Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ವಿಶ್ವ ವಿಜೇತರಾಗಿ ವಿಜೃಂಭಿಸಿದ ವಿವೇಕಾನಂದ

Saturday, 30.12.2017, 3:02 AM       No Comments

| ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ

ವಿಶ್ವದಾದ್ಯಂತ ಡಿಸೆಂಬರ್ 25ರಂದು ವಿಜೃಂಭಣೆಯಿಂದ ಕ್ರಿಸ್​ವುಸ್ ಆಚರಿಸುತ್ತಾರೆ. ಅಂದು ಭಾರತದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವನ್ನು ‘ಉತ್ತಮ ಆಡಳಿತ’ ದಿನವೆಂದು ಹಲವರು ಆಚರಿಸುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದೇ ಡಿಸೆಂಬರ್ 25ರಂದು ಜನಿಸಿದ ಮಹಾಮಹಿಮ ಮದನ ಮೋಹನ ಮಾಳವೀಯರು ಶಿಕ್ಷಣದಿಂದ ವಂಚಿತರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಭಿಕ್ಷೆ ಬೇಡಿದ ಹಣದಿಂದ ‘ಬನಾರಸ್ ಹಿಂದೂ ವಿಶ್ವವಿದ್ಯಾಲಯ’ ನಿರ್ವಿುಸಿದರು. ಇದಕ್ಕೂ ಮಿಗಿಲಾಗಿ ಡಿಸೆಂಬರ್ 25ರಂದು ಅರಬ್ಬಿಸಮುದ್ರ, ಬಂಗಾಳದ ಕೊಲ್ಲಿ ಹಿಂದೂ ಮಹಾಸಾಗರದೊಂದಿಗೆ ಸೇರುವ ಭಾರತದ ತುಟ್ಟತುದಿಯಾದ ಕನ್ಯಾಕುಮಾರಿಯಲ್ಲಿ ಆ ಸಮುದ್ರದ ಸಂಗಮವನ್ನು ಸಾಹಸದಿಂದ ಈಜಿ ಇಂದು ‘ವಿವೇಕಾನಂದ ರಾಕ್’ ಎಂದೇ ಹೆಸರಾದ ಬಂಡೆಯ ಮೇಲೆ ಮೂರು ದಿನದ ಉಪವಾಸ ಕುಳಿತು ವಿವೇಕಾನಂದರು ಧ್ಯಾನ ಮಾಡಿದ್ದರೆಂದು ಹಲವರಿಗೆ ತಿಳಿದಿಲ್ಲ! ಪ್ರಕ್ಷುಬ್ಧವಾದ ಮನಸ್ಸಿನಿಂದ ಸಮುದ್ರ ರಾಜನಿಗೆ ಸವಾಲೊಡ್ಡಿ ಬಂಡೆ ಹತ್ತಿದ ನಂತರ ಧ್ಯಾನಸ್ಥರಾಗಿ ಕುಳಿತ ಸ್ವಾಮಿ ವಿವೇಕಾನಂದರ ಮುಂದೆ ಇದ್ದ ಸವಾಲೆಂದರೆ ಯಾವ ದಾರಿಯನ್ನು ಆಯ್ದುಕೊಳ್ಳುವುದು, ಇತರ ಸಾಮಾನ್ಯ ಸಂನ್ಯಾಸಿಗಳಂತೆ ಕೇವಲ ತನ್ನ ಆತ್ಮೋದ್ಧಾರದಿಂದ ಮುಕ್ತಿ ಪಡೆಯುವುದೋ ಅಥವಾ ಹಿಂದೂ ಧರ್ಮದ ಮತ್ತು ಭಾರತೀಯರ ಪುನರುತ್ಥಾನದ ದಿಗ್ವಿಜಯಕ್ಕೆ ದಿಟ್ಟ ಹೆಜ್ಜೆ ಇಡುವುದೋ?

