Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ವಿವಾಹವೆಂದರೆ ಒಟ್ಟಿಗೆ ಬದುಕುವುದಷ್ಟೇ ಅಲ್ಲ…

Tuesday, 12.12.2017, 3:02 AM       No Comments

ಇತ್ತೀಚೆಗೆ ನನಗೆ ಬಂದ ಸುಮಾರು ಎಂಟು-ಹತ್ತು ಪತ್ರಗಳಲ್ಲಿ ಒಂದೇ ಬಗೆಯ ಸಮಸ್ಯೆಗಳಿವೆ. ಇವೆಲ್ಲವನ್ನೂ ನವವಿವಾಹಿತ ತರುಣಿಯರು ಅಥವಾ ವಿವಾಹವಾಗಿ ಒಂದೆರಡು ವರ್ಷ ಕಳೆದ ಮಹಿಳೆಯರೇ ಬರೆದಿದ್ದಾರೆ. ಅವರೆಲ್ಲರ ಅಳಲು ಒಂದೇ ಬಗೆಯದಾಗಿವೆ. ಆದ್ದರಿಂದಲೇ ಅವೆಲ್ಲವನ್ನೂ ಸೇರಿಸಿ ಒಂದೇ ಉತ್ತರವನ್ನು ಕೊಡುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.

| ಶಾಂತಾ ನಾಗರಾಜ್, ಆಪ್ತ ಸಲಹಾಗಾರ್ತಿ

# ಮದುವೆಯಾದ ಮೊದಲ ರಾತ್ರಿಯಿಂದ ನನ್ನ ಗಂಡ ನನ್ನ ಕಡೆಗೆ ತಿರುಗಿಯೂ ನೋಡುತ್ತಿಲ್ಲ. ವಿವಾಹವಾಗಿ ಎರಡು ತಿಂಗಳು (ಆರು ತಿಂಗಳು ಅಥವಾ ಒಂದೆರಡು ವರ್ಷಗಳು) ಕಳೆದಿವೆ. ಅಂದಿನಿಂದ ಇಂದಿನವರೆಗೆ ಗಂಡ ನನ್ನ ಕೈಯನ್ನೂ ಮುಟ್ಟಿಲ್ಲ. ನಾನು ರಾತ್ರಿ ರೂಮಿಗೆ ಬರುವ ಹೊತ್ತಿಗೆ ಗಾಢ ನಿದ್ದೆಯಲ್ಲಿ ಮುಳುಗಿರುತ್ತಾರೆ. ಎಬ್ಬಿಸಿದರೆ ಬಯ್ಯುತ್ತಾರೆ. ‘ಹೀಗೇಕೆ ಮಾಡುತ್ತೀರಿ?’ ಎಂದರೆ ‘ನಾನಿರುವುದೇ ಹೀಗೆ, ಬೇಕಾದರೆ ನನ್ನ ಜತೆಯಿರು, ಬೇಡವಾದರೆ ಹೋಗು’ ಎನ್ನುತ್ತಾರೆ. (ಇವರಲ್ಲಿ ಕೆಲವರು ‘ಸಂನ್ಯಾಸಿ ಆಗುತ್ತೇನೆ’ ಎಂದು ಹೆದರಿಸುತ್ತಾರಂತೆ. ಒಬ್ಬ ಮಹಾಶಯನಂತೂ ‘ನಿನಗೆ ಹಾಸಿಗೆ ಸುಖ ಬೇಕಾದರೆ ಬೇರೆ ಬಾಯ್ ಫ್ರೆಂಡ್ ಮಾಡಿಕೋ ಎನ್ನುತ್ತಾನಂತೆ!!)’ ನನಗೆ ನಿನ್ನನ್ನು ಕಂಡರೆ ಇಷ್ಟವಿಲ್ಲ’ ಎನ್ನುವ ಈ ಗಂಡನೊಂದಿಗೆ ಹೇಗೆ ಬಾಳಲಿ?

ಈಗ ನಾನು ಕೊಡುತ್ತಿರುವ ಉತ್ತರವನ್ನು ಈ ಎಲ್ಲ ಮಹಿಳೆಯರು ತಮ್ಮತಮ್ಮ ಗಂಡಂದಿರು ಓದುವಂತೆ ಮಾಡಬೇಕು. ಇವರಲ್ಲದೆ ಅನೇಕ ಪುರುಷರಿಗೆ ಈ ಸಮಸ್ಯೆ ಇತ್ತೀಚೆಗೆ ಹೆಚ್ಚಾಗಿ ಕಾಡುತ್ತಿದೆ. ಅವರು ಸಹ ಈ ಬರಹವನ್ನು ಓದಿ ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬೇಕಾಗಿ ವಿನಂತಿ.

