Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಲೀಡರ್​ನಿಂದ ಕೇಡರ್​ನತ್ತ ಸಾಗುತ್ತಿರುವ ರಾಜ್ಯ ಕಾಂಗ್ರೆಸ್!

Tuesday, 12.09.2017, 3:05 AM       No Comments

| ರಾಜೀವ ಹೆಗಡೆ

ಬೆಂಗಳೂರು: ಸತತ ಚುನಾವಣೆ ಸೋಲಿನಿಂದ ಪಾಠ ಕಲಿಯುತ್ತಿರುವ ಕಾಂಗ್ರೆಸ್ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಲೀಡರ್ ರಾಜಕೀಯದಿಂದ ಕಾರ್ಯಕರ್ತ, ಸಂಘಟನೆ (ಕೇಡರ್) ರಾಜಕೀಯದತ್ತ ವಾಲುತ್ತಿದೆ.

ಕಾಂಗ್ರೆಸ್ ಪಾಲಿಗೆ ಚುನಾವಣೆ ಎಂದರೆ ಸೋಲು ಎನ್ನುವ ಮಟ್ಟಿಗೆ ದೇಶ ಮಟ್ಟದಲ್ಲಿ ಸ್ಥಿತಿ ಇರುವಾಗ, ಪುನರ್ ಸಂಘಟನೆಗೆ ತನ್ನ ರಾಜಕೀಯ ಹಾಗೂ ಸೈದ್ಧಾಂತಿಕ ಕಡು ವೈರಿ ಬಿಜೆಪಿ ಹಾಗೂ ಆರ್​ಎಸ್​ಎಸ್​ನ ಸಂಘಟನಾ ಶೈಲಿಯನ್ನು ಲಾಗುಗೊಳಿಸಲು ದಾಪುಗಾಲು ಹಾಕಿದೆ. ಇದಕ್ಕಾಗಿಯೇ ರಾಜ್ಯದಲ್ಲಿ ಆರೂವರೆ ಲಕ್ಷ ಬೂತ್ ಮಟ್ಟದ ಕಾರ್ಯಕರ್ತರ ಪಡೆಯನ್ನು ರಾಜ್ಯ ಕಾಂಗ್ರೆಸ್ ತಯಾರು ಮಾಡುತ್ತಿದೆ.

ರಾಜ್ಯ ಕಾಂಗ್ರೆಸ್​ಗೆ ಕೇರಳದ ಕೆ.ಸಿ.ವೇಣುಗೋಪಾಲ್ ಅವರು ಉಸ್ತುವಾರಿ ಕಾರ್ಯದರ್ಶಿಯಾಗಿ ಬರುತ್ತಿದ್ದಂತೆ, ಆರ್​ಎಸ್​ಎಸ್ ಹಾಗೂ ಬಿಜೆಪಿ ಸಂಘಟನಾ ಚಾತುರ್ಯದ ಪಾಠ ಕಲಿಯಿರಿ ಎಂದು ಬುದ್ಧಿವಾದ ಹೇಳಿದ್ದರು. ಕೆಲ ದಿನಗಳ ಹಿಂದೆ ರಾಷ್ಟ್ರೀಯ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಸಿಎಂ ಸಿದ್ದರಾಮಯ್ಯ, ಮಾಸ್​ನಿಂದ ಬಿಜೆಪಿ ರೀತಿಯಲ್ಲಿ ಕೇಡರ್​ನತ್ತ ಗಮನ ನೀಡುತ್ತಿದ್ದೇವೆ ಎಂದು ಒಪ್ಪಿಕೊಂಡಿದ್ದರು. ಆದರೆ ಈಗ ಕೆಪಿಸಿಸಿಯು ಯಥಾವತ್ ಅದೇ ದಾರಿಯಲ್ಲಿ ಹೆಜ್ಜೆ ಹಾಕುತ್ತಿದೆ.

ಆರೂವರೆ ಲಕ್ಷ ಕಾರ್ಯಕರ್ತರ ಪಡೆ: ರಾಜ್ಯದಲ್ಲಿರುವ 54 ಸಾವಿರ ಬೂತ್ ಮಟ್ಟದ ಸಮಿತಿಗೆ ಬರೋಬ್ಬರಿ 6.50 ಲಕ್ಷ ಕಾರ್ಯಕರ್ತರನ್ನು ಅಧ್ಯಕ್ಷ ಹಾಗೂ ಸದಸ್ಯರನ್ನಾಗಿ ನೇಮಿಸಲಾಗುತ್ತಿದೆ. ಈ ಸದಸ್ಯರ ಕಾರ್ಯಕ್ಷಮತೆ ಹಾಗೂ ಪಕ್ಷಕ್ಕಾಗಿ ದುಡಿಯುವ ತವಕವನ್ನು ಖುದ್ದು ಕೆಪಿಸಿಸಿ ಪದಾಧಿಕಾರಿಗಳು ಸಭೆ ನಡೆಸಿ ಪರಿಶೀಲನೆ ನಡೆಸಲಿದ್ದಾರೆ. ಈ ಮೂಲಕ ಎಲ್ಲ 54 ಸಾವಿರ ಬೂತ್ ಮಟ್ಟದ ಸಮಿತಿ ಸಭೆಯನ್ನು ಈ ಪದಾಧಿಕಾರಿಗಳು ನಡೆಸಲಿದ್ದಾರೆ. ಇದರಿಂದ 54 ಸಾವಿರ ಸಮಿತಿಗಳ ಕಾರ್ಯವೈಖರಿ ಬಗ್ಗೆ ಕೆಪಿಸಿಸಿಯ ಚುನಾವಣೆ ಸೆಲ್​ಗೆ ನಿರಂತರ ಮಾಹಿತಿ ದೊರೆಯಲಿದೆ.

