Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಲಕ್ಷ್ಮಣರೇಖೆ ಮೀರದಿರಿ

Friday, 08.12.2017, 3:00 AM       No Comments

ಗುಜರಾತ್ ವಿಧಾನಸಭೆಗೆ 2 ಹಂತಗಳಲ್ಲಿ (ಡಿ. 9 ಮತ್ತು 14) ಮತದಾನ ನಡೆಯಲಿದ್ದು ರಾಜಕೀಯ ಎದುರಾಳಿಗಳಿಂದ ಅಬ್ಬರ-ಆರ್ಭಟಗಳು, ಟೀಕೆ-ಟಿಪ್ಪಣಿಗಳು ಸಹಜವಾಗಿಯೇ ಹೊಮ್ಮುತ್ತಿವೆ. ರಾಜಕೀಯ ಅಖಾಡದಲ್ಲಿ, ಅದರಲ್ಲೂ ವಿಶೇಷವಾಗಿ ಚುನಾವಣೆಯ ಕಾವೇರಿದಾಗ ಇಂಥ ಕಾಲೆಳೆಯುವಿಕೆ, ವಾಗ್ದಾಳಿ, ವ್ಯಂಗ್ಯ, ಕೊಂಕುಮಾತು ಸಹಜವೇ ಆದರೂ, ಅದು ಔಚಿತ್ಯದ ಎಲ್ಲೆಯನ್ನು ಮೀರುವುದು ಮತ್ತು ನಂಬಿಕೆ-ಸಿದ್ಧಾಂತದ ಅಲ್ಲಗಳೆತದ ಪರಿಧಿಯನ್ನೂ ಮೀರಿ ವೈಯಕ್ತಿಕ ಚಾರಿತ್ರ್ಯಹರಣದ ಮಟ್ಟಕ್ಕೆ ಕುಸಿಯುವುದು ಸರ್ವಥಾ ಸ್ವೀಕಾರಾರ್ಹವಲ್ಲ. ಗುಜರಾತ್ ಚುನಾವಣೆ ಬಹಿರಂಗ ಪ್ರಚಾರದ ಅಂತಿಮ ದಿನವಾದ ಬುಧವಾರ (ಡಿ.7), ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನುದ್ದೇಶಿಸಿ ‘ನೀಚ’, ‘ಸಭ್ಯತೆ ಇಲ್ಲದವನು’ ಎಂದೆಲ್ಲ ಪದಪ್ರಯೋಗ ಮಾಡಿದ್ದಾರೆ ಹಿರಿಯ ಕಾಂಗ್ರೆಸ್ಸಿಗ ಮಣಿಶಂಕರ್ ಅಯ್ಯರ್(ಇದಕ್ಕಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ). ಯುವಪೀಳಿಗೆಗೆ ಬುದ್ಧಿಹೇಳಬೇಕಾದವರೇ ನಾಲಿಗೆಯನ್ನು ಹೀಗೆ ಮನಬಂದಂತೆ ಹರಿಯಬಿಡುವುದು ಎಷ್ಟರಮಟ್ಟಿಗೆ ಸರಿ ಎಂಬುದಿಲ್ಲಿ ಪ್ರಶ್ನೆ. ರಾಜಕೀಯ ಪಕ್ಷಗಳ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಜವಾಹರಲಾಲ್ ನೆಹರು ಕಾಲದಿಂದಲೂ ಇರುವಂಥದ್ದೇ. ನೆಹರು ಭಾರತದ ಪ್ರಧಾನಮಂತ್ರಿಯಾಗಿದ್ದ ಕಾಲವದು. 1957ರಲ್ಲಿ ಪ್ರಪ್ರಥಮ ಬಾರಿಗೆ ಲೋಕಸಭೆ ಪ್ರವೇಶಿಸುವ ಅಟಲ್ ಬಿಹಾರಿ ವಾಜಪೇಯಿ ಮಾಡುವ ಮೊದಲ ಭಾಷಣಕ್ಕೆ ಮನಸೋಲುವ ನೆಹರು, ಭಾರತಕ್ಕೆ ಬಂದ ವಿದೇಶಿ ರಾಜತಂತ್ರಜ್ಞರಿಗೆ ವಾಜಪೇಯಿ ಅವರನ್ನು ಪರಿಚಯಿಸುತ್ತ, ‘ಈ ಹುಡುಗ ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾನೆ’ ಎಂದರಂತೆ. ಮುಂದೆ 1971ರ ವರ್ಷದಲ್ಲಿ ಪಾಕಿಸ್ತಾನದವರು ಬಾಂಗ್ಲಾದೇಶೀಯರ ಮೇಲೆ ದೌರ್ಜನ್ಯ ಎಸಗಿದಾಗ ಸೇನೆಯನ್ನು ನುಗ್ಗಿಸಿ ಪಾಕಿಗಳಿಗೆ ಪಾಠ ಕಲಿಸುವ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಇದೇ ವಾಜಪೇಯಿ ಹೊಗಳುತ್ತಾರೆ. ಗುಣಕ್ಕೆ ಮತ್ಸರ ಪಡದ ಮುತ್ಸದ್ದಿತನ ಎಂದರೆ ಇದೇ! ಈ ಮಟ್ಟದ ಮುತ್ಸದ್ದಿತನವನ್ನಲ್ಲದಿದ್ದರೂ ಕನಿಷ್ಠಪಕ್ಷ ಮರ್ಯಾದೆಯ ಸೀಮೋಲ್ಲಂಘನ ಮಾಡದಂಥ, ಭಾಷಣ-ಟೀಕೆಯಲ್ಲಿ ಕೀಳುಭಾಷೆ ಬಳಸದಂಥ ಬದ್ಧತೆಯನ್ನು ಮೆರೆಯಬೇಕಿದೆ. ‘ರಾಜಕೀಯ ಎಂಬುದು ಫಟಿಂಗರ ಕೊನೆಯ ಆಶ್ರಯತಾಣ’ ಎಂಬ ಮಾತನ್ನು ಸುಳ್ಳುಮಾಡುವ ರೀತಿಯಲ್ಲಿ ನಮ್ಮ ರಾಜಕೀಯ ನಾಯಕರ ವರ್ತನೆ ಇರಬೇಕೇ ವಿನಾ, ಅದಕ್ಕೆ ಪುಷ್ಟಿನೀಡುವ ರೀತಿಯಲ್ಲಿ ದಿನಕ್ಕೊಬ್ಬರಂತೆ ಸೇರ್ಪಡೆಯಾಗುವ ರೀತಿಯಲ್ಲಿ ಅಲ್ಲ.

