Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ವೈಭವೀಕರಣ ಪರ್ವದ ನಾನಾ ಕಾರಣ

Tuesday, 07.11.2017, 3:03 AM       No Comments

| ಡಾ. ಕೆ. ಎಸ್​. ನಾರಾಯಣಚಾರ್ಯ

ದೇಶದ ಅಭಿವೃದ್ಧಿ ವಿಷಯ ಬಂದಾಗ ರಾಜಕೀಯ ಗೌಣವಾಗಬೇಕು. ಆರ್ಥಿಕತೆ, ವಿಜ್ಞಾನ-ತಂತ್ರಜ್ಞಾನ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿ ಮುಂದಡಿ ಇಡುವಾಗ ರಾಜಕೀಯ ಒಮ್ಮತ ಏರ್ಪಡಬೇಕೆ ಹೊರತು ವಿರೋಧಕ್ಕಾಗಿ ವಿರೋಧ ಎಂಬ ಧೋರಣೆ ಸಲ್ಲದು. ಎಲ್ಲ ವಿಷಯಗಳಲ್ಲೂ ರಾಜಕಾರಣ ನುಸುಳಿ ಬಂದರೆ ಅದರ ಪರಿಣಾಮ ಘೋರ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.

 

ಪ್ರತಿಯೊಬ್ಬ ರಾಜಕಾರಣಿಯೂ ತಾನು ಧೂರ್ತನಲ್ಲವೆಂದೂ ತನ್ನ ಎದುರಾಳಿಯೇ ಆ ನಮೂದಿಗೆ ಅರ್ಹನೆಂದೂ ವಾದಿಸುತ್ತ ಕೆಸರಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ‘ಧೂರ್ತ’ ಎಂದರೆ ಯಾರು? ಎಂದು ಸ್ಪಷ್ಟವಾಗಿ ತಿಳಿಯಲೇ ಬೇಕಾದ ತುರ್ತು ಅವಶ್ಯಕತೆ ಇದೆ. ಶಬ್ದಾರ್ಥ ತಿಳಿದವರ ಮಾತನ್ನು ತಿಳಿಭಾಷೆಯಲ್ಲಿ ಹೇಳುವ ಯತ್ನ ಮಾಡುತ್ತೇನೆ. ಹಲವರಿಗೆ ಒಪ್ಪಿಗೆಯಾಗುವ ಬಗ್ಗೆ ಅನುಮಾನವಿದ್ದು, ಹೇಳಲೇ ಬೇಕಾಗಿದೆ. ಅನುಮಾನ ಯಾವಾಗ ಯಾವ ವಿಷಯದಲ್ಲಿ ಸ್ವಾರ್ಥಿಗಳಿಗೆ ಇಲ್ಲ? ಬಿಡಿ.

ಒಬ್ಬನು ಶತಮೊಂಡ ಎನ್ನಿ, ಮೂರ್ಖ ಎನ್ನಿ. ತನಗೆ ತೋಚಿದ್ದನ್ನೇ ಮಾಡುವ ಹಠಮಾರಿ ಎನ್ನಿ. ಸರ್ವಾಧಿಕಾರಿಯಂತೆ ವರ್ತಿಸುವವನು ಎನ್ನಿ. ನ್ಯಾಯ, ಸತ್ಯ, ಧರ್ಮ, ನಿಯಮಗಳಿಗೆ ಏನೂ ಬೆಲೆ ಕೊಡದ ‘ಉದ್ದಂಡ’ (ಉತ್+ದಂಡ Above law, above examination, exempt from punishment)ಎನ್ನಿ, ಏನೂ ಓದದೆ, ಚಿಂತಿಸದೆ, ಪರಿಶೀಲಿಸದೆ, ತಜ್ಞರೊಡನೆ ಪರ್ಯಾಲೋಚಿಸದೆ, ಮನಸ್ಸಿಗೆ ಬಂದಂತೆ, ಬೇಕಾದವರಿಗೆ ಅನುಗ್ರಹಿಸುವ, ಬೇಡವಾದವರಿಗೆ ಹಿಂಸಿಸುವ ಕಾನೂನುಗಳನ್ನು ಜಾರಿಗೊಳಿಸುವ ಹಿಂಸಾಪ್ರಿಯ, ಸ್ಯಾಡಿಸ್ಟ್, ಹಿಂಸಾವಿಹಾರಿ ಎನ್ನಿ. ಇಂಥ ಅನೇಕ ದುರ್ಗಣ ಸಂಪನ್ನನೆನ್ನಿ. ಅದು ಧೂರ್ತತನದ ಒಂದು ಚಿತ್ರ ಕೊಡುತ್ತದೆ.

