Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ವಿಜಯಮಾಲೆ ಧರಿಸಲು ತಂತ್ರ-ಪ್ರತಿತಂತ್ರ

Sunday, 26.03.2017, 9:36 AM       No Comments

| ಪ್ರಸಾದ್ ಲಕ್ಕೂರು

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿಷ್ಠೆಯಾಗಿ ತೆಗೆದುಕೊಂಡು ಗೆಲುವಿಗಾಗಿ ತಂತ್ರ- ಪ್ರತಿತಂತ್ರ ಹೆಣೆಯತೊಡಗಿವೆ. ಇತರೆ ಪಕ್ಷಗಳು ಕಣದಿಂದ ದೂರ ಸರಿದು ಎಲ್ಲವನ್ನು ತೆರೆ ಮರೆಯಲ್ಲಿ ವೀಕ್ಷಿಸುತ್ತಿವೆ.

ಗುಂಡ್ಲುಪೇಟೆ ಕ್ಷೇತ್ರಕ್ಕೆ ಒಮ್ಮೆಯೂ ಉಪ ಚುನಾವಣೆ ನಡೆದಿಲ್ಲ. ಸಚಿವರಾಗಿದ್ದ ಎಚ್.ಎಸ್. ಮಹದೇವಪ್ರಸಾದ್ ಅಕಾಲಿಕ ನಿಧನದಿಂದ ಉಪ ಚುನಾವಣೆ ನಡೆಯುವಂತಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಬಿಎಸ್​ಪಿ ಸಕ್ರಿಯವಾಗಿವೆ. ಇವುಗಳ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಭಾವಶಾಲಿಗಳಾಗಿದ್ದು, ಹಣಬಲ ಮತ್ತು ಜನಬಲ ನೆಚ್ಚಿಕೊಂಡು ರಾಜಕಾರಣ ನಡೆಸುತ್ತಿವೆ. ಕಾಂಗ್ರೆಸ್ ಭದ್ರಕೋಟೆಯಾದ ಜಿಲ್ಲೆಯಲ್ಲಿ ಕಮಲ ಅರಳಿಸಲು 1994, 2004, 2008, 2013 ತೀವ್ರ ಪ್ರಯತ್ನ ನಡೆದಿದೆ. ಗೆಲುವಿನ ಹತ್ತಿರಕ್ಕೆ ಬಂದು ಬಿಜೆಪಿ ಸೋತಿದೆ.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಇಲ್ಲಿಯ ತನಕ ನಡೆದ 14 ಚುನಾವಣೆಗಳಲ್ಲಿ ಜನತಾ ಪರಿವಾರ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಕಣದಲ್ಲಿದ್ದರು. ಎಚ್.ಕೆ.ಶಿವರುದ್ರಪ್ಪ ಮತ್ತು ಕೆ.ಎಸ್.ನಾಗರತ್ನಮ್ಮ ತಲಾ 2 ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಉಳಿದ 10 ಚುನಾವಣೆಗಳಲ್ಲಿ ಪಕ್ಷಗಳಿಂದಲೇ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಕ್ಷೇತ್ರಕ್ಕೆ ಬಿಎಸ್ಪಿ 2004, 2008, 2013ರಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಜನತಾದಳದಿಂದ ಎಚ್.ಎಸ್.ಮಹದೇವಪ್ರಸಾದ್ 3 ಬಾರಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನಿರಂತರವಾಗಿ ಸ್ಪರ್ಧೆ ಮಾಡುತ್ತಲೇ ಬಂದಿದೆ. 2008ರ ಚುನಾವಣೆ ವೇಳೆಗೆ ಮಹದೇವಪ್ರಸಾದ್ ಕಾಂಗ್ರೆಸ್ ಸೇರುತ್ತಿದ್ದಂತೆ ಜೆಡಿಎಸ್ ತನ್ನ ಅಸ್ತಿತ್ವ ಕಳೆದುಕೊಂಡಿತು. 2008 ಮತ್ತು 2013ರ ಚುನಾವಣೆಗಳನ್ನು ಹೊರತು ಪಡಿಸಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜನತಾಪರಿವಾರವೇ ಮುಖಾಮುಖಿಯಾದದ್ದು ಹೆಚ್ಚು. 2008ರಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅಲೆ ಬೀಸಿತ್ತು. ಅಲ್ಲಿಂದ ಇಲ್ಲಿಯ ತನಕ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆದಿದೆ.

