Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ವಿಭಜನೆಯ ದುರಂತ ಕಥೆ ಹೇಳುತಿದೆ ಈ ಸಂಗ್ರಹಾಲಯ

Tuesday, 19.09.2017, 3:00 AM       No Comments

ಪಂಜಾಬ್​ನ ರಾಜಧಾನಿ ಅಮೃತಸರದಲ್ಲಿ ವಿಶಿಷ್ಟವಾದ ಸಂಗ್ರಹಾಲಯ ಲೋಕಾರ್ಪಣೆಗೊಂಡಿದೆ. ಭಾರತ ವಿಭಜನೆ ಸಂದರ್ಭದಲ್ಲಿನ ದಾರುಣ ಚಿತ್ರಣದ ಜತೆಗೆ ವಿಭಜನೆ ತರುವ ಸಂಕಟ, ತಲ್ಲಣಗಳನ್ನೂ ಈ ಸಂಗ್ರಹಾಲಯ ಪರಿಣಾಮಕಾರಿಯಾಗಿ ಬಿಂಬಿಸಿದೆ. ಯಾವ ಆಳುಗನೂ ಮತ್ತೆ ದೇಶ ವಿಭಜನೆಗೆ ಮುಂದಾಗಬಾರದೆಂಬ ಸಂದೇಶವನ್ನೂ ನೀಡುತ್ತಿದೆ.

 

ಅದು ಯಾರ ಚಿಂತನೆಯೋ, ಮುಠ್ಠಾಳತನವೋ? ದೇಶವಿಭಜನೆಯ ವಿಷಬೀಜವನ್ನು ‘ರಾಜಕೀಯ ಚಿಂತನೆ‘ಯ ರೂಪದಲ್ಲಿ ಪ್ರಸ್ತುತಪಡಿಸಿದರು. ಯಾರಿಗೆ ಬೇಕಿತ್ತು ವಿಭಜನೆ… ಕೆಲವೇ ಕೆಲವು ಅಧಿಕಾರದಾಹಿ ನಾಯಕರು ವಿಭಜನೆಗಾಗಿ ಹಪಹಪಿಸಿದರು. ಶತ-ಶತಮಾನಗಳಿಂದ ಭ್ರಾತೃತ್ವ, ಸಹೋದರತ್ವ, ಸಾಮರಸ್ಯದಿಂದ ಜೀವನ ನಡೆಸುತ್ತಿದ್ದ ಜನಸಾಮಾನ್ಯರಿಗೆ ಇದ್ಯಾವುದೂ ಬೇಕಿರಲಿಲ್ಲ. ದೇಶ ತುಂಡಾಗಲಿದೆ ಎಂಬ ಸಂಗತಿಯೇ ಅಸಂಖ್ಯ ಮನಸ್ಸುಗಳನ್ನು ಘಾಸಿ ಮಾಡಿತು. ಮುಂದೇನು ಎಂಬ ಚಿಂತೆ ಮೂಡಿತು. ದುರದೃಷ್ಟವಶಾತ್, ಕೆಲವೇ ನಾಯಕರ ಸ್ವಾರ್ಥಕ್ಕೆ ದೇಶ ವಿಭಜನೆಗೊಂಡಿತು. ಆಗಸ್ಟ್ 14, 1947. ಆ ದಿನ, ಆ ಘಟನೆ ಕಳೆದು 70 ವರ್ಷಗಳಾದರೂ ವಿಭಜನೆಯ ಕರಾಳ ನೆನಪುಗಳು, ನೋವುಗಳು ಮಾಸಿಲ್ಲ. ಏಕೆಂದರೆ, ಅದು ಬರೀ ದೇಶ ತುಂಡಾದ ಘಳಿಗೆ ಆಗಿರಲಿಲ್ಲ, ಬದಲಾಗಿ ಮಾನವೀಯತೆಯೇ ತಲೆತಗ್ಗಿಸಿದ, ಕ್ರೌರ್ಯವೇ ವಿಜೃಂಭಿಸಿದ ಯಾತನೆಗಳಾಗಿದ್ದವು.