ಇದು ವಿಶ್ವವ್ಯಾಪೀ, ಸಾರ್ವಕಾಲಿಕ ಭಯಂಕರತೆಯ ಮೂರ್ತ ಸ್ವರೂಪ ಎಂಬುದನ್ನು ಇತಿಹಾಸ ನಿದರ್ಶನ ಮಾಡುತ್ತದೆ. ರೋಮ್ ನಗರ ಹೊತ್ತಿ ಉರಿಯುತ್ತಿದ್ದಾಗ ಚಕ್ರವರ್ತಿ ನೀರೋ ಪಿಟೀಲು ನುಡಿಸುತ್ತ ಸಂತೋಷ ಪಡುತ್ತಿದ್ದನಂತೆ. ಇಕ್ಷ್ವಾಕು ಕುಲದ ದೊರೆಯ ಮಗ ಅಸಮಂಜನು, ಬೀದಿಯಲ್ಲಿ ಆಡುವ ಮಕ್ಕಳನ್ನು ಹಿಡಿದು ನೀರಲ್ಲಿ ಮುಳುಗಿಸಿ ಆನಂದ ಪಡುತ್ತಿದ್ದನಂತೆ. ಹಿಟ್ಲರಿನ ಬಗೆಗೆ ಕೇಳಿಯೇ ಇದ್ದೀರಿ. ಸ್ಟಾಲಿನ್-ಬಾಲ್ಯದಲ್ಲಿ ಮುಸುರೆ ತಿಕ್ಕವಳ ಮಗನಾಗಿ, ಗೂಢ ಹೃದಯದ, ಬಾಯಿ ತೆರೆಯದ ಭಯಂಕರನನ್ನು ಯಾವ ಶಾಲೆಯೂ ಸೇರಿಸಿಕೊಳ್ಳದೆ, ಒಂದು ಕ್ರೖೆಸ್ತ ಸೆಮಿನರಿಯಲ್ಲಿ ಸೇರಿ ಹಲವು ವರ್ಷ, ಕ್ರೖೆಸ್ತ ಧರ್ಮವನ್ನು ಅಧ್ಯಯನ ಮಾಡಿ, ಕ್ರಮೇಣ ರಷ್ಯಾ ಸರ್ವಾಧಿಕಾರಿಯಾಗಿ (Collective farming) ಮುಂತಾದ ವ್ಯವಹಾರ ದೂರದ, ಅಸಾಧ್ಯ ಸುಧಾರಣೆ ಮಾಡಲು ಹೋಗಿ ಕೋಟಿ ಕೋಟಿ ರೈತರನ್ನು ಕೊಂದದ್ದು ಇತಿಹಾಸ.

