Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ವಿಷಮವಸ್ತ್ರವಾದ ಸಮವಸ್ತ್ರ

Tuesday, 31.10.2017, 3:02 AM       No Comments

ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡಲಾಗಿರುವ ಸಮವಸ್ತ್ರವು ಕಳಪೆಯಾಗಿದ್ದು, ವರ್ಷಪೂರ್ತಿ ಇರಲಿ ಒಂದು ದಿನವೂ ತೊಡಲಾಗದಷ್ಟರ ಮಟ್ಟಿಗೆ ಯೋಗ್ಯವಾಗಿಲ್ಲದಿರುವ ಮಾಹಿತಿ ಬಯಲಾಗಿದೆ. ಇದು ಶಿಕ್ಷಣ ಇಲಾಖೆಯೇ ನಡೆಸಿರುವ ಗುಣಮಟ್ಟ ಪರಿಶೀಲನೆಯಲ್ಲಿ ಬಟಾಬಯಲಾಗಿರುವ ಅಪಸವ್ಯ. ತೆರಿಗೆದಾರರ ಹಣವನ್ನು ಹೇಗೆಲ್ಲ ಪೋಲುಮಾಡಬಹುದು, ಬೊಕ್ಕಸಕ್ಕೆ ಹೇಗೆಲ್ಲ ನಷ್ಟ ಉಂಟುಮಾಡಬಹುದು ಎಂಬುದಕ್ಕೆ ನಮ್ಮ ಆಳುಗರು ಕಂಡುಕೊಂಡಿರುವ ಮಾಗೋಪಾಯಗಳಲ್ಲಿ ಇದೂ ಒಂದು ಎಂದು ವಿಷಾದದಿಂದಲೇ ಹೇಳಬೇಕಾಗಿ ಬಂದಿದೆ.

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 44 ಲಕ್ಷ ವಿದ್ಯಾರ್ಥಿಗಳಿಗೆ ಹೀಗೆ ಸಮವಸ್ತ್ರ ವಿತರಿಸಲು ಸರ್ಕಾರಕ್ಕೆ ಆಗಿರುವ ಖರ್ಚು ಬರೋಬ್ಬರಿ 76.6 ಕೋಟಿ ರೂಪಾಯಿ ಸಮವಸ್ತ್ರವನ್ನು ತೊಳೆದಾಗ ಮತ್ತು ಬಿಸಿಲಿಗೆ ಹಾಕಿದಾಗ ಬಣ್ಣ ಬದಲಾಗುವಿಕೆ, ಗಾತ್ರದಲ್ಲಿ ಕುಗ್ಗುವಿಕೆ ಸೇರಿದಂತೆ ಕಳಪೆತನಕ್ಕೆ ಸಾಕ್ಷಿಯಾಗುವ ಸಾಕಷ್ಟು ಪುರಾವೆಗಳು ಸದರಿ ಗುಣಮಟ್ಟ ಪರಿಶೀಲನೆಯ ವೇಳೆ ದಕ್ಕಿವೆ ಎನ್ನಲಾಗಿದೆ. ಇದೇ ರೀತಿಯಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ‘ಶೂ ಭಾಗ್ಯ’ವೂ ಹೀಗೇ ಬಳಲಿತ್ತು. ಯಾವುದೋ ಉಮೇದಿನಲ್ಲಿ ಶೂ ಭಾಗ್ಯದ ಘೋಷಣೆಯಾಗಿ, ಅದರ ಈಡೇರಿಕೆಗೆ ಹಣ ಹೊಂದಿಸಲಾಗದ ಮುಜುಗರವನ್ನು ಇದೇ ಸರ್ಕಾರ ಎದುರಿಸಿದ್ದು ನೆನಪಿನ ಭಿತ್ತಿಯಿಂದ ಮಾಸುವ ಮೊದಲೇ ಅಂಥ ಮತ್ತೊಂದು ಅಧ್ಯಾಯ ಬೆಳಕಿಗೆ ಬಂದಿರುವುದು, ಆಳುಗರಲ್ಲಿನ ಉತ್ತರದಾಯಿತ್ವದ ಕೊರತೆಯನ್ನು ಎತ್ತಿತೋರಿಸುತ್ತದೆ ಎನ್ನಲಡ್ಡಿಯಿಲ್ಲ.

