Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ವಿಭ್ರಾಂತ ಲೋಕದಲ್ಲಿ ಏಕಾಂತ ಪಯಣ

Friday, 08.12.2017, 3:04 AM       No Comments

| ಗಣೇಶ್ ಕಾಸರಗೋಡು

ಕರುಳಿನ ಕರೆ, ಕವಿರತ್ನ ಕಾಳಿದಾಸ, ರಂಗನಾಯಕಿ, ವಸಂತಗೀತ, ಬಂಧನ, ಎಡಕಲ್ಲು ಗುಡ್ಡದ ಮೇಲೆ, ಹೊಸಬೆಳಕು.. ಮೊದಲಾದ ಚಿತ್ರಗಳಿಗೆ ಸೂಪರ್ ಹಿಟ್ ಹಾಡುಗಳನ್ನು ಸಂಯೋಜಿಸಿರುವ ಸಂಗೀತ ನಿರ್ದೇಶಕ ಎಂ.ರಂಗಾರಾವ್ ಅವರು ವಿಧಿವಶರಾಗಿ ಆಗಲೇ 27 ವರ್ಷಗಳೇ ಕಳೆದಿವೆ. ಇಂಥ ಮಹಾನ್ ಸಂಗೀತ ಸಾಮ್ರಾಟನ ಕುಟುಂಬ ವರ್ಗ ಈಗ ಎಲ್ಲಿದೆ? ಏನು ಮಾಡುತ್ತಿದೆ? ಎಂಬೆಲ್ಲ ಪ್ರಶ್ನೆಯೊಂದಿಗೆ ರಂಗಾರಾವ್ ಅವರ ಧರ್ಮಪತ್ನಿ ಲಲಿತಾ ರಂಗಾರಾವ್ ಅವರ ಮುಂದೆ ಕುಳಿತಾಗ ಅವರು ಹೇಳಿದ್ದಿಷ್ಟು;

ನಮ್ಮವರಿಗೆ ಕ್ಯಾನ್ಸರ್ ಕಾಯಿಲೆ ಇತ್ತು. ಆದರೆ ಅವರಿಗೆ ಅದು ಗೊತ್ತಿರಲಿಲ್ಲ. ವೈದ್ಯರೂ ಹೇಳಲಿಲ್ಲ, ನಾವೂ ತಿಳಿದುಕೊಳ್ಳಲಿಲ್ಲ. ಕೊನೇಗಾಲದಲ್ಲಿ ಅವರ ಔಷಧೋಪಚಾರಕ್ಕಾಗಿ ಲಕ್ಷಾಂತರ ರೂ. ಖರ್ಚಾಯಿತು. ಚೆನ್ನೈನಲ್ಲಿದ್ದ ಎರಡು ಮನೆಗಳನ್ನು ಮಾರಿಬಿಟ್ಟೆವು. ಸತ್ತಾಗ ಅವರು ಬಿಟ್ಟು ಹೋದದ್ದು 35 ಸಾವಿರ ರೂ. ಸಾಲ! ಮನೆ ಕಟ್ಟಿದ ಕಂಟ್ರಾಕ್ಟರನಿಗೆ ಅಷ್ಟು ಹಣವನ್ನು ನಾವು ಕೊಡಬೇಕಾಗಿತ್ತು. ಫ್ರಿಜ್, ಟಿವಿ… ಹೀಗೆ ಏನೇನನ್ನೆಲ್ಲ ಮಾರಿದೆವು ಎನ್ನುವುದನ್ನು ಲೆಕ್ಕ ಹಾಕಿದರೆ ಎದೆಯೊಡೆಯುತ್ತದೆ. ಅವರು ವರಮಹಾಲಕ್ಷ್ಮೀ ಹಬ್ಬದ ದಿನ ಹೊರಟು ಹೋದರು. ಅವರ ಜತೆಗೇ ನಮ್ಮ ಸೌಭಾಗ್ಯವೆಲ್ಲ ಹೊರಟುಹೋಯಿತು. ಅವರಿರುವಾಗ ಕಷ್ಟವೆಂದರೇನೆಂದೇ ಗೊತ್ತಿರಲಿಲ್ಲ. ಹೊಟ್ಟೆ ಬಟ್ಟೆಗೆ ಕಮ್ಮಿಇರಲಿಲ್ಲ. ಖ್ಯಾತಿ, ದುಡ್ಡಿಗೂ ಕೊರತೆ ಇರಲಿಲ್ಲ. ಆದರೆ ಅವರು ಯಾವತ್ತೂ ನಮ್ಮನ್ನೆಲ್ಲ ಬಿಟ್ಟು ಹೊರಟು ಹೋದರೋ ಎಲ್ಲರೂ ಕೈ ಬಿಟ್ಟರು.

