Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ವಿಶ್ವ ಆರೋಗ್ಯಕ್ಕೆ ಶರಣರ ಸಂದೇಶ

Saturday, 21.10.2017, 3:04 AM       No Comments

| ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ

ಬದುಕಿನ ಪ್ರತಿ ಆಯಾಮವನ್ನೂ ಆಧ್ಯಾತ್ಮೀಕರಣಗೊಳಿಸಿದ 12ನೇ ಶತಮಾನದ ಶರಣರು ವಿಶ್ವಕ್ಕೇ ಮಾದರಿಯಾದ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಸಕಾರಾತ್ಮಕ ಸಂದೇಶಗಳನ್ನು ನೀಡಿದ್ದಾರೆ. ‘ಆಧ್ಯಾತ್ಮೀಕರಣಗೊಂಡ ಶರಣ ಸಂಸ್ಕೃತಿಗೂ ವೈಜ್ಞಾನಿಕೀಕರಣಗೊಂಡ ಆಧುನಿಕ ಆರೋಗ್ಯದ ಪರಿಕಲ್ಪನೆಗೂ ಎಲ್ಲಿಯ ಸಂಬಂಧ?’ ಎಂದು ಕೆಲವರು ಪರಮಾಶ್ಚರ್ಯ ಪಡಬಹುದು! ‘ಯಲ್ಲಮ್ಮನ ಗುಡ್ಡಕ್ಕೂ ಮುಲ್ಲಾನಿಗೂ ಏನು ಸಂಬಂಧ?’ ಎಂದು ಕೇಳಿದಂತಲ್ಲ! ಕಾರಣ 12ನೇ ಶತಮಾನದ ಶರಣರ ಚಿಂತನೆ 21ನೇ ಶತಮಾನದ ವೈದ್ಯಕೀಯ ವಿದ್ಯಮಾನಗಳಿಗಿಂತ ವಿಶೇಷ, ವಿಶಿಷ್ಟವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯಾನದ ಪ್ರಕಾರ, ಆರೋಗ್ಯವಂತರು ಎಂದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಫಲಕಾರಿ ಜೀವನ ನಡೆಸುವಂಥ ಸಾಮರ್ಥ್ಯವಿರುವವರು. ಅಂದರೆ ರೋಗವಿಲ್ಲದವರಷ್ಟೇ ಆರೋಗ್ಯವಂತರಲ್ಲ. ಜಿಮ್ೆ ಹೋಗಿ ಶರೀರ ಗಟ್ಟಿಮಾಡಿಕೊಂಡವರೂ ಅಲ್ಲ. ಉತ್ತಮ ಕೆಲಸದಲ್ಲಿದ್ದು ಕೈತುಂಬ ಹಣಗಳಿಸುವಂಥವರೂ ಅಲ್ಲ! ಸ್ವಾರ್ಥಿಗಳಾಗಿದ್ದು ದಾದಾಗಿರಿ ಮಾಡುವವರಾಗಲಿ, ಕಪು್ಪಹಣ ಗಳಿಸಿ ಸ್ವಿಸ್ ಬ್ಯಾಂಕಿನಲ್ಲಿಡುವವರಾಗಲೀ ಆರೋಗ್ಯವಂತರಲ್ಲ. ಅಂದರೆ, ಶಾರೀರಿಕವಾಗಿ, ಬೌದ್ಧಿಕವಾಗಿ, ಆರ್ಥಿಕವಾಗಿ ಬಲಾಢ್ಯರಾಗಿದ್ದರೂ, ಸಾಮಾಜಿಕವಾಗಿ ಫಲಕಾರಿ ಜೀವನ ನಡೆಸದಿದ್ದರೆ ಅವರು ಆರೋಗ್ಯವಂತರಲ್ಲ! ಶರಣ ಸಂಸ್ಕೃತಿಯ ಆಧಾರಸ್ತಂಭಗಳಾದ ಸತ್ಯ ಶುದ್ಧ ಕಾಯಕದಿಂದ ಹಣಸಂಪಾದಿಸಿ ದಾಸೋಹ ಮಾಡಿ ಸಮಾಜ ಉದ್ಧರಿಸುವವರು ಆರೋಗ್ಯವಂತರು!

