Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ವ್ಯಾಪಾರಕ್ಕೂ ಹಬ್ಬಿತು ದೀಪದ ಬೆಳಕು

Wednesday, 18.10.2017, 3:06 AM       No Comments

ದೇಶಾದ್ಯಂತ ಸಡಗರ, ಅದ್ದೂರಿಯಿಂದ ಆಚರಿಸಲ್ಪಡುವ ದೀಪಾವಳಿ ನಮ್ಮ ಆರ್ಥಿಕತೆಗೂ ಉಲ್ಲಾಸ ತಂದು, ವ್ಯಾಪಾರೋದ್ಯಮಿಗಳಿಗೆ ಸಂತಸದ ಕ್ಷಣಗಳನ್ನು ತರುತ್ತದೆ. ಗ್ರಾಹಕರಿಗೂ ಈ ಅವಧಿಯಲ್ಲಿ ಭಾರಿ ರಿಯಾಯಿತಿಗಳು ಲಭ್ಯವಾಗಿ, ಅವರಿಗೂ ಬಂಪರ್. ಹಲವು ರಂಗಗಳು ಇದೇ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತವೆ. ಆನ್​ಲೈನ್ ಮಾರಾಟವಂತೂ ಈ ದಿನಗಳಲ್ಲಿ ಮತ್ತಷ್ಟು ಪುಟಿದೇಳುತ್ತದೆ.

ಕಳೆದ ವರ್ಷದ 500-1000 ರೂಪಾಯಿ ನೋಟುಗಳ ನಿಷೇಧ, ಅದರ ಬೆನ್ನಲ್ಲೇ ಜಿಎಸ್​ಟಿ ಜಾರಿ ಬಳಿಕ ವ್ಯಾಪಾರ-ವಹಿವಾಟುಗಳಿಗೆ ಸ್ವಲ್ಪ ಹಿನ್ನಡೆಯಾಗಿದ್ದೇನೋ ನಿಜ. ಆದರೆ, ದೀಪಾವಳಿ ದೇಶದ ಪೇಟೆಯಲ್ಲಿ ಅತಿಹೆಚ್ಚು ವ್ಯಾಪಾರ ನಡೆಯುವ ಸಮಯವಾಗಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಇದಕ್ಕೆ ಪೂರಕವೆಂಬಂತೆ ಹಲವು ರಂಗಗಳ ವಹಿವಾಟು ವೇಗ ಪಡೆದಿದ್ದು, ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಈ ಮಧ್ಯೆ, ದೆಹಲಿ- ಎನ್​ಸಿಆರ್​ನಲ್ಲಿ ಪಟಾಕಿ ಮಾರಾಟ ನಿಷೇಧ ಮಾಡಿರುವುದರಿಂದ ಸಿಡಿಮದ್ದು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.

ಚೀನಾ ವಸ್ತುಗಳಿಗೆ ತಗ್ಗಿದ ಬೇಡಿಕೆ

ಚೀನಾದ ವಸ್ತುಗಳ ಮಾರಾಟ ಪ್ರಮಾಣ ತಗ್ಗಿದ್ದು, ಶೇ. 40-50ರಷ್ಟು ಇಳಿಕೆಯಾಗುವ ಅಂದಾಜಿದೆ. ಅದರಲ್ಲೂ ಪ್ರಮುಖವಾಗಿ ಚೀನಾ ನಿರ್ವಿುತ ಫ್ಯಾನ್ಸಿ ಲೈಟ್​ಗಳು, ಲ್ಯಾಂಪ್ ಶೇಡ್ಸ್, ದೇವರ ಮೂರ್ತಿಗಳು, ರಂಗೋಲಿ ಮತ್ತು ಪಟಾಕಿಗಳಿಗೆ ಬೇಡಿಕೆ ಕುಗ್ಗಿದೆ. ಚೀನಾದಲ್ಲಿ ತಯಾರಾಗಿರುವ ಎಲ್​ಸಿಡಿ, ಮೊಬೈಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟವು ಕಳೆದ ಆರು ತಿಂಗಳ ಅವಧಿಯಲ್ಲಿ ಶೇ.15-20ರಷ್ಟು ಇಳಿಕೆಯಾಗಿರುವುದು ಗಮನಾರ್ಹ.

