Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ವೈಯಕ್ತಿಕ ಕಾನೂನನ್ನು ಸಮರ್ಪಕವಾಗಿ ಅರ್ಥೈಸಬೇಕಿದೆ

Wednesday, 12.04.2017, 3:05 AM       No Comments

ಧರ್ಮವೆಂದರೆ ಮತ್ತೇನಲ್ಲ, ಅದು ನಾವು ಕೈಗೊಳ್ಳುವ ಎಲ್ಲ ಕಾರ್ಯಚಟುವಟಿಕೆಗಳ ವಿಧಾನ ಮತ್ತು ಮಾಧ್ಯಮ. ಹಿಂಸೆ, ಮೂಢನಂಬಿಕೆ, ದಿಕ್ಕುತಪ್ಪಿಸುವ ಸಿದ್ಧಾಂತಗಳು, ತಾರತಮ್ಯ ಈ ಎಲ್ಲ ಅಪಸವ್ಯಗಳಿಂದ ಅದು ಮುಕ್ತವಾಗಿರಬೇಕು. ಇಂಥದೊಂದು ಧರ್ಮದ ಪರಿಕಲ್ಪನೆಯನ್ನು ಪ್ರತಿಪಾದಿಸಿದ್ದು ಮಹಾತ್ಮ ಗಾಂಧೀಜಿ. ಇದರ ಅನುಸರಣೆ ಹಿಂದೆಂದಿಗಿಂತ ಇಂದು ಹೆಚ್ಚು ಅಗತ್ಯವಾಗಿದೆ.

 ‘ನಮಗೆ ಗೊತ್ತಿರುವ ಎಲ್ಲ ಅರ್ಥಗಳೂ ಪ್ರಮುಖವಾಗಿ ವ್ಯಾಖ್ಯಾನವನ್ನು ಅವಲಂಬಿಸಿವೆ’ -ಜಾರ್ಜ್ ಎಲಿಯಟ್

ಯಾವ ಕಾರಣವೂ ಇಲ್ಲದೆ ವಿಚ್ಛೇದನಕ್ಕೆ ಗುರಿಯಾದ ಹಲವಾರು ಮಧ್ಯವಯಸ್ಕ ಮಹಿಳೆಯರು ತಲೆ ಮೇಲೊಂದು ಸೂರಿಲ್ಲದೆ, ತಮ್ಮ ಹಾಗೂ ಮಕ್ಕಳ ಪಾಲನೆ ಪೋಷಣೆಗೆ ಯಾವುದೇ ಆದಾಯವೂ ಇಲ್ಲದೆ ಅರ್ಧದಾರಿಯಲ್ಲಿ ಬಿದ್ದು ಅನಾಥರಾಗುತ್ತಾರೆ. ಈ ಪರಿಸ್ಥಿತಿ ನಮ್ಮನ್ನು ಎಚ್ಚರಿಸಬೇಕು, ಜತೆಗೆ ರಾಜಕೀಯ ಮತ್ತು ಧಾರ್ವಿುಕ ಒತ್ತಡಗಳನ್ನು ಬೀರುವಂತಾಗುವಲ್ಲಿ ನಮ್ಮ ಶಕ್ತಿ ವ್ಯರ್ಥವಾಗಬಾರದೆಂಬ ಪಾಠವನ್ನೂ ನಮಗೆ ಕಲಿಸಬೇಕು.