’ಗಟ್ಟk ಜಿಠ ಡಿಟ್ಟಠಜಜಿಟ’ ಎಂಬ ಪ್ರಸಿದ್ಧ ಮಾತಿಗಿಂತಲೂ ಅದ್ಭುತವಾದ್ದು ಶರಣರ ‘ಸತ್ಯ ಶುದ್ಧ ಕಾಯಕ’. ಗಟ್ಟk ಅಂದರೆ ಕೆಲಸ ಮಾಡುವಾಗ ಅದು ಸಾಮಾನ್ಯವಾಗಿ ಹೊಟ್ಟೆಪಾಡಿಗೆ ಇರುವುದರಿಂದ ಅಲ್ಲಿ ಸ್ವಾರ್ಥವಿದ್ದು, ಕೆಲವೊಮ್ಮೆ ಮೋಸ, ವಂಚನೆ, ಲಂಚಗಳಿಂದ ತುಂಬಿರಬಹುದು. ಎಷ್ಟೋ ಜನ ಗಟ್ಟಠಜಜಿಟ ಅಂದರೆ ಪೂಜೆ ಮಾಡುವುದನ್ನು ವ್ಯಾಪಾರೀಕರಣಗೊಳಿಸಿ ಹಣದಿಂದ ಪೂಜೆ, ದರ್ಶನ, ಪ್ರಸಾದ ಅಷ್ಟೇ ಏಕೆ, ದೇವರೊಂದಿಗೆ ‘ಡೀಲ್’ ಮಾಡಿದಂತೆ ‘ಭಗವಂತ ನನಗೆ ಕೆಲಸ ಸಿಕ್ಕರೆ ನಿನಗೆ ಜೋಡುಗಾಯಿ ಒಡೆಸುತ್ತೇನೆ’, ‘ದೊಡ್ಡ ಹುದ್ದೆ ಪಡೆದರೆ 108 ಕಾಯಿ ಒಡೆಸುತ್ತೇನೆ’ ಎಂದೆಲ್ಲ ಬೇಡಿಕೊಳ್ಳುತ್ತಾರೆ! ಆದರೆ ಅಧ್ಯಾತ್ಮೀಕರಣಗೊಂಡ ಕೆಲಸವನ್ನು ‘ಕಾಯಕ’ ಎಂದರು ಶರಣರು. ಅಂದರೆ ದೈವೀಸ್ವರೂಪವಾದ ಸಮಾಜಕ್ಕೆ ದಾಸನಾಗಿ ದುಡಿಯುವುದು ‘ಕಾಯಕ’. ಇದರಲ್ಲಿ ಸ್ವಾರ್ಥ ಲವಲೇಶವೂ ಇಲ್ಲ. ಯಾವ ಕೆಲಸವೂ ಚಿಕ್ಕದು ಅಥವಾ ದೊಡ್ಡದಲ್ಲ. ಪ್ರತಿಯೊಂದೂ ಸಮಾಜಕ್ಕಾಗಿ ಎಂದು ಮಾಡಿದಾಗ ಅದರಲ್ಲಿ ಸತ್ಯ, ಶುದ್ಧ, ಶ್ರದ್ಧೆ ಇದ್ದು ಕಾಯಕವಾಗುತ್ತದೆ. ಯಾವ ಕೆಲಸವೂ ಮೇಲಲ್ಲ, ಕೀಳಲ್ಲ, ಕ್ಷುಲ್ಲಕವೂ ಅಲ್ಲ. ಆದರೆ ಕೆಲಸದಲ್ಲಿ ‘ಹುಸಿ’ ಇರಬಾರದು. ‘ಅಸಿಯಾಗಲಿ, ಕೃಷಿಯಾಗಲಿ, ವಾಚಕ ವಾಣಿಜ್ಯ ಮಸಿಯಾಗಲಿ ಮಾಡುವಲ್ಲಿ ಹುಸಿ ಇಲ್ಲದಿರಬೇಕು’. ಆದರೆ ಕಾಯಕ ಮಾಡಲು ಈ ‘ಕಾಯ’ ಗಟ್ಟಿಯಾಗಿರಬೇಕಲಲ್ಲವೇ? ಇದನ್ನು ಶರಣರು ದೇವನೊಲಿಸಲು ಬಂದ ‘ಕಾಯಪ್ರಸಾದ’ವೆಂದರು. ಅಂದರೆ ಕಾಯಕ ದಾಸೋಹ ಮಾಡಲು ಬೇಕಾದ ಈ ಶರೀರ ಕೇವಲ ಮೂಳೆ ಮಾಂಸದ ತುಂಡಲ್ಲ, ನಶ್ವರವಲ್ಲ. ಈ ಕಾಯ ದೇವರನ್ನು ಒಲಿಸಿಕೊಳ್ಳಲು ದೇವರಿಗೆ ಅರ್ಪಿಸಲು ಬಂದ ‘ಕಾಯಪ್ರಸಾದ’ವೆಂದರು. ಇದನ್ನು ಕೆಡಿಸಿಕೊಳ್ಳದೇ ಉಳಿಸಿಕೊಳ್ಳಿರಿ ಎಂದರು.