ಡಿಸೆಂಬರ್ 25 ಭಾರತೀಯರಿಗೆ ಐತಿಹಾಸಿಕ ದಿನ. ಕಾರಣ ಅಂದು ವಿವೇಕಾನಂದರು ಅತ್ಯಂತ ವಿವೇಚನಾಶೀಲವಾದ ನಿಸ್ವಾರ್ಥ ನಿರ್ಧಾರ ತೆಗೆದುಕೊಂಡ ದಿನ! ಬಂಡೆಗಲ್ಲಿಗೆ ಸಮುದ್ರದ ಅಲೆಗಳು ಎಷ್ಟೇ ಅಪ್ಪಳಿಸಿದರೂ ಅದು ಅಲ್ಲಾಡುವುದಿಲ್ಲವೋ ಹಾಗೆ ಕಷ್ಟ ಕಾರ್ಪಣ್ಯ ಎಷ್ಟೇ ಬಂದರೂ ಎದೆಗುಂದದೆ ಹಿಂದುತ್ವದ ವಿರಾಟದರ್ಶನವನ್ನು ವಿಶ್ವಕ್ಕೆ ಪರಿಚಯ ಮಾಡಲು ಭದ್ರಬುನಾದಿ ಹಾಕಲು ನಿರ್ಧರಿಸಿದ ಐತಿಹಾಸಿಕ ದಿನ. ಸಾಮಾನ್ಯವಾಗಿ ಯಾವುದೇ ವ್ಯಕ್ತಿ ವಿಕಸಿತವಾಗಿ ಸಾಧನೆಗೈಯಲು ತಂದೆ-ತಾಯಿಯ ಆಶೀರ್ವಾದ ಮತ್ತು ಸದ್ಗುರುವಿನ ಮಾರ್ಗದರ್ಶನ ಬಹಳ ಮುಖ್ಯ. ವಿವೇಕಾನಂದರಿಗೆ ಸ್ವಇಚ್ಛೆ, ಶ್ರದ್ಧೆ, ಶ್ರಮದೊಂದಿಗೆ ಉತ್ತಮ ಸಂಸ್ಕಾರ ಸಿಕ್ಕಿತ್ತು. ಮಗುವಾಗಿದ್ದಾಗ ಒಂದು ದಿನ ನರೇಂದ್ರ ತಂದೆ-ತಾಯಿಗಳ ಮಧ್ಯೆ ಕುಳಿತು ಸಾರೋಟಿನಲ್ಲಿ ಕಲಕತ್ತೆಯ ರಸ್ತೆಯಲ್ಲಿ ಹೋಗುತ್ತಿದ್ದಾಗ; ಎಲ್ಲ ತಂದೆ-ತಾಯಿಗಳಂತೆ ಅವರ ತಂದೆ ಸಹಜವಾಗಿ ಕೇಳಿದರು-‘ಮಗು ನರೇಂದ್ರ ನೀನು ದೊಡ್ಡವನಾಗಿ ಏನಾಗುತ್ತೀಯಪ್ಪ?’ ಅದಕ್ಕೆ ನರೇಂದ್ರ ಥಟ್ ಅಂತ ತುಂಬ ಚೂಟಿಯಾಗಿ ‘ಕುದುರೆ ಗಾಡಿ ಓಡಿಸುವವನಾಗುತ್ತೇನೆ!’ ಎಂದರು. ಮಗ ದೊಡ್ಡವನಾಗಿ ಕಲೆಕ್ಟರೋ ಬ್ಯಾರಿಸ್ಟರೋ ಆಗುತ್ತಾನೆಂದು ಕನಸು ಕಾಣುತ್ತಿದ್ದ ಸಾಹುಕಾರ ತಂದೆಗೆ ನಿರಾಶೆ ಹತಾಶೆ ಆಗಿ ಸಿಟ್ಟಿನಿಂದ ಮಗುವಿಗೆ ಜೋರಾಗಿ ಒಂದು ಏಟುಕೊಟ್ಟರು! ಮಗುವಿನ ಬೆನ್ನು ಸವರುತ್ತ ಕರುಣೆಯಿಂದ ನೋಡಿದ ತಾಯಿ ಗಂಡನೊಂದಿಗೆ ವಾದಿಸಲಿಲ್ಲ. ಮನೆಗೆ ಹೋಗಿ ಕೃಷ್ಣ ಪರಮಾತ್ಮ ಗೀತೋಪದೇಶ ಮಾಡುವ ಚಿತ್ರ ತೋರಿಸಿ-‘ಮಗು ನರೇಂದ್ರ ನೀನು ಸಾರಥಿ ಆಗುವುದಾದರೆ ಖಂಡಿತ ಸಾರಥಿಯಾಗು. ಆದರೆ ಕೇವಲ ಕುದುರೆಗಾಡಿ ಓಡಿಸುವ ಸಾಮಾನ್ಯ ಸಾರಥಿಯಲ್ಲ. ಕೃಷ್ಣ ಪರಮಾತ್ಮನಂತೆ ವಿಶ್ವಕ್ಕೆ ಮಾರ್ಗದರ್ಶನ ಮಾಡುವ ಮಹಾನ್ ಸಾರಥಿಯಾಗು ಕಂದ’ ಎಂದು ತಲೆ ಸವರಿದರು!

