Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ವೃದ್ಧಾಪ್ಯದ ತಲ್ಲಣಗಳಿಗೆ ಕುಟುಂಬ ಸಾಂಗತ್ಯವೇ ಮದ್ದು

Saturday, 25.02.2017, 8:01 AM       No Comments

ವೃದ್ಧರಿರುವ ಮನೆಯವರು ದಿನದಲ್ಲಿ ಕನಿಷ್ಠ ಐದು ನಿಮಿಷವಾದರೂ ಅವರೊಂದಿಗೆ ಕಾಲ ಕಳೆಯಬೇಕು. ಎಷ್ಟೇ ‘ಬೋರ್’ ಎನಿಸಿದರೂ, ಅವರ ಮಾತುಗಳಿಗೆ ಕಿವಿಯಾಗಬೇಕು. ಸಾಧ್ಯವಾದರೆ ಅವರನ್ನು ಒಂದೆರಡು ಮಾತುಗಳಿಂದ ಹೊಗಳಬೇಕು. ಅವರು ಬದುಕಿರುವಷ್ಟು ದಿನವಾದರೂ ನೆಮ್ಮದಿಯಾಗಿ ದಿನದೂಡುವಂಥ ವಾತಾವರಣವನ್ನು ಕಟ್ಟಿಕೊಡಲು ಯತ್ನಿಸಬೇಕು.

ದು 1980-90ರ ದಶಕ. ಕರ್ನಾಟಕ ಲೇಖಕಿಯರ ಸಮ್ಮೇಳನ ನಡೆಯುತ್ತಿತ್ತು. ಅದರ ಅಂಗವಾಗಿ ಹಲವು ಲೇಖಕಿಯರ ಕೃತಿಗಳು ಬಿಡುಗಡೆಯಾದವು. ಅದರಲ್ಲಿ ನನ್ನ ಕಾದಂಬರಿ ‘ಕಿತ್ತು ತಿನ್ನುವ ಮುಪ್ಪು’ವನ್ನು ಬಿಡುಗಡೆ ಮಾಡಿದ ಹೆಸರಾಂತ ಲೇಖಕಿಯೊಬ್ಬರು ಕಾದಂಬರಿಯ ಬಗ್ಗೆ ಮಾತನಾಡುತ್ತಾ, ‘ಶಾಂತಾರವರು ಹೊಸ ವಸ್ತುವನ್ನು ಆಯ್ದುಕೊಂಡಿದ್ದಾರೆ. ಲೇಖಕಿಯರು ಬರೆಯುವುದೇ ಪ್ರೇಮ-ಪ್ರೀತಿಯ ಕತೆಗಳು ಎಂದು ವಿಮರ್ಶಕರು ಹಗುರವಾಗಿ ಮಾತಾಡುತ್ತಾರೆ. ಆದರೆ ಈ ಕೃತಿ ಬಹಳ ಬೇರೆಯ ಪ್ರಪಂಚವನ್ನು ತೆರೆದಿಡುತ್ತದೆ’ ಎಂದೆಲ್ಲ ಹೊಗಳಿ ಕೊನೆಯಲ್ಲಿ, ‘ಎಲ್ಲ ಸರಿ, ಆದರೆ ಈ ಕಾದಂಬರಿಯ ಶೀರ್ಷಿಕೆ ಹೆದರಿಸುತ್ತದೆ. ಇನ್ನಷ್ಟು ಚೆಂದವಾದ ಹೆಸರಿಡಬಹುದಿತ್ತು’ ಎಂದರು. ನಾನು ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದೆ. ನನ್ನ ಪಕ್ಕ ಪ್ರೊ. ರಾಮಚಂದ್ರ ಶರ್ಮರು ಕುಳಿತಿದ್ದರು. ಅವರು ಮೆಲ್ಲನೆ ನನ್ನೆಡೆಗೆ ಬಗ್ಗಿ ‘‘ಇನ್ನೆಂಥಾ ಹೆಸರಿಡಬೇಕಿತ್ತು? ‘ಆಹಾ, ವೈಭವದ ವೃದ್ಧಾಪ್ಯ’ ಅಂತಾನಾ?’’ ಎಂದು ನಕ್ಕರು!!

