Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ವಿಶ್ವದ ಸರ್ವಾಧಿಕ ಭಾಷೆಗಳಿರೋದು ನಮ್ಮ ದೇಶದಲ್ಲೇ…

Tuesday, 03.10.2017, 3:05 AM       No Comments

ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಭಾರತ ಎಂಬ ಮಾತು ಧರ್ಮ ಸಮುದಾಯಗಳಿಗೆ ಮಾತ್ರ ಸೀಮಿತವಾದುದಲ್ಲ. ಅದು ನಮ್ಮಲ್ಲಿರುವ ಭಾಷೆಗಳಿಗೂ ಅನ್ವಯಿಸುತ್ತದೆ. ವಿಶ್ವದಲ್ಲೇ ಅತಿ ಹೆಚ್ಚು ಭಾಷೆಗಳಿರುವ ರಾಷ್ಟ್ರ ನಮ್ಮದು.

 ಪ್ರಪಂಚದಲ್ಲಿ ಮಾತುಗಳೇ ಇಲ್ಲ ಎನ್ನುವುದಾದರೆ ಮನುಷ್ಯನ ಸಂಪರ್ಕದ ಮಾಧ್ಯಮ ಏನಾಗಿರುತ್ತಿತ್ತು ಎನ್ನುವುದನ್ನೊಮ್ಮೆ ಕಲ್ಪಿಸಿಕೊಳ್ಳಿ. ಇದರೊಂದಿಗೆ ಹುಟ್ಟಿಕೊಳ್ಳುವ ಇನ್ನೊಂದು ಪ್ರಶ್ನೆಯೆಂದರೆ ಒಂದುವೇಳೆ ಲಿಪಿ ಇಲ್ಲದೇ ಹೋಗಿದ್ದರೆ ಏನಾಗುತ್ತಿತ್ತು? ಮನುಷ್ಯನ ಮಾತುಗಳನ್ನು ಅಕ್ಷರ ರೂಪಕ್ಕೆ ಇಳಿಸಲು ಹೇಗೆ ಸಾಧ್ಯವಾಗುತ್ತಿತ್ತು? ಹೀಗಾಗಿಯೇ ಯಾವ ಭಾಷೆಯಾದರೂ ಮಾತು ಮತ್ತು ಲಿಪಿಗಳ ಸಂಗಮದಿಂದಲೇ ಅದು ಪರಿಪೂರ್ಣವಾಗುತ್ತದೆ. ವಿಶ್ವದ ಯಾವ ಮೂಲೆಯಲ್ಲಿ ಮನುಷ್ಯ ನೆಲೆಸಿದ್ದರೂ ಆತನ ಪ್ರಮುಖ ಇಚ್ಛೆ ಅಭಿವ್ಯಕ್ತಿಯಾಗಿರುತ್ತದೆ. ಹೀಗಾಗಿ ಆತ ತನ್ನ ಅಭಿಪ್ರಾಯಗಳನ್ನು ಸಂಕೇತಗಳ ರೂಪದಲ್ಲೋ, ಬರೆದೋ ಅಥವಾ ಮಾತಿನ ಮೂಲಕವೋ ಅಭಿವ್ಯಕ್ತಪಡಿಸಲು ಯತ್ನಿಸಿದ್ದಾನೆ. ಇಂದು ನಾವು ಮಾತುಬಾರದ ವ್ಯಕ್ತಿಯೊಬ್ಬನನ್ನು ನೋಡಿದರೆ ಆತನ ಬಗ್ಗೆ ಕರುಣೆ ಬರುತ್ತದೆ. ನಮ್ಮ ಜೀವನದ ಯಾವುದೇ ವಿಚಾರವಾದರೂ ಅಭಿವ್ಯಕ್ತಿಯ ಮಾಧ್ಯಮದಿಂದಲೇ ಇನ್ನೋರ್ವ ವ್ಯಕ್ತಿಯನ್ನು ತಲುಪುತ್ತದೆ. ಇದು ಮಾನವ ಸಮಾಜಕ್ಕೆ ಅಗತ್ಯವಾಗಿದೆ. ಮತ್ತು ವಿಶ್ವದ ಯಾವುದೇ ಮೂಲೆಗೂ ಒಂದೇ ರೀತಿ ಅನ್ವಯಿಸುತ್ತದೆ. ಇಂದು ಅಂತಾರಾಷ್ಟ್ರೀಯ ಅಭಿವ್ಯಕ್ತಿಯ ಬಗ್ಗೆ ಚರ್ಚೆಗಳಾಗುತ್ತಿರುವಾಗ ಅನಾದಿಕಾಲದಲ್ಲಿ ಮಾನವರು ಯಾವ ರೀತಿಯಲ್ಲಿ ಸಂವಹನ ನಡೆಸಿರಬಹುದು ಎಂಬುದನ್ನು ಊಹಿಸಿಕೊಳ್ಳಬಹುದಾಗಿದೆ. ಮನುಷ್ಯ ಅಂದು ಕೇವಲ ಸಂಕೇತಗಳ ಮೂಲಕವೇ ಸಂವಹನ ಸಾಧಿಸಿರಬಹುದು. ಅವರೂ ಗುಪ್ತವಿಚಾರಗಳನ್ನು ಮುಚ್ಚಿಡುವ ಸಲುವಾಗಿ ನಮ್ಮಂತೆಯೇ ಕೋಡ್​ವರ್ಡ್​ಗಳನ್ನು ಬಳಸಿಕೊಂಡಿರಬಹುದು.