ಅಣ್ಣ ಬಸವಣ್ಣ ಒಂದು ಹೆಜ್ಜೆ ಮುಂದೆ ಹೋಗಿ ‘ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ’ ಎಂದರು. ಅಂದರೆ ಕಂಬದಂತೆ ಭಾರ ಹೊರಬೇಕಾದ ನಮ್ಮ ಕಾಲು ಗಟ್ಟಿಮುಟ್ಟಾಗಿರಬೇಕು. ತಂಬಾಕು, ಬೀಡಿ ಸೇದಿ ಕಾಲಿಗೆ ರಕ್ತಚಲನೆ ಕಡಿಮೆ ಆಗಿ ಕಾಲು ಕೊಳೆತು ಕತ್ತರಿಸಿಕೊಳ್ಳುವ ಪ್ರಮೇಯ ಬರದಂತೆ ಪ್ರತಿನಿತ್ಯ ಓಡಾಟ, ವಾಯುವಿಹಾರ ಮಾಡಿ ಕಾಲನ್ನು ಗಟ್ಟಿಯಾಗಿಸಿಕೊಳ್ಳಬೇಕು. ಕಾಲು ಓಲಾಡದಂತೆ ಇರಬೇಕೆಂದರೆ ಮದ್ಯಪಾನ, ಧೂಮಪಾನ ಮಾಡಬಾರದು! ದೇಗುಲದಂತೆ ದೇಹ ಶುಚಿಯಾಗಿರಬೇಕೆಂದರೆ ಪ್ರತಿನಿತ್ಯ ಸ್ನಾನಮಾಡಿ ಚರ್ಮವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಚರ್ಮ ಪಂಚೇಂದ್ರಿಯಗಳಲ್ಲಿ ಅತ್ಯಂತ ದೊಡ್ಡದು, ಭದ್ರಕೋಟೆಯಂತೆ ಶರೀರವನ್ನು ರಕ್ಷಿಸುವಂಥದ್ದು. ಅದರಲ್ಲಿ ಸ್ವಲ್ಪ ಗಾಯವಾದರೂ ರೋಗಾಣುಗಳು ಶರೀರ ಪ್ರವೇಶಿಸಿ ನಂಜು ಪಸರಿಸುವಂತೆ ಮಾಡುತ್ತವೆ. ಹೀಗೆ ಸೆಪ್ಟಿಕ್ ಆಗದಂತಾಗಲು ಗಾಯವಾದಾಗ ತಕ್ಷಣ ಸೋಪಿನಿಂದ ತೊಳೆದು ಆಂಟಿಸೆಪ್ಟಿಕ್ ಬಳಸಿ ಗಾಯಕ್ಕೆ ಪಟ್ಟಿಕಟ್ಟಿ ಧೂಳು, ರೋಗಾಣು ಶರೀರ ಸೇರದಂತೆ ನೋಡಿಕೊಳ್ಳಬೇಕು.