ಸುಧಾರಣೆಯ ತೆಕ್ಕೆಗೆ ಬರದಂತೆ ಪರಂಪರಾಗತ ವೈಯಕ್ತಿಕ ಕಾನೂನನ್ನು ಕಾಪಿಟ್ಟುಕೊಂಡು, ಸರ್ಕಾರದ ಶಾಸನಾತ್ಮಕ ಅಧಿಕಾರವ್ಯಾಪ್ತಿಗೆ ನಿಲುಕದಂತೆ ಅದಕ್ಕೆ ಸುತ್ತುಬೇಲಿ ಹಾಕುವ ಬದಲು, ಈ ಮುಂದಿನ ಗುರಿಸಾಧನೆಗೆಂದು ಮಹತ್ತರವಾದ ಬೌದ್ಧಿಕ ಕಸರತ್ತುಗಳಲ್ಲಿ ತೊಡಗಿಸಿಕೊಳ್ಳಬೇಕಿದೆ: 1) ಕಾಲದ ಹೊಡೆತಕ್ಕೆ ಸಿಕ್ಕಿ ಸವೆದುಹೋಗಿರುವ ಮತ್ತು ಕಾಲಾಭಾಸದ ವ್ಯಾಖ್ಯಾನಗಳನ್ನು ಕಿತ್ತುಹಾಕುವುದು, ಮತ್ತು 2) ಎಲ್ಲ ಭಾರತೀಯರ ವೈಯಕ್ತಿಕ ಬದುಕಿಗೂ ಅನ್ವಯವಾಗುವಂಥ ಸಾಮಾನ್ಯ ಮತ್ತು ಏಕರೂಪದ ಕಟ್ಟುಪಾಡುಗಳನ್ನು ಶ್ರೀಮಂತಗೊಳಿಸಲೆಂದು ಧರ್ಮವೊಂದರ ಸೊಗಸು ಅಥವಾ ಅತ್ಯುತ್ತಮ ಮಾದರಿಯನ್ನು ಬಳಸುವುದು. ಹಾಗೆಂದ ಮಾತ್ರಕ್ಕೆ, ಸರ್ಕಾರ ಅದರಲ್ಲೂ ನಿರ್ದಿಷ್ಟವಾಗಿ ಶಾಸನಸಭೆಗಳು ನಮ್ಮ ಬದುಕಿನ ಎಲ್ಲ ಮಗ್ಗುಲುಗಳ ಮೇಲೂ ಅಧಿಪತ್ಯ ವಹಿಸಬೇಕು ಅಥವಾ ಮಧ್ಯಪ್ರವೇಶಿಸಬೇಕು ಎಂದರ್ಥವಲ್ಲ. ಅತ್ಯಂತ ಕಡಿಮೆ ಅಧಿಪತ್ಯ ವಹಿಸುವ ಸರ್ಕಾರವೇ ನಿಸ್ಸಂಶಯವಾಗಿ ಅತ್ಯುತ್ತಮ ಸರ್ಕಾರವಾಗಿರುತ್ತದೆ.

ಅದೇನೇ ಇರಲಿ, ನಮ್ಮ ರಾಜ್ಯವು ರೂಪುಗೊಳ್ಳುವ ಸಂದರ್ಭದಲ್ಲಿ, ಉತ್ತಮ ಆಡಳಿತ ನಡೆಸುವುದಕ್ಕೆ ಅನುವಾಗಲೆಂದು ನಾಗರಿಕರು ಸಾಮೂಹಿಕವಾಗಿ ಧಾರೆಯೆರೆದಿರುವ ಎಲ್ಲ ಮೂಲಭೂತ ಹಾಗೂ ಸಹಜ ಹಕ್ಕುಗಳಿಗೆ ಸಂಪೂರ್ಣ ರಕ್ಷಣೆಯನ್ನು ಖಾತ್ರಿಪಡಿಸುವುದು ಎಲ್ಲ ಸರ್ಕಾರಗಳ ಪ್ರಾಥಮಿಕ ಕರ್ತವ್ಯ. ನಾಗರಿಕರು ಮತ್ತು ಸರ್ಕಾರಗಳು ತಂತಮ್ಮ ಕರ್ತವ್ಯಗಳನ್ನು ನಿಭಾಯಿಸುವಾಗ, ಸಂವಿಧಾನವೆಂಬುದು ಬದುಕಿರುವವರ ಫಲಾನುಭವದ ಹಕ್ಕೇ ಹೊರತು, ಸತ್ತವರ ಸ್ವತ್ತಲ್ಲ ಎಂಬುದನ್ನು ಮರೆಯಬಾರದು. ವರ್ತಮಾನದ ಸಾಮಾಜಿಕ ಗುಣಲಕ್ಷಣಗಳಿಗೆ ಅನುಗುಣವಾಗಿರುವ ಸಜೀವ ದಾಖಲೆ ಎಂಬರ್ಥದಲ್ಲಿ ಅದನ್ನು ಗ್ರಹಿಸಬೇಕು.