ಸ್ಥಳೀಯವಾಗಿ ನೆಲೆಸಿರುವ ಜನರಿಗೇ ಒಬ್ಬರಿಗೊಬ್ಬರ ಪರಿಚಯವಿಲ್ಲ ಎಂದಾದಾಗ ಎಲ್ಲೋ ದೂರದ ಪ್ರದೇಶದಲ್ಲಿ ನೆಲೆಸಿರುವ ವ್ಯಕ್ತಿಯ ಅಭಿವ್ಯಕ್ತಿಯ ಬಗೆಗೆ ಪರಿಚಿತರಿರಲು ಹೇಗೆ ಸಾಧ್ಯ? ಪಕ್ಕದ ಮನೆಯಲ್ಲೇ ನೆಲೆಸಿದವರಾಗಿರಲಿ ಅಥವಾ ದೂರದ ಊರಿನಲ್ಲಿ ನೆಲೆಸಿದವರಾಗಿರಲಿ ಮಾತು, ಭಾಷೆಯ ಮಾಧ್ಯಮಗಳೇ ಇಲ್ಲದೆ ಅದು ಹೇಗೆ ಒಬ್ಬರು ಇನ್ನೊಬ್ಬರ ಮಾತುಗಳನ್ನು ಅರ್ಥೈಸಿಕೊಂಡರು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಮೊದಲ ಬಾರಿ ಇಬ್ಬರು ಮನುಷ್ಯರು ಭೇಟಿಯಾದಾಗ ಅವರ ಮೊದಲ ಅಭಿವ್ಯಕ್ತಿ ಏನಾಗಿತ್ತು ಎಂಬುದು ಇಲ್ಲಿಯವರೆಗೂ ತಿಳಿದುಬಂದಿಲ್ಲ. ಹೀಗಾಗಿ ಸಂಜ್ಞೆ ಮತ್ತು ಸಂಕೇತಗಳನ್ನೇ ಪ್ರಥಮ ಅಭಿವ್ಯಕ್ತಿಯೆಂದು ಪರಿಗಣಿಸಲಾಗಿದೆ. ಹಲವು ರಾಷ್ಟ್ರಗಳು ತಮ್ಮಲ್ಲಿ ಹಿಂದಿನ ಕಾಲದಲ್ಲಿ ಮತ್ತು ಇತ್ತೀಚಿನ ವರ್ಷಗಳಲ್ಲಿ ಬಳಕೆಯಾಗುತ್ತಿದ್ದ ಲಿಪಿಗಳು ಮತ್ತು ಭಾಷೆಗಳ ಬಗೆಗೆ ಐತಿಹಾಸಿಕ ಮಾಹಿತಿಗಳನ್ನು ನೀಡಿ ಜನರಿಗೆ ಅನುಕೂಲ ಮಾಡಿಕೊಟ್ಟಿವೆ. ಭಾರತದಲ್ಲಿ ಪ್ರತಿ ಏಳರಿಂದ ಎಂಟು ಕಿಲೋಮೀಟರ್ ಅಂತರದಲ್ಲಿ ಭಾಷೆಗಳು ಬದಲಾಗುತ್ತವೆ. ವಾಸ್ತವದಲ್ಲಿ ಮಾತುಗಳೇ ಭಾಷೆಯ ಮೊದಲ ಮೆಟ್ಟಿಲುಗಳು.