ಬುದ್ಧ, ಬಸವ, ಗಾಂಧಿ, ಲೆನಿನ್, ಸ್ಟಾಲಿನ್ ಎಂಬ ಸಮೀಕರಣ ಮಾಡುವ ತಿಳಿಗೇಡಿಗಳು ಯೋಚಿಸಬೇಕು-ಇಲ್ಲಿ ಬುದ್ಧ ಬಸವಾದಿಗಳು ಈ ಶ್ರೇಣಿಗೆ ಸೇರಲು ಯಾವ ಧೂರ್ತಕಾರ್ಯ ಮಾಡಿದ್ದರು? ಎಲ್ಲ ಸೋಷಲಿಸ್ಟರೂ ಧೂರ್ತರಲ್ಲ. ಜಯಪ್ರಕಾಶರೋ? ಮಧು ದಂಡವತೆ? ಲೋಹಿಯಾ?-ಇವರ ವಿಚಾರಗಳನ್ನು ನೀವು ಒಪ್ಪದೆ ಇರಬಹುದು. ಇವರು ನಿಜ ವಿಚಾರವಾದಿಗಳು. ಢೋಂಗಿಗಳಲ್ಲ. ಹಿಂಸಾಪ್ರಿಯರೋ, ಪ್ರಚಾರಕರೋ ಅಲ್ಲ. ಬುದ್ಧ ಒಂದು ವಿಚಾರ ಪ್ರವಾಹವನ್ನೇ ಹರಿಯಬಿಟ್ಟ. ಹಿಂಸಾಪ್ರಿಯನಿರಲಿಲ್ಲ. ಬಸವಣ್ಣ ಸುಧಾರಕರಾಗಿದ್ದರು. ರಕ್ತಕ್ರಾಂತಿಗೂ ಅವರಿಗೂ ಯಾವ ಸಂಬಂಧವೂ ಇರಲಿಲ್ಲ. ಕೆಟ್ಟ ಸಮೀಕರಣಗಳನ್ನು ಮಾಡಿ, ಸುದ್ದಿಯಲ್ಲಿ ತೇಲಿ ಬಿಡುವವರು ತಿಳಿಗೇಡಿಗಳು, ಮೂಢರು, ಒಂದು ಬಗೆಯ ಧೂರ್ತರೆಂದರೆ ತಪ್ಪಾದೀತೆ? ವಿಷಯ ಧೂರ್ತತನ, ಅಧಿಕಾರ ಧೂರ್ತತನ ಇತರರ ಮೇಲೆ ತಮ್ಮ ಪ್ರಣಾಳಿಗಳನ್ನು ಬಲಾತ್ಕಾರವಾಗಿ ಹೇರಲು ಚಳವಳಿ, ರಾಜಶಕ್ತಿಯ ದುರ್ಬಳಕೆ, ಓಲೈಕೆ ಮಾಡುವ, ಪತ್ರಕರ್ತರೂ, ಖ್ಯಾತ ಸಂಶೋಧಕರೂ, ದೊಂಬಿ ಎಬ್ಬಿಸುವ, ಧೂಳು ಎಬ್ಬಿಸುವ, ದಾಂಧಲೆ ಹಾಕುವ, ದುಸ್ಸಂಘಟಕರೂ-ಎಲ್ಲರೂ ಈ ‘ಧೂರ್ತ’ ಶಬ್ದದ ವ್ಯಾಪ್ತಿಯಲ್ಲೇ ಬರುತ್ತಾರೆಂದರೆ ಅಚ್ಚರಿಯೇ?

ಶಾಂತ, ಸಮೃದ್ಧ, ವಿಕಾಸದತ್ತ ದಾಪುಗಾಲು ಹಾಕಿ, ವಿಜ್ಞಾನ, ಖಗೋಳ, ಅಧ್ಯಾತ್ಮ, ರಾಜ್ಯಶಾಸ್ತ್ರ, ವಾಸ್ತುಶಿಲ್ಪ, ಅರ್ಥಶಾಸ್ತ್ರ, ಆಡಳಿತ ವಿಜ್ಞಾನಾದಿಗಳಲ್ಲಿ ಮುನ್ನಡೆದಿದ್ದ ಭಾರತಕ್ಕೆ ಲಗ್ಗೆಯಿಟ್ಟ ಅಲೆಕ್ಸಾಂಡರ್ ಒಬ್ಬ ಮಹಾಧೂರ್ತ. ಆನಂತರದ ಎಲ್ಲ ಆಕ್ರಮಣಕಾರರು ಸಹ. ಘಸ್ನಿ, ಘೋರಿ, ತುಘಲಖ್, ಖಿಲ್ಜಿ, ಮೊಘಲರು, ಈಸ್ಟ್ ಇಂಡಿಯಾ ಕಂಪನಿಯ ರಕ್ಕಸರು ಎಲ್ಲಾ ಧೂರ್ತರೇ! ಹಲವರಿಗೆ ರುಜು ಮಾಡುವುದೂ ಬರುತ್ತಿರಲಿಲ್ಲ! ಅಕ್ಬರ್! ಔರಂಗಝೇಬನನ್ನು ಕುರಿತು ಆಂಗ್ಲ ನಾಟಕಕಾರ ಡ್ರೖೆಡನ್ ನಾಟಕವನ್ನೇ ಬರೆದು ಪ್ರಸಿದ್ಧಿಸಿದ(ನನಗೆ ಪಠ್ಯ ಆಗಿತ್ತು ಎಂಎ ಓದುವಾಗ). ಜ್ಞಾನಪೀಠ ಪಡೆದ ನಾಟಕಕಾರ ತುಘಲಖನನ್ನು ವೈಭವೀಕರಿಸಿದರು. ಈಗ ಟಿಪು್ಪ ವೈಭವೀಕರಣದ ಪರ್ವ! ಚರಿತ್ರೆಯನ್ನು ಮರೆಮಾಚಿ, (ಕೈಲಾಸಂ ಭಾಷೆಯಲ್ಲಿ) Touch ಮಾಡಿ ಮಾಡಿ Untouchable ಮಾಡಿಟ್ಟ ಮಹಾಪರ್ವ.