ಇನ್ನು ‘ಶಿರ ಹೊನ್ನ ಕಳಶ’ವಾಗಬೇಕೆಂದರೆ ಮನಸ್ಸು ಶಾಂತವಾಗಿ ಸದ್ಭಕ್ತಿ, ಸದ್ಭಾವನೆ, ಸದ್ವಿಚಾರಗಳಿಂದ ತುಂಬಿರಬೇಕು. ಇದರಿಂದ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ. ಆದರೆ ದುರಂತವೆಂದರೆ ಇಂದು ಮಾನಸಿಕ ಒತ್ತಡ, ದುಗುಡದಿಂದ ಆಗುವ ಸಾಂಕ್ರಾಮಿಕವಲ್ಲದ ರೋಗಗಳಿಂದ ಹೆಚ್ಚೆಚ್ಚು ಜನ ಸಾಯುತ್ತಿದ್ದಾರೆ. ಇದಕ್ಕೆ ‘ಸೈಕೋಸೊಮ್ಯಾಟಿಕ್ ಡಿಸಾರ್ಡರ್’ ಅನ್ನುತ್ತೇವೆ. ಇದನ್ನು ಅರಿತ ವೈದ್ಯ ಸಂಗಣ್ಣ ಹೇಳುತ್ತಾರೆ- ‘ಕೇವಲ ಮೈಗೆ ಮದ್ದು ಕೊಡುವವನು ವೈದ್ಯನಲ್ಲ’. ಬಹಿರಂಗ ಚಿಕಿತ್ಸೆ ಕೇವಲ ತಾತ್ಕಾಲಿಕ, ಅಂತರಂಗದ ಚಿಕಿತ್ಸೆಯಿಂದ ರೋಗ ಬೇರುಸಹಿತ ಕಿತ್ತುಹೋಗುತ್ತದೆ! ಉದಾಹರಣೆಗೆ ನಾವಿಂದು ಹೃದಯಾಘಾತವಾದ ವ್ಯಕ್ತಿಗೆ ಸಾವಿರಾರು ರೂ. ಖರ್ಚುಮಾಡಿ ಹೆಪು್ಪಗಟ್ಟಿದ ರಕ್ತ ಕರಗಿಸಲು ಠಠ್ಟಿಛಿಟಠಿಟkಜ್ಞಿಚಠಛಿ ಇಂಜೆಕ್ಸನ್ ಕೊಡುತ್ತೇವೆ. ಇಲ್ಲವೇ ಲಕ್ಷಾಂತರ ರೂ. ಖರ್ಚುಮಾಡಿ ಆಂಜಿಯೋಪ್ಲಾಸ್ಟಿ ಮಾಡಿ ಸ್ಟೆಂಟ್ ಅಳವಡಿಸುತ್ತೇವೆ ಅಥವಾ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡುತ್ತೇವೆ. ಇವೆಲ್ಲ ತಾತ್ಕಾಲಿಕ ಎನ್ನುವುದು ವೈದ್ಯರಿಗೆ ಖಚಿತವಾಗಿದೆ. ಆದರೆ ರೋಗಿ ತನ್ನ ಜೀವನಶೈಲಿ ಬದಲಾಯಿಸಿಕೊಳ್ಳದೇ ಮಾನಸಿಕ ದೌರ್ಬಲ್ಯದಿಂದ ಮಿತಿಮೀರಿ ತಿಂದು ಸ್ಥೂಲಕಾಯನಾಗಿ, ಸಾರಾಯಿ ಕುಡಿದು, ಸಿಗರೇಟು ಸೇದಿ, ಸದಾ ಸಿಟ್ಟುಮಾಡಿಕೊಂಡು ಸೇಡು ತೀರಿಸಿಕೊಳ್ಳುವುದನ್ನೇ ಯೋಚಿಸುತ್ತಿದ್ದರೆ ಮಾಡಿದ ಚಿಕಿತ್ಸೆ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ವ್ಯರ್ಥವಾಗುತ್ತದೆ. ಇದನ್ನೇ ಸರ್ವಜ್ಞ ಹೇಳುತ್ತಾನೆ- ‘ವ್ಯಸನದಲಿ ಈ ದೇಹ ಮಸಣವನು ಕಾಣುವುದು, ವ್ಯಸನ ಬಿಟ್ಟು ಹಸನಾಗಿ ದುಡಿದರೆ, ನಿಜಕ್ಕೂ ಆಶನವಸನಗಳುಂಟೆ ಸರ್ವಜ್ಞ’.

ದುಃಖ ಮತ್ತು ದುಶ್ಚಟ ಎರಡೂ ಆರೋಗ್ಯಕ್ಕೆ ಹಾನಿಕಾರಕ. ದುಃಖ-ದುಮ್ಮಾನ ಬರುವುದೇ ನಿರಾಸೆಯಾದಾಗ. ಸದಾ ಚಿಂತೆ ಮಾಡುವವರು ಚಿಂತೆಯಿಂದ ಚಿತೆಕಡೆಗೆ ಬೇಗ ಸಾಗುತ್ತಾರೆ. ಶರಣರು ಅಧ್ಯಾತ್ಮದಲ್ಲಿ ಶೂನ್ಯ ಸಂಪಾದನೆಯ ವಿಷಯ ತಿಳಿಸಿದರೆ, ಇಂದಿನವರು ಚಿಕ್ಕವಯಸ್ಸಿನಲ್ಲೇ ಹೃದಯಾಘಾತ, ಪಾರ್ಶ್ವವಾಯುವಿನಿಂದ ಪ್ರಾಣಕಳೆದುಕೊಂಡು ಬದುಕನ್ನೇ ಶೂನ್ಯ ಮಾಡಿಕೊಳ್ಳುತ್ತಿದ್ದಾರೆ. ಚಿಂತೆಗಳ ಸರಮಾಲೆಯನ್ನು ವಿವರಿಸುತ್ತ ಅಂಬಿಗರ ಚೌಡಯ್ಯ ಚಿಂತೆಬಿಟ್ಟು ಚಿಂತನಶೀಲರಾಗಲು ತಿಳಿಸುತ್ತಾರೆ-

