Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ಶಿಕ್ಷಣ ರಂಗದ ಸಮಸ್ಯೆಗಳಿಗೆ ದೊರೆಯಬೇಕಿದೆ ಮುಕ್ತಿ

Tuesday, 17.10.2017, 3:03 AM       No Comments

| ಕ್ಯಾಪ್ಟನ್​ ಗಣೇಶ್​ ಕಾರ್ಣಿಕ್​

ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪಕ್ಷಾತೀತವಾಗಿ ವಿಧಾನ ಪರಿಷತ್ತಿನ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ಸೆಪ್ಟೆಂಬರ್ 6-15ರವರೆಗೆ ಸದನದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರು. ಪರಿಣಾಮ, ಮುಖ್ಯಮಂತ್ರಿಗಳು ಧರಣಿನಿರತರನ್ನು ಭೇಟಿಯಾಗಿ ಸಮಸ್ಯೆಗಳನ್ನು ಈಡೇರಿಸುವ ಆಶ್ವಾಸನೆ ನೀಡಿದರಾದರೂ ಅನುಷ್ಠಾನಕ್ಕೆ ಬಂದಿಲ್ಲ.

ಸರ್ಕಾರವು ಶಿಕ್ಷಣ ಕ್ಷೇತ್ರವನ್ನು ಒಂದು ಅನುತ್ಪಾದಕ ಕ್ಷೇತ್ರವಾಗಿ ಪರಿಗಣಿಸಿದ್ದು, ಅಸಡ್ಡೆ ತೋರುತ್ತಿದೆ. ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳ ಹೆಸರಿನಲ್ಲಿ ಮೊಟ್ಟೆ, ಹಾಲು ನೀಡಿದರಷ್ಟೇ ಸಾಲದು, ಶಿಕ್ಷಣ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ. ಎಷ್ಟೋ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಮೂಲಭೂತ ಸೌಕರ್ಯಗಳೇ ಇಲ್ಲ. ಮನಸೋ ಇಚ್ಛೆ ಖಾಸಗಿ ಶಾಲೆಗಳ ಪ್ರಾರಂಭಕ್ಕೆ ಅನುಮತಿ ನೀಡುವುದರಿಂದ ಸರ್ಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಸ್ಥಿತಿ ತಲುಪಿವೆ.

ಕಳೆದ ಹತ್ತಾರು ವರ್ಷಗಳಿಂದ ಶಿಕ್ಷಕರ ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸದನಗಳಲ್ಲಿ ದನಿ ಎತ್ತಲಾಗಿದೆ. ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಭರವಸೆ ನೀಡಿದ್ದರೂ ಅದನ್ನು ಈಡೇರಿಸುವ ಇಚ್ಛಾಶಕ್ತಿ ಕಂಡುಬಂದಿಲ್ಲ. ಅಷ್ಟಕ್ಕೂ ಶಿಕ್ಷಕ, ಶಿಕ್ಷಣ ವಲಯ, ಆಡಳಿತ ಮಂಡಳಿಗಳ ಹಾಗೂ ವಿದ್ಯಾರ್ಥಿಗಳ ಸಮಸ್ಯೆಯ ಸ್ವರೂಪವೇನು ಎಂಬುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರಬಹುದು. ಈ ಕುರಿತಾದ ಸ್ಥೂಲನೋಟ ಇಲ್ಲಿದೆ.

ವೇತನ ತಾರತಮ್ಯ: ಕೇಂದ್ರ ಹಾಗೂ ಅನೇಕ ರಾಜ್ಯಗಳು ನೀಡುತ್ತಿರುವ ವೇತನ ಶ್ರೇಣಿಯನ್ನು ಯಥಾಪ್ರಕಾರ ಅನುಷ್ಠಾನಗೊಳಿಸಿ ಶಿಕ್ಷಕ/ಉಪನ್ಯಾಸಕರ ವೇತನ ತಾರತಮ್ಯ ನಿವಾರಿಸಬೇಕು. ಈ ಕುರಿತು ಕಳೆದ ವರ್ಷ ಮುಷ್ಕರದ ವೇಳೆಯಲ್ಲಿ ಸರ್ಕಾರ ನೀಡಿದ್ದ ಭರವಸೆಯನ್ನು ಇಂದಿಗೂ ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿಲ್ಲ. ಪ್ರೌಢಶಾಲಾ ಸಹಶಿಕ್ಷಕರಿಗೆ ನೀಡಿರುವ ವಿಶೇಷ ವಾರ್ಷಿಕ ಬಡ್ತಿಯನ್ನು ಸಮಾನಾಂತರ ಹುದ್ದೆಯಲ್ಲಿರುವ ಇತರೆ ಶಿಕ್ಷಕರಿಗೂ ಅನ್ವಯಿಸಿ ಆದೇಶ ನೀಡುವುದು.