2005ರಲ್ಲಿ ದಿನಪತ್ರಿಕೆಯೊಂದಕ್ಕೆ ವೃದ್ಧರ ‘ಡೇ ಕೇರ್ ಸೆಂಟರ್’ ಬಗ್ಗೆ ಲೇಖನ ಬರೆಯಲು ಇಂಥ ಹಲವು ಕೇಂದ್ರಗಳಿಗೆ ಭೇಟಿಕೊಟ್ಟಿದ್ದೆ. ಅಲ್ಲಿ ವೃದ್ಧರು ತುಂಬಾ ಖುಷಿಯಲ್ಲಿದ್ದರು. ‘ನಮ್ಮ ಮಗ-ಸೊಸೆ ಕೆಲಸಗಳಿಗೆ ಹೋಗುತ್ತಾರೆ. ತಮ್ಮ ಮಕ್ಕಳನ್ನು ಬೇಬಿ ಸಿಟಿಂಗ್​ಗೆ ಮತ್ತು ನಮ್ಮನ್ನು ಇಲ್ಲಿಗೆ ಬಿಡುತ್ತಾರೆ. ಸಂಜೆ ಬಂದು ಕರೆದುಕೊಂಡು ಹೋಗುತ್ತಾರೆ. ನಾವಿಲ್ಲಿ ಖುಷಿಯಾಗಿದ್ದೇವೆ. ಕಾರ್ಡ್ಸ್, ಕೇರಂ ಅಂತ ಒಳಾಂಗಣ ಆಟಗಳನ್ನು ಆಡುತ್ತೇವೆ. ಇಲ್ಲಿ ಪತ್ರಿಕೆಗಳಿವೆ, ಓದುತ್ತೇವೆ. ಮನೆಯಲ್ಲಿ ಒಬ್ಬರೇ ಮುಖ ಒಣಗಿಸಿ ಕುಳಿತುಕೊಳ್ಳುವುದಕ್ಕಿಂತಾ ಇಲ್ಲಿ ಹಾಯಾಗಿದೆ. ನಮ್ಮಲ್ಲಿ ಯಾರಾದರೂ ಒಬ್ಬರಿಗೆ ಜ್ವರವೋ ಮತ್ತೊಂದೋ ಆದರೆ ಉಳಿದವರು ನೋಡಲು ಹುಡುಕಿಕೊಂಡು ಮನೆಗೆ ಬರುತ್ತಾರೆ. ನಮ್ಮ ನೆಂಟರುಗಳಿಗೆ ನಮ್ಮನ್ನು ನೋಡಲು ಮನೆಗೆ ಬರುವುದಕ್ಕೂ ಪುರುಸೊತ್ತಿಲ್ಲ. ಈಗ ಇವರೇ ನಮ್ಮ ಬಂಧು-ಬಾಂಧವರು’ ಎಂದರು.

