Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ವೀರಶೈವ (ಲಿಂಗಾಯತ)ರು ನೂರಕ್ಕೆ ನೂರರಷ್ಟು ಹಿಂದೂಗಳು

Monday, 31.07.2017, 3:05 AM       No Comments

| ಡಾ. ಎಂ. ಚಿದಾನಂದ ಮೂರ್ತಿ

ವೀರಶೈವ, ಲಿಂಗಾಯತ ಇವು ಬೇರೆ ಬೇರೆ ಎಂದು ಹೇಳುವವರ ಅಭಿಪ್ರಾಯ ಖಂಡಿತ ನಿಜ ಅಲ್ಲ. ಬಸವಣ್ಣ ತಮ್ಮ ಒಂದು ವಚನದಲ್ಲಿ ತಾನು ‘ಕರ್ಮ’ ಪ್ರಧಾನವಾಗಿದ್ದ ‘ಬ್ರಾಹ್ಮಣ್ಯ’ವನ್ನು ಕೈಬಿಟ್ಟು ‘ಭಕ್ತಿ’ ಪ್ರಧಾನವಾಗಿದ್ದ ‘ವೀರಶೈವ’ನಾದೆ ಎಂದು ಹೇಳಿಕೊಂಡಿದ್ದಾರೆ- ‘ಎನ್ನ ಬಂದ ಭವಂಗಳನು ಪರಿಹರಿಸಿ, ಎನಗೆ ಭಕ್ತಿಘನವನೆತ್ತಿ ತೋರಿ, ಎನ್ನ ಹೊಂದಿದ ಶೈವಮಾರ್ಗಂಗಳನತಿಗಳೆದು, ನಿಜ ವೀರಶೈವಾಚಾರವನರುಹಿ ತೋರಿದ’ ಚೆನ್ನಬಸವಣ್ಣನಿಗೆ ನಾನು ಕೃತಜ್ಞ ಎಂದು ಹೇಳಿದ್ದಾರೆ (ವ. 1098). ಅವರ ಕಾಲದ ಸಿದ್ಧರಾಮನ ಮಾತು ಇದು- ‘ಕುಲದಲ್ಲಿ ಶೂದ್ರನಾದಡೇನು ಮನದಲ್ಲಿ ಮಹಾದೇವ ನೆಲೆಗೊಂಡವನೆ ವೀರಶೈವ ನೋಡಾ’ (ವ. 1814). ಅದೇ ಸಿದ್ಧರಾಮ ವೀರಶೈವರನ್ನು ‘ಲಿಂಗವಂತ’ರು ಎಂದು ಹೆಸರಿಸಿದ್ದಾನೆ (ವ. 713). ಜತೆಗೆ ಕ್ರಿ.ಶ. 1160ರ ಅವರ ಸಮಕಾಲೀನರಾದ ಹಲವು ವೀರಶೈವ ವಚನಕಾರರು ‘ವೀರಶೈವ’ ಪದ ಬಳಸಿದ್ದಾರೆ. ಬಸವಣ್ಣ ವೀರಶೈವ ಅಥವಾ ಲಿಂಗವಂತ (ಲಿಂಗಾಯತ)ವನ್ನು ಹುಟ್ಟುಹಾಕಲಿಲ್ಲ. ಅವರಿಗಿಂತ ಅರವತ್ತು ವರ್ಷಗಳ ಹಿಂದಿದ್ದ ಕೊಂಡಗುಳಿ ಕೇಶಿರಾಜ ಎಂಬ ವೀರಶೈವ ಕವಿ (ಕ್ರಿ.ಶ. 1100) ತನ್ನ ಶೀಲ ಮಹತ್ವದ ಕಂದಕೃತಿಯಲ್ಲಿ ವೀರಶೈವ, ಲಿಂಗಾಯತ ಪದಗಳನ್ನು ಬಳಸಿದ್ದಾನೆ- ‘ವರ ವೀರಶೈವ ಸಿದ್ಧವ ಪರಿಯಾಯಂಗಳಿಂದಲರಿದು…’, ‘ಅಂಗದಲಿ ಲಕ್ಷಣಾನ್ವಿತ ಲಿಂಗದ ಮುದ್ರೆಯನು ವತ್ಸಗಂ ಧೇನುವಿಗಂ ಅಂಗೀಕರಿಪುದು ಶೀಲವು ಲಿಂಗಾಯತವು’ (ಶೀಲಮಹತ್ವದ ಕಂದ 1:33).