ರಾಜಕೀಯ ಎದುರಾಳಿಯನ್ನು ಟೀಕಿಸಬೇಕೆಂದಿದ್ದರೆ, ಕ್ಷೇತ್ರದಲ್ಲಿ ಅವರು ನೆರವೇರಿಸಲಾಗದ ಭರವಸೆಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ಕುರಿತು ಸಮರ್ಥಿಸಿಕೊಳ್ಳುವುದಕ್ಕೆ ಬೇಕಾದಷ್ಟು ಅವಕಾಶಗಳಿವೆ. ಆದರೆ, ಚುನಾವಣಾ ವೇದಿಕೆಯು ಕಟ್ಟಿಕೊಡುವ ಉನ್ಮಾದ, ವಿವೇಚನಾರಾಹಿತ್ಯ, ಎದುರಾಳಿಯನ್ನು ಹೀಗಳೆದು ಆಕ್ರಮಣಕಾರಿಯಾಗಿ ಮಾತಾಡಿದರಷ್ಟೇ ತಮ್ಮ ಸ್ತರ ಉನ್ನತಕ್ಕೇರುತ್ತದೆ, ಮತದಾರರು ಮೆಚ್ಚುತ್ತಾರೆ ಎಂಬ ಮಿಥ್ಯಾಗ್ರಹಿಕೆಯಿಂದಾಗಿ ತುಟಿಮೀರಿದ ಮಾತುಗಳು ಕೆಲವೊಬ್ಬರಿಂದ ಹೊಮ್ಮುವುದುಂಟು. ಇದು ಕೊನೆಗೊಳ್ಳಬೇಕು. ಈಗಾಗಲೇ ರಾಜಕೀಯ ಎಂದರೆ ಶ್ರೀಸಾಮಾನ್ಯರಲ್ಲಿ ಅಸಹ್ಯದ ಭಾವನೆ ಸೃಷ್ಟಿಯಾಗಿದೆ; ಚುನಾವಣೆಯ ಸಂದರ್ಭದಲ್ಲಿ ಹೀಗೆ ಪರಸ್ಪರ ಕೆಸರೆರಚಾಡುವ, ತನ್ಮೂಲಕ ಮತದಾರರ ಭಾವನೆಗಳನ್ನು ಸುಖಾಸುಮ್ಮನೆ ಕೆರಳಿಸುವ ಇವರು ತರುವಾಯದಲ್ಲಿ ರಾಜಿಯಾಗುತ್ತಾರೆ ಎಂಬ ಅಭಿಪ್ರಾಯ ಜನಮಾನಸದಲ್ಲಿ ಹರಳುಗಟ್ಟಿರುವುದು ನಿಜ. ಅದು ಅಪ್ರಿಯ ಸತ್ಯವೂ ಹೌದು. ಆದರೆ ಜನಮಾನಸದ ಇಂಥ ಗ್ರಹಿಕೆಯನ್ನು ಅಳಿಸಿ, ಅಲ್ಲಿ ಸಕಾರಾತ್ಮಕ ಬಿಂಬವನ್ನು ಮೂಡಿಸುವ ಬದಲು ದಿನಗಳೆದಂತೆ ಕುರೂಪವೇ ಪ್ರತಿಬಿಂಬಿತವಾಗುತ್ತಿದೆ. ಇದು ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆಯ ಲಕ್ಷಣವಲ್ಲ.

Leave a Reply

Your email address will not be published. Required fields are marked *

Back To Top