ಜೀವ ಉಳಿಸಿಕೊಳ್ಳಲು, ಆಗ ಮತಾಂಧತೆಗೂ ವಿದಾಯ ಹೇಳಿ, ಹಿಂದೂ ಮಠಗಳಲ್ಲಿ, ದೇವಾಲಯಗಳಲ್ಲೂ ಅಡಗಿಕೊಂಡು, ಜೀವಗಳ್ಳರಾಗಿ ಬಂದು, ಆಮೇಲೆ ‘ಕೃತಜ್ಞತೆ’ಗಾಗಿ ಮಠಕ್ಕೆ, ದೇವಾಲಯಕ್ಕೆ ದೇಣಿಗೆ ನೀಡಿದರೆ, ಇತಿಹಾಸತಜ್ಞರು ದೇಣಿಗೆಯನ್ನು ನೆನೆದು ವೈಭವೀಕರಿಸುತ್ತಾರೆ. ಧೂರ್ತರಿಗೆ ಆಶ್ರಯಕೊಟ್ಟ ಧೂರ್ತ ಮಠಪತಿಗಳನ್ನೂ, ದೇವಾಲಯ ಅಧಿಕಾರಿಗಳನ್ನೂ ಮೆರೆಸುತ್ತಾರೆ. Selective historical interpretation! ಇದು ಜೆಎನ್​ಯುು ರೀತಿ! ಧೂರ್ತರಿಗೆ ಸಹಾಯ ಮಾಡುವವನು ಧೂರ್ತನಾಗಲಾರನೇ ಯೋಚಿಸಿ?! ಶಿವಾಜಿ ಮಹಾರಾಜನೂ ಆಗಾಗ ಅಡಗುತ್ತಿದ್ದ ಒಂದೆರಡು ತಾಣಗಳನ್ನು- ನೆಲದೊಳಗೆ ಕೋಣೆಗಳನ್ನು-ನಾನು ನೋಡಿದ್ದೇನೆ ಉತ್ತರ ಕರ್ನಾಟಕದಲ್ಲಿ. ಶಿವಾಜಿ ಮಸೀದಿಯಲ್ಲಿ ಎಂದೂ ಆಶ್ರಯ ಪಡೆಯಲಿಲ್ಲ. ನೀವು ಚಿಂತಿಸಬೇಕು.