ದಾಂಪತ್ಯಕ್ಕೆ ಕರ್ತವ್ಯದ ರೂಪದಲ್ಲಿ ಮೂರು ಆಯಾಮಗಳಿರುತ್ತವೆ. ಈ ಮೂರೂ ಆಯಾಮಗಳಿಗೂ ಗಂಡ ಮತ್ತು ಹೆಂಡತಿ ಇಬ್ಬರು ಬದ್ಧರಾಗಿರಲೇಬೇಕು. 1) ಕುಟುಂಬ ನಿರ್ವಹಣೆಗೆ ಆರ್ಥಿಕ ಬಲವನ್ನು ಒದಗಿಸುವುದು. ಹಿಂದೆಲ್ಲ ಉದ್ಯೋಗಂ ಪುರುಷ ಲಕ್ಷಣಂ ಎನ್ನುವ ನಂಬಿಕೆಯೊಂದಿಗೆ ಆರ್ಥಿಕ ಬಲವನ್ನು ಗಂಡಿನ ಕುತ್ತಿಗೆಗೆ ಕಟ್ಟಲಾಗಿತ್ತು. ಇತ್ತೀಚೆಗೆ ಹೆಣ್ಣು ವಿದ್ಯಾವಂತಳಾಗಿ ಉದ್ಯೋಗಸ್ಥೆಯೂ ಆಗಿರುವುದರಿಂದ ಕುಟುಂಬ ನಿರ್ವಹಣೆಯಲ್ಲಿ ಗಂಡು ಸೋತರೆ ಹೆಣ್ಣು ನಿಭಾಯಿಸುತ್ತಾಳೆ. 2) ಮನೆ ಎನ್ನುವ ಸಂಸ್ಥೆಯನ್ನು ನಡೆಸುವುದು. ಇದರಲ್ಲಿ ಅಡುಗೆ, ಮನೆಗೆಲಸ, ಮನೆಯ ಸದಸ್ಯರ ಆರೋಗ್ಯ ನಿರ್ವಹಣೆ ಎಲ್ಲವೂ ಸೇರಿದೆ. ಸಾಂಪ್ರದಾಯಿಕ ಮನೆಗಳಲ್ಲಿ ಇವನ್ನೆಲ್ಲ ಹೆಂಡತಿಯೇ ಮಾಡಬೇಕೆಂದು ನಿರೀಕ್ಷಿಸಲಾಗುತ್ತದೆ. ಆದರೀಗ ತಮ್ಮ ಹೆಂಡತಿಯರು ಉದ್ಯೋಗಸ್ಥೆಯಾರಾಗಿ ಆರ್ಥಿಕ ಬಲವನ್ನು ಒದಗಿಸುತ್ತಿರುವುದರಿಂದ ಈ ಜವಾಬ್ದಾರಿಯನ್ನು ಗಂಡು ಹಂಚಿಕೊಳ್ಳುವ ಸಂಸ್ಕೃತಿ ಆರೋಗ್ಯಕರವಾಗಿಯೇ ಬೆಳೆಯುತ್ತಿದೆ. 3) ದಾಂಪತ್ಯಕ್ಕೆ ಅರ್ಥಕೊಡುವ ಕುಟುಂಬ ವಿಸ್ತರಣೆ. ಮದುವೆಯ ಅರ್ಥವೇ ಗಂಡು ಮತ್ತು ಹೆಣ್ಣು ಶರೀರಕ್ಕೆ ಮತ್ತು ಮನಸ್ಸಿಗೂ ಅಗತ್ಯವಾದ ಸಾಂಗತ್ಯಸುಖವನ್ನು ಆರೋಗ್ಯಕರವಾಗಿ ಪಡೆಯುವುದು. ವಿವಾಹವನ್ನು ಪವಿತ್ರ ಎಂದೇಕೆ ಭಾವಿಸುತ್ತಾರೆಂದರೆ ಅಗ್ನಿಸಾಕ್ಷಿಯಾಗಿ ಕೈಹಿಡಿದ ಗಂಡ-ಹೆಂಡತಿ ತಮ್ಮ ಗಮನವನ್ನು ಬೇರೆಲ್ಲೋ ಹರಿಸದೆ ಒಬ್ಬರಿಗೊಬ್ಬರು ಬದ್ಧರಾಗಿ ಶರೀರಸುಖವನ್ನು ಪಡೆಯುತ್ತಾರೆ ಎನ್ನುವ ಕಾರಣಕ್ಕೆ.

