Friday, 17th August 2018  

Vijayavani

Breaking News

ಶಾಸಕರು ಬಂದರೆ ಬೇಡ ಅನ್ನಲ್ಲ

Monday, 11.06.2018, 2:02 AM       No Comments

ಗದಗ: ಅನ್ಯ ಪಕ್ಷಗಳ ಶಾಸಕರು ಸ್ವಯಂ ಪ್ರೇರಣೆಯಿಂದ ಬಿಜೆಪಿ ಸೇರ್ಪಡೆ ಆಗುತ್ತೇವೆ ಎಂದರೆ ಬೇಡ ಅನ್ನಲು ಆಗುವುದಿಲ್ಲ ಎಂದು ಬಿಜೆಪಿ ಮುಖಂಡ, ಶಾಸಕ ಬಿ.ಶ್ರೀರಾಮುಲು ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿವರೆಗೆ ನಾವು ಯಾವ ಶಾಸಕರನ್ನೂ ಸಂರ್ಪಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಆಡಳಿತದಲ್ಲಿರುವ ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯನ್ನು ರಾಜ್ಯದ ಜನರೊಂದಿಗೆ ಬಿಜೆಪಿ ಗಮನಿಸುತ್ತಿದೆ ಎಂದರು.

2008ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಪಕ್ಷೇತರ ಶಾಸಕರು ಸ್ವಯಂಪ್ರೇರಣೆಯಿಂದ ಬಿಜೆಪಿ ಸೇರ್ಪಡೆಗೊಂಡರು. ಅದನ್ನೇ ಪ್ರತಿಪಕ್ಷಗಳು ಆಪರೇಷನ್ ಕಮಲ ಎಂದು ಹೆಸರಿಟ್ಟು ಬಿಜೆಪಿ ವಿರುದ್ಧ ಆರೋಪ ಮಾಡಿದವು. ಇದೀಗ ಬಿಜೆಪಿ ಪರ ಇದ್ದ ಪಕ್ಷೇತರ ಶಾಸಕರನ್ನು ಕಾಂಗ್ರೆಸ್​ನವರು ಬಲವಂತವಾಗಿ ಹೊತ್ತೊಯ್ದರಲ್ಲ ಅದಕ್ಕೆ ಏನಂತಾ ಕರೆಯಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸದ್ಯದ ಮಟ್ಟಿಗೆ ಯಾವ ಶಾಸಕರನ್ನು ನಾವು ಸಂರ್ಪಸಿಲ್ಲ. ಅಂತಹ ಯೋಚನೆಯೂ ಇಲ್ಲ. ಮುಂದಿನ ದಿನಗಳಲ್ಲಿ ನಡೆಯುವ ಬೆಳವಣಿಗೆ ಆಧರಿಸಿ ಮುಖಂಡರು ಕ್ರಮಕೈಗೊಳ್ಳುತ್ತಾರೆ ಎಂದರು.

ಕಾಂಗ್ರೆಸ್ ಗುಲಾಮ ಹೇಳಿಕೆಗೆ ಕಿಡಿ: ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಮಳೆ ಸುರಿಯುತ್ತಿದ್ದು ಜನರಿಗೆ ತೀವ್ರ ತೊಂದರೆಯಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜನರ ಸಮಸ್ಯೆ ಆಲಿಸಲು ರಾಜ್ಯ ಪ್ರವಾಸ ಮಾಡುವುದನ್ನು ಕೈಬಿಟ್ಟು ಕುರ್ಚಿ ಭದ್ರಪಡಿಸಿಕೊಳ್ಳುವ ಸರ್ಕಸ್ ಆರಂಭಿಸಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ನಾನು ಕಾಂಗ್ರೆಸ್ ಸೇವಕ, ರಾಹುಲ್ ಗಾಂಧಿ ಗುಲಾಮ ಎಂಬ ಹೇಳಿಕೆ ನೀಡಿ ಜನರಿಗೆ ಅಪಮಾನ ಮಾಡಿದ್ದಾರೆ. ಅಧಿಕಾರಕ್ಕಾಗಿ ಮತ ನೀಡಿರುವ ಜನರಿಗೆ ಅವಮಾನ ಮಾಡಿರುವುದು ನೋವು ತರುವ ಸಂಗತಿ ಎಂದು ಹೇಳಿದರು.

Leave a Reply

Your email address will not be published. Required fields are marked *

Back To Top