ಪ್ರಕೃತಕ್ಕೆ ಬರೋಣ. ಔರಂಗಜೇಬನ ನಂತರ ಅಧಿಕಾರ ಹಿಡಿದವರು ಬ್ರಿಟಿಷ್ ಧೂರ್ತರು. ಅವರ ವಿರುದ್ಧ ಹೋರಾಡಿದವರು ಧೂರ್ತರೇ? ರಾಣಿ ಝಾನ್ಸಿ ಲಕ್ಷ್ಮಿಬಾಯಿ? ರಾಣಿ ಚೆನ್ನಮ್ಮ? ಬೆಳವಡಿ ಮಲ್ಲಮ್ಮ? ಮದಕರಿ ನಾಯಕ? ಟಿಪು್ಪ ವಿರುದ್ಧ ಹೋರಾಡಿದ ರಾಣಿ ಲಕ್ಷ್ಮಮಣ್ಣಿ ದೇವಿ? ಹೋರಾಟ ಯಾವುದಕ್ಕೆ? ಭಾರತ ದಾಸ್ಯ ಬಿಡುಗಡೆಗೋ? ಸ್ವಾರ್ಥಕ್ಕೋ? ಸಾರಾಸಗಟಾಗಿ ದೇಶಪ್ರೇಮಿ ಹೋರಾಟಗಾರರೊಡನೆ ಟಿಪು್ಪವನ್ನು ಸೇರಿಸಿದರೆ, ನಿಮ್ಮ ಮಿದುಳು ಖಾಲಿಯಾಗಿದೆ ಎನ್ನಬೇಕಾಗುತ್ತದೆ. ಇಬ್ಬರು ಒಂದೇ ಜೈಲಿನಲ್ಲಿದ್ದ ಒಂದು ಕಥೆ ಇದೆ. ಒಬ್ಬನಿಗೆ ಹತ್ತು ವರ್ಷ ಜೈಲು ಶಿಕ್ಷೆಯಾಗಿತ್ತು, ಇನ್ನೊಬ್ಬನಿಗೆ ಎರಡು ವರ್ಷ. ಮೊದಲನೆಯವನು ಕೊಲೆಗಾರ. ಎರಡನೆಯವನು ಸ್ವಾತಂತ್ರ್ಯ ಹೋರಾಟಗಾರ. ‘ನಿನಗೆಷ್ಟು ಟಮ್ರ್ ನನಗೆಷ್ಟು?’ ಅವರವರೇ ಮಾತಾಡಿಕೊಂಡಾಗ ಮಾನದಂಡ ಬೇರೆಯಾಯಿತೆ? ಒಂದೆಯೇ? Term ಇರಬಹುದು ಮಾರಾಯರೇ? ಯಾವ ಅಪರಾಧಕ್ಕಾಗಿ? ಯೋಚಿಸಬೇಡವೇ? ಬ್ರಿಟಿಷರು ತೊಲಗಿದ ನಂತರ ಕಾಂಗ್ರೆಸ್ ಆಡಳಿತಕ್ಕೆ ಬನ್ನಿ. ಚೀನಾದೊಡನೆ ಸೋಲಿಗೆ ಯಾರ ಆದೇಶ ಕಾರಣವಾಯಿತು ಸ್ವಾಮಿ! ಎನ್.ಜಿ.ಖರೆಯವರ The Angry Aristocrat ಎಂಬ ಲೇಖನ(70 th birthday volume) ಓದಿ. ಇಂದಿರಾ ಪ್ರಕಟವಾಗಿಯೇ ಸರ್ವಾಧಿಕಾರಿಯಾದರು. ತುರ್ತಸ್ಥಿತಿ ನೆನೆಯಿರಿ. ಆ ಸರ್ವಾಧಿಕಾರಕ್ಕೆ ಅಂದಿನ ಆಡಳಿತ ಪಕ್ಷ ನೇರವಾಗಿ, ಏಣಿಯೂ ಆಗಿ, ರುಜುವನ್ನೂ ಹಾಕಿರಬಹುದು. ಆ ಮಾತ್ರದಿಂದ ಇದು ಪ್ರಜಾಪ್ರಭುತ್ವದ ಪರಿಣಾಮವೋ, ಆದಕ್ಕೆ ಸಮ್ಮತವಾದದ್ದೋ ಆಗಲಾರದು. (‘ನನ್ನ ಮಂತ್ರಿಮಂಡಳದಲ್ಲಿ ನಾನೊಬ್ಬಳೇ ಗಂಡು’ ಎಂದು ಹೇಳುತ್ತಿದುದು ಯಾವುದರ ಸಾಕ್ಷಿ? ಇತರರು ‘ಹೆಣ್ಣು’ ಎಂಬುದು ಧೂರ್ತತನವಲ್ಲವೇ?)

ರಾಜೀವ ಗಾಂಧಿಯವರ ಶ್ರೀಲಂಕಾ ಧೋರಣೆಯನ್ನೇ ನೋಡಿ. ಯಾರ ಸಲಹೆಯೋ? ಲಂಕೆಯಲ್ಲಿ ಎಲ್​ಟಿಟಿಇ ಉಪಟಳ ನಿಲ್ಲಿಸಿ, ಲಂಕಾ ಸರ್ಕಾರ, ಪ್ರಜೆಗಳನ್ನು ರಕ್ಷಿಸಲು IPKF ಎಂಬ ಸೇನೆ ಕಳುಹಿಸಿದರು. Indian Peace Keeping Force ಎಂಬುದು ಈ ಅರಟುಬೇಟೆಯ ವಿಸ್ತರ ಭಾಗ. ಅದು Indian People Killing Force ಜನರ ಕೊಲೆಯ ಅನುಮೋದನೆಯಾಗಿ ಲಂಕಾ ಅಧಿಕಾರರೂಢರಿಂದ ಅಪಹಾಸ್ಯಕ್ಕೊಳಗಾದುದು ರಾಜೀವರ ಇಬ್ಬಗೆಯ ನೀತಿಯಿಂದ. ಇತ್ತ ಎಲ್​ಟಿಟಿಇಗೆ (ಡಿಎಂಕೆ ತೃಪ್ತಿಗಾಗಿ) ಒಳಗೊಳಗೇ ಅಸ್ತ್ರ, ಶಸ್ತ್ರ ಸರಬರಾಜನ್ನು ಮಾಡಿ ಅತ್ತ ಅಧ್ಯಕ್ಷ ಜಯವರ್ಧನೆಯವರೊಡನೆ ಶಾಂತಿಯ ಮಾತನ್ನು ಆಡುತ್ತ, ಪ್ರಭಾಕರನೆಂಬ ದುರುಳ ಕೊಲೆಗಾರನಿಗೆ ಸಹಾಯ ಮಾಡಿದವರು ಧೂರ್ತರೋ? ದಕ್ಷರೋ? ಸಾತ್ವಿಕರೋ? ಯೋಚಿಸಬೇಕಾದದ್ದೇ!?