ಎಂ.ಫಿಲ್ ಮತ್ತು ಪಿ.ಹೆಚ್​ಡಿ ಪಡೆದ ಪದವಿಪೂರ್ವ ಉಪನ್ಯಾಸಕರಿಗೆ ಪ್ರೋತ್ಸಾಹದಾಯಕವಾಗಿ ವಿಶೇಷ ವಾರ್ಷಿಕ ವೇತನ ಬಡ್ತಿ ನೀಡುವುದು. ಅಂತೆಯೇ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರಿಗೆ ಕಾಲಕಾಲಕ್ಕೆ ನೀಡಬೇಕಾದ ಪದೋನ್ನತಿ (ಪ್ಲೇಸ್​ವೆುಂಟ್) ಮತ್ತು ಪಿ.ಹೆಚ್.ಡಿ. ಇಂಕ್ರಿಮೆಂಟ್ ನೀಡುವುದು. 1.1.2006ರ ನಂತರ ನೇಮಕಗೊಂಡು ಯು.ಜಿ.ಸಿ. ವೇತನ ಪಡೆಯುತ್ತಿರುವವರಿಗೆ ನೀಡಲಾಗಿದ್ದ ಹಿಂಬಾಕಿ ಮರು ಮಸೂಲು ಮಾಡುವಂತೆ ನೀಡಿರುವ ಆದೇಶವನ್ನು ರದ್ದುಪಡಿಸುವುದು.

ಕಾಲ್ಪನಿಕ ವೇತನ ಬಡ್ತಿ: ಅನುದಾನಿತ ಶಿಕ್ಷಕರ ವೇತನಕ್ಕೆ ಸಂಬಂಧಪಟ್ಟಂತೆ ಕಾಲ್ಪನಿಕ ವೇತನ ಬಡ್ತಿಯ ವಿಷಯವು ಅನೇಕ ವರ್ಷಗಳಿಂದ ಇತ್ಯರ್ಥವಾಗದೇ ನನೆಗುದಿಗೆ ಬಿದ್ದಿದೆ. ಇದರಿಂದ ನೌಕರರು ನಿವೃತ್ತಿ ಹೊಂದುವ ಸಮಯದಲ್ಲಿ ಅವರಿಗೆ ಆರ್ಥಿಕ ನಷ್ಟವಾಗುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಅನುದಾನ ರಹಿತ ಮತ್ತು ಅನುದಾನಿತ ಅವಧಿಯ ನಡುವಿನ ಕಾಲ್ಪನಿಕ ವೇತನ ಬಡ್ತಿಯ ವಿಷಯವಾಗಿ ಸುವಿವರವಾಗಿ ರ್ಚಚಿಸಿ ತಯಾರಿಸಿದ ಸದನ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಮೂಲಕ ಕಾಲ್ಪನಿಕ ವೇತನ ಬಡ್ತಿ ಸಮಸ್ಯೆಗೆ ಇತಿಶ್ರೀ ಹಾಡಬೇಕು.

ಪ್ರಭಾರ ಭತ್ಯೆ ಹಾಗೂ ಇಂಕ್ರಿಮೆಂಟ್: ಪ್ರೌಢಶಾಲಾ ವಿಭಾಗಗಳಲ್ಲಿ ಪ್ರಭಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಉಪಪ್ರಾಂಶುಪಾಲರಿಗೆ ಕೂಡಲೇ ಪ್ರಭಾರಿ ಭತ್ಯೆ ಮಂಜೂರು ಮಾಡುವುದು. ಮುಂಬಡ್ತಿ ಪಡೆದ ಪ್ರೌಢಶಾಲಾ ಸಹಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ ಅವರ ಹಿಂದಿನ ಸೇವೆಯನ್ನು ಪರಿಗಣಿಸಿ 15, 20, 25 ವರ್ಷಗಳ ಕಾಲಮಿತಿ ಬಡ್ತಿಗಳನ್ನು ನೀಡುವುದು. 2012 ರಿಂದ ನೀಡಿದ ಸ್ಟಾ್ಯಗನೇಷನ್ ಇಂಕ್ರಿಮೆಂಟ್​ನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಿದವರಿಗೂ 2012ರಿಂದಲೇ ನೀಡುವುದು.