ಕರ್ನಾಟಕದ ಜನತೆಗಾಗಿ ಅವರು ಎಲ್ಲವನ್ನೂ ಕೊಟ್ಟರು. ಆದರೆ ಕರ್ನಾಟಕದ ಜನ ಅವರಿಗೇನು ಕೊಟ್ಟರು? ಸಾಯುವ ಕೊನೇ ಘಳಿಗೆವರೆಗೆ ಅವರನ್ನು ಪೀಡಿಸಿ ಹಾಡುಗಳನ್ನು ರೆಕಾರ್ಡ್ ಮಾಡಿಕೊಂಡು ಹೋದವರು ಮತ್ತೆ ತಿರುಗಿ ನೋಡಲಿಲ್ಲ. ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಸಂಭಾವನೆಯನ್ನೂ ಕೊಡಲಿಲ್ಲ. ಹೋಗಲಿ ಬಿಡಿ, ಹೆಣಕ್ಕೆ ಒಂದು ಹೂಮಾಲೆ ಹಾಕಿಸಿಕೊಳ್ಳುವ ಯೋಗ್ಯತೆಯೂ ಇವರಿಗೆ ಇಲ್ಲವಾಯಿತಾ? ಅವರು ಬಿಟ್ಟು ಹೋದ ಕುಟುಂಬ ಬದುಕಿದೆಯಾ ಸತ್ತಿದೆಯಾ ಎಂದು ಕೇಳಲು ಒಂದೇ ಒಂದು ನರಪಿಳ್ಳೆಯೂ ಚೆನ್ನೈ ಕಡೆ ಸುಳಿದಿದ್ದರೆ ಕೇಳಿ..?’- ಲಲಿತಾ ಅವರು ಒಂದೇ ಉಸಿರಿಗೆ ಇಷ್ಟನ್ನು ಹೇಳಿ ಆಯಾಸಗೊಂಡರು.

ಒತ್ತಿ ಬರುವ ಕಣ್ಣೀರನ್ನು ಕರವಸ್ತ್ರದಿಂದ ಒರೆಸಿಕೊಂಡು ಮತ್ತೆ ಮಾತು ಮುಂದುವರಿಸಿದರು ಲಲಿತಾ ರಂಗಾರಾವ್; ‘ಮದುವೆಗೂ ಮೊದಲು ಅವರೂ ಬಿಜಿಯಾಗಿದ್ದರು, ನಾನೂ ಬಿಜಿಯಾಗಿದ್ದೆ. ಒಂದು ಸುಮುಹೂರ್ತದಲ್ಲಿ ಅವರ ಪರಿಚಯವಾಯಿತು. ಮದುವೆಯಾಗಲು ನಿರ್ಧರಿಸಿದಾಗ ಕುಟುಂಬ ವರ್ಗ ವಿರೋಧಿಸಿತು. ಆದರೂ ಮದುವೆಯಾದೆವು. ನಮ್ಮದು ಪ್ರೇಮವಿವಾಹ. ಕೊನೆಗೂ ಹೆತ್ತವರು ದೂರ ಮಾಡಿದರು. ನಾವು ಬೇರೆ ಮನೆ ಮಾಡಿ ಸಂಸಾರ ಹೂಡಿದೆವು. ಅವರ ಹೆತ್ತವರಾಗಲಿ, ನನ್ನ ಹೆತ್ತವರಾಗಲಿ ಆಸ್ತಿಯಲ್ಲಿ ಬಿಡಿಗಾಸನ್ನೂ ಕೊಡಲಿಲ್ಲ. ಬೇಜಾರಿಲ್ಲ. ನನಗೆ ನನ್ನವರೇ ಆಸ್ತಿ! ಇವರೆಂದೂ ನಮ್ಮನ್ನು ದೂರ ಮಾಡಲಿಲ್ಲ.

ಎಲ್ಲಿಗೆ ಹೋಗುವರೋ ಅಲ್ಲಿಗೆಲ್ಲ ನಮ್ಮನ್ನೂ ಕರೆದುಕೊಂಡು ಹೋಗೋರು. ಆದರೆ ಇವರು ತುಂಬ ಧಾರಾಳಿ. ಹೊಗಳಿಕೆ ಅಂದರೆ ತುಂಬ ಇಷ್ಟ. ಹಾಡು ಸೂಪರ್ ಆಗಿದೆ ಎಂದು ಹೊಗಳಿದವರಿಗೆ ತಮ್ಮ ಚಿನ್ನದ ಚೈನನ್ನೇ ತೆಗೆದುಕೊಟ್ಟು ಬಿಡುತ್ತಿದ್ದರು! ಇವರ ಈ ದೌರ್ಬಲ್ಯವನ್ನು ಸಾಕಷ್ಟು ಜನ ದುರುಪಯೋಗ ಪಡಿಸಿಕೊಂಡರು. ಯಾರ್ಯಾರೋ ತಿಂದು ತೇಗಿದರು. ಹೀಗೇ ಕೊಟ್ಟೂ ಕೊಟ್ಟೂ ಎಲ್ಲವನ್ನೂ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಾಗ ನಾವೇ ಜತೆ ಸೇರಿಕೊಂಡೆವು. ತಿಂದರೆ ನಾವೇ ತಿನ್ನೋಣ ಅಂತ ಸದಾ ಅವರ ಜತೆಗೇ ಇದ್ದುಬಿಟ್ಟೆವು! ಅವರಿಗೆ ಯಾವ ಚಟವೂ ಇರಲಿಲ್ಲ. – ಎಂದು ಹೇಳುತ್ತ ಸೀರೆ ಸೆರಗಿನಿಂದ ಮೂಗು ಒರೆಸಿ ಕೊಂಡರು.