ಚೀನಾ ನಿರ್ವಿುತ ವಸ್ತುಗಳ ಗುಣಮಟ್ಟ ಚೆನ್ನಾಗಿರದಿರುವುದು, ಗ್ಯಾರಂಟಿ ಇಲ್ಲದ್ದು ಮತ್ತು ಸ್ವದೇಶಿ ನಿರ್ವಿುತ ವಸ್ತುಗಳ ಬಗೆಗೆ ಜನರಲ್ಲಿ ಜಾಗೃತಿ ಹೆಚ್ಚಿಸಿರುವುದು ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ. ಇದರ ಪರಿಣಾಮದಿಂದ ತಮಿಳುನಾಡಿನ ಶಿವಕಾಶಿಯಲ್ಲಿ ತಯಾರಾಗುವ ಪಟಾಕಿಗಳಿಗೆ ಬೇಡಿಕೆ ಹೆಚ್ಚಿದೆ. 2016ರಲ್ಲಿ 6,500 ಕೋಟಿ ರೂಪಾಯಿ ಮೌಲ್ಯದ ಚೀನಾ ವಸ್ತುಗಳು ಮಾರಾಟವಾಗಿದ್ದರೆ, ಇದರಲ್ಲಿ 4,000 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ದೀಪಾವಳಿ ಸಂದರ್ಭದಲ್ಲೇ ಮಾರಾಟವಾಗಿದ್ದವು.

 ಆನ್​ಲೈನ್ ಮಾರಾಟ ಭರಾಟೆ

ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಆನ್​ಲೈನ್ ಮೂಲಕ 22,000 ಕೋಟಿ ರೂ. ಮೌಲ್ಯದ ವಸ್ತುಗಳ ಮಾರಾಟವಾಗಿದ್ದರೆ ಈ ಬಾರಿ 30,000 ಕೋಟಿ ರೂ. ಮೌಲ್ಯದ ಉತ್ಪನ್ನಗಳು ಮಾರಾಟವಾಗುವ ನಿರೀಕ್ಷೆ ಇದೆ. ಮೊಬೈಲ್ ಫೋನ್, ಇಲೆಕ್ಟ್ರಾನಿಕ್ ಗ್ಯಾಜೆಟ್, ಬಟ್ಟೆ, ಮನೆಬಳಕೆ ವಸ್ತುಗಳು ಮತ್ತು ಉಡುಗೊರೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಮೆಟ್ರೋ ನಗರಗಳಿಗಿಂತಲೂ ಸಣ್ಣ ಪಟ್ಟಣಗಳಲ್ಲಿ ಪಟಾಕಿಗೆ ಬೇಡಿಕೆ ಹೆಚ್ಚಿದೆ.

ಪುಣೆ, ಗುರ್​ಗಾಂವ್, ನೋಯ್ಡಾ, ಚಂಡೀಗಢ, ನಾಗ್ಪುರ, ಇಂದೋರ್, ಕೊಯಂಬತ್ತೂರು, ಜೈಪುರದಲ್ಲಿ ಆನ್​ಲೈನ್ ಮಾರಾಟ ವೃದ್ಧಿ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವಿಶಾಖಪಟ್ಟಣಂನಲ್ಲಿ ಆನ್​ಲೈನ್ ಶಾಪಿಂಗ್ ಶೇ. 65ರಷ್ಟು ಏರಿಕೆ ಕಂಡಿದೆ. ಇತ್ತೀಚೆಗೆ ಸಣ್ಣ ಪಟ್ಟಣಗಳಲ್ಲೂ 4ಜಿ ನೆಟ್​ವರ್ಕ್ ಸಿಗುವಂತಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

 3 ವಲಯಗಳ ಮೇಲೆ ದೃಷ್ಟಿ

# ರಿಯಲ್ ಎಸ್ಟೇಟ್: ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ದೀಪಾವಳಿಯ ಕೊಡುಗೆ ಜೋರಿರುವಂತೆ ಕಾಣುತ್ತಿಲ್ಲ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಕಂಡುಬಂದಿಲ್ಲ. ರೇರಾ ಕಾನೂನಿನ ಬಳಿಕ ಗ್ರಾಹಕರು ಯಾವುದೇ ಆಫರ್​ಗಳನ್ನು ತೆಗೆದುಕೊಳ್ಳುವ ಮೊದಲು ಹೋಲಿಕೆ ಮಾಡಿ ನೋಡುತ್ತಿದ್ದಾರೆ. ಹೀಗಾಗಿ ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಈ ಬಾರಿ ಶೇ.50ರಷ್ಟು ಕುಸಿತ ಕಂಡು ಬರುವ ಸಾಧ್ಯತೆಯಿದೆ.