ಇಂಥ ಅನಪೇಕ್ಷಿತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮತ್ತೊಂದು ಅಂಶದ ಅವಲೋಕನವೂ ಅಪೇಕ್ಷಣೀಯ. ಪಠ್ಯ ಪರಿಷ್ಕರಣೆ ಅಥವಾ ಬದಲಾವಣೆಯ ನೆಪದಲ್ಲಿ ಉಂಟಾದ ಗೊಂದಲ, ಬಿಸಿಯೂಟ ಯೋಜನೆಯ ಅಸಮರ್ಪಕ ನಿರ್ವಹಣೆಯಿಂದಾಗಿ ಆದ ತೊಂದರೆ ಮತ್ತು ಈಗ ಸಮವಸ್ತ್ರವೇ ‘ವಿಷಮವಸ್ತ್ರ’ವಾಗಿ ಕೊಡುತ್ತಿರುವ ಕಾಟ- ಹೀಗೆ ಜನಪ್ರಿಯತೆಯ ಹುಕಿಗೆ ಬಿದ್ದು ಘೋಷಿಸಲಾಗುವ ಇಂಥ ಎಲ್ಲ ಯೋಜನೆಗಳಿಗೆ ಶಾಲಾಮಕ್ಕಳೇ ಬಲಿಪಶುವಾಗುತ್ತಿರುವುದು ಅನಪೇಕ್ಷಿತ ಬೆಳವಣಿಗೆಯಲ್ಲದೆ ಮತ್ತೇನು? ಸರಿಯಾದ ಕಟ್ಟಡಗಳಿಲ್ಲದ, ಇದ್ದರೂ ಸಾಕಷ್ಟು ಸಂಖ್ಯೆ ಶಿಕ್ಷಕರು ಮತ್ತು ಮೂಲಸೌಕರ್ಯಗಳಿಲ್ಲದ, ಒಂದೊಮ್ಮೆ ಇದ್ದರೂ ವಿದ್ಯಾರ್ಥಿಗಳ ಕ್ಷಾಮವನ್ನು ಎದುರಿಸುತ್ತಿರುವ ಸರ್ಕಾರಿ ಶಾಲೆಗಳು ಹೇರಳವಾಗಿ ಸಿಕ್ಕಾವು. ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಿಂದ ಹೀಗೆ ವಿಮುಖವಾಗುತ್ತಿರುವ ಕಾರಣದಿಂದಾಗಿ ಅಂಥ ಶಾಲೆಗಳನ್ನೇ ಮುಚ್ಚಿಬಿಡುವ ಚಿಂತನೆಗಳು ಕಾಲಾನುಕಾಲಕ್ಕೆ ಹೊಮ್ಮುತ್ತಿರುವುದೂ ದಿಟ. ಇಂಥ ಗಂಭೀರ ಪರಿಸ್ಥಿತಿ ಎದುರಾಗಿದ್ದೇಕೆ? ವಾಸ್ತವವಾಗಿ ತಪ್ಪಾಗಿರುವುದೆಲ್ಲಿ? ಶಿಕ್ಷಣ ವ್ಯವಸ್ಥೆಯನ್ನು- ಗುಣಾತ್ಮಕವಾಗಿಯೂ ಪರಿಮಾಣಾತ್ಮಕವಾಗಿಯೂ- ಆಮೂಲಾಗ್ರವಾಗಿ ಸುಧಾರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಆದ್ಯತಾ ಕ್ರಮಗಳೇನು? ಎಂಬ ವಿಷಯಗಳ ಕುರಿತಾಗಿ ಚಿಂತನೆ ಮಾಡಬೇಕಾದವರು, ಹೀಗೆ ಕಳಪೆ ವಸ್ತುಗಳ ಪೂರೈಕೆಗೆ ಅನುವುಮಾಡಿಕೊಟ್ಟರೆ, ಆಗ ಈಡೇರುವುದು ಕೆಲವರ ಹಿತಾಸಕ್ತಿಯೇ ವಿನಾ ವಿದ್ಯಾರ್ಥಿಗಳದ್ದಲ್ಲ. ‘ಸಬಲ ದೇಹದಲ್ಲಿ, ಸದೃಢ ಚಿಂತನೆಯನ್ನು ಹುಟ್ಟುಹಾಕುವುದೇ ಶಿಕ್ಷಣ’ ಎನ್ನುತ್ತಾನೆ ಖ್ಯಾತ ಶಿಕ್ಷಣವೇತ್ತ ಅರಿಸ್ಟಾಟಲ್. ಆದರೆ ಸರ್ಕಾರ ಇದಕ್ಕೆ ವ್ಯತಿರಿಕ್ತವಾದ ಮಾರ್ಗವನ್ನು ಅಪ್ಪಿದರೆ, ಶಿಕ್ಷಣ ಮತ್ತು ಶಿಕ್ಷಣ ವ್ಯವಸ್ಥೆ ಎರಡೂ ಸೊರಗುತ್ತವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

Leave a Reply

Your email address will not be published. Required fields are marked *

Back To Top