ಕನಿಷ್ಠ ವೇತನ: ಅನುದಾನರಹಿತ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರಿಗೆ ಕನಿಷ್ಠ ವೇತನ ಕಾಯ್ದೆ ಅನುಷ್ಠಾನಗೊಳಿಸುವುದು. ಕಳೆದ 15 ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಸೇವಾ ಭದ್ರತೆ ಒದಗಿಸುವುದು ಮತ್ತು ಗೌರವಯುತವಾಗಿ ಜೀವಿಸಲು ಮಾಸಿಕ ಗೌರವಧನವನ್ನು ರೂ. 25,000ಕ್ಕೆ ಹೆಚ್ಚಿಸುವುದು.

ಬಡ್ತಿ: ಶಿಕ್ಷಕ/ಉಪನ್ಯಾಸಕರಿಗೆ ನಿಗದಿತ ಅವಧಿಯಲ್ಲಿ ಪದೋನ್ನತಿ ನೀಡುವುದು. ನಿಧನ/ನಿವೃತ್ತಿ ಹಾಗೂ ಇನ್ನಿತರೆ ಕಾರಣಗಳಿಂದ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವುದು. ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹಶಿಕ್ಷಕರಿಗೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ 50:50ರ ಅನುಪಾತದಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ಯಥಾವತ್ತಾಗಿ ಹಿಂದಿನ ನಿಯಮದನ್ವಯ ಕೂಡಲೇ ಮುಂಬಡ್ತಿ ನೀಡುವುದು.

ವರ್ಗಾವಣೆ ಸಮಸ್ಯೆ: ನಿಗದಿತ ಅವಧಿಯ ಒಳಗಡೆ ಶಿಕ್ಷಕ/ಉಪನ್ಯಾಸಕರ ವರ್ಗಾವಣೆಗಳನ್ನು ಪೂರ್ಣಗೊಳಿಸುವುದು ಹಾಗೂ ನಿಯಮಾವಳಿಗಳನ್ನು ಸರಳಗೊಳಿಸಿ ಹೆಚ್ಚು ಶಿಕ್ಷಕರಿಗೆ ವರ್ಗಾವಣೆಯ ಸೌಲಭ್ಯ ದೊರಕಿಸುವುದು. ಮುಂಬಡ್ತಿ ನೀಡುವ ಸಂದರ್ಭದಲ್ಲಿ ಎ, ಬಿ ಹಾಗೂ ಸಿ ವಲಯದ ಎಲ್ಲ ಖಾಲಿ ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ಆಯ್ಕೆಗೆ ಅವಕಾಶ ಕಲ್ಪಿಸುವುದು. ಟಿ.ಜಿ.ಟಿ ಶಿಕ್ಷಕರನ್ನು ಹಂತ-ಹಂತವಾಗಿ ಪ್ರೌಢಶಾಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ವರ್ಗಾಯಿಸುವುದು.

ಖಾಲಿ ಹುದ್ದೆಗಳ ನೇಮಕಾತಿ: ಅನುದಾನಿತ ಶಾಲಾ-ಕಾಲೇಜುಗಳ ಖಾಲಿ ಹುದ್ದೆಗಳನ್ನು ತುಂಬಲು ನೀಡಿದ್ದ ಅನುಮತಿಯಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಸಡಿಲಿಸ ಬೇಕು. ಪದವಿ ಕಾಲೇಜುಗಳಿಂದ ವಿಭಜನೆಗೊಂಡ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳು ಸೇರಿದಂತೆ ಅನುದಾನಿತ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ನಿಧನ/ನಿವೃತ್ತಿ ಹಾಗೂ ಇನ್ನಿತರೆ ಕಾರಣಗಳಿಂದ ತೆರವಾಗಿರುವ ಬೋಧಕ/ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಬೇಕು. ರಾಜ್ಯದಲ್ಲಿರುವ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ನಿವೃತ್ತಿ, ಇನ್ನಿತರೆ ಕಾರಣಗಳಿಂದ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವುದು.