ನಮ್ಮೆಲ್ಲರ ಪಾಲಿನ ದಾರಿದೀಪವಾಗಿರುವ ಸಂವಿಧಾನವು ತನ್ನ ಪೀಠಿಕೆಯಲ್ಲಿ, ಜಾತ್ಯತೀತತೆ, ಸಾಮಾಜಿಕ ನ್ಯಾಯ, ನಂಬಿಕೆಯ ಸ್ವಾತಂತ್ರ್ಯ ಸ್ಥಾನಮಾನದ ಸಮಾನತೆ ಮೊದಲಾದವುಗಳನ್ನು ನಮ್ಮ ಪ್ರಜಾತಾಂತ್ರಿಕ ಬದುಕಿನ ಕೆಲ ಮೂಲಭೂತ ತತ್ತ್ವಗಳಾಗಿ ಸೂಚಿಸಿದೆ. ನಮ್ಮ ಸಂವಿಧಾನವು, ಎಲ್ಲರೂ ಶಾಂತಿಯುತ ನಾಗರಿಕ ಬದುಕು ಸಾಗಿಸುವುದಕ್ಕೆ ಅಗತ್ಯವಾದ ಎಲ್ಲ ನಿಯಮಾವಳಿಗಳನ್ನು ಒಳಗೊಂಡಿರುವ ಒಂದು ಅದ್ಭುತ ದಾಖಲೆ ಎಂಬುದರಲ್ಲಿ ಎರಡು ಮಾತಿಲ್ಲ. ಎಲ್ಲ ಕಾನೂನುಗಳು ಮತ್ತು ಕ್ರಮಗಳನ್ನು ಶಾಸನಬದ್ಧಗೊಳಿಸುವ ಚಿಲುಮೆ ಅದು. ಸಂವಿಧಾನಬಾಹಿರ ಕ್ರಮಗಳ ನ್ಯಾಯಾಂಗ ಮರುಪರಿಶೀಲನೆಗೆ ಅವಕಾಶ ಕಲ್ಪಿಸುವ ಮೂಲಕ, ಕಾನೂನುಗಳು ಮತ್ತು ಕಾರ್ಯಾಂಗದ ಕ್ರಮಗಳಿಂದ ನಮ್ಮ ಸಂವಿಧಾನಬದ್ಧ ಹಕ್ಕುಗಳಿಗೆ ಧಕ್ಕೆಯಾಗದಂತೆ ಅದು ರಕ್ಷಣೆ ನೀಡುತ್ತದೆ. ಅದೇನೇ ಇದ್ದರೂ, ನಮ್ಮ ಸಂವಿಧಾನದ ಯಶಸ್ಸಿಗೆ ಕಾರಣವಾಗಿರುವುದು ಅದರಲ್ಲಿನ ನಿಯಮಾವಳಿಗಳು/ಕಟ್ಟನಿಟ್ಟುಗಳು ಮಾತ್ರವೇ ಅಲ್ಲ; ಕಲ್ಲುಬಂಡೆಗಳು ಸಣ್ಣಸಣ್ಣ ಮಣ್ಣಿನ ಕಣಗಳಾಗಿ ಪರಿವರ್ತನೆಯಾಗುವುದು ಸಾವಿರಾರು ವರ್ಷಗಳಷ್ಟು ಸುದೀರ್ಘ ಪ್ರಕ್ರಿಯೆಯಾಗಿರುವಂತೆಯೇ, ಸಂವಿಧಾನದ ಹಿಂದಿರುವ ಮೂಲ ಆಶಯವು ವಾಸ್ತವವಾಗಿ ಬದಲಾಗುವಂತಾಗುವಲ್ಲಿ, ಕಟ್ಟೆಚ್ಚರದಿಂದ ಕಾಯುತ್ತಿರುವ ಸವೋಚ್ಚ ನ್ಯಾಯಾಲಯವನ್ನು ಒಳಗೊಂಡಿರುವ ಭಾರತದ ನ್ಯಾಯದಾನ ವ್ಯವಸ್ಥೆಯು ತನ್ನದೇ ಆದ ಕೊಡುಗೆಯನ್ನು ನೀಡಿದೆ.