ಮೇಲಿನ ಎರಡೂ ಪ್ರಸಂಗಗಳನ್ನು ಇಲ್ಲಿ ಯಾಕೆ ಪ್ರಸ್ತಾಪಿಸಿದೆನೆಂದರೆ, ಇಂದು ವೃದ್ಧಾಪ್ಯ ಎನ್ನುವುದು ಒಂದು ಬಗೆಹರಿಯದ ಸಮಸ್ಯೆ ಆಗಿದೆ. ನನಗೆ ಬರುವ ಪತ್ರಗಳು ಮತ್ತು ನಮ್ಮ ಸೆಂಟರ್​ಗೆ ಬರುವ ‘ಕೇಸ್’ಗಳು ವೃದ್ಧಾಪ್ಯದ ಹತ್ತು ಹಲವು ಮುಖಗಳನ್ನು ಹೊತ್ತುತರುತ್ತವೆ. ಹುಟ್ಟುವ ಮೊದಲೇ ಮಗುವಿನ ಆಗಮನಕ್ಕೆ ತಂದೆ-ತಾಯಿಯರು ಸಂಭ್ರಮದ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ. ಬಾಲ್ಯವೆಲ್ಲಾ ಅವರ ಸಿದ್ಧತೆಯ ಚೌಕಟ್ಟಿನಲ್ಲೇ ನಡೆಯುತ್ತದೆ. ಯೌವನಕ್ಕೆ ಮನುಷ್ಯ ತನಗೆ ತಾನೇ ಸಿದ್ಧತೆಯನ್ನು ಮಾಡಿಕೊಳ್ಳುತ್ತಾನೆ. ತನ್ನ ಹೊರನೋಟ ಹೇಗಿರಬೇಕು? ಮಾತು ಹೇಗಿರಬೇಕು? ವಿದ್ಯೆ ಎಷ್ಟಿರಬೇಕು? ಯಾವ ವೃತ್ತಿಯನ್ನು ಆರಿಸಿಕೊಳ್ಳಬೇಕು? ಹೀಗೆ ತನ್ನ ಅಭಿಲಾಷೆಗೆ ತಕ್ಕಂತೆ ಪೂರೈಸಿಕೊಳ್ಳುತ್ತಾ ಹೋಗುತ್ತಾನೆ. ಪ್ರೌಢಾವಸ್ಥೆಯನ್ನೂ ತಾನೇ ರಚಿಸಿಕೊಂಡ ಹಲವು ಯೋಜನೆಗಳೊಂದಿಗೇ (ದೊಡ್ಡಮನೆ ಕಟ್ಟುವುದು, ಕಾರು ಕೊಳ್ಳುವುದು, ದೇಶ-ವಿದೇಶಗಳನ್ನು ಸುತ್ತುವುದು ಇತ್ಯಾದಿ) ಕಳೆಯುವ ಮನುಷ್ಯ ತನ್ನದೇ ವೃದ್ಧಾಪ್ಯಕ್ಕೆ ಮಾತ್ರ ಯಾವ ಸಿದ್ಧತೆಯನ್ನೂ ಮಾಡಿಕೊಳ್ಳದಿರುವುದು ಒಂದು ಸೋಜಿಗವೇ ಸರಿ. ಬಹಳಷ್ಟು ಜನ, ನಿವೃತ್ತಿ ವೇತನ ಬರುತ್ತದೆ, ಬ್ಯಾಂಕಿನಲ್ಲಿಟ್ಟಿರುವ ದುಡ್ಡಿಗೆ ಬಡ್ಡಿ ಬರುತ್ತದೆ, ಸುಖವಾಗಿರಬಹುದು ಎಂದೇ ಭಾವಿಸುತ್ತಾರೆ. ಇದು ಅರ್ಧಸತ್ಯ ಮಾತ್ರ. ಕೇವಲ ಹಣದಿಂದಲೇ ಎಲ್ಲ ಸುಖಗಳು, ಮಾನಸಿಕ ನೆಮ್ಮದಿ ಸಿಗದು. ಐವತ್ತು ವರ್ಷಗಳ ನಂತರ ನಿಧಾನವಾಗಿ ವೃದ್ಧಾಪ್ಯಕ್ಕೆ ಸಿದ್ಧತೆಯನ್ನು ಪ್ರಾರಂಭಿಸಬೇಕು ಎನ್ನುತ್ತದೆ ಮನಃಶಾಸ್ತ್ರ. ‘ಲೈಫ್ ವಿತ್ ದ ಫೋರ್ ಸರ್ಕಲ್’ ಎನ್ನುವ ಸಿದ್ಧಾಂತ ಐವತೆôದು ವರ್ಷಗಳ ನಂತರ, ಅದುವರೆಗಿನ ನಿಮ್ಮ ಬದುಕನ್ನು ನಾಲ್ಕು ವೃತ್ತಗಳಲ್ಲಿ ಸಮೀಕರಿಸಿ, ಯಾವ ವೃತ್ತ ಚಿಕ್ಕದಾಗಿದೆಯೋ ಆ ವೃತ್ತವನ್ನು ವಿಸ್ತರಿಸುವ ಕೆಲಸ ಮಾಡಿದರೆ ಮನುಷ್ಯ ಕೊನೆಯ ಘಳಿಗೆಯವರೆಗೆ ನೆಮ್ಮದಿಯಿಂದ ಬಾಳಬಹುದು ಎನ್ನುತ್ತದೆ. ಅದರಲ್ಲಿ ಮೊದಲನೇ ವೃತ್ತವೇ ‘ಸೆಲ್ಪ್’ ಎನ್ನುವುದು. ಅಂದರೆ ನಿನ್ನನ್ನು ನೀನು ಇದುವರೆವಿಗೆ ಎಷ್ಟು ಚೆನ್ನಾಗಿ ಅರಿತುಕೊಂಡಿದ್ದೀಯೆ? ನಿನ್ನ ವ್ಯಕ್ತಿತ್ವ ವಿಕಾಸಕ್ಕೆ ಎಷ್ಟು ಗಂಟೆಗಳ ಕಾಲ ಕೆಲಸ ಮಾಡಿದ್ದೀಯೆ? ನಿನ್ನ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯಾವ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀಯೆ? ಇಂಥವುಗಳನ್ನು ಕುರಿತು ಚಿಂತಿಸಿ, ನೀನು ವ್ಯಯಮಾಡಿರುವ ಗಂಟೆಗಳ ಲೆಕ್ಕದಲ್ಲಿ (ಒಂದು ಗಂಟೆಗೆ ಒಂದು ಚುಕ್ಕೆಯಂತೆ) ಒಂದು ವೃತ್ತ ರಚಿಸು ಎನ್ನುತ್ತದೆ. ಎರಡನೆಯದೇ ‘ಕುಟುಂಬ’. ನಿನ್ನ ಕುಟುಂಬಕ್ಕಾಗಿ, ಅದರ ಅಭಿವೃದ್ಧಿಗಾಗಿ, ಕುಟುಂಬ ಸದಸ್ಯರ ಸಾಮಾಜಿಕ, ದೈಹಿಕ ಮತ್ತು ಮಾನಸಿಕ ಏಳಿಗೆಗಾಗಿ ನೀನು ಎಷ್ಟು ಗಂಟೆ ಕೆಲಸ ಮಾಡಿದ್ದೀಯೆ? ಅದನ್ನೂ ಚುಕ್ಕಿಗಳ ಲೆಕ್ಕದಲ್ಲಿ ವೃತ್ತ ರಚಿಸು ಎನ್ನುತ್ತದೆ. ಮೂರನೆಯದೇ ನಿನ್ನ ‘ವೃತ್ತಿ’ (ಗೃಹಿಣಿಯರಿಗೆ ಅವರು ಮಾಡುವ ಮನೆಯ ಎಲ್ಲ ಕೆಲಸಗಳನ್ನೂ ವೃತ್ತಿಯೆಂದೇ ಈ ತತ್ತ್ವ ಪ್ರತಿಪಾದಿಸುತ್ತದೆ). ನಿನ್ನ ವೃತ್ತಿಯನ್ನು ನೀನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀಯೆ? ಅದರ ಅಭಿವೃದ್ಧಿಗಾಗಿ ಎಷ್ಟು ಕಾಲ ವ್ಯಯಿಸಿದ್ದೀಯೆ? ಅದರಿಂದ ನಿನಗೆ ಎಷ್ಟು ಮಾನಸಿಕ ನೆಮ್ಮದಿ ಸಿಕ್ಕಿದೆ? ಎಂಬುದರ ಕುರಿತಾದ ವೃತ್ತವಿದು. ನಾಲ್ಕನೆಯದು ಮತ್ತು ಕೊನೆಯದು ನಿನ್ನ ‘ಸಮಾಜ’. ನಿನ್ನ ಸಮಾಜವನ್ನು ನೀನು ಎಷ್ಟು ಸಮಂಜಸವಾಗಿ ಅರ್ಥಮಾಡಿಕೊಂಡಿದ್ದೀಯೆ? ಅದರ ಏಳಿಗೆಗಾಗಿ ಎಷ್ಟು ಸಮಯ ದುಡಿದಿದ್ದೀಯೆ? ಇದನ್ನೂ ಚುಕ್ಕಿಗಳ ಲೆಕ್ಕದಲ್ಲಿ ವೃತ್ತ ರಚಿಸು ಎನ್ನುತ್ತದೆ. ಇಲ್ಲಿ ಒಂದು ಸತ್ಯವನ್ನೂ ಈ ಸಿದ್ಧಾಂತ ಹೇಳುತ್ತದೆ. ಯಾರೊಬ್ಬರ ಈ ನಾಲ್ಕೂ ವೃತ್ತವೂ ಒಂದೇ ಅಳತೆಯಲ್ಲಿ ಮತ್ತು ಆಕಾರದಲ್ಲಿ ಖಂಡಿತಾ ಇರುವುದಿಲ್ಲ ಎನ್ನುತ್ತದೆ. ಉದಾಹರಣೆಗೆ, ಕಲಾವಿದನಾದವನು, ಸಮಾಜಸೇವಕನಾದವನು ‘ನಾನು ನನ್ನ ವೃತ್ತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೆ. ಅದಕ್ಕಾಗಿ ಹಗಲೂ ರಾತ್ರಿ ಶ್ರಮಿಸಿದ್ದೇನೆ’ ಎಂದರೆ, ಅದೇ ಸಮಯದಲ್ಲಿ ಅವನು ತನ್ನ ಕುಟುಂಬವನ್ನು ನಿರ್ಲಕ್ಷಿಸಿರುತ್ತಾನೆ. ಗೃಹಿಣಿಯಾದವಳು ‘ಮನೆವಾರ್ತೆಯನ್ನು ನನ್ನ ಜೀವವನ್ನೂ ಒತ್ತೆಯಿಟ್ಟು ಮಾಡಿದ್ದೇನೆ’ ಎಂದರೆ ಅದೇ ಸಮಯದಲ್ಲಿ ಆಕೆ ತನ್ನ ವ್ಯಕ್ತಿತ್ವ ವಿಕಾಸಕ್ಕಾಗಿ ಶ್ರಮಿಸಲು ಮರೆತಿರುತ್ತಾಳೆ. ಪ್ರತಿಯೊಬ್ಬರೂ ಮೊದಲ ಮೂರೂ ವೃತ್ತಗಳನ್ನು ಅರಿವಿದ್ದೋ ಇಲ್ಲದೆಯೋ ‘ಬದುಕಿನ ರಥ ಎಳೆಯುತ್ತಲೇ’ ನಿಭಾಯಿಸಿರುತ್ತಾರೆ. ಆದರೆ ‘ಸಮಾಜ’ ಎನ್ನುವುದಕ್ಕೆ ಹೆಚ್ಚಿನ ಗಮನವನ್ನೇ ಕೊಟ್ಟಿರುವುದಿಲ್ಲ. 55 ವರ್ಷಗಳ ನಂತರ ನಮ್ಮ ಬದುಕನ್ನು ನಾವೇ ಪರಾಮಶಿಸಿ, ಯಾವ ವೃತ್ತವನ್ನು ಕಡೆಗಣಿಸಿದ್ದೇವೆಯೋ ಅದರ ಕಡೆ ಗಮನ ಕೊಟ್ಟು ಬದುಕಿನ ಸಾಫಲ್ಯದ ಕಡೆ ನಡೆಯಬಹುದು ಎನ್ನುವುದು ಈ ತತ್ತ್ವದ ಪ್ರತಿಪಾದನೆ. ಇದು ‘ಪಾಸಿಟಿವ್ ಮೆಂಟಲ್ ಹೆಲ್ತ್’ ಇರುವವರು ಅನುಸರಿಸುವ ಮಾರ್ಗ!