ವೃಂದ ಮತ್ತು ನೇಮಕಾತಿ ನಿಯಮಾವಳಿ ಬದಲಾವಣೆ: ಸಿ.ಬಿ.ಝುಡ್. ವಿಷಯಗಳಲ್ಲಿ ವ್ಯಾಸಂಗ ಮಾಡಿದ 11 ಸಾವಿರ ಅಭ್ಯರ್ಥಿಗಳು ಟಿ.ಇ.ಟಿ. ಪರೀಕ್ಷೆಯನ್ನು ಪಾಸು ಮಾಡಿಕೊಂಡು ಶಿಕ್ಷಕರ ಹುದ್ದೆಯ ಆಕಾಂಕ್ಷಿಗಳಾಗಿ ಕಳೆದ 3 ವರ್ಷಗಳಿಂದ ಕಾಯುತ್ತಿದ್ದಾರೆ. ಶಿಕ್ಷಕರಾಗಬೇಕೆಂದು ಕಾಯುತ್ತಿದ್ದ ಇವರೆಲ್ಲರಿಗೂ ಸರ್ಕಾರದ ವಿಜ್ಞಾನ ಶಿಕ್ಷಕರ ಹೊಸ ವೃಂದ ಮತ್ತು ನೇಮಕಾತಿ ನಿಯಮಾವಳಿಯಿಂದ ನಿರಾಸೆಯಾಗಿದೆ. ಕೂಡಲೇ ಇದನ್ನು ಸರಿಪಡಿಸಿ ತಾರತಮ್ಯ ನಿವಾರಿಸಬೇಕು ಹಾಗೂ ನೇಮಕಾತಿ ಅಧಿಸೂಚನೆಯನ್ನು ಹಿಂಪಡೆಯಬೇಕು. ಹಿಂದಿ ಪ್ರಚಾರ ಸಭಾದವರು ನಡೆಸುತ್ತಿರುವ ಹಿಂದಿ ಬಿ.ಎ./ಬಿ.ಇಡಿ ವಿದ್ಯಾರ್ಹತೆಯನ್ನು ಹಿಂದಿ ಶಿಕ್ಷಕರ ನೇಮಕಾತಿಗೆ ವಿದ್ಯಾರ್ಹತೆಯಾಗಿ ಪರಿಗಣಿಸಬೇಕು.

ಸೌಲಭ್ಯಗಳ ವಿಸ್ತರಣೆ: ಸರ್ಕಾರಿ ಶಾಲಾ ಶಿಕ್ಷಕರಿಗೆ ನೀಡುತ್ತಿರುವ ಜ್ಯೋತಿ ಸಂಜೀವಿನಿ ಯೋಜನೆಯನ್ನು ವಿಸ್ತರಿಸಿ ಅನುದಾನಿತ ಮತ್ತು ಅನುದಾನರಹಿತ ಶಿಕ್ಷಕರಿಗೆ ವಿಸ್ತರಿಸುವುದು. ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಎಲ್ಲ ನೌಕರರ ವಿದ್ಯಾರ್ಹತೆ, ಕಾರ್ಯಭಾರ, ಸಂಬಳ ಏಕರೂಪವಾಗಿದ್ದರೂ ಸಹಿತ ಸೌಲಭ್ಯಗಳ ವಿಷಯದಲ್ಲಿ ತಾರತಮ್ಯವಿದ್ದು, ಸೌಲಭ್ಯಗಳು ಏಕರೂಪವಾಗಿ ಇರುವಂತೆ ಕ್ರಮಕೈಗೊಳ್ಳಬೇಕು.

2013ನೇ ಸಾಲಿನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಾಗಿ ನೇಮಕಗೊಂಡು ಬಿ.ಇಡಿ., ಪದವಿ ಮಾಡಲು ನಿಯೋಜನೆಗೊಂಡಿರುವ ಉಪನ್ಯಾಸಕರಿಗೆ ಡೈಸ್-ನಾನ್ ರದ್ದುಪಡಿಸಿ ವೇತನಸಹಿತ ರಜೆ ನೀಡುವುದು. ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಬಿ.ಇಡಿ ಪದವಿ ಹೊಂದದೆ ನೇಮಕಗೊಂಡು ಅನುದಾನಕ್ಕೆ ಒಳಪಟ್ಟಿರುವ ಉಪನ್ಯಾಸಕರಿಗೆ ಬಿ.ಎಡ್. ಪದವಿಗೆ ವೇತನ ಸಹಿತ ರಜೆ ನೀಡಿ ನಿಯೋಜಿಸುವುದು.

ವೃತ್ತಿ ತರಬೇತಿ (ಜೆ.ಓ.ಸಿ.) ಇಲಾಖೆಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸಕ್ರಮಗೊಂಡಿರುವ ಉಪನ್ಯಾಸಕರಿಗೆ ಬಿ.ಇಡಿ., ಪದವಿಯಿಂದ ವಿನಾಯಿತಿ ನೀಡುವುದು ಹಾಗೂ ಅವರಿಗೆ ಕಾಯಂಪೂರ್ವ ಅವಧಿ (ಪ್ರೊಬೆಷನರಿ ಪೀರಿಯಡ್) ಘೊಷಿಸುವುದು.

ಹೊಸ ಪಿಂಚಣಿ ಯೋಜನೆ (ಎನ್.ಪಿ.ಎಸ್.): 2006ರ ಏಪ್ರಿಲ್ 1ರ ನಂತರ ನೂತನ ಪಿಂಚಣಿ ಯೋಜನೆ ಜಾರಿಗೆ ಬಂದಿದ್ದು, ಇದರ ಪ್ರಕಾರ ನೌಕರರ ಸಂಬಳದ ಮೂಲ ವೇತನದ ಶೇ.10ರಷ್ಟು ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರದ ಬದಲಾಗಿ ಆಡಳಿತ ಮಂಡಳಿಯವರೇ ಶೇ 10ರಷ್ಟು ವಂತಿಗೆಯನ್ನು ಭರಿಸಬೇಕೆಂದು ಸರ್ಕಾರ ನಿರ್ದೇಶನ ನೀಡಿದೆ. ಒಂದು ವೇಳೆ ಆಡಳಿತ ಮಂಡಳಿಗಳು ಸದರಿ ವಂತಿಗೆಯನ್ನು ಭರಿಸಿದಲ್ಲಿ ಸಂಸ್ಥೆಗಳನ್ನು ಮುಚ್ಚುವ ಭೀತಿ ಎದುರಾಗುತ್ತಿದೆ. ಅನುದಾನಿತ ನೌಕರರ ವೇತನವನ್ನು ಸರ್ಕಾರವೇ ಅನುದಾನದ ರೂಪದಲ್ಲಿ ನೀಡುತ್ತಿರುವುದರಿಂದ ಸದರಿ ವಂತಿಗೆಯನ್ನು ಸಹ ಆಡಳಿತ ಮಂಡಳಿಗಳ ಬದಲಾಗಿ ಸರ್ಕಾರವೇ ಭರಿಸಬೇಕು.

ಶುಲ್ಕ ಸಂಗ್ರಹ: ಅನುದಾನಿತ ಪದವಿ ಪೂರ್ವ ಕಾಲೇಜುಗಳಿಂದ ಪಡೆಯುತ್ತಿರುವ ಡಬ್ಬಲ್ ಸ್ಟಾ್ಯಂಡರ್ಡ್ ಶುಲ್ಕದಲ್ಲಿ ಅರ್ಧದಷ್ಟು ಹಣವನ್ನು ಆಡಳಿತ ಮಂಡಳಿಯವರು ಶಾಲಾ ಅಭಿವೃದ್ಧಿಗಾಗಿ ಉಳಿಸಿಕೊಂಡು ಇನ್ನುಳಿದ ಅರ್ಧದಷ್ಟು ಹಣವನ್ನು ಸರ್ಕಾರದ ಖಜಾನೆಗೆ ತುಂಬುವಂತೆ ಆದೇಶ ಹೊರಡಿಸುವುದು. ಸರ್ಕಾರಿ ಪದವಿ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ನೀಡುತ್ತಿರುವ ಸಮವಸ್ತ್ರ, ಬಾಲಕಿಯರಿಗೆ ಶುಲ್ಕ ವಿನಾಯಿತಿ ಸೌಲಭ್ಯವನ್ನು ಅನುದಾನಿತ/ಅನುದಾನ ರಹಿತ ಕಾಲೇಜಿನಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು.