ಸಂವಿಧಾನವನ್ನು ಕೆಲವೇ ವೃತ್ತಿಪರರರು ಮಾತ್ರವಲ್ಲದೆ ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂಬುದೇನೋ ನಿಜ. ಆದರೆ ಪ್ರತಿಯೊಂದು ವೃತ್ತಿಗೂ ಅದರದ್ದೇ ಆದ ವೈಶಿಷ್ಟ್ಯಳಿರುತ್ತವೆ. ಉದಾಹರಣೆಗೆ, ಓರ್ವ ಕಾನೂನು ವಿದ್ಯಾರ್ಥಿ ಅಥವಾ ಕಾನೂನು ವೃತ್ತಿಗಾರನಲ್ಲಿ, ಪದಗಳು ಹಾಗೂ ಸಾಹಿತ್ಯದ ಸೂಕ್ತ ಮತ್ತು ಸ್ವೀಕಾರಾರ್ಹ ಅರ್ಥವಿವರಣೆಯನ್ನು ಗುರುತಿಸುವ ಆಸಕ್ತಿಯು ಪ್ರಬಲವಾಗಿರುವ ಸಾಧ್ಯತೆ ಹೆಚ್ಚು. ಮೇಲಾಗಿ, ಪದಗಳ ಅಕ್ಷರಶಃ ಅರ್ಥ ಅಥವಾ ವಾಚ್ಯಾರ್ಥಕ್ಕೆ ಸದಾಕಾಲವೂ ಅಂಟಿಕೊಂಡಿರಬೇಕಾದ ಅಗತ್ಯವಿಲ್ಲ ಎಂಬುದನ್ನು ಕಾನೂನು ಅಧ್ಯಯನವು ಕಲಿಸಿಕೊಡುತ್ತದೆ. ಇದನ್ನು ಸಮರ್ಥವಾಗಿ ಅರ್ಥಮಾಡಿಕೊಳ್ಳಲು, 1973ರಲ್ಲಿ ಸವೋಚ್ಚ ನ್ಯಾಯಾಲಯದ 13 ಸದಸ್ಯರ ನ್ಯಾಯಪೀಠವು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನೀಡಿದ ತೀರ್ಪಿಗಿಂತ ಉತ್ತಮವಾದ ಮತ್ತೊಂದು ನಿದರ್ಶನವಿಲ್ಲ ಎನ್ನಬಹುದೇನೋ? ಸಂಸತ್ತು, ಸಂವಿಧಾನದ 368ನೇ ವಿಧಿಯಡಿ ಹೊಂದಿರುವ ತಥಾಕಥಿತ ‘ಸಂವಿಧಾನದತ್ತ ಅಧಿಕಾರ’ದ ಅಡಿಯಲ್ಲಿ ಕೂಡ, ನಮ್ಮ ಸಂವಿಧಾನದ ಕೆಲವೊಂದು ಮೂಲಭೂತ ವೈಶಿಷ್ಟ್ಯಳನ್ನು ಹಾಳುಮಾಡಲು ಅಥವಾ ದುರ್ಬಲಗೊಳಿಸಲು ತನ್ನ ಅಧಿಕಾರವನ್ನು ಚಲಾಯಿಸಲಾಗದು ಎಂದು ಸವೋಚ್ಚ ನ್ಯಾಯಾಲಯವು ಈ ಪ್ರಕರಣದ ತೀರ್ಪಿನಲ್ಲಿ ಸಾರಿತ್ತು. ಆದ್ದರಿಂದ, ಹೊಣೆಗಾರಿಕೆಯೆಂಬುದು ಸಂವಿಧಾನದ ಹೆಗಲ ಮೇಲಿರಬೇಕು ಎಂದಾಗಿರುವಾಗ ಮತ್ತು ಪ್ರಜಾಸತ್ತಾತ್ಮಕ ನೀತಿ-ನಿಯಮಗಳ ಮುನ್ನಡೆಯನ್ನು ಖಾತ್ರಿಪಡಿಸಲೆಂದು ಹೊಂದಿಕೊಳ್ಳುವಂಥ ವ್ಯಾಖ್ಯಾನಗಳನ್ನು ಅದಕ್ಕೆ ನೀಡಿರುವಾಗ, ಧಾರ್ವಿುಕ ಗ್ರಂಥಗಳ ವಿಚಾರಕ್ಕೆ ಬಂದಾಗಲೂ ಇಂಥದೇ ನಿಲುವನ್ನು ಏಕೆ ತೆಗೆದುಕೊಳ್ಳಬಾರದು ಎಂಬ ಪ್ರಶ್ನೆಯಿಲ್ಲಿ ಉದ್ಭವಿಸುತ್ತದೆ.

ಆತ್ಮಸಾಕ್ಷಿ ಸ್ವಾತಂತ್ರ್ಯ ವೃತ್ತಿ ಸ್ವಾತಂತ್ರ್ಯ ಧರ್ಮದ ಪರಿಪಾಲನೆ ಮತ್ತು ಪ್ರಸರಣದ ಸ್ವಾತಂತ್ರ್ಯಂಥ ಹಕ್ಕುಗಳಿಗೆ ನಮ್ಮ ಸಂವಿಧಾನವು ಖಾತರಿ ನೀಡಿದೆ ಎಂಬುದು ಸರ್ವಸಮ್ಮತವಾಗಿರುವ ವಿಚಾರ. ಆದಾಗ್ಯೂ, ಈ ಸ್ವಾತಂತ್ರ್ಯಳ ಖಾತರಿ ನೀಡುವ ಸಂವಿಧಾನದ ಇದೇ ವಿಧಿಯು, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯದ ಷರತ್ತುಗಳಿಗೂ ಅವುಗಳನ್ನು ಒಳಪಡಿಸಿದೆ; ಅಲ್ಲದೆ, ಕಾನೂನಿನೆದುರು ಸರ್ವರ ಸಮಾನತೆ, ಕಾನೂನುಗಳ ಸಮಾನ ಸಂರಕ್ಷಣೆ, ಲಿಂಗಾಧಾರಿತ ತಾರತಮ್ಯದ ನಿಷೇಧ, ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ವೈಯಕ್ತಿಕ ಸ್ವಾತಂತ್ರ್ಯ ಸಂರಕ್ಷಣೆ ಸೇರಿದಂತೆ, ಇನ್ನಿತರ ಎಲ್ಲ ಮೂಲಭೂತ ಹಕ್ಕುಗಳ ಖಾತರಿಯನ್ನೂ ಇದೇ ವಿಧಿ ನೀಡುತ್ತದೆ. ಧರ್ಮದ ನೆಲೆಗಟ್ಟಿನಲ್ಲಿ ಸಮರ್ಥಿಸಲಾಗುತ್ತಿರುವ ತಾರತಮ್ಯಗಳು ಸೇರಿದಂತೆ ಮಹಿಳೆಯರ ವಿರುದ್ಧದ ಯಾವುದೇ ತಾರತಮ್ಯವನ್ನು ಈ ಮಾನದಂಡವು ಅವಶ್ಯವಾಗಿ ನಿಷೇಧಿಸುತ್ತದೆ.