ಮುಂದೆ ನರೇಂದ್ರ ಕಾಲೇಜಿನಲ್ಲಿ ಓದುತ್ತಿರುವಾಗ ಸ್ಕೋಟಿಶ್ ಚರ್ಚ್ ಕಾಲೇಜಿನ ಪ್ರಾಂಶುಪಾಲರಾದ ಹೇಸ್ಟೀ ನರೇಂದ್ರನ ಬುದ್ಧಿಮತ್ತೆ ಕಂಡು ಪರಮಾಶ್ಚರ್ಯದಿಂದ ಹೇಳುತ್ತಾರೆ-‘ನಾನು ವಿಶ್ವಾದ್ಯಂತ ಪ್ರವಾಸ ಮಾಡಿದ್ದೇನೆ. ಇಂಥ ಅಸಾಧಾರಣ ಬುದ್ಧಿಮತ್ತೆ ಇರುವ ಇನ್ನೊಬ್ಬ ವಿದ್ಯಾರ್ಥಿಯನ್ನು ನಾನು ಜರ್ಮನಿಯ ವಿಶ್ವವಿದ್ಯಾಲಯದಲ್ಲೂ ಕಂಡಿಲ್ಲ. ಈ ನರೇಂದ್ರ ಜೀವನದಲ್ಲಿ ತನ್ನ ಛಾಪು ಖಂಡಿತ ಮೂಡಿಸುತ್ತಾನೆ’ ಎಂದು ಉದ್ಗರಿಸಿದ್ದರು. ಕಣಿ ಹೇಳಿದಂತಿದ್ದ ಪ್ರಾಧ್ಯಾಪಕರ ಮಾತಿನಂತೆ ನರೇಂದ್ರ ಅತ್ಯಂತ ಮೇಧಾವಿಯಾದರು. Encylopedia Britanicaದ ಹತ್ತು ಸಂಪುಟಗಳನ್ನು ಓದಿ ಮುಗಿಸಿದ ಅವರು ಯಾವ ಪುಟದಿಂದ ಏನು ಕೇಳಿದರೂ ಹೇಳುವ ಬುದ್ಧಿಶಕ್ತಿ ಮತ್ತು ಜ್ಞಾಪಕಶಕ್ತಿ ಹೊಂದಿದ್ದರು. ಇಂಥ ಮೇಧಾವಿ ನರೇಂದ್ರರು ಅಧ್ಯಾತ್ಮದ ದಾರಿಯಲ್ಲಿ ಹೋಗಲು ರಾಮಕೃಷ್ಣ ಪರಮಹಂಸರ ಶಿಷ್ಯರಾಗಬೇಕೆಂದಾಗ ಅವರ ತಂದೆಯವರ ದೇಹಾಂತವಾಯಿತು. ಮನೆಯ ಭಾರ ಹೊತ್ತು ಗೃಹಸ್ಥನಾಗಬೇಕೋ, ಎಲ್ಲ ತ್ಯಜಿಸಿ ಸಂನ್ಯಾಸಿಯಾಗಬೇಕೋ? ಎಂಬ ಆಯ್ಕೆ ಎದುರಾದಾಗ ನರೇಂದ್ರ ಸ್ವಾರ್ಥ ಕಡೆಗಾಣಿಸಿ ನಿರ್ಮಲ ನಿರಂಜನ ಸ್ವರೂಪ ಪರಮಾತ್ಮನ ದರ್ಶನಕ್ಕೆ ಹಾತೊರೆಯುತ್ತ ರಾಮಕೃಷ್ಣ ಪರಮಹಂಸರ ಬಳಿ ಹೋಗುವ ನಿರ್ಧಾರ ಮಾಡಿದರು!