ಮಾನ್ಯತೆ ನವೀಕರಣ: ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಶಾಲಾ ಕಾಲೇಜುಗಳ ಮಾನ್ಯತೆ ನವೀಕರಣಗೊಳಿಸುವಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಆಡಳಿತ ಮಂಡಳಿಗಳು ತೊಂದರೆಗಳನ್ನು ಅನುಭವಿಸುತ್ತಿವೆ. ಆದುದರಿಂದ ನವೀಕರಣದ ಪ್ರಕ್ರಿಯೆಯನ್ನು ಸರಳಗೊಳಿಸುವುದು.

ಸಮಗ್ರ ಶಿಕ್ಷಣ ಮಸೂದೆಗೆ ತಿದ್ದುಪಡಿ: ಸಮಗ್ರ ಶಿಕ್ಷಣ ಮಸೂದೆ 1983ರಲ್ಲಿ ಜಾರಿಗೆ ಬಂದ ಮೇಲೆ ಮಸೂದೆಯಲ್ಲಿನ ನಿಯಮಗಳಂತೆ ಸಮಗ್ರ ಶಿಕ್ಷಣ, ಬೋಧಕೇತರ ಸಿಬ್ಬಂದಿ ನೇಮಕಾತಿ ಪ್ರಮಾಣ, ವೈದ್ಯಕಿಯ ಭತ್ಯೆ, ಶಿಕ್ಷಕ ಮತ್ತು ಮಕ್ಕಳ ಮೇಲಿನ 1:70 ಅನುಪಾತ ಮೇಲಿರುವ ನಿರ್ಬಂಧ ಮುಂತಾದ ಕಲಮುಗಳನ್ನು ರದ್ದುಪಡಿ ಸುವುದು ಮತ್ತು ಸಮಿತಿ ರಚಿಸಿ ನಿರ್ದಿಷ್ಟ ಕಾಲಮಿತಿಯಲ್ಲಿ ತಿದ್ದುಪಡಿ ತರುವುದು.

ಪ್ರದಸ/ದ್ವಿದಸ/ಗೂಪ್ ಡಿ ನೌಕರರ ಸಮಸ್ಯೆ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೇಮಕಾತಿ ಹೊಂದಿ, ಪದವಿ ಪೂರ್ವ ಶಿಕ್ಷಣ ಇಲಾಖೆಯೊಂದಿಗೆ ವಿಲೀನವಾಗದೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರದಸ/ದ್ವಿದಸ ಹಾಗೂ ಗ್ರೂಪ್-ಡಿ ನೌಕರರನ್ನು ಮೂಲ ಇಲಾಖೆಗೆ ಹಿಂದಿರುಗಿಸುವಂತೆ ಮಾಡಲಾದ ಆದೇಶವನ್ನು ಸದರಿ ಕಾಲೇಜುಗಳಲ್ಲಿ ಬದಲಿ ವ್ಯವಸ್ಥೆ ಮಾಡುವವರೆಗೆ ಮುಂದುವರಿಸುವುದು. ಸರ್ಕಾರಿ ಪದವಿ ಕಾಲೇಜುಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವುದು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈಗಾಗಲೇ ಆಯ್ಕೆಯಾದ 2160 ಸಹಾಯಕ ಪ್ರಾಧ್ಯಾಪಕರಲ್ಲಿ ಕೆಲ ಅಭ್ಯರ್ಥಿಗಳಿಗೆ ಮಾತ್ರ ನೇಮಕಾತಿ ಆದೇಶ ಹಾಗೂ ಸ್ಥಳ ನಿಯುಕ್ತಿ ಮಾಡಿದ್ದು, ಉಳಿದವರಿಗೂ ತಕ್ಷಣ ಸ್ಥಳನಿಯುಕ್ತಿ ಆದೇಶ ನೀಡುವುದು.