# ಎಲೆಕ್ಟ್ರಾನಿಕ್: ಟಿವಿ, ಎ.ಸಿ., ವಾಷಿಂಗ್ ಮಷಿನ್​ಗೆ ಈ ಬಾರಿಯ ದೀಪಾವಳಿಗೆ ಬಂಪರ್ ಡಿಸ್ಕೌಂಟ್ ನೀಡಲಾಗಿದೆ. ಮಾರಾಟಗಾರರು ಶೇ.20ರಷ್ಟು ಡಿಸ್ಕೌಂಟ್ ನೀಡಿ ಮಾರಾಟ ಮಾಡುತ್ತಿದ್ದಾರೆ.

# ವಾಹನಗಳು: ಹಬ್ಬಗಳ ಕಾರಣದಿಂದ ವಾಹನೋದ್ಯಮ ಮತ್ತೊಮ್ಮೆ ಬೇಡಿಕೆ ಪಡೆದುಕೊಂಡಿದೆ. ದೀಪಾವಳಿಯಲ್ಲಿ ವಾಹನ ಮಾರಾಟ ಶೇ.15ರಷ್ಟು ಹೆಚ್ಚಾಗುವ ಅಂದಾಜಿದ್ದು, ಪಟ್ಟಣ ಪ್ರದೇಶದಲ್ಲಿ ಮಾರಾಟ ಹೆಚ್ಚಾಗಿದೆ. ಆದರೆ ದ್ವಿಚಕ್ರವಾಹನಗಳಿಗೆ ನಿರೀಕ್ಷಿತ ಬೇಡಿಕೆಯಿಲ್ಲ.

 

ಆನ್​ಲೈನ್ ಮಾರಾಟದ ಟ್ರೆಂಡ್

  • ಶೇ.78 ಮೊಬೈಲ್ ಫೋನ್
  • ಶೇ.72 ಇಲೆಕ್ಟ್ರಾನಿಕ್ ಗ್ಯಾಜೆಟ್
  • ಶೇ. 69 ಕನ್ಸೂ ್ಯುರ್ ಡ್ಯೂರಬಲ್ಸ್
  • ಶೇ. 58 ಉಡುಗೊರೆ ವಸ್ತುಗಳು
  • ಶೇ. 56 ಆಭರಣಗಳು
  • ಶೇ. 49 ಬಟ್ಟೆ
  • ಶೇ. 45 ಗೃಹಬಳಕೆ ವಸ್ತುಗಳು

ಡೇಟಾ ಖರ್ಚು ಹೆಚ್ಚು

ಇತ್ತೀಚಿನ ದಿನಗಳಲ್ಲಿ ವಾಟ್ಸ್​ಆಪ್, ಫೇಸ್​ಬುಕ್, ವಿಡಿಯೋ ಮೂಲಕ ಶುಭಾಶಯಗಳನ್ನು ತಿಳಿಸುವ ಟ್ರೆಂಡ್ ಹೆಚ್ಚಾಗಿದ್ದು, ಈ ಬಾರಿಯ ದೀಪಾವಳಿಯ 5 ದಿನಗಳಲ್ಲಿ ಮೂರುಪಟ್ಟು ಹೆಚ್ಚು ಡೇಟಾ ಖರ್ಚಾಗಲಿದೆ. ದೂರಸಂಪರ್ಕ ನಿಯಂತ್ರಕ ಟ್ರಾಯ್ ಪ್ರಕಾರ, ವ್ಯಕ್ತಿಯೊಬ್ಬ ಪ್ರತಿ ತಿಂಗಳಿಗೆ ಸರಾಸರಿ 1.25 ಜಿಬಿ ಡೇಟಾವನ್ನು ಬಳಸುತ್ತಾನೆ. ಆದರೆ ದೀಪಾವಳಿಯ 5 ದಿನಗಳಲ್ಲಿ 1 ಜಿಬಿ ಡೇಟಾ ಖರ್ಚು ಮಾಡುವ ನಿರೀಕ್ಷೆಯಿದೆ.