ವಿವೇಕಾನಂದರು-‘ಜಗತ್ತು ಒಂದು ವಿಶಾಲವಾದ ವ್ಯಾಯಾಮ ಶಾಲೆ. ಇಲ್ಲಿ ನಾವು ಗಟ್ಟಿಯಾಗಲು ಬರುತ್ತೇವೆ’ ಎಂದರು. ವಿವೇಕಾನಂದರ ಪ್ರಕಾರ ಗಟ್ಟಿಯೆಂದರೆ ಕೇವಲ ಶಾರೀರಿಕವಾಗಿ ಅಲ್ಲ. ಬೌದ್ಧಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ನಮ್ಮನ್ನು ಗಟ್ಟಿಗೊಳಿಸುವುದೇ ಈ ಬದುಕೆಂಬ ಗರಡಿಮನೆ! ಅವರ ಭಾಷಣದಲ್ಲಿಯೇ ಹೇಳಿದಂತೆ-“Throw away all the weakness. tell your body that it is strong, tell your mind it is strong and llove unbounded faith anf hope in yourself.’ ಈ ಇಂಥ ಬೋಧನೆ ಮಕ್ಕಳು ಚಿಕ್ಕವರಿದ್ದಾಗಿನಿಂದಲೇ ಪ್ರಾರಂಭಿಸಬೇಕು.

ಸ್ವಾಮಿ ವಿವೇಕಾನಂದರು-“Fill power is within you, you can do anything and everything’ ಎಂದು, ನಾವು ಸರ್ವಶಕ್ತರು ಎಂದು ಸ್ವತಃ ತಾವೇ ಸಾಧಿಸಿ ತೋರಿಸಿದ್ದರು. ಯುವಕರಲ್ಲಿ ಪರಿವರ್ತನೆ ತರಲು ಪ್ರಯತ್ನಿಸಿದ ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿ 1893ರಲ್ಲಿ ನಡೆದ ‘World’s parliment of religion’ನಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವಂಥ ಭಾಷಣ ಮಾಡಿ ವಿಶ್ವದ ಗಮನ ಭಾರತದ ಕಡೆಗೆ ಸೆಳೆದರು. ಸಾಮಾನ್ಯವಾಗಿ ಎಲ್ಲ ಭಾಷಣಕಾರರು- Ladies and gentleman ಅಂತ ಪ್ರಾರಂಭಿಸಿದರೆ “Sisters and brothers of America’ ಅಂತ ಪ್ರಾರಂಭಿಸಿ ಭಾರತದ ಭ್ರಾತೃತ್ವ ಮೆರೆದರು. ಕಿವಿಗಡಗಿಚ್ಚುವಂತೆ ತಟ್ಟಿದ ಚಪ್ಪಾಳೆ ಅವರ ಆದರಾತಿಥ್ಯವನ್ನು ಮೆಟ್ಟಿ ಅವರಿಗೆ ಧನ್ಯವಾದಗಳನ್ನು ವೈಯಕ್ತಿಕವಾಗಿ ಹೇಳದೆ “I thank you in the name of the most ancient order of Monks in the world. I thank you in the name of mother religion. I thank you in the name of million and million of hindu people of all classes and sects’ ’ ಅಂತ ಸನಾತನ ಧರ್ಮದ ಮಹತ್ವ ಎತ್ತಿ ಹಿಡಿದರು.