2008 ಮತ್ತು 2013ರ ಚುನಾವಣೆಗಳಲ್ಲಿ ಜೆಡಿಎಸ್​ನಿಂದ ಹೊಸ ಮುಖಗಳು ಕಣಕ್ಕೆ ಇಳಿದಿದ್ದರು. 2004ರಲ್ಲಿ ಬಿಎಸ್ಪಿಯ ಮತ ಗಳಿಕೆ ಗಮನಾರ್ಹವಾಗಿತ್ತು. ನಂತರ 2008, 2013 ಚುನಾವಣೆಗಳಲ್ಲಿ ಮತಗಳಿಕೆ ಪ್ರಮಾಣ ಕುಸಿತಗೊಂಡಿದೆ.

ಕಾಂಗ್ರೆಸ್, ಜೆಡಿಎಸ್ ಅತೃಪ್ತರನ್ನು ಸೆಳೆಯಲು ಕೃಷ್ಣ ಪ್ರಭಾವ ಬಳಕೆ

ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ನೆಲೆಯೂರಲು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರನ್ನು ಗಾಳವಾಗಿ ಉಪಯೋಗಿಸಿಕೊಳ್ಳಲು ತಂತ್ರ ರೂಪಿಸಲಾಗಿದೆ. ಪ್ರಬಲ ಒಕ್ಕಲಿಗ ನಾಯಕರಾಗಿರುವ ಕೃಷ್ಣ ಹೆಸರನ್ನು ಬಳಸಿಕೊಂಡು ಕೋಲಾರ, ಮಂಡ್ಯ ಹಾಗೂ ಮೈಸೂರು ಭಾಗದಲ್ಲಿನ ಒಕ್ಕಲಿಗ, ದಲಿತ ಮುಖಂಡರನ್ನು ಬಿಜೆಪಿಗೆ ತರಲು ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ. ಮಾಜಿ ಡಿಸಿಎಂ ಆರ್.ಅಶೋಕ ಹಾಗೂ ಇತರರಿಗೆ ಇದರ ಜವಾಬ್ದಾರಿ ನೀಡಲಾಗಿದ್ದು, ಶೀಘ್ರದಲ್ಲೇ ಇದರ ಪರಿಣಾಮ ಹೊರಬೀಳಲಿದೆ. ಕಾಂಗ್ರೆಸ್ ಜತೆ ಅಸಮಾಧಾನ ಹೊಂದಿರುವವರು, ಕೃಷ್ಣ ಅವರೊಂದಿಗೆ ಉತ್ತಮ ಬಾಂಧವ್ಯ ಇರುವವರು ಹಾಗೂ ಜೆಡಿಎಸ್ ಜತೆ ಮುನಿಸಿಕೊಂಡವರನ್ನು ಬಿಜೆಪಿಗೆ ತರಲು ಪ್ರಯತ್ನ ಆರಂಭಿಸಲಾಗಿದೆ. ವಿಜಯವಾಣಿಗೆ ಬಿಜೆಪಿ ಮುಖಂಡರೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಚಿಂತಾಮಣಿಯ ಮಾಜಿ ಶಾಸಕ, ಕಾಂಗ್ರೆಸ್​ನಿಂದ ದೂರಾಗಿರುವ ಡಾ.ಎಂ.ಸಿ.ಸುಧಾಕರ್ ಜತೆಗೆ ಒಂದು ಹಂತದ ಮಾತುಕತೆ ಮುಗಿದಿದೆ. ಉಪಚುನಾವಣೆ ಆಸುಪಾಸಿನಲ್ಲಿ ಬಿಜೆಪಿಗೆ ಸೇರುವ ಸಾಧ್ಯತೆಯಿದೆ. ಇನ್ನು ಕಾಂಗ್ರೆಸ್ ಶಾಸಕ ಸಿ.ಪಿ.ಯೋಗೀಶ್ವರ್ ಬಿಜೆಪಿಗೆ ಬರುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದರೂ, ಅವರು ಇದನ್ನು ಅಲ್ಲಗಳೆದಿದ್ದಾರೆ. ಆದಾಗ್ಯೂ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಹಿನ್ನೆಲೆಯಲ್ಲಿ ನಿರಂತರ ಸಂಪರ್ಕದಲ್ಲಿರುವಂತೆ ಬಿಜೆಪಿ ನಾಯಕರಿಗೆ ಬಿಎಸ್​ವೈ ಸೂಚಿಸಿದ್ದಾರೆ. ಇನ್ನು ಮಂಡ್ಯದಲ್ಲಿ ಕೃಷ್ಣ ಅವರ ಆಪ್ತ ಸತ್ಯಾನಂದ ಕೆಪಿಸಿಸಿ ಪದಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರುವ ಇರಾದೆ ವ್ಯಕ್ತಪಡಿಸಿದ್ದಾರೆ. ಕೃಷ್ಣ ಅವರ ಕಾರಣದಿಂದ ಮಂಡ್ಯ, ಬೆಂಗಳೂರು ಹಾಗೂ ಮೈಸೂರಿನಲ್ಲಿ ಎರಡನೇ ಹಂತದ ಇನ್ನಷ್ಟು ನಾಯಕರು ಬರುವ ಸಾಧ್ಯತೆಯಿದೆ. ಬಿಜೆಪಿಗೆ ಆಯ್ದ ನಾಯಕರನ್ನು ಕರೆತರುವ ಪ್ರಯತ್ನ ನಿರಂತರವಾಗಿರಲಿದೆ. ಆದರೆ, ಚುನಾವಣೆ ಹೊಸ್ತಿಲಲ್ಲಿ ಇದಕ್ಕೆ ಇನ್ನಷ್ಟು ಸ್ಪಷ್ಟ ರೂಪ ಸಿಗಲಿದೆ ಎಂದು ಆರ್.ಅಶೋಕ್ ವಿಜಯವಾಣಿಗೆ ತಿಳಿಸಿದ್ದಾರೆ.