ಮನೆಯ ಹಿರಿಯ ರಂಗಾರಾವ್ ಹೊರಟು ಹೋದ ಮೇಲೆ ಇಡೀ ಕುಟುಂಬದ ಜವಾಬ್ದಾರಿ ಹೊತ್ತು ಕೊಂಡವರು ಹಿರಿಯ ಮಗಳು ಜಯಂತಿ. ಎಂಥ ಬಡತನವೆಂದರೆ ಊಟಕ್ಕಿಲ್ಲದಂಥ ಪರಿಸ್ಥಿತಿ ಇತ್ತು. ಮನೆ-ಮಠ ಮಾರಿದ್ದರಿಂದ ಬಾಡಿಗೆ ಮನೆಯಲ್ಲೇ ವಾಸ. ಬಾಡಿಗೆ ಕೊಡಲೂ ಸಾಧ್ಯವಿಲ್ಲದ ದುಃಸ್ಥಿತಿ. ರಂಗಾರಾವ್ ಕೈಲಿ ದುಡಿಸಿಕೊಂಡ ನಿರ್ವಪಕರು ಬಾಕಿ ಸಂಭಾವನೆ ಕೊಟ್ಟರೂ ಸಾಕು ಈ ಬಡ ಕುಟುಂಬ ಬದುಕಿಕೊಳ್ಳುತ್ತದೆ. ಆದರಿದು ಬರೀ ಕನಸು!

ಎಂ. ರಂಗಾರಾವ್ ಮೂಲತಃ ಆಂಧ್ರಪ್ರದೇಶದವರು. ಹೆಂಡತಿ ಲಲಿತಾ ರಂಗಾರಾವ್ ಕೇರಳದ ಮಲಯಾಳಿ ಹೆಂಗಸು. ತುಂಬ ಚೆನ್ನಾಗಿ ಹಾಡುತ್ತಿದ್ದರು. ಡಬ್ಬಿಂಗ್ ಕೂಡ ಮಾಡುತ್ತಿದ್ದರು. ಹೀಗೊಮ್ಮೆ ಸ್ಟುಡಿಯೋವೊಂದಕ್ಕೆ ಡಬ್ಬಿಂಗ್​ಗೆಂದು ಬಂದಿದ್ದಾಗ ರಂಗಾರಾವ್ ಅವರ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿ ಅದು ಪ್ರೇಮವಾಗಿ ಮದುವೆಯಲ್ಲಿ ಮುಕ್ತಾಯವಾಯಿತು! ಆ ನಂತರ ಲಲಿತಾ ಅವರದ್ದು ಸದ್ಗೃಣಿಯ ಪಾತ್ರ! ಇಬ್ಬರು ಹೆಣ್ಣು ಮಕ್ಕಳ ತಾಯಿ. ಚಿತ್ರ ಸಂಗೀತ ಲೋಕದ ಧ್ರುವತಾರೆಯಾಗಿ ಮೆರೆಯುತ್ತಿದ್ದ ರಂಗಾರಾವ್ ಅವರು ಖ್ಯಾತಿ, ದುಡ್ಡು, ಹೆಂಡತಿ, ಮಕ್ಕಳು, ಗೆಳೆಯರು, ಬಂಧು-ಬಾಂಧವರನ್ನೆಲ್ಲ ಬಿಟ್ಟು ಒಂದು ದಿನ ಅನಿರೀಕ್ಷಿತವಾಗಿ ಹೊರಟು ಹೋದಾಗಲೇ ಸಮಸ್ಯೆ ಲಲಿತಾ ರಂಗಾರಾವ್ ಅವರನ್ನು ಕಾಡಿದ್ದು, ಪೀಡಿಸಿದ್ದು. ‘ವೀಣೆ ರಂಗಾರಾವ್’ ಎಂದೇ ಹೆಸರಾಗಿದ್ದ ಅವರ ಗುರು ಬೇರೆ ಯಾರೂ ಅಲ್ಲ, ತಾಯಿ ರಂಗಮ್ಮ! ‘ತ್ಯಾಗಯ್ಯ’ ಎಂಬ ತೆಲುಗು ಚಿತ್ರದಲ್ಲಿ ವೀಣಾ ವಾದನದ ಮೊದಲ ಅವಕಾಶ. ’ಕಾವೇರಿ’ ಅವರ ಮೊದಲ ಸಂಗೀತ ನಿರ್ದೇಶನದ ಚಿತ್ರ. ಮತ್ತೆ ಹಿಂದಿರುಗಿ ಅವರು ‘ಹಣ್ಣೆಲೆ ಚಿಗುರಿದಾಗ’, ‘ಹೊಸಬೆಳಕು’, ’ಬಂಧನ’ ಸಿನಿಮಾಗಳ ಸಂಗೀತ ಸಂಯೋಜನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.

(ಲೇಖಕರು ಹಿರಿಯ ಸಿನಿಮಾ ಪತ್ರಕರ್ತರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top