ಮುಂದೆ ಸ್ವಾಭಿಮಾನದಿಂದ ನಾನೊಬ್ಬ ಹಿಂದು ಅಂತ ಹೇಳಿ‘ಹಿಂದು ಧರ್ಮ ವಿಶ್ವಕ್ಕೆ ಸಹಿಷ್ಣುತೆ ಮತ್ತು ಎಲ್ಲರನ್ನೂ ತಮ್ಮವರಾಗಿಸಿಕೊಂಡು ಬದುಕುವುದನ್ನು ಕಲಿಸುತ್ತದೆ. ನಾನು ಚಿಕ್ಕ ಹುಡುಗನಿದ್ದಾಗಿನಿಂದ ಹೇಳುತ್ತ ಬಂದ ಶ್ಲೋಕ ‘ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ. ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಗಚ್ಛತಿ’ ಅನ್ನುವ ಹಾಗೆ ವಿಶ್ವದ ಯಾವುದೇ ಮೂಲೆಯಲ್ಲಿ ಮಳೆಸುರಿದರೂ ಕೊನೆಗೆ ಅದು ಸಮುದ್ರ ಸೇರುವಂತೆ ಯಾವುದೇ ದೇವರ ಹೆಸರಿನಲ್ಲಿ ಪ್ರಾರ್ಥನೆ ಸಲ್ಲಿಸಿದರೂ ಅದು ಒಬ್ಬನೇ ಪರಮಾತ್ಮರಿಗೆ ತಲುಪುತ್ತದೆ. ಆದಿ ಅಂತ್ಯವಿಲ್ಲದ ವೇದಗಳಿಂದ ಬಂದ ಜ್ಞಾನದ ಭಂಡಾರವನ್ನು ಹಲವಾರು ಜ್ಞಾನಿಗಳಾದ ಋಷಿಮುನಿಗಳು ವಿಶ್ವಕ್ಕೆ ದಯಪಾಲಿಸಿದ್ದಾರೆ. ಇಂಥ ಹಿಂದೂ ಧರ್ಮ ಅದ್ವೈತ ಸಿದ್ಧಾಂತದ ಮೇಲೆ ನಿಂತಿದೆ. ಪರಮಾತ್ಮನ ಅಂಶ ಎಲ್ಲ ಜೀವಾತ್ಮದಲ್ಲಿರುವುದರಿಂದ ಎಲ್ಲರಲ್ಲೂ ದೈವತ್ವವಿದೆ’ ಎಂದು ತಿಳಿಸಿದರು. ‘ನಾನು’ ಅಂದರೆ ಯಾರು ಅಂತ ಅರಿಯುವುದೇ ಆತ್ಮಜ್ಞಾನ ಎಂದು ವಿಶ್ವಕ್ಕೆ ವಿವರಿಸಿದ ವಿವೇಕಾನಂದರು- ‘ನಾನು ಅಂದರೆ ಕೇವಲ ಶರೀರವಲ್ಲ. ನನ್ನಲ್ಲಿರುವ ಆತ್ಮ. ಈ ಆತ್ಮಕ್ಕೆ ಸಾವಿಲ್ಲ. ಬೆಂಕಿಯಲ್ಲಿ ಸುಡುವುದಿಲ್ಲ. ನೀರಲ್ಲಿ ಮುಳುಗುವುದಿಲ್ಲ ಖಡ್ಗದಿಂದ ಕಡಿಯಲಾಗದ ಚೈತನ್ಯವೇ ಆತ್ಮ’ ಎಂದು ವಿವರಿಸಿದರು. ಧ್ಯಾನ ಮಾಡುವುದರಿಂದ ಮೂರ್ಖರೂ ಸಾಧುಗಳಾಗಬಹುದು. ಆದರೆ ದುರಂತವೆಂದರೆ ಮೂರ್ಖರು ಧ್ಯಾನಮಾಡುವುದೇ ಇಲ್ಲ. ಆದ್ದರಿಂದ ಅವರ ಆತ್ಮೋದ್ಧಾರವಾಗುವುದಿಲ್ಲ ಎಂದರು.

