Wednesday, 22nd November 2017  

Vijayavani

1. ಸಂಸತ್​ ಕದನಕ್ಕೆ ವೇದಿಕೆ ಸಜ್ಜು – ಡಿಸೆಂಬರ್​ 15 ರಿಂದ ಚಳಿಗಾಲದ ಅಧಿವೇಶನ – ಜಿಎಸ್​ಟಿ ಅಸ್ತ್ರ ಬಳಸಲು ಕೈ ಸಜ್ಜು 2. 100 ರೂಪಾಯಿ ಲಂಚಕ್ಕೆ ಗಲಾಟೆ ಶುರು – ಬೈಕ್​ ಸವಾರನ ಜತೆ ಎಎಸ್​​ಐ ಜಗಳ – ತುಮಕೂರಲ್ಲಿಖಾಕಿ, ಬೈಕ್​ ಸವಾರನ ಜಟಾಪಟಿ 3. ಮಾನಸಿಕ ಖಿನ್ನತೆನಾ..? ಸಂಸಾರದ ವಿರಸನಾ – ಬಿಲ್ಡಿಂಗ್​ ಮೇಲಿಂದ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ​ – ಸಾವಿಗೆ ಕಾರಣ ಕುರಿತು ಖಾಕಿ ತನಿಖೆ 4. ಕೆರೆ ಒತ್ತುವರಿ ಮಾಡಿದ್ದವ್ರಿಗೆ ಸಂಕಷ್ಟ – ಸಹಾಯ ಮಾಡಿದ ಅಧಿಕಾರಿಗಳಿಗೂ ಶಿಕ್ಷೆ – ಬಿಲ್ಡರ್​​ ಸ್ಥಿರಸ್ತಿ,ಚರಾಸ್ತಿ ಜಪ್ತಿ ಅಂದ್ರು ಕೋಳಿವಾಡ 5. ಬ್ರಹ್ಮೋಸ್​ ಕ್ಷಿಪಣಿ ಯಶಸ್ವಿ ಉಡಾವಣೆ – ಸರ್ಜಿಕಲ್​ ದಾಳಿಗೆ ಸಿಕ್ತು ಹೊಸ ಅಸ್ತ್ರ – ಭಾರತಕ್ಕೆ ವಿಶ್ವಮಟ್ಟದಲ್ಲಿ ಮತ್ತೊಂದು ಗರಿ
Breaking News :

