Monday, 23rd October 2017  

Vijayavani

1. ಲಿಂಗಾಯತರು ಹಿಂದೂಗಳಲ್ಲ ಹೇಳಿಕೆ – ಜಾಮದಾರ್​ಗೆ ಕನೇರಿ ಮಠದ ಶ್ರೀ ತಿರುಗೇಟು – ಬಹಿರಂಗ ಚರ್ಚೆಗೆ ಕಾಡಸಿದ್ದೇಶ್ವರ ಸ್ವಾಮಿಗಳ ಆಹ್ವಾನ 2. ರಾಜ್ಯ ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ – ಸಿದ್ದು, ಪರಂ, ಡಿಕೆಶಿ ದೂರ ದೂರ – ಹೈಕಮಾಂಡ್​ ಸಾಮೂಹಿಕ ಜಪ, ನಾಯಕರು ಸಪರೇಟ್​ ರೂಪ 3. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಜನರ ತೆರಿಗೆ ದುಡ್ಡಲ್ಲಿ ಕಾಂಗ್ರೆಸ್‌ ಪಕ್ಷಕ್ಕೂ ಪ್ರಚಾರ – ಬೆನ್ನುತಟ್ಟಿಕೊಳ್ಳೋ ಸಮಾವೇಶಕ್ಕೆ ಪಿಡಿಓಗಳೂ ದುರ್ಬಳಕೆ 4. ನಟ ವಿಜಯ್ ಬೆಂಬಲಕ್ಕೆ ನಿಂತ ತಲೈವಾ – ಮೆರ್ಸಲ್‌ ಸಿನಿಮಾದ ಬಗ್ಗೆ ಮೆಚ್ಚುಗೆಯ ಟ್ವೀಟ್ – ವಿವಾದಾತ್ಮಕ ವಿಷಯಗಳಿಗೂ ರಜನಿಕಾಂತ್ ಪರೋಕ್ಷ ಶ್ಲಾಘನೆ 5. ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಬಿಗ್​ ಶಾಕ್​ – ಬಿಜೆಪಿಗೆ ಸೇರಲು 1 ಕೋಟಿ ರೂ ಆಮೀಷ – ಹಾರ್ದಿಕ್​ ಪಟೇಲ್​ ಸಂಗಡಿಗನ ಗಂಭೀರ ಆರೋಪ
Breaking News :

ವರ್ಗಾವಣೆಗೂ ಮುನ್ನ…

Thursday, 28.09.2017, 3:00 AM       No Comments

| ಸಿ.ಎಸ್.ಸುಧೀರ್

ಮೂಲದರ (ಬೇಸ್ ರೇಟ್) ಆಧರಿಸಿದ ಗೃಹಸಾಲವನ್ನು ಎಂಸಿಎಲ್​ಆರ್ (ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್) ಪದ್ಧತಿಗೆ ಬದಲಾಯಿಸುವುದಕ್ಕೆ ಸಂಬಂಧಿಸಿದ ಸ್ಥೂಲ ಮಾಹಿತಿಗಳನ್ನು ನಿನ್ನೆಯ ಕಂತಿನಲ್ಲಿ ಅವಲೋಕಿಸಿದೆವು. ಈಗ ಈ ನಿಟ್ಟಿನಲ್ಲಿ ಮತ್ತಷ್ಟು ಸಂಗತಿಗಳನ್ನು ಅರಿಯೋಣ.