ವೃದ್ಧಾಪ್ಯದ ತಲ್ಲಣಗಳು ಅನೇಕ. ನಮ್ಮ ಸೆಂಟರ್​ಗೆ ಬರುವ ವೃದ್ಧ ದಂಪತಿಗಳಲ್ಲಿ ಹೆಂಡತಿಯದೊಂದು ಸಾಮಾನ್ಯ ದೂರು ಇರುತ್ತದೆ. ಅದು- ‘ಇತ್ತೀಚೆಗೆ ಇವರಿಗೆ ಕೋಪ ಹೆಚ್ಚಾಗಿದೆ’- ಎಂಬುದು. ಅನೇಕ ಗಂಡಸರಿಗೆ ಮತ್ತು ಕೆಲವೊಮ್ಮೆ ಹೆಂಗಸರಿಗೂ ವೃದ್ಧಾಪ್ಯದಲ್ಲಿ ತಮ್ಮದೇ ‘ಅಸಹಾಯಕತೆ’ಯಿಂದ ಕೋಪ ಹೆಚ್ಚಾಗುತ್ತದೆ. ತಮ್ಮ ಕೈಲಿ ಮೊದಲಿನಂತೆ ಕೆಲಸ ಮಾಡಲು ಆಗುತ್ತಿಲ್ಲ, ತಮ್ಮ ದುಡಿಮೆ ಈಗ ಕಡಿಮೆಯಾಗಿರುವುದರಿಂದ ಮನೆಯ ಸದಸ್ಯರು ಗೌರವ ಕೊಡುತ್ತಿಲ್ಲ, ಮಗ ತಾನು ತೆಗೆದುಕೊಳ್ಳುವ ಯಾವ ನಿರ್ಧಾರಕ್ಕೂ ತಮ್ಮ ಸಲಹೆ ಕೇಳುತ್ತಿಲ್ಲ, ಮೊಮ್ಮಕ್ಕಳು ಕಡೆಗಣಿಸುತ್ತಿದ್ದಾರೆ- ಹೀಗೆ ಏನೇನೋ ‘ಇಲ್ಲದ’ ಅಥವಾ ಸ್ವಲ್ಪವೇ ‘ಇರಬಹುದಾದ’ ಕಾರಣಗಳು ಈ ವೃದ್ಧರಿಗೆ ಬೆಟ್ಟದಂತೆ ಕಾಣುತ್ತವೆ. ಇದರಿಂದ ಅವರು ಮಾನಸಿಕವಾಗಿ ಕುಸಿಯುತ್ತಾರೆ. ಸಣ್ಣಗೆ ‘ಅಸುರಕ್ಷತೆಯ ಭಯ’ (ಇನ್​ಸೆಕ್ಯುರಿಟಿ ಫಿಯರ್) ಕಾಡಲು ತೊಡಗುತ್ತದೆ. ಅದನ್ನು ಗೆಲ್ಲಲು ‘ಕೋಪ’ದ ರಕ್ಷಣೆಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ಕೋಪಗೊಂಡು ಅವರು ಕೂಗಾಡಿದಾಗ ಮನೆಯ ಇನ್ನಿತರ ಸದಸ್ಯರು ‘ಅಪ್ಪನಿಗೆ/ಅಮ್ಮನಿಗೆ ಈ ಕ್ಷಣ ಕೋಪ ಬಂದಿದೆ. ಈಗ ಮಾತಾಡುವುದು ಬೇಡ’ ಎಂದು ಸುಮ್ಮನಾಗುತ್ತಾರೆ. ಕೆಲವೊಮ್ಮೆ ಸಮಾಧಾನವನ್ನೂ ಮಾಡುತ್ತಾರೆ. ಆ ಕ್ಷಣಕ್ಕೆ ಆ ವೃದ್ಧರಿಗೆ ಮನೆಯ ಎಲ್ಲ ಸದಸ್ಯರ ‘ಗಮನ’ವನ್ನು ತಮ್ಮೆಡೆಗೆ ತಂದುಕೊಂಡ ತೃಪ್ತಿ ಸಿಗುತ್ತದೆ. ಮಕ್ಕಳಲ್ಲಿ ಇರುವ ‘ಅಟೆನ್ಷನ್ ಸೀಕಿಂಗ್ ಡಿಸಾರ್ಡರ್’ ಮುದುಕರಿಗೂ ಬರಬಹುದು.