ಸರಿಸುಮಾರು 100 ವರ್ಷಗಳ ಹಿಂದೆ ಗ್ರೇಸನ್ ನೇತೃತ್ವದಲ್ಲಿ ಸಮೀಕ್ಷೆಯೊಂದನ್ನು ನಡೆಸಲಾಗಿತ್ತು. ಇದರಲ್ಲಿ ಭಾರತದಲ್ಲಿ ಒಟ್ಟು 733 ಭಾಷೆಗಳಿರುವುದಾಗಿ ಉಲ್ಲೇಖಿಸಲಾಗಿತ್ತು. ಆದರೆ ಇದರ ನಂತರ ನಡೆಸಿದ ಸಮೀಕ್ಷೆಯಲ್ಲಿ ಭಾರತದಲ್ಲಿ ಒಟ್ಟು 780 ಭಾಷೆಗಳಿರುವುದಾಗಿ ತಿಳಿಸಲಾಗಿದೆ. ಹೀಗಾಗಿ ಭಾರತದಲ್ಲಿರುವ ಭಾಷೆಗಳೆಷ್ಟು ಎಂಬ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದೇ ವಿಚಾರದ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿಯೇ ಕೇಂದ್ರ ಸರ್ಕಾರ ಗುಜರಾತ್​ನ ವಡೋದರ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಕೇಂದ್ರವನ್ನು ಆರಂಭಿಸಿದೆ. ಭಾಷೆ ಮತ್ತು ಲಿಪಿಗಳ ತಜ್ಞರು ಹೇಳುವ ಪ್ರಕಾರ ಇಲ್ಲಿಯವರೆಗೆ ನಡೆಸಿರುವ ಸಮೀಕ್ಷೆಗಳಲ್ಲಿ ಉಲ್ಲೇಖಿಸಿರದ ಇನ್ನೂ 47 ಭಾಷೆಗಳು ಭಾರತದಲ್ಲಿವೆ. 1903ರಲ್ಲಿ ಭಾರತಕ್ಕೆ ನಾಗರಿಕ ಸೇವಾ ಅಧಿಕಾರಿಯಾಗಿ ಬಂದ ಬ್ರಿಟಿಷ್ ಅಧಿಕಾರಿ ಜಾರ್ಜ್ ಗ್ರೇಸನ್ 1928ರವರೆಗೂ ಭಾರತದಲ್ಲಿ ನೆಲೆಸಿದ್ದ. ಈ ಅವಧಿಯಲ್ಲಿ ಆತ ಸಮೀಕ್ಷೆ ನಡೆಸಿ ಭಾರತದಲ್ಲಿರುವ 733 ಭಾಷೆಗಳನ್ನು ಗುರುತಿಸಿದ್ದ. ಇದರಲ್ಲಿ 544 ಭಾಷೆಗಳಿಗೆ ಲಿಪಿಗಳಿಲ್ಲ. ಅವು ಕೇವಲ ಮೌಖಿಕ ಸಂವಹನಕ್ಕೆ ಸೀಮಿತ ಭಾಷೆಗಳಾಗಿದ್ದವು. 700 ಭಾಷಾ ಕಾರ್ಯಕರ್ತರು 320 ಭಾಷಾ ತಜ್ಞರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಇವರ ತಂಡಗಳು ದೇಶಾದ್ಯಂತ ತಿರುಗಾಟ ನಡೆಸಿ ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದವು. ಭಾರತೀಯ ಭಾಷೆಗಳಿಗೆ ಸಂಬಂಧಿಸಿದಂತೆ ಭಾಷಾತಜ್ಞರು ನಡೆಸಿದ ಪ್ರಥಮ ಸಮೀಕ್ಷೆ ಇದೆಂದು ಪರಿಗಣಿಸಲಾಗಿದೆ. ಇದು ಭಾರತೀಯ ಭಾಷೆಗಳ ಮಾಹಿತಿ ವಿಚಾರದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇಂದಿಗೂ ಭಾಷೆಯ ವಿಚಾರಕ್ಕೆ ಬಂದಾಗ ಈ ಸಮೀಕ್ಷೆಯನ್ನು ಉಲ್ಲೇಖಿಸಲಾಗುತ್ತದೆ.

ದೆಹಲಿ ವಿಶ್ವವಿದ್ಯಾಲಯದಡಿಯಲ್ಲಿ ಬರುವ ಜಾಕಿರ್ ಹುಸೇನ್ ಮಹಾವಿದ್ಯಾಲಯದ ಆಂಗ್ಲಭಾಷೆಯ ಪ್ರಾಧ್ಯಾಪಕಿ ಡಾ.ವಿಭಾ ಸಿಂಗ್ ಚೌಹಾಣ್ ಭಾರತೀಯ ಭಾಷಾ ಸಂಬಂಧಿ ನಡೆದ ಮತ್ತೊಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಅವರ ಅಭಿಪ್ರಾಯದಂತೆ, ಭಾಷೆಗಳಿಗೆ ಸಂಬಂಧಿಸಿ ಅಧ್ಯಯನ ಕೇಂದ್ರದ ಅಧ್ಯಕ್ಷ ಜಿ.ಎನ್. ದೇವಿ ನೇತೃತ್ವದಲ್ಲಿ ನಡೆದ ಮಹತ್ವಪೂರ್ಣ ಸಮೀಕ್ಷೆಯ ನಂತರ ದೇಶದಲ್ಲಿ ಇಲ್ಲಿಯವರೆಗಿನ ಸಮೀಕ್ಷೆಗಳಿಗೆ ಒಳಪಡದ 80ರಿಂದ 100 ಭಾಷೆಗಳಿವೆ ಎಂದು ತಿಳಿದುಬಂತು. ಇವೆಲ್ಲವನ್ನೂ ಭಾಷೆಗಳ ಪಟ್ಟಿಗೆ ಸೇರಿಸಿದ್ದೇ ಆದಲ್ಲಿ ಭಾರತದಲ್ಲಿರುವ ಭಾಷೆಗಳ ಸಂಖ್ಯೆ 850ಕ್ಕಿಂತಲೂ ಹೆಚ್ಚಾಗಬಹುದಾಗಿದೆ ಎನ್ನುತ್ತಾರೆ. ಭಾರತ ವಿಶಾಲವಾದ ರಾಷ್ಟ್ರ ಹೀಗಾಗಿ ಭಾಷೆಯ ವಿಚಾರದಲ್ಲೂ ಇದಕ್ಕೆ ಸಾಟಿಯಿಲ್ಲ. ಇನ್ನು ಲಿಪಿಗಳ ಹೊರತಾಗಿಯೂ ಕೇವಲ ಮೌಖಿಕ ಸಂವಹನಕ್ಕಾಗಿ ಬಳಸುವ ಭಾಷೆಗಳನ್ನು ಪರಿಗಣಿಸಿದರೂ ವಿಶ್ವದ ಯಾವ ರಾಷ್ಟ್ರವೂ ಭಾರತಕ್ಕೆ ಸರಿಸಾಟಿಯಾಗಲಾರದು. ಭಾಷೆಗಳನ್ನೇ ಆಧಾರವಾಗಿಟ್ಟುಕೊಂಡು ಭಾರತದಲ್ಲಿರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ವಿಭಿನ್ನತೆಗಳನ್ನು ಅರ್ಥೈಸಿಕೊಳ್ಳಬಹುದಾಗಿದೆ.

