Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ವಂಶಾಡಳಿತ ಸಾಮಾನ್ಯ

Wednesday, 13.09.2017, 3:04 AM       No Comments

ಬರ್ಕಲಿ (ಕ್ಯಾಲಿಫೋರ್ನಿಯಾ): ಪ್ರಭಾವಶಾಲಿ ನಾಯಕತ್ವದ ಗುಣ ಪ್ರದರ್ಶಿಸಿ ಪಕ್ಷದ ಕಾರ್ಯಕರ್ತರಲ್ಲಿ ಸ್ಪೂರ್ತಿ ತುಂಬಲು ವಿಫಲರಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಾವು ಪ್ರಧಾನಿ ಅಭ್ಯರ್ಥಿಯಾಗಲು ಸಿದ್ಧ ಎಂದು ಹೇಳಿದ್ದಾರೆ. ಅಮೆರಿಕದ 2 ವಾರಗಳ ಪ್ರವಾಸಕ್ಕೆ ತೆರಳಿರುವ ಅಮೇಠಿ ಸಂಸದ, ಮೊದಲಿಗೆ ಬರ್ಕಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸೋಮವಾರ ಭಾಷಣ ಮಾಡಿದರು. ನಾನು ಪ್ರಧಾನಿ ಅಭ್ಯರ್ಥಿಯಾಗಲು ಸಿದ್ಧ. ಆದರೆ, ನಮ್ಮ ಪಕ್ಷದಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದೆ. ಆ ವ್ಯವಸ್ಥೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬುದು ನಿರ್ಧಾರವಾಗುತ್ತದೆ. ಸದ್ಯ ಈ ಪ್ರಕ್ರಿಯೆಗೆ ಚಾಲನೆ ದೊರೆತಿದೆ ಎಂದರು.

ಸಾಮರ್ಥ್ಯ ಮುಖ್ಯ

ವಂಶಾವಳಿ ಆಡಳಿತ ಎಂಬುದು ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದೆ. ಅಖಿಲೇಶ್ ಯಾದವ್, ಎಂ.ಕೆ. ಸ್ಟಾಲಿನ್, ಅನುರಾಗ್ ಠಾಕೂರ್ ಸೇರಿ ಇನ್ನೂ ಹಲವರು ವಂಶಾವಳಿ ಆಡಳಿತದಿಂದಲೇ ಮುಂದೆ ಬಂದವರು. ಬಾಲಿವುಡ್​ನಲ್ಲಿ , ಅಭಿಷೇಕ್ ಬಚ್ಚನ್, ವಾಣಿಜ್ಯೋದ್ಯಮದಲ್ಲಿ ಮುಖೇಶ್ ಮತ್ತು ಅನಿಲ್ ಅಂಬಾನಿ ಅವರ ಉದಾಹರಣೆಯನ್ನು ನೀಡಿದ ರಾಹುಲ್, ವ್ಯಕ್ತಿಯ ಯೋಗ್ಯತೆ, ಸಾಮರ್ಥ್ಯದ ಮೇಲೆ ವಂಶಾಡಳಿತ ಮುಂದುವರಿಸುವ ಅಂಶ ನಿರ್ಧಾರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ದುರಹಂಕಾರವೇ ಕಾರಣ

2012ರ ವೇಳೆಗೆ ದುರಹಂಕಾರದ ವರ್ತನೆ ಕಾಂಗ್ರೆಸ್ ಪಕ್ಷದದಲ್ಲಿ ಹೆಚ್ಚಾಗ ತೊಡಗಿತು. ಇದರಿಂದ 2014ರ ಚುನಾವಣೆಯಲ್ಲಿ ಭಾರಿ ಸೋಲು ಉಂಟಾಗಿ ಪಕ್ಷವನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿತು ಎಂದು ರಾಹುಲ್ ಆತ್ಮಾವಲೋಕನ ಮಾಡಿಕೊಂಡರು.

ನನ್ನನ್ನು ಟೀಕಿಸುವ ಪಡೆ ಇದೆ

ರಾಹುಲ್ ಒಬ್ಬ ಮೂರ್ಖ. ದೇಶವನ್ನು ಮುನ್ನಡೆಸಲು ಅಸಮರ್ಥ ಎಂಬ ಸುಳ್ಳನ್ನು ಸಾಮಾಜಿಕ ಜಾಲತಾಣ ದಲ್ಲಿ ಹರಡಲು 1 ಸಾವಿರಕ್ಕೂ ಹೆಚ್ಚಿನ ಬಿಜೆಪಿ ಕಾರ್ಯ ಕರ್ತರ ಪಡೆ ಇದೆ ಎಂದು ರಾಹುಲ್ ಆರೋಪಿಸಿದರು.

ಮೋದಿ ಮಾತಿನ ಮೋಡಿಗಾರ

ಪ್ರಧಾನಿ ನರೇಂದ್ರ ಮೋದಿ ಚತುರ ಮಾತುಗಾರ. ಮನದ ಮಾತನ್ನು ಜನರಿಗೆ ಸುಲಭವಾಗಿ ದಾಟಿಸುವ ಮೋಡಿಗಾರ ಅವರಾಗಿದ್ದಾರೆ. ಆದರೆ, ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡು ವುದಿಲ್ಲ ಎಂದು ರಾಹುಲ್ ಆಕ್ಷೇಪಿಸಿದರು.