ಎಷ್ಟೋ ದಶಕಗಳಿಂದ ಇಲ್ಲಿನ ನೆಲದೊಂದಿಗೆ ಮಿಳಿತವಾಗಿ ಬದುಕುತ್ತಿದ್ದ ಜನರು ರಾತ್ರೋರಾತ್ರಿ ಮನೆಮಠ ಎಲ್ಲವನ್ನೂ ತೊರೆದು ತೆರಳುವಾಗ ಅದೆಷ್ಟೋ ಎದೆಗಳು ದುಃಖದಿಂದ ಭಾರವಾಗಿದ್ದವು. ಸಾಕಷ್ಟು ಜನರು ಈ ಕೊರಗಿನಲ್ಲೇ ನರಳುತ್ತ ಬದುಕಿದರು. ಹಲವು ನಗರಗಳಲ್ಲಿ ಅಮಾನವೀಯತೆಯ ರೌದ್ರನರ್ತನ ಸಾಗಿತು. ಎಲ್ಲೆಂದರಲ್ಲಿ ಶವಗಳ ರಾಶಿ. ಮತ್ತೊಂದೆಡೆ ಚೀತ್ಕಾರ, ನೋವಿನದ್ದೇ ಸದ್ದು. ಜೀವ ಉಳಿಸಿಕೊಂಡವರು ತಮ್ಮವರಿಗಾಗಿ ಹುಡುಕಾಡುತ್ತಿದ್ದ ದೃಶ್ಯಗಳು, ಶವವಾಗಿ ಪತ್ತೆಯಾದಾಗ ಕಂಡುಬಂದ ಸಂಕಟ, ಖಾಲಿ-ಖಾಲಿಯಾದ ಊರುಗಳು, ವಿಭಜನೆಯ ದುರಂತಕ್ಕೆ ಸಾಕ್ಷಿಯಾಗಿದ್ದವು. ಮನುಕುಲದ ಇತಿಹಾಸದಲ್ಲಿ ಆಗಬಾರದ ಪ್ರಮಾದವೊಂದು ಆಗಿ ಹೋಗಿತ್ತು. ನಮ್ಮ ದೇಶದಿಂದ ವಿಭಜನೆಗೊಂಡು ಪಾಕಿಸ್ತಾನ ಎಂಬ ಹೆಸರಿನಲ್ಲಿ ಸೃಷ್ಟಿಯಾದ ರಾಷ್ಟ್ರ ತಾನೂ ನೆಮ್ಮದಿಯಾಗಿ ಬಾಳಲಿಲ್ಲ, ಭಾರತವನ್ನೂ ನೆಮ್ಮದಿಯಿಂದ ಬಾಳಲು ಬಿಡುತ್ತಿಲ್ಲ. ವಿಭಜನೆಯ ಮೂಲಕ ಶಾಶ್ವತ ವೈರಿಯೊಂದನ್ನು ಸೃಷ್ಟಿಸಿಕೊಂಡು, ಪಾಕ್​ನೊಡನೆ ಹೋರಾಡುವುದೇ ಈಗ ಅನಿವಾರ್ಯವಾಗಿ ಹೋಗಿದೆ.

ಪ್ರತ್ಯೇಕ ರಾಷ್ಟ್ರದ ಕನಸು ಕಂಡ ಪಾಕಿಸ್ತಾನ ಒಂದು ರಾಷ್ಟ್ರವಾಗಿಯಾದರೂ ಉಳಿಯಿತೇ? ಅಸ್ತಿತ್ವಕ್ಕೆ ಬಂದ ಎರಡೂವರೆ ದಶಕಗಳ ಮುನ್ನವೇ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶವಾಯಿತು. ಈಗ ಬಲೂಚಿಸ್ತಾನ, ಸಿಂಧ್ ಸೇರಿದಂತೆ ಹಲವು ರಾಜ್ಯ-ಪ್ರಾಂತ್ಯಗಳಲ್ಲಿ ಪ್ರತ್ಯೇಕ ರಾಷ್ಟ್ರದ ಕೂಗು ಕೇಳಿಬರುತ್ತಿದೆ. ಎಲ್ಲ ರಂಗಗಳಲ್ಲೂ ವಿಫಲ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಪಾಕ್ ಜಗತ್ತಿಗೆ ಭಯೋತ್ಪಾದನೆಯನ್ನು ರಫ್ತು ಮಾಡುತ್ತ ಮತ್ತೆ ಹಿಂಸೆ, ಅಶಾಂತಿಯ ಬೀಜಗಳನ್ನೇ ಬಿತ್ತುತ್ತಿದೆ.