ಕೆಲ ದಿನಗಳ ಹಿಂದೆ ದೆಹಲಿ ವಿಶ್ವವಿದ್ಯಾಲಯದ ಆಂಗ್ಲ ವಿಭಾಗದ ಪ್ರಾಧ್ಯಾಪಕಿ ಡಾ. ವಿಭಾ ಸಿಂಗ್ ಚೌಹಾಣ್ ಭಾಷೆಗಳ ಸಮೀಕ್ಷೆ ವಿಚಾರದಲ್ಲಿ ಅಚ್ಚರಿ ಮೂಡಿಸುವಂತಹ ವ್ಯಾಖ್ಯಾನವನ್ನು ನೀಡಿದರು. ಇಂದು ಅವರು ಭಾಷೆಗೆ ಸಂಬಂಧಿಸಿ ಹೊತರುವ ಸಂಚಿಕೆಗಳ ಬಿಹಾರ ವಿಭಾಗದ ಪ್ರಧಾನ ಸಂಪಾದಕರಾಗಿದ್ದಾರೆ. ಈ ಸಮೀಕ್ಷಾ ವರದಿಯನ್ನು 60 ಸಂಚಿಕೆಗಳಲ್ಲಿ ಪ್ರಕಟಿಸುವ ಉದ್ದೇಶವಿದ್ದು, 26 ಸಂಚಿಕೆಗಳನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅದಾಗಲೇ ಬಿಡುಗಡೆ ಮಾಡಿದ್ದಾರೆ. ಅವುಗಳಲ್ಲಿರುವ ಮಾಹಿತಿಗಳ ಅನುಸಾರವಾಗಿ ಈಗಿನ ಸಮೀಕ್ಷೆಯನ್ನು ಸದ್ಯ ಪ್ರಚಲಿತದಲ್ಲಿರುವ, ಬಳಕೆಯಲ್ಲಿರುವ ಭಾಷೆಗಳನ್ನಾಧರಿಸಿ ಮಾಡಲಾಗಿದೆ. ಕಳೆದ 100 ವರ್ಷಗಳ ಅವಧಿಯಲ್ಲಿ ಅದೆಷ್ಟೋ ಭಾಷೆಗಳು ಬಳಕೆಯಲ್ಲಿಲ್ಲದೆ ಅಂತ್ಯವಾಗಿರುವ ಸಾಧ್ಯತೆಯಿದೆ. ಹೀಗಾಗಿ ಭಾರತದಲ್ಲಿ ಇಂತಿಷ್ಟೇ ಭಾಷೆಗಳಿದ್ದವೆಂದು ನಿಖರವಾಗಿ ಹೇಳುವುದು ಅಸಾಧ್ಯವೇನೋ. ಈ ಕಾರಣದಿಂದಲೇ ಇದನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿಲ್ಲ. ಯುನೆಸ್ಕೋದ ಅಂದಾಜಿನ ಪ್ರಕಾರ ಭಾರತದಲ್ಲಿ ಬಳಕೆಯಲ್ಲಿದ್ದ 200 ಭಾಷೆಗಳು ಇದೀಗ ಇಲ್ಲ. ಆದರೂ ಭಾರತದಲ್ಲಿ ಅಂತ್ಯವಾಗಲು ಸಾಧ್ಯವೇ ಇಲ್ಲ ಎನ್ನುವಂತಹ ಭಾಷೆಗಳೂ ಇವೆ. ಕೆಲ ಭಾಷಾ ತಜ್ಞರು ಭಾರತದಲ್ಲಿರುವ ಭಾಷೆಗಳು ಅಸ್ತಿತ್ವ ಕಳೆದುಕೊಳ್ಳಲು ಸಾಧ್ಯವಿಲ್ಲ ಎನ್ನುವಂತಹ ಅಭಿಪ್ರಾಯವನ್ನೂ ಹೊಂದಿದ್ದಾರೆ.