 ಚೀನಾದಲ್ಲಿ ಹುಟ್ಟು

1040ರಲ್ಲಿ ಚೀನಾದಲ್ಲಿ ಪಟಾಕಿ ಹುಟ್ಟಿಕೊಂಡಿತು. ಮನೆಯೊಂದರಲ್ಲಿ ಅಡುಗೆ ಮಾಡುತ್ತಿದ್ದ ಸಮಯದಲ್ಲಿ ಒಲೆಗೆ ಅಕಸ್ಮಾತ್ತಾಗಿ ಕಲ್ಮಿಶೋರಾ ಬಿದ್ದಾಗ ಅದರಿಂದ ಬಣ್ಣದ ಕಿಡಿಗಳೆದ್ದಿತ್ತು. ಅಲ್ಲಿಂದ ಪಟಾಕಿಯ ಆವಿಷ್ಕಾರವಾಗಿತ್ತು. ನಂತರದ ದಿನಗಳಲ್ಲಿ ಯುರೋಪ್, ಭಾರತ ಮತ್ತು ಪೂರ್ವದೇಶಗಳಿಗೆ ಹಬ್ಬಿತು. ಯುರೋಪ್​ನಲ್ಲಿ ಇಟಲಿಯಲ್ಲಿ ಮೊದಲ ಬಾರಿಗೆ ಪಟಾಕಿ ತಯಾರಿಕೆ ಆರಂಭವಾಯಿತು. 1892ರಲ್ಲಿ ಪಟಾಕಿ ಪ್ರದರ್ಶನ ಆಯೋಜಿಸಲಾಗಿತ್ತು. ಆದರೆ, ಪ್ರಾಚೀನ ಭಾರತದ ಅನೇಕ ಗ್ರಂಥಗಳಲ್ಲಿ ಸಿಡಿಮದ್ದು ತಯಾರಿಕೆ ಉಲ್ಲೇಖವಿದೆ. ಶುಕ್ರಾಚಾರ್ಯ ವಿರಚಿತ ‘ಶುಕ್ರ ನೀತಿ’ಯಲ್ಲಿ ಸಸ್ಯಗಳಿಂದ ಇದ್ದಿಲು ತಯಾರಿಸಿ ನಂತರ ಸಿಡಿಮದ್ದಾಗಿ ಪರಿವರ್ತಿಸುವ ಬಗೆ ವಿವರಿಸಲಾಗಿರುವುದು ಉಲ್ಲೇಖನೀಯ.

 25 ಟನ್ ಚಿನ್ನದ ನಾಣ್ಯ ಮಾರಾಟ?

ಆಲ್ ಇಂಡಿಯಾ ಜೆಮ್್ಸ ಆಂಡ್ ಜುವೆಲ್ಲರಿ ನೀಡಿರುವ ಮಾಹಿತಿಯ ಅನುಸಾರ, ಭಾರತದಾದ್ಯಂತ 4.5 ಲಕ್ಷ ಆಭರಣ ಮಳಿಗೆಗಳಿವೆ. ವರ್ಷವಿಡೀ ಮಾರಾಟವಾಗುವ ಚಿನ್ನದ ನಾಣ್ಯಗಳಲ್ಲಿ ಶೇ.25ರಷ್ಟು ದೀಪಾವಳಿ ಸಂದರ್ಭದಲ್ಲೇ ಮಾರಾಟವಾಗುತ್ತವೆ.