ಇವೆಲ್ಲ ಕಾರ್ಯಕರ್ತರ ಸಂಪೂರ್ಣ ಮಾಹಿತಿಯನ್ನು ಕೆಪಿಸಿಸಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಎಐಸಿಸಿಗೆ ಮಾಹಿತಿ ರವಾನಿಸಲಿದೆ. ಅಗತ್ಯಬಿದ್ದರೆ ಕಾಂಗ್ರೆಸ್​ನ ಯಾವುದೇ ಮುಖಂಡರು ಕೂಡ ಈ ಸಮಿತಿ ಸದಸ್ಯರ ಜತೆ ನೇರವಾಗಿ ಮೊಬೈಲ್ ಸಂಪರ್ಕ ಹೊಂದುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಮನೆ ಮನೆ ತಲುಪಲಿರುವ ಸದಸ್ಯರು: ಸದ್ಯಕ್ಕೆ ಸುಮಾರು 40 ಸಾವಿರ ಬೂತ್ ಸಮಿತಿ ರಚನೆಯಾಗಿದೆ. ಎಲ್ಲ 54 ಸಾವಿರ ಬೂತ್​ಗಳು ಇನ್ನೊಂದು ವಾರದಲ್ಲಿ ರಚಿಸುವಂತೆ ಪದಾಧಿಕಾರಿಗಳು ಹಾಗೂ ಜಿಲ್ಲಾ ಘಟಕಕ್ಕೆ ಕೆಪಿಸಿಸಿ ಸೂಚಿಸಿದೆ. ಇದಾದ ಬಳಿಕ ಸೆ.23ರಂದು ರಾಜ್ಯಾದ್ಯಂತ ‘ಮನೆ ಮನೆಗೆ ಕಾಂಗ್ರೆಸ್’ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಪ್ರತಿ ಬೂತ್ ಮಟ್ಟದ ಸದಸ್ಯರಿಗೆ ಕನಿಷ್ಠ 20 ಮನೆಗಳ ಜವಾಬ್ದಾರಿ ನೀಡಲಾಗುತ್ತದೆ. ಚುನಾವಣೆ ಮುಗಿಯುವರೆಗೂ ಪಕ್ಷ ಹಾಗೂ ಸರ್ಕಾರದ ಪ್ರತಿ ಸಂದೇಶವನ್ನು ನಿಗದಿಪಡಿಸಿದ ಮನೆಗಳಿಗೆ ತಲುಪಿಸುವ ಜವಾಬ್ದಾರಿ ಈ ಸದಸ್ಯರ ಕೆಲಸವಾಗಿರುತ್ತದೆ.

ಈ ತಂತ್ರದ ಹಿಂದಿನ ಉದ್ದೇಶವೇನು?

ಗಾಂಧಿ ಕುಟುಂಬದ ಹೆಸರಲ್ಲಿ ಮಾಸ್ ರಾಜಕೀಯದ ಮೂಲಕವೇ ಕಾಂಗ್ರೆಸ್ ನಾಯಕರು ಚುನಾವಣೆ ಗೆದ್ದುಕೊಂಡು ಬರುತ್ತಿದ್ದರು. ಆದರೆ ಗಾಂಧಿ ಕುಟುಂಬದಲ್ಲಿನ ನಾಯಕತ್ವದ ಕೊರತೆಯು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಆರಂಭವಾಗಿತ್ತು. ಹೀಗಾಗಿ ಪಕ್ಷವನ್ನು ತಳಮಟ್ಟದಿಂದ ಕಟ್ಟದಿದ್ದರೆ ಅಸ್ತಿತ್ವಕ್ಕೆ ಏಟು ಬೀಳಲಿದೆ ಎನ್ನುವುದು ಕಾಂಗ್ರೆಸ್​ಗೆ ಅರಿವಾಗಿದೆ. ಈ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಸಮಿತಿ ಮೂಲಕ ಪಕ್ಷದ ಪರವಾದ ಧ್ವನಿ ಹಾಗೂ ಸಂಘಟನೆಯನ್ನು ತಳ ಮಟ್ಟದಲ್ಲಿ ಗಟ್ಟಿ ಮಾಡುವುದು ಕೆಪಿಸಿಸಿ ಆಲೋಚನೆಯಾಗಿದೆ.

ದೇಶದಲ್ಲೇ ಮೊದಲ ಪ್ರಯೋಗ!

ದೇಶದಲ್ಲೇ ಮೊದಲ ಬಾರಿಗೆ ತಳಮಟ್ಟದಲ್ಲಿ ಕಾಂಗ್ರೆಸ್​ನ್ನು ಬಲಪಡಿ ಸುವ ಕೆಲಸಕ್ಕೆ ಕೆಪಿಸಿಸಿ ಕೈ ಹಾಕಿದೆ. ದೇಶದ ಯಾವ ರಾಜ್ಯದಲ್ಲಿಯೂ ಇಂತಹ ಪ್ರಯೋಗ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top