್ಲ ಶುಮಾಕರ್​ಗಾದ ಸ್ಥಿತಿ ನೋಡಿಯಾದರೂ ಎಚ್ಚರ ವಹಿಸಬೇಕು.

ಶುಮಾಕರ್ ಜೀವನ್ಮರಣದ ಸಂಕಷ್ಟದ ಸಂದರ್ಭದಲ್ಲಿ ಅವರ ಪತ್ನಿಯ ತ್ಯಾಗವನ್ನು, ಧೈರ್ಯವನ್ನೂ ಮೆಚ್ಚಲೇ ಬೇಕು. ಅತ್ತ ಸಾವೂ ಅಲ್ಲ, ಇತ್ತ ಬದುಕೂ ಅಲ್ಲದ ತ್ರಿಶಂಕು ಸ್ಥಿತಿಯಲ್ಲಿರುವ ಪತಿಯನ್ನು ಮಗುವಿನಂತೆ ಅವರು ನೋಡಿಕೊಳ್ಳುತ್ತಿರುವ ರೀತಿ ಅನನ್ಯ. ಅವರು ಬಯಸಿದ್ದರೆ, ವಿಚ್ಛೇದನ ಪಡೆದು, ತಮ್ಮ ಪಾಲಿನ ಆಸ್ತಿಯೊಂದಿಗೆ ಹೊಸ ಜೀವನ ಕಟ್ಟಿಕೊಳ್ಳಬಹುದಿತ್ತು. ಆದರೆ, ಶುಮಾಕರ್ ಪತ್ನಿ ಎಂಬ ಕಾರಣಕ್ಕೆ ಮದುವೆಯ ಮೊದಲ 20 ವರ್ಷ ಜಗತ್ತಿನ ಎಲ್ಲಾ ಸುಖ, ಐಷಾರಾಮ ಅನುಭವಿಸಿದ್ದ ಆಕೆ, ಕಷ್ಟ ಬಂದಾಗಲೂ ಸಮಪಾಲು ಪಡೆಯಲು ಮುಂದಾಗಿ ಮಾದರಿಯಾದರು.

ಹಾಗಾದರೆ, ಶುಮಾಕರ್ ಜೀವನ ದುರಂತದಿಂದ ನಾವು ಕಲಿಯಬೇಕಾದ್ದೇನು? ಜರ್ಮನಿಯ ಚಾಂಪಿಯನ್ ರೇಸರ್ ವಿಶ್ವವನ್ನೇ ಗೆದ್ದರೂ, ವಿಧಿವಿಲಾಸದ ಎದುರು ಸೋತರು. ಒಂದು ಸಣ್ಣ ಅಪಘಾತ ಅವರಿಗೆ ಚೇತರಿಸಿಕೊಳ್ಳಲಾಗದಂಥ ಪೆಟ್ಟು ನೀಡಿತು. ಓರ್ವ ವ್ಯಕ್ತಿಯಾಗಿ ಅಂತಮುಖಿಯಾಗಿದ್ದ, ಪ್ರೖೆವೆಸಿ ಇಷ್ಟಪಡುತ್ತಿದ್ದ ಅವರು ರೇಸ್ ಕಣದಲ್ಲಿ ಮಾತ್ರ ಶತಾಯಗತಾಯ ಗೆಲುವಿಗಾಗಿ ಹೋರಾಡುತ್ತಿದ್ದವರು. ವ್ಯಕ್ತಿಯಾಗಿ ಜೆಂಟಲ್​ವ್ಯಾನ್ ಆಗಿದ್ದ ಅವರು ಫಾಮುಲಾ-1 ಕಾರಿನಲ್ಲಿ ಕುಳಿತಾಗ ಗೆಲುವಿಗಾಗಿ ನಿಯಮಗಳನ್ನು ಮುರಿದಿದ್ದೂ ಇದೆ. ಅಂಥವರು ನಿಜಜೀವನದಲ್ಲಿ ಮಾದರಿಯಾಗಿದ್ದರೂ, ದುರಂತ ಅನುಭವಿಸುವಂತಾಯಿತು.