ಈ ದೀಪಾವಳಿಯಲ್ಲಿ ಚಿನ್ನದ ನಾಣ್ಯಗಳ ಮಾರಾಟ ಶೇ.10-15ರಷ್ಟು ಏರಿಕೆಯಾಗುವ ನಿರೀಕ್ಷೆಯಿದ್ದು, 25-30 ಟನ್​ಗಳಷ್ಟು ಚಿನ್ನದ ನಾಣ್ಯಗಳು ಮಾರಾಟವಾಗಲಿವೆ. ಒಂದು ಗ್ರಾಂ ಮತ್ತು 10 ಗ್ರಾಂನ ಚಿನ್ನದ ನಾಣ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ. ಮತ್ತೊಂದೆಡೆ, ಮನಿ ಲಾಂಡ್ರಿಂಗ್ ಆಕ್ಟ್​ನಲ್ಲಿ ಬದಲಾವಣೆ ತಂದು ಹಿಂದಿದ್ದ 50 ಸಾವಿರ ರೂ. ಮಿತಿಯನ್ನು 2 ಲಕ್ಷ ರೂ.ಗೆ ಏರಿಸಲಾಗಿದೆ. ಹಿಂದೆ ಗ್ರಾಹಕರು ಪ್ಯಾನ್ ಕಾರ್ಡ್ ಇಲ್ಲದೆ 15 ಗ್ರಾಂ ಚಿನ್ನ ಖರೀದಿಸಬಹುದಾಗಿತ್ತು. ಈಗ ಪ್ಯಾನ್ ಕಾರ್ಡ್ ಇಲ್ಲದೆ 70 ಗ್ರಾಂ ಚಿನ್ನ ಖರೀದಿಸಬಹುದಾಗಿದೆ.

ಸರ್ಕಾರದ ನ್ಯಾಷನಲ್ ಗೋಲ್ಡ್ ಕಾಯಿನ್​ನ ಮಾರಾಟದ ಜವಾಬ್ದಾರಿಯನ್ನು ಎಂಎಂಟಿಸಿಗೆ ವಹಿಸಲಾಗಿದೆ. ನಾಣ್ಯದ ಒಂದು ಕಡೆ ಅಶೋಕ ಚಕ್ರ ಇನ್ನೊಂದು ಕಡೆ ಮಹಾತ್ಮ ಗಾಂಧಿಯ ಚಿತ್ರವಿದ್ದು, ಏಳು ಬ್ಯಾಂಕ್​ಗಳ 450 ಬ್ರಾಂಚ್​ಗಳಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. 5,10 ಮತ್ತು 20 ಗ್ರಾಂಗಳ ನಾಣ್ಯಗಳು ಲಭ್ಯವಿವೆ. 24 ಕ್ಯಾರೆಟ್​ನ ಈ ನಾಣ್ಯಗಳ ಮೇಲೆ ಸೀರಿಯಲ್ ನಂಬರ್ ಮತ್ತು ಬಾರ್​ಕೋಡ್​ಗಳನ್ನೂ ನೀಡಲಾಗಿದೆ. ಈ ನಾಣ್ಯಗಳು ಮುಂಬೈ ಮತ್ತು ಕೋಲ್ಕತ್ತದಲ್ಲಿ ತಯಾರಾಗಿದ್ದು, ಧನ್​ತೇರಸ್​ನಲ್ಲಿ 300-400 ಕಿಲೋ ನಾಣ್ಯ ಮಾರಾಟವಾಗುವ ನಿರೀಕ್ಷೆಯಿದೆ.

 ಸಿಹಿತಿಂಡಿ ಮಾರುಕಟ್ಟೆ 65 ಸಾವಿರ ಕೋಟಿ ರೂ.