ಈ ನಿರ್ಣಾಯಕ ಆಧಾರಗಳಿಂದ ಬಸವಣ್ಣ ಒಬ್ಬ ವೀರಶೈವನೆಂದೂ, ಅವನಿಗಿಂತ ಹಿಂದಿನದು ವೀರಶೈವ ಪಂಥ, ‘ವೀರಶೈವ’, ‘ಲಿಂಗಾಯತ’ ಪದಗಳು ಒಂದು ಪಂಥವನ್ನು ಹೇಳುವ ಭಿನ್ನಪದಗಳೆಂದೂ ಸಾಬೀತಾಗುತ್ತದೆ. ಕ್ರಿ.ಶ. 1100ಕ್ಕಿಂತ ಹಿಂದೆಯೇ ವೀರಶೈವ ಪಂಥವು ಅಸ್ತಿತ್ವದಲ್ಲಿದ್ದು ಅದು ಹೆಚ್ಚು ಜನಪ್ರಿಯವಾಗಿರಲಿಲ್ಲ; ಅದರ ಕ್ರಾಂತಿಕಾರಕ ತತ್ತ್ವಗಳು ಹೆಚ್ಚು ಪ್ರಚುರವಾಗಿರಲಿಲ್ಲ. ಹುಟ್ಟುಬ್ರಾಹ್ಮಣನಾಗಿದ್ದ ಬಸವಣ್ಣ ಆ ತತ್ತ್ವಗಳಿಗೆ ಮನಸೋತು, ಯಜ್ಞ-ಯಾಗಾದಿಗಳಿಗೆ ಜಾತಿಪ್ರಾಧಾನ್ಯಕ್ಕೆ ಹೆಚ್ಚು ಮಹತ್ವವನ್ನು ನೀಡಿದ್ದ ಬ್ರಾಹ್ಮಣ್ಯವನ್ನು ತ್ಯಜಿಸಿ ಸ್ವ-ಇಚ್ಛೆಯಿಂದ ವೀರಶೈವನಾದ. ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಅವನಿಂದ ವೀರಶೈವ ಧರ್ಮವು ಹೆಚ್ಚು ಪ್ರಚಾರಗೊಂಡು ತೀವ್ರಗತಿಯಲ್ಲಿ ಬೆಳೆದು ಹೆಚ್ಚು ಜನರನ್ನು ಬೇರೆಬೇರೆ ವರ್ಗಗಳಿಂದ ಆಕರ್ಷಿಸಿ ಬೆಳೆಯಿತು.

16ನೇ ಶತಮಾನದ ಜರ್ಮನಿಯ ಮಾರ್ಟಿನ್ ಲೂಥರನು ಸಾಂಪ್ರದಾಯಿಕ ಕ್ರಿಶ್ಚಿಯನ್ ಧರ್ಮದ ವಿರುದ್ಧ ನಿಂತು ಹೋರಾಟ ಮಾಡಿದ್ದರಿಂದ ಕ್ಯಾಥೊಲಿಕ್ ಪಂಥದಿಂದ ಪ್ರಾಟೆಸ್ಟೆಂಟ್ ಪಂಥವು ರೂಪುಗೊಂಡಿತು. ಆದರೂ ಪ್ರಾಟೆಸ್ಟೆಂಟ್ ಪಂಥವು ಕ್ರಿಶ್ಚಿಯನ್ ಧರ್ಮದ ಭಾಗವಾಗಿಯೇ ಉಳಿಯಿತು. ಬಸವಣ್ಣನವರಿಂದ ವೀರಶೈವವು ಹಿಂದೂಧರ್ಮದ ಪ್ರಾಟೆಸ್ಟೆಂಟ್ ರೀತಿಯ ಭಾಗವಾಯಿತು (‘ಪ್ರೊಟೆಸ್ಟ್’ = ಪ್ರತಿಭಟನೆ).