ಗೃಹಸಾಲದಲ್ಲಿ ‘ಮರುಹಣಕಾಸು‘ ಎಂಬ ವ್ಯವಸ್ಥೆಯಿದೆ. ಮೂಲದರ ಪದ್ಧತಿಯಡಿ ಪ್ರಸ್ತುತ ಚಾಲ್ತಿಯಲ್ಲಿರುವ ನಿಮ್ಮ ಗೃಹಸಾಲವನ್ನು ಎಂಸಿಎಲ್​ಆರ್ ಪದ್ಧತಿಗೆ ಬದಲಿಸಿಕೊಳ್ಳಬೇಕೆಂಬುದು ನಿಮ್ಮ ಬಯಕೆ ಎಂದಿಟ್ಟುಕೊಳ್ಳೋಣ. ಸದರಿ ಎಂಸಿಎಲ್​ಆರ್ ಸ್ವರೂಪ ಹಾಗೂ ವ್ಯಾಪ್ತಿಯನ್ನು ಪರಿಶೀಲಿಸಿದ ನಂತರ, ನಿಮಗೆ ಸಾಲ ನೀಡಿರುವ ಬ್ಯಾಂಕು/ಸಂಸ್ಥೆಯ ಬಡ್ಡಿದರವು ಇತರ ಬ್ಯಾಂಕುಗಳಲ್ಲಿ ವಿಧಿಸಲಾಗುತ್ತಿರುವ ದರಕ್ಕಿಂತ ಹೆಚ್ಚಿರುವುದು ನಿಮ್ಮ ಗಮನಕ್ಕೆ ಬರುತ್ತದೆ ಎಂದು ಭಾವಿಸೋಣ. ಹೀಗಿದ್ದಾಗ ಚಿಂತಿಸುವ ಅಗತ್ಯವಿಲ್ಲ; ಬಾಕಿ ಉಳಿದಿರುವ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ಮತ್ತೊಂದು ಬ್ಯಾಂಕು ಅಥವಾ ಸಾಲದಾತ ಸಂಸ್ಥೆಗೆ ನೀವು ವರ್ಗಾಯಿಸಬಹುದು. ಇಂಥ ವರ್ಗಾವಣೆ ಪ್ರಕ್ರಿಯೆಯನ್ನೇ ‘ಮರುಹಣಕಾಸು ವ್ಯವಸ್ಥೆ‘ ಎನ್ನಲಾಗುತ್ತದೆ.