‘ಬಡತನಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ

ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ

ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕುವ ಚಿಂತೆ

ಬದುಕಾದರೆ ಕೇಡಿನ ಚಿಂತೆ, ಕೇಡಾಗದಿರೆ ಮರಣದ ಚಿಂತೆ

ಇಂತೀ ಹಲವು ಚಿಂತೆಯಲ್ಲಿಪ್ಪವರನು ಕಾಣೆನೆಂದಾತ

ನಿಜ ಶರಣ ಅಂಬಿಗರ ಚೌಡಯ್ಯ’

-ಅಂದರೆ ಭಯನಿವಾರಕ ಶಿವನ ಚಿಂತನೆ ಅಂದರೆ ಧ್ಯಾನ ಆಡಿದರೆ ಮಿದುಳಿನಿಂದ ಉತ್ಪತ್ತಿ ಆಗುವ ’ಊಛಿಛ್ಝಿ ಎಟಟಛ ಏಚ್ಟಞಟ್ಞಛಿ’ಗಳಿಂದ ಮನಸ್ಸು ನಿರಾಳವಾಗಿ ಹೃದಯ, ಶರೀರ ಎರಡೂ ಗಟ್ಟಿಯಾಗುತ್ತವೆ ಎಂದು ಇಂದು ವಿಜ್ಞಾನ ತಿಳಿಸುತ್ತದೆ. ಅಷ್ಟೇ ಅಲ್ಲ, ನಾಸ್ತಿಕರಿಗೆ ಹೋಲಿಸಿದಾಗ ಆತ್ಮಹತ್ಯೆ ಮತ್ತು ಹೃದಯಾಘಾತದಿಂದ ಆಗುವ ಸಾವಿನ ಸಂಖ್ಯೆ ಆಸ್ತಿಕರಲ್ಲಿ ಶೇ.50ರಷ್ಟು ಕಡಿಮೆ ಎಂದು ಲೊಯೋಲಾ ವಿಶ್ವವಿದ್ಯಾಲಯದಲ್ಲಿ ನಡೆಸಿದ ವೈದ್ಯಕೀಯ ಸಮೀಕ್ಷೆಯಿಂದ ತಿಳಿದುಬಂದಿದೆ. ಅಂದರೆ ನಂಬಿದ ದೇವರು ಕೈ ಬಿಡುವುದಿಲ್ಲ. ದೇವರನ್ನು ಸದಾ ನೆನೆಯುವ ಮನಸ್ಸು ಗಟ್ಟಿಯಾಗಿರುತ್ತದೆ. ಇದನ್ನೇ ಅಲ್ಲಮಪ್ರಭುಗಳು ಮಾರ್ವಿುಕವಾಗಿ, ಹೆಣ್ಣು, ಹೊನ್ನು, ಮಣ್ಣಿಗಾಗಿ ಆರೋಗ್ಯ ಕೆಡಿಸಿಕೊಳ್ಳುವವರಿಗೆ ಹೀಗೆ ಹೇಳುತ್ತಾರೆ-

‘ಆಸೆಗೆ ಸತ್ತದ್ದು ಕೋಟಿ, ಆಮಿಷಕ್ಕೆ ಸತ್ತದ್ದು ಕೋಟಿ

ಹೊನ್ನು, ಹೆಣ್ಣು, ಮಣ್ಣಿಗೆ ಸತ್ತದ್ದು ಕೋಟಿ

ಗುಹೇಶ್ವರ ನಿನಗಾಗಿ ಸತ್ತವರನಾರನೂ ಕಾಣೆ’

ಅಂದರೆ, ಆಸೆ-ದುರಾಸೆಗಳಿಂದ ಅನಾರೋಗ್ಯಕ್ಕೆ ತುತ್ತಾಗುವ ಇಂದಿನ ಜನ, ಸತ್ಯ ಶುದ್ಧ ಕಾಯಕ ಮಾಡಿ ಕೈಲಾಸ ಕಟ್ಟಬೇಕೇ ಹೊರತು ಆಲಸಿಗಳೂ, ವ್ಯಭಿಚಾರಿಗಳೂ, ಲೋಭಿಗಳೂ ಆಗಿ ಅನಾರೋಗ್ಯದಿಂದ ಅಕಾಲಿಕ ಮರಣ ಹೊಂದಿ ಬೇಗ ಕೈಲಾಸ ಸೇರಬಾರದು!