ವಸ್ತುಸ್ಥಿತಿ ಅವಲೋಕಿಸಿ

Monday, 11.09.2017, 3:00 AM       No Comments

‘ಶುದ್ಧ ಇಂಧನ’ಕ್ಕೆ ಒತ್ತುಕೊಡುವ ಸರ್ಕಾರದ ಮಹತ್ವಾಕಾಂಕ್ಷೆಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ, ಭಾರತದ ವಾಹನ ತಯಾರಿಕಾ ಉದ್ಯಮವು ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಎಚ್ಚರಿಸಿದ್ದಾರೆ. ಪರ್ಯಾಯ ಇಂಧನದಿಂದ ಚಾಲಿಸಲ್ಪಡುವ ವಾಹನಗಳೆಡೆಗೆ ಜಾಗತಿಕ ಮಟ್ಟದಲ್ಲಿ ಒಲವು ಹೆಚ್ಚುತ್ತಿರುವುದೂ ಖರೆ. 2040ರ ಒಳಗಾಗಿ, ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟವನ್ನು ನಿಷೇಧಿಸುವುದಾಗಿ ಇಂಗ್ಲೆಂಡ್ ಹೇಳಿಕೊಂಡಿದ್ದರೆ, 2019ರಿಂದ ತಾನು ಉತ್ಪಾದಿಸುವ ಎಲ್ಲ ಹೊಸ ಕಾರುಗಳೂ ಹೈಬ್ರಿಡ್ ಮತ್ತು ವಿದ್ಯುತ್-ಚಾಲಿತ ವೈಶಿಷ್ಟ್ಯವನ್ನು ಹೊಂದಲಿರುವುದಾಗಿ ಚೀನೀ ಸ್ವಾಮ್ಯದ ಸ್ವೀಡಿಷ್ ಕಾರು ತಯಾರಕ ಕಂಪನಿ ವೋಲ್ವೊ ಹೇಳಿಕೊಂಡಿದೆ. ವಿಶ್ವದ ಇತರ ಕಾರು ತಯಾರಕರೂ ಇಂಥದೇ ಚಿಂತನೆಯಲ್ಲಿ ತೊಡಗಿರುವುದೂ ದಿಟವೇ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ವಾಯುಮಾಲಿನ್ಯವನ್ನು ಗಣನೀಯವಾಗಿ ತಡೆಗಟ್ಟಲು ವಿದ್ಯುತ್-ಚಾಲಿತ ಕಾರುಗಳು ರಸ್ತೆಗಿಳಿಯುವಂತಾಗಬೇಕು ಎಂಬ ಸಚಿವರ ಕಾಳಜಿ ಶ್ಲಾಘನೀಯವೇ. ಆದರೆ ಇದಕ್ಕೆ ಪೂರ್ವಭಾವಿಯಾಗಿ ಭಾರತದ ಮೂಲಸೌಕರ್ಯಗಳ ವಸ್ತುಸ್ಥಿತಿಯ ಅವಲೋಕನವೂ ಆಗಬೇಕಿದೆ. ಡೀಸೆಲ್ ಮತ್ತು ಪೆಟ್ರೋಲ್​ನಂಥ ‘ಸಾಂಪ್ರದಾಯಿಕ‘ ಇಂಧನಗಳನ್ನು ನೆಚ್ಚಿರುವ ವಾಹನಗಳಿಗೆ ಹೋಲಿಸಿದರೆ, ವಿದ್ಯುತ್ ಚಾಲಿತ ವಾಹನಗಳಿಂದಾಗುವ ವಾಯುಮಾಲಿನ್ಯದ ಪ್ರಮಾಣ (ಸಂಪೂರ್ಣವಾಗಿ ಅಲ್ಲದಿದ್ದರೂ) ಗಣನೀಯವಾಗಿ ಕಡಿಮೆಯಿರುತ್ತದೆ ಎಂಬುದೇನೋ ನಿಜ. ಆದರೆ, ವಿದ್ಯುತ್-ಚಾಲಿತ ವಾಹನಗಳಿಗೆ ಉತ್ತೇಜಿಸುವುದಕ್ಕೂ ಮುನ್ನ ನಾವು ಈ ನಿಟ್ಟಿನಲ್ಲಿ ಎಷ್ಟರಮಟ್ಟಿಗೆ ಸನ್ನದ್ಧರಾಗಿದ್ದೇವೆ ಎಂಬುದನ್ನೂ ಅವಲೋಕಿಸಬೇಕಾಗುತ್ತದೆ. ಜಲವಿದ್ಯುತ್ತನ್ನೇ ಅತೀವವಾಗಿ ನೆಚ್ಚಿರುವ ರಾಷ್ಟ್ರ ಭಾರತ. ಆದರೆ ಜಲಸಂಪನ್ಮೂಲಗಳಿಗೆ ಒದಗಿರುವ ಧಕ್ಕೆಯಿಂದಾಗಿ ಬಹುತೇಕ ಕಡೆ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿರುವುದೂ ಹೌದು. ಹೀಗಾಗಿ ಬೇಸಿಗೆ ಕಾಲ ಬಂತೆಂದರೆ ದೇಶದ ವಿವಿಧೆಡೆ, ಅದರಲ್ಲೂ ನಿರ್ದಿಷ್ಟವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಕತ್ತಲೆಯದೇ ಸಾಮ್ರಾಜ್ಯವಾಗಿರುತ್ತದೆ ಎಂಬುದು ಕಹಿಸತ್ಯ. ಪರಿಸ್ಥಿತಿ ಹೀಗಿರುವಾಗ, ವಿದ್ಯುತ್ ಬಳಕೆದಾರರ ಯಾದಿಗೆ ‘ವಿದ್ಯುತ್-ಚಾಲಿತ‘ ಕಾರುಗಳೂ ಸೇರಿಕೊಂಡರೆ ಉಂಟಾಗುವ ಹೆಚ್ಚುವರಿ ಹೊರೆಯನ್ನು ಭರಿಸುವುದೆಲ್ಲಿಂದ? ಜತೆಗೆ ದೇಶದ ಮೂಲೆಮೂಲೆಗಳಲ್ಲೂ ಕಾರುಗಳಿಗಾಗಿ ವಿದ್ಯುತ್ ಮರುಪೂರಣಾ ಕೇಂದ್ರಗಳನ್ನು ಸಮರೋಪಾದಿಯಲ್ಲಿ ಸೃಷ್ಟಿಸುವುದು ಅಂದುಕೊಂಡಷ್ಟು ಸುಲಭವೇ?