ರಕ್ತಕಣ್ಣೀರು ತರಿಸುವ ಆ ವಿಭಜನೆಯ ಘಟನೆಯನ್ನು ಇಂದಿಗೂ ಭಾರತೀಯರು ಮರೆತಿಲ್ಲ. ಅದಕ್ಕಾಗಿ, ಅಸಂಖ್ಯ ಜನರು ಪ್ರತಿವರ್ಷ ಆ.14ರಂದು ‘ಅಖಂಡ ಭಾರತ ದಿನ‘ವನ್ನು ಆಚರಿಸಿ, ಅಖಂಡ ಭಾರತಕ್ಕಾಗಿ ಸಂಕಲ್ಪಿಸುತ್ತಿದ್ದಾರೆ. ವಿಭಜನೆಯ ನೋವನ್ನು ಹಲವು

ಪ್ರದೇಶಗಳನ್ನು ಅನುಭವಿಸಿದ್ದು ಹೌದಾದರೂ ಇದರ ಹೆಚ್ಚು ತೀವ್ರತೆಯನ್ನು ಅನುಭವಿಸಿದ್ದು ಭಾರತದ ಪಂಜಾಬ್ ರಾಜ್ಯ. ಇಲ್ಲಿನ ಹಲವು ನಗರಗಳು ತತ್ತರಿಸಿ ಹೋದವು. ಹೌದು, ಈಗ್ಯಾಕೆ ಈ ವಿಭಜನೆಯ ಗಾಥೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಿರಲಿಕ್ಕೂ ಸಾಕು.

ವಿಭಜನೆಯ ನೋವು, ಆ ಸಂದರ್ಭದ ಚಿತ್ರಣ, ಆಗಿನ ಎಲ್ಲ ಘಟನಾವಳಿಗಳು, ಪ್ರಮುಖ ವಿದ್ಯಮಾನಗಳು, ಅವುಗಳು ಬೀರಿದ ಪರಿಣಾಮಗಳು… ಇವನ್ನೆಲ್ಲ ಈಗಿನ ಪೀಳಿಗೆಗೆ ತಿಳಿಸಿ ಕೊಡಲು, ಆ ಮೂಲಕ ಮನಸ್ಸು ಮತ್ತು ದೇಶದ ವಿಭಜನೆ ತಡೆಯಿರಿ ಎಂಬ ಸಂದೇಶ ನೀಡಲು The Arts and Cultural Heritage Trust (TAACHT) ಪಂಜಾಬ್​ನ ರಾಜಧಾನಿ ಅಮೃತಸರ್​ದಲ್ಲಿ ಕಳೆದ ವರ್ಷ ಪಾರ್ಟಿಷನ್ ಮ್ಯೂಸಿಯಂ(PARTITION MUSEUM) ನಿರ್ವಿುಸಿದೆ. 2016ರ ಅಕ್ಟೋಬರ್ 24ರಂದು ಆಗಿನ ಉಪ ಮುಖ್ಯಮಂತ್ರಿ ಸುಖ್​ಬೀರ್ ಸಿಂಗ್ ಬಾದಲ್​ರಿಂದ ಲೋಕಾರ್ಪಣೆಗೊಂಡ ಈ ಸಂಗ್ರಹಾಲಯಕ್ಕೆ ಪ್ರತಿನಿತ್ಯ ಸರಾಸರಿ ಸಾವಿರ ಜನರು ಭೇಟಿ ನೀಡುತ್ತಿದ್ದಾರೆ. ಶಾಲಾ ಮಕ್ಕಳಿಂದ ಹಿಡಿದು ವಿದೇಶಿಯರು, ಇತಿಹಾಸಕಾರರು, ಜನಸಾಮಾನ್ಯರು ಭೇಟಿ ನೀಡಿ ವಿಭಜನೆಯ ನೋವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ವಿಭಜನೆ ಸಂದರ್ಭದಲ್ಲಿ ಮಡಿದ, ಬಲಿದಾನಗೈದ ಅಸಂಖ್ಯ ಜನರನ್ನು ಸ್ಮರಿಸಲು, ಗೌರವ ಸಲ್ಲಿಸಲು ಈ ಸಂಗ್ರಹಾಲಯ ನಿರ್ವಿುಸಲಾಗಿದೆ ಎನ್ನುತ್ತದೆ ಟ್ರಸ್ಟ್ (ಹೆಚ್ಚಿನ ಮಾಹಿತಿಗಳಿಗಾಗಿ: www.partitionmuseum.org).