ಜೀವನವೇ ಒಂದು ಹಗ್ಗದ ಮೇಲಿನ ನಡಿಗೆ. ಎಲ್ಲವೂ ಸರಿ ಇದೆ ಎನ್ನುವಾಗಲೇ ಅಪಘಾತವೊಂದು ಸಂಭವಿಸಬಹುದು. ಇಂಥ ಆಕ್ಸಿಡೆಂಟ್​ಗಳಲ್ಲಿ ನಮ್ಮ ತಪು್ಪ ಇರಲೇಬೇಕೆಂದೇನೂ ಇಲ್ಲ. ಹೆಚ್ಚಿನ ರಸ್ತೆ ಅಪಘಾತಗಳಲ್ಲಿ ಯಾರೋ ಮಾಡುವ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುತ್ತಿರುತ್ತಾರೆ. ಆದರೆ, ಅಪಘಾತಗಳೆನ್ನುವುದೇ ಆಕಸ್ಮಿಕವೆಂದ ಮೇಲೆ ಪ್ಲಾ್ಯನ್ ಮಾಡಿ ಬಚಾವಾಗುವುದು ಅಸಾಧ್ಯ. ಮಳೆ ಬಂದಾಗ ಯಾವ ಮರ ಬೀಳುವುದೋ ಬಲ್ಲವರಾರು. ಆ ಸಂದರ್ಭದಲ್ಲಿ ಆ ಜಾಗದಲ್ಲಿದ್ದವರು ಸಿಕ್ಕಿಕೊಳ್ಳುವುದು ವಿಧಿಲಿಖಿತ. ಆದರೆ, ನಮ್ಮಿಂದ ಬೇರೆಯವರಿಗೆ ತೊಂದರೆ ಆಗದಂತೆ ಎಚ್ಚರಿಕೆಯನ್ನಂತೂ ನಾವು ವಹಿಸಬಹುದು.

ವಿಧಿ ಎಂದೊಡನೆ 1998ರಲ್ಲಿ ಆಫ್ರಿಕಾದಲ್ಲಿ ನಡೆದ ವಿಚಿತ್ರ ಘಟನೆಯೊಂದು ನೆನಪಾಗುತ್ತದೆ. ಕಾಂಗೋ ದೇಶದ ಕಸಾಯ್ ಎಂಬ ಪ್ರಾಂತ್ಯದಲ್ಲಿ ಆ ದಿನ ಫುಟ್​ಬಾಲ್ ಪಂದ್ಯವೊಂದು ನಡೆಯುತ್ತಿತ್ತು. ಬೇನ ಟಶಾಡಿ ಮತ್ತು ಬಾಸಂಗ ಎಂಬ ತಂಡಗಳ ನಡುವೆ ಜಿದ್ದಾಜಿದ್ದಿನ ಆಟ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಮಳೆಯ ಮೋಡ ಮುಸುಕಿತು. ಮಿಂಚು, ಗುಡುಗು, ಸಿಡಿಲುಗಳ ಅಬ್ಬರ ಶುರುವಾಯಿತು. ಭೀಕರವಾಗಿ ಸಿಡಿಲು ಬಡಿದು ಬೇನ ಟಶಾಡಿ ತಂಡದ 11 ಆಟಗಾರರು ಸಾವಿಗೀಡಾದರು. ಆಟ ನೋಡಲು ಬಂದಿದ್ದ ಇತರ 30 ಜನ ಸುಟ್ಟ ಗಾಯಗೊಂಡರು. ವಿಚಿತ್ರವೆಂದರೆ, ಬಾಸಂಗ ತಂಡದ ಒಬ್ಬರಿಗೂ ಏನೂ ಆಗಲಿಲ್ಲ. ಬಾಸಂಗ ತಂಡದವರು ಮಾಟ ಮಂತ್ರ ಮಾಡಿಸಿದ್ದರಿಂದ ಹೀಗಾಯಿತು ಎಂದು ದೊಡ್ಡ ಗಲಾಟೆಯೇ ನಡೆಯಿತು. ಆದರೆ, ಫುಟ್​ಬಾಲ್ ಮೈದಾನದಲ್ಲಿ ಒಂದೇ ತಂಡದ 11 ಆಟಗಾರರು ಸತ್ತು, ಎದುರಾಳಿಗಳ ಕೂದಲೂ ಕೊಂಕದಿರುವುದಕ್ಕೆ ಏನನ್ನಬೇಕು.

ಜೀವನವೆಂದರೆ ಹಾಗೇ. ಕೆಲವು ಘಟನೆಗಳು ಪವಾಡದಂತಿರುತ್ತವೆ. ಆದರೆ, ಅದು ನಿಜವಾಗಿರುತ್ತದೆ. ಹಾಗಾಗಿ ನಮ್ಮ ನಿಯಂತ್ರಣದಲ್ಲಿಲ್ಲದ ವಿಚಾರಗಳ ಬಗ್ಗೆ ವ್ಯರ್ಥಚಿಂತನೆ ಮಾಡುವ ಬದಲು ನಮ್ಮ ಕೈಯಲ್ಲಿರುವ ಬದುಕನ್ನು ಸಾರ್ಥಕಗೊಳಿಸುವುದು ಹೇಗೆ ಎಂಬ ಕಡೆ ಲಕ್ಷ್ಯಡುವುದು ಒಳಿತು.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top