ಪಾಲಿಟೆಕ್ನಿಕ್​ಗಳಲ್ಲಿ ಮಕ್ಕಳ ಪ್ರವೇಶ: ಅನುದಾನಿತ ಮತ್ತು ಅನುದಾನ ರಹಿತ ಪಾಲಿಟೆಕ್ನಿಕ್​ಗಳಲ್ಲಿ ಮಕ್ಕಳ ಪ್ರವೇಶವನ್ನು ನೂರಕ್ಕೆ ನೂರರಷ್ಟು ಸರ್ಕಾರವೇ ನಿಗದಿಪಡಿಸುತ್ತದೆ. ಈ ಮೊದಲು ಆಡಳಿತ ಮಂಡಳಿಗಳಿಗೆ ಶೇ.20 ರಷ್ಟು ಕೋಟಾ ನಿಗದಿಯಾಗಿತ್ತು. ಕಾರಣ ಪಾಲಿಟೆಕ್ನಿಕ್​ಗಳಲ್ಲಿ ಸರ್ಕಾರ ಮತ್ತು ಆಡಳಿತ ಮಂಡಳಿಗಳ ಮಕ್ಕಳ ಪ್ರವೇಶದ ಅನುಪಾತವನ್ನು 80:20ಕ್ಕೆ ನಿಗದಿಪಡಿಸಬೇಕು.

ಖಾಸಗಿ ಪಾಲಿಟೆಕ್ನಿಕ್​ಗಳಿಗೆ ಅನುದಾನ: ರಾಜ್ಯದ ಖಾಸಗಿ ಪಾಲಿಟೆಕ್ನಿಕ್​ಗಳನ್ನು ವೇತನಾನುದಾನಕ್ಕೆ ಒಳಪಡಿಸಲು 2016ರಲ್ಲಿ ಸರ್ಕಾರದ ಆದೇಶವಾಗಿದ್ದು, ಅದನ್ನು ಅನುಷ್ಠಾನಗೊಳಿಸುವುದು.

ರಾಜ್ಯದ ವಿಶ್ವವಿದ್ಯಾನಿಲಯಗಳಿಗೆ ಏಕರೂಪದ ವಿಧೇಯಕ: ರಾಜ್ಯದ ಅನೇಕ ವಿಶ್ವವಿದ್ಯಾನಿಲಯಗಳು ಬೇರೆ ಬೇರೆ ವಿಧೇಯಕಗಳ ಆಧಾರದಲ್ಲಿ ರಚಿತವಾಗಿರುವುದರಿಂದ ವಿಶ್ವವಿದ್ಯಾನಿಲಯಗಳ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಸಂಯೋಜನೆ ಕಷ್ಟಸಾಧ್ಯವಾಗಿದೆ. ಆದುದರಿಂದ ರಾಜ್ಯದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳಿಗೂ ಅನ್ವಯವಾಗುವಂತೆ ಏಕರೂಪದ ವಿಧೇಯಕ ರೂಪಿಸುವುದು.

ಸರ್ಕಾರ ಶಿಕ್ಷಣದ ಗುಣಮಟ್ಟದ ಕಡೆಗೆ ಗಮನ ಹರಿಸಬೇಕು. ಗುಣಮಟ್ಟದ ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇಂದು ಶಿಕ್ಷಕರು ಪಠ್ಯೇತರ ಕಾರ್ಯಗಳಲ್ಲೇ ಹೈರಾಣಾಗುತ್ತಿದ್ದಾರೆ. ಪ್ರತಿಭಾವಂತ ಶಿಕ್ಷಕರು ಸರ್ಕಾರಿ ಶಿಕ್ಷಣ ವ್ಯವಸ್ಥೆಯೊಳಗೆ ಆಸಕ್ತಿ ಕಳೆದುಕೊಳ್ಳುವ ಹಂತಕ್ಕೆ ತಲುಪುವುದನ್ನು ತಪ್ಪಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಶಿಕ್ಷಕರ, ಶಿಕ್ಷಣ ಕ್ಷೇತ್ರದ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕಿವಿಗೊಡಲಿ ಎಂಬುದೇ ನಮ್ಮ ಆಗ್ರಹ ಹಾಗೂ ಆಶಯ.

(ಲೇಖಕರು ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕರು)

Leave a Reply

Your email address will not be published. Required fields are marked *

Back To Top