ದುಶ್ಚಟಗಳಿಂದ ನಾನಾ ರೋಗಗಳು ಬಂದು ಶರೀರ ಜರ್ಜರಿತವಾದಾಗ ಸಾಯುತ್ತಿರುವವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವರು ಉಳಿಯದಿದ್ದಾಗ ವೈದ್ಯರನ್ನು ಥಳಿಸಿ, ಆಸ್ಪತ್ರೆ ಧ್ವಂಸಮಾಡುವ ಅಧಮರು ಅರಿಯಬೇಕು- ರೋಗ ಬಂದಿರುವುದು ರೋಗಿಯ ತಪ್ಪಿನಿಂದ, ಏನಾದರೂ ಮಾಡಿ ಡಾಕ್ಟೆ ್ರ, ಎಷ್ಟಾದರೂ ಖರ್ಚಾಗಲಿ ಎಂದು ಅಂಗಲಾಚಿ ಬೇಡಿಕೊಂಡರೂ ಪ್ರಯೋಜನವಿಲ್ಲ ಎಂಬುದನ್ನು. ಇಂಥ ಸಮಯದಲ್ಲಿ ವೈದ್ಯ ಸಂಗಣ್ಣ ಹೇಳುತ್ತಾರೆ-

ನಾನಾರೋಗಂಗಳು ಬಂದು ದೇಹವ ಹಿಡಿದಿಲ್ಲಿ

ಶಿವಾರ್ಚನೆಯ ಬೆರಕೊಳ್ಳಿ, ಸಕಲ ಪುಷ್ಪಂಗಳಿಂದ

ಪೂಜೆಯ ಮಾಡಿಕೊಳ್ಳಿ, ಪಂಚಾಕ್ಷರಿ ಪ್ರಣವವ

ತಪ್ಪದೆ ತ್ರಿಸಂಧಿಯಲ್ಲಿ ನೆನಹುಗೊಳ್ಳಿ ಇದರಿಂದ

ರುಜೆ ದರ್ಪಂಗೆಡಗು….

ಅಂದರೆ, ಸದಾ ದೇವರನ್ನು ನೆನೆಯುತ್ತ ಆತ್ಮಬಲ ಹೆಚ್ಚಾದಾಗ

ಧ್ಯಾನದಿಂದ ಉತ್ಪತ್ತಿಯಾದ ಎಂಡಾರ್ಫಿನ್ ಮತ್ತು ನ್ಯೂರೋಪೆಪ್ಟೆ ೖಡ್​ಗಳು ವೈದ್ಯರು ಕೊಡುವ ಮಾರ್ಫಿನ್​ಗಿಂತ 100 ಪಟ್ಟು ಹೆಚ್ಚು ಕ್ಷಮತೆ ಹೊಂದಿವೆ. ವೈದ್ಯರು ಕೊಡುವ ಔಷಧದ ಜತೆಗೆ ದೇವರ ಧ್ಯಾನದ ದಿವ್ಯೌಷಧಿ ಸೇರಿದಾಗ ಉತ್ತಮ. ಆರೋಗ್ಯಕರ ಜೀವನಕ್ಕೆ ಶರಣರ ಸಂದೇಶಗಳು ಸಂಜೀವಿನಿಯಾಗಿವೆ. ಸತ್ಯ ಶುದ್ಧ ಕಾಯಕದಿಂದ ಕಾಯಕಯೋಗಿಗಳಾಗಿ, ಸತ್ತಮೇಲೂ ಉಳಿಯುವ ಹೆಸರು ಪಡೆಯಲು ಶರಣರ ಸಂದೇಶವಾದ ‘ಕಾಯಕವೇ ಕೈಲಾಸ’ ಪಾಲಿಸಿ ಅತ್ಯಂತ ಆರೋಗ್ಯವಂತರಾಗೋಣ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *

Back To Top