ಈ ಹಿನ್ನೆಲೆಯಲ್ಲಿ, ಮಾನವ ಹಕ್ಕುಗಳನ್ನು, ಅದರಲ್ಲೂ ನಿರ್ದಿಷ್ಟವಾಗಿ ಮಹಿಳಾ ಹಕ್ಕುಗಳನ್ನು ಉಲ್ಲಂಘಿಸುವ ಧರ್ಮದ ಯಾವುದೇ ವ್ಯಾಖ್ಯಾನವು ಸಂಪೂರ್ಣವಾಗಿ ಅಸಂಬದ್ಧವಷ್ಟೇ ಅಲ್ಲ, ಸಂವಿಧಾನಬಾಹಿರವೂ ಆಗುತ್ತದೆ. ಇಂಥ ಯಾವುದೇ ವ್ಯಾಖ್ಯಾನವು ಸಂವಿಧಾನವನ್ನು ಮೀರುವುದಷ್ಟೇ ಅಲ್ಲ, ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ನಿಯಮಗಳು ಅಥವಾ ತತ್ತ್ವಗಳನ್ನು ಹಾಳುಗೆಡಹುವಂಥದೂ ಆಗಿರುತ್ತದೆ. ಉದಾಹರಣೆಗೆ, ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಕುರಿತಾದ 1966ರ ಅಂತಾರಾಷ್ಟ್ರೀಯ ಒಡಂಬಡಿಕೆಯ 18ನೇ ವಿಧಿಯು, ಧಾರ್ವಿುಕ ಸ್ವಾತಂತ್ರ್ಯ ಅಥವಾ ನಂಬಿಕೆಯನ್ನು ಮಾನ್ಯಮಾಡುತ್ತದೆ; ಇದೇ ವೇಳೆಗೆ ಈ ಒಡಂಬಡಿಕೆಯು, ಸಾರ್ವಜನಿಕ ಸುರಕ್ಷತೆ, ಸುವ್ಯವಸ್ಥೆ, ಆರೋಗ್ಯ ಅಥವಾ ನೈತಿಕತೆಗಳನ್ನು ಅಥವಾ ಇತರರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಳನ್ನು ಸಂರಕ್ಷಿಸುವುದಕ್ಕೆ ಅವಶ್ಯವಾಗಿರುವ ಮತ್ತು ಕಾನೂನಿನಿಂದ ಶಿಫಾರಸು ಮಾಡಲ್ಪಟ್ಟಿರುವಂಥ ಮಿತಿಗಳಿಗೂ ಅದನ್ನು ಒಳಪಡಿಸುತ್ತದೆ.