ಈ ಸಂಗ್ರಹಾಲಯ ವೀಕ್ಷಿಸಿದಾಗ, ಖ್ಯಾತ ಲೇಖಕ, ಕವಿ ಸಾದತ್ ಹಸನ್ ಮಂಟೋ ಬರೆದ ವಿಭಜನೆಯ ನೋವುಗಳು ಕಣ್ಣೆದುರು ಬಂದು ಹೃದಯ ಹಿಂಡಿದಂತಾಗುತ್ತದೆ. ವಿಭಜನೆಯಿಂದ ಅಮೃತಸರದಲ್ಲಿ ಆದ ಸಾವುನೋವುಗಳನ್ನು ಕಣ್ಣಾರೆ ಕಂಡಿದ್ದ ಹಸನ್, ಅದನ್ನು ಬರವಣಿಗೆಯಲ್ಲಿ ಹಿಡಿದಿಡುವಾಗ ಅನುಭವಿಸಿರುವ ನೋವು ಅಂದಿನ ದಿನಗಳು ಎಷ್ಟು ವಿಷಮವಾಗಿದ್ದವು ಎಂಬುದಕ್ಕೆ ಸಾಕ್ಷಿ. ಮಂಟೋ ಬರೆದಿರುವಂತೆ-‘ವಿಭಜನೆ ಸಂದರ್ಭದಲ್ಲಿನ ಕ್ಷೋಭೆಯಿಂದಾಗಿ ಅಮೃತ್​ಸರದ ಶೇಕಡ 40ರಷ್ಟು ಮನೆಗಳು ಧರಾಶಾಯಿಯಾಗಿದ್ದವು. ಅಧ್ಯಾತ್ಮಕ್ಕೆ, ಗುರುವಾಣಿಗೆ, ಶಾಂತಿ, ಸೌಹಾರ್ದ, ಸಾಮರಸ್ಯಕ್ಕೆ ಹೆಸರುವಾಸಿಯಾಗಿದ್ದ ಈ ನಗರ ಅಕ್ಷರಶಃ ಸ್ಮಶಾನದಂತೆಯೂ, ಅಲ್ಲಲ್ಲಿ ಬಿದ್ದ ಶವಗಳು ಗೋರಿಗಳಂತೆಯೂ ಕಾಣುತ್ತಿದ್ದವು. ನನ್ನ ಪ್ರೀತಿಯ ನಗರ ಸ್ಮಶಾನವಾಗಿ ಬದಲಾಗಿದೆ. ನನ್ನ ಮನೆ ಮತ್ತು ನನ್ನ ನಗರವಷ್ಟೇ ಸುಟ್ಟುಹೋಗಿಲ್ಲ, ಇಡೀ ಪಂಜಾಬ್ ಇಲ್ಲಿ ದಫನ್ ಆಗಿದೆ. ಇಲ್ಲಿ ನನ್ನವರನ್ನು, ಇತರರನ್ನು ಹೇಗೆ ಹುಡುಕಲಿ, ಎಲ್ಲಿ ಹುಡುಕಲಿ? ಎಲ್ಲಿ ನೋಡಿದರೂ ಬರೀ ಶವಗಳೇ ಬಿದ್ದುಕೊಂಡಿವೆ. ನಾನಂತೂ ಹುಚ್ಚನಾಗಿ ಇಲ್ಲಿ ಪಂಜಾಬಿಯತ್ ಹುಡುಕುತ್ತಿದ್ದೇನೆ, ಮಾನವೀಯತೆ ಹುಡುಕುತ್ತಿದ್ದೇನೆ. ಇಲ್ಲ, ಅವು ಯಾವವೂ ಇಲ್ಲಿ ಇಲ್ಲ. ಬರೀ ಚೀತ್ಕಾರ, ಅಗ್ನಿಯ ಕ್ರೋಧ, ಅಶಾಂತಿಯ ಕೇಕೆ, ಅಸಹನೆಯ ಪರ್ವತ, ಸ್ವಾರ್ಥದ ಪರಾಕಾಷ್ಠೆ, ನೋವಿನ ಸದ್ದು, ಯಾತನೆಯ ಸಂಕಟ ಕಾಣುತ್ತಿದೆ. ಇಲ್ಲಿ, ಎಲ್ಲಿ ಹುಡುಕಲಿ ಮಾನವೀಯತೆಯನ್ನು‘ ಎಂಬ ಪ್ರಶ್ನೆ ಮನಸ್ಸಿಗೆ ಇರಿಯುತ್ತದೆ. ಕಾಲಘಟ್ಟದ ಯಾವ ಪೀಳಿಗೆಯೂ ವಿಭಜನೆಯಂಥ ದುರಂತಕ್ಕೆ ಕೈಹಾಕಬಾರದು ಎಂಬ ಎಚ್ಚರಿಕೆ ನೀಡುತ್ತದೆ.