ವೀರಶೈವರು ಮತ್ತು ಲಿಂಗಾಯತರು ಎಂಬುದು ಒಂದೇ ಧರ್ಮದ ಎರಡು ಭಿನ್ನ ಹೆಸರುಗಳು. ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ತೋಂಟದ ಸಿದ್ಧಲಿಂಗಯತಿ (16ನೇ ಶತಮಾನ) ಇತ್ಯಾದಿ ಎಲ್ಲರೂ ವೀರಶೈವರೂ ಹೌದು, ಲಿಂಗಾಯತರೂ ಹೌದು. ಅವರು ಶಿವನ ನೈಷ್ಠಿಕ ಭಕ್ತರಾಗಿದ್ದುದರಿಂದ ‘ವೀರ’ಶೈವರು; ಲಿಂಗಧಾರಿಗಳಾದ್ದರಿಂದ ‘ಲಿಂಗಾಯತ’ರು. ಎಲ್ಲ ದೃಷ್ಟಿಗಳಿಂದ ವೀರಶೈವರೆಲ್ಲರೂ ಹಿಂದೂಗಳೇ. ಪೂರ್ಣಪೀಠದ ಸವೋಚ್ಚ ನ್ಯಾಯಾಲಯವು 1995ರಲ್ಲಿ ನೀಡಿದ ತೀರ್ಪಿನಂತೆ ಹಿಂದೂ ಧರ್ಮವೆಂದರೆ ಮುಖ್ಯವಾಗಿ ವೇದಗಳಲ್ಲಿ ಶ್ರದ್ಧೆ ಇಡುವುದು- ‘ವೇದಗಳಲ್ಲಿ ಶ್ರದ್ಧೆಯನ್ನಿಡುವುದು, ಮೋಕ್ಷಸಾಧನೆಗೆ ಹಲವು ಸಾಧನಗಳಿವೆ ಎಂಬುದನ್ನು ಒಪು್ಪವುದು, ದೇವರು ಒಬ್ಬನೇ ಆದರೂ ಅವನು ಹಲವು ದೇವತೆಗಳಲ್ಲಿ ಬಿಂಬಿಸಲ್ಪಡುತ್ತಾನೆ ಎಂದು ಆಚರಿಸುವುದು ಇದು ಹಿಂದೂ ಧರ್ಮದ ವಿಶಿಷ್ಟ ಲಕ್ಷಣ’ ಎನ್ನುತ್ತದೆ ಈ ತೀರ್ಪ. ‘ಏಕಂ ಸತ್, ವಿಪ್ರಾ ಬಹುಧಾ ವದಂತಿ’ (ಇರುವ ದೈವ ಒಂದೇ, ಅದನ್ನು ವಿವೇಕಿಗಳು ಹಲವು ಹೆಸರುಗಳಿಂದ ಕರೆಯುತ್ತಾರೆ). ಹೀಗೆ ಹಿಂದೂ ಧರ್ಮದ ಎಲ್ಲ ಲಕ್ಷಣಗಳೂ ವೀರಶೈವದಲ್ಲಿವೆ. ವೇದಗಳಲ್ಲಿ ವೀರಶೈವರಿಗೆ ಶ್ರದ್ಧೆ ಇದೆ- ಆದ್ದರಿಂದಲೇ ಸಿದ್ಧಗಂಗೆಯಂತಹ ಹಲವು ಮಠಗಳು ‘ವೇದ ಸಂಸ್ಕೃತ ಪಾಠಶಾಲೆ’ಗಳನ್ನು ನಡೆಸುತ್ತಿವೆ. ಚಿತ್ರದುರ್ಗದ ಮುರುಘಾ ಮಠದ ಪೀಠಾಧ್ಯಕ್ಷರಾಗಿದ್ದ ನಿ|| ಪ್ರ|| (ಕೈ) ಶ್ರೀ ಜಯದೇವ ಜಗದ್ಗುರುಗಳು 1914ರಲ್ಲಿ ತಿಪಟೂರಿನ ‘ವೀರಶೈವಾನಂದಾಶ್ರಮ’ದಲ್ಲಿ ವೇದಘೋಷದೊಡನೆ ‘ವೇದ ಸಂಸ್ಕೃತ ಜ್ಯೋತಿಷ’ ಪಾಠಶಾಲೆಯನ್ನು ಆರಂಭಿಸಿದರು. ಮೈಸೂರಿನಲ್ಲಿ ಸುತ್ತೂರು ಮಠದ ಆಶ್ರಯದಲ್ಲಿ ‘ಕ್ಯಾತನಹಳ್ಳಿ ಸಾಹುಕಾರ್ ಸಿದ್ಧಲಿಂಗಪ್ಪನವರ ವೇದ, ಸಂಸ್ಕೃತ, ಜ್ಯೋತಿಷ ಮತ್ತು ಯೋಗಾಸನ ಪಾಠಶಾಲೆ’ ಇದ್ದಿತು (ಅದು ಈಗ ಕಾರ್ಯನಿರ್ವಹಿಸುತ್ತಿಲ್ಲ). ಇಂತಹ ಇನ್ನೂ ಹಲವು ಉದಾಹರಣೆಗಳು ದೊರಕುತ್ತವೆ. ವೀರಶೈವರು ದೈವ ಶಿವನಲ್ಲಿ ಭಕ್ತಿಯುಳ್ಳವರಾದರೂ ಇತರ ದೈವಗಳನ್ನೂ ಶ್ರದ್ಧೆಯಿಂದ ಕಾಣುತ್ತಾರೆ. ಅವರು ಶಿವೇತರ ದೇವಾಲಯಗಳನ್ನು ದ್ವೇಷಿಸುತ್ತಿಲ್ಲ. ಉದಾಹರಣೆಗೆ, ನನ್ನ ಹಳ್ಳಿಯ ವೀರಶೈವ ಅಥವಾ ಲಿಂಗಾಯತರು ಶಿವನ ಪೂಜೆ ಯಂತೆಯೇ ‘ತಿರುಪತಿ ತಿಮ್ಮಪ್ಪ’ ಎಂಬ ವಿಷ್ಣುವಿನ ಆರಾಧಕರೂ ಆಗಿದ್ದಾರೆ. ‘ದೇವನೊಬ್ಬ ನಾಮ ಹಲವು’ ಎಂಬ ಬಸವಣ್ಣನವರ ವಚನವೂ ಗಮನಾರ್ಹ.