ಸೋನಿಯಾ ಪರ್ವದಲ್ಲಿಯೇ ರೇನ್​ಕೋಟು ಹಾಕಿಕೊಂಡು ಸ್ನಾನ ಮಾಡಿದವರು, ಅಯ್ಯೋ ಪಾಪ! ಬಲಿಪಶು ಅಷ್ಟೇ! ಧೂರ್ತತನಕ್ಕೆ ಹಲವಾರು ಹಗರಣಗಳೇ ಸಾಕ್ಷಿ! ವಾದ್ರಾ ಸಾಹೇಬರೋ? ರಾಹುಲರಿಗೆ? ಶೌಚಗೃಹ, ಗಂಡಸರದ್ದೋ, ಹೆಂಗಸರದ್ದೋ? ಎಂದು ತಿಳಿಯಲೂ ಒಂದಷ್ಟು ಬುದ್ಧಿ ಬೇಕು. ಬುದ್ಧಿಯ ಅತಿಪ್ರವೃತ್ತಿಯೇ ಧೂರ್ತತನ! ಬುದ್ಧಿ ಇದ್ದವರಿಗೆ ಈ ಪ್ರಶ್ನೆ. ಕಾಣುತ್ತಿರುವ ಸಂಗತಿಗೆ ಕನ್ನಡಿ ಬೇಕಿಲ್ಲ. ಜಯಲಲಿತಾ, ಲಾಲು, ಮುಲಾಯಂ ಮುಂತಾದವರ ಧೂರ್ತತನ ನೋಡಿದ್ದೀರಿ. ಕೇರಳ, ಬಂಗಾಳದಲ್ಲೂ ಸಹ. ಒಬ್ಬ ಖ್ಯಾತ ಕಾದಂಬರಿಕಾರರು, ಮಹಾಭಾರತದ ವಿಕೃತೀಕರಣ ಯತ್ನದಲ್ಲಿ ‘ಬಕಾಸುರ ಎಂಬುದು ಒಂದು ಗುಂಪಿನ ಹೆಸರು, ಒಬ್ಬನ ಕೆಲಸ ಅದಲ್ಲ’ ಎಂಬರ್ಥದಲ್ಲಿ ವಿವರಣೆಯಿತ್ತು, ಬರೆದರು. ಅದು ತಿರುಚೇ ಆಗಲಿ, ಅದರ ಆಚರಣೆಗೆ ಕರ್ನಾಟಕದಲ್ಲೇ ಸಾಕ್ಷಿ ಕಾಣುತ್ತಿದ್ದೀರಿ! ‘ಎಲ್ಲ ಬಕಾಯ ಸ್ವಾಹಾ’-ಮರಳು, ಮಣ್ಣು, ಕಲ್ಲಿದ್ದಲು, ಸಾವಿರ ರೂ. ನೋಟುಗಳು, ಐನೂರವು, ಭೂಮಿ, ನಾನಾ ಬಗೆಯ ಆಸ್ತಿ, ಅರಣ್ಯ ಸಂಪತ್ತು, ಖನಿಜ-ಎಲ್ಲ ‘ಬಕಾಯ ಸ್ವಾಹಾ’!