ವೃದ್ಧರಿರುವ ಮನೆಯ ಸದಸ್ಯರಿಗೊಂದು ಕಿವಿಮಾತು- ದಿನದಲ್ಲಿ ಕೇವಲ ಐದು ನಿಮಿಷ ಅವರ ಜತೆ ಕಾಲ ಕಳೆಯಿರಿ. ಅವರ ಮಾತುಗಳು ಎಷ್ಟೇ ‘ಬೋರ್’ ಎನಿಸಿದರೂ, ಒಂದೆರಡು ನಿಮಿಷ ಕೇಳಿರಿ. ನಿಮ್ಮಿಂದ ಸಾಧ್ಯವಾದರೆ ಅವರನ್ನು ಒಂದೆರಡು ಮಾತುಗಳಿಂದ ಹೊಗಳಿರಿ. ಅವರು ಹಿಂದೆ ಬದುಕಿದ್ದಷ್ಟು ಕಾಲ ಮುಂದೆ ಖಂಡಿತಾ ಬದುಕಿರುವುದಿಲ್ಲ. ಅವರು ಬದುಕಿರುವಷ್ಟು ದಿನ ಒಂದು ನೆಮ್ಮದಿಯ ಬದುಕು ಕೊಡಲು ನಿಮ್ಮಿಂದ ಸಾಧ್ಯವೇ ಯೋಚಿಸಿ. ಇದನ್ನು ನಿಮ್ಮ ಸ್ವಾರ್ಥಕ್ಕಾಗಿಯೇ ಮಾಡಿ. ಈಗ ನೀವು ನಿಮ್ಮ ಹೆತ್ತವರೊಡನೆ ಹೇಗೆ ನಡೆದುಕೊಳ್ಳುತ್ತೀರೋ ಹಾಗೆಯೇ ನಿಮ್ಮ ಮಕ್ಕಳು ನಿಮ್ಮೊಡನೆ ನಡೆದುಕೊಳ್ಳುತ್ತಾರೆ! ಕಡೆಗೊಂದು ಸಣ್ಣಕತೆ- ಒಬ್ಬ ತನ್ನ ಮುದಿತಂದೆ ಸತ್ತಾಗ, ಆತ ಬಳಸುತ್ತಿದ್ದ ಅಲ್ಯೂಮಿನಿಯಂ ತಟ್ಟೆಯನ್ನು ಹೊರಕ್ಕೆ ಎಸೆದ. ಅವನ ಪುಟ್ಟಮಗ ಅದನ್ನು ತಂದು ಒಳಗಿಟ್ಟು ಕೇಳಿದ: ‘ಅಪ್ಪ, ನಾಳೆ ನೀನು ಮುದುಕನಾದಾಗ ನಿನಗೆ ಊಟ ಕೊಡಲು ಈ ತಟ್ಟೆ ಬೇಕಲ್ಲವೇ?’.

(ಲೇಖಕರು ಆಪ್ತಸಲಹೆಗಾರರು, ಬರಹಗಾರರು)

Leave a Reply

Your email address will not be published. Required fields are marked *

Back To Top