20ನೇ ಶತಮಾನದ ಆರಂಭದವರೆಗೆ ವೀರಶೈವರೆಲ್ಲ ತಾವು ಹಿಂದೂಗಳೇ ಎಂದು ಭಾವಿಸಿದ್ದರು. ಕ್ರಿ.ಶ. 1904ರಲ್ಲಿ ಧಾರವಾಡದಲ್ಲಿ ಜರುಗಿದ ಶ್ರೀಮದ್ವೀರಶೈವ ಮಹಾಸಭೆಯ ಮೊದಲ ಅಧಿವೇಶನದ ಮೊದಲ ನಿರ್ಣಯ ಹೀಗಿದೆ- ‘ವೀರಶೈವ ಮತವು ನಿಗಮಾಗಮೋಪನಿಷತ್ ಭಾಷ್ಯ ಪ್ರತಿಪಾದಿತ ತತ್ತ್ವದಿಂದ ಅನಾದಿ ಸಂಸಿದ್ಧವೆಂತಲೂ, ಶ್ರೀ ಬಸವೇಶ್ವರ ದೇವರು ಈ ಮತವನ್ನು ಪ್ರಚುರಪಡಿಸಿದವರೇ ಹೊರತು ಸ್ಥಾಪಕರಲ್ಲವೆಂಬುದು ಶಿಲಾಲೇಖಾದಿ ಪ್ರಮಾಣಗಳಿಂದ ಸಿದ್ಧವಾಗುತ್ತದೆಂತಲೂ ಈ ಮಹಾಸಭೆಯವರು ಖಂಡಿತವಾಗಿ ಹೇಳುತ್ತಾರೆ’- ಅಂದರೆ ಅನಾದಿ ಕಾಲದ ವೇದ-ಉಪನಿಷತ್ತುಗಳ ತತ್ತ್ವಗಳನ್ನು ನಂಬಿ ‘ಅನಾದಿ ಸಂಸಿದ್ಧ’ವೆಂದೇ ಪ್ರತಿಪಾದಿಸುವ ಹಿಂದೂ ಧರ್ಮದಂತೆ ವೀರಶೈವರು ತಮ್ಮ ಧರ್ಮವನ್ನೂ ನಂಬಿದ್ದರು. ಆ ನಿರ್ಣಯದ ಪ್ರಕಾರ, ವೇದಗಳಲ್ಲಿ ಶ್ರದ್ಧೆಯಿಡುವ ಹಿಂದೂಗಳಂತೆ ವೀರಶೈವರೂ ಶ್ರದ್ಧೆಯಿಡುತ್ತಾರೆ. 1908-10ರಲ್ಲಿ ಬ್ರಿಟಿಷ್ ಅಧಿಕಾರಿ ‘ದೊರೆ’ ಎಂಥೊವೆನ್ನನು ವೀರಶೈವರು ಹಿಂದೂಗಳಲ್ಲ ಎಂದು ಕಾನೂನು ಮಾಡಿದ್ದು ವೀರಶೈವರು ಹಿಂದೂಗಳಲ್ಲ ಎಂಬ ಭೇದಭಾವವನ್ನು ಸೃಷ್ಟಿಸಿತು. ಭಾರತವನ್ನು ತಮ್ಮ ದಾಸ್ಯದಲ್ಲಿಟ್ಟುಕೊಳ್ಳಲು ಬ್ರಿಟಿಷರು ನಡೆಸಿದ ತಂತ್ರವಿದು- ‘ಒಡೆದು ಆಳು’ (ಈಜಿಡಜಿಛಛಿ ಚ್ಞಛ R್ಝ). ಅವರು ಬಿತ್ತಿದ ವಿಷಬೀಜ ಮುಂದೆ ಮೊಳಕೆಯಾಗಿ ಬಳಿಕ ಮರವಾಗಿ ಬೆಳೆಯಿತು, ಬೆಳೆಯುತ್ತಿದೆ.