ಮೊದಲಿನ ಬಕಾಸುರ ಇದನ್ನೆಲ್ಲ ಮಾಡಲಿಲ್ಲ. ವ್ಯಾಸರು ಬರೆಯಲಿಲ್ಲ! ಎರವಲು ಬುದ್ಧಿಯ ತಿರುಚು ಬರೆಹಗಾರರು, ಬುದ್ಧಿಜೀವಿಗಳು-ಈ ‘ಅಸುರ’ರೆಂಬವರನ್ನೆಲ್ಲ ಭಾರತ ಮೂಲನಿವಾಸಿಗಳೆಂದೂ, ಇವರು ಉತ್ತಮ ಆಡಳಿತಗಾರರೆಂದೂ, ಜನಪ್ರಿಯರೆಂದೂ, ಸಮಾಜಮುಖಿಗಳೆಂದೂ, ಕೊಂಡಾಡಿ ಪೂಜಿಸುವುದನ್ನು ಆರಂಭಿಸಿದ್ದಾರೆ. ಈ ದಾರಿಯಲ್ಲೇ ‘ಟಿಪು್ಪ’ ಜಯಂತಿಯೂ ನಡೆದಿರುವಂತೆ ಇದೆ. ‘ಮಹಾಪುರುಷ’ರನ್ನು ಕೊಂಡಾಡುವ ಉದ್ದೇಶ ಎಂಬುದು ಸರ್ಕಾರದ ಸಮರ್ಥನೆ. ಅಲ್ಲಿಗೆ ಶ್ರೀರಾಮ, ಶ್ರೀಕೃಷ್ಣರು ಮಹಾಪುರುಷರಲ್ಲ! ಏಕೆ? ಇವರು ವೋಟು ತರುವುದಿಲ್ಲ! ಅರ್ಥಾತ್ ವೋಟು ತರುವವರೆಲ್ಲ ಮಹಾಪುರುಷರು! ಇದು ಧೂರ್ತವ್ಯಾಖ್ಯಾನವೋ? ಅಲ್ಲವೋ? ಪುರೋಹಿತಶಾಹಿಗಳಲ್ಲದ ‘ಸಿಡಿಮಿಡಿ’ ಸ್ವಾಮಿಗಳು ಹೇಳಬೇಕು. ಅವರು ತಲೆಯಾಡಿಸುತ್ತಾರೆ. ಪ್ರಕಟವಾಗಿ ಮಾತಾಡುವುದಿಲ್ಲ. ಅಸುರರೇ ಮೂಲನಿವಾಸಿಗಳೆಂಬುದು ‘ಚೇತೋಹಾರಿ ವ್ಯಾಖ್ಯಾನವೇ’? ಚೇತೋಹಾರಿ-ಮನಸ್ಸನ್ನು ಅಪಹರಿಸಿರುವುದು, ಪ್ರಾಣವನ್ನೂ ಅಪಹರಿಸೀತು. ಹಾಗಾದರೆ, ಓಲೈಕೆಯ, ವೋಟುಬಲದ ಸರ್ಕಾರ? ಅಲ್ಲವೋ? ‘ಛೆ, ಛೆ! ಹಂಗೆಲ್ಲ ಕೇಳಬಾರದು’. ಇದು ಪುರೋಹಿತಶಾಹಿಯ ಕುಹಕ ಕುತರ್ಕ! ಇಷ್ಟಬಂದದ್ದನ್ನೇ ಮಾಡಿ, ಜನರ ತಲೆಯ ಮೇಲೆ ಹೇರಿಸಿ ‘ಧೂರ್ತತನ’ ಎಂದು ನಾನು ವಿವರಿಸಿದ ಮೇಲೂ, ‘ಇದು ಅಸುರಮೂಲದ್ದೋ, ಸುರಮೂಲದ್ದೋ’ ಎಂದು ಕೇಳುವಿರಾದರೆ, ಬಲಿ ಚಕ್ರವರ್ತಿ ಕಾಲದ, ಅಲ್ಲಿ ಸಮುದ್ರಮಥನ ಕಥೆಯ ಅಂತರಾರ್ಥಕ್ಕೆ ಹೋಗಬೇಕಾಗುತ್ತದೆ! ಅಮೃತ ಯಾರಿಗೆ? ಮೃತ್ಯುರೂಪ ಸುರೆ ಯಾರಿಗೆ? ವೋಟು ಯಾರಿಗೆ? ಏಟು ಯಾರಿಗೆ? ಯಾರನ್ನು ಕೇಳೋಣ? ಮಹಿಷಾಸುರ! ನೀನಾದರೂ ಹೇಳು! ನೀನು ಮೂಲಪುರುಷನೋ, ವಲಸಿಗನೋ, ಆಮೇಲೆ ನೋಡೋಣ.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top