ಚೌಹಾಣ್ ಹೇಳುವಂತೆ 1903ರಲ್ಲಿ ಗ್ರೇಸನ್ ನೇತೃತ್ವದಲ್ಲಿ ಸಮೀಕ್ಷೆ ನಡೆದಾಗ ಮೌಖಿಕ ಸಂವಹನಕ್ಕೆ ಬಳಸುವ ಭಾಷೆಗಳು ಮತ್ತು ಲಿಪಿಗಳಿರುವ ಭಾಷೆಗಳನ್ನು ಬೇರೆ ಬೇರೆ ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಆದರೆ ಭಾಷಾ ಶಾಸ್ತ್ರಜ್ಞರ ಅಭಿಪ್ರಾಯ ಸಂಗ್ರಹಿಸುವುದಾದರೆ ಈ ಬಗೆಗಿನ ಅವರ ಅಭಿಪ್ರಾಯಗಳು ಭಿನ್ನ ಭಿನ್ನವಾಗಿವೆ. ಎಷ್ಟೋ ಭಾಷೆಗಳನ್ನು ಗಮನಿಸುವುದಾದರೆ ಲಿಪಿಗಳಿರುವ ಭಾಷೆಗಳನ್ನು ಮಾತನಾಡುವವರ ಸಂಖ್ಯೆಗಿಂತಲೂ ಲಿಪಿ ಇಲ್ಲದ ಭಾಷೆಯನ್ನು ಮಾತನಾಡುವವರ ಪ್ರಮಾಣ ಹೆಚ್ಚಾಗಿರುತ್ತದೆ. ಇದಕ್ಕೆ ಬೋಜ್​ಪುರಿ ಮತ್ತು ಅವಧಿ ಭಾಷೆಗಳು ಉತ್ತಮ ಉದಾಹರಣೆ. ಇದರ ಸಾಹಿತ್ಯಗಳು ಕೂಡ ಹೆಚ್ಚು ಸಂಪನ್ನವಾಗಿವೆ. ಅಷ್ಟೇ ಅಲ್ಲ, ಈ ಎರಡೂ ಭಾಷೆಗಳ ಇತಿಹಾಸವೂ ಪ್ರಾಚೀನವಾದದ್ದು.

ಸಂಸ್ಕೃತ ಭಾಷೆ ಬಹಳ ಪ್ರಾಚೀನವಾದುದು. ಇತರ ಭಾಷೆಗಳಿಗೆ ಹೋಲಿಸುವುದಾದರೆ ಸಂಸ್ಕೃತ ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾದುದಲ್ಲ. ಸಮಾಜ ಮತ್ತು ಭಾಷಾ ವಿಜ್ಞಾನದ ದೃಷ್ಟಿಕೋನದಿಂದಲೂ ಅದರ ಉಪಯೋಗ ಹಿಂದಿನಂತೆಯೇ ಪ್ರಸ್ತುತವಾಗಿದೆ. ಆದರೆ ಇಂದು ಸಂಸ್ಕೃತ ಮಾತನಾಡುವವರೆಷ್ಟು? ಕೇವಲ ಹತ್ತು ಸಾವಿರ ಜನರು. ಧಾರ್ವಿುಕ ಸಾಹಿತ್ಯವನ್ನು ಓದುವವರ ಸಂಖ್ಯೆ ಮುಷ್ಟಿಯಷ್ಟಿದೆಯಷ್ಟೇ. ಇದಕ್ಕೆ ಹೋಲಿಸಿದರೆ ಮೌಖಿಕ ಸಂವಹನಕ್ಕೆ ಮಾತ್ರ ಸೀಮಿತವಾಗಿರುವ ಭಾಷೆಗಳನ್ನು ಬಳಸುವವರ ಪ್ರಮಾಣ ಲಕ್ಷಕ್ಕೆ ಮೇಲಿದೆ.