ಆದರೆ, ವೀರಶೈವರು ಹಿಂದೂಗಳೇ ಆಗಿದ್ದಾರೆ ಎಂಬ ಸತ್ಯವನ್ನು ಅನೇಕ ವೀರಶೈವ ಪೂಜ್ಯರು ಪ್ರತಿಪಾದಿಸಿದ್ದಾರೆ. ವಿರಕ್ತ ಪೀಠಗಳ ಪ್ರಾತಿನಿಧಿಕ ಮಠವಾದ ಸಿದ್ಧಗಂಗಾ ಮಠದ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳ ಮಾತು ಇದು- ‘ವೀರಶೈವ ಧರ್ಮ ಹಿಂದೂ ಧರ್ಮದ, ಅರ್ಥಾತ್ ಶೈವಧರ್ಮದ ಒಂದು ಶಾಖೆ, ದ್ವೈತ-ವಿಶಿಷ್ಟಾದ್ವೈತ ಪಂಥಗಳಿದ್ದಂತೆ… ಹಿಂದೂ ಧರ್ಮ ನಿಜಕ್ಕೂ ವಿಶಾಲವಾದ, ಬುಡ ಭದ್ರವಾಗಿರುವ ಧರ್ಮ… ಅನೇಕ ರಾಜಕಾರಣಿಗಳಿಗೆ ಹಿಂದೂ ಧರ್ಮದ ಜಾಯಮಾನವೇ ಗೊತ್ತಿಲ್ಲ’. ಇನ್ನು ಗುರುಪೀಠಗಳ ಪ್ರಾತಿನಿಧಿಕ ಸಂಸ್ಥೆ ಎನ್ನಬಹುದಾದ ಶ್ರೀ ರಂಭಾಪುರಿ ಸ್ವಾಮೀಜಿಯವರ ಮಾತು ಹೀಗಿದೆ- ‘ವೀರಶೈವರ ಹಕ್ಕುಗಳಿಗಾಗಿ ಹೋರಾಟ ಮಾಡೋಣ. ಆದರೆ ಪರಂಪರೆ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ವೀರಶೈವರು ಹಿಂದೂಗಳೇ’. ಕಲಬುರಗಿಯ ಶರಣ ಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸಪ್ಪ ಅಪ್ಪ ಅವರ ಮಾತುಗಳು ಇವು- ‘‘ಬಸವಣ್ಣನವರು ತಮ್ಮ ವಚನಗಳಲ್ಲಿ ‘ಓಂ ನಮಃ ಶಿವಾಯ’ ಎಂದು ಹಲವು ಕಡೆ ಹೇಳಿದ್ದಾರೆ. ಅಲ್ಲದೆ ಹಿಂದೂ ಹಬ್ಬಗಳಾದ ದಸರಾ, ಸಂಕ್ರಾಂತಿ, ಯುಗಾದಿ ಮತ್ತು ಗಣಪತಿ ಹಬ್ಬಗಳನ್ನು ವೀರಶೈವರೂ ಆಚರಿಸುವುದರಿಂದ ನಾವು ಹಿಂದೂಗಳಲ್ಲ ಅಂದರೆ ಹೇಗೆ?’. ಶ್ರೇಷ್ಠ ತತ್ತ್ವಶಾಸ್ತ್ರಜ್ಞ, ಭಾರತದ ಮಾಜಿ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್, ‘ಕರ್ನಾಟಕದ ಗಾಂಧಿ’ ಹರ್ಡೆಕರ್ ಮಂಜಪ್ಪ, ‘ವಚನಶಾಸ್ತ್ರ ಪಿತಾಮಹ’ ಫ.ಗು. ಹಳಕಟ್ಟಿ, ಹುಬ್ಬಳ್ಳಿ ಮೂರುಸಾವಿರ ಮಠದ ಪೂಜ್ಯರು, ಶಿ.ಶಿ. ಬಸವನಾಳ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಾ. ಎಲ್. ಬಸವರಾಜು, ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ಹರ್ಷಾನಂದರು, ಪೂಜ್ಯ ಶ್ರೀ ಪೇಜಾವರ ಸ್ವಾಮಿಗಳು ಇತ್ಯಾದಿ ಶ್ರೇಷ್ಠರೆಲ್ಲ ವೀರಶೈವ (ಲಿಂಗಾಯತ)ರು ಹಿಂದೂಗಳೆಂದೇ ತಮ್ಮ ಬರಹಗಳಲ್ಲಿ ಪ್ರತಿಪಾದಿಸಿದ್ದಾರೆ. ಚಿತ್ರವು ಸ್ಪಷ್ಟಾತಿಸ್ಪಷ್ಟ.