ಪಂಜಾಬ್​ನ ಹಾಲಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಸಚಿವ ನವಜೋತ್ ಸಿಂಗ್ ಸಿಧು ಕೂಡ ಇತ್ತೀಚೆಗೆ ಈ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾರೆ. ಆ ಸಂದರ್ಭದಲ್ಲಿ ಅಮರಿಂದರ್ ಹೇಳಿದ ಮಾತುಗಳು ಗಮನಾರ್ಹ-‘‘ಯಾವುದೇ ದೇಶವಾದರೂ ತನ್ನ ಇತಿಹಾಸದಿಂದ ಪಾಠ ಕಲಿತೇ ಮುಂದೆ ಒಳಿತಿನ ಹೆಜ್ಜೆಗಳನ್ನು ಇರಿಸುತ್ತದೆ. ಹಾಗೆಯೇ, ವಿಭಜನೆಯ ಇತಿಹಾಸ ಭಾರತದ ಪಾಲಿಗೆ ದೊಡ್ಡ ಪಾಠ. ಆಗ ಆದ ಆಸ್ತಿಪಾಸ್ತಿ ಹಾನಿ, ಜೀವಹಾನಿಯನ್ನು ನೆನಪಿಸಿಕೊಂಡರೂ ಭಯವಾಗುತ್ತದೆ. ನಾನು ಆ ಕ್ಷಣಗಳಿಗೆ ಸಾಕ್ಷಿಯಾಗಿದ್ದರಿಂದ, ಆ ಕಹಿನೆನಪುಗಳನ್ನು ಇಂದಿಗೂ ಮರೆಯಲು ಸಾಧ್ಯವಾಗಿಲ್ಲ. ಶಿಮ್ಲಾದಲ್ಲಿ ನಾನಿದ್ದ ಹಾಸ್ಟೇಲಿನಿಂದ ಮನೆಗೆ ಬಸ್ಸಿನಲ್ಲಿ ಮರಳುತ್ತಿದ್ದೆ. ಕಿಟಕಿಯಿಂದ ನೋಡಿದರೆ ಬರೀ ಶವಗಳೇ ಕಾಣುತ್ತಿದ್ದವು. ನನ್ನ ತಾಯಿ ಮೊಹಿಂದರ್ ಕೌರ್ ಆಗ ಸಂತ್ರಸ್ತರ ನೆರವಿಗೆ ಧಾವಿಸಿದ್ದು ಚೆನ್ನಾಗಿ ನೆನಪಿದೆ. ಬಾಲಕಿಯರು, ಯುವತಿಯರು ದಿಕ್ಕುಗಾಣದೆ ಪರದಾಡುತ್ತಿರುವಾಗ ಅಮ್ಮ ಅವರಿಗೆ ಮನೆಯಲ್ಲೇ ಊಟ ಬಡಿಸಿ, ಕೆಲ ಸಮಯ ಆಶ್ರಯ ನೀಡಿದ್ದರು. ಅಷ್ಟೇ ಅಲ್ಲ, ಪಾಕಿಸ್ತಾನದಿಂದ ಭಾರತಕ್ಕೆ ಬಂದ ಯುವತಿಯರಿಗೆ ನೆರವು, ಆಶ್ರಯ ಕಲ್ಪಿಸಿದ್ದರು. ಆಗ ಉದ್ಭವಿಸಿದ ಸಂಕಟಗಳು, ಸೃಷ್ಟಿಯಾದ ನೋವುಗಳು ಯಾವ ರಾಷ್ಟ್ರಕ್ಕೂ ಬರಬಾರದು‘.