ಶಿವಣ್ಣ ಬಿಜೆಪಿ ಸೇರ್ಪಡೆ ಶೀಘ್ರ

ಮೈಸೂರು: ಚಾಮರಾಜನಗರ ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ ಕಾಂಗ್ರೆಸ್ ತ್ಯಜಿಸಿ, ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ. ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಶನಿವಾರ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್​ನಲ್ಲಿ ಉಸಿರುಗಟ್ಟುವ ವಾತಾವರಣವಿದ್ದು, ನನ್ನನ್ನು ಕಡೆಗಣಿಸಲಾಗಿದೆ. ಜತೆಗೆ, ಅಲ್ಲಿಯ ಸ್ಥಿತಿಯೂ ಚೆನ್ನಾಗಿಲ್ಲ. ಇದರಿಂದ ಬೇಸತ್ತು ನಾನು ಈ ತೀರ್ವನಕ್ಕೆ ಬಂದಿದ್ದು, ಉಪಚುನಾವಣೆಗೂ ಮುನ್ನವೇ ಬಿಜೆಪಿ ಸೇರುತ್ತೇನೆ ಎಂದು ಪ್ರಕಟಿಸಿದರು. ಈ ಕುರಿತು ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಎಂ.ಶಿವಣ್ಣ ಮೂರ್ನಾಲ್ಕು ದಿನದಲ್ಲಿ ಬಿಜೆಪಿ ಸೇರುತ್ತಾರೆ. ಬೇರೆ ಪಕ್ಷಗಳ ಇನ್ನಷ್ಟು ಪ್ರಭಾವಿ ನಾಯಕರು ಸದ್ಯದಲ್ಲೇ ಪಕ್ಷ ಸೇರಲಿದ್ದಾರೆ ಎಂದಿದ್ದಾರೆ.