ತಂತಮ್ಮ ಧಾರ್ವಿುಕ ಸಮುದಾಯಗಳಿಗೆ ಸೇರಿದ ಮಹಿಳೆಯರಿಗೆ ಸಂಬಂಧಿಸಿದ ಹಕ್ಕುಗಳನ್ನು ನಿರೂಪಿಸುವ ಮೂಲಕ ಧರ್ಮವು ಮಹಿಳೆಯರ ಹಕ್ಕುಗಳ ಮೇಲೆ ಗಣನೀಯ ರೀತಿಯಲ್ಲಿ ಪ್ರಭಾವ ಬೀರಿದೆ. ವಾಸ್ತವವಾಗಿ, ‘ಕುಟುಂಬ’ ಎಂಬುದು ಮಹಿಳಾ ಹಕ್ಕುಗಳ ಪೈಕಿ ಅತ್ಯಂತ ಚರ್ಚೆಗೊಳಗಾಗಿರುವ ನೆಲೆಗಳಲ್ಲಿ ಒಂದಾಗಿದೆ. ಅದೇನೇ ಇರಲಿ, ಮಹಿಳೆಯರನ್ನು ನೆಲೆರಹಿತ, ಮಾನ್ಯತೆರಹಿತರನ್ನಾಗಿಸುವುದು ಮತ್ತು ಪುರುಷ ಅಕ್ರಮಾಧಿಪತ್ಯಕ್ಕೆ ಒಳಪಡಿಸುವುದು ಯಾವುದೇ ಧರ್ಮದ ಧ್ಯೇಯವಾಗುವುದು ಸಾಧ್ಯವಿಲ್ಲ. ನಮ್ಮ ಭೂಮಿಯನ್ನು ಉಳಬಲ್ಲ, ಮಕ್ಕಳನ್ನು ಪಾಲಿಸಿ ಪೋಷಿಸಬಲ್ಲ, ಮುಂಚೂಣಿಯಲ್ಲಿ ನಿಂತು ನಮ್ಮನ್ನು ಸಮರ್ಥಿಸಿಕೊಳ್ಳಬಲ್ಲ, ಅಷ್ಟೇಕೆ ಪುರುಷರಿಗಿಂತಲೂ ಹೆಚ್ಚಿನ ಕಾರ್ಯಭಾರಗಳನ್ನು ನಿಭಾಯಿಸಬಲ್ಲ ಮಹಿಳೆಯರನ್ನು ಇಂಥ ದಬ್ಬಾಳಿಕೆಗೆ ಒಳಪಡಿಸುವುದಕ್ಕೆ ಮತ್ತು ಪ್ರಜಾಪ್ರಭುತ್ವದ ಮಾನದಂಡಗಳಿಗೆ ವಿರುದ್ಧವಾಗಿ ನಡೆಸಿಕೊಳ್ಳುವುದಕ್ಕೆ ಪುರುಷರಿಗೆ ಅದ್ಯಾವ ಹಕ್ಕಿದೆ? ಧರ್ಮದ ಮತ್ತು ಧರ್ಮಗ್ರಂಥಗಳ ಅಸಮರ್ಪಕ ವ್ಯಾಖ್ಯಾನದಿಂದಾಗಿ ಇಂಥದೊಂದು ಸಮಸ್ಯೆ ಹುಟ್ಟಿಕೊಳ್ಳುತ್ತದೆ ಎಂಬುದು ದುರದೃಷ್ಟಕರ ಸಂಗತಿ.

ಧರ್ಮದ ಅಥವಾ ಧರ್ಮಗ್ರಂಥಗಳ ಉದ್ಧಟತನದ ವ್ಯಾಖ್ಯಾನಕ್ಕೆ, ‘ತಲಾಕ್’ ಎಂಬ ಪದವನ್ನು ಮೂರುಬಾರಿ ಪುನರುಚ್ಚರಿಸುವ ಮೂಲಕ ಮದುವೆಯಂಥ ಪವಿತ್ರ ಬಾಂಧವ್ಯವನ್ನೇ ಕೊನೆಗೊಳಿಸಿಬಿಡಬಹುದು ಎಂಬ ಪರಿಕಲ್ಪನೆಯೇ ಸಾಕ್ಷಿ; ಅಂದರೆ, ಹಟಾತ್ತಾಗಿ ‘ತಲಾಕ್’ ಎಂದುಬಿಡುವ ಮೂಲಕ ನ್ಯಾಯಾಲಯದ ಹೊರಗೆ ನಡೆಯುವ ವಿವಾಹ ವಿಚ್ಛೇದನವೆಂಬ ತೂಗುಕತ್ತಿಯ ಭಯ ಭಾರತೀಯ ಮುಸ್ಲಿಂ ಮಹಿಳೆಯರ ಪಾಲಿಗೆ ದುರದೃಷ್ಟಕರ ಸಂಗತಿಯಾಗಿ ಪರಿಣಮಿಸಿಬಿಟ್ಟಿದೆ. ಅನೇಕ ಪ್ರಕರಣಗಳಲ್ಲಿ, ಇಂಥದೊಂದು ದುರದೃಷ್ಟಕರ ಪದ್ಧತಿಯ ಕಾರಣದಿಂದಾಗಿ, ಮುಸ್ಲಿಂ ಮಹಿಳೆಯರು ನೋಡನೋಡುತ್ತಿದ್ದಂತೆ ನಿರ್ಗತಿಕ ಸ್ಥಿತಿಗೆ ತಲುಪಿಬಿಡುತ್ತಾರೆ. ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದ ಮುಸ್ಲಿಂ ಸಮುದಾಯದ 3 ತಿಂಗಳು ತುಂಬಿದ ಗರ್ಭಿಣಿಯೊಬ್ಬರು, ಮತ್ತೊಂದು ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದೇ ಆದಲ್ಲಿ ಪತಿಯು ತನ್ನನ್ನೂ, ಮಕ್ಕಳನ್ನೂ ತೊರೆಯಲಿದ್ದಾನೆ ಎಂಬ ದುಃಖ ತೋಡಿಕೊಂಡಿರುವುದು ನಿಜಕ್ಕೂ ವಿಷಾದನೀಯ. ವಾಸ್ತವವಾಗಿ ಇಂಥದೊಂದು ವ್ಯವಸ್ಥೆ ಇರಲೇಬೇಕು ಎಂದಾದಲ್ಲಿ, ಮಕ್ಕಳು ಮತ್ತು ಕುಟುಂಬದ ಹೊಣೆಹೊರದ, ನಿಗಾ ನೋಡದ ಗಂಡನಿಗೆ ಇಂಥದೊಂದು ವಿಚ್ಛೇದನ ನೀಡುವ ಹಕ್ಕು ಮಹಿಳೆಯರಿಗೇ ಇರಬೇಕು. ಆದ್ದರಿಂದ, ಕಟ್ಟಾ ಸಂಪ್ರದಾಯವು ನಾಶಕ್ಕೆ ಕಾರಣವಾಗುವಂತಾಗುವುದನ್ನು ತಡೆಯಲು, ಕೆಲವೊಂದು ಅಂಗೀಕೃತ ಮಿತಿಗಳನ್ನಾಧರಿಸಿದ ನ್ಯಾಯಸಮ್ಮತ ವ್ಯಾಖ್ಯಾನ ಅಥವಾ ಅರ್ಥನಿರೂಪಣೆಯ ಅಗತ್ಯವಿಂದು ಹಿಂದೆಂದಿಗಿಂತ ಹೆಚ್ಚಿದೆ.