ಲಿಪಿಯಿಲ್ಲದ ಹಲವು ಭಾಷೆಗಳಿಗೆ ಭಾಷೆಯ ದರ್ಜೆಯನ್ನು ನೀಡಿಯೇ ಇಲ್ಲ. ಆದರೆ ಇತ್ತೀಚೆಗೆ ಸಮೀಕ್ಷೆ ನಡೆಸಿರುವ ತಂಡ ಮಾತಿಗೆ ಮಾತ್ರ ಸೀಮಿತವಾಗಿದ್ದವುಗಳನ್ನೂ ಒಂದು ರೀತಿಯ ಭಾಷೆಗಳೆಂದೇ ಪರಿಗಣಿಸಿದೆ. ಇಲ್ಲಿಯವರೆಗೂ ಉಚ್ಚ ಸಮಾಜದ ಜನರು ಲಿಪಿಗಳಿರುವ ಭಾಷೆಯ ಬಳಕೆ ಮಾಡುತ್ತಿದ್ದರು. ಮತ್ತು ಸಾಮಾಜಿಕ ಮತ್ತು ರಾಜಕೀಯವಾಗಿ ಅವಹೇಳನೆಗೊಳಗಾಗುತ್ತಿದ್ದವರು, ಹಿಂದುಳಿದವರು ಲಿಪಿಗಳಿಲ್ಲದ ಭಾಷೆಗಳ ಬಳಕೆ ಮಾಡುತ್ತಿದ್ದರು. ಇದಕ್ಕಾಗಿಯೇ ಇವೆರಡಕ್ಕೂ ಶ್ರೇಣಿಗಳನ್ನು ನಿರ್ಧರಿಸಲಾಗಿತ್ತು. ಇದಕ್ಕೆ ಉದಾಹರಣೆ ಕಬಾಯಿಲ್ ಸಮಾಜದ ಭಾಷೆ. ಇದರ ಸಾಹಿತ್ಯ ಉಚ್ಚಸ್ತರದ್ದು ಮತ್ತು ಇದನ್ನು ಬಳಸುವವರ ಪ್ರಮಾಣವೂ ಹೆಚ್ಚಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಭಾರತದಲ್ಲಿರುವ ಭಾಷೆಗಳ ಬಗ್ಗೆ ನಿಖರವಾದ ಅಂಕಿಅಂಶಗಳನ್ನು ನೀಡಲು ಕಷ್ಟಸಾಧ್ಯ ಮತ್ತು ಯಾವುದೋ ಒಂದು ಭಾಷೆಯನ್ನು ಪ್ರಮುಖ ಭಾಷೆ ಎಂದು ಪರಿಗಣಿಸುವುದಕ್ಕೂ ಸಾಧ್ಯವಾಗಲಾರದು. ಆದರೆ, ಭಾರತ ಭಾಷೆಗಳು ಮತ್ತು ವಿಶಿಷ್ಟ ಸಂಸ್ಕೃತಿಯ ಆಗರ ಎಂಬುದು ನಿರ್ವಿವಾದ.

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

Leave a Reply

Your email address will not be published. Required fields are marked *

Back To Top