ಯುಗಾದಿ ಬಳಿಕ ಪ್ರಚಾರಕ್ಕೆ ಶಾಸಕರು

ಬೆಂಗಳೂರು: ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಉಪಚುನಾವಣೆ ಪ್ರಚಾರಕ್ಕೆ ಧುಮುಕುವಂತೆ ಕಾಂಗ್ರೆಸ್, ಬಿಜೆಪಿ ಶಾಸಕರಿಗೆ ಆಯಾ ಪಕ್ಷದ ಮುಖಂಡರು ಸೂಚಿಸಿದ್ದಾರೆ. ರಾಜ್ಯ ನಾಯಕರ ಪ್ರಚಾರದಿಂದ ಈಗಾಗಲೇ ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರದ ಚುನಾವಣೆ ಕಣದಲ್ಲಿ ರಂಗೇರಿದ್ದು ಮಾ.29ರಂದು ಯುಗಾದಿ ಆಚರಣೆ ಮುಗಿಯುತ್ತಿದ್ದಂತೆ ಶಾಸಕರು ತಮಗೆ ನಿಗದಿಪಡಿಸಿರುವ ಗ್ರಾಪಂಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಬೇಕಿದೆ. ಜತೆಗೆ ಸ್ಥಳೀಯವಾಗಿ ಚುನಾವಣೆ ತಂತ್ರ ರೂಪಿಸುವ ಜವಾಬ್ದಾರಿ ನೀಡಲಾಗಿದೆ. ಅಧಿಕೃತ ಚುನಾವಣೆ ಪ್ರಚಾರ ಅಂತ್ಯವಾಗುವವರೆಗೂ ಕ್ಷೇತ್ರ ಬಿಟ್ಟು ಕದಲದಂತೆ ಆಯಾ ಪಕ್ಷದ ಶಾಸಕರಿಗೆ ಡಾ.ಜಿ.ಪರಮೇಶ್ವರ್ ಹಾಗೂ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.

ಬೆಂಕಿ ಮಹದೇವ್​ಗೆ ಆದ ಅಪಮಾನ ಮರೆಯಬೇಡಿ

ನಂಜನಗೂಡು: ಮಾಜಿ ಸಚಿವ ದಿ. ಬೆಂಕಿ ಮಹದೇವ್ ಅವರ ಕಪಾಳಕ್ಕೆ ಸಿದ್ದರಾಮಯ್ಯ ಹೊಡೆದು ಅವಮಾನಿಸುವ ಮೂಲಕ ಪಕ್ಷ ಬಿಡುವಂತೆ ಮಾಡಿದ್ದನ್ನು ಜನತೆ ಇನ್ನೂ ಮರೆತಿಲ್ಲ, ಮರೆಯಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದರು. ತಾಲೂಕಿನ ದೇಬೂರು ಗ್ರಾಮದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಶ್ರೀನಿವಾಸಪ್ರಸಾದ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಪಕ್ಷದ ಮುಖಂಡರಿಗೆ ಅಪಮಾನ ಮಾಡಿ ಪಕ್ಷದಿಂದ ಹೊರಗೆ ಕಳುಹಿಸುವುದು ಕಾಂಗ್ರೆಸ್ ಸಂಸ್ಕೃತಿ ಆಗಿದೆ. ಆಗ ಮಹದೇವುಗೆ ಕಪಾಳಕ್ಕೆ ಹೊಡೆದು ಅಪಮಾನ ಮಾಡಿ ಪಕ್ಷದಿಂದ ಹೊರಗೆ ಹೋಗುವಂತೆ ಮಾಡಿದ್ದ ಸಿದ್ದರಾಮಯ್ಯ, ಈಗ ಶ್ರೀನಿವಾಸಪ್ರಸಾದ್ ಸ್ವಾಭಿಮಾನಕ್ಕೆ ಧಕ್ಕೆ ತಂದು ಪಕ್ಷದಿಂದ ಹೊರಗೆ ಹೋಗುವಂತೆ ಮಾಡಿದ್ದಾರೆ ಎಂದು ಟೀಕಿಸಿದರು. ಸಾಲ ತೀರಿಸುವುದಾಗಿ ಆಮಿಷವೊಡ್ಡಿ ಜೆಡಿಎಸ್​ನ ಕೇಶವಮೂರ್ತಿ ಅವರನ್ನು ಕರೆತಂದು ಅಭ್ಯರ್ಥಿ ಮಾಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ‘ದೇವರೇ ಗತಿ ಆಂಡ್ ಕಂಪನಿ’ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ತರಾತುರಿಯಲ್ಲಿ ‘ಹಳೇ ಕಲ್ಲು, ಹೊಸ ಬಿಲ್ಲು’ ಹೆಸರಿನಲ್ಲಿ ಅಭಿವೃದ್ಧಿ ಕೈಗೊಳ್ಳುವ ಮೂಲಕ ಮತದಾರರನ್ನು ಓಲೈಸುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ಲೇವಡಿ ಮಾಡಿದರು.