ಮೋದಿಯಿಂದಲೇ ದೇಶಕ್ಕೆ ಅವಮಾನ

ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರಾಷ್ಟ್ರವನ್ನು ಅಪಮಾನ ಮಾಡಿದವರಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲಿಗರು ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. ರಾಹುಲ್ ಗಾಂಧಿ ಭಾಷಣವನ್ನು ಸಚಿವೆ ಸ್ಮೃತಿ ಇರಾನಿ ಟೀಕಿಸಿದ ಬೆನ್ನಲ್ಲೇ ಮಾತನಾಡಿದ ಕಾಂಗ್ರೆಸ್ ಮುಖಂಡ ಆನಂದ್ ಶರ್ವ, ತಮ್ಮ ಮೊದಲ ವಿದೇಶ ಪ್ರವಾಸದಲ್ಲಿ ಮೋದಿ, ನಾವು ಅಧಿಕಾರಕ್ಕೆ ಬರುವ ಮುನ್ನ ಭಾರತದಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು ಎಂದು ಹೇಳಿ ರಾಷ್ಟ್ರಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ರಾಷ್ಟ್ರಕ್ಕೆ ರಾಹುಲ್ ಅವಮಾನ

ಪ್ರಧಾನಿ ಮೋದಿ ಅವರನ್ನು ದೂಷಿಸುವ ತಂತ್ರ ಸ್ವದೇಶ ದಲ್ಲಿ ನಡೆಯದ ಕಾರಣ, ರಾಹುಲ್ ಗಾಂಧಿ ಇದಕ್ಕಾಗಿ ವಿದೇಶಿ ವೇದಿಕೆಯನ್ನು ಬಳಸಿಕೊಂಡಿದ್ದಾರೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಚಾರ ಸಚಿವೆ ಸ್ಮೃತಿ ಇರಾನಿ ಲೇವಡಿ ಮಾಡಿದ್ದಾರೆ. ವಿಫಲ ರಾಜಕಾರಣಿಯಾಗಿರುವ ಅವರು ವಿಫಲ ವಂಶಾಡಳಿತಗಾರ ಎಂದು ಟೀಕಿಸಿದ್ದಾರೆ.

ಗೌರಿ ಹತ್ಯೆ ಪ್ರಸ್ತಾಪ

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ರಾಜಕೀಯ ಧ್ರುವೀಕರಣದಿಂದಾಗಿ ಭಾರತದೆಲ್ಲೆಡೆ ಅಸಹಿಷ್ಣುತೆ, ದ್ವೇಷ ಮತ್ತು ಹಿಂಸಾಚಾರ ಹೆಚ್ಚಾಗುತ್ತಿದೆ. ಗೋಮಾಂಸ ತಿನ್ನುತ್ತಾರೆ ಎಂಬ ಶಂಕೆಯ ಮೇರೆಗೆ ಜನರನ್ನು ಕೊಲ್ಲಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಲೋಕಸಭೆಯಲ್ಲಿ 546 ಸ್ಥಾನ!

ಲೋಕಸಭೆಯಲ್ಲಿ ಒಟ್ಟು 545 ಸದಸ್ಯರಿ ದ್ದಾರೆ. ಆದರೆ, ರಾಹುಲ್ ಒಟ್ಟು ಸ್ಥಾನ 546 ಎಂದು ಹೇಳಿ ಟೀಕೆಗೆ ಗುರಿಯಾಗಿದ್ದಾರೆ. ಈ ತಪ್ಪನ್ನು ಮುಚ್ಚಿಕೊಳ್ಳಲು ‘ಶಾಸನಸಭೆಯಲ್ಲಿ ಸಮ ಸಂಖ್ಯೆಯ ಸ್ಥಾನಗಳಿರುವುದಿಲ್ಲ’ ಎಂದಿದ್ದಾರೆ.

ಕಾಶ್ಮೀರದಲ್ಲಿ ಹಿಂಸೆ ಹೆಚ್ಚಳ

2013ರಲ್ಲಿ ಯುಪಿಎ-2 ಸರ್ಕಾರದ ಅಧಿಕಾರಾವಧಿ ಅಂತ್ಯವಾಗುವ ಹಂತದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆಯ ಮೂಲಬೇರಿಗೆ ಕೊಡಲಿ ಹಾಕಿದ್ದೆವು. ಆದರೆ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಕಾಶ್ಮೀರದಲ್ಲಿ ಉಗ್ರರ ಹಾವಳಿ ಮತ್ತೆ ಹೆಚ್ಚಾಗಿದೆ ಎಂದು ರಾಹುಲ್ ಕಳವಳ ವ್ಯಕ್ತಪಡಿಸಿದರು.

ನ್ಯಾಯ ಕೊಡಿಸಲು ಸಹಕರಿಸುವೆ: 1984ರಲ್ಲಿ ಸಿಖ್ ಹತ್ಯಾಕಾಂಡ ಕುರಿತು ಕ್ಷಮೆಯಾಚಿಸಲು ರಾಹುಲ್ ಗಾಂಧಿ ಹಿಂದೇಟು ಹಾಕಿದರು. ಆದರೆ, ಆ ಸಮುದಾಯದವರಿಗೆ ನ್ಯಾಯ ದೊರಕಿಸಿಕೊಡಲು ಸಹಕರಿಸುವುದಾಗಿ ಭರವಸೆ ನೀಡಿದರು.

Leave a Reply

Your email address will not be published. Required fields are marked *

Back To Top