ಮರುಹಣಕಾಸು ವೆಚ್ಚಗಳು: ಮತ್ತೊಂದು ಬ್ಯಾಂಕು/ಸಂಸ್ಥೆಗೆ ನಿಮ್ಮ ಸಾಲವನ್ನು ಬದಲಾಯಿಸಿದಾಗ, ಸಂಸ್ಕರಣಾ ಶುಲ್ಕ (ಪ್ರೊಸೆಸಿಂಗ್ ಫೀ), ಕಾನೂನು ಸೇವಾಶುಲ್ಕ ಹಾಗೂ ಅನ್ವಯವಾಗುವ ಮತ್ತಿತರ ವೆಚ್ಚಗಳನ್ನು ವಿಧಿಸಬಹುದಾಗಿದೆ. ವರ್ಗಾಯಿಸಲ್ಪಟ್ಟ ಸಾಲದ ಶೇ. 0.5 ಮತ್ತು ಶೇ. 1ರವರೆಗೆ ಸಂಸ್ಕರಣಾ ಶುಲ್ಕವನ್ನು ವಿಧಿಸಬಹುದಾಗಿದ್ದು, ಇದರ ಜತೆಗೆ ಶೇ. 0.20ರಿಂದ ಶೇ. 0.50ರವರೆಗೆ ಸ್ಟಾಂಪು ತೆರಿಗೆಯೂ ಅನ್ವಯವಾಗುತ್ತದೆ. ಆದರೆ, ಫ್ಲೋಟಿಂಗ್ ಬಡ್ಡಿದರದ ಗೃಹಸಾಲವನ್ನು, ಶೂನ್ಯ ಫೋರ್​ಕ್ಲೋಷರ್ ವೆಚ್ಚಗಳೊಂದಿಗೆ ಬದಲಾಯಿಸಿಕೊಳ್ಳುವುದು ಸಾಧ್ಯವಿದೆ. ಇಂಥ ಪ್ರಕ್ರಿಯೆಗಳಿಂದಾಗಿ ಆಗುವ ವೆಚ್ಚವನ್ನು ಅರಿತುಕೊಳ್ಳಲು, ಸಾಲ ವರ್ಗಾವಣೆಗೆ ಸಂಬಂಧಿಸಿದ ಎಲ್ಲ ಖರ್ಚು-ವೆಚ್ಚಗಳನ್ನು ನೀವು ಸೇರಿಸಿಕೊಳ್ಳಬೇಕಾಗುತ್ತದೆ ಹಾಗೂ ಮತ್ತೊಂದು ಬ್ಯಾಂಕಿನ ಎಂಸಿಎಲ್​ಆರ್ ಪದ್ಧತಿಯಲ್ಲಿ ಸೇರಿಕೊಳ್ಳುವ ಬಡ್ಡಿವೆಚ್ಚಕ್ಕೆ ಅವನ್ನು ಕೂಡಬೇಕಾಗುತ್ತದೆ. ನಂತರದಲ್ಲಿ ಹಾಲಿ ಇರುವ ಬ್ಯಾಂಕಿನ/ ಸಾಲದಾತ ಸಂಸ್ಥೆಯ ಎಂಸಿಎಲ್​ಆರ್​ಗೆ ಸಾಲವನ್ನು ವರ್ಗಾಯಿಸುವಾಗ ಭರಿಸಬೇಕಾಗಿಬರುವ ಖರ್ಚುವೆಚ್ಚದೊಂದಿಗೆ ಅದನ್ನು ಹೋಲಿಸಿನೋಡಬೇಕು. ಆಗ ಮಾತ್ರವೇ ಸರಿಯಾದುದನ್ನು ಆಯ್ಕೆಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಆದ್ದರಿಂದ, ನಿಮ್ಮ ಬ್ಯಾಂಕು ಅಥವಾ ಮತ್ತಾವುದೇ ಸಾಲದಾತ ಸಂಸ್ಥೆಯ ಎಂಸಿಎಲ್​ಆರ್ ಪದ್ಧತಿಗೆ, ಮೂಲದರ ಆಧರಿಸಿದ ಗೃಹಸಾಲವನ್ನು ಬದಲಾಯಿಸಿಕೊಳ್ಳುವುದು ಜಾಣನಿರ್ಧಾರವಾಗಬಲ್ಲದು; ಆದರೆ ಹೀಗೆ ಮಾಡುವುದಕ್ಕೂ ಮುಂಚೆ ಎರಡೂ ಆಯ್ಕೆಗಳಲ್ಲಿ ಅನ್ವಯವಾಗುವ ಬಡ್ಡಿದರವನ್ನು ಕೂಲಂಕಷ ಅವಲೋಕಿಸಬೇಕು. ಆದ್ದರಿಂದ, ಯಾವ ಬ್ಯಾಂಕ್ ಬಡ್ಡಿದರ ಕಡಿಮೆ ಇರುವುದೋ ಅಲ್ಲಿಗೆ ಗೃಹಸಾಲ ಬದಲಿಸಿಕೊಳ್ಳುವ ಕುರಿತು ಆಲೋಚಿಸಿ, ಜತೆಗೆ ಇಂಥ ವರ್ಗಾವಣೆಯು ಒಳಗೊಂಡಿರಬಹುದಾದ ಇತರ ಖರ್ಚುವೆಚ್ಚಗಳ ಕುರಿತೂ ಕಣ್ಣಿಡಿ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಎಂಸಿಎಲ್​ಆರ್ ಪದ್ಧತಿ ಚಾಲ್ತಿಗೆ ಬಂದ ಕೇವಲ ಒಂದು ವರ್ಷ ಅವಧಿಯಲ್ಲಿ ಬ್ಯಾಂಕುಗಳು, ಮೂಲದರಕ್ಕೆ ಹೋಲಿಸಿದಾಗ ಎಂಸಿಎಲ್​ಆರ್ ಅಡಿಯಲ್ಲಿನ ದರಗಳನ್ನು ಮತ್ತಷ್ಟು ತಗ್ಗಿಸಿವೆ. ಮೂಲದರ ಆಧರಿಸಿದ ಗೃಹಸಾಲ ಪಡೆದವರು ಎಂಸಿಎಲ್​ಆರ್ ಪದ್ಧತಿಗೆ ಬದಲಾಯಿಸಿಕೊಳ್ಳಲು ಈ ಅಂಶ ಕೂಡ ಪ್ರೇರಕವಾಗಿದೆ ಎನ್ನಲಡ್ಡಿಯಿಲ್ಲ.

(ಲೇಖಕರು indianmoney.com ಸಂಸ್ಥಾಪಕರು ಮತ್ತು ಸಿಇಒ)

Leave a Reply

Your email address will not be published. Required fields are marked *

Back To Top