ನಂಜನಗೂಡಿನ ನಂಜುಂಡೇಶ್ವರ, ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ದೇವರಿಗೆ ದೀರ್ಘದಂಡ ನಮಸ್ಕಾರ ಹಾಕಿ ಈಡುಗಾಯಿ ಒಡೆದು ‘ಕಾಂಗ್ರೆಸ್ ಉಳಿಸು’ ಎಂದು ಪಾರ್ಥಿಸಿಕೊಳ್ಳುತ್ತೇನೆ. ಪ್ರಚಾರಕ್ಕೆ ಸ್ವತಃ ಸಿಎಂ ಹಾಗೂ ಸಚಿವ ಸಂಪುಟವೇ ಆಗಮಿಸುತ್ತಿರುವಾಗ ನಮ್ಮನ್ನು ಯಾರು ಕೇಳುತ್ತಾರೆ? ನಾನು ಹಾಗೂ ನನ್ನ ಸ್ನೇಹಿತರು ಎರಡೂ ಕ್ಷೇತ್ರದಲ್ಲಿ ತಿರುಗಾಡಿಕೊಂಡು ಬರುತ್ತೇವೆ. ಯುಗಾದಿ ಬಳಿಕ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಕಾಂಗ್ರೆಸ್​ನ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡುತ್ತೇನೆ.

| ಎಚ್. ವಿಶ್ವನಾಥ್, ಮಾಜಿ ಸಂಸದ

ಬಿಎಸ್​ವೈ ವಿರುದ್ಧ ಕಾಂಗ್ರೆಸ್ ದೂರು

ಬೆಂಗಳೂರು: ಗುಂಡ್ಲುಪೇಟೆ ಕ್ಷೇತ್ರದ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ತಾಲೂಕಿನ ಭೀಮನಬೀಡು ಗ್ರಾಮದ ಮತದಾರರಿಂದ ಆಣೆ ಪ್ರಮಾಣ ಮಾಡಿಸಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ಮುಖ್ಯಚುನಾವಣಾಧಿಕಾರಿಗೆ ಕಾಂಗ್ರೆಸ್ ಮುಖಂಡರು ಶನಿವಾರ ದೂರು ಸಲ್ಲಿಸಿದ್ದಾರೆ.

ದಾಖಲೆ ಇಲ್ಲದ 2 ಲಕ್ಷ ರೂ. ವಶ

ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ಚುನಾವಣಾ ಚೆಕ್​ಪೋಸ್ಟ್​ನಲ್ಲಿ ಶನಿವಾರ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಲಕ್ಷ ರೂ. ನಗದನ್ನು ವಶಕ್ಕೆ ಪಡೆದು, ಮೂವರ ವಿರುದ್ಧ ದೂರು ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

Back To Top