ವಾಹನ ವಲಯದಲ್ಲಿನ ಕ್ರಾಂತಿಕಾರಕ ಬದಲಾವಣೆಗೆ ಒತ್ತಾಸೆಯಾಗುವ ನಿಟ್ಟಿನಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಮೂಲಸೌಕರ್ಯದ ಉನ್ನತೀಕರಣದಲ್ಲಿ ಈಗಾಗಲೇ ವ್ಯಸ್ತವಾಗಿವೆ. ಆದರೆ, ಭಾರತದ ಚಿತ್ರಣವೇ ಬೇರೆ. ಆಯಾ ರಾಜ್ಯಗಳಲ್ಲಿನ ಆಯ್ದ ನಗರ-ಪಟ್ಟಣಗಳನ್ನು ಹೊರತುಪಡಿಸಿದರೆ ಬಹುತೇಕ ಕಡೆ ರಸ್ತೆಗಳ ದುರವಸ್ಥೆ ವಿವರಣೆಗೂ ನಿಲುಕದಂತಿದೆ. ಸದೃಢಕಾಯ ಹೊಂದಿರುವ ಸಾಂಪ್ರದಾಯಿಕ ವಾಹನಗಳೇ ಈ ದುಸ್ಥಿತಿಯ ಕಾರಣದಿಂದಾಗಿ ಪದೇಪದೆ ದುರಸ್ತಿಗೊಳಗಾಗಬೇಕಾದ ಪರಿಸ್ಥಿತಿಯಿರುವಾಗ ವಿದ್ಯುತ್-ಚಾಲಿತ ಮತ್ತು ಹೈಬ್ರಿಡ್ ಕಾರುಗಳಂಥ ನಾಜೂಕು ರಚನೆಯ ವಾಹನಗಳು ರಸ್ತೆಗಳ ಅವ್ಯವಸ್ಥೆಯನ್ನು ಹೇಗೆ ತಾನೆ ಸೈರಿಸಬಲ್ಲವು ಎಂಬುದು ಮತ್ತೊಂದು ಪ್ರಶ್ನೆ.

ಆದ್ದರಿಂದ, ಪರಿಸರ-ಸ್ನೇಹಿ ಅಥವಾ ಕಡಿಮೆ ಮಾಲಿನ್ಯಕಾರಕ ವಾಹನಗಳನ್ನು ಉತ್ತೇಜಿಸುವುದಷ್ಟೇ ಸಚಿವರ ಆಶಯವಾಗಿದ್ದಲ್ಲಿ, ವಿದ್ಯುತ್-ಚಾಲಿತ ಕಾರುಗಳ ಪ್ರವರ್ತನೆ ಜತೆಗೆ, ಮಾಲಿನ್ಯಕಾರಕ ವಾಹನಗಳ ತೀವ್ರ ತಪಾಸಣಾ ಉಪಕ್ರಮಕ್ಕೆ ಚಾಲನೆ ನೀಡುವುದು ಒಳಿತು. ವಿದ್ಯುತ್ ಸಂಗ್ರಹ, ಅಚ್ಚುಕಟ್ಟಾದ ರಸ್ತೆಯಂಥ ಮೂಲಸೌಕರ್ಯಗಳ ಸಮರ್ಪಕ ಲಭ್ಯತೆ ಕಡೆಗೂ ತ್ವರಿತ ಕ್ರಮವಾದಲ್ಲಿ ಪರ್ಯಾಯ ಮಾಗೋಪಾಯದ ಹಾದಿ ಸುರಳೀತವಾದೀತು.

Leave a Reply

Your email address will not be published. Required fields are marked *

Back To Top