ಪಂಜಾಬ್ ಸರ್ಕಾರ ಪ್ರತಿವರ್ಷ ಆಗಸ್ಟ್ 17ನ್ನು ವಿಭಜನೆ ಸ್ಮರಣೆ ದಿನವನ್ನಾಗಿ ಆಚರಿಸುತ್ತಿದೆ. ಆ.17ರಂದೇ ಅಸಂಖ್ಯ ಪಂಜಾಬಿಗರು ತಮ್ಮ ಭೂಭಾಗ ತೊರೆದು ಪಾಕ್ ಪ್ರವೇಶಿಸಿದ್ದರು. ಹಾಗೇ, ಪಾಕ್​ನ ಸಿಖ್ ಮತ್ತು ಹಿಂದು ಕುಟುಂಬಗಳು ಪಂಜಾಬ್ ಪ್ರವೇಶಿಸಿದ್ದವು. ಸ್ವಾತಂತ್ರ್ಯ್ರಾಪ್ತಿಯ ಏಳು ದಶಕಗಳ ನಂತರ ವಿಭಜನೆಯ ಇತಿಹಾಸವನ್ನು ತಿಳಿಸಿಕೊಡುವ ಉದ್ದೇಶದಿಂದ ಈ ಸಂಗ್ರಹಾಲಯ ನಿರ್ವಣಗೊಂಡಿದ್ದು, ಹಲವು ಮಹತ್ವಪೂರ್ಣ ಸಂದೇಶಗಳನ್ನೂ ನೀಡುತ್ತಿದೆ. ಈ ಮೂಲಕ ಈಗಿನ ಪೀಳಿಗೆ ವಿಭಜನೆಯ ನೋವನ್ನು, ಆಗಿನ ಸಾಮಾಜಿಕ ತಲ್ಲಣವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆ.

ಒಂದು ತಪ್ಪುನಿರ್ಧಾರ ಇಡೀ ರಾಷ್ಟ್ರವನ್ನು ಹೇಗೆ ನಲುಗಿಸುತ್ತದೆ, ಹಲವು ಪೀಳಿಗೆಗಳನ್ನು ಹೇಗೆ ಪ್ರಭಾವಿಸುತ್ತದೆ ಎಂಬುದಕ್ಕೆ ದೇಶ ವಿಭಜನೆಯ ನೋವೇ ಸಾಕ್ಷಿ. ಮಾನವೀಯತೆ, ರಾಷ್ಟ್ರೀಯತೆ, ರಾಷ್ಟ್ರಧರ್ಮದ ಭಾವಗಳು ಅಲುಗಾಡಿದಾಗ ಸೃಷ್ಟಿಯಾಗುವುದು ವಿಪ್ಲವವೇ. ಹಾಗಾಗಿ, ಒಂದು ರಾಷ್ಟ್ರ ಯಾವುದೇ ಕಾರಣಕ್ಕೂ ಅಧಿಕಾರಲಾಲಸಿಗಳ, ಸ್ವಾರ್ಥಪಿಪಾಸುಗಳ ಕೈಯಲ್ಲಿ ಸಿಕ್ಕಿ ನಲುಗಬಾರದು. ಅದೇನೆ ಇದ್ದರೂ, ಏಳು ದಶಕಗಳ ನಂತರ ಮತ್ತೆ ಅಖಂಡ ಭಾರತದ ಕನಸು ಚಿಗುರೊಡೆಯುತಿದೆ, ಇದಕ್ಕೆ ಪೂರಕ ಎಂಬಂತೆ ಪಾಕಿಸ್ತಾನ ಪ್ರಪಾತದತ್ತ ಜಾರುತ್ತಿದೆ. ಮುಂದಿನ ದಿನಗಳು ಭಾರತದ್ದೇ ಎಂಬ ಆಶಾವಾದ ಹುಟ್ಟುತ್ತಿದೆ.

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು

ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

 

Leave a Reply

Your email address will not be published. Required fields are marked *

Back To Top