ಉದಾಹರಣೆಗೆ, ಮೊಹಮ್ಮದ್ ಅಹ್ಮದ್ ಖಾನ್ ವರ್ಸಸ್ ಶಾ ಬಾನೋ ಬೇಗಂ ಪ್ರಕರಣದಲ್ಲಿ ಸುಪ್ರೀಂಕೋರ್ಟ್, ಕಾನೂನಿನ ನೀತಿಸೂತ್ರ ಮತ್ತು ನೈತಿಕತೆಯನ್ನು ಧರ್ಮದೊಂದಿಗೆ ತಳುಕುಹಾಕಲಾಗದು ಎಂದು ತೀರ್ಪನೀಡಿತು. ದಂಡ ಪ್ರಕ್ರಿಯಾ ಸಂಹಿತೆಯ ಕಲಂ 125ರ ಅನುಸಾರ, ಸಾಕಷ್ಟು ಆದಾಯವನ್ನು ಹೊಂದಿರುವ ಪತಿಯು, ಪತ್ನಿಯ ಪೋಷಣೆಯನ್ನು ನಿರ್ಲಕ್ಷಿಸಿದರೆ ಆಕೆಗೆ ಜೀವನಾಂಶ ನೀಡುವಂತೆ ಆದೇಶಿಸಲು ಅವಕಾಶವಿದೆ. ಈ ಕಲಂ ಅನ್ನು ಅನ್ವಯಿಸಲು, ಸಾಕಷ್ಟು ಆದಾಯವಿರುವ ವ್ಯಕ್ತಿಯು ಪತ್ನಿಯನ್ನು ಪಾಲಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾನೆಯೇ ಎಂಬುದೇ ಮಾನದಂಡ. ಇದು ಧರ್ಮದ ಎಲ್ಲ ಎಲ್ಲೆಗಳನ್ನೂ ಮೀರಿ ಅನ್ವಯವಾಗುತ್ತದೆ.

ಇದೇ ಪ್ರಕರಣದಲ್ಲಿ ಸಂವಿಧಾನದ 44ನೇ ವಿಧಿಯನ್ನು ಗಮನಕ್ಕೆ ತೆಗೆದುಕೊಂಡ ಸುಪ್ರೀಂಕೋರ್ಟ್ (ಭಾರತದಾದ್ಯಂತದ ನಾಗರಿಕರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಭದ್ರತೆ ಒದಗಿಸಲು ಸರ್ಕಾರ ಪ್ರಯತ್ನಿಸಬೇಕು ಎಂದು 44ನೇ ವಿಧಿ ಹೇಳುತ್ತದೆ), ಏಕರೂಪದ ನಾಗರಿಕ ಸಂಹಿತೆಯು, ಪರಸ್ಪರ ಸಂಘರ್ಷಿಸುವ ಸಿದ್ಧಾಂತಗಳನ್ನು ನಿವಾರಿಸುವ ಮೂಲಕ ರಾಷ್ಟ್ರೀಯ ಏಕತೆಯನ್ನು ಸಾಧಿಸಲು ನೆರವಾಗುವುದು ಎಂದಿದ್ದರ ಜತೆಗೆ, ರಾಷ್ಟ್ರದ ನಾಗರಿಕರಿಗಾಗಿ ಇಂಥದೊಂದು ಸಂಹಿತೆಯನ್ನು ಜಾರಿಗೆ ತರುವ ಕರ್ತವ್ಯ ಸರ್ಕಾರದ ಮೇಲಿದೆ ಮತ್ತು ಹಾಗೆ ಮಾಡಲು ಅದಕ್ಕೆ ಶಾಸನಬದ್ಧ ಸಾಮರ್ಥ್ಯದೆ ಎಂದೂ ಹೇಳಿತು.