ವೀರಶೈವ ಮಹಾಸಭೆ ಏನೇ ಒತ್ತಡ ಹಾಕಿದರೂ, ವೀರಶೈವರು ಹಿಂದೂಗಳಲ್ಲ ಎಂಬ ವಿಧೇಯಕವು ರೂಪುಗೊಂಡು ಲೋಕಸಭೆ-ರಾಜ್ಯಸಭೆಗಳಲ್ಲಿ ಅಂಗೀಕೃತವಾಗಬೇಕು. ಆಗ ‘ಕಾನೂನು’ ಆಗುತ್ತದೆ. ಅದು ಅಸಾಧ್ಯ. ನಾನು ಈಗಾಗಲೇ ನನ್ನ ಸ್ಪಷ್ಟ ಅಭಿಪ್ರಾಯವನ್ನು ಪತ್ರಮುಖೇನ ಕೇಂದ್ರದ ಮಂತ್ರಿಯೊಬ್ಬರಿಗೆ ತಿಳಿಸಿದ್ದೇನೆ. ವೀರಶೈವರು ಹಿಂದೂಗಳಲ್ಲ ಎಂಬುದು ಕಾನೂನು ಮೂಲಕ ಒಪ್ಪಿತವಾಗಬೇಕು, ಅದು ಎಂದೆಂದಿಗೂ ಕೈಗೂಡದ ಕನಸು.

(ಲೇಖಕರು ಸಂಶೋಧಕರು ಮತ್ತು ಸಾಹಿತಿ)

Leave a Reply

Your email address will not be published. Required fields are marked *

Back To Top