ಮೊದಲೆರಡು ನಿಯಮಗಳನ್ನು ಗಂಡನಾಗಲಿ ಅಥವಾ ಹೆಂಡತಿಯಾಗಲಿ ನಿಭಾಯಿಸಬಹುದು. ಆದರೆ ಮೂರನೇ ನಿಯಮವನ್ನು ಇಬ್ಬರೂ ಸೇರಿಯೇ ನಿರ್ವಹಿಸುವ ಜವಾಬ್ದಾರಿ ಇಬ್ಬರ ಮೇಲೂ ಇದೆ. ವಿವಾಹವಾಗಿ ಹೆಂಡತಿಯಾಗಲಿ, ಗಂಡನಾಗಲಿ ಸಾಂಗತ್ಯಸುಖವನ್ನು ತಿರಸ್ಕರಿಸಿದರೆ ಅದು ಅಪರಾಧ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮದುವೆಯಾದ ಮೇಲೆ ಹೀಗೆ ಮಾಡುವುದು ಒಬ್ಬರು ಮತ್ತೊಬ್ಬರಿಗೆ ಮಾಡುವ ಅನ್ಯಾಯ. ಸಪ್ತಪದಿ ತುಳಿಯುತ್ತ ‘ನಾವಿಬ್ಬರು ಕುಟುಂಬವನ್ನು ವಿಸ್ತರಿಸುತ್ತೇವೆ’ ಎಂದು ಭಗವಂತನ ಹೆಸರಿನಲ್ಲಿ ಪ್ರಮಾಣ ಮಾಡಿ ಈಗ ದಾಂಪತ್ಯಸುಖವೇ ಒಲ್ಲೆನೆಂದರೆ ವಿವಾಹಕ್ಕೆ ಏನು ಅರ್ಥಬಂತು? ಇದನ್ನು ಅರಿಯಬೇಕು.

ಹೀಗೆ ದಾಂಪತ್ಯಸುಖದಿಂದ ವಿಮುಖರಾಗುವ ಪುರುಷರಲ್ಲಿ ಹಲವು ನ್ಯೂನತೆಗಳಿರುವ ಸಂಭವವಿದೆ. ಶಾರೀರಿಕವಾಗಿ ದುರ್ಬಲರಿರಬಹುದು. ಮಾನಸಿಕವಾಗಿ ಹದಿಹರೆಯಕ್ಕೆ ಬಂದಾಗ ಸಹಜವಾಗಿ ಹುಟ್ಟುವ ‘ಸೆಕ್ಸ್ ಅರ್ಜ್’ ಹುಟ್ಟದೆ ವ್ಯಕ್ತಿತ್ವ ವಿಕಾಸದಲ್ಲೇ ದೋಷವಿರಬಹುದು. ಬಾಲ್ಯದಲ್ಲಿ ಯಾರಾದರೂ ಇವರನ್ನು ತಮ್ಮ ಕಾಮವಾಂಛೆಗೆ ವಿಕಾರವಾಗಿ ಬಳಸಿಕೊಂಡು ಅದರ ಭಯದಿಂದ ಇನ್ನು ಹೊರಬಂದಿಲ್ಲದೆ ಕಾಮವನ್ನೇ ತಿರಸ್ಕರಿಸುವ ನಿರ್ಧಾರ ಮಾಡಿರಬಹುದು. ಅತಿಯಾದ ಕೀಳರಿಮೆ ಹೊಂದಿ ಹಾಸಿಗೆಯಲ್ಲೂ ಹೆಂಡತಿಗೆ ತನ್ನಿಂದ ಸುಖ ಸಿಗದಿದ್ದರೆ ಎನ್ನುವ ಸ್ವಕಲ್ಪಿತ ಅನುಮಾನದಿಂದ ಅದರ ತಂಟೆಯೇ ಬೇಡವೆನ್ನುವ ನಿರ್ಧಾರಕ್ಕೂ ಬಂದಿರಬಹುದು. ಯಾವುದೇ ಕಾರಣವಿರಲಿ, ಒಮ್ಮೆ ಮದುವೆಯಾದ ಮೇಲೆ ಇವೆಲ್ಲಕ್ಕೂ ವೈದ್ಯರಿಂದ ಪರಿಹಾರ ಸಿಕ್ಕುವ ಸಾಧ್ಯತೆಯ ಕಡೆಗೆ ಪ್ರಯತ್ನಿಸಬೇಕೇ ವಿನಃ ಇವೆಲ್ಲವನ್ನೂ ಮುಚ್ಚಿಟ್ಟು ವಿವಾಹವಾಗಿ ಹೆಂಡತಿಗೆ ಮೋಸ ಮಾಡುವುದು ಪರಮ ಅನ್ಯಾಯವಾಗುತ್ತದೆ. ಮತ್ತು ಕಾನೂನಿನ ದೃಷ್ಟಿಯಲ್ಲಿ ಅಪರಾಧವೂ ಹೌದು.

ಶಾಂತಾ ನಾಗರಾಜ್ ಅವರನ್ನು ಪ್ರತಿ ಸೋಮವಾರ ಸಂಜೆ 6 ಗಂಟೆಗೆ ಈ ವಿಳಾಸದಲ್ಲಿ ಸಂಪರ್ಕಿಸಬಹುದು.

ಪ್ರಸನ್ನ ಆಪ್ತಸಲಹಾ ಕೇಂದ್ರ ಅರುಣಚೇತನ

ಕ್ಲುನಿ ಕಾನ್ವೆಂಟ್ ಎದುರು. ಎಂ.ಇ.ಎಸ್ ಕಾಲೇಜ್ ಹಿಂಭಾಗ. 11ನೇ ಮುಖ್ಯರಸ್ತೆ. 15ನೇ ಕ್ರಾಸ್ ಮಲ್ಲೇಶ್ವರಂ, ಬೆಂಗಳೂರು 560003

Leave a Reply

Your email address will not be published. Required fields are marked *

Back To Top