ಅದೇನೇ ಇರಲಿ, ಶಾಸನಬದ್ಧ ಸಾಮರ್ಥ್ಯ ಒಂದು ವಿಚಾರವಾದರೆ, ಆ ಸಾಮರ್ಥ್ಯನ್ನು ಬಳಸುವ ರಾಜಕೀಯ ಧೈರ್ಯ ಬೇರೆಯೇ ವಿಚಾರ. ವಾಸ್ತವವಾಗಿ, ಪಾಕಿಸ್ತಾನದಲ್ಲಿ ಕೂಡಾ ಸಕಾರಣವಿಲ್ಲದೆ ಮಹಿಳೆಯರಿಗೆ ವಿಚ್ಛೇದನ ನೀಡುವಂತಿಲ್ಲ ಅಥವಾ ಮಹಿಳೆಯರನ್ನು ಸೂರಿಲ್ಲದಂತೆ ಮಾಡಿ ಅವರನ್ನು ಮತ್ತು ಮಕ್ಕಳನ್ನು ಪೋಷಣೆಗೆ ಯಾವುದೇ ಆದಾಯವಿಲ್ಲದ ಸ್ಥಿತಿಯಲ್ಲಿ ರಸ್ತೆಗಳಲ್ಲಿ ಬಿಟ್ಟುಬಿಡುವಂತಿಲ್ಲ. ಆದ್ದರಿಂದ ಭಾರತದಲ್ಲಿನ ಧಾರ್ವಿುಕ ಮತ್ತು ವೈಯಕ್ತಿಕ ಕಾನೂನು ವಿಕಾಸದ ಸಾಮರ್ಥ್ಯನ್ನು ಹೊಂದಿದೆಯೇ ಎಂಬುದು ಪ್ರಶ್ನೆ.

ಗಾಂಧೀಜಿಯವರ ಮಾತುಗಳಲ್ಲೇ ಹೇಳುವುದಾದರೆ, ಧರ್ಮವು ನಮ್ಮ ಎಲ್ಲ ಕೆಲಸಗಳ ವಿಧಾನ ಮತ್ತು ಮಾಧ್ಯಮವಾಗಬೇಕು. ಆದರೆ ಗಾಂಧೀಜಿಯವರು ಉಲ್ಲೇಖಿಸಿದ ಧರ್ಮವು ಉಗ್ರವಾದಿ ಸಿದ್ಧಾಂತಕ್ಕಿಂತ ವಿಶಿಷ್ಟವಾದದ್ದು. ಈ ವಿಶಿಷ್ಟ ಧರ್ಮವು, ದಿಕ್ಕು ತಪ್ಪಿಸುವ ವಿಧಾನಗಳು, ಹಿಂಸೆ, ಮೂಢನಂಬಿಕೆಗಳು ಮತ್ತು ತಾರತಮ್ಯದಿಂದ ಸ್ವತಃ ದೂರ ಇರುವಂತಹುದು. ಏಕರೂಪದ ನಾಗರಿಕ ಸಂಹಿತೆಯ ಸಂದರ್ಭದಲ್ಲಿ, ಹಿಂದುಗಳಿಗೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳನ್ನು ಏಕರೂಪವಾಗಿ ದೇಶಾದ್ಯಂತ ಹೇರಬೇಕೆ ಎಂಬುದು ವಾದವಲ್ಲ. ಸರಳವಾಗಿ ಹೇಳಬೇಕೆಂದರೆ ವಾದ ಇಷ್ಟೇ- ಎಲ್ಲ ಧರ್ಮಗಳ ಹಕ್ಕುಗಳು ಮತ್ತು ಖಾತರಿಗಳ ಸಾಮಾನ್ಯ ಕನಿಷ್ಠ ಮಿತಿಗಳನ್ನು ಶುದ್ಧೀಕರಿಸಿ, ಶಾಸನಬದ್ಧವಾಗಿ ಶಿಫಾರಸುಮಾಡಿ, ಧರ್ವತೀತವಾಗಿ ಪ್ರತಿಯೊಬ್ಬನೂ ಪಾಲಿಸುವಂತೆ ಮಾಡಬೇಕು.

Leave a Reply

Your email address will not be published. Required fields are marked *

Back To Top