ದೀಪಾವಳಿಯಲ್ಲಿ ಮಾರಾಟವಾಗುವ ಸಿಹಿತಿಂಡಿಗಳ ಪೈಕಿ ಗುಲಾಬ್ ಜಾಮೂನು ಮತ್ತು ರಸಗುಲ್ಲಾ ಬೇಡಿಕೆ ವಿಚಾರದಲ್ಲಿ ಮೊದಲ ಸ್ಥಾನದಲ್ಲಿವೆ. ಕಾಜೂ ಕತ್ಲಿ ಮತ್ತು ಲಡ್ಡು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಗುಜರಾತ್​ನಲ್ಲಿ ಲಡ್ಡುಗೆ ಬೇಡಿಕೆ ಇದ್ದರೆ, ಮಹಾರಾಷ್ಟ್ರದಲ್ಲಿ ಸಾಂಪ್ರದಾಯಿಕ ಸಿಹಿತಿಂಡಿಗಳ ಜತೆಗೆ ಕಾಜೂ ಕತ್ಲಿಗೆ ಬೇಡಿಕೆ ಇದೆ. ಹರಿಯಾಣದಲ್ಲಿ ಹೆಸರುಬೇಳೆಯಿಂದ ತಯಾರಿಸಿದ ಸಿಹಿತಿಂಡಿಗಳ ಮಾರಾಟ ಹೆಚ್ಚಾಗಿದೆ. ಪಂಜಾಬ್​ನಲ್ಲಿ ಮಿಲ್ಕ್ ಕೇಕ್ ಮುಂಚೂಣಿಯಲ್ಲಿದ್ದರೆ. ರಾಜಸ್ಥಾನದಲ್ಲಿ ದೇಸಿ ತುಪ್ಪದಿಂದ ತಯಾರಿಸಿದ ಸಿಹಿತಿಂಡಿಗಳ ಮಾರಾಟ ಹೆಚ್ಚಾಗಿದೆ. ಅಸೋಚಾಮ್ ವರದಿಯಂತೆ ದೇಶಾದ್ಯಂತ 65 ಸಾವಿರ ಕೋಟಿ ರೂ. ಮೌಲ್ಯದ ಸಿಹಿತಿಂಡಿ ಮಾರುಕಟ್ಟೆಯಿದೆ. ಈ ದೀಪಾವಳಿಯಲ್ಲಿ 16 ಸಾವಿರ ಕೋಟಿ ರೂ.ಗಳ ಸಿಹಿತಿನಿಸುಗಳು ಮಾರಾಟವಾಗುವ ನಿರೀಕ್ಷೆಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸಿಹಿತಿಂಡಿಗಳ ಮಾರಾಟ ಈ ಬಾರಿ ಶೇ.15ರಷ್ಟು ಹೆಚ್ಚಾಗಲಿದೆ. ಇದರಲ್ಲಿ ಚಾಕೋಲೆಟ್​ನ ಮಾರಾಟ ಪ್ರಮಾಣವನ್ನು ಸೇರಿಸಲಾಗಿಲ್ಲ. ದೀಪಾವಳಿ ಸಂದರ್ಭದಲ್ಲಿ ಮಾರಾಟವಾಗುವ ಸಿಹಿತಿನಿಸುಗಳಲ್ಲಿ ಶೇ.20-25ರಷ್ಟು ಪಾಲು ರಸಗುಲ್ಲಾ ಮತ್ತು ಗುಲಾಬ್ ಜಾಮೂನ್​ದಾಗಿದೆ. ಉಳಿದಂತೆ ಮೈಸೂರ್ ಪಾಕ್, ಬಾದಾಮ್ ಹಲ್ವಾ, ಸೋನ್​ಪಾಪಡಿ ಮತ್ತು ಬಂಗಾಳಿ ಸ್ವೀಟ್​ಗಳು ಹೆಚ್ಚು ಖ್ಯಾತಿಗಳಿಸಿವೆ. ಅಧ್ಯಯನಗಳಂತೆ ಇತ್ತೀಚಿನ ದಿನಗಳಲ್ಲಿ ಸಕ್ಕರೆರಹಿತ ಮತ್ತು ಕಡಿಮೆ ಸಕ್ಕರೆ ಬಳಸಿ ತಯಾರಾದ ಸಿಹಿತಿನಿಸುಗಳನ್ನು ಜನರು ಇಷ್ಟಪಡುತ್ತಿದ್ದಾರೆ. ಸ್ವಾಸ್ಥ್ಯ ಮತ್ತು ಕಲಬೆರಕೆ ಕಾರಣದಿಂದ ಖೋವಾದಿಂದ ತಯಾರಿಸಿದ ಸಿಹಿತಿನಿಸುಗಳಿಂದ ದೂರ ಉಳಿದರೆ ಕಡಲೇಹಿಟ್ಟಿನಿಂದ ತಯಾರಿಸಿದ ಸಿಹಿತಿನಿಸುಗಳು ಹೆಚ್ಚು ಪ್ರಿಯವಾಗುತ್ತಿವೆ.

Leave a Reply

Your email address will not be published. Required fields are marked *

Back To Top