ಅದೇ ಭಾಷಣದಲ್ಲಿ ವಿವೇಕಾನಂದರು- ‘ಅಮೆರಿಕದ ಬಂಧುಗಳೇ ನೀವು ಭಾರತದಾದ್ಯಂತ ಚರ್ಚ್ ನಿರ್ವಿುಸುತ್ತಿದ್ದೀರಿ. ಆದರೆ ಪೂರ್ವದಲ್ಲಿ ಧರ್ಮದ ಕೊರತೆಯಿಲ್ಲ. ಅಲ್ಲಿ ಕೊರತೆ ಇರುವುದು ಆಹಾರದ್ದು. ಹಸಿವಿನಿಂದ ಬಾಯೋಣಗಿದ ಭಾರತೀಯರಿಗೆ ಇರುವುದು ಹೊಟ್ಟೆಗೆ ಹಿಟ್ಟಿನ ಚಿಂತೆೆ. ನಮಗೆ ನಿಮ್ಮ ಧರ್ಮದ ಬೋಧನೆ ಬೇಡ. ಹಸಿವು, ಬಡತನ ನೀಗಿಸುವ ಇಚ್ಛಾಶಕ್ತಿ. ಮಿಶನರಿಗಳನ್ನು ಕಳುಹಿಸುವ ನೀವು ನಿಮ್ಮಬೋಧನೆ ನಮಗೆ ಬೇಕಿಲ್ಲವೆಂದು ಅರಿಯಿರಿ’ ಎಂದಾಗ ಕಿವಿಗಡಗಿಚ್ಚುವಂತೆ ಜನ ಚಪ್ಪಾಳೆ ತಟ್ಟಿದರು!

ಸ್ವಾರ್ಥ ತ್ಯಜಿಸಿ ನಿಸ್ವಾರ್ಥ ಬುದ್ಧಿಯಿಂದ ಹತ್ತು ಹಲವು ಕಡೆಗೆ ಭಾಷಣ ಮಾಡಿ ವಿಶ್ವಕ್ಕೆ ಭಾರತ ಧಾರ್ವಿುಕ ಗುರುವೆಂದು ಅರಿವು ಮೂಡಿಸಿದ ವಿವೇಕಾನಂದರು ವಿಶ್ವವಿಜೇತರಾದರು. ಇಂದಿಗೂ ಯುವ ಜನರ ಸ್ಪೂರ್ತಿಯಾದ ಅವರು ಕೇವಲ ಧಾರ್ವಿುಕ ಸಂನ್ಯಾಸಿಯಾಗದೆ ದೇಶಪ್ರೇಮ ಉಕ್ಕಿ ಹರಿಯುವಂತೆ ಮಾಡಿ ವಿಜೃಂಭಿಸಿದರು.”Arise, awake, sleep no more within each of you there is the power to remove all wants andall miseries. . ಇದನ್ನು ನಂಬಿ ಆಗ ಆ ಅಗಾಧ ಶಕ್ತಿ ಪ್ರಕಟವಾಗುತ್ತದೆ ಎಂದು ಮಹತ್ ಸಾಧನೆಯನ್ನು ಸಾಕ್ಷಾತ್ಕಾರಗೊಳಿಸುವ ಸನ್ಮಾರ್ಗ ತೋರಿಸಿದ ದಿವ್ಯ ಚೈತನ್ಯ ವಿಶ್ವವಿಜೇತರಾಗಿ ವಿಜೃಂಭಿಸಿದ ವಿವೇಕಾನಂದರ ಸ್ವಾಭಿಮಾನ, ದೇಶಪ್ರೇಮ ನಾವು ಭಾರತೀಯರು ಭಾರತಮಾತೆಯ ಮಕ್ಕಳೆಂಬ ಭಕ್ತಭಾವ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *

Back To Top